Homeಅಂಕಣಗಳುಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

- Advertisement -
- Advertisement -

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಕ್ರಮಗಳು ಬಗೆದಷ್ಟೂ ಸಿಗುತ್ತಿವೆ. ಮೇಲ್ನೋಟಕ್ಕೆ ಇದು ಕೇಸರೀಕರಣ ಮತ್ತು ಬ್ರಾಹ್ಮಣೀಕರಣದ ಪಠ್ಯಗಳು ಎಂದೆನಿಸಿದರೂ, ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸಂವಿಧಾನಕ್ಕೆ ಮತ್ತು ಸಂವಿಧಾನಶಿಲ್ಪಿಗೆ ಅವಮಾನ ಮಾಡುವ ಯಥೇಚ್ಛ ’ಪರಿಷ್ಕರಣೆ’ಗಳು ಕಣ್ಣಿಗೆ ರಾಚುತ್ತಿವೆ. ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ “ಅಂಬೇಡ್ಕರ್ ಅವರ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ” ಎಂಬ ಹಿಂದಿನ ಪಠ್ಯದ ಸಾಲನ್ನೇ ಕುತಂತ್ರದಿಂದ ಕಿತ್ತೆಸೆಯಲಾಗಿದೆ. ಜನಾಕ್ರೋಶದ ಭಯಕ್ಕೆ, ಒಂದು ಕಡೆ ಶಿಕ್ಷಣ ಮಂತ್ರಿ ಆ ಪಾಠದಲ್ಲಿ ಆ ಸಾಲನ್ನು ಮತ್ತೆ ಸೇರಿಸಿ, ಅದೊಂದು ಪಾಠವನ್ನು ಶಾಲೆಗಳಿಗೆ ಹೊಸದಾಗಿ ಒದಗಿಸಲಾಗುವುದು ಎನ್ನುತ್ತಿದ್ದರೆ, ಮತ್ತೊಂದು ಕಡೆ ಪಠ್ಯ ಪುಸ್ತಕ ಸಮಿತಿಯ ಕೆಲವರು ’ಸಂವಿಧಾನವನ್ನು ಅಂಬೇಡ್ಕರ್ ಅವರು ಒಬ್ಬರೇ ಬರೆದರೆ’ ಎಂಬ ಹಳೆಯ ಕುತ್ಸಿತ ವಾದವನ್ನು ಮುಂದೊಡ್ಡಿ ಸಂಘಪರಿವಾರದ ನಿಜ ಮುಖದ ಕ್ರೌರ್ಯವನ್ನು, ಇಬ್ಬದಿ ನಾಲಗೆಯ ಗುಣವನ್ನು ಅನಾವರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದ ಮುಖ್ಯ ಶಿಲ್ಪಿಯಾಗಿದ್ದರು ಎಂಬುದನ್ನು ಮರಾಮಾಚಿಸುವುದು ಇವರ ಅಜೆಂಡಾದ ಒಂದು ಭಾಗವಾದರೆ, ಸಾಂವಿಧಾನಿಕ ನೈತಿಕತೆಯನ್ನು ನಾಗರಿಕರು ಎಂದಿಗೂ ಮೈಗೂಡಿಸಿಕೊಳ್ಳದಂತೆ ಮನುಧರ್ಮಶಾಸ್ತ್ರದ ತಾರತಮ್ಯವನ್ನು ಮರುಕಳಿಸುವುದು ಅವರ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಮೇಲೆ ಹಲವು ದಿಕ್ಕುಗಳಿಂದ ದಾಳಿ ನಡೆಸುವ ಪ್ರಯತ್ನಗಳು ಚುರುಕುಗೊಂಡಿವೆ. ಪುನರ್ ಪರಿಷ್ಕರಣೆ ಅದರ ಒಂದು ಭಾಗ.

ಈ ವಿಷಯವಾಗಿ ಪರಿಷ್ಕರಣೆ ಸಮಿತಿ ಸದಸ್ಯರೊಬ್ಬರನ್ನು ’ನಾನುಗೌರಿ.ಕಾಂ’ ಸಂಪರ್ಕಿಸಿದಾಗ, “ಸಂವಿಧಾನವನ್ನು ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ? ಶಿಲ್ಪಿ ಎಂದರೆ ಒಬ್ಬರು. ಈ ಶಬ್ದವನ್ನು ಯಾರೋ ಒಬ್ಬರು 90ರ ದಶಕದಲ್ಲಿ ಪ್ರಯೋಗ ಮಾಡಿದ್ದಾರೆ” ಎಂದದ್ದಲ್ಲದೆ, “ಸಂವಿಧಾನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಐದು ಜನರಿದ್ದರು, ಅದನ್ನು ಒಬ್ಬರೇ ಕೂತು ಬರೆದಿರಲು ಸಾಧ್ಯವೇ ಇಲ್ಲ? ಮತ್ತೆ ಯಾಕೆ ಎಂಟು ಜನರ ಕಮಿಟಿ ಮಾಡಿದ್ದರು? ಅವರಿಗೇನು ಬೇರೆ ಕೆಲಸ ಇರಲಿಲ್ಲವೆ?” ಎಂದು ತಮ್ಮ ಅಜೆಂಡಾವನ್ನು ಹಸಿಹಸಿಯಾಗಿ ಪ್ರತಿಪಾದಿಸಿದ್ದರು.

ರಾಜೇಂದ್ರ ಪ್ರಸಾದ್

ಇವೆಲ್ಲಾ ಎಂತಹ ಹಸಿ ಸುಳ್ಳುಗಳು ಎಂಬುದಕ್ಕೆ ಸಂವಿಧಾನ ನಡಾವಳಿ ಸಭೆಯ ದಾಖಲೆಗಳೇ ಉತ್ತರಿಸುತ್ತವೆ. ಅಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್ ಅವರು ಹೇಳಿರುವ ಮಾತುಗಳನ್ನು ನೋಡಿ: “ಅತಿ ಉತ್ಸಾಹದಿಂದ ಮತ್ತು ಶ್ರದ್ಧೆಯಿಂದ ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರು ಮತ್ತು ಅದರ ಅಧ್ಯಕ್ಷ ಡಾ. ಅಂಬೇಡ್ಕರ್ ಅವರು ಕೆಲಸ ಮಾಡಿದ್ದಾರೆ. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅವರಿಗೆ ಜವಾಬ್ದಾರಿ ವಹಿಸಿದ್ದಕ್ಕಿಂತಲೂ ಉತ್ತಮ ನಿರ್ಧಾರವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡದ್ದಷ್ಟೇ ಅಲ್ಲ, ತಾವು ಮಾಡಿದ ಕೆಲಸಕ್ಕೆ ಛಾಪು ತಂದಿದ್ದಾರೆ” ಎಂದಿದ್ದರು. 1962ರಿಂದ 67ರವರೆಗೆ ಭಾರತದ ರಾಷ್ಟ್ರಾಧ್ಯಕರಾಗಿದ್ದ ಎಸ್ ರಾಧಾಕೃಷ್ಣನ್ ಅವರು “ನಾನು ಅವರು ಕೆಲಸ ಮಾಡುವುದನ್ನು ನೋಡಿದ್ದೇನೆ, ನಮ್ಮ ಸಂವಿಧಾನವನ್ನು ಕಡೆದು ಕಟ್ಟುತ್ತಾ ಎಲ್ಲಾ ಬಗೆಯ ಸಮಸ್ಯೆಗಳಿಗೆ ಉತ್ತರಿಸುತ್ತಿದ್ದುದನ್ನು..” ಎಂದು ಅಂಬೇಡ್ಕರ್ ಬಗೆಗೆ ಹೇಳಿದ್ದಾರೆ. ಇನ್ನು 69ರಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದ ವಿವಿ ಗಿರಿ ಅವರು “ಸ್ವಾತಂತ್ರ್ಯ ಭಾರತದ ಸಂವಿಧಾನಕ್ಕೆ ಮುಖ್ಯ ಶಿಲ್ಪಿಯಾಗಿ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕೆ ಅರ್ಹನಾಗಿದ್ದವರಿಗೆ ನೀಡಿದ ವಿರಳ ಪದವಿ ಮತ್ತು ಗೌರವವದು. ಜ್ಞಾನಕ್ಕಾಗಿ ತಮ್ಮ ದಣಿವಿಲ್ಲದ ಶೋಧ, ಸರಿಗಟ್ಟಲಾಗದ ತೀವ್ರತೆಯ ಕೆಲಸ, ಸಂವಿಧಾನ ನಡಾವಳಿ ಸಭೆಯ ಕೆಲಸದಲ್ಲಿ ಪರಿಣಾಮಕಾರಿಯಾದ ಅವರ ತೀಕ್ಷ್ಣ ಗುರಿಗಳ ಕಾರಣದಿಂದ ಡಾ. ಅಂಬೇಡ್ಕರ್ ಸಂವಿಧಾನದ ಮೂಲತತ್ವಗಳನ್ನು ನೀಡಿ ಮುನ್ನಡೆಸಿದರು” ಎನ್ನುತ್ತಾರೆ. ಹೀಗೆ ಸಂವಿಧಾನ ಜಾರಿಯಾದಾಗಲಿಂದಲೂ ಅಂಬೇಡ್ಕರ್ ಅವರ ಕೊಡುಗೆಯನ್ನು ಗುರುತಿಸಿ ಹೇಳಿದ ಮತ್ತು ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆದದ್ದು ದಾಖಲಾಗಿದೆ. ಆದರೆ ಸಂಘಪರಿವಾರದವರಿಗೆ ಅದೇ ಅಪಥ್ಯವಾಗಿ ಹೋಗಿದ್ದು ಇದನ್ನು ತಿರುಚಲು ಇನ್ನಿಲ್ಲದ ಆಟಗಳನ್ನು ಹೂಡುತ್ತಿದ್ದಾರೆ!

’ಸಂವಿಧಾನ ಕರಡು ಸಭೆಯಲ್ಲಿ ಅಂಬೇಡ್ಕರ್ ಒಬ್ಬರೇ ಇದ್ದರಾ’ ಎಂದು ದಾರ್ಷ್ಟ್ಯದ ಮಾತುಗಳನ್ನಾಡುವ ಇವರುಗಳಿಗೆ ಕರಡು ಸಮಿತಿ ಹೇಗೆ ಕೆಲಸ ನಿರ್ವಹಿಸಿತು ಮತ್ತು ನಡಾವಳಿ ಸಭೆಗಳಲ್ಲಿ ನಡೆದ ಚರ್ಚೆಗಳಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಕರಡನ್ನು ಸಮರ್ಥಿಸಿಕೊಳ್ಳುವ ಮತ್ತು ತಿದ್ದುಪಡಿಗಳಿಗೆ ತಾತ್ವಿಕ ಚಿಂತನೆಗಳನ್ನು ನೀಡುವ, ಸದಸ್ಯರುಗಳೊಂದಿಗೆ ಸಂವಾದಿಸುವ ಕೆಲಸ ಬಹುತೇಕ ಬಾಬಾಸಾಹೇಬರ ಹೆಗಲ ಮೇಲೆ ಬಿದ್ದಷ್ಟು ಇನ್ನು ಯಾರ ಮೇಲೆಯೂ ಬಿದ್ದಿರಲಿಲ್ಲ ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನವಿಲ್ಲ ಅಥವಾ ಸತ್ಯವನ್ನು ತಿರುಚುವ ಕೆಲಸಕ್ಕೆ ಬಿದ್ದಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದು ಸಂವಿಧಾನ ನಡಾವಳಿ ಸಭೆಯ ಪ್ರಾರಂಭದಲ್ಲಿ ಗುರಿ ಮತ್ತು ನಿರ್ಧಾರಗಳ ನಿರ್ಣಯವನ್ನು ಮಂಡಿಸಿದಾಗ, ಮುಸ್ಲಿಂ ಲೀಗ್‌ನ ಭಾಗೀದಾರಿಕೆ ಇಲ್ಲದ್ದರ ಬಗ್ಗೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ, ತಮ್ಮ ಚೊಚ್ಚಲ ಭಾಷಣದಲ್ಲಿಯೇ, ಆಕ್ಷೇಪ ಪರಿಹರಿಸಿ ನಡಾವಳಿ ಸಭೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದರಿಂದ ಹಿಡಿದು, ಮೂಲಭೂತ ಹಕ್ಕುಗಳನ್ನು ವಿವರವಾಗಿ ಸೇರಿಸುವ, ರಾಜ್ಯ ನಿರ್ದೇಶಿತ ತತ್ವಗಳನ್ನು ಸೇರಿಸುವ, ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಕಾರಣವಾಗುವ, ಅಧ್ಯಕ್ಷೀಯ ಮಾದರಿಯ ಬದಲು ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಹೀಗೆ ಸಂವಿಧಾನದ ಕೇಂದ್ರ ವಿಷಯಗಳಲ್ಲಿ ಅಂಬೇಡ್ಕರ್ ಅವರು ವಹಿಸಿದ್ದ ಮುಖ್ಯ ಪಾತ್ರವನ್ನು 50ರ ದಶಕದಿಂದಲೇ ಗುರುತಿಸಿ, ದಾಖಲಿಸಿರುವ ಕೆಲಸ ಆಗಿದ್ದರೂ ಅದನ್ನು ಮರೆಮಾಚುವ ಹೀನ ತಂತ್ರಗಾರಿಕೆಗೆ ಸಂಘಪರಿವಾರದವರು ಇಳಿದಿರುವುದಕ್ಕೆ ಏನನ್ನಬೇಕೋ?

’ಕರಡು ಸಮಿತಿಯಲ್ಲಿ ಏಳೆಂಟು ಸದಸ್ಯರಿದ್ದರು, ಅವರಿಗೇನು ಬೇರೆ ಕೆಲಸವಿರಲಿಲ್ಲವೇ’ ಎಂಬ ಸದರಿ ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಮಾತುಗಳಿಗೆ, ಸಂವಿಧಾನ ಕರಡು ಸಮಿತಿಯ ಸದಸ್ಯರೇ ಆಗಿದ್ದ ಟಿ ಟಿ ಕೃಷ್ಣಮಾಚಾರಿ ಅವರು ಹೇಳಿದ ಮಾತುಗಳು ಕೇಳಿಸಿರುವುದಿಲ್ಲ. ಅವರು ಹೇಳಿದ್ದು ಹೀಗೆ: “ಕರಡು ಸಮಿತಿಯ ಮೂಲ ಏಳು ಸದಸ್ಯರಲ್ಲಿ, ಒಬ್ಬರು ಅಸು ನೀಗಿದರು, ಒಬ್ಬರು ಅಮೆರಿಕದಲ್ಲಿ ಇದ್ದರು, ಒಬ್ಬರು ಪ್ರಭುತ್ವದ ಕೆಲಸಗಳಲ್ಲಿ ನಿರತರಾಗಿದ್ದರು, ಇನ್ನಿಬ್ಬರು ತಮ್ಮ ಅನಾರೋಗ್ಯದ ಕಾರಣ ದೆಹಲಿಯಲ್ಲಿ ಇರಲಾಗಲಿಲ್ಲ. ಆದುದರಿಂದ ಸಂವಿಧಾನದ ಕರಡು ರಚಿಸುವ ಭಾರವೆಲ್ಲಾ ಕೊನೆಗೆ ಡಾ. ಅಂಬೇಡ್ಕರ್ ಅವರ ಮೇಲೆಯೇ ಬಿತ್ತು. ಯಾವುದೇ ಸಂದೇಹವಿಲ್ಲದೆ ಇಂತಹ ಮಹಾನ್ ಕಾರ್ಯವನ್ನು ಸಾಧಿಸಿರುವ ಅವರಿಗೆ ನಾವು ಆಭಾರಿಯಾಗಿದ್ದೇವೆ” ಎನ್ನುತ್ತಾರೆ ಕೃಷ್ಣಮಾಚಾರಿ. ಸಂವಿಧಾನ ಶಿಲ್ಪಿ ಎಂದು ಕರೆಯಲು ಇದಕ್ಕಿಂತಲೂ ಹೆಚ್ಚಿನ ಸಾಕ್ಷ್ಯಗಳು ಬೇಕೇ?

’ಸಂವಿಧಾನ ಶಿಲ್ಪಿ’ ಎಂಬ ಮಾತು ಕೇವಲ ಪಂಡಿತರು ಮತ್ತು ರಾಜಕಾರಣಿಗಳು ಮಾತ್ರವಷ್ಟೇ ಹೇಳಿರುವುದಲ್ಲ. ಕೋಟ್ಯಂತರ ಭಾರತೀಯರಿಗೆ ಘನತೆಯನ್ನು ಒದಗಿಸಿಕೊಟ್ಟ ಸಂವಿಧಾನದ ಬಗ್ಗೆ ಗೌರವವಿರುವ ಸಾಮಾನ್ಯ ಜನರ ಆಡುಮಾತಿನಲ್ಲಿ ಜನಪದದಲ್ಲಿ ಬಳಕೆಯಾಗಿ ವ್ಯಾಪಕಗೊಂಡಿರುವ ಮಾತದು. ಈಗ ಅದಕ್ಕೇ ಕೊಡಲಿಯೇಟು ನೀಡಲು ಪರಿಷ್ಕರಣೆಯ ಹೆಸರಿನಲ್ಲಿ ಹೊರಟಿರುವ ಇವರ ಹುನ್ನಾರವನ್ನು ಅರಿಯದಷ್ಟು ಮುಗ್ಧರೇ ಜನರ? ಅಷ್ಟೇ ಅಲ್ಲ ಅಂದು ಡಾ. ಬಿ ಆರ್ ಅಂಬೇಡ್ಕರ್ ಅವರು ರಾಜಕೀಯ ಪ್ರಜಾಪ್ರಭುತ್ವ ಸಾಧಿಸಿಕೊಳ್ಳಲು ಸಾಮಾಜಿಕ ಪ್ರಜಾಪ್ರಭುತ್ವ ಅತ್ಯಗತ್ಯವಾದದ್ದು ಎಂದು ಪ್ರತಿಪಾದಿಸಿದ್ದರು. ಇದನ್ನು ಇಲ್ಲಿಯವರೆಗೂ ಭಾರತೀಯರು ಸಾಧಿಸಿಕೊಂಡಿಲ್ಲದಿರುವುದರಿಂದ ಸಂವಿಧಾನ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸಿಕೊಳ್ಳುವುದಕ್ಕೆ ರಥವಾಗಬೇಕು ಎಂದು ನಂಬಿ ಅದರಲ್ಲಿ ಸಮಾನತೆ ಮತ್ತು ಭ್ರಾತೃತ್ವದ ಕಲ್ಪನೆಗಳನ್ನು ಕಡೆದಿದ್ದರು. ಈ ಕಲ್ಪನೆಗಳು ಭಾರತೀಯರಲ್ಲಿ ನೆಲೆಗೊಳ್ಳದಂತೆ ತಡೆದದ್ದು ಇಲ್ಲಿನ ಪ್ರಾಚೀನ ಸ್ಮೃತಿಗಳು. ಅದರಲ್ಲಿ ಅತಿ ಹೆಚ್ಚು ಅಪಾಯಾಕಾರಿಯಾಗಿದ್ದುದು ಮನುಸ್ಮೃತಿ. ತಾರತಮ್ಯದ ನೀಚತನವನ್ನು ಪ್ರತಿಪಾದಿಸಿದ್ದ ಇದು ಯಾವತ್ತಿಗೂ ಸಮಾಜಕ್ಕೆ ಮಾರಕ ಎಂದು ಖಂಡತುಂಡಾಗಿ ತಿರಸ್ಕರಿಸಿದ್ದರು ಬಾಬಾಸಾಹೇಬರು. ಈಗ ಬಾಬಾಸಾಹೇಬರ ಹೆಸರಿಗೆ ಅವಮಾನ ಮಾಡುವ ಕೆಲಸದ ಜೊತೆಜೊತೆಗೇ ಮನುಸ್ಮೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವನ್ನೂ ಇದೇ ಪರಿಷ್ಕರಣೆಯ ಸಮಿತಿ ಮಾಡಲು ಹೊರಟಿದೆ. ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ’ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು’ ಉಪಶೀರ್ಷಿಕೆಯಲ್ಲಿ ಬರೆಯುತ್ತಾ, “ಧರ್ಮಶಾಸ್ತ್ರವು ವ್ಯಕ್ತಿಯ ಧಾರ್ಮಿಕ ಬದುಕಿಗೆ ಮತ್ತು ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ತಿಳಿಸುತ್ತದೆ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಪರಾಶನ ಸ್ಮೃತಿ ಮುಂತಾದ ಹಲವು ಗ್ರಂಥಗಳಲ್ಲಿ ಸಮಾಜವು ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂಬ ಸೂಚನೆಗಳಿವೆ” ಎಂದು ಉಲ್ಲೇಖಿಸಲಾಗಿದೆ. ಇಂತಹ ಕುತಂತ್ರದ ಮತ್ತು ಸಮಾಜಕ್ಕೆ ಮಾರಕವಾದ ಸಂವಿಧಾನ ವಿರೋಧಿ ಸಾಲನ್ನು ಸೇರಿಸುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ತಮ್ಮ ದೀರ್ಘ ಅಜೆಂಡಾಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅಡಿಪಾಯ ಹಾಕಲಾಗಿದೆ.

ಹೀಗೆ ಹತ್ತು ಹಲವು ದಿಕ್ಕುಗಳಿಂದ ಸಂವಿಧಾನಕ್ಕೂ ಮತ್ತು ಸಂವಿಧಾನ ಶಿಲ್ಪಿಗೂ ಅವಮಾನ ಮಾಡಿ, ದಾಳಿ ನಡೆಸುತ್ತಿರುವ ರೋಹಿತ ಚಕ್ರತೀರ್ಥ ಸಮಿತಿಯ ಪುನರ್ ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯುವಂತೆ ಗಟ್ಟಿ ದನಿಯಲ್ಲಿ ಆಗ್ರಹಿಸಿ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳುವುದು ಇಂದಿನ ಆದ್ಯ ಕರ್ತವ್ಯವಾಗಿದೆ. ಮನುಸೃತಿಯನ್ನು ಸಂವಿಧಾನದ ಜಾಗದಲ್ಲಿ ಪ್ರತಿಷ್ಠಾಪಿಸುವ ವೈದಿಕ ಪುರೋಹಿತಶಾಹಿಯ ಹುನ್ನಾರವನ್ನು ಸೋಲಿಸುವ ಜವಾವ್ದಾರಿ ಎಲ್ಲ ನಾಗರಿಕರ ಮೇಲಿದೆ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...