ಬಿಜೆಪಿ ಬೆಂಬಲಿತ ಟ್ರೋಲರ್ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ, ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕವಾದ ಕವಿಶೈಲದಲ್ಲಿ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನಾ ರ್‍ಯಾಲಿ ಬುಧವಾರ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಕವಿಶೈಲದಲ್ಲಿ ಕುವೆಂಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಪ್ರಾರಂಭವಾದ ಪಾದಯಾತ್ರೆ, ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಆವರಣದಲ್ಲಿ ಸಾರ್ವಜನಿಕ ಸಭೆ ಜರಗಲಿದೆ.
ಪ್ರತಿಭಟನಾ ರ್‍ಯಾಲಿಯನ್ನು ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, “ನಾಡಿನ ಆದರ್ಶ ಪುರುಷರಾದ ಬಸವಣ್ಣ ಮತ್ತು ಕುವೆಂಪು ಅವರನ್ನು ಅವಮಾನಿಸುವುದನ್ನು ಕರ್ನಾಟಕದ ಜನರು ಸಹಿಸುವುದಿಲ್ಲ. ಈ ಪ್ರತಿಭಟನೆಯು ಕನ್ನಡ ಭಾಷೆ ಮತ್ತು ಧ್ವಜವನ್ನು ಅವಮಾನಿಸಿದವರಿಗೆ ಬಲವಾದ ಸಂದೇಶವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಹಿಂದೆ ಗೋಕಾಕ್ ಚಳುವಳಿ ನಡೆದಿತ್ತು. ಇದು ಕುಪ್ಪಳ್ಳಿ ಕಹಳೆ. ಕುವೆಂಪು ಅಂದರೆ ಕನ್ನಡ, ಬಸವಣ್ಣ ಅಂದರೆ ಕರ್ನಾಟಕ. ಈಗ ಅವರುಗಳಿಗೇ ಕುತ್ತು ಬಂದಿದೆ ಅಂದಮೇಲೆ ನಾವಿದ್ದು ಮಾಡುವುದೇನು. ಇದು ನಾಡಿನಾದ್ಯಂತ ಮೊಳಗಬೇಕಿದೆ. ನಮ್ಮ ನಾಡು, ನಾಡಗೀತೆ ಎರಡಕ್ಕೂ ಅವಮಾನವಾಗಿದೆ. ಹೀಗಾಗಿ ಇದರ ವಿರುದ್ಧ ನಿರಂತರ ಹೋರಾಟ ನಡೆಯಬೇಕಿದೆ” ಎಂದು ಹಂಸಲೇಖ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ‘ಚಾರ್ಜ್ ಶೀಟ್’ ಹೊರಡಿಸಿದ ಬಹುತ್ವ ಕರ್ನಾಟಕ!
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಅಂಕಣಕಾರ ಬಿ.ಚಂದ್ರೇಗೌಡ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿ ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಹಲವು ಮಹನೀಯರಿಗೆ ಅಪಮಾನ ಮಾಡಿದ್ದು, ಹೀಗಾಗಿ ಅವರು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕೆಂದು ರ್‍ಯಾಲಿಯಲ್ಲಿ ಒತ್ತಾಯಿಸಲಾಯಿತು.
ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ನಾಗರೀಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಪಕ್ಷಾತೀತವಾಗಿ ಹೋರಾಟವನ್ನು ರೂಪಿಸಲಾಗಿದ್ದು ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯಾರ್ಥಿ- ಯುವಜನ- ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಪಾದಯಾತ್ರೆಯಲ್ಲಿ ಭಾಗವಹಿಸಿವೆ.
ಇದನ್ನೂ ಓದಿ: ಹಿಂದಿ ಭಾಷೆ ಬಲ್ಲ ಮಕ್ಕಳಿಗೆ ಮಾತ್ರ ಪ್ರವಾಸ – ಕನ್ನಡಕ್ಕೆ ಬಗೆಯುವ ದ್ರೋಹ: ಎಚ್‌ಡಿಕೆ ಆಕ್ರೋಶ
ಸಮಾರೋಪ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಇನ್ನೂ ಹಲವರು ಭಾಗವಹಿಸುವ ನಿರೀಕ್ಷೆಯಿದೆ.


