ಮಹಾರಾಷ್ಟ್ರದ ಎಂಎಲ್‌ಸಿ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಎಲ್ಲಾ ಶಿವಸೇನೆ ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ. ಇದರ ಬೆನ್ನಲ್ಲೇ ಮಹಾ ವಿಕಾಸ್ ಅಘಾಡಿ ಸರ್ಕಾರದ ಸಚಿವ ಏಕನಾಥ್ ಶಿಂಧೆ, 13 ಇತರ ಪಕ್ಷದ ಶಾಸಕರೊಂದಿಗೆ ಗುಜರಾತ್‌ಗೆ ಪ್ರಯಾಣಿಸಿದ್ದಾರೆ.
ಸಚಿವ ಮತ್ತು ಶಿವಸೇನೆಯ ಉನ್ನತ ನಾಯಕ ಏಕನಾಥ್ ಶಿಂಧೆ, 13 ಶಾಸಕರೊಂದಿಗೆ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದು ಮಹಾರಾಷ್ಟ್ರದ ಸರ್ಕಾರದಲ್ಲಿ ಅಪರೇಷನ್ ಕಮಲದ ಎಚ್ಚರಿಕೆಯನ್ನು ನೀಡಿದೆ.
ಉದ್ಧವ್ ಠಾಕ್ರೆ ಕರೆದಿರುವ ತುರ್ತು ಸಭೆಗೆ ಎಲ್ಲಾ ಶಾಸಕರು ಸಭೆಯಲ್ಲಿ ಹಾಜರಿರಲು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆದರೆ, ಗುಜರಾತ್‌ನ ಹೋಟೆಲ್‌ನಲ್ಲಿರುವ ಬಾಳ್ ಠಾಕ್ರೆ ನಿಷ್ಠಾವಂತ ನಾಯಕ ಏಕನಾಥ್ ಶಿಂದೆ ಇಂದು ಸೂರತ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಒಂದೇ ಕುಟುಂಬದ ಒಂಬತ್ತು ಮಂದಿಯ ಮೃತದೇಹಗಳು ಪತ್ತೆ, ತನಿಖೆ ಆರಂಭ
ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಆಡಳಿತ ಮೈತ್ರಿಕೂಟ ಮತ್ತು ಬಿಜೆಪಿ ತಲಾ ಐದು ಸ್ಥಾನಗಳನ್ನು ಗೆದ್ದ ಕೆಲವೇ ಗಂಟೆಗಳ ನಂತರದ ಬೆಳವಣಿಗೆಗಳು ಕಂಡುಬಂದಿವೆ. ಪ್ರತಿಪಕ್ಷ ಬಿಜೆಪಿ ಸ್ಪರ್ಧಿಸಿದ್ದ ಎಲ್ಲ ಐದು ಸ್ಥಾನಗಳನ್ನು ಗೆದ್ದಿದೆ. ಆದರೆ, ಆಡಳಿತಾರೂಢ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಾಂತ ಹಂದೋರೆ ಸೋತಿದ್ದಾರೆ. ಇದು ಆಪರೇಷನ್ ಕಮಲದ ಸುಳಿವು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿಯನ್ನು ಗುರಿಯಾಗಿಸಿಕೊಂಡು ಶಿವಸೇನೆ ಸಂಸದ ಸಂಜಯ್ ರಾವತ್, ’ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಾಡಿದಂತೆಯೇ, ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸುವ ಸಂಚು ನಡೆಯುತ್ತಿದೆ. ಆದರೆ, ಶಿವಸೇನೆ ನಿಷ್ಠಾವಂತರ ಪಕ್ಷವಾಗಿದೆ, ನಾವು ಹಾಗೆ ಮಾಡಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?
ಜೊತೆಗೆ “ಏಕನಾಥ್ ಶಿಂಧೆ ಅವರು ಹೋಟೆಲ್‌ನಲ್ಲಿ ನಮ್ಮೊಂದಿಗೆ ಇದ್ದರು. ಮಹಾ ವಿಕಾಸ್ ಅಘಾಡಿ ಅಭ್ಯರ್ಥಿಯ ಗೆಲುವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈಗ ನಾವು ಅವರೊಂದಿಗೆ ಮಾತನಾಡುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ” ಎಂದು ಸಂಜಯ್ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ಸಚಿವ ಏಕನಾಥ್ ಶಿಂಧೆ ಅವರು ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಥಾಣೆಯ ಪ್ರಮುಖ ಶಿವಸೇನಾ ನಾಯಕರಾಗಿರುವ ಶಿಂಧೆ ಅವರು ಈ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ ಶಿವಸೇನೆಯ ಸಂಸದರಾಗಿದ್ದಾರೆ.
ಇತ್ತ, ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ನಾಯಕ ದೇವೇಂದ್ರ ಫಡ್ನವೀಸ್ ದೆಹಲಿಗೆ ಆಗಮಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಉದ್ಧವ್ ಸರ್ಕಾರಕ್ಕೆ ಅಪರೇಷನ್ ಕಮಲದ ಎಚ್ಚರಿಕೆಯನ್ನು ನೀಡುತ್ತಿದೆ.
ಇದನ್ನೂ ಓದಿ: ಹೋರಾಟಕ್ಕೆ ಪ್ರತೀಕಾರವಾಗಿ ಬುಲ್ಡೋಜರ್; ಬಿಜೆಪಿಯ ಕೀಳು ರಾಜಕೀಯ


