ಜುಬ್ಲಿ ಹಿಲ್ಸ್‌ನ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ 18 ವರ್ಷದೊಳಗಿನ ಐವರು ಆರೋಪಿಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಲು ಪೊಲೀಸರು ಒತ್ತಾಯಿಸಿದ್ದಾರೆ. ಇದರಿಂದಾಗಿ ಈ ಐವರು ಗರಿಷ್ಠ ಶಿಕ್ಷೆಗೆ ಗುರಿಯಾಗುತ್ತಾರೆ ಎಂಬುದು ಪೊಲೀಸರ ಮನವಿ.
ಹೈದರಾಬಾದ್ ಪೊಲೀಸರ ಮೇಲ್ಮನವಿಯನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಬಾಲ ನ್ಯಾಯ ಮಂಡಳಿಯ ವಿವೇಚನೆಗೆ ಬಿಟ್ಟಿದೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಪೊಲೀಸರ ಉದ್ದೇಶವನ್ನು ತಿಳಿಸಿದ್ದಾರೆ. ಪೊಲೀಸರ ಈ ಮನವಿ ರಾಜಕೀಯ ವಲಯದಲ್ಲಿ ಬಿರುಗಾಳಿ ಬೀಸಿದೆ.
ಜುವೆನೈಲ್ ಜಸ್ಟೀಸ್ ಆಕ್ಟ್‌ಗೆ 2015 ರ ತಿದ್ದುಪಡಿಯ ಪ್ರಕಾರ 16-18 ವರ್ಷ ವಯಸ್ಸಿನ ಆರೋಫಿ “ಘೋರ ಅಪರಾಧ”ಕ್ಕಾಗಿ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಪಡೆಯುತ್ತಾರೆ. ಇಲ್ಲದಿದ್ದರೆ, ಬಾಲಾಪರಾಧಿಗೆ ಮೂರು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ.
ಈ ಪ್ರಕರಣದಲ್ಲಿ ಆರೋಪಿಗಳಿಗೆ “ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು” ಪೊಲೀಸರು ನ್ಯಾಯಾಲಯಕ್ಕೆ ಈ ಮನವಿಯನ್ನು ಮಾಡಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ಮಗನ ಮೃತದೇಹ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ 50 ಸಾವಿರಕ್ಕೆ ಬೇಡಿಕೆ, ಹಣಕ್ಕಾಗಿ ಭಿಕ್ಷೆ ಎತ್ತಿದ ವೃದ್ಧ ದಂಪತಿ
ಪ್ರಕರಣದಲ್ಲಿ ಎಲ್ಲಾ ಐದು ಕಿರಿಯರು 16 ಮತ್ತು 18 ವರ್ಷಗಳ ನಡುವೆ ಇದ್ದಾರೆ. ಅವರಲ್ಲಿ ಒಬ್ಬ ಆರೋಪಿಗೆ 18 ವರ್ಷ ತುಂಬಲು ಕೇವಲ ಒಂದು ತಿಂಗಳ ಕಡಿಮೆಯಿದೆ. ಇವರೆಲ್ಲರೂ ಪ್ರಭಾವಿ ರಾಜಕೀಯ ಕುಟುಂಬಗಳಿಂದ ಬಂದವರು ಅಥವಾ ಪ್ರಬಲ ರಾಜಕೀಯ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ಪರಿಗಣಿಸುವ ಮೊದಲು ನ್ಯಾಯಾಲಯವು ಮೂರು ಮಾನದಂಡಗಳನ್ನು ಅನುಸರಿಸುತ್ತದೆ. ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ, ಮುಂದಿನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅಪರಾಧದ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ನಿಧಾಋ ತೆಗೆದುಕೊಳ್ಳುತ್ತದೆ.
18 ವರ್ಷದ ವಯಸ್ಕ ಆರೋಪಿ ಸದುದ್ದೀನ್ ಮಲಿಕ್ ಸೇರಿದಂತೆ ಮೊದಲ ಐವರು ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ, ಅಪಹರಣ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು ಮತ್ತು POCSO ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರನೇ ಆರೋಪಿ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಆದರೂ ಲೈಂಗಿಕ ದೌರ್ಜನ್ಯ ನಡೆಸಿರುವುದರಿಂದ ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ವಿರುದ್ಧ ಅಪರಾಧ ಪ್ರಕರಣ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದರು.
ಮೇ 28 ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 17 ವರ್ಷದ ಬಾಲಕಿಯ ಮೇಲೆ ರಾಜಕೀಯ ಕುಟುಂಬಗಳ ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್: AIMIM ಶಾಸಕನ ಪುತ್ರ ಸೇರಿದಂತೆ ಎಲ್ಲ ಆರೋಪಿಗಳ ಬಂಧನ


