Homeಕರ್ನಾಟಕದಕ್ಷಿಣ ಕನ್ನಡ "ಲೋಕ" ಪಂದ್ಯ: ಕೇಸರಿ ಪಡೆಗೇ ಬೇಡವಾದ ನಳಿನ್; ಬಿಲ್ಲವ ಅಭ್ಯರ್ಥಿ ಅರಸುತ್ತಿರುವ ಕಾಂಗ್ರೆಸ್

ದಕ್ಷಿಣ ಕನ್ನಡ “ಲೋಕ” ಪಂದ್ಯ: ಕೇಸರಿ ಪಡೆಗೇ ಬೇಡವಾದ ನಳಿನ್; ಬಿಲ್ಲವ ಅಭ್ಯರ್ಥಿ ಅರಸುತ್ತಿರುವ ಕಾಂಗ್ರೆಸ್

- Advertisement -
- Advertisement -

ಅರಬ್ಬೀ ಸಮುದ್ರ-ಸಹ್ಯಾದ್ರಿ ಗಿರಿಶ್ರೇಣಿಯ ನಡುವೆ ಮೈಚಾಚಿರುವ ತೆಂಗು-ಕಂಗು-ಮೀನಿನ ಸೀಮೆ ದಕ್ಷಿಣ ಕನ್ನಡದಲ್ಲೀಗ “ಲೋಕ” ಕದನ ಕುತೂಹಲಕಾರಿಯಾಗಿದೆ. ದಕ್ಷಿಣ ಕನ್ನಡದಿಂದ ಜನತಂತ್ರ ಮಾಯವಾಗಿ ಮೂರೂಕಾಲು ದಶಕವೇ ಕಳೆದುಹೋಗಿದೆ. ಇಲ್ಲಿರುವುದು ಬಹುಸಂಖ್ಯಾತ ಶೂದ್ರಾದಿಗಳ ದಿಕ್ಕು ತಪ್ಪಿಸಿ ಮೇಲ್ವರ್ಗದ ಬಲಾಢ್ಯರು ಅಧಿರಕ್ಕೇರುವ ಧರ್ಮತಂತ್ರ! ಆಚೀಚೆಯ ಜಿಲ್ಲೆಯವರಿಗೆ ದಕ್ಷಿಣ ಕನ್ನಡ ಮುಂದುವರಿದ ಪ್ರದೇಶದಂತೆ ಭಾಸವಾಗುತ್ತದೆ. ಆದರೆ ಬಿಟ್ಟೂಬಿಡದೆ ಜಿಲ್ಲೆಯ ಉದ್ದಗಲಕ್ಕೆ ನಡೆಯುವ ಕೌ ಬ್ರಿಗೇಡ್ ಮತ್ತು ಅನೈತಿಕ ಪೊಲೀಸ್ ಪಡೆಯ ಕೋಮು ಕ್ರೌರ್ಯದ ಹಾವಳಿಗೆ ಇಲ್ಲಿಯ ಸಾಮಾಜಿಕ-ಆರ್ಥಿಕ ಬದುಕು ಹೈರಾಣಾಗಿಹೋಗಿದೆ. ಮನುಷ್ಯ ಮನಸ್ಸುಗಳು ಚೂರಾಗಿ ನೆಮ್ಮದಿ ನಾಸ್ತಿಯಾಗಿದೆ. ವ್ಯವಹಾರ-ಉದ್ಯಮ ಬರ್ಕತ್ತಾಗುತ್ತಿಲ್ಲ. ಕೋಮುಗಲಭೆಗೆ ಅಂಜಿ ಉದ್ಯಮಿಗಳು ಮಂಗಳೂರಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ; ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಆರೆಸ್ಸಸ್-ಪಿಎಫ್‌ಐನಂಥ ಸಂಘಟನೆಗಳು ಅಮಾಯಕರ ಭಾವನೆಗಳನ್ನು ಕೆರಳಿಸಿ ಬೇಳೆಬೇಯಿಸಿಕೊಳ್ಳುತ್ತಿವೆ; ಅಭಿವೃದ್ಧಿ-ಪ್ರಗತಿ-ನೆಮ್ಮದಿಗೆ ಮಾರಕವಾದ ಹಿಂದುತ್ವವನ್ನು ಹೊಟ್ಟೆ ತುಂಬ ಉಣಿಸಿ ಬರಡು ನೆಲದಲ್ಲಿ ಬಿಜೆಪಿ-ಆರೆಸ್ಸೆಸ್ ಪರಿವಾರ ಧರ್ಮಕಾರಣದ ಭರ್ಜರಿ ಕೊಯ್ಲು ಮಾಡುತ್ತಿದೆ ಎಂದು ಜಿಲ್ಲೆಯ ಆರ್ಥಿಕ-ಸಾಮಾಜಿಕ ಸ್ಥಿತಿ-ಗತಿ ಬಲ್ಲ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಇಂತಿಪ್ಪ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಪಾರ್ಲಿಮೆಂಟ್ ಇಲೆಕ್ಷನ್‌ಗೆ ಅಖಾಡ ಅಣಿಯಾಗುತ್ತಿದೆ. ತಮಾಷೆಯೆಂದರೆ, ಕೇಸರಿ ತಂಡಗಳಲ್ಲಿ ರಣೋತ್ಸಾಹ ಉಕ್ಕುತ್ತಿದ್ದರೂ ಬಿಜೆಪಿ ಭೂಪರು ಮಾತ್ರ ಭಿನ್ನಮತದ ಬೆಂಕಿ ಆರಿಸಿ ಲೋಕ ಸಮರ ಎದುರಿಸಬೇಕಾದ ಸಂಕಷ್ಟದಿಂದ ಮಂಕಾಗಿದ್ದಾರೆ; ಸರಣಿ ಸೋಲಿನಿಂದ ಕಳೆಗುಂದಿರುವ ಕಾಂಗ್ರೆಸ್ ಹಿಂದುತ್ವದ ಹಿಕಮತ್ತಿಗೆ ಎದೆಯೊಡ್ಡಿ ನಿಲ್ಲಬಲ್ಲ ಹುರಿಯಾಳಿನ ತಲಾಷ್‌ನಲ್ಲೇ ಇನ್ನಷ್ಟು ಜರ್ಜರಿತವಾಗಿಹೋಗಿದೆ. ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿಯ ದಕ್ಷಿಣ ಕನ್ನಡ ಯುದ್ಧಾಂಗಣದಲ್ಲಿ ಪಕ್ಷ ಸಿದ್ಧಾಂತ, ಜಾತಿ ಸೂತ್ರಗಳೆಲ್ಲ ಲೆಕ್ಕಕ್ಕಿಲ್ಲ. ಇಲ್ಲೇನಿದ್ದರೂ ಸಂಘ ಪರಿವಾರ ಹುಟ್ಟುಹಾಕಿರುವ ಇಸ್ಲಮೋಫೋಬಿಕ್ ಧರ್ಮಕಾರಣದ ಏಕಸ್ವಾಮ್ಯದ ಜಿದ್ದಾಜಿದ್ದಿ!

ಜಾತಿಗಣಿತ ಸರಿಗೂಡುವುದಿದ್ದರೆ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಬಿಲ್ಲವ ಸಮುದಾಯದ ಪ್ರಾಮಾಣಿಕ-ಜನಪರ ಚಿಂತನೆಯ ಜನಾರ್ದನ ಪೂಜಾರಿ ನಿರಂತರವಾಗಿ ಸೋಲುವುದು ಸಾಧ್ಯವೇ ಇರಲಿಲ್ಲ; ಮತ್ತೆಮತ್ತೆ ಧನಂಜಯ್ ಕುಮಾರ್, ನಳಿನ್ ಕುಮಾರ್ ಕಟೀಲ್‌ನಂಥ ಕರ್ಮಗೇಡಿಗಳು ಗೆಲ್ಲುತ್ತಿರಲಿಲ್ಲ. ಭದ್ರ ಕೇಸರಿ ಕೋಟೆ ಎನ್ನಲಾಗುತ್ತಿರುವ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಮತ್ತು ಸರಿಸುಮಾರು ಅಷ್ಟೇ ಪ್ರಮಾಣದಲ್ಲಿರುವ ಮುಸಲ್ಮಾನ್ ಮತಗಳು ಕ್ರೋಢೀಕರಣವಾದರೆ ಬಿಜೆಪಿಗೆ ಎಂದೆಂದಿಗೂ ಜಯವಿಲ್ಲ. ಆದರೆ ಬಹುಸಂಖ್ಯಾತ ಹಿಂದುಳಿದ ವರ್ಗದ ಬಿಲ್ಲವರಲ್ಲಿ ಮುಸ್ಲಿಮ್ ದ್ವೇಷ ಬಿತ್ತಿ, ಅವರ ಮತಗಳನ್ನು ಸೆಳೆಯಲು ಸಫಲವಾಗಿರುವ ಸಂಘ ಪರಿವಾರ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಆರೆಸ್ಸೆಸ್ ಮುಂದಾಳು ಕಲ್ಲಡ್ಕ ಪ್ರಭಾಕರ್ ಭಟ್ಟರ ಹಿಡನ್ ಅಜೆಂಡಾ ಅರ್ಥಮಾಡಿಕೊಳ್ಳಲು ವಿಫಲವಾಗಿರುವ ಬಿಲ್ಲವ ಸಮೂಹ ಬಿಜೆಪಿ ದಿಗ್ವಿಜಯದ ನಿರ್ಣಾಯಕ ಮತ ಬುಟ್ಟಿಯಾಗಿದ್ದಾರೆ ಎಂಬುದು ಜಿಲ್ಲೆಯ ಸಾಮಾನ್ಯ ರಾಜಕೀಯ ಜ್ಞಾನ.

ಕ್ಷೇತ್ರದ ಆಯ-ಆಕಾರ

ದಕ್ಷಿಣ ಕನ್ನಡ 1950ರ ದಶಕದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ “ದಕ್ಷಿಣ ಕೆನರಾ” ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. ಆಗ ದಕ್ಷಿಣ ಕೆನರಾ ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಹಾಗು ಕುಞಂಗಾಡು ತಾಲೂಕುಗಳನ್ನು ಒಳಗೊಂಡಿತ್ತು. ಭಾಷಾವಾರು ರಾಜ್ಯ ರಚನೆ ತರುವಾಯ ದಕ್ಷಿಣ ಕೆನರಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. ಕಾಸರಗೋಡು ಮತ್ತು ಕುಞಂಗಾಡು ಕೇರಳಕ್ಕೆ ಸೇರ್ಪಡೆಯಾಗಿ ಕಾಸರಗೋಡು ಪಾರ್ಲಿಮೆಂಟ್ ಕ್ಷೇತ್ರ ವ್ಯಾಪ್ತಿಗೆ ಬಂತು. 1957ರ ಚುನಾವಣಾ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಅಂದಿನ ಮಂಗಳೂರು, ಉಳ್ಳಾಳ, ವಿಟ್ಲ, ಪುತ್ತೂರು ಮತ್ತು ಸುಳ್ಯ ಅಸೆಂಬ್ಲಿ ಕ್ಷೇತ್ರಗಳೊಂದಿಗೆ ಕೊಡಗಿನ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಗಳನ್ನು ಸೇರಿಸಿ “ಮಂಗಳೂರು” ಲೋಕ ಅಖಾಡ ಅಣಿಗೊಳಿಸಲಾಯಿತು. ಸಂಸದೀಯ ಕ್ಷೇತ್ರಗಳ ಪುನರ್ ವಿಂಗಡನಾ ಆಯೋಗ 2008ರಲ್ಲಿ ಮಂಗಳೂರು “ಪಿಚ್”ನ ಚಹರೆ ಬದಲಿಸಿದೆ. ಮಂಗಳೂರು ಕ್ಷೇತ್ರದೊಂದಿಗಿದ್ದ ಕೊಡಗನ್ನು ಮೈಸೂರಿಗೆ ಸೇರಿಸಲಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿದ್ದ ಬೆಳ್ತಂಗಡಿಯೂ ಒಳಗೊಂಡಂತೆ ದಕ್ಷಿಣ ಕನ್ನಡದ ಅಷ್ಟೂ ತಾಲೂಕುಗಳಿರುವ ಹೊಸ ಕುಸ್ತಿ ಕಣಕ್ಕೆ “ದಕ್ಷಿಣ ಕನ್ನಡ” ಎಂದು ನಾಮಕರಣ ಮಾಡಲಾಗಿದೆ.

ಮಂಗಳೂರು ಅಥವಾ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೆಂದರೆ ಲಾಗಾಯ್ತಿನಿಂದಲೂ ಶೇಂದಿ ಇಳಿಸುವ, ಗೇಣಿ ರೈತರ ಶೋಷಿತ-ಹಿಂದುಳಿದ ವರ್ಗದ ಬಿಲ್ಲವ(ಈಡಿಗ)ರ ಪ್ರಾಬಲ್ಯದ ಪ್ರದೇಶ. 1980ರ ದಶಕದಲ್ಲಿ ಮಂಗಳೂರು ಕ್ಷೇತ್ರ ತುಳುನಾಡಿನ ಶೋಷಿತ-ಹಿಂದುಳಿದ ಬಿಲ್ಲವ ಸುಮುದಾಯದ ರಾಜಕೀಯ “ಅಸ್ಮಿತೆ”ಯ ಆಸ್ಥಾನವೆನಿಸಿತ್ತು; ಬಿಲ್ಲವರಲ್ಲಿ ಹಿಂದಿಳಿದಿರುವಿಕೆಯ “ಪ್ರಜ್ಞೆ” ಇತ್ತು. ಈ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೀಗ ಸಂಘಪರಿವಾರದ ಹಿಂದುತ್ವದ ಘನಘೋರ ಕಾಳಗದ ಕಾಲಾಳು ಪಡೆಯಲ್ಲಿ ಹಿಂದುತ್ವದ ಸಾಬೂನಿನಿಂದ ಬ್ರೈನ್‌ವಾಶ್ ಮಾಡಲಾದ ಬಿಲ್ಲವ ತರುಣರೇ ಬಹುತೇಕ ತುಂಬಿರುವುದು ವಿಪರ್ಯಾಸ. ಧರ್ಮಸ್ಥಳ ಸಂಸ್ಥಾನವೇ ಮುಂತಾದ ಬ್ರಾಹ್ಮಣಿಕೆ ಶಕ್ತಿಗಳ ಕೆಂಗಣ್ಣಿಗೆ ತುತ್ತಾಗಿದ್ದ ಜಾತ್ಯತೀತ ನಿಷ್ಠುರ ನೀತಿ-ನಿಲುವಿನ ಬಿಲ್ಲವ ಮುಖಂಡ ಜನಾರ್ದನ ಪೂಜಾರಿರವರನ್ನು ಹಿಮ್ಮೆಟ್ಟಿಸಲು ಸಂಘ ಪರಿವಾರದ ಸೂತ್ರದಾರರು ಬಿಲ್ಲವರಲ್ಲಿ ಹಿಂದುತ್ವದ ಗೊಂದಲ ಮೂಡಿಸಿದರು. ಅನಂತರ ಬಿಜೆಪಿ ಬಿಲ್ಲವರನ್ನು ಬಳಸಿ ಬಿಸಾಕುತ್ತಲೇ ಬಂದಿದೆ; ಎಂಪಿ ಟಿಕೆಟ್ ಕೊಡದೆ ಮೋಸ ಮಾಡುತ್ತಿದೆ ಎಂಬ ತರ್ಕ ಜಿಲ್ಲೆಯಲ್ಲಿದೆ.

ಇಪ್ಪತ್ತು ಲಕ್ಷದಷ್ಟು ಮತದಾರಿರುವ ದಕ್ಷಿಣ ಕನ್ನಡದಲ್ಲಿ 5.20 ಲಕ್ಷ ಬಿಲ್ಲವರು, 4.90 ಲಕ್ಷ ಮುಸಲ್ಮಾನರು, 3.90 ಲಕ್ಷ ಬಂಟರು, 1.30 ಲಕ್ಷ ಬ್ರಾಹ್ಮಣರು, 1.50 ಲಕ್ಷ ದಲಿತರು, 1.80 ಲಕ್ಷ ಕ್ರೈಸ್ತರು, 80 ಸಾವಿರ ಒಕ್ಕಲಿಗರು ಮತ್ತು 50 ಸಾವಿದಷ್ಟು ಇತರ ಸಣ್ಣಪುಟ್ಟ ಜಾತಿಯ ಮತದಾರರು ಇರುವ ಅಂದಾಜಿದೆ. ಜಾತಿ ಅಂಕಿ-ಸಂಖ್ಯೆಗಳೇನೇ ಇರಲಿ, ದಕ್ಷಿಣ ಕನ್ನಡದಲ್ಲಿ ಚುನಾವಣಾ ಪಂದ್ಯಾಟ ಏರ್ಪಡುವುದು ಮಾತ್ರ ಸಂಘಪರಿವಾರದ ಹಿಂದುತ್ವದ ಇವೆಂಟ್ ಮ್ಯಾನೇಜ್ಮೆಂಟ್‌ನ ಬಿಸ್ನೆಸ್‌ಸ್ಕಿಲ್ ಆಧಾರದ ಮೇಲಷ್ಟೇ.

ಪೂಜಾರಿ ಪ್ರವೇಶ

1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ಆರ್.ಆಚಾರ್ ಮಂಗಳೂರು ಕ್ಷೇತ್ರದ ಮೊದಲ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಕಾಂಗ್ರೆಸ್‌ನ ಎ.ಶಂಕರ್ ಆಳ್ವ 1962ರಲ್ಲಿ ಆಯ್ಕೆಯಾಗಿದ್ದರು. 1952-59ರವರೆಗೆ ಕೊಡಗಿನ ಮುಖ್ಯ ಮಂತ್ರಿ-ನಂತರ ಮೈಸೂರು ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಯಾಗಿದ್ದ ಚೆಪ್ಪುಡಿರ ಮುತ್ತಣ್ಣ ಪೂಣಚ್ಚ 1967-71ರ ತನಕ ಮಂಗಳೂರನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. 1967-69ರಲ್ಲಿ ಕೇಂದ್ರದ ರೇಲ್ವೆ ಸಚಿವರೂ ಆಗಿದ್ದರು. 1991ರ ಇಲೆಕ್ಷನ್ ಸಂದರ್ಭದಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಪೂಣಚ್ಚ ಇಂದಿರಾ ಗಾಂಧಿ ವಿರೋಧಿ ಬಣ-ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದರು. ಹೀಗಾಗಿ ಮೈಸೂರು ವಿಧಾನ ಪರಿಷತ್ ಸಭಾಪತಿಯಾಗಿದ್ದ ಕೆ.ಕೆ.ಶೆಟ್ಟಿಯವರಿಗೆ 1970ರಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯಿತು. ಸಂಸ್ಥಾ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಪೂಣಚ್ಚರನ್ನು 1,21,230 ಮತಗಳ ಅಗಾಧ ಅಂತರದಲ್ಲಿ ಮಣಿಸಿದ ಕೆ.ಕೆ.ಶೆಟ್ಟಿ ಎಂಪಿಯಾದರು.

ಕೆ.ಕೆ.ಶೆಟ್ಟರ ಬಳಿಕ ಸತತ ನಾಲ್ಕು ಬಾರಿ “ಸಾಲ ಮೇಳ” ಖ್ಯಾತಿಯ ಕೇಂದ್ರದ ಮಾಜಿ ಬ್ಯಾಂಕಿಂಗ್(ಹಣಕಾಸು) ಸಚಿವ ಜನಾರ್ದನ ಪೂಜಾರಿ ಮಂಗಳೂರಿನ ಸಂಸದರಾಗಿದ್ದರು. ಗೇಣಿದಾರ ರೈತರಿಗೆ ಪುಕ್ಕಟೆಯಾಗಿ ಕಾನೂನು ನೆರವು ನೀಡುತ್ತ ಬಡವರ್ಗದಲ್ಲಿ ಜನಾನುರಾಗಿಯಾಗಿದ್ದ ವಕೀಲ ಬಿ.ಜನಾರ್ದನ ಪೂಜಾರಿಗೆ 1977ರಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿಸಿತು. ಬಿಲ್ಲವ ಬಾಹುಳ್ಯದ ಮಂಗಳೂರು ಕ್ಷೇತ್ರದಲ್ಲಿ ಆ ಸಮುದಾಯದ ಜನಪರ ಬದ್ಧತೆಯ ಪೂಜಾರಿಯವರನ್ನು ಅಭ್ಯರ್ಥಿಯಾಗಿಸಿ ಸುಲಭವಾಗಿ ಕಾಂಗ್ರೆಸನ್ನು ಗೆಲ್ಲಿಸುವ ಸ್ಟಾಟರ್ಜಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಹೆಣೆದಿದ್ದರು. ಪೂಜಾರಿಗೆ ಭಾರತೀಯ ಲೋಕ ದಳದ ಹುರಿಯಾಳಾಗಿ ಕೊಡಗಿನ ಎ.ಕೆ.ಸುಬ್ಬಯ್ಯ (1,55,130) ಮುಖಾಮುಖಿಯಾಗಿದ್ದರು. ಕಾಂಗ್ರೆಸ್‌ನ ಪೂಜಾರಿ 78,328 ಮತದಂತರದಿಂದ ಆಯ್ಕೆಯಾದರು.

ಜನಾರ್ದನ ಪೂಜಾರಿ

1980ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪೂಜಾರಿಗೆ ದಕ್ಷಿಣ ಕನ್ನಡದ ಅಂದಿನ ಪ್ರಭಾವಿ ಆರೆಸ್ಸೆಸ್ಸಿಗ-ಜನಸಂಘಿ ಕರಂಬಳ್ಳಿ ಸಂಜೀವ ಶೆಟ್ಟಿ ಜನತಾ ಪಕ್ಷದ ಹುರಿಯಾಳಾಗಿ ಸೆಡ್ಡು ಹೊಡೆದಿದ್ದರು. ಅರಸು ಕಾಂಗ್ರೆಸ್‌ನಿಂದ ಬಂಟ್ವಾಳದ ಶಾಸಕ ಬಿ.ಎ.ಮೊಯ್ದೀನ್(36,628) ಸ್ಪರ್ಧಿಸಿದ್ದರು. ಮೇಲ್ನೋಟಕ್ಕೆ ತ್ರಿಕೋನ ಕಾಳಗದ ಭ್ರಮೆ ಮೂಡಿಸಿದ್ದ ಈ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ ಪೂಜಾರಿ(2,49,283) ಸಂಘ ಪರಿವಾರದ ಕರಂಬಳ್ಳಿ ಸಂಜೀವ ಶೆಟ್ಟರನ್ನು 1,28,897 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿ ಸಂಸತ್ ಸದಸ್ಯರಾದರು. ಪೂಜಾರಿಗೆ ಪ್ರಧಾನಿ ಇಂದಿರಾ ಗಾಂಧಿ ಹಣಕಾಸು ಇಲಾಖೆಯ ಬ್ಯಾಂಕಿಂಗ್ ರಾಜ್ಯ ಸಚಿವ ಸ್ಥಾನ ನೀಡಿದರು. ಬ್ಯಾಂಕುಗಳು ಸಾಲ ಕೇಳಿಬರುವ ಜನಸಾಮಾನ್ಯರನ್ನು ಅವಮಾನಿಸಿ ಕಳಿಸುತ್ತಿದ್ದ ದಿನಮಾನವದು. ಸ್ವಯಂ ಉದ್ಯೋಗ ಮಾಡವ ಯೋಚನೆಯ ಬಡವರನ್ನು ಬ್ಯಾಂಕ್ ಆಡಳಿತ ಹೀನಾಯವಾಗಿ ಪರಿಗಣಿಸುತ್ತಿದ್ದ ನೋವು ಅರಿತಿದ್ದ ಸಚಿವ ಪೂಜಾರಿ ದೇಶಾದ್ಯಂತ ಬಡವರಿಗೆ “ಸಾಲಮೇಳ” ಏರ್ಪಡಿಸಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಒದಗಿಸುವಂತೆ ನೋಡಿಕೊಂಡಿದ್ದರು. ದುರ್ಬಲರ ಪರವಾದ ನೀತಿಯಿಂದ ಪೂಜಾರಿ ಪಟ್ಟಭದ್ರರನ್ನು ಎದುರುಹಾಕಿಕೊಂಡಿದ್ದರು.

1984ರಲ್ಲಿ ಕಾಂಗ್ರೆಸ್‌ನ ಪೂಜಾರಿಗೆ ಎದುರಾದದ್ದು ಬಿಜೆಪಿಯ ಸಂಘ ಪರಿವಾರದ ಕಟ್ಟಾಳು ಉರಿಮಜಲು ರಾಮ್ ಭಟ್. 1978ರಲ್ಲಿ ಜನಸಂಘ ಮತ್ತು 1983ರಲ್ಲಿ ಬಿಜೆಪಿಯಿಂದ ಪುತ್ತೂರು ಶಾಸಕನಾಗಿದ್ದ ರಾಮ್ ಭಟ್‌ಗೆ 1,80,091 ಮತಗಳಷ್ಟೇ ಪಡೆಯಲು ಸಾಧ್ಯವಾಯಿತು. 2,99,490 ಮತ ಗಳಿಸಿದ್ದ ಪೂಜಾರಿ ನಿರಾಯಾಸವಾಗಿ ಪುನರಾಯ್ಕೆಯಾದರು. ಪ್ರಧಾನಿ ರಾಜೀವ್ ಗಾಂಧಿ ತಮ್ಮ ಸರಕಾರದಲ್ಲಿ ಪೂಜಾರಿಗೆ ಗ್ರಾಮೀಣಾಭಿವೃದ್ಧಿ ರಾಜ್ಯ ಮಂತ್ರಿ ಮಾಡಿಕೊಂಡರು. 1989ರ ಇಲೆಕ್ಷನ್ ಹೊತ್ತಿಗೆ ಪೂಜಾರಿಗೆ ಆಡಳಿತ ವಿರೋಧಿ ಅಲೆ ಸಣ್ಣ ಪ್ರಮಾಣದಲ್ಲಿ ಅಪ್ಪಳಿಸಲಾರಂಭಿಸಿತ್ತು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮತ್ತು ಪೂಜಾರಿ ಮೇಲಾಟದಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಶುರುವಾಗಿತ್ತು. ಜೂನಿಯರ್ ಪೂಜಾರಿ ತನ್ನನ್ನು ಮೀರಿ ಬೆಳೆದು ಇಂದಿರಾ-ರಾಜೀವ್‌ಗೆ ಹತ್ತಿರವಾಗಿದ್ದು, ಕೆಪಿಸಿಸಿ ಅಧ್ಯಕ್ಷರಾಗಿದ್ದು(1987) ಮೊಯ್ಲಿಯವರಲ್ಲಿ ಅಸಹನೆ ಮೂಡಿಸಿತ್ತು. ಸ್ವಪಕ್ಷದಲ್ಲಿನ ವೈಮನಸ್ಸಿನ ನಡುವೆ ಪೂಜಾರಿ ಚುನಾವಣೆ ಎದುರಿಸಬೇಕಾಯಿತು. ಪೂಜಾರಿಗೆ ಬಿಜೆಪಿಯ ಮಾಜಿ ಶಾಸಕ ಧನಂಜಯ್ ಕುಮಾರ್ ಮತ್ತು ಜನತಾ ದಳದ ಮಹ್ಮದ್ ಹುಸೇನ್ ಎದುರಾಳಿಗಳಾಗಿದ್ದರು. ಪೂಜಾರಿ 2,75,672 ಮತ ಪಡೆದು ಚುನಾಯಿತರಾದರೂ ಬಿಜೆಪಿ ಮತ್ತು ಜೆಡಿ ಪಡೆದ ಒಟ್ಟು ಮತ (3,28,108)ವೇ ಹೆಚ್ಚಿತ್ತು!

ಕಾಂಗ್ರೆಸ್ ಕಲಹದಲ್ಲಿ ಅರಳಿದ ಕಮಲ!

1991ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಜಿಲ್ಲಾ ಕಾಂಗ್ರೆಸ್‌ನ ದಿಗ್ಗಜ ತ್ರಯರಾದ ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಮತ್ತು ಜನಾರ್ಧನ ಪೂಜಾರಿ ಕಾಲೆಳೆದಾಟ ಜೋರಾಯಿತು. ಮೊಯ್ಲಿ ಸಿಎಂ ಆದಾಗಲಂತೂ ಅವಿಭಜಿತ ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಒಂದು ರೀತಿಯ ಅರಾಜಕ ವಾತಾವರಣ ನೆಲೆಯಾಗಿತ್ತು. ಅದೇ ವೇಳೆಗೆ ಆಡ್ವಾಣಿ ಹೊರಟಿದ್ದ ರಥಯಾತ್ರೆಯ ಅಡ್ಡ ಪರಿಣಾಮಗಳು ಜಿಲ್ಲೆಯಲ್ಲಾಗತೊಡಗಿತ್ತು. ಹಿಂದುತ್ವದ ಉನ್ಮಾದ ಕೆರಳಿ ಕೋಮುಗಲಭೆ-ರಕ್ತಪಾತಗಳು ಆಗಲಾರಂಭಿಸಿದ್ದವು. ಕಾಂಗ್ರೆಸ್ ಬಣ ಬಡಿದಾಟದಿಂದ ಜಿಲ್ಲಾ ರಾಜಕಾರಣದಲ್ಲಿ ಉಂಟಾದ ನಿರ್ವಾತದಲ್ಲಿ ಹಿಂದುತ್ವ ಅರ್ಥಾತ್ ಬಿಜೆಪಿ ನಿಧಾನಕ್ಕೆ ವ್ಯಾಪಿಸಿತು. ಸಂಘ ಪರಿವಾರದ ಚಿಂತಕರ ಚಾವಡಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿ, ಕಲ್ಲಡ್ಕ ಪ್ರಭಾಕರ್ ಭಟ್, ಡಾ.ವಿ.ಎಸ್.ಆಚಾರ್ಯ, ಎ.ಜಿ.ಕೊಡ್ಗಿಗಳ ವಿಪ್ರೋತ್ತಮರ ತಂಡ ಯೋಜನಾಬದ್ಧವಾಗಿ ಧರ್ಮಕಾರಣ ಶುರುಹಚ್ಚಿಕೊಂಡಿತು! ಕಾಂಗ್ರೆಸ್‌ನ ಒಣ ವ್ಯಕ್ತಿ ಪ್ರತಿಷ್ಠೆಯ ಸಂಘರ್ಷ ಹಿಂದುತ್ವ ಹಬ್ಬಲು ಅನುಕೂಲಕರವಾಗಿತ್ತು. ಇದರ ಪರಿಣಾಮ 1991ರ ಚುನಾವಣೆಯಲ್ಲಾಯಿತು. ಕಾಂಗ್ರೆಸ್‌ನ ಹಳೆ ಹುಲಿ ಜನಾರ್ದನ ಪೂಜಾರಿ ಬಿಜೆಪಿಯ ಧನಂಜಯ ಕುಮಾರ್‌ಗೆ ಕೇವಲ 35,005 ಮತಗಳಿಂದ ಮಣಿಯಬೇಕಾಯ್ತು! ಇದು ಹಿಂದುತ್ವದ ಫಲಶ್ರುತಿ ಎನ್ನುವುದಕ್ಕಿಂತ ಕಾಂಗ್ರೆಸಿಗರ ಮನೆಮುರುಕು ಕಿತ್ತಾಟದ ಪರಿಣಾಮವೆಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ಗೆ ಹತ್ತಿರವಿದ್ದ ಪೂಜಾರಿ 1994ರಲ್ಲಿ ರಾಜ್ಯಸಭಾ ಸದಸ್ಯರಾದರು.

1996ರ ಇಲೆಕ್ಷನ್ ಅಂಕಣದಲ್ಲಿ ಪೂಜಾರಿ ಮತ್ತೆ ಮುಗ್ಗರಿಸಿದರು. ಬಡವರ ಮನೆಯಲ್ಲಿ ಕುಳಿತು ಕೆಂಡದಲ್ಲಿ ಸುಟ್ಟ ಒಣ ಮೀನು ನಂಜಿಕೊಳ್ಳುತ್ತ ಕೊಚ್ಚಕ್ಕಿ ಗಂಜಿ ಉಣ್ಣುವ ಸರಳ-ಸಜ್ಜನ ಪೂಜಾರಿಗೆ ಅವರ ನಿಷ್ಠುರತೆಯೇ ಮುಳುವಾಗಿತ್ತು. ಆ ಚುನಾವಣೆ ವೇಳೆಗೆ ಕಲ್ಲಡ್ಕ ಭಟ್‌ನ ತೆರೆಮರೆ ಸೂತ್ರಧಾರತ್ವದ ಹಿಂದುತ್ವದ ವ್ಯಾಪ್ತಿ ಮಂಗಳೂರು ಕ್ಷೇತ್ರದಲ್ಲಿ ಹಿಗ್ಗಿತ್ತಾದರೂ ಬಿಜೆಪಿಯನ್ನು ಗೆಲ್ಲಿಸುವಷ್ಟು ಪ್ರಬಲವಾಗಿರಲಿಲ್ಲ. ಪೂಜಾರಿ ಈ ಬಾರಿಯೂ ಕಾಂಗ್ರೆಸ್‌ನ ಒಳಸುಳಿಗೇ ಸಿಲುಕಿ ಮುಳುಗಿದ್ದರು. ಮೊಯ್ಲಿ-ಪೂಜಾರಿ ಮಧ್ಯೆ ಹೊಂದಾಣಿಕೆ ಆಗಲೇ ಇಲ್ಲ. ಯಕ್ಷಗಾನ ಶೈಲಿಯ ದೊಡ್ಡ ಗಂಟಲಿನ ಮಾತುಗಾರ ಪೂಜಾರಿಗೆ ಸ್ವಜಾತಿ ಶಿಷ್ಯ ವಿನಯ್ ಕುಮಾರ್ ಸೊರಕೆ, ಬಂಟ ಸಮುದಾಯದ ರಮಾನಾಥ ರೈಗಳಂಥವರೂ ತಿರುಗಿಬಿದ್ದರು. ಮುಸಲ್ಮಾನರ ಮತದಲ್ಲಿ ಒಂದು ಪಾಲು ಜನತಾ ದಳ ಸೆಳೆಯಿತು. ಕೊಡಗಿನ ಮಾಜಿ ಮಂತ್ರಿ ಜೀವಿಜಯ ಜನತಾ ದಳದ ಹುರಿಯಾಳಾಗಿ 1,80,889 ಮತ ಪಡೆದಿದ್ದು ಕಾಂಗ್ರೆಸ್‌ಗೆ ಮುಸ್ಲಿಮ್ ಮತ ಬ್ಯಾಂಕ್‌ಅನ್ನು ಖೋತಾಮಾಡಿತು. ಬಿಜೆಪಿಯ ಧನಂಜಯ್ ಕುಮಾರ್ ಬರೀ 14,499 ಮತಗಳ ಅಂತರದಿಂದ ಗೆದ್ದು ದಡ ಸೇರಿದರು. ಆಗ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಬಿಜೆಪಿ ಸಂಸದನಾಗಿದ್ದ ಧನಂಜಯ್‌ಕುಮಾರ್ ಕೆಲವೇ ದಿನವಿದ್ದ ವಾಜಪೇಯಿ ಸರಕಾರದಲ್ಲಿ ನಾಗರಿಕ ವಿಮಾನ ಯಾನ ಇಲಾಖೆಯ ಕ್ಯಾಬಿನೆಟ್ ಮಂತ್ರಿಯಾಗಿದ್ದರು.

ಎಂ ವೀರಪ್ಪ ಮೊಯ್ಲಿ

1996ರಲ್ಲೇ ಕಾಂಗ್ರೆಸ್ ಟಿಕೆಟ್‌ಗೆ ಶತಾಯಗತಾಯ ಪ್ರಯತ್ನಿಸಿ ವಿಫಲಾರಾಗಿದ್ದ ವೀರಪ್ಪ ಮೊಯ್ಲಿ 1999ರಲ್ಲಿ ಪೂಜಾರಿ ಬದಲಿಗೆ ತನ್ನನ್ನೇ ಕ್ಯಾಂಡಿಡೇಟ್ ಮಾಡುವಂತೆ ಪಟ್ಟುಹಿಡಿದಿದ್ದರು. ಆದರೆ ಇಂದಿರಾ, ರಾಜೀವ್ ಸಖ್ಯದ ಕೇಂದ್ರ ಮಂತ್ರಿಗಿರಿ, ಕೆಪಿಸಿಸಿ ಅಧ್ಯಕ್ಷತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಂಥ ಆಯಕಟ್ಟಿನ ಸ್ಥಾನದಲ್ಲಿದ್ದ ಪೂಜಾರಿ ಕೈ ಮೇಲಾಯಿತು. ಮೊಯ್ಲಿಗೆ ತವರು ಕ್ಷೇತ್ರ ಚಿಕ್ಕಮಗಳೂರು (ಆಗ ಮೊಯ್ಲಿಯ ಕಾರ್ಕಳ ಚಿಕ್ಕಮಗಳೂರು ಕ್ಷೇತ್ರದ ಪರಿಧಿಯಲ್ಲಿತ್ತು) ಟಿಕೆಟ್ ಕೊಡಲಾಯಿತು. ಆದರೆ ಪೂಜಾರಿಯವರನ್ನು ಸೋಲಿಸುವ ಹಠ ಮಾತ್ರ ಮೊಯ್ಲಿ-ಸೊರಕೆ-ರಮಾನಾಥ್ ತಂಡಕ್ಕೆ ಕಡಿಮೆಯಾಗಿರಲಿಲ್ಲ ಎಂದು ಅಂದಿನ ಕಾಂಗ್ರೆಸ್ ಭಿನ್ನಮತದ ಬೇಗುದಿ ಬಲ್ಲ ಹಳೆ ಕಾಂಗ್ರೆಸ್ಸಿಗರು ಹೇಳುತ್ತಾರೆ. ಹಿಂದುತ್ವದ ಅಲೆ ಹಿಂದೆ ಸರಿಸಿ ಗೆಲುವಿನ ಹೊಸ್ತಿಲಿಗೆ ಬಂದಿದ್ದ ಪೂಜಾರಿ ಸ್ವಪಕ್ಷದವರ ಕುತಂತ್ರದಿಂದ ಕೇವಲ 6,907 ಮತಗಳ ತೀರಾ ಸಣ್ಣ ಅಂತರದಲ್ಲಿ ಹಿಮ್ಮೆಟ್ಟಬೇಕಾಯಿತು ಎಂದು ಚುನಾವಣಾ ವಿಶ್ಲೇಷಕರು ತರ್ಕಿಸುತ್ತಾರೆ.

ಒಂದರಹಿಂದೊಂದರಂತೆ ನಿರಂತರ ನಾಲ್ಕು ಸೋಲು ಅನುಭವಿಸಿದ ಪೂಜಾರಿಗೆ ಮತ್ತೆ ಅವಕಾಶ ಕೊಡಕೂಡದು ಎಂದು ಹೈಕಮಾಂಡ್ ಮುಂದೆ ರಚ್ಚೆ ಹಿಡಿದ ಮೊಯ್ಲಿ ಅಂತೂ 1999ರಲ್ಲಿ ಕ್ಯಾಂಡಿಡೇಟಾಗುವ ಪ್ರಯತ್ನದಲ್ಲಿ ಯಶಸ್ವಿಯಾದರು! ಪೂಜಾರಿಯ ಸರಣಿ ಸೋಲಿನ ರೂವಾರಿಯೆಂದೇ ಬಿಂಬಿತವಾಗಿದ್ದ ಮೊಯ್ಲಿ ಮೇಲಿನ ಸೇಡು ತೀರಿಸಿಕೊಳ್ಳಲು ಸ್ವಪಕ್ಷದ ವಿರೋಧಿ ಪಡೆ ಸರ್ವಸನ್ನದ್ಧವಾಗಿತ್ತು! ಕಾಂಗ್ರೆಸ್ ಕಿತ್ತಾಟದ ಲಾಭ ಪಡೆದ ಬಿಜೆಪಿಯ ಧನಂಜಯ್‌ಕುಮಾರ್ ನಾಲ್ಕನೇ ಬಾರಿ ಪಾರ್ಲಿಮೆಂಟ್ ತಲುಪಿದ್ದರು. ಪೂಜಾರಿಯಂತೆ ಮೊಯ್ಲಿಯೂ ಗೆಲುವಿನ ಗೆರೆಯ ಹತ್ತಿರತ್ತಿರ ಬಂದು ಕುಸಿದಿದ್ದರು! 8,469 ಮತದಿಂದ ಗೆಲುವು ಕಂಡ ಧನಂಜಯ್‌ಕುಮಾರ್ ವಾಜಪೇಯಿ ಸರಕಾರದಲ್ಲಿ ಹಣಕಾಸು ಮತ್ತು ಜವಳಿ ಖಾತೆಯ ಮಂತ್ರಿಯಾದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಆರು ರಾಜ್ಯಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಕಾಂಗ್ರೆಸ್

ಬಂದುಹೋದ ಡೀವಿ ಮತ್ತು ನಳಿನ್ ಆಗಮನ

ಎರಡನೇ ಬಾರಿ ರಾಜ್ಯಸಭೆ ಎಂಪಿಯಾಗಿದ್ದ ಪೂಜಾರಿ 2003ರಲ್ಲಿ ಕೆಪಿಸಿಸಿ ಅಧ್ಯಕ್ಷರಾದರು. ಹಾಗಾಗಿ 2004ರ ಚುನಾವಣೆಯಲ್ಲಿ ಕ್ಯಾಂಡಿಡೇಟಾಗುವ ಇರಾದೆಯಿರಲಿಲ್ಲ. ಇದು ಮೊಯ್ಲಿಗೆ ಸುಲಭವಾಗಿ ಟಿಕೆಟ್ ಕೈಗೂಡುವಂತೆ ಮಾಡಿತು. ಆದರೆ ಗೆಲುವು ಮಾತ್ರ ಮರೀಚಿಕೆಯಾಗಿತ್ತು. ಇತ್ತ ಬಿಜೆಪಿಯಲ್ಲಿ ಧನಂಜಯ್‌ಕುಮಾರ್ ಬಗ್ಗೆ ಕೇಸರಿ ಕಾರ್ಯಕರ್ತರು-ಪದಾಧಿಕಾರಿಗಳು ಕೆರಳಿದ್ದರು. ಕ್ಷೇತ್ರದ ಸುಖ-ದುಃಖ ಕಡೆಗಣಿಸಿ ಐಶಾರಾಮಿ ಬದುಕಿನಲ್ಲಿ ಮೈಮರೆತಿದ್ದಾರೆಂಬ ಆರೋಪ ಸುತ್ತಿಕೊಂಡಿದ್ದ ಧನಂಜಯ್‌ಗೆ ಪ್ರಬಲ ಆಂಟಿಇನ್‌ಕಂಬೆನ್ಸಿ ಇರುವುದನ್ನು ಮನಗಂಡಿದ್ದ ಕೇಸರಿಕಮಾಂಡ್ ಪುತ್ತೂರಿನ ಬಿಜೆಪಿ ಶಾಸಕ ಡಿ.ವಿ.ಸದಾನಂದ ಗೌಡರನ್ನು ಕಣಕ್ಕಿಳಿಸಿತ್ತು. ಆ ವೇಳೆಗೆ ಬಿಜೆಪಿಯ ಧರ್ಮಕಾರಣ ತಂತ್ರಗಾರಿಕೆಗಳ ಪ್ರಯೋಗ ಆಗತೊಡಗಿತ್ತಾದರೂ ಕಾಂಗ್ರೆಸ್‌ನ ಮತ್ತದೇ ಒಳಜಗಳ ಬಿಜೆಪಿಗೆ ವರವಾಯಿತು. ಸದಾ ಲವ್ ಜಿಹಾದ್, ಐಎಸ್‌ಐ ಗುಮ್ಮ ತೋರಿಸುತ್ತ ಶಾಸಕಗಿರಿಯಲ್ಲಿ ಇಡೀ ಜಿಲ್ಲೆಗೆ ’ಪರಿಚಿತ’ನಾಗಿದ್ದ ಡಿ.ವಿ.ಸದಾನಂದ ಗೌಡ ಕಾಂಗ್ರೆಸ್‌ನ ಮೊಯ್ಲಿಯವರನ್ನು 33,415 ಮತದಿಂದ ಮಣಿಸಿ ಸಂಸದನಾದರು.

ಇಸ್ಲಾಮೋಫೋಬಿಯಾದ ಪ್ರಹಸನಗಳಲ್ಲೇ ಸಂಸದಗಿರಿ ನಿಭಾಯಿಸುತ್ತಿದ್ದರೂ ಅದ್ಯಾಕೋ ಡಿವಿಯನ್ನು ಕರಾವಳಿ ಸಂಘ ಪರಿವಾರದ ಸುಪ್ರಿಮೋ ಕಲ್ಲಡ್ಕ ಪ್ರಭಾಕರ್ ಭಟ್ ಹತ್ತಿರ ಸೇರಿಸಲಿಲ್ಲ. ಭಟ್ಟರ ಕೃಪಾಶೀರ್ವಾದದ ಸಂಘಿಗಳ ಒಂದು ಪಡೆಯಂತೂ ಡೀವಿಗೆ ತಿರುಗಿಬಿದ್ದಿತ್ತು. 2009ರಲ್ಲಿ ಡಿವಿಗೆ ಕೇಸರಿ ಟಿಕೆಟ್ ಬೇಡವೆಂಬ ಕೂಗು ಬಿಜೆಪಿಯಲ್ಲಿ ಜೋರಾಗಿತ್ತು. ಕರಾವಳಿ ಕೇಸರಿ ಟಿಕೆಟ್ ಕಮಿಟಿಯ ಪ್ರಶ್ನಾತೀತ “ಯಜಮಾನ” ಕಲ್ಲಡ್ಕ ಭಟ್ ತನಗೆ ಮಂಗಳೂರಲ್ಲಿ ಮತ್ತೆ ಸ್ಪರ್ಧೆಗೆ ಅವಕಾಶ ಕೊಡುವುದಿಲ್ಲವೆಂಬುದು ಖಾತ್ರಿಯಾಗುತ್ತಲೇ ಡೀವಿ ಉಡುಪಿ-ಚಿಕ್ಕಮಗಳೂರು ಟಿಕೆಟ್ ಆದರೂ ದಯಪಾಲಿಸುವಂತೆ ಗೋಗರೆದು ಪಡೆದುಕೊಂಡರು. ಮಂಗಳೂರು ಕ್ಷೇತ್ರದ ಸುಳ್ಯ, ಪುತ್ತೂರಲ್ಲಿ ದೊಡ್ಡಸಂಖ್ಯೆಯಲ್ಲಿರುವ ಅರೆಭಾಷೆ ಗೌಡ ಸಮುದಾಯದ ಡಿವಿಯನ್ನು ಸಾರಾಸಗಟಾಗಿ ಮೂಲೆಗೊತ್ತಿದರೆ ಆ ಸಮುದಾಯ ಎದುರುಹಾಕಿಕೊಳ್ಳ ಬೇಕಾಗುತ್ತದೆಂಬ ಆತಂಕ ಕಲ್ಲಡ್ಕ ಕಮಾಂಡ್‌ಗಿತ್ತು.

ಇತ್ತ ಮಂಗಳೂರು ಡಿಲಿಮಿಟೇಶನ್ ಪ್ರಕ್ರಿಯೆಯಲ್ಲಿ “ದಕ್ಷಿಣ ಕನ್ನಡ”ವೆಂದು ಪುನರ್ ರಚನೆಯಾಗಿತ್ತು. ಕಲ್ಲಡ್ಕ ಭಟ್ ಆಜ್ಞಾನುಧಾರಿ ಆರೆಸ್ಸೆಸ್ ಪ್ರಚಾರಕ ಹುಡುಗ ನಳಿನ್ ಕುಮಾರ್ ಕಟೀಲ್‌ನನ್ನು ಬಿಜೆಪಿ ಹುರಿಯಾಳಾಗಿಸಲಾಯಿತು. ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದಂತೆಯೆ “ಸಂಘ”ಕ್ಕೆ ಸಮರ್ಪಿಸಿಕೊಂಡಿದ್ದ ನಳಿನ್ ತಂದೆಯ ಮರಣದ ನಂತರ ಸಕ್ರಿಯ ಸಂಸಾರ ಜೀವನಕ್ಕೆ ಮರಳಿದ್ದರು. ಹೊಟ್ಟೆಪಾಡಿಗೆ ಸಿವಿಲ್ ಗುತ್ತಿಗೆ ಮಾಡಿಕೊಂಡಿದ್ದ ನಳಿನ್ ಸಂಘ ಪೋಷಣೆಯಲ್ಲಿ ಬಿಲ್ಡರ್ ಆಗಿ ರೂಪುಗೊಂಡಿದ್ದರು. 2004ರಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗುವ ಮೂಲಕ ಕೇಸರಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಕಲ್ಲಡ್ಕ ಭಟ್ ನಿರ್ದೇಶನದಲ್ಲಿ ಹಳ್ಳಿಗಳ ದೇವಸ್ಥಾನದ ಬ್ರಹ್ಮ ಕಳಶೋತ್ಸವ, ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳುತ್ತ ಕೇಸರಿವಲಯದಲ್ಲಿ ಮುಂಚೂಣಿಗೆ ಬಂದರು; ನಳಿನ್‌ನ ಉಗ್ರ ಹಿಂದುತ್ವ ಭಾಷಣ “ಕಲೆ”ಯನ್ನೇ ಕೇಸರಿ ಎಂಪಿ ಟಿಕೆಟ್‌ಗೆ ಮೆರಿಟ್ ಆಗಿ ಸಂಘ ಪರಿವಾರ ಪರಿಗಣಿಸುವಂತೆ ಕಲ್ಲಡ್ಕ ಭಟ್ ನೋಡಿಕೊಂಡರು.

ಡಿ.ವಿ.ಸದಾನಂದ ಗೌಡ

2009ರಲ್ಲಿ ರಚನೆಯಾದ ಹೊಸ ಕ್ಷೇತ್ರ “ದಕ್ಷಿಣ ಕನ್ನಡ”ದಲ್ಲಿ ಮೊಯ್ಲಿ ಕಾಂಗ್ರೆಸ್ ಅಭ್ಯರ್ಥಿತನ ಬಯಸಲಿಲ್ಲ. ಮಾಜಿ ಮಂತ್ರಿ ಆರ್.ಎಲ್.ಜಾಲಪ್ಪ ಕಾಂಗ್ರೆಸ್ ಪರವಾಗಿ ಹದಮಾಡಿಟ್ಟಿದ್ದ ಚಿಕ್ಕಬಳ್ಳಾಪುರಕ್ಕೆ ಮೊಯ್ಲಿ ವಲಸೆ ಹೋಗಿದ್ದರು. ಜನಾರ್ದನ ಪೂಜಾರಿಯವರ ರಾಜ್ಯಸಭಾ ಸದಸ್ಯತ್ವದ ಅವಧಿಯೂ ಮುಗಿದಿತ್ತು. ಉಡುಪಿಯಲ್ಲೊಮ್ಮೆ ಅಚಾನಕ್ ಎಂಪಿಯಾಗಿದ್ದ ಬಿಲ್ಲವ ಸಮುದಾಯದ ವಿನಯ್‌ಕುಮಾರ್ ಸೊರಕೆ ಮಂಗಳೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪೂಜಾರಿಯಂತೆ ಇಮೇಜ್ ಇಲ್ಲವೆಂದು ಹೈಕಮಾಂಡ್ ಅವಕಾಶ ನಿರಾಕರಿಸಿತು. ಪೂಜಾರಿ ಮತ್ತೆ ಕಾಂಗ್ರೆಸ್ ಕಲಿಯಾಗಿ ಅಖಾಡಕ್ಕೆ ಧುಮುಕಿದರು. ಪೂಜಾರಿಯನ್ನು ಮಾಜಿಯಾಗೇ ಇಡುವ ಮೊಯ್ಲಿ ಬಳಗದ “ಸಂಕಲ್ಪ” ಹಾಗೇ ಮುಂದುವರಿದಿತ್ತು. ಆ ಹೊತ್ತಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಭಿನ್ನಮತದಷ್ಟೇ ಪ್ರಬಲವಾಗಿ ಹಿಂದುತ್ವ ಅಬ್ಬರವೂ ಹಬ್ಬಿತ್ತು. “ಅಪರಿಚಿತ” ನಳಿನ್‌ಗೆ 40,420 ಮತದಂತರದಿಂದ ಗೆಲುವು ಸಾಧ್ಯವಾಗಿ, ಯೋಗ್ಯತೆಗೂ ಮೀರಿದ ಸಂಸತ್ ಸ್ಥಾನದ ಭಾಗ್ಯ ಬಂದಿತ್ತು; “ಪರಿಚಿತ” ಸೋಲಿನ ಸರದಾರ ಪೂಜಾರಿಗೆ ಸಂಸದನಾಗುವ ಅಷ್ಟೂ ಅರ್ಹತೆಯಿದ್ದೂ ಇದು ನಾಲ್ಕನೇ ಅಪಜಯವಾಗಿತ್ತು.

2014ರ ಲೋಕ ಸಮರ ಘೋಷಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡವೆಂಬುದು ಉಗ್ರ ಹಿಂದುತ್ವ ಆಡಂಬೊಲವಾಗಿತ್ತು. ಹಳ್ಳಿಹಳ್ಳಿಗಳಲ್ಲಿ ಸಂಘ ಪರಿವಾರ ಬಿತ್ತಿ ಬೆಳೆದ ಮುಸ್ಲಿಮ್ ದ್ವೇಷದಿಂದ ಬಿಜೆಪಿ ಮಜಬೂತಾಗಿತ್ತು. ಗೋದ್ರಾ ಖ್ಯಾತಿಯ ಮೋದಿ ಬಿಜೆಪಿ ಪಿಎಂ ಕ್ಯಾಂಡಿಡೇಟಾಗಿದ್ದು ಕರಾವಳಿಯ ಹಿಂದುತ್ವ ವಲಯದಲ್ಲಿ ದೊಡ್ಡ ಮಟ್ಟದ ಮತೀಯ ಧ್ರುವೀಕರಣ ಸೃಷ್ಟಿಸಿತ್ತು. ಕಾಂಗ್ರೆಸ್ ಒಳಜಗಳದ ಹಂಗಿಲ್ಲದೆ ಗೆಲ್ಲುವ ತಾಕತ್ತು ಬಿಜೆಪಿಗೆ ಬಂದಿತ್ತು. ಬಿಜೆಪಿಯ ನಳಿನ್ (6,42,739) ಕಾಂಗ್ರೆಸ್‌ನ ಪೂಜಾರಿಯವರನ್ನು ಭರ್ಜರಿ ಮತದಂತರ(1,43,709)ದಿಂದ ಮಣಿಸಿ ಎರಡನೇ ಸಲ ಸಂಸತ್ ಸದಸ್ಯನಾದರು! 2019ರ ಚುನಾವಣೆ ಹೊಸ್ತಿಲಲ್ಲಿ ಪುಲ್ವಾಮಾ ದೈತ್ಯ ಬಲದಿಂದ ಕೇಸರಿ ಪತಾಕೆ ದಕ್ಷಿಣ ಕನ್ನಡದ ಹಿಂದುತ್ವದ ಕೋಟೆಯ ಉತ್ತುಂಗಕ್ಕೇರಿತ್ತು. ನಿಷ್ಪ್ರಯೋಜಕ ಎಂಪಿ ಎಂಬ ಅಸಮಾಧಾನ ಸಾರ್ವಜನಿಕರಲ್ಲಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರಲ್ಲಿದ್ದರೂ ಬಿಜೆಪಿ ನಳಿನ್‌ಗೇ ಮಣೆಹಾಕಿತ್ತು. ಕಲ್ಲಡ್ಕ ಭಟ್ಟರಿಗೂ ನಳಿನ್ ಬೇಡದ ಪೀಡೆಯಾಗಿದ್ದರು. ಆದರೆ ಕೇಶವ ಕೃಪಾದಲ್ಲಿದ್ದ ಆಶ್ರಯದಾತರ ಆಶೀರ್ವಾದದಿಂದ ನಳಿನ್ ಕೇಸರಿ ಟಿಕೆಟ್ ದಕ್ಕಿಸಿಕೊಂಡಿದ್ದರು.

2019ರ ಇಲೆಕ್ಷನ್ ಬಂದಾಗ ಕಾಂಗ್ರೆಸ್ ಅಂತರ್ಯುದ್ಧ ಮತ್ತು ಹಿಂದುತ್ವದ ಹೊಡೆತದಿಂದ ಸಂಪೂರ್ಣ ನೆಲಕಚ್ಚಿತ್ತು. ಬೆಂಬಿಡದೆ ಕಾಡಿದ ಸೋಲು ಹಾಗು ವಯೋಸಹಜ ನಿತ್ರಾಣದಿಂದ ಪೂಜಾರಿ ನೇಪತ್ಯಕ್ಕೆ ಸರಿದಿದ್ದರು. ಡಿಕೆಶಿ ಆಪ್ತ ಯುವ ಕಾಂಗ್ರೆಸ್‌ನ ಮಿಥುನ್ ರೈ ಬಿಜೆಪಿಯ ಸ್ವಜಾತಿ ಬಂಧು(ಬಂಟ) ನಳಿನ್‌ಗೆ ಎದುರಾಳಿಯಾದರು. ಸದಾ ವ್ಯಗ್ರವಾಗಿರುವ ಸ್ಥಳೀಯ ಹಿಂದುತ್ವ ಮತ್ತು ಮೋದಿಯ ಪುಲ್ವಾಮಾ ಇವೆಂಟ್ ಮೇನೇಜ್ಮೆಂಟ್ ಮ್ಯಾಜಿಕ್‌ನಿಂದ ಕಾಂಗ್ರೆಸ್ ಬರೋಬ್ಬರಿ 2,74,621 ಮತಗಳ ಅಗಾಧ ಅಂತರದ ಸೋಲಿನಿಂದ ಜರ್ಜರಿತವಾಗಿಹೋಯಿತು.

ನಳಿನ್ ಸಾಧನೆ-ಸಾಹಸ!

ಒಂದೂವರೆ ದಶಕದಿಂದ ಸಂಸದನಾಗಿರುವ ನಳಿನ್ ತನ್ನನ್ನು ನಿರಂತರವಾಗಿ ಗೆಲ್ಲಿಸಿದ ಜನರ ಋಣ ತೀರಿಸುವ ಕನಿಷ್ಠ ಕೃತಜ್ಞತೆಯೂ ಇಲ್ಲದ ಧರ್ಮಕಾರಣಿ; ನಳಿನ್ ಅಭಿವೃದ್ಧಿ ರಾಜಕಾರಣ ಮಾಡಿದ ಕುರುಹುಗಳ್ಯಾವುದೂ ಕಾಣಿಸದು ಎಂಬ ಆಕ್ಷೇಪ-ಆರೋಪ ಕ್ಷೇತ್ರದ ದಶದಿಕ್ಕಲ್ಲಿ ಅನುರಣಿಸುತ್ತಿದೆ. ಕ್ಷೇತ್ರವಾಸಿಗಳ ಕೈಗೆಟುಕದೆ ಸ್ವಜೀರ್ಣೋದ್ಧಾರ ದಂಧೆಯಲ್ಲಿ ತೊಡಗಿಸಿಕೊಂಡಿರುವ ನಳಿನ್ ಬಗ್ಗೆ ಅಸಮಧಾನ-ಆಕ್ರೋಶ ಜನಮಾನಸದಲ್ಲಿ ಮಡುಗಟ್ಟಿದೆ ಎಂಬ ಮಾತು ಕೇಳಿಬರುತ್ತಿದೆ. ತಮಾಷೆಯೆಂದರೆ, ಜನರಿಗೆ ಬೇಡವಾಗಿರುವ ನಳಿನ್ ಸಂಘ ಶ್ರೇಷ್ಠರಾದ ಬಿ.ಎಲ್.ಸಂತೋಷ್ ಥರದವರಿಗೆ ಬೇಕಾದ ಅಚ್ಚುಮೆಚ್ಚಿನ ಅನುಯಾಯಿ. ಎಂಪಿಯಾಗಿ ಕ್ಷೇತ್ರದ ಬೇಕು-ಬೇಡ, ಕಷ್ಟ-ಸುಖಕ್ಕೆಂದೂ ಸ್ಪಂದಿಸದ ನಳಿನ್ ಬೆಂಕಿ ಮಾತುಗಾರಿಕೆಯಿಂದ ಮತ್ತು ಹದಿನೆಂಟು ವರ್ಷಕ್ಕೇ ಆರೆಸ್ಸೆಸ್ ದೀಕ್ಷೆ ಪಡೆದು ಪ್ರಚಾರಕನಾಗಿ ತಿರುಗಿದವನೆಂಬ “ಪ್ರತಿಭೆ”ಯಿಂದಾಗಿ ಆಯಕಟ್ಟಿನ ರಾಜ್ಯ ಬಿಜೆಪಿ ಅಧ್ಯಕ್ಷತೆಯೂ ಸಿಕ್ಕಿತ್ತು. ಕೊಟ್ಟ ಕುದುರೆಯನ್ನೆರಲಾಗದೆ ಎಡವಿದ ನಳಿನ್ ಕಾಲಕೀರ್ದಿಯಲ್ಲಿ ಬಿಜೆಪಿ ಅಸೆಂಬ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋಯಿತು.

ಅಸಂಬದ್ಧ ಮಾತು, ಹೇಳಿಕೆ, ಭಾಷಣಗಳಿಂದ ಹಾಸ್ಯಾಸ್ಪದರಾಗಿರುವ ನಳಿನ್‌ನಷ್ಟು ಟ್ರೋಲ್ ಆದವರು ದಕ್ಷಿಣ ಕನ್ನಡದಲ್ಲಿ ಮತ್ಯಾರೂ ಸಾರ್ವಜನಿಕ ವ್ಯಕ್ತಿ ಇಲ್ಲವೇನೋ! ಮುಸ್ಲಿಮ್ ದ್ವೇಷದ ಹಿಂದುತ್ವದ ಉದ್ದುದ್ದ ವ್ಯಾಖ್ಯಾನ ಬಿಗಿಯುವ ನಳಿನ್ ವೇದಿಕೆ ಇಳಿದ ತಕ್ಷಣ ಹಣವಂತ ಬ್ಯಾರಿ ಮುಸ್ಲಿಮ್ ವರ್ತಕರು, ಉದ್ಯಮಿಗಳ ಸಹವಾಸದಲ್ಲಿರುತ್ತಾರೆ; ಅಮಾಯಕ ಹಿಂದು ಹುಡುಗರನ್ನು ಕೆರಳಿಸಿ ಮುಸ್ಲಿಮ್ ವಿರೋಧಿ ದಂಗೆಗೆ ಪ್ರಚೋದಿಸುವ ಸಂಸದ ನಳಿನ್ ಧರ್ಮಾತೀತವಾಗಿ ಶ್ರೀಮಂತರ-ಬಂಡವಾಳಶಾಹಿಗಳ ಪರ; ಧರ್ಮಕಾರಣದ ಸ್ಥಾನ-ಮಾನಕ್ಕೆ ನಳಿನ್ ಬಡ-ಅಸಹಾಯಕ ಮುಸ್ಲಿಮರನ್ನಷ್ಟೇ ಗುರಿ ಮಾಡಿಕೊಂಡಿದ್ದಾರೆ ಎಂಬುದು ಈಗ ಜಿಲ್ಲೆಯಲ್ಲಿ ಬಹಿರಂಗ ರಹಸ್ಯ! ನಳಿನ್ ರಾಜ್ಯ ಬಿಜೆಪಿ ಅಧ್ಯಕ್ಷನಾಗಿದ್ದಾಗ, ’ರಸ್ತೆ, ಚರಂಡಿ, ನೀರಿನಂಥ ಚಿಕ್ಕಪುಟ್ಟ ಮೂಲ ಸೌಕರ್ಯ ಇಲ್ಲವೆಂದು ಬಿಜೆಪಿಯನ್ನು ದೂಷಿಸಬೇಡಿ; ಲವ್ ಜಿಹಾದ್‌ನಿಂದ ನಿಮ್ಮನೆಯ ಹೆಣ್ಣುಮಕ್ಕಳ ರಕ್ಷಣೆಗೆ ಬಿಜೆಪಿ ಗೆಲ್ಲಬೇಕು’ ಎಂಬ ಅಣಿಮುತ್ತು ಉದುರಿಸಿದ್ದರು; ಬಿಜೆಪಿ ಬೆಂಬಲಿಗನೊಬ್ಬನ ಹತ್ಯೆಯಾದಾಗ ಮುಸ್ಲಿಮರೇ ಮಾಡಿದ ಕೊಲೆ ಎಂಬಂತೆ ಬಿಂಬಿಸಿದ್ದ ನಳಿನ್ “ಜಿಲ್ಲೆಗೆ ಬೆಂಕಿ ಹಾಕುವುದು ಹೇಗೆಂದು ಗೊತ್ತಿದೆ” ಎಂದು ಹಿಂದುತ್ವದ ಭಾಷಣ ಬಿಗಿದಿದ್ದರು. ಸಂತ್ರಸ್ತನ ಸಹೋದರಿಯೇ ಮಾಡಿಸಿದ್ದ ಕೊಲೆ ಅದೆಂಬುದು ತನಿಖೆಯಿಂದ ಸಾಬೀತಾದಾಗ ನಳಿನ್ ಅಸಲಿ ಹಿಂದುತ್ವ ಬೆತ್ತಲಾಗಿತ್ತು!!

ಕಲ್ಲಡ್ಕ ಪ್ರಭಾಕರ ಭಟ್

ಜನಾರ್ದನ ಪೂಜಾರಿ ಪರ್ವದಲ್ಲಿ ಎಂಆರ್‌ಪಿಎಲ್, ಮಂಗಳೂರು ವಾಣಿಜ್ಯ ಬಂದರು ವಿಸ್ತರಣೆ, ಎನ್‌ಐಟಿಕೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಂಥ ಮಹತ್ವದ ಯೋಜನೆಗಳಾಗಿತ್ತು. ನಳಿನ್‌ರ ಈ ಹದಿನೈದು ವರ್ಷದ ಎಂಪಿ ದರ್ಬಾರಿನಲ್ಲಿ ಕಣ್ಣಿಗೆ ಕಾಣುವಂಥ ಒಂದೇಒಂದು ಜನಪರ ಕೆಲಸ-ಕಾಮಗಾರಿ ಆಗಿಲ್ಲ. ರೈತ, ಅಡಿಕೆ ತೋಟಗಾರ, ಮೀನುಗಾರರಿಗಾಗಲೀ, ಸಣ್ಣ-ಪುಟ್ಟ ಕುಲಕಸುಬಿನವರಿಗಾಗಲೀ ಅನುಕೂಲವಾಗುವಂಥ ಯೋಜನೆ-ಯೋಚನೆ ಮಾಡಿದ್ದಿಲ್ಲ. ಸಂಸದನಾಗಿ ಕೇಂದ್ರ ಸರಕಾರದ ಮಟ್ಟದಲ್ಲಿ ಬಗೆಹರಿಸಬೇಕಾದ ಹಲವು ಸಮಸ್ಯೆಗಳಿಗೆಲ್ಲ ನಳಿನ್ ಬೆನ್ನುಹಾಕಿ ಓಡಾಡುತ್ತಾರೆ; ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಅಸ್ತವ್ಯಸ್ತವಾಗಿ ಜನರು ಪರದಾಡುತ್ತಿದ್ದಾರೆ; ನಳಿನ್ ಹೊಣೆಗೇಡಿತನದಿಂದ ಪಂಪ್‌ವೆಲ್, ತೊಕ್ಕೊಟ್ಟುನಂಥ ಮಹತ್ವದ ಮೇಲ್ಸೇತುವೆ ಕಾಮಗಾರಿಗೆ ಹತ್ತಾರು ವರ್ಷ ನಡೆದು ಜನರು ಸಾವು-ನೋವು ಅನುಭವಿಸಿದರು. ಆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಫ್ಲೈಓವರ್‌ಗಳು ಪ್ರಯಾಣಿಕರನ್ನು ಸತಾಯಿಸುತ್ತಲೇ ಇವೆ. ಶಿರಾಡಿ ಘಾಟ್ ರಸ್ತೆಯಿಂದಾಗುತ್ತಿರುವ ಗೋಳು ಹೇಳತೀರದು; ಎಂಆರ್‌ಪಿಎಲ್ (ಮಂಗಳೂರು ರಿಫೈನರಿ) ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದೆ ವಂಚಿಸುತ್ತಿದ್ದರೂ ಸಂಸದ ಸಾಹೇಬರು ಉದಾಸೀನದಿಂದಿದ್ದಾರೆ. ತನ್ನ ವೈಫಲ್ಯಗಳನ್ನೆಲ್ಲ ಹಿಂದುತ್ವ-ಮುಸ್ಲಿಮ್ ಸಂಘರ್ಷ ಹುಟ್ಟುಹಾಕುವ ಅಸಹಿಷ್ಣು ನಡೆ-ನಡಿಯ ಅಡಿಯಲ್ಲಿ ಮುಚ್ಚಿಟ್ಟು ಕ್ಷೇತ್ರಕ್ಕೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಜಲ್ಲೆಯ ಜನರು ಎಂಪಿ ನಳಿನ್‌ಕಟೀಲ್‌ರ ಸಾಧನೆ-ಸಾಹಸದ ಉದ್ದುದ್ದ ಪುರಾಣ ಹೇಳುತ್ತಾರೆ.

ನಳಿನ್‌ಗೆ ವಿರೋಧ-ಪುತ್ತಿಲ ಫ್ಯಾಕ್ಟರ್

ಇದ್ದೂಇಲ್ಲದಂತಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಕುರಿತು ಕ್ಷೇತ್ರದಾದ್ಯಂತ ಜನರು ಬೇಸರ-ಬೇಗುದಿಯಲ್ಲಿ ಮಾತಾಡುವುದು ಒಂದು ಕಡೆಯಾದರೆ ಮತ್ತೊಂದೆಡೆ ಹಿಂದುತ್ವ ಮತ್ತು ಬಿಜೆಪಿ ವಲಯದಲ್ಲೂ ಅಸಮಾಧಾನ ಭುಗಿಲೆದ್ದಿದೆ. ಮತ್ತೆ ನಳಿನ್‌ಗೆ ಕೇಸರಿ ಟಿಕೆಟ್ ಕೊಡಬಾರದೆಂದು ಲೋಕಸಭಾ ಕ್ಷೇತ್ರ ವ್ಯಾಪ್ತಿ ಪ್ರತಿ ತಾಲೂಕಿನ ಕಟ್ಟರ್ ಹಿಂದುತ್ವ ಪಡೆಗಳು ಕೂಗೆಬ್ಬಿಸಿವೆ! ನಳಿನ್‌ರದು ಬೂಟಾಟಿಕೆಯ ಹಿಂದುತ್ಪ; ಮೂರ್‍ಮೂರು ಸಲ ಎಂಪಿಯಾಗಿಯೂ ಕ್ಷೇತ್ರಕ್ಕೇನೂ ಪ್ರಯೋಜನವಾಗಿಲ್ಲ ಎಂಬ ವಾದ ಹಿಂದುತ್ವದ ಹಿಂಡಿನದಾಗಿದೆ. ನಳಿನ್‌ಗೆ ಬಿಜೆಪಿ ಅಭ್ಯರ್ಥಿತನ ಸಿಗದಂತೆ ಮಾಡುವ ಕಾರ್ಯಾಚರಣೆ ಕರಾವಳಿಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರ ವಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟರೂ ಶುರುಹಚ್ಚಿಕೊಂಡಿದ್ದಾರೆ. ಆದರೆ ಬಿಜೆಪಿಯ ದಿಲ್ಲಿ ದರ್ಬಾರಿನಲ್ಲಿ ಪ್ರಭಾವಿಯಾಗಿರುವ ಮತ್ತೊಬ್ಬ ಸಂಘೀ ಶ್ರೇಷ್ಠ ಬಿ.ಎಲ್.ಸಂತೋಷ್ ತಮ್ಮ ನಿಷ್ಠಾನುಯಾಯಿ ನಳಿನ್ ಪರ ಲಾಬಿಯಲ್ಲಿದ್ದಾರೆ. ಸಂಘ ಪರಿವಾರದ ರಾಜಕೀಯದಲ್ಲಿ ಕರ್ನಾಟಕ ಕರಾವಳಿ ಮೂಲದ ಕಲ್ಲಡ್ಕ ಭಟ್ಟ ಮತ್ತು ಸಂತೋಷ್ ಪ್ರತಿಸ್ಪರ್ಧಿಗಳು.

ಉಗ್ರ ಹಿಂದತ್ವದ ಹುಡುಗರಲ್ಲಿ ಬಹು ಕಾಲದಿಂದ ಒಳಗೊಳಗೇ ಹೊಗೆಯಾಡುತ್ತಿದ್ದ ನಳಿನ್ ಮೇಲಿನ ಸಿಟ್ಟು 2022ರ ಜುಲೈನಲ್ಲಿ ಸುಳ್ಯದ ಬೆಳ್ಳಾರೆಯಲ್ಲಿ ಯುವ ಮೋರ್ಚಾದ ಹಿಂದುತ್ವದ “ಕಲಿ” ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಆಸ್ಫೋಟಿಸಿತ್ತು. “ರಿಸ್ಕ್”ಗೆ ಎದೆಯೊಡ್ಡವ ಕೇಸರಿ ಹುಡುಗರಿಗೆ ನಳಿನ್ ನೆರವಾಗುವುದಿಲ್ಲ; ತಮ್ಮನ್ನು ಕಾದಾಟಕ್ಕಿಳಿಸಿ ನಳಿನ್, ಕಲ್ಲಡ್ಕ ಭಟ್ಟರಂಥವರು ಅಡಗಿ ಕುಳಿತು ಹಾಯಾಗಿರುತ್ತಾರೆ ಎಂಬ ರೊಚ್ಚು ಹಿಂದುತ್ವ ಸಮರದ ಶೂದ್ರ ಕಾಲಾಳುಗಳದಾಗಿತ್ತು. ಈ ಅಸಹನೆಯಲ್ಲಿದ್ದ ಹಿಂದುತ್ವದ ಕಾರ್ಯಕರ್ತರು ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ನೋಡಲು ಬಂದಿದ್ದ ಸಂಸದ ನಳಿನ್ ಸಮೇತ ಅವರ ಕಾರನ್ನು ಬುಡಮೇಲು ಮಾಡಲು ಪ್ರಯತ್ನಿಸಿದ್ದರು. ನಳಿನ್ ಅದು ಹೇಗೋ ಪಾರಾಗಿಹೋಗಿದ್ದರು! ಹಿಂದುತ್ವ ಹುಲಿ ಸವಾರಿ ಹೊರಟಿರುವ ನಳಿನ್‌ಗೀಗ ಆ ಹುಲಿಯೇ ನುಂಗಲು ಬಾಯ್ತೆರೆದು ಕಾಯುತ್ತಿದೆ.

ನಳಿನ್ ಮತ್ತು ಕಲ್ಲಡ್ಕ ಭಟ್ ಬಗೆಗಿನ ಹಿಂದುತ್ವ ಫ್ರಿಂಜ್‌ಗಳ ವಿರೋಧ ಕಳೆದ ಅಸೆಂಬ್ಲಿ ಚುನಾವಣೆ ವೇಳೆ ಪುತ್ತೂರು ಕ್ಷೇತ್ರದಲ್ಲಿ ತಾರ್ಕಿಕ ಹಂತ ತಲುಪಿತ್ತು. ಇದು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಮತ್ತು ನಳಿನ್ ಮೇಲಿನ ಹಿಂದೂ ಸಂಘಟನೆಗಳ ಅಪನಂಬಿಕೆಗೆ

ಅರುಣ್ ಕುಮಾರ್ ಪುತ್ತಿಲ

ಸಂಕೇತದಂತಿತ್ತು! ಹಿಂದುತ್ವದ ಹೆಸರಲ್ಲಿ ತಮ್ಮನ್ನು ಬಲಿ ಕೊಡಲಾಗುತ್ತಿದೆ; ಪುತ್ತೂರಿನ ಬಿಜೆಪಿ ಟಿಕೆಟ್ ತಪ್ಪಿಸಿ ನಳಿನ್ ಮತ್ತು ಕಲ್ಲಡ್ಕ ಅನ್ಯಾಯ ಮಾಡಿದ್ದಾರೆಂದು ಬುಸುಗುಡುತ್ತ ಸ್ಥಳೀಯ ವ್ಯಗ್ರ ಹಿಂದುತ್ವ ಪಡೆಯ ಮುಂದಾಳು ಅರುಣ್ ಕುಮಾರ್ ಪುತ್ತಿಲ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಯ ಯಜಮಾನರಿಗೆ ಸೆಡ್ಡುಹೊಡೆದಿದ್ದರು! ಈ ಕೇಸರಿ ಪ್ರತಿಷ್ಠೆಯ ಗುದುಮುರಿಗೆಯಲ್ಲಿ ಸಂಘ ಪರಿವಾರಕ್ಕೆ ಸಮಾನಾಂತರವಾಗಿ “ಪುತ್ತಿಲ ಪರಿವಾರ” ಹುಟ್ಟಿಕೊಂಡಿತ್ತು. ಪುತ್ತಿಲ 62,458 ಮತ ಪಡೆದು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು; ಅರ್ಥಾತ್ ಸಂಘ ಪರಿವಾರದ ಅತಿರಥ-ಮಹಾರಥ ನಳಿನ್-ಕಲ್ಲಡ್ಕರಿಗೆ ದೊಡ್ಡ ಮುಖಭಂಗವಾಗಿತ್ತು! ತಮಾಷೆಯೆಂದರೆ, ಸದಾ ಅಡಗುದಾಣದಲ್ಲಿ ಕುಳಿತು ಹಿಂದುತ್ವದ ಹಿಕಮತ್ತು ಹೆಣೆಯುವವರು ಎನ್ನಲಾಗುತ್ತಿರುವ ಬ್ರಾಹ್ಮಣ ಕಲ್ಲಡ್ಕ ಭಟ್ ಆಕ್ರೋಶಿತ ಹಿಂದು ಠೋಳಿಗಳ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರೆ, ಶೂದ್ರ ನಳಿನ್ ಸಿಕ್ಕಿಬಿದ್ದು ಸಂಕಟ ಅನುಭವಿಸುತ್ತಿದ್ದಾರೆ.

ಬಿಜೆಪಿ-ಸಂಘ ಪರಿವಾರದ ಪರಮೋಚ್ಛ ನಾಯಕರನ್ನೇ ಬೆಚ್ಚಿಬೀಳಿಸಿದ “ಪುತ್ತಿಲ ಪರಿವಾರ” ಪುಳಕಿತವಾಗಿತ್ತು. ಈ ಹುರುಪಿನಲ್ಲಿ ಉಪಾಧ್ಯಾಯ, ಭಟ್ಟ, ಗೋಖಲೆಗಳಂಥ ಬ್ರಾಹ್ಮಣ ಥಿಂಕ್ ಟ್ಯಾಂಕ್‌ನ ಪುತ್ತಿಲ ಪರಿವಾರ ಇಡೀ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್‌ಗೆ ಕೇಸರಿ ಎಂಪಿ ಟಿಕೆಟ್ ಸಿಗದಂತೆ ಮಾಡುವ ಆಂದೋಲನ ಶುರುಮಾಡಿತು. ತನ್ಮೂಲಕ ಜಿಲ್ಲೆಯಲ್ಲಿ ಪುತ್ತಿಲ ಪರಿವಾರ ಸಂಘಟಿಸುವ ಸ್ಕೆಚ್ ಹಾಕಲಾಯಿತು. ಅಲ್ಲಲ್ಲಿ ಅರುಣ್ ಪುತ್ತಿಲನೇ ಬಿಜೆಪಿಯ ಸಂಸತ್ ಅಭ್ಯರ್ಥಿ ಎಂಬಂತೆ ಬಿಂಬಿಸುವ ಆಳೆತ್ತರದ ಬ್ಯಾನರ್, ಕಟೌಟ್‌ಗಳನ್ನು ನಿಲ್ಲಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಗುಂಪುಗಳನ್ನು ರಚಿಸಿಕೊಂಡು ನಳಿನ್ ನಾಲಾಯಕ್; ಅರುಣ ಪುತ್ತಿಲ ಹಿಂದುತ್ವ ಕಾಪಾಡಬಲ್ಲ ಲಾಯಕ್ ಬಿಜೆಪಿ ಹುರಿಯಾಳೆಂದು ಪ್ರಚಾರ ಅಭಿಯಾನ ಆರಂಭಿಸಲಾಯಿತು; ಪುತ್ತಿಲ ಜಿಲ್ಲೆಯಲ್ಲಿ ಕೇಸರಿ ನಾಯಕನ ಧರ್ತಿಯಲ್ಲಿ ಓಡಾಟ ಆರಂಭಿಸಿದರು. ಅದು ಇವತ್ತಿಗೂ ಅದೇ ಜೋಶ್‌ನಲ್ಲಿ ಮುಂದುವರಿದಿದೆ.

ಈ ನಡುವೆ ನಳಿನ್ ಹಿತೈಷಿ ಬಿ.ಎಲ್.ಸಂತೋಷ್ ಬಂಡುಕೋರ ಪುತ್ತಿಲರನ್ನು ದಿಲ್ಲಿಗೆ ಕರೆಸಿಕೊಂಡು ಒಂದು ಸುತ್ತು ರಾಜಿಗೂ ಪ್ರಯತ್ನ ನಡೆಸಿದರು. ಆದರದರಿಂದ ಪ್ರಯೋಜನವೇನಾಗಿಲ್ಲ. ಹಿಂದುತ್ವದ ಕಾರ್ಯಕರ್ತರಿಗೆ ನಳಿನ್ ಮೇಲೆ ನಂಬಿಕೆಯಿಲ್ಲ, ಅವರನ್ನು ಬದಲಿಸಿ ಎಂದು ಪುತ್ತಿಲ ನೇರವಾಗಿಯೇ ಸಂತೋಷ್ ಮುಂದೆ ಹೇಳಿದರೆನ್ನಲಾಗುತ್ತಿದೆ. ಇದು ಸಂತೋಷ್‌ಗೆ ಸಂದಿಗ್ಧಕ್ಕೀಡುಮಾಡಿದೆ. ನಳಿನ್‌ರನ್ನು ಹಣಿಯುವ ಹುರುಪು ಪುತ್ತಿಲ ಪರಿವಾರದಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ನಳಿನ್ ವಿರೋಧಿ ಅರ್ಥಾತ್ ಅರುಣ್ ಪುತ್ತಿಲರನ್ನು ಸಂಸದನಾಗಿಸುವ ಯೋಚನೆಯವರ ಗುಂಪುಗಳು ಲಕ್ಷಗಳ ಲೆಕ್ಕದಲ್ಲಿ ಏರುತ್ತಿದೆ. ನಳಿನ್ “ಗಾಡ್ ಫಾದರ್” ಸಂತೋಷ್‌ಗೆ ಬಿಸಿ ತುಪ್ಪದಂತಾಗಿದ್ದಾರೆ. ಬಹುಸಂಖ್ಯಾತ ಕೇಸರಿ ಕಾರ್ಯಕರ್ತರ ಆಗ್ರಹಕ್ಕೆ ಸ್ಪಂದಿಸಿದರೆ ಕಲ್ಲಡ್ಕ ಭಟ್‌ಗೆ ತಲೆ ಬಾಗಿದಂತಾಗುತ್ತದೆಂಬ ಪ್ರತಿಷ್ಠೆ ಸಂತೋಷ್‌ರನ್ನು ಕಾಡುತ್ತಿದೆ.

“ಮೂರನೆಯವನಿಗೆ” ಕೇಸರಿ ಟಿಕೆಟ್?

ದಶ ದಿಕ್ಕಿನಿಂದ ಎದುರಾಗುತ್ತಿರುವ ಪ್ರತಿರೋಧ ಕಡೆಗಣಿಸಿ ಬಿಜೆಪಿ ಬಾಸ್‌ಗಳು ನಳಿನ್‌ಗೇ ಕೇಸರಿ ಟಿಕೆಟ್ ಕೊಟ್ಟರೆ ಪುತ್ತಿಲ ಪರಿವಾರ ತಮ್ಮ ಕಪ್ಪು ಕುದುರೆ(ಅರುಣ್ ಪುತ್ತಿಲ)ಯನ್ನು ಸಮರಾಂಗಣಕ್ಕೆ ಬಿಡುವುದು ನಿಸ್ಸಂಶಯ; ನಳಿನ್‌ಗೆ ಪುತ್ತಿಲ ಸೆಡ್ಡು ಹೊಡೆದರೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರಲ್ಲಿ ಸೃಷ್ಟಿಯಾದ ಸನ್ನಿವೇಶ ಇಡೀ ದಕ್ಷಿಣ ಕನ್ನಡ ಲೋಕ ಅಖಾಡದಲ್ಲಿ ವ್ಯಾಪಿಸಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆದಿದೆ. ಪುತ್ತಿಲ ಪರಿವಾರದ ತಕರಾರಿರುವುದು ನಳಿನ್ ಬಗ್ಗೆಯಷ್ಟೇ. ಮೂರನೆಯವರಿಗೆ ಕೇಸರಿ ಕ್ಯಾಂಡಿಡೇಟ್ ಮಾಡಿದರೆ ಪುತ್ತಿಲ ಪರಿವಾರದ ಪುಂಗಿ ಬಂದ್ ಆಗುತ್ತದೆ. ಮತದಾರರ, ಬಿಜೆಪಿಯ ಬಹುತೇಕರ ಮತ್ತು ಹಿಂದುತ್ವ ತಂಡಗಳ ತಾತ್ಸಾರ-ತಿರಸ್ಕಾರಕ್ಕೆ ಈಡಾಗಿರುವ ನಳಿನ್‌ಗೆ ಗೇಟ್‌ಪಾಸ್ ಕೊಟ್ಟು ಹೊಸಮುಖ ತಂದರೆ ಮೋದಿ ಹಿಂದುತ್ವಕ್ಕೆ ಮಾರ್ಕೆಟ್ ಕುದುರಿ ಪುತ್ತಿಲ ಪರಿವಾರದ ಹಿಂದುತ್ವ ಮಂಕಾಗುತ್ತದೆ. ಆಗ ಸಂಸದನಾಗುವ ಆಸೆಯಿದ್ದರೂ ಅರುಣ್ ಪುತ್ತಿಲ ದಂಗೆ ಏಳಲು ಧೈರ್ಯವಾಗದೆ ಬಿಜೆಪಿ ಪರ ಕೆಲಸ ಮಾಡಬೇಕಾಗುತ್ತದೆ. ಬಿಜೆಪಿ ದೊಡ್ಡವರಿಗೂ ಪುತ್ತಿಲ ಪರಿವಾರವಿಲ್ಲದೆ ಚುನಾವಣೆ ಎದುರಿಸುವ ಧೈರ್ಯ ಇಲ್ಲದಾಗಿದೆ.

ಸಂದಿಗ್ಧಕ್ಕೆ ಸಿಲುಕಿರುವ ಪುತ್ತಿಲ ಈಗಂಚೂರು ಮೆತ್ತಗಾಗಿದ್ದಾರೆ. ಬಿಜೆಪಿ ಹೈಕಮಾಂಡ್‌ನ ರಾಜಿ ಆಹ್ವಾನ ಒಪ್ಪಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ತನಗೆ ಪುತ್ತೂರು ಮಂಡಲದ ಬಿಜೆಪಿ ಅಧ್ಯಕ್ಷಗಿರಿ ಕೊಡಬೇಕು; ನಳಿನ್ ಕೈಬಿಟ್ಟು ಬೇರೆಯವರಿಗೆ ಎಂಪಿ ಅಭ್ಯರ್ಥಿ ಮಾಡಬೇಕೆಂಬ ಬೇಡಿಕೆ ಪುತ್ತಿಲ ಮುಂದಿಟ್ಟಿದ್ದಾರೆ. ಸದ್ಯಕ್ಕೆ ಪುತ್ತೂರಿನ ಬಿಜೆಪಿ ತಾಲೂಕಾಧ್ಯಕ್ಷನಾದರೆ ಮುಂದಿನ ಅಸೆಂಬ್ಲಿ ಚುನಾವಣೆ ವೇಳೆಗೆ ಕೇಸರಿ ಎಮ್ಮೆಲ್ಲೆ ಟಿಕೆಟ್ ಕ್ಲೇಮ್ ಸುಲಭವೆಂಬ ಲೆಕ್ಕಾಚಾರ ಪುತ್ತಿಲ ಪರಿವಾರದ ನಿರ್ದೇಶಕರಾದ ಉಪಾಧ್ಯಾಯ, ಭಟ್ಟ, ಗೋಖಲೆ ವಗೈರೆ ಬ್ರಾಹ್ಮಣರದು. ಪುತ್ತಿಲ ಪರಿವಾರದ ಪರಾಕ್ರಮದಿಂದ ಚಿಂತೆಗೀಡಾಗಿರುವ ಕೇಸರಿ ಕಮಾಂಡ್ ಈಗ ಅನಿವಾರ್ಯವಾಗಿ “ಮೂರನೆಯವನ” ತಲಾಷ್ ನಡೆಸಿದೆ; ಇದು ನಳಿನ್ ಮತ್ತು ಪುತ್ತಿಲ ಇಬ್ಬರನ್ನೂ ಕಂಡರಾಗದ ಮಹಾ ತಂತ್ರಗಾರ ಕಲ್ಲಡ್ಕ ಭಟ್ ಹುನ್ನಾರ ಎಂಬ ಮಾತು ಬಿಜೆಪಿ ಬಿಡಾರದಿಂದ ಕೇಳಿಬರುತ್ತಿದೆ. ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ “ಅರುಣ್ ಪುತ್ತಿಲ ಕ್ರಿಮಿನಲ್; ದೇವಸ್ಥಾನದ ದುಡ್ಡು ನುಂಗಿದ ಹಿಂದೂ ದ್ರೋಹಿ ಎಂದೆಲ್ಲ “ಬಿರುದು” ಕೊಟ್ಟಿದ್ದರು. ಈಗ ಕೇಸರಿ ವಲಯದಲ್ಲಿ ಜೋರಾಗಿ ಓಡಾಡುತ್ತಿರುವ “ಮೂರನೆ” ಹೆಸರೆಂದರೆ ಬಿಜೆಪಿ ರಾಜ್ಯಘಟಕದ ಕಾರ್ಯದರ್ಶಿ ಬೃಜೇಶ್ ಚೌಟ ಎಂಬ ನಳಿನ್‌ರ ಸ್ವಜಾತಿ ಬಂಧು(ಬಂಟ). ಸೈನ್ಯದಲ್ಲಿದ್ದ ಈ ಬೃಜೇಶ್ ಚೌಟ ಈಗ ಹಣವಂತ ಉದ್ಯಮಿ. ಬಿಜೆಪಿ ಟಿಕೆಟ್ ದಯಪಾಲಿಸುವ “ದೇವರು” ಕಲ್ಲಡ್ಕ ಭಟ್‌ರಿಂದ ಶಿಷ್ಯತ್ವದ ದೀಕ್ಷೆ ಪಡೆದಿರುವ ಬೃಜೇಶ್‌ಗೆ ಮಾಜಿ ಸಿಎಂ ಯಡಿಯೂರಪ್ಪರ ಆಶೀರ್ವಾದವೂ ಇದೆ. ಕಳೆದ ಲೋಕಸಭೆ ಚುನಾವಣೆ ಹೊತ್ತಲ್ಲೆ ಬಿಜೆಪಿ ಟಿಕೆಟ್‌ಗೆ ಕಸರತ್ತು ಮಾಡಿದ್ದ ಬೃಜೇಶ್ ಹೆಸರಿಗೆ ನಳಿನ್-ಪುತ್ತಿಲ ತಿಕ್ಕಾಟದಲ್ಲಿ ಮಹತ್ವ ಬಂದುಬಿಟ್ಟಿದೆ. ಕೇಸರಿ ಟಿಕೆಟ್‌ಗಾಗಿಯೇ ಸಂಘ ಸಹವಾಸ ಮತ್ತು ಟಿಪ್ಪು-ಮುಸ್ಲಿಮ್ ಮೂದಲಿಕೆ ವರಸೆ ರೂಢಿಸಿಕೊಂಡಿರುವ ಬೃಜೇಶ್ ಚೌಟರಿಗೆ ಈ ಬಾರಿ ಅದೃಷ್ಟ ಖುಲಾಯಿಸುವ ಲೆಕ್ಕಾಚಾರಗಳು ರಾಜಕೀಯ ಕಟ್ಟೆಯಲ್ಲಿ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಂಗಳೂರಲ್ಲಿ ಹಮ್ಮಿಕೊಳ್ಳಲಾಗಿತ್ತು. ಎದುರಾಗಿರುವ ಲೋಕ ಸಮರ ಹಿನ್ನೆಲೆಯ ಅದ್ಧೂರಿ ಸಿದ್ಧತಾ ಸಭೆಯಿದಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಅಧ್ಯಕ್ಷ ನಳಿನ್ ಕಟೀಲ್, ವಿರೋಧ ಪಕ್ಷದ ನಾಯಕರಾದ ಅಶೋಕ್ ಮತ್ತು ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಮುಂತಾದ ’ಘಟಾನುಘಟಿ’ಗಳು ಸಭೆಯಲ್ಲಿದ್ದರು.

ಆದರೆ ಯಾರೂ ಬರಲಿರುವ ಚುನಾವಣೆಯ ಬಿಜೆಪಿ ಹುರಿಯಾಳೆಂದು ನಳಿನ್ ಹೆಸರನ್ನು ಅಪ್ಪಿತಪ್ಪಿಯೂ ಹೇಳಲಿಲ್ಲ. ಭಾಷಣಕಾರರೆಲ್ಲ ನಳಿನ್‌ರನ್ನು ಕಡೆಗಣಿಸಿದ್ದು ಎದ್ದು ಕಾಣುತ್ತಿತ್ತು. ಒಂದು ವಾರದ ಹಿಂದೆ ಮಂಗಳೂರಿಗೆ ಬಂದಿದ್ದ ವಿಜಯೇಂದ್ರ ಕಾರ್ಯಕರ್ತರ ಸಭೆಯಲ್ಲಿ “ಮತ್ತೊಮ್ಮೆ ನಳಿನ್‌ರನ್ನು ಎಂಪಿ ಮಾಡಿ” ಎಂದಿದ್ದರು. ಆದರೆ ಈ ಸಲ ವಿಜಯೇಂದ್ರಗೆ ಸ್ಥಳೀಯ ಮಟ್ಟದಲ್ಲಿ ನಳಿನ್ ಬಗೆಗಿರುವ ಬೇಸರದ ಬಿಸಿ ತಟ್ಟಿತ್ತು. ಹಾಗಾಗಿ ನಳಿನ್‌ರನ್ನು ತಾರೀಫು ಮಾಡುವ ಉಸಾಬರಿಗೆ ವಿಜಯೇಂದ್ರ ಹೋಗಲಿಲ್ಲ ಎಂದು ಬಿಜೆಪಿಗರು ಮಾತಾಡಿಕೊಳ್ಳುತ್ತಿದ್ದಾರೆ. ಸಂಭವನೀಯ ಕೇಸರಿ ಅಭ್ಯರ್ಥಿ ಎನ್ನಲಾಗುತ್ತಿರುವ ಬೃಜೇಶ್ ಚೌಟರ ಹೆಸರನ್ನು ನಾಯಕರು ಪ್ರಸ್ತಾಪಿಸಿದಾಗ ಕಾರ್ಯಕರ್ತರ ಜೋರಾದ ಚಪ್ಪಾಳೆ, ಶಿಳ್ಳೆಗಳ ಕರತಾಡನ ಆಗುತಿತ್ತು; ಖುದ್ದು ನಳಿನ್ ಮಾತಾಡುವಾಗ ವೇದಿಕೆಯಲ್ಲಿದ್ದ “ದೊಡ್ಡವರು” ಮತ್ತು ಸಭೆಯಲ್ಲಿದ್ದ “ಸಣ್ಣ”ವರು ಹಗುರವಾಗಿ ಪರಿಗಣಿಸಿದಂತಿತ್ತು. ತಿರಸ್ಕಾರದಿಂದ ನಳಿನ್ ಕಳೆಗುಂದಿದಂತಿದ್ದರು. ಇದು ನಳಿನ್‌ಗೆ ಕೇಸರಿ ಟಿಕೆಟ್ ಕಟ್ ಆಗುವ ಮತ್ತು ಬೃಜೇಶ್ ಚೌಟ ಅಭ್ಯರ್ಥಿಯಾಗುವ ಸೂಚನೆಯಂತಿತ್ತೆಂದು ವಿಶ್ಲೇಷಿಸಲಾಗುತ್ತಿದೆ.

ಈ ಬಂಟ-ಬ್ರಾಹ್ಮಣ ಮೇಲಾಟದ ಮಧ್ಯೆ ಬಿಲ್ಲವರೂ ತಮ್ಮ ಸಮುದಾಯವನ್ನು ಪರಿಗಣಿಸುವಂತೆ ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಬಿಲ್ಲವರ ಬೆಂಬಲದಿಂದಲೇ ಕೇಸರಿ ಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ತಮಗೆಂದೂ ಅವಕಾಶ ಕೊಡದ ಅಸಮಧಾನ ಆ ಸಮುದಾಯದಲ್ಲಿದೆ. ಇದರಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ-ಬಿಲ್ಲವ ಜಾತಿಯ ಕೋಟ ಶ್ರೀನಿವಾಸ ಪೂಜಾರಿಗೆ ಹುರಿಯಾಳಾಗಿಸಿದರೆ ಹೇಗೆಂಬ ಯೋಚನೆ ಬಿಜೆಪಿ ಟಿಕೆಟ್ ಕಮಿಟಿ ಯಜಮಾನರ ತಲೆಯಲ್ಲಿ ಹುಟ್ಟಿರುವ ಸಮಾಚಾರಗಳು ಹಾರಾಡುತ್ತಿವೆ. ಬಿಲ್ಲವ ಹುರಿಯಾಳು ಹೂಡುವ ಈ ಗಣಿತಕ್ಕೆ ಕಲ್ಲಡ್ಕ ಭಟ್ಟ ಮತ್ತು ಸಂತೋಷ್ ನಡುವಿನ ರಾಜಿ ಸೂತ್ರದ ಆಧಾರವಿದೆ. ಸಂತೋಷ್ ಹಿಂಬಾಲಕ ನಳಿನ್‌ಗೆ ಪಕ್ಕದ ಉಡುಪಿ-ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಿದರೆ ಅದೇ ಸಮುದಾಯದ ಬೃಜೇಶ್ ಚೌಟರಿಗೆ ಮಂಗಳೂರು ಟಿಕೆಟ್ ಕೊಡಲಾಗುವುದಿಲ್ಲ. ಆಗ ಕಲ್ಲಡ್ಕ ಭಟ್ಟರ ವಿಧೇಯ ಅನುಯಾಯಿ ಬಿಲ್ಲವರ ಕೋಟ ಶ್ರೀನಿವಾಸ ಪೂಜಾರಿಗೆ ದಕ್ಷಿಣ ಕನ್ನಡ ಟಿಕೆಟ್ ಕೊಡುವುದು ಬಿಜೆಪಿ ಹೈಕಮಾಂಡ್‌ಗೆ ಅನಿವಾರ್ಯವಾಗುತ್ತದೆ. ಇದು ಪ್ರತಿಸ್ಪರ್ಧಿ ವಿಪ್ರ ಶ್ರೇಷ್ಠರಾದ ಕಲ್ಲಡ್ಕ ಭಟ್ ಮತ್ತು ಸಂತೋಜಿ ಮೂಗುಳಿಸಿಕೊಳ್ಳುವ ಹೊಂದಾಣಿಕೆಯೆಂದು ಬಿಜೆಪಿಯಲ್ಲಿ ತರ್ಕಿಸಲಾಗುತ್ತಿದೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಿ.ಟಿ.ರವಿ ನಳಿನ್ ವಲಸೆಯನ್ನು ಒಪ್ಪುವುದು ಸಾಧ್ಯವೇ ಇಲ್ಲ; ಹೀಗಾಗಿ ನಳಿನ್ ಮಾಜಿಯಾಗುವ “ಯೋಗ” ಬಂದಿದೆ ಎಂದು ಬಿಜೆಪಿಗರು ಹೇಳುತ್ತಾರೆ.

ಕಾಂಗ್ರೆಸ್ ಕತೆ

ಬಣ ಬಡಿದಾಟ, ಸತತ ಎಂಟು ಸೋಲು, ಹಿಂದುತ್ವಕ್ಕೆ ಮರುಳಾಗಿರುವ ನಿರ್ಣಾಯಕ ಬಿಲ್ಲವ ಓಟ್ ಬ್ಯಾಂಕ್ ಕೈಕೊಡುತ್ತಿರುವುದರಿಂದ ಕಾಂಗ್ರೆಸ್ ದುರ್ಬಲವಾಗಿದೆ. ಇಡೀ ಜಿಲ್ಲೆಯನ್ನು ಪ್ರಭಾವಿಸಿ ಪಕ್ಷವನ್ನು ಮುನ್ನಡೆಸುವ ಬದ್ಧತೆಯ ನಾಯಕತ್ವ ಕಾಂಗ್ರೆಸ್‌ನಲ್ಲಿಲ್ಲವಾಗಿದೆ. ಯುದ್ಧ ಘೋಷಣೆಯಾದ ನಂತರವೇ ಶಸ್ತ್ರಅಭ್ಯಾಸಕ್ಕಿಳಿಯುವ ವ್ಯರ್ಥ ಕಸರತ್ತು ಕಾಂಗ್ರೆಸ್ಸಿಗರದು. ಜಿಲ್ಲೆಯ ಎಂಟು ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವುದು ಎರಡೇ ಕಡೆ. ಹಿಂದುತ್ವ ಸಂಘಟನೆಯಲ್ಲಿನ ಒಡಕಿನಿಂದ ಪುತ್ತೂರಲ್ಲಿ ಕಾಂಗ್ರೆಸ್ ಅಚಾನಕ್ ಆಗಿ ಗೆದ್ದಿದೆಯಷ್ಟೆ; ಉಳ್ಳಾಳ(ಮಂಗಳೂರು)ದ ಶಾಸಕ ಸ್ಪೀಕರ್ ಖಾದರ್. ಹಲವು ಋಣಾತ್ಮಕ ಅಂಶಗಳ ನಡುವೆ ಕಾಂಗ್ರೆಸ್ ಕುಗ್ಗಿಹೋಗಿದ್ದರೂ ಗೆಲ್ಲುವ ಅವಕಾಶ ಇಲ್ಲವೆಂದೇನಿಲ್ಲ. ಸಂಘೀ ಹಿರೇಮಣಿಗಳಿಂದ ಕ್ಷೇತ್ರದ ಪ್ರಥಮ ಬಹುಸಂಖ್ಯಾತರಾದ ಬಿಲ್ಲವರಿಗಾಗುತ್ತಿರುವ ನಾಜೂಕಾದ ಮೋಸ-ಶೋಷಣೆಯ ಅರಿವು ಆ ಸಮುದಾಯದಲ್ಲಿ ಮೂಡಿಸಿ ಹಿಂದುತ್ವದ ಅಂಧತ್ವದಿಂದ ಹೊರತಂದು ಎರಡನೇ ಬಹುಸಂಖ್ಯಾತ ಮುಸ್ಲಿಮರ ವಿಶ್ವಾಸ ಗಳಿಸಿದರೆ ಕಾಂಗ್ರೆಸ್ಸಿಗೆ ಜಯ ಕಷ್ಟವೇನಲ್ಲ ಎಂದು ಜಿಲ್ಲೆಯ ಇಲೆಕ್ಷನ್ ಸೂತ್ರ-ಸಮೀಕರಣ ಬಲ್ಲವರು ಹೇಳುತ್ತಾರೆ.

2019ರ ಚುನಾವಣೆಯಲ್ಲಿ ಬಂಟರ “ತುಂಟ” ಹುಡುಗನೆನ್ನಲಾದ ಮಿಥುನ್ ರೈಗೆ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಹಿಂದುತ್ವದ ಚಕ್ರವ್ಯೂಹ ಬೇಧಿಸಿ ಹೊರಬರಲು ಜನಾಕರ್ಷಣೆಯಿಲ್ಲದ ಮಿಥುನ್‌ಗೆ ಸಾಧ್ಯವಾಗಲಿಲ್ಲ. ಈ ಬಾರಿಯೂ ಮಿಥುನ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜತೆಗಿರುವ ನಂಟಿನಿಂದ ಮತ್ತೊಂದು ಕೈನೋಡುವ ಉಮೇದಿಯಲ್ಲಿದ್ದಾರೆ. ಮತ್ತೊಬ್ಬ ಬಂಟ ನಾಯಕ-ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಬಂಟ್ವಾಳದಲ್ಲಿ ಸೋತಿರುವ ಮಾಜಿ ಮಂತ್ರಿ ರಮಾನಾಥ್ ರೈ ಕೈ ಕ್ಯಾಂಡಿಡೇಟಾಗುವ ಯೋಜನೆಯಲ್ಲಿದ್ದಾರೆ. ಆದರೆ ಸ್ವಜಾತಿ ಬಂಟರ ಮತವೇ ಸಂಪೂರ್ಣ ಸೆಳೆಯಲಾಗದ ಮಿಥುನ್ ಮತ್ತು ರೈಗೆ ಕಾಂಗ್ರೆಸ್‌ನಲ್ಲಿ ವಿರೋಧವಿದೆ.

ಮಿಥುನ್ ರೈ

ಬಂಟರಿಗಿಂತ ಬಿಲ್ಲವರಿಗೆ ಅವಕಾಶ ಕೊಟ್ಟರೆ ಹೋರಾಟಕ್ಕೆ ಅನುಕೂಲವೆಂಬ ಅಭಿಪ್ರಾಯ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಬಹುತೇಕರದಾಗಿದೆ. ದಕ್ಷಿಣ ಕನ್ನಡ ಚುನಾವಣಾ ಪಿಚ್‌ನಲ್ಲಿ ಕಾಂಗ್ರೆಸ್ ಬಿಲ್ಲವನನ್ನು ಬ್ಯಾಟಿಂಗ್‌ಗೆ ಕಳಿಸಿದರಷ್ಟೇ ಹೆಚ್ಚು ರನ್ ಗಳಿಕೆ ಸಾಧ್ಯವೆಂದು ಜಿಲ್ಲೆಯ ರಾಜಕೀಯದ ನಾಡಿಬಲ್ಲವರ ಅಭಿಪ್ರಾಯವೂ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಬಿಲ್ಲವರಿಗೆ ಮಣೆ ಹಾಕುವ ನಿರ್ಧಾರ ಮಾಡಿದೆ. ಡಿಸಿಸಿ ಅಧ್ಯಕ್ಷ-ಎಮ್ಮೆಲ್ಸಿ ಹರೀಶ್ ಕುಮಾರ್ ಪೂಜಾರಿ ಸಹ “ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಬಿಲ್ಲವರಿಗೆ ಮತ್ತು ಉಡುಪಿ-ಚಿಕ್ಕಮಗಳೂರಲ್ಲಿ ಬಂಟರಿಗೆ ಅಭ್ಯರ್ಥಿ ಮಾಡಲಿದೆ” ಎಂದು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಉಡುಪಿ-ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗುವುದು ಹೆಚ್ಚುಕಮ್ಮಿ ಖಚಿತ ಎನ್ನಲಾಗುತ್ತಿದೆ. ಸಿಎಂ ಸಿದ್ದು ಜತೆ ಪೂರ್ವಾಶ್ರಮ (ಜನತಾ ಪರಿವಾರ)ದ ಗಾಢ ಸಂಬಂಧ ಹೊಂದಿರುವ ಹೆಗ್ಡೆಗೆ ಕರಾವಳಿಯಲ್ಲಿ ಸ್ವಜಾತಿ ಬಂಟರ ಅಖಂಡ ಬೆಂಬಲ ಮತ್ತು ಮಲೆನಾಡಿನ ಹುಲ್ಲು ರಸ್ತೆ ಪ್ರದೇಶದಲ್ಲಿ ಜನ ಸಂಪರ್ಕವಿದೆ.

ದಕ್ಷಿಣ ಕನ್ನಡ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಲ್ಲವ ಸಮುದಾಯದ ಮಾಜಿ ಮಂತ್ರಿ ವಿನಯ್‌ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಮತ್ತು ಕೆಪಿಸಿಸಿ ವಕ್ತಾರ ವಿವೇಕ್ ರಾಜ್ ಮಧ್ಯೆ ಪೈಪೋಟಿಯಿದೆ. ಸೊರಕೆ ಮೂಲ ದಕ್ಷಿಣ ಕನ್ನಡದ ಪುತ್ತೂರಿನವರಾದರೂ ಅವರು ಉಡುಪಿಯನ್ನು “ಕರ್ಮ ಕ್ಷೇತ್ರ” ಮಾಡಿಕೊಂಡು ಎರಡು ದಶಕ ಕಳೆದುಹೋಗಿದೆ. ಹಿಂದೆ ಎರಡು ಅವಧಿಗೆ ಪುತ್ತೂರಿನ ಕಾಂಗ್ರೆಸ್ ಶಾಸಕನಾಗಿದ್ದ ಸೊರಕೆಗೆ ಸ್ವಪಕ್ಷದ ವಿರೋಧಿಗಳು ಮತ್ತೆ ಗೆಲ್ಲಲು ಬಿಡಲಿಲ್ಲ. ಆ ಬಳಿಕ ದಕ್ಷಿಣ ಕನ್ನಡ ಕಾಂಗ್ರೆಸ್ ಹೈಕಮಾಂಡ್ ಆಗಿದ್ದ ಆಸ್ಕರ್ ಫರ್ನಾಂಡಿಸ್ ಅವರನ್ನು ಉಡುಪಿಗೆ ಆಮದು ಮಾಡಿಕೊಂಡಿದ್ದರು. 1999-2004ರ ತನಕ ಉಡುಪಿ ಸಂಸದರಾಗಿದ್ದರು. ಆನಂತರ ಕಾಪು ಎಮ್ಮೆಲ್ಲೆಯಾಗಿ ಮೊದಲ ಸಿದ್ದು ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದರು. ಕಳೆದೆರಡು ಅಸೆಂಬ್ಲಿ ಚುನಾವಣೆಯಲ್ಲಿ ಕಾಪುನಲ್ಲಿ ಸೊರಕೆಗೆ ಹಿಂದುತ್ವದ ಅಬ್ಬರ ಎದುರಿಸಿ ಗೆಲ್ಲಲಾಗಿಲ್ಲ. ಇತ್ತ ದಕ್ಷಿಣ ಕನ್ನಡದಲ್ಲೂ ಸೊರಕೆ “ಪರಿಚಯ” ಮುಸುಕಾಗಿದೆ. ಹಿಂದೆ ಜನಾರ್ದನ ಪೂಜಾರಿ ಗೆಲುವಿಗೆ ಅಡ್ಡಗಾಲು ಹಾಕಿದ್ದರೆಂಬ ಬೇಸರ ಹಳೆ ತಲೆಮಾರಿನ ಬಿಲ್ಲವರಲ್ಲಿದೆ. ಈ “ಚರಿತ್ರೆ” ಸೊರಕೆಗೆ ದಕ್ಷಿಣ ಕನ್ನಡ ಕೈ ಕ್ಯಾಂಡಿಡೇಟಾಗುವುದಕ್ಕೆ ಅಥವಾ ಟಿಕೆಟ್ ಸಿಕ್ಕರೂ ಗೆಲ್ಲುವುದಕ್ಕೆ ತೊಡಕಾಗಿದೆ ಎಂದು ಕಾಂಗ್ರೆಸ್ಸಿಗರು ವಿವರಿಸುತ್ತಾರೆ.

ಹೊಸಬರನ್ನು ಸ್ಪರ್ಧೆಗಿಳಿಸುವ ಪ್ಲಾನು ಡಿಕೆಶಿಯದೆನ್ನಲಾಗುತ್ತಿದೆ. ಪದ್ಮರಾಜ್ ಮತ್ತು ವಿವೇಕ್ ರಾಜ್ ಕಾಂಗ್ರೆಸ್ ಟಿಕೆಟ್ ಬಯಸಿರುವ ಬಿಲ್ಲವರ ಎರಡು ಯುವ ಮುಖಗಳು. ಇವರಲ್ಲಿ ಪದ್ಮರಾಜ್ ಹೆಸರು ಸ್ವಜಾತಿ ವಲಯದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಬಿಲ್ಲವರ ಶ್ರದ್ಧಾ ಕೇಂದ್ರ ಕೊದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತಮಂಡಳಿಯಲ್ಲಿರುವ ಪದ್ಮರಾಜ್ ಆ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ; “ಬಿಲ್ಲವ ಭೀಷ್ಮ” ಜನಾರ್ದನ ಪೂಜಾರಿಯವರ ಕೃಪಾಶೀರ್ವಾದವೂ ಇದೆ. ಕಾಂಗ್ರೆಸ್ ಚಟುವಟಿಕೆಯಲ್ಲೂ ಸಕ್ರಿಯವಾಗಿರುವ ಪದ್ಮರಾಜ್ ಆ ಪಾರ್ಟಿ ಮಟ್ಟಿಗೆ ಗಟ್ಟಿ ಸ್ಪರ್ಧಾಳು; ಆದರೆ ಪದ್ಮರಾಜ್ ಹಿಂದುತ್ವದ ಸಮೂಹ ಸನ್ನಿಯಲ್ಲಿರುವ ಸ್ವಜಾತಿ ಬಿಲ್ಲವರನ್ನು ಯಾವ ಪ್ರಮಾಣದಲ್ಲಿ ಒಲಿಸಿಕೊಳ್ಳುತ್ತಾರೆಂಬ ಆಧಾರದಲ್ಲಿ ಹಣೆಬರಹ ನಿರ್ಧಾರವಾಗಲಿದೆ ಎಂದು ದಕ್ಷಿಣ ಕನ್ನಡ ರಣಕಣದ ಸೂತ್ರ-ಸಮೀಕರಣ ಬಲ್ಲ ರಾಜಕೀಯ ಪಂಡಿತರು ತರ್ಕಿಸುತ್ತಾರೆ.

ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ಸಾಂಪ್ರದಾಯಿಕ ಸೆಣಸಾಟದ ದಕ್ಷಿಣ ಕನ್ನಡದಲ್ಲಿ ಈ ಸಲ ಹೊಸ ಮುಖಗಳ ಮುಖಾಮುಖಿಯಾಗುವ ಸಕಲ ಸೂಚನೆಗಳು ನಿಚ್ಚಳವಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮೃತ್ಯು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಪುತ್ರ ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್‌ ಭೂಷಣ್‌ ಸಿಂಗ್‌ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ...