Homeಕರ್ನಾಟಕಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

- Advertisement -
- Advertisement -

ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ ಕನ್ನಡ ಮತ್ತು ಖಡಕ್ ಜೋಳದ ರೊಟ್ಟಿ-ಮುಳಗಾಯ್ ಎಣಗಾಯ್ ಪಲ್ಯದ ಧಾರವಾಡ ಲೋಕಸಭಾ ಕ್ಷೇತ್ರದ ರಾಜಕಾರಣ ಮಾತ್ರ ಧಾರವಾಡ ಪೇಡಾದ ಸ್ವಾದಿಷ್ಟಕ್ಕೆ ತದ್ವಿರುದ್ಧವಾದುದು! “ದಯವೇ ಧರ್ಮದ ಮೂಲವಯ್ಯ” ಎನ್ನುತ್ತ ಮಹಾನ್ ಮಾನವತಾವಾದಿ ಬಸವಣ್ಣ ಕಟ್ಟಿದ್ದ ಲಿಂಗಾಯತ ಧರ್ಮದವರೆಂದು ಹೇಳಿಕೊಳ್ಳುವವರೇ ಹೆಚ್ಚಿರುವ ಧಾರವಾಡ ಲೋಕಸಭಾ ಕ್ಷೇತ್ರ 1990ರ ದಶಕದಾರಂಭದ ಹುಬ್ಬಳ್ಳಿ ಈದ್ಗಾ ವಿವಾದೋತ್ತರ ಧರ್ಮಕಾರಣದಿಂದ ಅಸಹಿಷ್ಣು ಕಟ್ಟರ್ ಹಿಂದುತ್ವ ಹಿರೇಮಣಿಗಳ ಹಿಡಿತಕ್ಕೆ ಸಿಲುಕಿರುವುದು ವಿಪರ್ಯಾಸವೇ ಸರಿ!

ಕೇಸರಿ ರಣಕಣ!

ಧಾರವಾಡ ಹಿಂದುತ್ವದ ಕಡು ಕೇಸರಿ ಕೋಟೆ; ಲಿಂಗಾಯತತ್ವದ ಏಕಸ್ವಾಮ್ಯದ ಸಾಮ್ರಾಜ್ಯ ಎಂಬ ವ್ಯಾಖ್ಯಾನ ರಾಜಕೀಯ ವಲಯದಲ್ಲಿದೆ. ಬ್ರಾಹ್ಮಣ ಸಮುದಾಯದ ಸರೋಜಿನಿ ಮಹಿಷಿ ಮತ್ತು ಕುರುಬ ಜಾತಿಯ ಡಿ.ಕೆ.ನಾಯ್ಕರ್‌ರಂಥವರು ನಾಲ್ಕು-ನಾಲ್ಕು ಸಾರಿ ಈ ಲಿಂಗಾಯತ ಬಾಹುಳ್ಯದ ಪಾಳೇಪಟ್ಟದಲ್ಲಿ ಸಂಸದರಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಜಾತಿಕಾರಣ ನಿರ್ಣಾಯಕ ಪಾತ್ರವಾಡುತ್ತದೆ. ಆದರೆ ಶೇ.40ರಷ್ಟು ಲಿಂಗಾಯತರೇ ಇರುವ ಧಾರವಾಡ ಅಂದರೆ ಹಿಂದಿನ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ವಿಜಯ್ ಸಂಕೇಶ್ವರ್ ಒಬ್ಬರನ್ನು ಬಿಟ್ಟರೆ ಸಂಸದರಾದವರಲ್ಲಿ ಉಳಿದವರ್‍ಯಾರೂ ಲಿಂಗಾಯತರಲ್ಲ. ಲಿಂಗಾಯತೇತರರೇ ಹೆಚ್ಚು ಸಲ ಎಂಪಿಯಾಗಿದ್ದರೂ ಧಾರವಾಡ “ಲೋಕ”ದ ಮೇಲೆ ಮಾತ್ರ ಲಿಂಗಾಯತರದೇ ಹಿಡಿತ; ಮೊದಲಿಗೆ ಧರ್ಮಕಾರಣದ ಸೋಂಕು ಅಷ್ಟೇನು ಅಂಟಿರಲಿಲ್ಲ ಎನ್ನಬಹುದು. ಸ್ವಾತಂತ್ರ್ಯದ ನಂತರ ಸಂಘ ಪರಿವಾರ ಹಿಂದುತ್ವ ಅಜೆಂಡಾವನ್ನು ಮುಂದೆಮಾಡಿ ಅದೆಷ್ಟೇ ಹಿಕಮತ್ತು ನಡೆಸಿದರೂ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಜನಸಂಘ ಮತ್ತು ಆರ್‌ಎಸ್‌ಎಸ್‌ಗೆ ಕರ್ನಾಟಕದಲ್ಲಿ ಧಾರವಾಡ-ಹುಬ್ಬಳ್ಳಿ ಗೆದ್ದುಕೊಳ್ಳುವುದೇ ದೊಡ್ಡ ಗುರಿಯಾಗಿತ್ತು. 1960ರ ದಶಕದಿಂದ ಆರ್‌ಎಸ್‌ಎಸ್‌ನ ಜಗನ್ನಾಥ್ ರಾವ್ ಜೋಶಿಯಂಥವರು ತುಂಬ ನಾಜೂಕಾಗಿ ಸಂಘ ಪರಿವಾರದ ಬೇರಿಳಿಸುವ ಕಾರ್ಯಾಚರಣೆ ನಡೆಸಿದ್ದರು. 1967ರಲ್ಲಿ ಜನಸಂಘದ ರಾಮಸೇವಕ್ ಹುಬ್ಬಳ್ಳಿಯಲ್ಲಿ ಠೇವಣಿ ಉಳಿಸಿಕೊಂಡಿದ್ದೇ ಆರ್‌ಎಸ್‌ಎಸ್‌ಗೆ ದೊಡ್ಡ ಹೆಮ್ಮೆಯ ಸಂಗತಿಯಾಗಿತ್ತು; ಹುಬ್ಬಳ್ಳಿ-ಧಾರವಾಡ ನಿಧಾನಕ್ಕೆ ವಿಭಜಕ ಧರ್ಮಕಾರಣದ ಅಕ್ಟೋಪಸ್ ಹಿಡಿತಕ್ಕೆ ಸಿಲುಕುವ ಸೂಚನೆ ಇದಾಗಿತ್ತು. ಈ “ಸಾಧನೆ”ಗಾಗಿ ಅಂದು ಆರ್‌ಎಸ್‌ಎಸ್ ಭರ್ಜರಿ ಮೆರವಣಿಗೆ ಹೊರಡಿಸಿತ್ತು.

ಜಗನ್ನಾಥ್ ರಾವ್ ಜೋಶಿ

ಹುಬ್ಬಳ್ಳಿ-ಧಾರವಾಡವನ್ನು ಕರ್ನಾಟಕದ ಕೇಸರಿ ಹೆಡ್ ಕ್ವಾಟರ್ಸ್ ಮಾಡಿಕೊಳ್ಳುವ ಕನಸು ಸಂಘ ಪರಿವಾರದ ಬ್ರಾಹ್ಮಣ ಮುಖಂಡರಿಗೆ ಮುಂಚಿತವಾಗಿಯೇ ಬಂದಿತ್ತು. ಈ ವಿಪ್ರೋತ್ತಮರು ಇಸ್ಲಾಮೋಫೋಬಿಕ್ ರಾಜಕಾರಣದ ತಂತ್ರಗಾರಿಕೆ ಸದಾ ನಡೆಸಿಕೊಂಡೇ ಬಂದರೆನ್ನಲಾಗಿದೆ. 1990ರ ದಶಕದಲ್ಲಿ ಉತ್ತರ ಭಾರತದಲ್ಲಿ ಅಯೋಧ್ಯೆ ಆಧಾರಿತ ಧರ್ಮಕಾರಣ ಭುಗಿಲೆದ್ದ ಹೊತ್ತಲ್ಲೇ ಇತ್ತ ಹುಬ್ಬಳ್ಳಿ-ಧಾರವಾಡದಲ್ಲಿ ಹುಬ್ಬಳ್ಳಿ ಪೂರ್ವ ಪಟ್ಟಣದ ಈದ್ಗಾ ಮೈದಾನ ವಿವಾದವನ್ನು ಸಂಘ ಸೂತ್ರಧಾರರು ವ್ಯವಸ್ಥಿತವಾಗಿ ಹುಟ್ಟುಹಾಕಿದರು. ಹುಬ್ಬಳ್ಳಿ-ಧಾರವಾಡದಲ್ಲಿ ಹಿಂದುತ್ವವಾದಿಗಳ ಕಣ್ಣು ಕುಕ್ಕುವಷ್ಟು ದೊಡ್ಡ ಸಂಖ್ಯೆಯಲ್ಲಿರುವ ಮುಸಲ್ಮಾನರು ವರ್ಷಕ್ಕೆರಡು ಬಾರಿ ತಮ್ಮ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಮಾಡುವ ಮತ್ತು ಉಳಿದ ಸಮಯದಲ್ಲಿ ಎಲ್ಲ ಸಮುದಾಯದ ಮಕ್ಕಳ ಆಟದ ಬಯಲಾಗಿದ್ದ ಈ ಈದ್ಗಾ ಮೈದಾನವನ್ನು ಸಂಘಿಗಳು ಹಿಂದುತ್ವದ “ಆಟಿಕೆ” ಮಾಡಿಕೊಂಡರು. ಆಡ್ವಾಣಿ, ಉಮಾಭಾರತಿಯಂಥ ಹಿಂದುತ್ವದ ಅತ್ಯುಗ್ರ ಪ್ರತಿಪಾದಕರು ಹುಬ್ಬಳ್ಳಿ ನಗರಕ್ಕೆ ಲಗ್ಗೆಯಿಡತೊಡಗಿದರು. ಹುಬ್ಬಳ್ಳಿ-ಧಾರವಾಡದಲ್ಲಿ ಬಿಟ್ಟೂಬಿಡದೆ ಕೋಮುಗಲಭೆಗಳು ನಡೆಯಲಾರಂಭಿಸಿದವು.

ಉತ್ತರ ಭಾರತದಲ್ಲಿ ಬಿಜೆಪಿ ಬಲವರ್ಧನೆಗೆ “ಅಯೋಧ್ಯೆ” ಹಿಂದುತ್ವ ಸಿದ್ಧಾಂತಿಗಳಿಗೆ ಅಸ್ತ್ರವಾದಂತೆ, ಕರ್ನಾಟಕದಲ್ಲಿ ಕೇಸರಿ ಪಕ್ಷವನ್ನು ಕಟ್ಟಲು ಸಂಘಿಗಳು 1992-95ರ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ಈದ್ಗಾ ಪ್ರಕರಣ ಬಳಸಿಕೊಂಡರು. ಅದೇ ಹೊತ್ತಿಗೆ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಮೇಲ್ವರ್ಗದ ಲಿಂಗಾಯತರ ಸ್ವಜಾತಿ ನಾಯಕ ಯಡಿಯೂರಪ್ಪ ರಾಜ್ಯ ಬಿಜೆಪಿಯ ಯಜಮಾನರಾಗಿ ಅವತರಿಸಿದರು. ಯಡಿಯೂರಪ್ಪ ಸಂಘೀ ಶ್ರೇಷ್ಠರ ನಿರ್ದೇಶನದಂತೆ ಹಿಂದುತ್ವಕ್ಕೆ ಲಿಂಗಾಯತ ಜಾತಿಪ್ರತಿಷ್ಠೆಯ “ಖದರು” ಕೊಟ್ಟರು. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹಿಂದುತ್ವ-ಲಿಂಗಾಯತತ್ವದ ಬಂಪರ್ ಫಸಲು ಬಂತು. ರಾಜ್ಯದಲ್ಲೂ ಕೇಸರಿ ಪಾರ್ಟಿ ಮಜಬೂತಾಯಿತು. 1989ರಲ್ಲಿ ಕೇವಲ ನಾಲ್ಕೇ ನಾಲ್ಕು ಶಾಸಕರನ್ನು ಹೊಂದಿದ್ದ ಬಿಜೆಪಿ 1994ರ ಚುನಾವಣೆಯಲ್ಲಿ ಬರೋಬ್ಬರಿ ಹತ್ತು ಪಟ್ಟು ಹೆಚ್ಚು ಎಮ್ಮೆಲ್ಲೆಗಳನ್ನು ಪಡೆದಿತ್ತು; ಅಂದರೆ ಬಿಜೆಪಿ ಎಮ್ಮೆಲ್ಲೆಗಳ ಸಂಖ್ಯೆ ನಾಲ್ಕರಿಂದ ನಲ್ವತ್ತಾಗಿತ್ತು!! 1996ರ ಲೋಕಸಭಾ ಚುನಾವಣೆ ಬಳಿಕವಂತೂ ಧಾರವಾಡ, ಹಾವೇರಿ ಮತ್ತು ಗದಗ (ಅವಿಭಜಿತ ಧಾರವಾಡ ಜಿಲ್ಲೆ) ಕಡುಕೇಸರಿ ಸಾಮ್ರಾಜ್ಯದಂತಾಗಿ ಹೋಯಿತು. ಇದು ಹುಬ್ಬಳ್ಳಿ ಈದ್ಗಾ ಮೈದಾನದ “ಮಹಿಮೆ”ಯೆಂಬ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿದೆ.

ವಿದ್ವಾಂಸೆ ಸರೋಜಿನಿ ಮಹಿಷಿ!

ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಧಾರವಾಡ ಜಿಲ್ಲೆಯಲ್ಲಿ ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣವೆಂಬ ಎರಡು ಲೋಕಸಭಾ ಕ್ಷೇತ್ರಗಳಿದ್ದವು. ಈ ಕ್ಷೇತ್ರಗಳು 2004ರ ಚುನಾವಣೆಯವರೆಗೂ ಇದ್ದವು. 2008ರಲ್ಲಿ ಕ್ಷೇತ್ರಗಳ ಪನರ್ ವಿಂಗಡನೆಯಾದಾಗ ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣದ ಆಯಾಕಾರದಲ್ಲಿ ಕೊಂಚ ಬದಲಾವಣೆಯಾಯಿತು. ಧಾರವಾಡ ಉತ್ತರದಲ್ಲಿದ್ದ ಅಸೆಂಬ್ಲಿ ಕ್ಷೇತ್ರಗಳ ಪೈಕಿ ಗದಗ ಜಿಲ್ಲೆಯ ಗದಗ ಮತ್ತು ನರಗುಂದ ತೆಗೆದು ಧಾರವಾಡ ಜಿಲ್ಲೆಯ ಕುಂದಗೋಳ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ “ಧಾರವಾಡ” ಎಂಬ ಹೊಸ ಸಂಸದೀಯ ಕ್ಷೇತ್ರವನ್ನು ರಚನೆಮಾಡಲಾಯಿತು.

ಸರೋಜಿನಿ ಮಹಿಷಿ

1952ರ ಮೊದಲ ಮಹಾಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಪಿ.ಕರ್ಮಾಕರ್ ಸಂಸದರಾಗಿ ಆಯ್ಕೆಯಾಗಿದ್ದರು. ಮೈಸೂರು ರಾಜ್ಯ ಉದಯವಾದ ನಂತರದ 1957ರ ಇಲೆಕ್ಷನ್‌ನಲ್ಲಿ ಬ್ರಾಹ್ಮಣ ಸಮುದಾಯದ ಇದೇ ಕರ್ಮಾಕರ್ ಮತ್ತೆ ಸಂಸದರಾದರು. 1962ರಲ್ಲಿ ಶಿಕ್ಷಕಿ-ವಕೀಲೆಯಾಗಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಸರೋಜಿನಿ ಮಹಿಷಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಕಾಂಗ್ರೆಸ್ ಗಾಳಿಯಲ್ಲಿ ನಿರಾಯಾಸವಾಗಿ ಗೆಲುವು ಕಂಡ ಅಲ್ಪಸಂಖ್ಯಾತ ಬ್ರಾಹ್ಮಣ ಸಮುದಾಯದ ಸರೋಜಿನಿ ಮಹಿಷಿ 1967 ಹಾಗು 1971ರ ಚುನಾವಣೆಯಲ್ಲೂ ಎಂಪಿಯಾದರು. ಕರ್ನಾಟಕ ನಾಮಕರಣದ ಬಳಿಕದ 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಆಖಾಡಕ್ಕಿಳಿದಿದ್ದ ಸರೋಜಿನಿ ಮಹಿಷಿಗೆ ಆರ್‌ಎಸ್‌ಎಸ್ ಕಟ್ಟಾಳು ಜಗನ್ನಾಥ ರಾವ್ ಜೋಶಿ- ಇಂದಿರಾ ಗಾಂಧಿ ಸರ್ವಾಧಿಕಾರದ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಕಟ್ಟಿಕೊಂಡಿದ್ದ- ಜನತಾ ಪಕ್ಷದ ಹುರಿಯಾಳಾಗಿ ಸೆಡ್ಡು ಹೊಡೆದಿದ್ದರು. ಈ ವಿಪ್ರ ಕಾಳಗದಲ್ಲಿ ಸರೋಜಿನಿ ಮಹಿಷಿ(2,05,627) ಜಗನ್ನಾಥ್ ರಾವ್ ಜೋಶಿ(1,51,199)ಯನ್ನು ಮಣಿಸಿ ನಾಲ್ಕನೇ ಸಲ ಸಂಸತ್ ಸದಸ್ಯೆಯಾದರು.

ಬಹುಭಾಷಾ ಪಾಂಡಿತ್ಯ ಮತ್ತು ಹಲವು ರಂಗದಲ್ಲಿ ವಿದ್ವತ್ ಹೊಂದಿದ್ದ ಸರೋಜಿನಿ ಮಹಿಷಿಯವರನ್ನು ಪ್ರಧಾನಿ ಇಂದಿರಾ ಗಾಂಧಿ 1965-1966ರ ತನಕ ಸಂಸದೀಯ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು; 1967-74ರವರೆಗೆ ವಿವಿಧ ಇಲಾಖೆಯ ಮಂತ್ರಿಯಾಗಿಯೂ ನೇಮಿಸಿಕೊಂಡಿದ್ದರು. ಸರೋಜಿನಿ ಮಹಿಷಿ ಹಲವು ಕನ್ನಡ ಸಾಹಿತ್ಯ ಕೃತಿಗಳನ್ನು ಹಿಂದಿ, ಮರಾಠಿಗೆ ಅನುವಾದಿಸಿದ್ದರು; ಇದರಲ್ಲಿ ಕುವೆಂಪುರವರ ರಾಮಾಯಣ ದರ್ಶನಂ ಮತ್ತ ಡಿವಿಜಿಯವರ ಮಂಕುತಿಮ್ಮನ ಕಗ್ಗ ಪ್ರಮುಖವಾದವು. 1980ರಲ್ಲಿ ಮಹಿಷಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಯಿತು. ಕುರುಬ ಸಮುದಾಯದ ಮುಂಚೂಣಿ ನಾಯಕರಾಗಿದ್ದ ಮಾಜಿ ಸಚಿವ ಡಿ.ಕೆ.ನಾಯ್ಕರ್‌ರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲಾಗಿತ್ತು. ಕೆರಳಿದ ಸರೋಜಿನಿ ಮಹಿಷಿ (1,11,575) ಜನತಾ ಪಕ್ಷ ಸೇರಿಕೊಂಡು ನಾಯ್ಕರ್(2,08,269)ಗೆ ಮುಖಾಮುಖಿಯಾದರು. ಕಾಂಗ್ರೆಸ್‌ನ ನಾಯ್ಕರ್ 96,694 ಮತಗಳಂತರದಿಂದ ಎಂಪಿಯಾದರು.

ಸರೋಜಿನಿ ಮಹಿಷಿಯನ್ನು 1983ರಲ್ಲಿ ಜನತಾ ಪಕ್ಷ ರಾಜ್ಯಸಭೆಗೆ ಕಳಿಸಿತು. ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಮಹಿಷಿ ರಾಜ್ಯಸಭೆಯ ಪ್ರತಿಷ್ಠಿತ ಉಪಾಧ್ಯಕ್ಷ ಪೀಠವನ್ನೂ ಏರಿದ್ದರು. ಸರೋಜಿನಿ ಮಹಿಷಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡುವ ಬಗ್ಗೆ ರಾಮಕೃಷ್ಣ ಹೆಗಡೆ ಯುಗದಲ್ಲಿ ನೇಮಿಸಲಾಗಿದ್ದ ಸಮಿತಿಯ ಮುಖ್ಯಸ್ಥರಾಗಿದ್ದರು. ಸರೋಜಿನಿ ಮಹಿಷಿ ಉದ್ಯೋಗ ಮಿಸಲಾತಿ ಕನ್ನಡಿಗರಿಗೆ ಯಾವ ಪ್ರಮಾಣದಲ್ಲಿ ಇರಬೇಕೆಂಬ ಕುರಿತು ಐತಿಹಾಸಿಕ ವರದಿ ಕೊಟ್ಟಿದ್ದಾರೆ. ಅದು ಇವತ್ತಿಗೂ “ಮಹಿಷಿ ವರದಿ” ಎಂದೇ ಜನಜನಿತವಾಗಿದೆ. 1990ರ ದಶಕದಲ್ಲಿ ನಿಧಾನವಾಗಿ ರಾಜಕೀಯದಿಂದ ನೇಪತ್ಯಕ್ಕೆ ಸರಿದ ಅವಿವಾಹಿತೆ ಸರೋಜಿನಿ ಮಹಿಷಿ ತಮ್ಮ ಕೊನೆಯ ದಿನಗಳನ್ನು ದಿಲ್ಲಿಯ ಹೊರವಲಯದಲ್ಲಿ ಕಳೆದರು.

ಡಿ.ಕೆ.ನಾಯ್ಕರ್‌

1984ರಲ್ಲಿ ಕಾಂಗ್ರೆಸ್‌ನ ಸಂಸದ ಡಿ.ಕೆ.ನಾಯ್ಕರ್ ಮತ್ತು ಜನತಾ ಪಕ್ಷದ ಎಸ್.ಐ.ಶೆಟ್ಟರ್ ಪ್ರತಿಸ್ಫರ್ಧಿಗಳಾಗಿದ್ದರು. ಬಹುಸಂಖ್ಯಾತ ಲಿಂಗಾಯತ ಸಮುದಾಯದ ಶೆಟ್ಟರ್(1,85,014)ಗೆ ನಾಯ್ಕರ್(2,29,865)ರನ್ನು ಮಣಿಸಲಾಗಲಿಲ್ಲ. 1989ರಲ್ಲೂ ಲಿಂಗಾಯತ ಸಮುದಾಯದ ವರ್ಚಸ್ವಿ ಮುಂದಾಳು, ಹೆಸರಾಂತ ವರ್ತಕ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ (ಈಗಿನ ಬಿಜೆಪಿ ಶಾಸಕಾಂಗದ ಉಪ-ನಾಯಕ ಅರವಿಂದ್ ಬೆಲ್ಲದ್ ತಂದೆ)ಗೂ ಹಿಂದುಳಿದ ಕುರುಬ ಸಮುದಾಯದ ನಾಯ್ಕರ್‌ರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಸ್ವಜಾತಿಯ ಲಿಂಗಾಯತರ ಓಟು ಸಾರಾಸಗಟಾಗಿ ಗಿಟ್ಟಿಸಿದ್ದ ಜನತಾ ದಳದ ಬೆಲ್ಲದ್ 2,20,997 ಮತ ಒಡೆಯುವಷ್ಟರಲ್ಲೇ ಸುಸ್ತಾಗಿ ಹೋದರು. 2,76,545 ಮತ ಪಡೆದ ನಾಯ್ಕರ್ ಜಯಶಾಲಿಯಾದರು. 1991ರ ಇಲೆಕ್ಷನ್ ವೇಳೆಗೆ ಬೆಲ್ಲದ್(1,35,891) ಬಿಜೆಪಿ ಸೇರಿಕೊಂಡು ಆ ಪಕ್ಷದ ಅಭ್ಯರ್ಥಿಯಾದರು. ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಬಿ.ಆರ್.ಯಾವಗಲ್(1,34,565) ಜನತಾ ದಳದ ಹುರಿಯಾಗಿದ್ದರು. ಸಮಬಲದ ತ್ರಿಕೋನ ಕಾಳಗದಲ್ಲಿ 1,57,682 ಮತ ಪಡೆದ ಕಾಂಗ್ರೆಸ್‌ನ ಡಿ.ಕೆ.ನಾಯ್ಕರ್ ಕೂದಲೆಳೆ ಅಂತರದಲ್ಲಿ ನಾಲ್ಕನೇ ಬಾರಿ “ದಿಲ್ಲಿ ಭಾಗ್ಯ” ಕಂಡರು!

ಈದ್ಗಾ ವಿವಾದದ ಫಲಾನುಭವಿಗಳು!

1996ರ ಚುನಾವಣೆ ಬರುವಾಗ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಕೋಮು ವೈಷಮ್ಯ ಮತ್ತು ಯಡಿಯೂರಪ್ಪರ ಲಿಂಗಾಯತ ಪ್ರತಿಷ್ಠೆಯ ತಂತ್ರಗಾರಿಕೆಯಿಂದ ಧಾರವಾಡ ಜಿಲ್ಲೆಯಲ್ಲಿ ಕೇಸರಿ ಬಾವುಟ ಬಾನೆತ್ತರಕ್ಕೇರಿತ್ತು! ಅದೇ ಸಂದರ್ಭದಲ್ಲಿ ಸತತ ಒಂದೂವರೆ ದಶಕ ಸಂಸದನಾಗಿದ್ದರೂ ಕಣ್ಣಿಗೆ ಕಾಣುವಂಥ ಜನಪರ ಕೆಲಸವೇನೂ ಮಾಡದ ಕಾಂಗ್ರೆಸ್‌ನ ನಾಯ್ಕರ್ ಬಗ್ಗೆ ಕ್ಷೇತ್ರದಾದ್ಯಂತ ಅಸಮಾಧಾನದ ಹೊಗೆಯಾಡತೊಡಗಿತ್ತು. ಎರಡು ಬಾರಿ ಕಾಂಗ್ರೆಸ್‌ನ ನಾಯ್ಕರ್ ಎದುರು ಸೋತಿದ್ದ ಚಂದ್ರಕಾಂತ್ ಬೆಲ್ಲದ್ 1994ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕನಾಗಿದ್ದರಿಂದ ಪಾರ್ಲಿಮೆಂಟ್ ಟಿಕೆಟ್ ಕೇಳಲಿಲ್ಲ. ಹಾಗಾಗಿ ಟ್ರಾನ್ಸ್‌ಪೋರ್ಟ್ ಉದ್ಯಮಿ ವಿಜಯ್ ಸಂಕೇಶ್ವರ್‌ಗೆ ನಿರಾಯಾಸವಾಗಿ ಕೇಸರಿ ಟಿಕೆಟ್ ದಕ್ಕಿತು. ಆ ಇಲೆಕ್ಷನ್‌ನಲ್ಲಿ ವಿಜಯ್ ಸಂಕೇಶ್ವರ್(2,28,572), ಜನತಾದಳದ ಶಂಕ್ರಣ್ಣ ಮುನವಳ್ಳಿ(1,88,221) ಮತ್ತು ಕಾಂಗ್ರೆಸ್‌ನ ನಾಯ್ಕರ್(1,49,768) ನಡುವೆ ಕತ್ತುಕತ್ತಿನ ಹೋರಾಟವಾಯಿತು. ಸಣ್ಣ ಅಂತರದಲ್ಲಿ ಸಂಸದರಾದ ಸಂಕೇಶ್ವರ್ ಧಾರವಾಡ ಲೋಕಸಭಾ ಕ್ಷೇತ್ರದ ಹಿಂದುತ್ವದ ಪ್ರಥಮ ಫಲಾನುಭವಿಯಾಗಿ ಧರ್ಮಕಾರಣದ ಇತಿಹಾಸದಲ್ಲಿ ದಾಖಲಾದರು!!

ವಿಜಯ್ ಸಂಕೇಶ್ವರ್‌

ಜನತಾ ದಳದ ಐ.ಕೆ.ಗುಜ್ರಾಲ್ ಸರಕಾರ 1998ರಲ್ಲಿ ಪತನವಾದ ಬಳಿಕ ಎದುರಾದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿಯ ವಿಜಯ್ ಸಂಕೇಶ್ವರ್ ಮತ್ತು ಕಾಂಗ್ರೆಸ್‌ನ ಡಿ.ಕೆ.ನಾಯ್ಕರ್ (2,10,459) ನಡುವೆ ಹಣಾಹಣಿ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಪಟ್ಟಭದ್ರರ ಕುರುಡು ಕಾಂಚಾಣ, ಜಾತಿ ಜಂಭ ಮತ್ತು ಹಿಂದುತ್ವದ ಹಮ್ಮು ಒಂದಕ್ಕೊಂದು ಪೂರಕವಾಗಿ ಹೆಣೆದುಕೊಂಡು ಧಾರವಾಡ ಸಂಸದೀಯ ಕ್ಷೇತ್ರ ಹಿಂದುತ್ವದ ಪ್ರಬಲ ಕೋಟೆಯಂತಾಗಿತ್ತು! ತತ್ಪರಿಣಾಮವಾಗಿ ಹಣವಂತ ಲಿಂಗಾಯತ ಉದ್ಯಮಿ, ಕೇಸರಿ ಕ್ಯಾಂಡಿಡೇಟ್ ವಿಜಯ್ ಸಂಕೇಶ್ವರ್(3,39,660) ಕಾಂಗ್ರೆಸ್‌ನ ದುರ್ಬಲ ಎದುರಾಳಿಯಾಗಿ ಮಾರ್ಪಾಡಾಗಿದ್ದ ಡಿ.ಕೆ.ನಾಯ್ಕರ್‌ರನ್ನು 1,29,201 ಮತಗಳ ಭರ್ಜರಿ ಅಂತರದಲ್ಲಿ ಹಿಮ್ಮೆಟ್ಟಿಸಿ ಲೋಕಸಭೆ ಪ್ರವೇಶಿಸಿದರು. 1999ರಲ್ಲಿ ಮತ್ತೆ ಎದುರಾದ ನಡುಗಾಲ ಚುನಾವಣೆ ಪಿಚ್‌ನಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಬದಲಿಸಿ ಕ್ಷೇತ್ರದ ಬಹುಸಂಖ್ಯಾತ ಮತ್ತು ನಿರ್ಣಾಯಕ ಲಿಂಗಾಯತ ಕೋಮಿನ ವೀರಣ್ಣ ಮತ್ತಿಕಟ್ಟಿಯನ್ನು “ಆಟ”ಕ್ಕೆ ಕಳಿಸಿತ್ತು. ರೋಣದ ಮಾಜಿ ಶಾಸಕ ವೀರಣ್ಣ ಮತ್ತಿಕಟ್ಟಿ ಎರಡು ಬಾರಿಯ ಸಂಸದ ವಿಜಯ್ ಸಂಕೇಶ್ವರ್‌ಗೆ ಕಠಿಣ ಸವಾಲಾಗಿದ್ದರು. ಸ್ವಜಾತಿ ಓಟುಗಳ ಬುಟ್ಟಿಗೆ ಕೈಹಾಕಿದ್ದ ಮತ್ತಿಕಟ್ಟಿ(3,03,595) ಸಂಕೇಶ್ವರ್(3,45,197) ಬೆವರಿಳಿಸಿದ್ದರು. ಮುಸ್ಲಿಮ್ ಸಮುದಾಯದಲ್ಲಿ ಪ್ರಭಾವಿಯಾಗಿದ್ದ ಜೆಡಿಎಸ್‌ನ ಇಸ್ಮಾಯಿಲ್ ಕಾಲೇಬುಡ್ಡೆ ಪಡೆದ 71,147 ಮತಗಳು ಕಾಂಗ್ರೆಸ್‌ಗೆ ಹಾನಿಮಾಡಿತ್ತು. ಕಾಲೇಬುಡ್ಡೆ “ಕೃಪೆ”ಯಿಂದ ಬಿಜೆಪಿಯ ಸಂಕೇಶ್ವರ್ ಸಣ್ಣ ಅಂತರದಲ್ಲಿ ಬಚಾವಾಗಿದ್ದರೆಂದು ರಾಜಕೀಯ ಆಸಕ್ತರು ಅಂದಿನ ರೋಚಕತೆ ನೆನಪಿಸುತ್ತಾರೆ.

ಬ್ರಾಹ್ಮಣರ ಜೋಶಿ ಪಾರುಪತ್ಯ

2004ರ ಪಾರ್ಲಿಮೆಂಟ್ ಇಲೆಕ್ಷನ್ ಬರುವ ವೇಳೆಗೆ ಸಂಸದ ವಿಜಯ್ ಸಂಕೇಶ್ವರ್ ಮತ್ತು ಬಿಜೆಪಿಯ ಸ್ವಜಾತಿ ಲಿಂಗಾಯತ ನಾಯಕರ ಹಾಗೂ ಬ್ರಾಹ್ಮಣ ಮುಖಂಡರ ನಡುವಿನ ಸಂಬಂಧ ಹಳಸಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್‌ರಂಥ ಸ್ವಜಾತಿ ಲೀಡರ್‌ಗಳಿಗೆ ಪಾರ್ಟಿಯಲ್ಲಿ ಸಿಗುತ್ತಿದ್ದ ಮಹತ್ವ ತನಗಿಲ್ಲ ಎಂಬ ಅಸಮಾಧಾನ ಸಂಕೇಶ್ವರ್‌ದಾಗಿತ್ತು; ಸ್ಥಳೀಯ ಆರ್‌ಎಸ್‌ಎಸ್ ಬ್ರಾಹ್ಮಣ ಶ್ರೇಷ್ಠರಿಗೂ ಸಂಕೇಶ್ವರ್‌ರನ್ನು ನೇಪಥ್ಯಕ್ಕೆ ಸರಿಸಿ ರಾಜೇಂದ್ರ ಗೋಖಲೆ, ಪ್ರಹ್ಲಾದ್ ಜೋಶಿಯಂಥ “ತಮ್ಮವರನ್ನು” ಮುಂಚೂಣಿಗೆ ತರುವ ಇರಾದೆಯಿತ್ತು. ಆಗ ಬಿಜೆಪಿಯ ದಿಲ್ಲಿ ದರ್ಬಾರಿನ ಆಯಕಟ್ಟಿನ ಜಾಗದಲ್ಲಿದ್ದ ಅಂದಿನ ಕೇಂದ್ರ ಮಂತ್ರಿ ಅನಂತ್ ಕುಮಾರ್ (ಶಾಸ್ತ್ರಿ)ಗೂ ಸಂಕೇಶ್ವರ್ ಎಂದರೆ ಅಷ್ಟಕ್ಕಷ್ಟೇ ಆಗಿತ್ತು ಎಂಬ ಮಾತು ಇವತ್ತಿಗೂ ಧಾರವಾಡದ ರಾಜಕೀಯ ವಲಯದಲ್ಲಿದೆ. ಹಾಗಾಗಿ ಸಂಕೇಶ್ವರ್‌ಗೆ ಬಿಜೆಪಿಯಲ್ಲಿ ಇರಲಾಗಲಿಲ್ಲ; ಬ್ರಾಹ್ಮಣರ ಹಿಡಿತದ ಬಿಜೆಪಿಯಿಂದ ಹೊರಬಂದ ಸಂಕೇಶ್ವರ್ ಕನ್ನಡಿಗರ “ಅಸ್ಮಿತೆ” ಮುಂದೆಮಾಡಿ “ಕನ್ನಡ ನಾಡು” ಎಂಬ ಪಕ್ಷ ಕಟ್ಟಿಕೊಂಡರು.

ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

ಸಂಕೇಶ್ವರ್ ಖಾಲಿಮಾಡಿದ್ದ ಸ್ಥಾನಕ್ಕೆ ಅದೇ ಸಮುದಾಯದವರ್‍ಯಾರೂ ಬರದಂತೆ ಸಂಘ ಪರಿವಾರದ ಬ್ರಾಹ್ಮಣ ಯಜಮಾನರು ನೋಡಿಕೊಂಡರು. ಬ್ರಾಹ್ಮಣರಲ್ಲೇ ಬಿಜೆಪಿ ಟಿಕೆಟ್‌ಗಾಗಿ ಕಿತ್ತಾಟ ನಡೆಯಿತು. ಸ್ಥಳೀಯ ಬಿಜೆಪಿಯ ಧರ್ಮಕಾರಣದಲ್ಲಿ ಸದಾ “ಸಕ್ರಿಯ”ರಾಗಿರುತ್ತಿದ್ದ ಆರ್‌ಎಸ್‌ಎಸ್ ಅತಿರಥ ರಾಜೇಂದ್ರ ಗೋಖಲೆ ಕೇಸರಿ ಪಾರ್ಟಿಯ ಎಂಪಿಯಾಗುವ ಕನಸು ಕಂಡಿದ್ದರು. ಆದರೆ ಕೇಂದ್ರ ಬಿಜೆಪಿಯಲ್ಲಿ ಪ್ರಭಾವಿಯಾಗಿದ್ದ ಅನಂತ್ ಕುಮಾರ್ ತಮ್ಮ ಹಿಂಬಾಲಕ ಫಿನಾಯಿಲ್-ಬ್ಲೀಚಿಂಗ್ ಪೌಡರ್ ವ್ಯಾಪಾರಿ ಪ್ರಹ್ಲಾದ್ ಜೋಶಿಗೆ ಅವಕಾಶ ಕೊಡಿಸಿದರು. ಉತ್ತರ ಕರ್ನಾಟಕದ ಬಿಜೆಪಿ ಎಂಪಿ, ಎಮ್ಮೆಲ್ಲೆ ಟಿಕೆಟ್ ನಿರ್ಧರಿಸುವ, ಬಿ-ಫಾರ್ಮ್ ವಿತರಿಸುವ ಮಟ್ಟದ ತಾಕತ್ತುದಾರರಾಗಿದ್ದ ರಾಜೇಂದ್ರ ಗೋಖಲೆಗೆ ಕೇಸರಿ ಪಕ್ಷದ ಎಂಪಿ ಟಿಕೆಟ್ ಪಡೆಯಲಾಗಲಿಲ್ಲ. ಇದರಿಂದ ಹತಾಶರಾದ ಗೋಖಲೆ ಕೇಂದ್ರ ಮಂತ್ರಿ ಅನಂತ್ ಕುಮಾರ್ ಜತೆ ಮುನಿಸಿಕೊಂಡು ಬಿಜೆಪಿಯಲ್ಲಿ ಇದ್ದೂ ಇಲ್ಲದೆಂತೆ ಉಳಿದರು. ಬಿಜೆಪಿ-ಆರ್‌ಎಸ್‌ಎಸ್‌ನ ಸೀನಿಯರ್-ಸಿನ್ಸಿಯರ್ ಗೋಖಲೆಗೆ ನ್ಯಾಯವಾಗಿ ಸಿಗಬೇಕಾಗಿದ್ದ ಎಂಪಿ ಸ್ಥಾನವನ್ನು “ಅಡ್ಡದಾರಿ”ಯಿಂದ ಪ್ರಹ್ಲಾದ್ ಜೋಶಿ ಪಡೆದರೆಂಬ ಮಾತು ಇವತ್ತಿಗೂ ಬಿಜೆಪಿ ಬಿಡಾರದಲ್ಲಿದೆ!

ವಿನಯ್ ಕುಲಕರ್ಣಿ

ಸುಮಾರು ಆರೂಕಾಲು ಲಕ್ಷ ಲಿಂಗಾಯತ ಮತದಾರರಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ, 85 ಸಾವಿರದಷ್ಟು ಓಟುದಾರರಿದ್ದಾರೆಂದು ಅಂದಾಜಿಸಲಾಗಿರುವ ತೀರಾ ಅಲ್ಪಸಂಖ್ಯಾತ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ 2004ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಧಾರವಾಡ ಬಿಜೆಪಿಯಲ್ಲಿ ಲಿಂಗಾಯತರ್‍ಯಾರೂ ತನಗೆ ಸರಿಸಮಾನವಾಗಿ ಬೆಳೆಯದಂತೆ ತೀವ್ರ ನಿಗಾ ವಹಿಸಿರುವ ಜೋಶಿ ಪ್ರತಿ ಚುನಾವಣೆಯಲ್ಲೂ ಲಿಂಗಾಯತರನ್ನು ಯಾಮಾರಿಸಿ ಗೆಲ್ಲುತ್ತಿದ್ದಾರೆಂದು ಪ್ರಜ್ಞಾವಂತ ಲಿಂಗಾಯತರು ಹೇಳುತ್ತಾರೆ. ಮೊದಲ ಬಾರಿ- 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ- ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್(3,02,006)ರನ್ನು 83,078 ಮತದಿಂದ ಜೋಶಿ ಹಿಮ್ಮೆಟ್ಟಿದ್ದರು; 2009ರಲ್ಲಿ ಮಾಜಿ ಸಂಸದ ಕಾಂಗ್ರೆಸ್‌ನ ಮಂಜುನಾಥ್ ಕುನ್ನೂರ್(3,09,123)ರನ್ನು 1,37,663 ಮತದಿಂದ ಸೋಲಿಸಿದರು; 2014ರಲ್ಲಿ 5,45,395 ಮತ ಗಳಿಸಿದ ಜೋಶಿ ಕಾಂಗ್ರೆಸ್ ಎದುರಾಳಿ ವಿನಯ್ ಕುಲಕರ್ಣಿ(4,31,738)ಯನ್ನು ಮಣಿಸಿದರು. 2019ರ ಪುಲ್ವಾಮಾ ಪರಿಣಾಮದಿಂದ ಜೋಶಿಗೆ ಬರೋಬ್ಬರಿ 6,84,837 ಮತ ಬಂದಿತ್ತು. 4,79,765 ಮತ ಗಳಿಸಿದ್ದ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಪರಾಭವಗೊಂಡಿದ್ದರು.

ಈ ಚುನಾವಣಾ ಅಂಕಿ-ಅಂಶಗಳ ಮೇಲೆ ಹಾಗೇ ಸುಮ್ಮನೆ ಕಣ್ಣುಹಾಯಿಸಿದರೆ, ಅಲ್ಪಸಂಖ್ಯಾತ ಹಾರವರ ಜೋಶಿಗೆ ಬಹುಸಂಖ್ಯಾತ ಲಿಂಗಾಯತ ಕೋಮಿನ ಕ್ಯಾಂಡಿಡೇಟು ಸೆಡ್ಡುಹೊಡೆದರೂ ಜಯಿಸಲಾಗಿಲ್ಲ ಎಂಬುದು ಪಕ್ಕಾ ಆಗುತ್ತದೆ; ಜತೆಗೆ ಜೋಶಿ ಮತದಂತರ ಹೆಚ್ಚುತ್ತಲೇ ಸಾಗಿದೆ; ಲಿಂಗಾಯತರ ಜಾತಿ ಅಸ್ಮಿತೆ, ಅಭಿಮಾನಗಳು ಹಿಂದುತ್ವದ ಹುಸಿ ಹೆಮ್ಮೆಯಲ್ಲಿ ಕೊಚ್ಚಿಹೋಗುವಂತೆ ಸಂಘೀ ತಂತ್ರಗಾರರು ನೋಡಿಕೊಂಡಿದ್ದೇ ಈ “ಯಶಸ್ಸಿನ” ರಹಸ್ಯ! ಧಾರವಾಡ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಇಸ್ಲಾಮೋಫೋಬಿಯಾ ಬಿತ್ತಿ ಸಂಘ ಪರಿವಾರ ಜಾಲ ಹೆಣೆದುಕೊಂಡಿದೆ. ತತ್ಪರಿಣಾಮವಾಗಿ ಧಾರವಾಡ ಸಂಸದೀಯ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಜೋಶಿಗೆ ಲಿಂಗಾಯತರ ಮೇಲೆ ಸವಾರಿಗೆ ಅನುಕೂಲವಾಗಿದೆ; ಅನಂತ್‌ಕುಮಾರ್ ಶಾಸ್ತ್ರಿ ಸಾವಿನ ಬಳಿಕ ಜೋಶಿ ಪ್ರಧಾನಿ ಮೋದಿಯ ಎಡ-ಬಲದಲ್ಲಿ ಮಿಂಚುವಷ್ಟು ಬಲಾಢ್ಯರಾದರು; ಕೇಂದ್ರ ಸರಕಾರದಲ್ಲಿ ಆಯಕಟ್ಟಿನ ಇಲಾಖೆಯ ಮಂತ್ರಿಯಾಗುವುದರೊಂದಿಗೆ ಬಿಜೆಪಿಯ ಸೂತ್ರಧಾರ ಬ್ರಾಹ್ಮಣ ಲಾಬಿಯ ಕಣ್ಮಣಿಯೂ ಆಗಿಹೋದರು; ಸದರಿ ವರ್ಚಸ್ಸಿನಿಂದ ಜೋಶಿ ಕ್ಷೇತ್ರದಲ್ಲಿ “ತ್ರಿವಿಕ್ರಮ”ನಂತಾಗಿಹೋಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕುಗ್ಗುತ್ತಿರುವ ಜೋಶಿ ಜೋಶ್

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 28 ವರ್ಷದಿಂದ ಕೇಸರಿ ಆಡಳಿತ ನಡೆದಿದೆ. 1996ರಲ್ಲಿ ಮೊದಲ ಬಾರಿ ಹಿಂದುತ್ವದ ಅಮಲೇರಿಸಿ ಕ್ಷೇತ್ರ ಸ್ವಾಧೀನಪಡಿಸಿಕೊಂಡ ಸಂಘ ಪರಿವಾರದ ವಿಭಜಕ ರಾಜಕಾರಣದ “ಚಮತ್ಕಾರ ಯಾತ್ರೆ” ಅಭಾದಿತವಾಗಿ ಮುಂದುವರಿದುಕೊಂಡು ಬಂದಿದೆ. 1991ರಲ್ಲಿ ಗೆದ್ದಿದ್ದೇ ಕಾಂಗ್ರೆಸ್‌ಗೆ ಕೊನೆ; ಆ ಬಳಿಕ ಕಾಂಗ್ರೆಸ್ಸಿಗೆ ವಿಜಯವೆಂಬುದು ಮರೀಚಿಕೆಯಾಗಿದೆ. ಬಹುಸಂಖ್ಯಾತ ಲಿಂಗಾಯತರನ್ನೇ ಅಖಾಡಕ್ಕಿಳಿಸಿದರೂ ಕಾಂಗ್ರೆಸ್ಸಿಗೆ ಸಂಘ ಪರಿವಾರದ ಹುನ್ನಾರಕ್ಕೆ ಪ್ರತಿತಂತ್ರ ಹೆಣೆಯಲು ಸಾಧ್ಯವಾಗಿಲ್ಲ; ಹಿಂದುತ್ವದಿಂದ ಕ್ಷೇತ್ರ ಅದೆಷ್ಟು ಮಂದವಾಗಿತ್ತೆಂದರೆ, ಆರ್‌ಎಸ್‌ಎಸ್-ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನೆಲ್ಲ ಕಣ್ಣುಮುಚ್ಚಿ ನಂಬುವ ಸ್ಥಿತಿ ನಿರ್ಮಾಣವಾಗಿತ್ತು. ಬಹುಸಂಖ್ಯಾತ ಲಿಂಗಾಯತ ಲೀಡರ್‌ಗಳಲ್ಲಿ ಅಧಿಕಾರದ ಆಸೆ ಹುಟ್ಟಿಸಿ ಪರಸ್ಪರ ಕಾದಾಟಕ್ಕೆ ಹಚ್ಚಿ ಸಂಘ ಪರಿವಾರದ “ಪೂಜ್ಯರು” ಬೇಳೆಬೇಯಿಸಿಕೊಳ್ಳುತ್ತಿದ್ದರೂ ಆ ಸಮುದಾಯಕ್ಕೆ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ; ಲಿಂಗಾಯತರಿಗೆ ತಮಗಾದ ಮೋಸ, ವಂಚನೆಯ ಅರಿವಾಗತೊಡಗಿದೆ. ಹಿಂದುತ್ವ ಹವಾ ದರ್ಬಲವಾಗಿದೆ. ಮೋದಿ ಮುಖದ ಬೆಲೆ ತಗ್ಗಿದೆ; ಎರಡು ದಶಕದಿಂದ ಸಂಸದ-ಕೇಂದ್ರ ಮಂತ್ರಿಯಾಗುತ್ತಿರುವ ಪ್ರಹ್ಲಾದ್ ಜೋಶಿಯವರ ಒಡೆದಾಳುವ ನೀತಿ ಅರಿವಾಗಿದೆ. ಜೋಶಿಯನ್ನು ಬದಲಾಯಿಸುವ ತುಡಿತ ಕ್ಷೇತ್ರದಲ್ಲಿ ಶುರುವಾಗಿದೆ.

ಜಗದೀಶ್ ಶೆಟ್ಟರ್

ಕ್ಷೇತ್ರದ ಉದ್ದಗಲಕ್ಕೆ ಜೋಶಿ ಬಗ್ಗೆ ಅಸಮಾಧಾನವಿದೆ. ದಿಲ್ಲಿ, ಬೆಂಗಳೂರು ರಾಜಕಾರಣದಲ್ಲಿ ಮೈಮರೆತು ಕ್ಷೇತ್ರ ಕಡೆಗಣಿಸಿರುವ ಆಕ್ರೋಶವಿದೆ. ಜನಸಾಮಾನ್ಯರ ಕೈಗೆಟುತ್ತಿಲ್ಲ; ಪಕ್ಷದ ಕಾರ್ಯಕರ್ತರು, ಶಾಸಕರಿಂದಲೂ ದೂರವಾಗಿದ್ದಾರೆ ಎಂಬ ಬೇಸರ ಕೇಸರಿವಲಯದಲ್ಲಿದೆ. ಲಿಂಗಾಯತ ವಿರೋಧಿ-ಜಾತಿವಾದಿ ಎಂಬ ಗಂಭೀರ ಅರೋಪವಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಡಾ.ನಾಲವಾಡ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮಾಂತ್ರಿ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಯಡಿಯೂರಪ್ಪರ ಬೀಗ ಚಿಕ್ಕನಗೌಡ್ರ, ಮುಂತಾದ ಬಿಜೆಪಿಯ ಲಿಂಗಾಯತ ಲೀಡರ್‌ಗಳನ್ನು ಸಂಕಷ್ಟ-ಸಂದಿಗ್ಧಕ್ಕೆ ಸಿಲುಕಿಸಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಹೈರಾಣು ಮಾಡಿದರೆಂಬ ಮಾತು ಕೇಳಿಬರುತ್ತಿದೆ. ತನಗೆ ಸವಾಲಾಗುತ್ತಾನೆಂಬ ದೂ(ದು)ರಾಲೋಚನೆಯಿಂದ ಯೋಗೀಶ್ ಗೌಡ ಗೌಡರ್ ಮರ್ಡರ್ ಕೇಸ್ ಸಿಬಿಐಗೆ ವಹಿಸಿ ಕಾಂಗ್ರೆಸ್ ಎಮ್ಮೆಲ್ಲೆ ವಿನಯ್ ಕುಲ್ಕರ್ಣಿಯನ್ನು ಜೈಲಿಗೆ ಹೋಗುವಂತೆ ಮಾಡಿದ್ದು ಜೋಶಿಯೇ ಎಂಬ ಆರೋಪ ಭಾವನೆ ಲಿಂಗಾಯತರಲ್ಲಿದೆ. ಕೋರ್ಟ್ ಆದೇಶದಿಂದಾಗಿ ಇವತ್ತಿಗೂ ಕುಲಕರ್ಣಿ ಸ್ವಕ್ಷೇತ್ರ ಧಾರವಾಡಕ್ಕೆ ಕಾಲಿಡದಂತಾಗಿದೆ. ಜೋಶಿ ಸಂಘಶಕ್ತಿಯಿಂದ ಯಡಿಯೂರಪ್ಪರಂಥ ಯಡಿಯೂರಪ್ಪರಿಗೆ ಕಿರಕಿರಿ ಮಾಡುತ್ತಾರೆಂಬುದು ಬಿಜೆಪಿಯ ಬಹಿರಂಗ ರಹಸ್ಯ. ಈ ಕಾರಣದಿಂದ ಒಂದಿಷ್ಟು ಲಿಂಗಾಯತ ಮಠಾಧೀಶರು 2024ರ ಚುನಾವಣೆಯಲ್ಲಿ ಮತ್ತೆ ಜೋಶಿಗೆ ಕೇಸರಿ ಟಿಕೆಟ್ ಕೊಡಕೂಡದೆಂದು ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪರಿಗೆ ದುಂಬಾಲುಬಿದ್ದಿದ್ದರು. ಆದರೆ ದಿಲ್ಲಿಯ ಬ್ರಾಹ್ಮಣ ಲಾಬಿಯ ಮುಂದೆ ಯಡಿಯೂರಪ್ಪರ ಮಾತು ನಡೆಯಲಿಲ್ಲ.

ರಾತ್ರಿ ಬೆಳಗಾಗುವುದರಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ಮಾತೃ ಪಕ್ಷ ಬಿಜೆಪಿಗೆ ಮರಳಿದಾಗ ಧಾರವಾಡ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದ ಕೇಸರಿ ಟಿಕೆಟ್ ಕೊಡುವ ಭರವಸೆ ಕೊಡಲಾಗಿತ್ತೆನ್ನಲಾಗಿದೆ. ಆದರೆ ಆ ಸುಲಭದ ಕ್ಷೇತ್ರ ಶೆಟ್ಟರ್‌ಗೆ ಸಿಗದಂತೆ ಜೋಶಿ ಮಾಡಿದರೆಂಬ ಚರ್ಚೆ ಲಿಂಗಾಯತರ ಕೇರಿಗಳಲ್ಲಿ ನಡೆದೇ ಇದೆ. ಶೆಟ್ಟರ್ ಕಾಂಗ್ರೆಸ್ ಸೇರಿದಾಗ ಲಿಂಗಾಯತರಿಗೆ ಜೋಶಿ ಬಗ್ಗೆ ಸಿಟ್ಟು ಬಂದಿತ್ತು. ಆ ಅಸಮಾಧಾನ ಶೆಟ್ಟರ್ ಮತ್ತೆ ಬಿಜೆಪಿ ಸೇರಿಕೊಂಡರೂ ಕಡಿಮೆಯಾಗಿಲ್ಲ. ಆಂಟಿ ಇನ್ಕಂಬೆನ್ಸ್ ಕಾಡುತ್ತಿದೆ. ಪಂಚಮಸಾಲಿ ಮೀಸಲಾತಿ ಹೋರಾಟದ ಹೊತ್ತಲ್ಲಿ ಕೇಂದ್ರದಲ್ಲಿ ಪ್ರಭಾವಿ ಸಚಿವನಾಗಿದ್ದರೂ ಪ್ರಜ್ಞಾ ಪೂರ್ವಕವಾಗಿಯೇ ನೆರವಿಗೆ ಬರಲಿಲ್ಲವೆಂಬ ಭಾವನೆ ಲಿಂಗಾಯತರಲ್ಲಿದೆ. ದಿನಗಳೆದಂತೆ ಕ್ಷೇತ್ರ ಜೋಶಿಗೆ ಕಠಿಣವಾಗುತ್ತಿದೆ.

ಅವಿಭಜಿತ ಧಾರವಾಡ ಜಿಲ್ಲೆಯ ಲಿಂಗಾಯತ ಮತ್ತು ಮುಸ್ಲಿಮ್ ಸಮೂಹದಲ್ಲಿ ದೊಡ್ಡ ಪ್ರಮಾಣದ ಅನುಯಾಯಿಗಳನ್ನು ಹೊಂದಿರುವ ಶಿರಹಟ್ಟಿಯ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮಿ, ಲಿಂಗಾಯತ ವಿರೋಧಿಯಾಗಿರುವ ಜೋಶಿಯವರನ್ನು ಸೋಲಿಸುವ ಧರ್ಮಯುದ್ಧ ನಡೆಸುತ್ತೇನೆನ್ನುತ್ತ ಸೆಡ್ಡು ಹೊಡೆದಿದ್ದಾರೆ. ಜೋಶಿ ಮಗಳ ಮದುವೆಗೆ ಹೋದಾಗ ಸ್ವಜಾತಿ ಬ್ರಾಹ್ಮಣ ಸ್ವಾಮಿಗಳಿಗೆ ಅಪಾರ ಗೌರವಾದರ ನೀಡಿದರೆ ಲಿಂಗಾಯತ ಸ್ವಾಮಿಗಳನ್ನು ತಾತ್ಸಾರದಿಂದ ನೋಡಲಾಯಿತಂತೆ; ಜತೆಗೆ ಯಾವುದೋ ಕೆಲಸಕ್ಕೆ ದಿಂಗಾಲೇಶ್ವರರು ಕೇಂದ್ರ ಮಂತ್ರಿ-ಸಂಸದ ಜೋಶಿಯನ್ನು ಸಂಧಿಸಿದಾಗ “ನಾನೇಕೆ ನಿಮ್ಮ ಕೆಲ್ಸ ಮಾಡಬೇಕು? ನಿಮ್ಮ ಲಿಂಗಾಯತ ಲೀಡರ್‌ಗಳಿಲ್ಲೇನು?”ಎಂದು ತುಚ್ಚೀಕರಿಸಿದ್ದು ದಿಂಗಾಲೇಶ್ವರ ದಾಳಿಗೆ ಮೂಲವೆಂಬ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ದಿಂಗಾಲೇಶ್ವರ ಸ್ವಾಮಿ ಅದ್ಯಾಕೋ ಕೊನೆಗಳಿಗೆಯಲ್ಲಿ ಯು-ಟರ್ನ್ ಹೊಡೆದು ಕಣದಿಂದ ಹಿಂದೆ ಸರಿದರೂ ಲಿಂಗಾಯತರಲ್ಲಿ ಜೋಶಿ “ದ್ರೋಹ”ದ ಜಾಗೃತಿ ಮೂಡಿಸುತ್ತಿದ್ದಾರೆ. ದಿಂಗಾಲೇಶ್ವರ ಸ್ವಾಮಿ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿರುವುದರಿಂದ ಜೋಶಿ ಜೋಶ್ ಇಳಿದುಹೋಗಿದೆ; ದಿಂಗಾಲೇಶ್ವರ “ಫ್ಯಾಕ್ಟರ್” ಜೋಶಿಗೆ ದುಬಾರಿಯಾಗುತ್ತಿದೆ. ಕ್ಷೇತ್ರದಲ್ಲಿ ಶೇ.40ರಷ್ಟಿರುವ ಲಿಂಗಾಯತ ಮತ ಬುಟ್ಟಿಯಲ್ಲಿ ಸಣ್ಣ ಪಾಲು ಕಾಂಗ್ರೆಸ್‌ಗೆ ಹೋದರೂ ಜೋಶಿಗೆ ಗಂಡಾಂತರವೇ ಎಂದು ರಾಜಕೀಯ ವಿಶ್ಲೇಷಣೆಗಳು ನಡೆದಿವೆ.

ದಿಂಗಾಲೇಶ್ವರ ಸ್ವಾಮಿ

ಕೇಂದ್ರ ಮಂತ್ರಿ ಜೋಶಿಯವರ ಉದಾಸೀನದಿಂದ ಮಹದಾಯಿ ಯೋಜನೆ ಕಾರ್ಯಗತವಾಗದೆ ನೆನೆಗುದಿಗೆ ಬಿದ್ದಿದೆಯೆಂಬ ಬೇಸರ ಜಿಲ್ಲೆಯ ರೈತರಲ್ಲಿ ಮಡುಗಟ್ಟಿದೆ. ಸಣ್ಣದೊಂದು ಪರಿಸರ ಇಲಾಖೆಯ ಪರವಾನಗಿ ಇಲ್ಲದೆ ಮಹದಾಯಿ ಯೋಜನೆ ಸ್ಥಗಿತವಾಗಿದೆ. ಇದು ಕೇಂದ್ರ ಸಚಿವ ಜೋಶಿ ಮಾಡಬೇಕಾಗಿದ್ದ ಕೆಲಸ. ಪ್ರಧಾನ ಮಂತ್ರಿಯ ಆಪ್ತ ವಲಯದಲ್ಲಿದ್ದರೂ ಜೋಶಿ ನೆರವಾಗುತ್ತಿಲ್ಲವೆಂದು ಎಂಬ ಸಿಟ್ಟು ರೈತರಲ್ಲದೆ. ಮಹದಾಯಿ ಯೋಜನೆಗಾಗಿ ಹೋರಾಡುತ್ತಾ ಬಂದಿರುವ ರೈತರು ಕೆಲವು ದಿನಗಳ ಹಿಂದೆ ಒಟ್ಟಿಗೆ ಸೇರಿ ಕಾಂಗ್ರೆಸ್‌ಗೆ ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ. ಹಿಂದುತ್ವ ರಾಜಕಾರಣದಲ್ಲಿರುವ ಆಸಕ್ತಿಯ ಕಾಲುಭಾಗದಷ್ಟೂ ಕ್ಷೇತ್ರ ಕಾಳಜಿ ಜೋಶಿಯಲ್ಲಿಲ್ಲವೆಂದು ಜನರು ಹೇಳುತ್ತಾರೆ. ಮಹತ್ವದ ಧಾರವಾಡ-ಬೆಳಗಾವಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಕುಂಟುತ್ತಾ ಸಾಗಿದೆ. ವಿಧಿ ವಿಜ್ಞಾನ ವಿ.ವಿ. ಶಂಕುಸ್ಥಾಪನೆಯಾಗಿದ್ದರೂ ಕಟ್ಟಡ ಕೆಲಸ ತಡವಾಗುತ್ತಿದೆ. ಹಳಿಯಾಳ ರಸ್ತೆಯ ಕೆಳ ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ಇದೆಲ್ಲ ಜೋಶಿ ವೈಫಲ್ಯಕ್ಕೆ ಸ್ಯಾಂಪಲ್ ಎಂಬ ಮಾತ ಸಾಮಾನ್ಯವಾಗಿದೆ.

ಅಭದ್ರತೆಯಲ್ಲಿ ಮಂಕಾಗಿದ್ದ ಜೋಶಿ ಪರಿವಾರಕ್ಕೆ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ನಂತರ ಒಂಚೂರು ಚೈತನ್ಯ ಬಂದಿದೆ ಎಂಬ ಚರ್ಚೆ ರಾಜಕೀಯ ಕಟ್ಟೆಯಲ್ಲಿ ಆಗುತ್ತಿದೆ. ಮುಸ್ಲಿಮ್ ಹುಡುಗ ಈ ಬರ್ಬರ-ಹೇಯ-ಅಮಾನುಷ ಕೃತ್ಯ ಮಾಡಿರುವುದು ಬಿಜೆಪಿಗರಿಗೆ ಮತೀಯ ಧ್ರುವೀಕರಣಕದ ಧರ್ಮತಂತ್ರಕ್ಕೆ ಅನುಕೂಲವಾಗಿದೆ. ಸೋಲುವ ಆತಂಕದಲ್ಲಿದ್ದ ಸಂಘಿಗಳ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶದಲ್ಲಿ ಹಿಂದುತ್ವಕ್ಕೆ ದೊಡ್ಡ ಪ್ರಮಾಣದ ಅದೃಶ್ಯ ಮತದಾರರಿದ್ದಾರೆ; ಗ್ರಾಮೀಣ ಭಾಗದಲ್ಲಿ ಜೋಶಿಯ ಬ್ರಾಹ್ಮಣ ಬಳಗ ಲಿಂಗಾಯತರ ಹಿತಶತ್ರುಗಳೆಂಬ ಅಂಡರ್‌ಕರೆಂಟ್ ಹರಿದಾಡುತ್ತಿದೆ.

ಕಾಂಗ್ರೆಸ್ ಕತೆ

ಮಹಾಪ್ರಭುವಿನ ಪರಮಾಪ್ತ ಮಂತ್ರಿ ಮಾಂಡಲೀಕನ ಆಸ್ಥಾನವೆಂಬ ಕಾರಣಕ್ಕೆ ಧಾರವಾಡ ಲೋಕಸಭಾ ಕ್ಷೇತ್ರ ಕುತೂಹಲ-ಪ್ರತಿಷ್ಠೆಯ ರಣಕಣವಾಗಿದೆ! ಕಾಂಗ್ರೆಸ್ ಕೂಡ ಈ ಬಾರಿ ಸಮರ ತಂತ್ರ ಬದಲಿಸಿ ಗೆಲ್ಲಲೇಬೇಕೆಂಬ ಜಿದ್ದಾಜಿದ್ದಿಗೆ ಬಿದ್ದಿದೆ. 1999ರ ಚುನಾವಣೆಯಿಂದ ಐದು ಬಾರಿ ಬಹುಸಂಖ್ಯಾತ ಲಿಂಗಾಯತ ಸಮುದಾಯ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದರೂ ಕೈಸುಟ್ಟುಕೊಂಡಿದ್ದ ಕಾಂಗ್ರೆಸ್ ಹಿರಿಯರು ಈ ಸಲ ಕುರುಬ ಸಮುದಾಯದ ಯುವಕ ವಿನೋದ್ ಅಸೂಟಿಗೆ ಟಿಕೆಟ್ ಕೊಟ್ಟಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ್, ಮಾಜಿ ಸಚಿವ-ಹಾಲಿ ಶಾಸಕ ವಿನಯ್ ಕುಲಕರ್ಣಿ ಮತ್ತು ವಿನಯ್ ಮಡದಿ ಶಿವಲೀಲಾ ಹೆಸರು ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿ ಕೇಳಿಬಂದಿತ್ತು. ಇವರೆಲ್ಲ ಲಿಂಗಾಯತರಾಗಿದ್ದರು. ಈಚೆಗಷ್ಟೇ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷನಾಗಿ ನೇಮಿಸಲ್ಪಟ್ಟಿದ್ದ ವಿನೋದ್ ಅಸೂಟಿ ಮುಖ್ಯಮಂತ್ರಿ ಸಿದ್ದುರ ನೀಲಿಗಣ್ಣಿನ ಹುಡುಗ; ಸಿದ್ದು ನಿಷ್ಠ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ್ ಲಾಡ್ ಕಾಂಗ್ರೆಸ್ ಗೆಲ್ಲಿಸಲು ಟೊಂಕಕಟ್ಟಿ ನಿಂತಿದ್ದಾರೆ.

ಕಳೆದ ನಾಲ್ಕೈದು ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ ಈ ಸಲ ಹಲವು ಅನುಕೂಲಕರ ಪರಿಸ್ಥಿತಿಯಲ್ಲಿದೆ. ಸಂಸದೀಯ ಕ್ಷೇತ್ರ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ತಲಾ ನಾಲ್ಕರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎಮ್ಮೆಲ್ಲೆಗಳಿದ್ದಾರೆ. ಅಂದರೆ ವಿರೋಧಿ ಪಡೆಗಳು ಸಮ ಬಲದಲ್ಲಿರುವಂತೆ ಕಾಣಿಸುತ್ತದೆ. ಆದರೆ ಶಿಗ್ಗಾವಿ ಶಾಸಕ ಬಸವರಾಜ್ ಬೊಮ್ಮಾಯಿ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿರುವುದರಿಂದ ಜೋಶಿಗೆ ಮೈನಸ್; ಇಲ್ಲಿಯ ಪಂಚಮಸಾಲಿ ಮತದಾರರಿಗೆ ಜೋಶಿ ಬಗ್ಗೆ ಸಮಾಧಾನವಿಲ್ಲ ಎನ್ನಲಾಗುತ್ತಿದೆ. ತಮಗೆ ಮಗ್ಗಲುಮುಳ್ಳಾಗಿರುವ ಬ್ರಾಹ್ಮಣರ ಜೋಶಿಗಿಂತ ಕುರುಬರ ಹುಡುಗ ಅಸೂಟಿಯೇ ಬೆಟರ್ ಎಂದು ಲಿಂಗಾಯತರಿಗೆ ಅನಿಸುವ ಸಾಧ್ಯತೆಯ ಸೂಚನೆ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ದಿಂಗಾಲೇಶ್ವರ ಸ್ವಾಮಿ ಅಂಡ್ ಲಿಂಗಾಯತ್ ಸನ್ಯಾಸಿ ಟೀಮ್ ಕಾರ್ಯಾಚರಣೆಯೂ ನಡೆಯಲಿದೆ ಎನ್ನಲಾಗುತ್ತಿದೆ. ಮುಸ್ಲಿಮ್ ಮತ್ತು ಕುರುಬರ ಮತ ದಂಡಿಯಾಗಿ ಗಿಟ್ಟಿಸುವ ಕಾಂಗ್ರೆಸ್ ಸಾರಾಸಗಟಾಗಿ ಬಿಜೆಪಿಗೆ ಹೋಗುವ ಲಿಂಗಾಯತರ ಮತದ ಗಂಟನ್ನು ಸ್ವಲ್ಪ ಒಡೆದರೂ ಸಾಕು ಗೆಲುವಿನ ಅಂಚಿಗೆ ಬರುತ್ತದೆ ಎಂಬುದು ಲೆಕ್ಕಾಚಾರವಿದೆ. ಆದರೆ ಚುನಾವಣೆಯೆಂದರೆ ಗಣಿತ ಶಾಸ್ತ್ರವಲ್ಲ; ಧಾರವಾಡ ಕ್ಷೇತ್ರದಲ್ಲಂತೂ ಧರ್ಮ-ಜಾತಿ-ದುಡ್ಡು ಮತ್ತು ಎದುರಾಳಿಗಳ ಗುಣಾವಗುಣದ ಸೂತ್ರ-ಸಮೀಕರಣದ ರಸಾಯನಶಾಸ್ತ್ರ. ಧಾರವಾಡದ ಕೇಸರಿ ಕೋಟೆ ಬೇಧಿಸುವುದು ಸುಲಭವಲ್ಲ; ಹಾಗಂತ ತೀರಾ ಅಸಾಧ್ಯವೂ ಏನಲ್ಲ.

ಧಾರವಾಡ ಕ್ಷೇತ್ರ ಉಳಿಸಿಕೊಳ್ಳುವುದು ಆರ್‌ಎಸ್‌ಎಸ್‌ಗೆ ಪ್ರತಿಷ್ಠೆಯ ಸವಾಲಾಗಿದೆ. ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಜೋಶಿ ದೋಷ ಹೇಳುತ್ತ ಬಂಡೆದ್ದಿದ್ದ ಜಗದೀಶ್ ಶೆಟ್ಟರ್‌ರನ್ನು ಹಠಕ್ಕೆಬಿದ್ದು ಧಾರವಾಡ-ಹುಬ್ಬಳ್ಳಿ ಕೇಂದ್ರ ಕ್ಷೇತ್ರದಲ್ಲಿ ಮಣಿಸಿದ್ದ ಸಂಘಿ ಬ್ರಾಹ್ಮಣ ಪಡೆ ಈಗ ಜೋಶಿಯನ್ನು ಗೆಲ್ಲಿಸುವ ಜಿದ್ದಿಗೆ ಬಿದ್ದಿದೆ. ದಿಂಗಾಲೇಶ್ವರ ಸ್ವಾಮಿಯ ಕಾವಿ ಟೀಮು ಲಿಂಗಾಯತರನ್ನು ಯಾವ ಪ್ರಮಾಣದಲ್ಲಿ “ಜಾಗೃತ”ಗೊಳಿಸುತ್ತದೆ ಎಂಬುದರ ಮೇಲೆ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧಾರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗೆಲ್ಲುವುದು ಬ್ರಾಹ್ಮಣ ಪ್ರತಿಷ್ಠೆಯೋ? ಲಿಂಗಾಯತ ಪ್ರಜ್ಞೆಯೋ? ಎಂಬ ಕುತೂಹಲ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read