ಎರಡು ಜೋಡಿ ದಂತಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ನಟ ಮೋಹನ್ ಲಾಲ್ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಹಿಂಪಡೆಯುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಕೊಚ್ಚಿಯ ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ವಿಚಾರಣೆ ಎದುರಿಸಬೇಕಾಗಿರುವುದು ಸ್ಪಷ್ಟವಾಗಿದೆ. ಮೋಹನ್ ಲಾಲ್ ಅಕ್ರಮವಾಗಿ ದಂತದ ಕಲಾಕೃತಿಗಳನ್ನು ಇರಿಸಿಕೊಂಡಿದ್ದರು ಎಂದು 2012ರಲ್ಲಿ ಪ್ರಕರಣ ದಾಖಲಾಗಿದ್ದು, ಥೇವರದಲ್ಲಿನ ಅವರ ಮನೆಯಿಂದ ಕಲಾಕೃತಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪ್ರಕರಣವನ್ನು ಮುಂದುವರಿಸುವುದು ವ್ಯರ್ಥ ಕಸರತ್ತಾಗಿದೆ. ನ್ಯಾಯಾಲಯದ ಸಮಯವೂ ವ್ಯರ್ಥವಾಗುತ್ತದೆ” ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ. ಆದರೆ ಕೋರ್ಟ್, “ಮೊದಲ ಆರೋಪಿಯಾಗಿ ಗುರುತಿಸಲಾಗಿರುವ ಮೋಹನ್‌ಲಾಲ್ ಅವರಿಗೆ ನೀಡಲಾದ ಮಾಲೀಕತ್ವ ಪ್ರಮಾಣಪತ್ರದ ಕಾನೂನುಬದ್ಧತೆಯ ಬಗ್ಗೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸವಾಲುಗಳನ್ನು ಬಗೆಹರಿಸದೆ ಅರ್ಜಿಯನ್ನು ತರಾತುರಿಯಲ್ಲಿ ಸಲ್ಲಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
“ವಿಚಾರಣೆಯನ್ನು ಹಿಂಪಡೆಯಲು ಸಲ್ಲಿಸಿರುವ ಅರ್ಜಿಯನ್ನು ಅನುಮತಿಸಲು ನಾನು ಒಲವು ತೋರುತ್ತಿಲ್ಲ” ಎಂದು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಂಜು ಕ್ಲೀಟಸ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು
ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯಿಂದ ಹಿಂದೆ ಸರಿಯಲು ಫೆಬ್ರವರಿ 7, 2020ರಂದು ರಾಜ್ಯ ಸರ್ಕಾರ ಒಪ್ಪಿಗೆ ವಿಸ್ತರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ ನ್ಯಾಯಾಲಯ ತನ್ನ ಆದೇಶದಲ್ಲಿ, “ಈ ಪ್ರಕರಣದಲ್ಲಿ ಯಾವುದೇ ಗೆಜೆಟ್ ನೋಟಿಫಿಕೇಶನ್ ಇರುವುದಿಲ್ಲ. ದಂತಗಳಿಗೆ ಸಂಬಂಧಿಸಿದ ಮಾಲೀಕತ್ವವು ಅನೂರ್ಜಿತವಾಗಿದೆ” ಎಂದು ತಿಳಿಸಿದೆ.
ಜೂನ್ 2012ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಮೋಹನ್ ಲಾಲ್ ಮನೆಯಿಂದ ನಾಲ್ಕು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಯಾವುದೇ ಹೆಚ್ಚಿನ ತನಿಖೆ ನಡೆಯದಂತೆ ಪ್ರಕರಣವನ್ನು ಮುಚ್ಚಿ ಹಾಕಲು ತನ್ನ ಪ್ರಭಾವವನ್ನು ಮೋಹನ್ ಬಳಸಿದ್ದಾರೆಂದು ದೂರುದಾರರು ವಾದಿಸಿದ್ದಾರೆ.


