HomeUncategorizedಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?

- Advertisement -
- Advertisement -

ವಿಲಕ್ಷಣ ಕಡಲ ನಗರಿ ಮಂಗಳೂರು ತುಳುನಾಡಿನ ಕೇಂದ್ರ. ಮಂಗಳೂರು ತಾಲೂಕನ್ನು ಚುನಾವಣಾ ಆಯೋಗ 2007ರ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ- ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮಂಗಳೂರು ಎಂಬ ಮೂರು ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಿದೆ. 2008ರ ಅಸೆಂಬ್ಲಿ ಎಲೆಕ್ಷನ್‌ವರೆಗಿನ ಉಳ್ಳಾಲ ಕ್ಷೇತ್ರ ಮತ್ತು ರದ್ದಾದ ವಿಟ್ಲ ಕ್ಷೇತ್ರದ ಕೆಲವು ಗ್ರಾಮ ಸೇರಿ ಮಂಗಳೂರು ವಿಧಾನಸಭಾ ಕ್ಷೇತ್ರ ಎಂದಾಯಿತು. ಮಂಗಳೂರು ತಾಲೂಕಿನ ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಮುಡಿಪು ಕಂದಾಯ ಹೋಬಳಿ ಸೇರಿಸಿ 2018ರಲ್ಲಿ ಉಳ್ಳಾಲ ತಾಲೂಕು ರಚಿಸಲಾಗಿದೆ. ಕೂಗಳತೆ ಅಂತರದಲ್ಲಿ ನಡೆದ ಹೋಮ್ ಸ್ಟೇ ದಾಳಿ, ಪಬ್ ದಾಳಿ ಮತ್ತು ಚರ್ಚ್ ದಾಳಿಯಂಥ ಕಟ್ಟರ್ ಕಾರ್ಯಾಚರಣೆಗೆ ಕಂಗೆಟ್ಟ ಮಂಗಳೂರಲ್ಲಿ ಈಗಲೂ ಕೌ ಬ್ರಿಗೇಡ್ ಮತ್ತು ಅನೈತಿಕ ಪೊಲೀಸ್ ಪಡೆಯ ’ಪಹರೆ’ ಬಿಗಿಯಾಗೇ ಇದೆ! ಮುಸ್ಲಿಮರು ಮತ್ತು ಹಿಂದು ಹುಡುಗಿಯರು ಮನೆಯಿಂದ ಹೊರಗೆ ಕಾಲಿಡುವಾಗ ಹತ್ತು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಇದೆಯೆಂಬ ಅಭಿಪ್ರಾಯ ವ್ಯಾಪಕವಾಗಿದೆ!

ಇತಿಹಾಸ-ಸಮಾಜ-ಸಂಸ್ಕೃತಿ

ತುಳುವರು ಮಂಗಳೂರನ್ನು ’ಕುಡಲ’ ಅಥವಾ ’ಕುಡ್ಲ’ ಎಂದು ಕರೆದರೆ ಮಲೆಯಾಳಿಗಳು ’ಮೈಕೆಲ್’ ಎನ್ನುತ್ತಾರೆ; ಪೋರ್ಚುಗೀಸರಿಗೆ ’ಮಂಜರೂನ್’ ಆಗಿದ್ದ ಮಂಗಳೂರು ಮತ್ತೆ ಕೆಲವರಿಗೆ ’ಮಂಗಳಾವರಂ’. ಟಿಪ್ಪೂವಿನ ಸಾವಿನ ನಂತರ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ತುಳುನಾಡು ವೇಗವಾಗಿ ಆಧುನೀಕರಣಗೊಂಡಿತು. ಮಂಗಳೂರಲ್ಲಿ ಬಾಸೆಲ್ ಮಿಶನ್ ಪಾದ್ರಿಗಳು ಹೆಂಚಿನ ಕಾರ್ಖಾನೆ ಮತ್ತು ಮುದ್ರಣ ಯಂತ್ರ ಆರಂಭಿಸಿದರು. ಇದರಿಂದ ತುಳುನಾಡಲ್ಲಿ ವ್ಯಾವಹಾರಿಕ ಚಾಕಚಕ್ಯತೆ ಮತ್ತು ಉದ್ಯಮಶೀಲತೆ ಬೆಳೆಯಿತು. ಮುಸ್ಲಿಮ್ ವ್ಯಾಪಾರಿಗಳು
(ಬ್ಯಾರಿಗಳು) ಹೊರದೇಶಗಳೊಂದಿಗೆ ಕರಾವಳಿಯನ್ನು ಜೋಡಿಸಿದರು. ತುಳುನಾಡಲ್ಲಿ ಸ್ಥಾಪಿತವಾದ ಸುಮಾರು ಎರಡು ಡಜನ್ ಬ್ಯಾಂಕುಗಳು ಸ್ಥಳೀಯ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ. 20ನೇ ಶತಮಾನದ ಆರಂಭದಲ್ಲಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಶೈಕ್ಷಣಿಕ-ವಾಣಿಜ್ಯ-ಸಣ್ಣ ಕೈಗಾರಿಕಾ ಕೇಂದ್ರವಾಗಿದೆ.

ಮಂಗಳೂರಿನ ಪ್ರಮುಖ ಜಂಕ್ಷನ್ ಆಗಿರುವ ಉಳ್ಳಾಲ ಭಾರತದ ಹಳೆಯ ಪಟ್ಟಣಗಳಲ್ಲಿ ಒಂದು; 15ನೇ ಶತಮಾನದಲ್ಲಿ ಪೋರ್ಚುಗೀಸರ ಆಳ್ವಿಕೆಗೆ ಉಳ್ಳಾಲ ಒಳಪಟ್ಟಿತ್ತು. ಇದರ ಕುರುಹುಗಳು ಈಗಲೂ ಕಡಲ ತೀರಗಳು ಹಾಗೂ ಮತ್ತಿತರೆಡೆ ಕಾಣಿಸುತ್ತದೆ. ಚೌಟ ದೊರೆಗಳ ರಾಜಧಾನಿಯಾಗಿದ್ದ ಉಳ್ಳಾಲವನ್ನು ಬಹುಶಃ ಭಾರತದ ಪ್ರಥಮ ಮಹಿಳಾ ವಿಮೋಚನೆಯ ಪ್ರತಿಪಾದಕಿಯಾದ ರಾಣಿ ಅಬ್ಬಕ್ಕ ಚೌಟ ಆಳಿದ್ದರು. ಮಂಗಳೂರಿನ ಬಂಗ ರಾಜನನ್ನು ಮದುವೆಯಾಗಿದ್ದ ಅಬ್ಬಕ್ಕ ಗಂಡ ಪೋರ್ಚುಗೀಸರ ಆಧೀನನಾದಾಗ ಸಿಡಿದೆದ್ದು ವಿಚ್ಛೇದನ ಕೊಟ್ಟು ಆತನ ಮೇಲೆಯೆ ಯುದ್ಧ ಸಾರಿ ಗೆದ್ದ ವೀರ ರಾಣಿ! ರಾಣಿ ಅಬ್ಬಕ್ಕ ಕೋಟೆಯ ಅವಶೇಷಗಳು ಸೋಮೇಶ್ವರ ದೇಗುಲದ ಪರಿಸರದಲ್ಲಿದೆ.

ಅನೇಕ ಸಂಸ್ಕೃತಿಗಳ ಸಮುಚ್ಚೆಯವಾದ ತೌಳವ ಸಂಸ್ಕೃತಿ ಉಳ್ಳಾಲದ್ದು. ಭೂತಾರಾಧನೆ, ನಾಗಾರಾಧನೆ ಮತ್ತು ಯಕ್ಷಗಾನ ತಳು ಸಂಸ್ಕೃತಿಯ ವೈಶಿಷ್ಟ್ಯ. ಯಕ್ಷಗಾನದಲ್ಲಿ ಪುರಾತನ ಖಳನಾಯಕರು ನಾಯಕರಾದರೆ, ಭೂತಾರಾಧನೆಯಲ್ಲಿ ಅಕಾಲಿಕ ಸಾವಿಗೀಡಾದ ದಲಿತರು ದೈವಗಳಾಗಿದ್ದಾರೆ. 500ಕ್ಕಿಂತ ಹೆಚ್ಚು ಭೂತಗಳಿದ್ದು ಇದರಲ್ಲಿ ಬಬ್ಬರ್ಯ ಮತ್ತು ಆಲಿ ಭೂತಗಳೆಂಬ ಎರಡು ಮುಸ್ಲಿಮ್ ದೈವಗಳೂ ಇವೆ. ಭೂತಾರಾಧನೆ ಎಲ್ಲ ತುಳುವರನ್ನು ಒಳಗೊಂಡ ವಿಶಿಷ್ಟ ಸಂಪ್ರದಾಯ. ಇದು ಕರಾವಳಿ ಕೋಮು ಸಾಮರಸ್ಯವನ್ನು ಸಾರಿ ಹೇಳುತ್ತದೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಈಗಲೂ ಇರುವ ತುಳುನಾಡಲ್ಲಿ ದೈವಗಳ ಹುಟ್ಟು, ಸಾಧನೆ ಮತ್ತು ಸಾವಿನ ಮೌಖಿಕ ಕಥನ ನಿರೂಪಣೆಯಾದ ’ಪಾಡ್ದನ’ಗಳು ಪ್ರಸಿದ್ಧವಾಗಿವೆ. ಸಿರಿ ಪಾಡ್ದನಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ!

ತುಳುನಾಡಿನ ಕೆಲವು ಕಲಾಪ್ರಕಾರಗಳು ಬೇರೆಲ್ಲಿಯು ಇಲ್ಲ; ಆಟಿ ತಿಂಗಳಲ್ಲಿ ಊರೆಲ್ಲ ಸುತ್ತಾಡಿ ರೋಗ ಕಳೆಯುವ ಆಟಿ ಕಳೆಂಜ, ಕೊರಗರ ಡೋಲು, ಮುಂಡಾಲರ ಕಂಗಿಲು, ಮೇರರ ದುಡಿ, ಗೌಡರ ಸಿದ್ಧವೇಷದ
ಕುಣಿತ-ಹಾಡು-ವಾದ್ಯಗಳು ತುಳು ಪರಿಕಲ್ಪನೆ ಪ್ರತೀಕದಂತಿವೆ. ಉಳ್ಳಾಲದಲ್ಲಿ ತುಳು, ಬ್ಯಾರಿ, ಕನ್ನಡ, ಕೊಂಕಣಿ, ಮಲಯಾಳಂ ಭಾಷೆಗಳು ಕೇಳಿಬರುತ್ತವೆ. ಆದರೆ ಬಹುತೇಕರ ಬದುಕಿನ ಭಾಷೆ ತುಳು. ದೈನಂದಿನ ವ್ಯವಹಾರ-ಸಂವಹನ ಆಗುವುದು ತುಳುವಿನಲ್ಲಿ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಿ ಕರ್ನಾಟಕದ ಅಧಿಕೃತ ಭಾಷೆಯೆಂದು ಘೋಷಿಸುವ ತುಳುವರ ಬೇಡಿಕೆ ಬಹಳ ಕಾಲದಿಂದ ಕೇಂದ್ರ ಸರಕಾರದ ಮುಂದಿದೆ.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರುವ ಸಕಲ ಅರ್ಹತೆಯಿರುವ ತುಳು ದ್ರಾವಿಡ ಭಾಷೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ; ತುಳುವಿಗೆ 5,500 ವರ್ಷಕ್ಕಿಂತಲೂ ಹೆಚ್ಚಿನ ಶ್ರೀಮಂತ ಇತಿಹಾಸವಿದೆ. ಬಿ.ಕೆ.ಹರಿಪ್ರಸಾದ್ ಒಮ್ಮೆ ಪಾರ್ಲಿಮೆಂಟ್‌ನಲ್ಲಿ ತುಳು ಭಾಷೆ ಬಗ್ಗೆ ಮಾತಾಡಿದ್ದು ಬಿಟ್ಟರೆ, ಸಂಸತ್ತಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹಾಲಿ ಸಂಸದರಾದ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್‌ರಂಥ ತುಳು ಸಂಸ್ಕೃತಿಯವರೂ ತಮ್ಮ ನಾಡಿನ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಅಸಮಾಧಾನ ತುಳುವರಲ್ಲಿದೆ. ಈ ಅವಜ್ಞೆಯಿಂದ ಪ್ರತ್ಯೇಕ ’ತುಳುನಾಡು’ ರಾಜ್ಯ ಕೇಳುವ ಯೋಚನೆ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.

ಹಾಗೆಂದು ಭಾಷೆ-ಸಂಸ್ಕೃತಿಯಂತ ಮಹತ್ವದ ಸಂಗತಿ ಬಗ್ಗೆ ತುಳುವರು ತಲೆ ಕೆಡಿಸಿಕೊಂಡಂತಿಲ್ಲ. ತುಳುನಾಡಿನ ತಲೆಯಲ್ಲೀಗ ಗೋ ಪ್ರಾಣ, ಹಿಂದು ಹೆಣ್ಣಿನ ಮಾನ, ಮಂದಿರ-ಮಸೀದಿ-ಚರ್ಚ್, ಹಿಜಾಬ್, ಹಲಾಲ್, ಅಷ್ಟ ಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆ, ಬ್ರಹ್ಮ ಕಲಶೋತ್ಸವವೇ ಮುಂತಾದ ಧರ್ಮಕಾರಣದ ಗುಂಗು ತುಂಬಿಕೊಂಡಿದೆ ಎಂದು ಪ್ರಜ್ಞಾವಂತರು ಬೇಸರಿಸುತ್ತಾರೆ. ತುಳುನಾಡನ್ನು ಸಂಘ ಸರದಾರರು ಅದೆಷ್ಟು ಮತೋನ್ಮತ್ತ ಮಾಡಿದ್ದಾರೆಂದರೆ, ಯಕ್ಷಗಾನದಲ್ಲಿ ಧರ್ಮಾಂಧ ಡೈಲಾಗ್‌ಗಳು ನುಗ್ಗುತ್ತಿವೆ; ಭೂತಾರಾಧನೆ ಸಂದರ್ಭದಲ್ಲಿ ಉಗ್ರ ಹಿಂದುತ್ವದ ಪ್ರಸಾರ ಆಗುತ್ತಿದೆಯೆಂಬ ಆತಂಕದ ಮಾತಗಳೂ ಕೇಳಿಬರುತ್ತದೆ. ಇದೆಲ್ಲ ಉಳ್ಳಾಲದಂಥ ಕಡೆಯಲ್ಲಿ ’ನಿತ್ಯ ಕರ್ಮ’ದಂತಾಗಿದೆಯೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ವಲಸೆಗೆ ತುಳುವರು ಹೆಸರುವಾಸಿ. ಮುಂಬೈ ಮತ್ತು ದುಬೈ ಅವಿಭಜಿತ ದಕ್ಷಿಣ ಕನ್ನಡಿಗರ ಕರ್ಮಭೂಮಿ. ಆದರೆ 1990ರ ದಶಕದಲ್ಲಿ ವಲಸೆ ಕಮ್ಮಿಯಾಯಿತು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಅದೇ ಕಾಲಘಟ್ಟದಲ್ಲಿ ನಾಯಿ ಕೊಡೆಗಳಂತೆ ಶಿಕ್ಷಣೋದ್ಯಮ ’ಕಾರ್ಖಾನೆ’ಗಳು ಸ್ಥಾಪನೆಯಾದವು. ಹಣವಿಲ್ಲದವರಿಗೆ ಶಿಕ್ಷಣ ದೊರಕಲಿಲ್ಲ; ಶಿಕ್ಷಣ ಸಿಕ್ಕವರಿಗೆ ಉದ್ಯೋಗ ಪ್ರಾಪ್ತವಾಗಲಿಲ್ಲ. ಉದ್ಯೋಗ ಮತ್ತು ಶಿಕ್ಷಣವಿಲ್ಲದ ದೊಡ್ಡ ನಿರುದ್ಯೋಗಿ ಸಮೂಹ ಸೃಷ್ಟಿಯಾಯಿತು. ಹತಾಶೆಯಲ್ಲಿದ್ದ ಈ ಹೊಸ ತಲೆಮಾರನ್ನು ಸಂಘಪರಿವಾರದ ಮೇಲ್ಜಾತಿ ’ಶಕ್ತಿ’ಗಳು ಸೆಳೆದು ’ಧರ್ಮಯುದ್ಧ’ದ ಕಾಲಾಳುಗಳಾಗಿ ಮಾಡಿಕೊಂಡವು!

ಹೀಗಾಗಿ ತುಳುನಾಡಿನ ಆಧುನಿಕ ತಲೆಮಾರು ಅಧಃಪತನದ ಹಾದಿ ಹಿಡಿದಿದೆಯೆಂಬ ಆತಂಕದ ಅಭಿಪ್ರಾಯ ಮಂಗಳೂರಲ್ಲಿ ಸಾಮಾನ್ಯವಾಗಿದೆ. ಧರ್ಮೋನ್ಮಾದದ ಸರಣಿ ಘಟನೆಗಳಿಂದ ಮಂಗಳೂರಿನ ಆರ್ಥಿಕ ವಲಯ ಘಾಸಿಗೊಂಡಿದೆ. ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಮಂಗಳೂರು ಅಷ್ಟೇ ಅಲ್ಲ, ಕರಾವಳಿಯ ಬೇರೆ ಪಟ್ಟಣಗಳಿಗೂ ಹೊರಗಿನಿಂದ ಬರಲು ಬಂಡವಾಳಿಗರು, ಉದ್ಯಮಿಗಳು, ವರ್ತಕರು ಮತ್ತು ಗ್ರಾಹಕರು ಭಯಪಡುತ್ತಿದ್ದಾರೆ ಎನ್ನಲಾಗಿದೆ. ಮೊದಲೆಲ್ಲ ರಾತ್ರಿ 10-11 ಗಂಟೆವರೆಗೆ ಗಿಜಿಗುಡುತ್ತಿದ್ದ ಉಳ್ಳಾಲ ಪೇಟೆ ಈಗ ರಾತ್ರಿ ಎಂಟಾಗುತ್ತಲೆ ಸ್ತಬ್ಧವಾಗುತ್ತದೆ ಎನ್ನುತ್ತಾರೆ ಅಲ್ಲಿನ ಜನಸಾಮಾನ್ಯರು.

ತೋಟಗಾರಿಕೆ-ಮೀನುಗಾರಿಕೆ-ವ್ಯಾಪಾರ

ಉಳ್ಳಾಲ ಶೈಕ್ಷಣಿಕ ಹಬ್! ಇಲ್ಲಿ ಮಂಗಳೂರು ವಿಶ್ವವಿದ್ಯಾಲಯ, ನಾಲ್ಕು ಮೆಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ವಿವಿಧ ವೃತ್ತಿಪರ ಕೋರ್ಸುಗಳ ಕಾಲೇಜುಗಳಿವೆ. ಉಳ್ಳಾಲ ವ್ಯಾಪಾರ ಕೇಂದ್ರವೂ ಹೌದು. ಫಿಶ್ ಮಿಲ್, ಆಯಿಲ್ ಪ್ಲಾಂಟ್‌ನಂಥ ಸಾವಿರಾರು ಮಂದಿಗೆ ಅನ್ನ ಕೊಟ್ಟಿರುವ ಕೈಗಾರಿಕೆಗಳಿವೆ. ಮೀನು ಮತ್ತು ಮೀನಿನ ಗೊಬ್ಬರದ ಪ್ರಮುಖ ವ್ಯಾಪಾರ ವಲಯವಿದು; ಬೀಡಿ ಕಟ್ಟಿ ಜೀವಿಸುವ ಕುಟುಂಬಗಳೂ ಇಲ್ಲಿವೆ. ದೊಡ್ಡ ಸಂಖ್ಯೆಯಲ್ಲಿರುವ ಬ್ಯಾರಿ ಮುಸ್ಲಿಮರ ಮೂಲ ಕಸುಬೆ ವ್ಯಾಪಾರ. ಯುವಕರು ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಗಳಿಗೆ ಹೊಗುತ್ತಾರೆ. ಬ್ಯಾರಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಉಳ್ಳಾಲ ಪೇಟೆ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ವ್ಯಾಪಾರ ವಹಿವಾಟು ಜೀವನಾಧಾರವಾದರೆ, ಹಳ್ಳಿಗಳೆಡೆಯಲ್ಲಿ ಅಡಿಕೆ ತೋಟಗಾರಿಕೆ, ತೋಟದ ಕಾರ್ಮಿಕ ದುಡಿತ ಮತ್ತು ಕೂಲಿಯಿಂದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಉಳ್ಳಾಲ ತಾಲೂಕು ಅಥವಾ ಮಂಗಳೂರು ವಿಧಾನಸಭಾ ಕ್ಷೇತ್ರದ ಆರ್ಥಿಕತೆ ಮೀನುಗಾರಿಕೆ, ತೋಟಗಾರಿಕೆ ಮತ್ತು ವ್ಯಾಪಾರ ವಹಿವಾಟನ್ನು ಅವಲಂಬಿಸಿದೆ.

ಉಳ್ಳಾಲದ ಸೈಯದ್ ಮದನಿ ದರ್ಗಾ, ಅಜ್ಮೀರ್ ದರ್ಗಾದಷ್ಟೆ ಪ್ರಸಿದ್ಧ. ಹೀಗಾಗಿ ಉಳ್ಳಾಲ ದಕ್ಷಿಣ ಭಾರತದ ಅಜ್ಮೀರ್ ಎಂದು ಗುರುತಿಸಲ್ಪಡುತ್ತಿದೆ. ಈ ದರ್ಗಾಕ್ಕೆ ಎಲ್ಲ ಧರ್ಮದವರೂ ನಡೆದುಕೊಳುತ್ತಾರೆ. ಇಲ್ಲಾಗುವ ಉರೂಸ್‌ಗೆ ದೇಶವಿದೇಶದ ಜನರು, ಸೆಲಿಬ್ರಿಟಿಗಳು ಬರುತ್ತಾರೆ. ಹಲವು ಶೈಕ್ಷಣಿಕ ಮತ್ತು ಸೇವಾ ಸಂಸ್ಥೆಗಳು ದರ್ಗಾ ವತಿಯಿಂದ ನಡೆಯುತ್ತಿವೆ. ವಾರ್ಷಿಕ ಕೋಟ್ಯಾಂತರ ರೂ ಆದಾಯವಿರುವ ಉಳ್ಳಾಲ ದರ್ಗಾ ಸೌಹಾರ್ದತೆ-ಭಾವೈಕ್ಯತೆಯ ತಾಣ. ಉಳ್ಳಾಲದ ಸುತ್ತಲಿನಲ್ಲಿ ಸೋಮೇಶ್ವರ ಬೀಚ್, ಸೋಮೇಶ್ವರ ದೇವಸ್ಥಾನ, ರಾಣಿ ಅಬ್ಬಕ್ಕ ಕೋಟೆ, ರಾಣಿ ಅಬ್ಬಕ್ಕ ಜೈನ ಮಂದಿರ, ಸೇಂಟ್ ಸೆಬಾಸ್ಟಿಯನ್ ಚರ್ಚ್, ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್‌ಗಳಂತ ಜನಾಕರ್ಷಕ ಪ್ರವಾಸಿ ಪ್ರದೇಶಗಳಿವೆ.

ರಣ ಕಣಗಳ ಕತೆಗಳು!

ಬೀಡಿ ಕಾರ್ಮಿಕರು ಮತ್ತು ಕಾರ್ಖಾನೆ ಶ್ರಮಿಕರ ನೆಲೆಯಾದ ಉಳ್ಳಾಲದಲ್ಲಿ ಮೊದಲ ಚುನಾವಣೆಯ (1952) ಕಾಲದಲ್ಲಿಯೇ ಸಹಜವಾಗಿ ಕಮ್ಯುನಿಸ್ಟ್ ಸಿದ್ಧಾಂತ ಹಬ್ಬಿತ್ತು. ಕಾಮ್ರೇಡ್ ಬಿ.ವಿ.ಕಕ್ಕಿಲಾಯರಂಥ ಶ್ರಮ ಸಂಸ್ಕೃತಿಯವರ ಮುಂದಾಳಿನ ಕರ್ಮಭೂಮಿ ಇದಾಗಿತ್ತು. 1952ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್.ಸಿ.ಪೈಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಸಿಪಿಐನ ಶಾಂತಾರಾಮ್ ಪೈ ಎದುರಾಳಿಯಾಗಿದ್ದರು. ಆರಂಭದಲ್ಲಿ ಮಂಗಳೂರು-2 ವಿಧಾನಸಭಾ ಕ್ಷೇತ್ರವೆಂದು ಗುರುತಿಸಲ್ಪಡುತ್ತಿದ್ದ ಉಳ್ಳಾಲದಲ್ಲಿ 1957ರಲ್ಲಿ ಕಾಂಗ್ರೆಸ್ ಪಕ್ಷದ ಕಾಶ್ಮೀರಿ ಪಂಡಿತ ವಂಶದ ಗಜಾನನ ಪಂಡಿತ್ ಸಿಪಿಐನ ಬಿ.ವಿ.ಕಕ್ಕಿಲಾಯರ ಎದುರು ಗೆದ್ದಿದ್ದರು. 1962ರ ಅಖಾಡದಲ್ಲಿ ಸಿಪಿಐನ ಕೃಷ್ಣ ಶೆಟ್ಟಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಕನ್ನಡ ಕವಿ-ಹಾಡುಗಾರ ಬಿ.ಎಂ.ಇದಿನಬ್ಬರನ್ನು ಸೋಲಿಸಿದರು. ಅದೆ ಕೃಷ್ಣ ಶೆಟ್ಟಿಯವರನ್ನು 1967ರಲ್ಲಿ ಕಾಂಗ್ರೆಸ್‌ನ ಇದಿನಬ್ಬ ಮಣಿಸಿ ಶಾಸನಸಭೆಗೆ ಹೋದರು. ಕಾಂಗ್ರೆಸ್ ವಿಭಜನೆಯಾದಾಗ ಇದಿನಬ್ಬ ಸಂಸ್ಥಾ ಕಾಂಗ್ರೆಸ್ ಬದಿಯಲ್ಲಿ ಉಳಿದರು.

ಬಿ.ವಿ.ಕಕ್ಕಿಲಾಯ

ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ಉತ್ಸಾಹಿ ತರುಣ ಯು.ಟಿ.ಫರೀದ್ (ಈಗಿನ ಶಾಸಕ ಯು.ಟಿ.ಖಾದರ್ ತಂದೆ) 1972ರ ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲಿ ದೇವರಾಜು ಅರಸರ ಕಣ್ಣಿಗೆ ಬಿದ್ದರು. ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಫರೀದ್ ಮಾಜಿ ಶಾಸಕ ಸಿಪಿಎಂನ ಎ.ಕೃಷ್ಣ ಶೆಟ್ಟಿಯನ್ನು 15,665 ಮತಗಳ ಅಂತರದಿಂದ ಪರಾಭವಗೊಳಿಸಿ ಶಾಸಕರಾದರು. 1978ರ ಚುನಾವಣೆ ಸಂದರ್ಭದಲ್ಲಿ ಮಂಗಳೂರು-2 ಕ್ಷೇತ್ರದ ವ್ಯಾಪ್ತಿ ಬದಲಾಗಿ ಹೆಸರು ’ಉಳ್ಳಾಲ’ ಎಂದಾಯಿತು. 1978ರಲ್ಲಿ ಶಾಸಕ ಫರೀದ್ ಎರಡನೆ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 30,174 ಮತ ಪಡೆದು ಗೆದ್ದರು. ಎದುರಾಳಿ ಸಿಪಿಎಂನ ರಾಮಚಂದ್ರ ರಾವ್‌ಗೆ 12,445 ಮತ ಬಂದಿತ್ತು.

1980ರ ದಶಕದಲ್ಲಿ ಇಂದಿರಾ ಮತ್ತು ಅರಸು ನಡುವೆ ಭಿನ್ನಾಭಿಪ್ರಾಯ ಬಂದಾಗ ಫರೀದ್ ಅರಸು ಬೆನ್ನಿಗೆ ನಿಂತಿದ್ದರು. ಹೀಗಾಗಿ 1983ರ ಚುನಾವಣೆಯಲ್ಲಿ ಅಂದು ಎಂಪಿಯಾಗಿದ್ದ ಜನಾರ್ದನ ಪೂಜಾರಿ ಶಿಷ್ಯ ಮಹಮ್ಮದ್ ಮಸೂದರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿತು. ಮಹಮ್ಮದ್ ಮಸೂದ್‌ರಿಗೆ ಅವಕಾಶ ಕೊಟ್ಟಿದ್ದು ಕಾಂಗ್ರೆಸ್‌ನಲ್ಲಿ ಭಿನ್ನಮತಕ್ಕೆ ಕಾರಣವಾಯಿತು. ಬಂಡಾಯ ಅಭ್ಯರ್ಥಿಯಾಗಿದ್ದ ಮಹಮ್ಮದ್ ಆಲಿ 10,381 ಮತಗಳನ್ನು ಕಾಂಗ್ರೆಸ್ ಬುಟ್ಟಿಯಿಂದ ತೆಗೆದರು. ಸಿಪಿಎಂನ ರಾಮಚಂದ್ರ ರಾವ್ 16,423 ಮತ ಪಡೆದು ಶಾಸಕರಾದರು.

1985ರ ನಡುಗಾಲ ಚುನಾವಣೆ ವೇಳೆ ಇಂದಿರಾ ಕಾಂಗ್ರೆಸ್‌ನಲ್ಲಿದ್ದ ಫರೀದ್ ಮತ್ತು ಮಸೂದ್ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್‍ಪಟಿತು. 1967ರಲ್ಲಿ ಶಾಸಕರಾಗಿದ್ದ ಇದಿನಬ್ಬರನ್ನು ಕಾಂಗ್ರೆಸ್ ರಾಜಿ ಅಭ್ಯರ್ಥಿಯಾಗಿ ಕಣಕ್ಕೆ
ಇಳಿಸಿತು. ಶಾಸಕ-ಸಿಪಿಎಂನ ರಾಮಚಂದ್ರ ರಾವ್‌ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಶಾಸನಸಭೆಯಲ್ಲಿ ಮಾತಾಡುವಾಗೆಲ್ಲ ಕವನ ಕಟ್ಟಿ ಹಾಡುತ್ತಿದ್ದ ಕವಿ ಇದಿನಬ್ಬ 1989ರಲ್ಲಿ ಮೂರನೆ ಬಾರಿ ಶಾಸಕರಾದರು. ಆ ಕದನದಲ್ಲಿ ಕಾಂಗ್ರೆಸ್‌ನ ಇದಿನಬ್ಬ 25,785 ಮತ ಪಡೆದಿದ್ದರೆ, ಸಿಪಿಎಂನ ಕೆ.ಆರ್.ಶ್ರೀಯಾನ್‌ರಿಗೆ 20,371 ಮತ ದೊರೆತಿತ್ತು.

1994ರ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿ ದಕ್ಷಿಣ ಕನ್ನಡ ಕಾಂಗ್ರೆಸ್‌ನ ಹೈಕಮಾಂಡ್ ಆಗಿ ರೂಪುಗೊಂಡಿದ್ದರು. ಇದಿನಬ್ಬರಿಗೆ ವಯಸ್ಸಾಯಿತೆಂಬ ನೆಪದಿಂದ ಟಿಕೆಟ್  ನಿರಾಕರಿಸಲಾಯಿತು. ಜನಾರ್ದನ ಪೂಜಾರಿ ತಮ್ಮ ಪರಮಾಪ್ತ ಕೆ.ಎಸ್.ಮಹಮ್ಮದ್ ಮಸೂದ್ ಕಾಂಗ್ರೆಸ್ ಕ್ಯಾಂಡಿಡೇಟಾಗುವಂತೆ ನೋಡಿಕೊಂಡರು ಎನ್ನಲಾಗುತ್ತಿದೆ. ಬಾಬರಿ ಮಸೀದಿ ಪತನದ ಸಂಘರ್ಷ, ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಹೋದದ್ದು ಮತ್ತು ಮಸೂದ್ ಬ್ಯಾರಿ ಮುಸ್ಲಿಮರ ಒಂದು ವರ್ಗವನ್ನು ಎದುರುಹಾಕಿಕೊಂಡದ್ದರಿಂದ ಕಾಂಗ್ರೆಸ್ ಗೆಲ್ಲಲಾಗಲಿಲ್ಲ ಎಂಬ ತರ್ಕಗಳಿವೆ.

1994ರ ತನಕ ಉಳ್ಳಾಲದಲ್ಲಾದ ಒಂಭತ್ತು ಚುನಾವಣೆಯಲ್ಲಿ ರನ್ನರ್‌ಅಪ್ ಕೂಡ ಆಗದ ಬಿಜೆಪಿ ಆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೆಲುವು ಕಂಡಿತ್ತು. ಬಿಜೆಪಿ ಸಾಂಕೇತಿಕವಾಗಿ ಸ್ಫರ್ಧೆಗಿಳಿಸಿದ್ದ ಸಿಪಿಸಿ ಬಸ್ ಕಂಪನಿಯ ನೌಕರನಾಗಿದ್ದ ಕೆ.ಜಯರಾಮ್ ಶೆಟ್ಟಿ ಶಾಸಕನಾಗಿದ್ದು ಆಕಸ್ಮಿಕವೆಂಬ ಅಭಿಪ್ರಾಯ ಈಗಲೂ ರಾಜಕೀಯ ವಲಯದಲ್ಲಿದೆ. ಆ ನಂತರ ಒಮ್ಮೆಯೂ ಗೆಲ್ಲದ ಬಿಜೆಪಿ ಕಾಂಗ್ರೆಸ್‌ಗೆ ನಿಕಟ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಮುಸ್ಲಿಮ್ ಬಾಹುಳ್ಯದ ಉಳ್ಳಾಲದಲ್ಲಿ ಬಿಜೆಪಿ ಪ್ರಯೋಗಿಸುತ್ತಿರುವ ಧರ್ಮಕಾರಣ ತಂತ್ರಗಾರಿಕೆಯೆ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಜನಾರ್ದನ ಪೂಜಾರಿ

1999ರ ಚುನಾವಣೆಯಲ್ಲಿ ಜನಾರ್ಧನ ಪೂಜಾರಿಗೆ ನಿಷ್ಠರಾಗಿದ್ದ ಮಾಜಿ ಶಾಸಕ ಯು.ಟಿ.ಫರೀದ್‌ರಿಗೆ ಒಂದೂವರೆ ದಶಕದ ಬಳಿಕ ಮತ್ತೆ ಕಾಂಗ್ರೆಸ್ ಹುರಿಯಾಳಾಗುವ ಅವಕಾಶ ಒದಗಿಬಂತು. ಬ್ಯಾರಿಗಳ ಪ್ರಬಲ ನಾಯಕರಾಗಿದ್ದ ಫರೀದ್ ಹಿಂದುಗಳ ವಿಶ್ವಾಸವನ್ನೂ ಗಳಿಸಿದ್ದರು. ಹೀಗಾಗಿ ಫರೀದ್ ಬಿಜೆಪಿಯ ಅಭ್ಯರ್ಥಿ-ಶಾಸಕ ಜಯರಾಮ ಶೆಟ್ಟರನ್ನು 15,243 ಓಟುಗಳ ದೊಡ್ಡ ಅಂತರದಿಂದ ಸೋಲಿಸಿ ಮೂರನೆ ಬಾರಿ ಶಾಸಕರಾದರು. ಬಂಟ ಸಮುದಾಯದ ಜಯರಾಮ ಶೆಟ್ಟರ ಬದಲಿಗೆ ಬಿಲ್ಲವ ಜಾತಿಯ ಚಂದ್ರಶೇಖರ್ ಉಚ್ಚಿಲರನ್ನು 2004ರಲ್ಲಿ ಬಿಜೆಪಿ ಅಖಾಡಕ್ಕೆ ಇಳಿಸಿತು. ಕೆರಳಿದ ಜಯರಾಮ ಶೆಟ್ಟಿ ಜೆಡಿಎಸ್‌ನಿಂದ ಸ್ಪರ್ಥಿಸಿದರು. 47,839 ಮತ ಗಳಿಸಿದ ಕಾಂಗ್ರೆಸ್‌ನ ಫರೀದ್ ಬಿಜೆಪಿಯ ಚಂದ್ರಶೇಖರ ಉಚ್ಚಿಲರನ್ನು (40,491) ಮಣಿಸಿ ಆಯ್ಕೆಯಾದರು.

ಸೌಹಾರ್ದ ತುಡಿತದ ಖಾದರ್ ಪ್ರವೇಶ

ಒಂದು ಕಡೆ ಅರಬ್ಬೀ ಸಮುದ್ರ, ಇನ್ನೊಂದು ಬದಿಯಲ್ಲಿ ನೇತ್ರಾವತಿ ನದಿ, ಮಗದೊಂದೆಡೆ ಕೇರಳದ ಗಡಿಯಿಂದ ಸುತ್ತುವರಿದಿರುವ ಉಳ್ಳಾಲ ಕ್ಷೇತ್ರದಲ್ಲಿ 2,12,782 ಮತದಾರರಿದ್ದಾರೆ. ಇದರಲ್ಲಿ ಬ್ಯಾರಿ ಮತ್ತಿತರ ಮುಸ್ಲಿಮ್ ಪಂಗಡಗಳ ಮತ ಶೇ.47, ಕ್ರೈಸ್ತರು ಶೇ.5, ತುಳು ಬಿಲ್ಲವ ಮತ್ತು ಮಲೆಯಾಳಿ ಬಿಲ್ಲವ (ತಿಯಾಸ್) ಶೇ.16, ಬಂಟರು ಶೇ.12, ಎಸ್‌ಸಿ ಮತ್ತು ಎಸ್‌ಟಿ ಶೇ.2, ಒಬಿಸಿಗಳು ಶೇ.18 ಇರಬಹುದೆಂದು ಅಂದಾಜಿಸಲಾಗಿದೆ. 2004ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಫರೀದ್ 2006ರಲ್ಲಿ ನಿಧನರಾದ್ದರಿಂದ 2007ರಲ್ಲಿ ಉಪ ಚುನಾವಣೆ ಎದುರಾಯಿತು. ಫರೀದ್‌ರ ಮಗ ಯು.ಟಿ.ಖಾದರ್‌ಗೆ ಕಾಂಗ್ರೆಸ್ ಟಿಕೆಟ್ ಒಲಿದಿತ್ತು.

ತಂದೆಯ ಅನಾರೋಗ್ಯದ ಹೊತ್ತಲ್ಲಿ ಕ್ಷೇತ್ರದ ಉಸ್ತವಾರಿ ನೋಡಿಕೊಳ್ಳುತ್ತಿದ್ದ, ಯುವ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿದ್ದ ಖಾದರ್ ಬೇರುಮಟ್ಟದ ಜನಸಂಪರ್ಕ ಸಾಧಿಸಿದ್ದರು. ಧರ್ಮ ರಾಜಕಾರಣದ ಸೋಂಕಿಲ್ಲದೆ ಎಲ್ಲರೊಂದಿಗೆ ಸರಳವಾಗಿ ಬರೆಯುವ ಖಾದರ್ ಉಪಚುನಾವಣೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಚಂದ್ರಶೇಖರ ಉಚ್ಚಿಲರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. 2008 ಚುನಾವಣೆಗೆ ಮೊದಲು ನಡೆದ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಉಳ್ಳಾಲದ ಪರಿಧಿ ಬದಲಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ಎಂದು ನಾಮಕರಣಗೊಂಡಿತು.

2008ರಲ್ಲಿ ಶಾಸಕ ಖಾದರ್‌ರನ್ನು ಕಾಂಗ್ರೆಸ್ ಚುನಾವಣೆಗೆ ನಿಲ್ಲಿಸಿತ್ತು. ವಿಟ್ಲ ಕ್ಷೇತ್ರದಲ್ಲೊಮ್ಮೆ ’ಅಚಾನಕ್’ ಶಾಸಕರಾಗಿದ್ದ ಪದ್ಮನಾಭ ಕೊಟ್ಟಾರಿ ಬಿಜೆಪಿ ಹುರಿಯಾಳಾಗಿದ್ದರು. ವಿಟ್ಲದ ಕೆಲವು ಭಾಗ ಹೊಸ ಮಂಗಳೂರು ಕ್ಷೇತ್ರಕ್ಕೆ ಸೇರಿರುವುದರಿಂದ ಮತ್ತು ಕಲ್ಲಡ್ಕ ಭಟ್ಟರ ನಿಷ್ಠಾವಂತ ಅನುಯಾಯಿ ಪದ್ಮನಾಭ ಕೊಟ್ಟಾರಿ ಗ್ರಾಪಂ, ತಾಪಂ, ಜಿಪಂ ಮತ್ತು ವಿಧಾನಸಭೆಗೆ ಸ್ಪರ್ಧಿಸಿದಾಗೆಲ್ಲ ಗೆದ್ದಿರುವ ದಾಖಲೆಯವರಾದ್ದರಿಂದ ಗೆಲ್ಲುತ್ತಾರೆಂಬ ಎಣಿಕೆ ಸಂಘ ಪರಿವಾರದ್ದಾಗಿತ್ತು ಎನ್ನಲಾಗಿದೆ. ಕೇಸರಿ ಕುಲ ಶತಾಯಗತಾಯ ಸೆಣಸಾಡಿತ್ತು ಎಂದು ಆ ಹಣಾಹಣಿ ಕಂಡವರು ಹೇಳುತ್ತಾರೆ. ಖಾದರ್ ಲೀಡ್ ಒಂಚೂರು ಕಮ್ಮಿಯಾಯಿತೆ ವಿನಃ ಅವರನ್ನು ಸೋಲಿಸಲಾಗಲಿಲ್ಲ.

2013ರಲ್ಲಿ ಬಿಜೆಪಿ ತಂತ್ರ ಬದಲಿಸಿತು. ಹಿಂದುಗಳಲ್ಲಿ ಬಹುಸಂಖ್ಯಾತರಾದ ಬಿಲ್ಲವ ಜಾತಿಯ ಚಂದ್ರಹಾಸ ಉಳ್ಳಾಲರನ್ನು ಸ್ಪರ್ಧೆಗಿಳಿಸಿತು. ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಗುಣಧರ್ಮದ ಖಾದರ್ ಕ್ಷೇತ್ರದಲ್ಲಿ ಜನಾನುರಾಗಿ ಆಗಿದ್ದರು. ಕ್ಷೇತ್ರದ ಅಭಿವೃದ್ಧಿಯ ಜತೆ ನೊಂದವರಿಗೆ ಸ್ಪಂದಿಸುತ್ತಿದ್ದರಿಂದ ಖಾದರ್‌ರಿಗೆ 2013ರಲ್ಲಿ ಗೆಲುವು ಸುಲಭವಾಯಿತೆಂದು ಜನರು ಹೇಳುತ್ತಾರೆ. ಆ ಜಿದ್ದಾಜಿದ್ದಿಯಲ್ಲಿ ಖಾದರ್ 29,111 ಮತಗಳ ಅಂತರದಿಂದ ಚುನಾಯಿತರಾದರು. ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಮತ್ತು ಆಹಾರ ಇಲಾಖೆಯ ಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದಾರೆಂಬ ಹೆಗ್ಗಳಿಕೆಯ ಖಾದರ್ ಹೆಚ್ಚು ಅನುದಾನ ತಂದು ಸ್ವಕ್ಷೇತ್ರದ ಅಭಿವೃದ್ಧಿಗೂ ಪ್ರಯತ್ನಿಸಿದ್ದರಿಂದ ಎಂಟಿ ಇನ್‌ಕಂಬೆನ್ಸ್ ಸಮಸ್ಯೆ ಸುತ್ತಿಕೊಳ್ಳಲಿಲ್ಲವೆಂಬ ಅಭಿಪ್ರಾಯವಿದೆ.

ಇದಿನಬ್ಬ

ಹೀಗಾಗಿ 2018ರಲ್ಲಿ ಕರಾವಳಿಯಲ್ಲಿ ಬೀಸಿದ ಹಿಂದುತ್ವದ ಪ್ರಚಂಡ ಮಾರುತಕ್ಕೆ ಸಿಲುಕದೆ 19,739 ಮತಗಳ ಅಂತರದಿಂದ ನಾಲ್ಕನೇ ಸಲ ಶಾಸಕನಾಗಿ ಆಯ್ಕೆಯಾದರೆಂದು ಎಲ್ಲ ಪಕ್ಷದವರೂ ಹೇಳುತ್ತಾರೆ. ಪ್ರಬಲವಾಗಿ ಮತ ಧ್ರುವೀಕರಣವಾದ 2018ರ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡದ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಾನ ಉಳಿಸಿಕೊಂಡಿದ್ದು ಮಂಗಳೂರಲ್ಲಿ ಮಾತ್ರ. ಕಾಂಗ್ರೆಸ್ ಘಟಾನುಘಟಿಗಳೆಲ್ಲ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿದರೆ, ಖಾದರ್ ಗಣನೀಯ ಅಂತರದಿಂದ ಜಯಶಾಲಿಯಾಗಿ ಜೆಡಿಎಸ್
-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯೂ ಆದರು.

ಕ್ಷೇತ್ರದ ಪ್ರಗತಿಯ ಗತಿ

ಯು.ಟಿ.ಖಾದರ್ ದಕ್ಷಿಣ ಕನ್ನಡದ ಏಕೈಕ ಧರ್ಮಾತೀತ ಮತ್ತು ಜನಪರ ಕೆಲಸಗಾರ ಶಾಸಕನೆಂಬ ಅಭಿಪ್ರಾಯ ಎಲ್ಲೆಡೆಯಿದೆ. ಸಾಮಾನ್ಯ ಬಜೆಟ್ ಕೆಲಸಗಳೊಂದಿಗೆ ಕ್ಷೇತ್ರಕ್ಕೆ ಅವಶ್ಯವಿರುವ ದೂರದೃಷ್ಟಿಯ ಯೋಜನೆ ತಂದಿದ್ದಾರೆಂದು ಕೂಡ ಜನರು ಹೇಳುತ್ತಾರೆ. ಹರೇಕಳದಲ್ಲಿ ಅಡ್ಯಾರನ್ನು ಸಂಪರ್ಕಿಸುವ ಸೇತುವೆ ಮತ್ತು ಉಳ್ಳಾಲ ತಾಲೂಕಿಗೆ ಶಾಶ್ವತವಾಗಿ ಕುಡಿಯುವ ನೀರೊದಗಿಸುವ ಡ್ಯಾಮ್ ಕಾಮಗಾರಿ ಕೊನೆ ಹಂತದಲ್ಲಿದೆ; ಈ ಬ್ರಿಡ್ಜ್‌ನಿಂದ ಕೇರಳ ಗಡಿವರೆಗಿನ ಹಳ್ಳಿಗಳ ಜನರಿಗೆ ಸುಲಭವಾಗಿ, ಬೇಗನೆ ಮಂಗಳೂರು ತಲುಪಲು ಅನುಕೂಲವಾಗಲಿದ್ದು, ಬಹಳ ದಿನದ ಬೇಡಿಕೆಯೊಂದು ಈಡೇರಿದಂತಾಗಿದೆಯೆಂಬ ಮಾತು ಕೇಳಿಬರುತ್ತಿದೆ. ಕ್ಷೇತ್ರದ ಬೇಕುಬೇಡಗಳ ನೀಲನಕ್ಷೆ ತಯಾರಿಸಿಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಿರುವ ಖಾದರ್ ಹಿಂದೊಂದು ಗುತ್ತಿಗೆದಾರ ಲಾಬಿಯಿದೆ ಎಂಬ ಆಕ್ಷೇಪವಿದೆ.

ಹೋರಾಟ-ಪ್ರತಿಭಟನೆಗೆ ಅವಕಾಶ ಆಗದಂತೆ ಉಳ್ಳಾಲ ತಾಲೂಕು ರಚನೆ ಮಾಡಿರುವುದು ಖಾದರ್‌ರ ದೊಡ್ಡ ಸಾಧನೆಯೆನ್ನಲಾಗುತ್ತಿದೆ. ಜನರಿಗಾಗುತ್ತಿರುವ ಅನಾನುಕೂಲ ಕಂಡು ಖಾದರ್ ತಾವೇ ತಾಲೂಕು ರಚನೆ ಪ್ರಯತ್ನ ಮಾಡಿ ಯಶಸ್ವಿಯಾದರೆಂದು ಕ್ಷೇತ್ರದಲ್ಲಿ ಮೆಚ್ಚಿಕೆಯಿದೆ. ಉಳ್ಳಾಲವನ್ನು ಕಾಡುತ್ತಿದ್ದ ಒಳಚರಂಡಿ ಸಮಸ್ಯೆ ಪರಿಹಾರ ಹಂತದಲ್ಲಿದೆ. ಉಳ್ಳಾಲದ ದೊಡ್ಡ ಸಮಸ್ಯೆಯೆಂದರೆ ಸಮುದ್ರ ಕೊರೆತ! 1990ರ ಉತ್ತರಾರ್ಧದಲ್ಲಿ ಹೆಚ್ಚಾದ ಸಮುದ್ರ ಕೊರೆತ ಪ್ರತಿ ವರ್ಷ ಹಲವು ಮನೆಗಳನ್ನು ಕಬಳಿಸುತ್ತಿದೆ. ತಡೆಗೋಡೆ ಕಾಮಗಾರಿಗೆ ಕೋಟ್ಯಾಂತರ ರೂಪಾಯಿ ವ್ಯಯಿಸಲಾಗುತ್ತದೆಯೇ ಹೊರತು ಶಾಶ್ವತ ಪರಿಹಾರ ಆಗುತ್ತಿಲ್ಲ ಎಂದು ಸಮುದ್ರ ತೀರದ ಬಡ ಮಂದಿ ಆತಂಕದಿಂದ ಹೇಳುತ್ತಾರೆ. ಬೇರುಬಿಟ್ಟಿರುವ ಮರಳು ಮಾಫಿಯಾದ ಲೂಟಿ-ಉಪಟಳದ ಬಗ್ಗೆಯೂ ಕ್ಷೇತ್ರದಲ್ಲಿ ಬೇಸರವಿದೆ.

ಹಳ್ಳಿಗಳಲ್ಲೂ ರಸ್ತೆ, ಸೇತುವೆ, ಶಾಲೆ-ಹೈಸ್ಕೂಲ್, ಪ್ರಾಥಮಿಕ ಆರೋಗ್ಯ ಕೇಂದ್ರದಂಥ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಯತ್ನಗಳಾಗಿವೆ; ಗಡಿಯಲ್ಲಿರುವ ತಲಪಾಡಿ ತನಕ ಆಗಿರು ಟೋಲ್ ಫ್ರೀ ಡಬ್ಬಲ್ ರೋಡ್‌ನಿಂದ ತಾಲೂಕಿಗೆ ಅನುಕೂಲವಾಗಿರುವ ಮಾತುಗಳು ಕೇಳಿಬರುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಶಾಸಕ ಖಾದರ್, ಉಳ್ಳಾಲ ತಾಲೂಕಲ್ಲಿ ಅನೈತಿಕ ಪೊಲೀಸ್ ಮತ್ತು ಕೌ ಬಾಯ್‌ಗಳ ಹಾವಳಿ ಹೆಚ್ಚಾಗದಂತೆ ನಿಗಾ ವಹಿಸಿರುವುದರೊಂದಿಗೆ ಸಕಲ ಜಾತಿ-ಧರ್ಮದ ಮಂದಿ ಸೌಹಾರ್ದವಾಗಿ ಬದುಕಲು ಅವಕಾಶವಾಗುವ ವಾತಾವರಣ ನಿರ್ಮಾಣಕ್ಕಾಗಿ
ಬದ್ಧತೆ-ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಅಕ್ಕಪಕ್ಕದ ತಾಲೂಕುಗಳಿಗೆ ಹೋಲಿಸಿದರೆ ಉಳ್ಳಾಲದಲ್ಲಿ ಹಿಂದುತ್ವ ಹಾವಳಿ ಕಡಿಮೆ ಎನ್ನಲಾಗುತ್ತಿದೆ. “ಖಾದರ್ ಕಳ್ಳನಲ್ಲ, ಸೋಗಲಾಡಿಯಲ್ಲ; ಅವನಿಗೆ ಎಲ್ಲ ಧರ್ಮದವರೂ ಒಂದೆ. ತನ್ನ ಬ್ಯಾರಿಗಳನ್ನು ಅವನೆಂದೂ ಹೆಗಲ ಮೇಲೆ ಹೊತ್ತು ಮೆರೆಸಿದ್ದಿಲ್ಲ; ಕ್ಷೇತ್ರದ ಅಭಿವೃದ್ಧಿ ಹಾಗು ಜನರ ನೆಮ್ಮದಿಯ ಕಾಳಜಿ-ಬದ್ಧತೆ ಅವನಲ್ಲಿದೆ” ಎಂದು 77 ವರ್ಷದ ಹಿರಿಯ ಈಶ್ವರ ಉಳ್ಳಾಲ್ ’ಪತ್ರಿಕೆ’ ಜತೆ ಮಾತನಾಡುತ್ತ ತಿಳಿಸಿದರು.

ಬಿಜೆಪಿ ಟಿಕೆಟ್ ಯಾರಿಗೆ?

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಂಘ ಪರಿವಾರ ಅಥವಾ ಪಿಎಫ್‌ಐ ಪರಿವಾರ ಹುಟ್ಟುಹಾಕುವ ಮತೀಯ ಮಸಲತ್ತುಗಳಿಗೆ ಧೈರ್ಯವಾಗಿ ಶಾಸಕ ಯು.ಟಿ.ಖಾದರ್ ಸೆಕ್ಯುಲರ್ ಪ್ರತಿಕ್ರಿಯೆ ನೀಡುತ್ತಾರೆ; ಸಂಘ ಶ್ರೇಷ್ಠ ಕಲ್ಲಡ್ಕ ಭಟ್ಟ ಅಥವಾ ಬಿಜೆಪಿ ನಾಯಕರ ಪ್ರಚೋದನಾತ್ಮಕ ಮಾತುಗಾರಿಕೆ, ಪಿಎಫ್‌ಐ-ಎಸ್‌ಡಿಪಿಐ ಚಿತಾವಣೆ ಹುನ್ನಾರ, ಕೌಬ್ರಿಗೇಡ್-ಅನೈತಿಕ ಪೊಲೀಸ್ ಪಡೆ ಹಿಂಸೋನ್ಮಾದ ಮತ್ತು ಬಿಜೆಪಿ ಅಧಿಕಾರಸ್ಥರ ಅವ್ಯವಹಾರ ನಡೆದಾಗೆಲ್ಲ ಶಾಸಕ ಖಾದರ್ ತಕ್ಷಣ ನ್ಯಾಯ-ನೈತಿಕತೆ-ಮಾನವೀಯತೆಯ ಎಚ್ಚರ ಮೂಡಿಸಲು ಪ್ರಯತ್ನಿಸುತ್ತಾರೆಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ.

ಹೀಗಾಗಿ ಸಂಘ ಸೂತ್ರಧಾರರ ಕೆಂಗಣ್ಣಿಗೆ ತುತ್ತಾಗಿರುವ ಖಾದರ್‌ರನ್ನು 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಸೋಲಿಸಲೆಬೇಕೆಂಬ ಹಠದ ಕಾರ್ಯಾಚರಣೆ ಶುರುವಾಗಿದೆ ಎನ್ನಲಾಗುತ್ತಿದೆ. ಕರಾವಳಿ ಆರ್‌ಎಸ್‌ಎಸ್ ದಿಗ್ಗಜ ಕಲ್ಲಡ್ಕ ಭಟ್ಟರಿಂದ ಹಿಡಿದು ಸಂಸದ ನಳಿನ್‌ಕುಮಾರ್ ಕಟೀಲ್, ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತನಕದ ಸಂಘ ಹಾಗು ಬಿಜೆಪಿ ಅತಿರಥ ಮಹಾರಥರೆಲ್ಲ ಮಂಗಳೂರು ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿ ಖಾದರ್‌ರನ್ನು ಸಿಲುಕಿಸಲು ಚಕ್ರವ್ಯೂಹ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ; ಇನ್ನೊಂದೆಡೆಯಿಂದ ಎಸ್‌ಡಿಪಿಐ ಸುತ್ತುವರಿಯುತ್ತಿದೆ.

ಕ್ಷೇತ್ರದಾದ್ಯಂತ ಆಳವಾಗಿ ಬೇರುಬಿಟ್ಟಿರುವ ಖಾದರ್‌ರನ್ನು ಎದುರಿಸುವ ಸಮರ್ಥನ ಹುಡುಕಾಟದಲ್ಲಿರುವ ಸಂಘ ಸರದಾರರಿಗೆ ಜಾತಿ ಲೆಕ್ಕಾಚಾರ ತಲೆನೋವಾಗಿದೆ. ಗಟ್ಟಿ ಸಮುದಾಯದ ಮಹಿಳೆಯೊಬ್ಬರು “ಪಕ್ಷ ನಿಷ್ಠೆಯಿಂದ ತುಂಬ ವರ್ಷದಿಂದ ಕೆಲಸ ಮಾಡುತಿದ್ದೇನೆ; ಈ ಬಾರಿ ನನಗೆ ಟಿಕೆಟ್ ಕೊಡಿ, ದೊಡ್ಡ ಜಾತಿಯವರೆಂದು ಬಿಲ್ಲವ, ಬಂಟರಿಗೆ ಅವಕಾಶ ಕೊಟ್ಟರೂ ಪ್ರಯೋಜನ ಆಗಿಲ್ಲ” ಎಂದು ಹೇಳುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಕಳೆದ ಚುನಾವಣೆಯಲ್ಲಿ ಸೋತ ಸಂತೋಷ್‌ಕುಮಾರ್ ರೈ ಬೋಳಿಯಾರು ಮತ್ತೊಂದು ಅವಕಾಶ ಕೇಳುತ್ತಿದ್ದರೆ, ಬಿಲ್ಲವರು ನಾವು ಹಿಂದುತ್ವದ ಸಭೆ-ಸಮಾವೇಶ ಮತ್ತು ಪೋಸ್ಟರ್ ಅಂಟಿಸಲಿಕ್ಕೆ ಮಾತ್ರ ಸೀಮಿತವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡದ ೭ ಸಾಮಾನ್ಯ ಕ್ಷೇತ್ರದಲ್ಲಿ ಪ್ರಬಲ ಬಂಟ ಸಮುದಾಯಕ್ಕೆ ನಾಲ್ಕು ಕಡೆ ಅವಕಾಶ ಕೊಟ್ಟಿತ್ತು. ಬಹುಸಂಖ್ಯಾತ ಹಿಂದುಳಿದ ವರ್ಗದ ಬಿಲ್ಲವರಿಗೆ ಮೂಡಬಿದಿರೆಯಲ್ಲಿ ಮಾತ್ರ ಟಿಕೆಟ್ ಕೊಡಲಾಗಿತ್ತು.
ಜತೆಗೆ ಎಂಪಿಯೂ ಬಂಟ ಜಾತಿಯವರು. ಈ ಅಂಕಿ-ಸಂಖ್ಯೆ ಬಿಲ್ಲವರು ಬಿಜೆಪಿ ಪರಿವಾರದ ನಾಯಕಾಗ್ರೇಸರ ಮುಂದಿಟ್ಟು ಮಂಗಳೂರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆಂಬ ಮಾತು ಕೇಳಿಬರುತ್ತದೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಮಲೆಯಾಳಿ ಬಿಲ್ಲವರು (ತಿಯಾಸ್) ಈ ಸಲ ಟಿಕೆಟ್ ಬೇಕೇಬೇಕೆಂದು ಸಂಘ ಮುಖಂಡರನ್ನು ಆಗ್ರಹಿಸುತ್ತಿದ್ದಾರಂತೆ. ಈ ನಡುವೆ ೨೦೧೮ರಲ್ಲಿ ಉಳ್ಳಾಲ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದ ಭಜರಂಗ ದಳ-ಹಿಂಜಾವೆಯ ’ಹೆಸರಾಂತ’ ನೇತಾರ ಶರಣ್ ಪಂಪ್‌ವೆಲ್ ತಾನೇ ಬಿಜೆಪಿ ಕ್ಯಾಂಡಿಡೇಟ್ ಎಂಬಂತೆ ಬಿಂಬಿಸಿಕೊಳ್ಳತ್ತಿದ್ದಾರೆಂಬ ಭಾವನೆ ಕ್ಷೇತ್ರದಲ್ಲಿದೆ.

ಕರಾವಳಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ’ಕಲ್ಲಡ್ಕ ಹೈಕಮಾಂಡ್’ಗೆ ದಕ್ಷಿಣ ಕನ್ನಡದ ಸಂಘ ಪರಿವಾರಕ್ಕೆ ದೊಡ್ಡ ಬಲವಾದ ಬಿಲ್ಲವರನ್ನು ಓಲೈಸುವ ಅನಿವಾರ್ಯತೆ ಎದುರಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಈ ಸನ್ನಿವೇಶ ಅರ್ಥವಾಗಿರುವ ಬಿಲ್ಲವ ಟಿಕೆಟ್ ಆಕಾಂಕ್ಷಿಗಳಾದ ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತು ಉಳ್ಳಾಲ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಹಾಸ ಪಂಡಿತ್ (ಹೌಸ್) ಹುರಿಯಾಳಾಗುವ ಬಿರುಸಿನ ಪೈಪೋಟಿಗಿಳಿದಿದ್ದಾರೆಂಬ ಸುದ್ದಿ ಸಂಘದಿಂದ ಹೊರಬರುತ್ತಿದೆ. ರಿಯಲ್ ಎಸ್ಟೇಟ್ ಧಣಿಯಾಗಿರುವ ಚಂದ್ರಹಾಸ ಪಂಡಿತ್ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್ ಶಿಷ್ಯರಾದರೆ, ಸತೀಶ್ ಕುಂಪಲರಿಗೆ ಮಂತ್ರಿ ಕೋಟ ಶ್ರೀನಿವಾಸ್ ಪೂಜಾರಿ ಬೆಂಬಲವಿದೆಯೆಂಬ ಮಾತು ಕೇಳಿಬರುತ್ತಿದೆ.

ಬಿಜೆಪಿ ಕ್ಯಾಂಡಿಡೇಟ್ ಯಾರೇ ಆಗಲಿ, ಮಂಗಳೂರು (ಉಳ್ಳಾಲ) ಸಮರಾಂಗಣದಲ್ಲಿ ಶುದ್ಧ ಸೆಕ್ಯುಲರ್ ಖಾದರ್ ಮತ್ತು ಪಕ್ಕಾ ಕಮ್ಯುನಲ್ ಸಂಘಟನೆಗಳ ಮಧ್ಯೆ ಹೋರಾಟ ನಡೆಯಲಿದೆ ಎಂಬ ಭಾವನೆ ಜಿಲ್ಲೆಯಲ್ಲಿದೆ. ಈಗಿರುವ ಕುತೂಹಲ, ಖಾದರ್ ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಮತ್ತೆ ವಿಧಾನಸಭೆ ಪ್ರವೇಶಿಸುವರೆ ಎಂಬುದಾಗಿದೆ!.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಸಮೀಕ್ಷೆ; ಪುತ್ತೂರು: ಸಂಘ ಪರಿವಾರದ ಆಡಂಬೊಲದಲ್ಲಿ ಸಜ್ಜುಗೊಳ್ಳುತ್ತಿದ್ದಾರೆಯೇ ನಳಿನ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...