Homeಕರ್ನಾಟಕಶಿವಮೊಗ್ಗ ಲೋಕ ಅಖಾಡ: ಮತ್ತೆ ಬಂಗಾರಪ್ಪ-ಯಡಿಯೂರಪ್ಪ ಕುಟುಂಬ ಪ್ರತಿಷ್ಠೆಯ ಕದನ ಕುತೂಹಲ?!

ಶಿವಮೊಗ್ಗ ಲೋಕ ಅಖಾಡ: ಮತ್ತೆ ಬಂಗಾರಪ್ಪ-ಯಡಿಯೂರಪ್ಪ ಕುಟುಂಬ ಪ್ರತಿಷ್ಠೆಯ ಕದನ ಕುತೂಹಲ?!

- Advertisement -
- Advertisement -

ಮಲೆನಾಡು, ಅರೆಮಲೆನಾಡು ಮತ್ತು ಕಡಲ ತಡಿಯ ಪ್ರದೇಶಗಳನ್ನು ಒಳಗೊಂಡ ಸಹ್ಯಾದ್ರಿ ತಪ್ಪಲಿನ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಚುನಾವಣೆ ಸಮರ ಘೋಷಣೆಯಾದಾಗಲೆಲ್ಲಾ ಇಡೀ ದೇಶದ ಕುತೂಹಲ ಕೆರಳಿಸುವ ಪ್ರತಿಷ್ಠೆಯ ಅಖಾಡ! ಶಾಂತವೇರಿ ಗೋಪಾಲಗೌಡರಂಥ ಸಮಾಜವಾದಿ ದಾರ್ಶನಿಕ-ಚಳವಳಿಗಾರರು ಮತ್ತು ಕಾಗೋಡು, ಈಸೂರು ಹೋರಾಟದಂಥ ಜನಪರ ಸಂಘರ್ಷಗಳನ್ನು ಕಂಡ ಐತಿಹಾಸಿಕ ಶಿವಮೊಗ್ಗೆಯ ನೆಲವೀಗ ಜೀವವಿರೋಧಿ ಜಾತಿ-ಧರ್ಮ-ದುಡ್ಡುಗಳ ಸೂತ್ರ-ಸಮೀಕರಣದ ಆಡುಂಬೊಲದಂತಾಗಿದೆ. ಸಂಸದನೊಬ್ಬ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಪ್ರಜಾ ಸೋಷಲಿಸ್ಟ್ ಪಕ್ಷದ ಜೆ.ಎಚ್.ಪಟೇಲ್, ರಾಜ್ಯ ರಾಜಕಾರಣದ ಚಿರ ಬಂಡುಕೋರನೆನಿಸಿದ್ದ ಸಾರೆಕೊಪ್ಪ ಬಂಗಾರಪ್ಪ ಮತ್ತು ಬಲಪಂಥೀಯ ಧರ್ಮಕಾರಣದ ಭುಜಬಲ ಪರಾಕ್ರಮಿ ಯಡಿಯೂರಪ್ಪರಂಥ ಅತಿರಥ ಮಹಾರಥರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಶಿವಮೊಗ್ಗ, ಲಿಂಗಾಯತ ಮತ್ತು ದೀವರ (ಈಡಿಗರು) ಮೇಲಾಟದ ಮತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿತ್ತು. ಯಾವಾಗ ಬಂಗಾರಪ್ಪ ಪ್ರಭಾವ ಮಸುಕಾಗಿ ಯಡಿಯೂರಪ್ಪ ಪ್ರವರ್ಧಮಾನಕ್ಕೆ ಬಂದರೋ ಆಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಸರಿ “ಹಣಾ”ಹಣಿಯೇ ಪ್ರಧಾನ ಆಗಿಹೋಗಿದೆ.

ಹಾಗೆ ನೋಡಿದರೆ ಕಾಂಗ್ರೆಸ್ಸಿಗರ ಲಾಗಾಯ್ತಿನ ಜಾತಿ ಲೆಕ್ಕಾಚಾರದ ಓಟ್ ಬ್ಯಾಂಕ್ ತಂತ್ರಗಾರಿಕೆಯಿಂದ ನೀರಸವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಚದುರಂಗಕ್ಕೆ ರೋಚಕತೆ ಬಂದಿದ್ದು ಬಂಗಾರಪ್ಪನವರ ಎಂಟ್ರಿ ನಂತರ. 1991ರ ಚುನಾವಣೆಯಲ್ಲಿ ತನ್ನ ಶಡ್ಡಕ, ಸಾಗರದ ಕೆ.ಜಿ.ಶಿವಪ್ಪರನ್ನು ಕಾಂಗ್ರೆಸ್‌ನ ಎಂಪಿ ಮಾಡಿದ್ದ ಬಂಗಾರಪ್ಪ ಆ ಬಳಿಕ ಕಾಂಗ್ರೆಸ್‌ನ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ಗೆ ಸೆಡ್ಡಹೊಡೆದು ಕೆಸಿಪಿ (ಕರ್ನಾಟಕ ಕಾಂಗ್ರೆಸ್ ಪಕ್ಷ) ಕಟ್ಟಿಕೊಂಡಿದ್ದರು. 1996ರಲ್ಲಿ ಕೆಸಿಪಿ ಅಭ್ಯರ್ಥಿಯಾಗಿ ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಕುಸ್ತಿಗಿಳಿದಿದ್ದ ಬಂಗಾರಪ್ಪ ಮೊದಲ ಪ್ರಯತ್ನದಲ್ಲೇ ಸಂಸದರಾದರು. ಆದರೆ ಒಂದೂವರೆ ವರ್ಷದಲ್ಲೇ ಎದುರಾದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿಯ ಲಿಂಗಾಯತ ಹುರಿಯಾಳು ಆಯನೂರು ಮಂಜುನಾಥ್‌ಗೆ ತೀರಾ ಸಣ್ಣ ಅಂತರದಲ್ಲಿ ಮಣಿಯಬೇಕಾಯಿತು. ಸೋಲರಿಯದ ಸರದಾರ ಎಂಬ ಹೆಗ್ಗಳಿಕೆಯ ಬಂಗಾರಪ್ಪ ಮೊದಲಬಾರಿ ಸೋಲಿನ ರುಚಿ ಕಂಡಿದ್ದರು. (ಹಿಂದೊಮ್ಮೆ ಸಾಗರದಲ್ಲಿ ಕಾಗೋಡು ತಿಮ್ಮಪ್ಪರ ವಿರದ್ಧ ಸೋತಿದ್ದರಾದರೂ ಆಗ ಸೊರಬದಲ್ಲಿ ಜಯಶಾಲಿಯಾಗಿದ್ದರು.) 1999ರ ಇಲೆಕ್ಷನ್ ವೇಳೆಗೆ ತನ್ನ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಮಾಡಿದ ಬಂಗಾರಪ್ಪ ಕಾಂಗ್ರೆಸ್ ಸಂಸದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.

ಆಯನೂರು ಮಂಜುನಾಥ್

ಕೇಂದ್ರದಲ್ಲಿ ಸಚಿವನಾಗುವ ಕನಸು ಕಾಣುತ್ತಿದ್ದ ಬಂಗಾರಪ್ಪ 2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರ ಗದ್ದುಗೆ ಏರುತ್ತದೆ ಎಂದು ಎಣಿಸಿದ್ದರು. ಇದ್ದಕ್ಕಿದ್ದಂತೆ ಚುನಾವಣೆ ಹತ್ತಿರಾದಾಗ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಸಾಕ್ಷಾತ್ ವಾಜಪೇಯಿ ಸಮ್ಮುಖದಲ್ಲೇ ಬಿಜೆಪಿ ಸೇರಿದರು; ಸಮಾಜವಾದಿ ಸಿದ್ಧಾಂತದ ಬಂಗಾರಪ್ಪ ಕೋಮು ಹಿಡನ್ ಅಜೆಂಡಾಗಳ ಕೇಸರಿ ಪಾರ್ಟಿ ಸೇರಿದ್ದು ಆಗ ದೊಡ್ಡ ಚರ್ಚೆ ಹುಟ್ಟುಹಾಕಿತ್ತು. ಆದರೆ ಬಂಗಾರಪ್ಪರ ಅಧಿಕಾರ ರಾಜಕಾರಣದ ಲೆಕ್ಕಾಚಾರಗಳು ಬೂಮ್‌ರಾಂಗ್ ಆಗಿತ್ತು. 2004ರಲ್ಲಿ ಬಿಜೆಪಿ ಆಡಳಿತ ಕೊನೆಯಾಗಿ ಮನಮೋಹನ್ ಸಿಂಗ್ ಮುಂದಾಳತ್ವದ ಯುಪಿಎ ಮೈತ್ರಿಕೂಟದ ಸರಕಾರ ರಚನೆಯಾಯಿತು. ಕಾಂಗ್ರೆಸ್‌ನಲ್ಲಿದ್ದರೆ ಕೇಂದ್ರ ಸಚಿವನಾಗುತ್ತಿದ್ದ ಬಂಗಾರಪ್ಪ ಗರ್ಭಗುಡಿ ಸಂಸ್ಕೃತಿಯ ಬಿಜೆಪಿಯಲ್ಲಿ ಹೊಂದಾಣಿಕೆಯಾಗದೆ ಸಿಡಿಮಿಡಿಗೊಂಡರು. 2004ರಲ್ಲಿ ಲೋಕಸಭಾ ಚುನಾವಣೆ ಜತೆಯೇ ಜರುಗಿದ್ದ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ತನ್ನ ಪ್ರಭಾವ-ಪ್ರಚಾರದಿಂದ ಎಂಬುದು ಬಂಗಾರಪ್ಪ ವಾದವಾಗಿತ್ತು. ತಾನಿರುವಲ್ಲೆಲ್ಲ ನಂಬರ್ ಒನ್ ಸ್ಥಾನಕ್ಕೆ ಹಾತೊರೆಯುವ ಸ್ವಭಾವದ ಬಂಗಾರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷತೆಯನ್ನು ಕ್ಲೇಮ್ ಮಾಡಿದರು. ಅದಕ್ಕೆ ಸಂಘ ಪರಿವಾರ ಆಸ್ಪದ ಕೊಡಲಿಲ್ಲ. ಕೆರಳಿದ ಬಂಗಾರಪ್ಪ ಆರೇ ತಿಂಗಳಲ್ಲಿ ಬಲಪಂಥೀಯ ಬಿಜೆಪಿಯಿಂದ ಸಿಡಿದು ಆಚೆ ಬಂದರು.

ಬಿಜೆಪಿ ಮತ್ತು ಸಂಸದ ಸ್ಥಾನಕ್ಕೆ ರಾಜಿನಾಮೆ ಬಿಸಾಕಿದ ಬಂಗಾರಪ್ಪ ಮುಲಾಯಮ್ ಸಿಂಗ್ ಯಾದವ್‌ರ ಸಮಾಜವಾದಿ ಪಾರ್ಟಿ ಸೇರಿ ಬೆಂಗಳೂರಲ್ಲಿ ಬೃಹತ್ ಸಮಾವೇಶ ನಡೆಸಿದರು. ಬಂಗಾರಪ್ಪ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾದರು; 2005ರಲ್ಲಿ ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದಲ್ಲಾದ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯಡಿ ಸ್ಫರ್ಧಿಸಿ ಚುನಾಯಿತರಾದರು. ಆನಂತರ ಬಂಗಾರಪ್ಪ ಮತ್ತು ಯಡಿಯೂರಪ್ಪ ನಡುವೆ ಶಿವಮೊಗ್ಗ ಜಿಲ್ಲೆಯ ಮೇಲೆ ಹಿಡಿತ ಸ್ಥಾಪಿಸುವ ಗುದುಮುರಿಗೆ ಬಿರುಸಾಯಿತು. ಯಡಿಯೂರಪ್ಪ ಹೆಜ್ಜೆ-ಹೆಜ್ಜೆಗೆ ಬಂಗಾರಪ್ಪನವರಿಗೆ ಸೆಡ್ಡುಹೊಡೆಯಲು ಪ್ರಯತ್ನಿಸಿದರು; ಈ ಮತ್ಸರದ ಪೈಪೋಟಿ ಯಾವ ಮಟ್ಟ ತಲುಪಿತೆಂದರೆ, ಬಂಗಾರಪ್ಪ 2008ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಶಿಕಾರಿಪುರಕ್ಕೆ ಹೋಗಿ ಯಡಿಯೂರಪ್ಪನವರಿಗೆ ಪ್ರತಿಸ್ಪರ್ಧಿಯಾದರು! ಕಾಂಗ್ರೆಸ್ ಬೆಂಬಲವಿದ್ದರೂ ಸಮಾಜವಾದಿ ಪಕ್ಷದ ಹುರಿಯಾಳು ಬಂಗಾರಪ್ಪಗೆ ಯಡಿಯೂರಪ್ಪರ ಕಾಸಿನ ನೆಟ್‌ವರ್ಕ್‌ಅನ್ನು ಬೇಧಿಸಲಾಗಲಿಲ್ಲ ಎಂಬ ಮಾತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಈಗಲೂ ಚಾಲ್ತಿಯಲ್ಲಿದೆ.

2005ರಲ್ಲಿ ಕಾಂಗ್ರೆಸ್‌ನ ಆಯನೂರು ಮಂಜುನಾಥ್ ಎದುರು ತಿಣುಕಾಡಿ ಸಣ್ಣ ಅಂತರ(16,949)ದ ಜಯ ಕಂಡಿದ್ದ ಬಂಗಾರಪ್ಪನವರಿಗೆ ಎರಡು ಪ್ರಬಲ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಒಂಟಿಯಾಗಿ ಎದುರಿಸುವುದು ಕಷ್ಟವೆಂಬುದು ಸ್ಪಷ್ಟವಾಗಿತ್ತು. ಜತೆಗೆ ತನ್ನ ಹಿಡಿತದಲ್ಲಿರುವ ಜಿಲ್ಲೆಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಯಡಿಯೂರಪ್ಪ ನಡಸಿರುವುದರ ಅರಿವಾಗಿತ್ತು. ಹಾಗಾಗಿ 2009 ಚುನಾವಣೆ ಎದುರಾದಾಗ ಕಾಂಗ್ರೆಸ್ ಸೇರಿದ ಬಂಗಾರಪ್ಪ ಆ ಪಕ್ಷದ ಅಭ್ಯರ್ಥಿಯಾದರು. ಆದರೆ ಆ ವೇಳೆಗೆ ಬಂಗಾರಪ್ಪ ಅನಾರೋಗ್ಯ, ಹಣಕಾಸಿನ ಮುಗ್ಗಟ್ಟು ಮತ್ತು ಕೌಟುಂಬಿಕ ಸಮಸ್ಯೆಯಿಂದ ಜರ್ಜರಿತರಾಗಿದ್ದರು. ಅದೇ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯ ಬಿಜೆಪಿಯ ಶಕ್ತಿಶಾಲಿ ಲಿಂಗಾಯತ ಲೀಡರಾಗಿ ತವರು ಶಿವಮೊಗ್ಗ ಜಿಲ್ಲೆ ಮೇಲೆ ಹಿಂದುತ್ವ ಹಿಕಮತ್ತಿನಿಂದ ಹಿಡಿತ ಸಾಧಿಸಿದ್ದರು; ಆರ್ಥಿಕವಾಗಿಯೂ ಯಡಿಯೂರಪ್ಪ ಫ್ಯಾಮಿಲಿ ಪ್ರಬಲವಾವಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

2008ರ ಲೋಕಸಭಾ ಕ್ಷೇತ್ರಗಳ ಪುನರ್ ರಚನೆ ಪ್ರಕ್ರಿಯೆಯಲ್ಲಿ ಶಿವಮೊಗ್ಗದ ಭೌಗೋಳಿಕ ಪರಿಧಿ ಬದಲಾಯಿತು; ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ದಾವಣಗೆರೆ ಕ್ಷೇತ್ರಕ್ಕೆ ಸೇರಿಸಲಾಯಿತು. ಕರಾವಳಿಯ ಉಡುಪಿ ಜಿಲ್ಲೆಯ ಬೈಂದೂರು ಅಸೆಂಬ್ಲಿ ಕ್ಷೇತ್ರವನ್ನು ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದ ವ್ಯಾಪ್ತಿಗೆ ತರಲಾಯಿತು. ಹಿಂದುತ್ವದ ಗಾಢ ಮೋಡಿಯಿರುವ ಬೈಂದೂರನ್ನು ಶಿವಮೊಗ್ಗಕ್ಕೆ ಜೋಡಿಸುವುದರ ಹಿಂದೆ ಯಡಿಯೂರಪ್ಪರ ಕೈವಾಡವಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. 2009ರ ಲೋಕಸಭಾ ಚುನಾವಣೆಯೆಂದರೆ, ಈಡಿಗ ಸಮುದಾಯದ ಸರ್ವೋಚ್ಚ ನಾಯಕ ಬಂಗಾರಪ್ಪ ಮತ್ತು ಲಿಂಗಾಯತರ ಏಕಮೇವಾದ್ವಿತೀಯ ನೇತಾರನಾಗಿ ಅವತರಿಸಿದ್ದ ಯಡಿಯೂರಪ್ಪ ಕುಟುಂಬಗಳ ಪ್ರತಿಷ್ಠೆಯ ಜಿದ್ದಾಜಿದ್ದಿ ಎಂಬಂತಾಯಿತು. ಶಿಕಾರಿಪುರಕ್ಕೇ ಬಂದು ತನಗೆ ಸೆಡ್ಡು ಹೊಡೆದಿದ್ದ ಬಂಗಾರಪ್ಪರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿ ಸೇಡು ತೀರಿಕೊಳ್ಳುವ ಹಠಕ್ಕೆ ಯಡಿಯೂರಪ್ಪ ಬಿದ್ದಿದ್ದರು; ತನ್ನ ಹಿರಿಯ ಮಗ ಬಿ.ವೈ.ರಾಘವೇಂದ್ರರನ್ನೇ ಕಮಲ ಕಲಿಯಾಗಿಸಿ ಹಳೆ ಹುಲಿ ಬಂಗಾರಪ್ಪರಿಗೆ ಮುಖಾಮುಖಿಯಾಗಿಯಾಗಿಸಿದರು! ರಾಘವೇಂದ್ರ ಹೆಸರಿಗಷ್ಟೇ ಕ್ಯಾಡಿಡೇಟಾಗಿದ್ದರು; ರಣರೋಚಕ ಕಾಳಗ ಬಂಗಾರಪ್ಪ-ಯಡಿಯೂರಪ್ಪ ನಡುವೆ ನಡೆದಿತ್ತು! ಅನಾರೋಗ್ಯ ಬಂಗಾರಪ್ಪರನ್ನು ಕ್ಷೇತ್ರದಾದ್ಯಂತ ಪ್ರಚಾರಮಾಡಲು ಬಿಡಲಿಲ್ಲ; ಹಣಕಾಸಿನ ತೀವ್ರ ಮುಗ್ಗಟ್ಟೂ ಮತ್ತೊಂದೆಡೆ ಕಟ್ಟಿಹಾಕಿತು. ಒಂದು ಹಂತದಲ್ಲಿ “ಈ ಯಡಿಯೂರಪ್ಪನ ಹಡ್ಬೆ ಹಣದ ಮುಂದೆ ಸೆಣಸಾಡೋಕ್ಕೆ ಆಗ್ತಿಲ್ಲ” ಎಂದು ಬಂಗಾರಪ್ಪ ಉದ್ಗರಿಸಿದ್ದರೆಂದು ಅವರ ನಿಕಟವರ್ತಿಗಳು ಈಗಲೂ ಹೇಳುತ್ತಾರೆ. ಬಂಗಾರಪ್ಪರ ಹಣಕಾಸಿನ ಅಸಹಾಯಕತೆ ಯಡಿಯೂರಪ್ಪ ಕುಟುಂಬಕ್ಕೆ ವರವಾಯಿತು. ರಾಘು ಅರ್ಥಾತ್ ಯಡಿಯೂರಪ್ಪ 52,893 ಮತಗಳ ಅಂತರದಿಂದ ಗೆಲುವು ಕಂಡರು. ಸಣ್ಣ ಹುಡುಗನ ಎದುರು ಸೋಲುವಂತಾಗಿದ್ದು ಬಂಗಾರಪ್ಪರನ್ನು ತೀವ್ರವಾಗಿ ಘಾಸಿಗೊಳಿಸಿತು.

ಬಿ.ವೈ ರಾಘವೇಂದ್ರ

ಬಂಗಾರಪ್ಪ ನಿಧನದಿಂದಾಗಿ 2014ರ ಚುನಾವಣೆ ಹೊತ್ತಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಪ್ರಬಲ ಎದುರಾಳಿ ಇಲ್ಲದಂತಾಗಿ ನಿರಾಳ ವಾತಾವರಣ ನಿರ್ಮಾಣವಾಗಿತ್ತು. ಕೆಜೆಪಿ ಅಂಗಡಿ ತೆರೆದು ದಿವಾಳಿಯಾಗಿದ್ದ ಯಡಿಯೂರಪ್ಪ ಆ ಇಲೆಕ್ಷನ್ ಬಂದಾಗ ಮರಳಿ ಪೂರ್ವಾಶ್ರಮ ಸೇರಿಕೊಂಡಿದ್ದರು. ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಕೃಷಿ ಮಂತ್ರಿಯಾಗುತ್ತೇನೆಂಬ ಭಾವನೆ ಮೂಡಿ ಖುದ್ದು ತಾನೇ ಅಖಾಡಕ್ಕಿಳಿದರು ಯಡಿಯೂರಪ್ಪ. ಆಗ ಸೊರಬದ ಜೆಡಿಎಸ್ ಎಮ್ಮೆಲ್ಲೆಯಾಗಿದ್ದ ಈಗಿನ ಶಾಲಾ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ತಂದೆಯ ಸೋಲಿನ ಸೇಡು ಚುಕ್ತಾಮಾಡಿಕೊಳ್ಳುವ ಜಿದ್ದಿಗೆ ಬಿದ್ದಿದ್ದರು. ತನ್ನ ಅಕ್ಕ-ಸ್ಯಾಂಡಲ್ವುಡ್ ಸ್ಟಾರ್ ಶಿವರಾಜ್‌ಕುಮಾರ್ ಮಡದಿ ಗೀತಾ ಶಿವರಾಜ್ ಕುಮಾರ್‌ರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಯಡಿಯೂರಪ್ಪರ ಎದುರು ನಿಲ್ಲಿಸಿದರು. ಬಂಗಾರಪ್ಪನವರ ಪುತ್ರಿ ಎಂಬುದು ಬಿಟ್ಟರೆ ಜನಸಂಪರ್ಕವಿಲ್ಲದ ಗೀತಾ ದುರ್ಬಲ ಅಭ್ಯರ್ಥಿಯಾಗಿದ್ದರು. ಮೋದಿಯ ಮತೀಯ ಧ್ರುವೀಕರಣದ ಮಂಕು ಬೂದಿಯ ಚಂಡಮಾರುತ ಮತ್ತು ಯಡಿಯೂರಪ್ಪನವರ ಸಂಪನ್ಮೂಲದ ದೈತ್ಯ ಶಕ್ತಿಯನ್ನು ಬಂಗಾರಪ್ಪ ಕುಟುಂಬಕ್ಕೆ ಎದುರಿಸಲಾಗಲಿಲ್ಲ. ಯಡಿಯೂರಪ್ಪ ದೊಡ್ಡ ಅಂತರದಲ್ಲೇ ಗೆದ್ದರು. ಸೋಲುವ ಖಾತ್ರಿಯಿಂದ ಸರಿಯಾಗಿ ಪ್ರಚಾರವೂ ಮಾಡದ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ (ಈಗಿನ ಎಮ್ಮೆಲ್ಸಿ) ಗೀತಾರಿಗಿಂತ ಹೆಚ್ಚು ಮತ ಗಳಿಸಿದ್ದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಯಡಿಯೂರಪ್ಪರನ್ನು ಬಿಜೆಪಿ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸಿಎಂ ಕ್ಯಾಂಡಿಡೇಟೆಂದು ಬಿಂಬಿಸಿತ್ತು. ಸಂಸದರಾಗಿದ್ದ ಯಡಿಯೂರಪ್ಪ ಮಗ ರಾಘು ಪ್ರತಿನಿಧಿಸುತ್ತಿದ್ದ ಶಿಕಾರಿಪುರದಿಂದ ಸ್ಪರ್ಧಿಸಿ ಗೆದ್ದರು. ಆದರೆ ಸರಕಾರ ರಚಿಸುವಷ್ಟು ಶಾಸಕರ ಬಲ ಬಿಜೆಪಿಗೆ ಸಿಕ್ಕಿರಲಿಲ್ಲ. ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ ಯಡಿಯೂರಪ್ಪ ಆಪರೇಷನ್ ಕಮಲ ಶುರುಹಚ್ಚಿಕೊಂಡರು. ಇತ್ತ ಶಿವಮೊಗ್ಗೆಯಲ್ಲಿ ಬೈಇಲೆಕ್ಷನ್ ಘೋಷಣೆಯಾಯಿತು. ಅಪ್ಪನಿಗೆ ಶಿಕಾರಿಪುರ ಬಿಟ್ಟುಕೊಟ್ಟ ರಾಘು ಲೋಕಸಭೆ ಉಪಚುನಾವಣೆಗೆ ಕೇಸರಿ ಕ್ಯಾಂಡಿಡೇಟಾದರು. ಸಮ್ಮಿಶ್ರ ಸರಕಾರ ನಡೆಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಸೊರಬದಲ್ಲಿ ಅಣ್ಣ ಕುಮಾರ್ ಬಂಗಾರಪ್ಪರಿಂದ ಹಿಮ್ಮೆಟ್ಟಿಸಲ್ಪಟ್ಟಿದ್ದ ಮಧು ಬಂಗಾರಪ್ಪರನ್ನು ಕಣಕ್ಕಿಳಿಸಿತು. ನಿಕಟ-ತುರುಸಿನ ಪೈಪೋಟಿ ನಡೆಯಿತು. ಮಧು ಗೆಲ್ಲುತ್ತಾರೆಂದೇ ಭಾವಿಸಲಾಗಿತ್ತಾದರೂ ಬೈಂದೂರು, ಶಿವಮೊಗ್ಗ ನಗರದಲ್ಲಿನ ಮತೀಯ ಧ್ರುವೀಕರಣದಿಂದಾಗಿ ಯಡಿಯೂರಪ್ಪ-ರಾಘು 52,148 ಮತದಂತರದಿಂದ ದಡ ಸೇರಿ ನಿಟ್ಟುಸಿರುಬಿಟ್ಟರು! 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಮಧು ಮತ್ತು ಬಿಜೆಪಿಯ ರಾಘು ಮತ್ತೆ ಹೋರಾಡಿದರು. ಬಿಜೆಪಿಯ ಪುಲ್ವಾಮಾ ರಾಜಕಾರಣದ ಪರಿಣಾಮದಿಂದಾಗಿ ರಾಘು ದೊಡ್ಡ ಅಂತರ(2,23,360)ದಲ್ಲಿ ಮೂರನೇ ಬಾರಿ ಸಂಸದರಾದರು.

ಇದನ್ನೂ ಓದಿ: “ಲೋಕ” ಸಮರಕ್ಕೆ ಸಿದ್ಧವಾಗುತ್ತಿದೆ ಉಡುಪಿ-ಚಿಕ್ಕಮಗಳೂರು ಅಖಾಡ! ಸಿ.ಟಿ.ರವಿಗೆ ಸಿಗಬಹುದೆ ಕೇಸರಿ ಟಿಕೆಟ್?

ದಿನ ಗಣನೆಯಲ್ಲಿರುವ 2024ರ ಲೋಕ ಚುನಾವಣೆಯಲ್ಲಿ ಸಂಸದ ರಾಘುಗೇ ಬಿಜೆಪಿ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ. ರಾಘುರವರ ತಮ್ಮನೇ ರಾಜ್ಯ ಬಿಜೆಪಿ ಅಧ್ಯಕ್ಷನಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರನ್ನು ರಮಿಸುತ್ತಿದೆ. ವಿರೋಧಿ ಪಾಳೆಯದ ಬಿ.ಎಲ್.ಸಂತೋಷ್ ಸುಮ್ಮನಾಗಿದ್ದಾರೆ. ಹೀಗಿರುವಾಗ ರಾಘುಗೆ ಕೇಸರಿ ಟಿಕೆಟ್ ತಪ್ಪುವುದುಂಟೇ? ಆದರೆ ಕಳೆದ ಒಂದೂವರೆ ದಶಕದಿಂದ ಭದ್ರ ಕೇಸರಿ ಕೋಟೆ ಎಂದೇ ಗುರುತಿಸಲಾಗುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಬುಡವೇ ಅಲ್ಲಾಡಿದೆ. ಸಾಗರ, ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಮುಸಲ್ಮಾನ ಸಮುದಾಯದ ಅಖಂಡ ಬೆಂಬಲದಿಂದ ಜೆಡಿಎಸ್‌ನ ಶಾರದಾ ಪೂರ್ಯಾ ನಾಯಕ್ ಗೆದ್ದಿದ್ದಾರೆ. ಈಗ ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂಬುದು ಪಕ್ಕಾ ಆಗಿರುವುದರಿಂದ ಕ್ಷೇತ್ರದ ಅಲ್ಪಸಂಖ್ಯಾತರು ದೂರವಾಗಿದ್ದಾರೆ. ಹೀಗಾಗಿ ಶಿವಮೊಗ್ಗದ ಗ್ರಾಮೀಣ ಭಾಗದಲ್ಲೂ ಕಾಂಗ್ರೆಸ್ ಮಜಬೂತಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಯಡಿಯೂರಪ್ಪ ಫ್ಯಾಮಿಲಿ ವಿರೋಧಿ ಅಲೆಯಿದೆ. ಗೆಲುವು ಮೊದಲಿನಷ್ಟು ಸಲೀಸಲ್ಲ ಎಂಬ ಪರಿಸ್ಥಿತಿಯಿದೆ. ಇಷ್ಟಾಗಿಯೂ ಹುಲ್ಲು ರಸ್ತೆ ಪ್ರದೇಶಗಳಲ್ಲಿ ಬಿಜೆಪಿಗೆ, ಅರ್ಪಣಾ ಭಾವದ ಹಿಂದುತ್ವಕ್ಕೆ ಮರುಳಾಗಿರುವ ಕಾರ್ಯಕರ್ತರ ನೆಟ್ವರ್ಕ್ ಇದೆ; ಇಂಥ ಸಂಘಟನಾತ್ಮಕ ತಾಕತ್ತು ಕಾಂಗ್ರೆಸ್ಸಿಗಿಲ್ಲ. 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶಗಳ ಮೇಲೆ ಕಣ್ಣು ಹಾಯಿಸಿದರೆ ಒಟ್ಟು ಮತದಲ್ಲಿ ಬಿಜೆಪಿಯೇ ಸ್ವಲ್ಪ ಮುಂದಿರುವುದು ಪಕ್ಕಾ ಆಗುತ್ತದೆ; ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಅಸೆಂಬ್ಲಿ ಸೆಗ್ಮೆಂಟ್‌ಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಜೆಡಿಎಸ್ ಗೆದ್ದಿದೆ. ಹಾಗೆ ನೋಡಿದರೆ ಶಿವಮೊಗ್ಗ ಲೋಕ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದಲ್ಲಿದೆ ಎಂಬುದು ರಾಜಕೀಯ ವಿಶ್ಲೇಷಕರು ಲೆಕ್ಕಾಚಾರವಾಗಿದೆ.

ಶಿವಮೊಗ್ಗೆಯಲ್ಲಿ ಕಾಂಗ್ರೆಸ್ 1991ರಲ್ಲಿ ಗೆದ್ದಿದ್ದೇ ಕೊನೆ; ಬಂಗಾರಪ್ಪ ಇದ್ದರಷ್ಟೇ ಇಲ್ಲಿ ಕಾಂಗ್ರೆಸ್‌ಗೆ ಜೀವವಿರುತ್ತಿತ್ತು. 1999ರಲ್ಲಿ ಬಂಗಾರಪ್ಪ ಕಾಂಗ್ರೆಸ್‌ಗೆ ಮರಳಿದಾಗ ಒಮ್ಮೆ ಜಯ ಸಿಕಿತ್ತು. ಅದೂ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರೂ ಬಂಗಾರಪ್ಪನವರೇ ಗೆದ್ದಿದ್ದರು. ಆನಂತರ ಸತತ ಆರು ಚುನಾಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಿದೆ. ಈಗ ಕಾಂಗ್ರೆಸ್ ಜಿಲ್ಲೆಯಲ್ಲಿ ಮೊದಲಿನಷ್ಟು ಮಂಕಾಗಿಲ್ಲ. ಬಂಗಾರಪ್ಪರ ಉತ್ತರಾಧಿಕಾರಿ ಎಂದು ಬಿಂಬಿಸಲ್ಪಟ್ಟಿರುವ ಅವರ ಕಿರಿಯ ಪುತ್ರ ಮಧು ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದಾರೆ; ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆ ಸುತ್ತುತ್ತಿದ್ದಾರೆ. ತಂದೆಯನ್ನು ಮಣಿಸಿದ್ದ ಯಡಿಯೂರಪ್ಪ ಫ್ಯಾಮಿಲಿ ಮೇಲಿನ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದ್ದಾರೆ. ತನ್ನ ಅಕ್ಕ ಗೀತಾ ಶಿವರಾಜ್ ಕುಮಾರ್ ಕೈಯಿಂದಲೇ ಯಡಿಯೂರಪ್ಪ-ರಾಘವೇಂದ್ರರಿಗೆ ಮಣ್ಣು ಮುಕ್ಕಿಸಿ ಬಂಗಾರಪ್ಪ ಕುಟುಂಬದ ಪ್ರತಿಷ್ಠೆ ಮೆರೆಸುವ ಜಿದ್ದು ಮಧು ಅವರಲ್ಲಿದೆ.

ಕುಮಾರ್ ಬಂಗಾರಪ್ಪ

ಸುಪ್ರಸಿದ್ಧ ಸಿನೆಮಾ ನಟ-ರಾಜಕುಮಾರ್ ಪುತ್ರ ಶಿವರಾಜ್ ಕುಮಾರ್ ಸಹ ಹೆಂಡತಿ ಗೀತಾಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎಂಬುದು ಬಹಿರಂಗ ರಹಸ್ಯ. ಈಚೆಗೆ ನಡೆದ ಈಡಿಗರ ಸಮಾವೇಶದಲ್ಲಿ ಡಿಕೆಶಿ ಶಿವರಾಜ್ ಕುಮಾರ್‌ಗೆ ಕೈ ಟಿಕೆಟ್ ಆಫರ್ ಕೊಟ್ಟಿದ್ದರು. ನಾನೊಲ್ಲೆ ಎಂದ ಶಿವರಾಜ್ ಕುಮಾರ್ ಮಡದಿಯನ್ನು ಶಿವಮೊಗ್ಗೆಯ ಎಂಪಿಯಾಗಿ ನೋಡುವ ಯೋಚನೆಯಲ್ಲಿದ್ದಾರೆ. ಆದರೆ ಗೀತಾ ಶಿವರಾಜ್ ಕುಮಾರ್‌ರಿಂದ ದುಡ್ಡು-ಧರ್ಮ ತಂತ್ರಗಾರಿಕೆಯ ಯಡಿಯೂರಪ್ಪ ಪರಿವಾರವನ್ನು ಎದುರಿಸುವುದು ಸುಲಭವಲ್ಲ; ಗೀತಾ ಕಾಂಗ್ರೆಸ್ ಕ್ಯಾಂಡಿಡೇಟಾದರೆ ರಾಘು ಗೆಲುವು ಸುಲಭವಾಗುತ್ತದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿಎಂ ಸಿದ್ದು ಅವರಿಗೂ ಇದೇ ಆತಂಕ ಕಾಡುತ್ತಿದೆಯಂತೆ. ಯಡಿಯೂರಪ್ಪ ಫ್ಯಾಮಿಲಿಗೆ ಪ್ರಬಲ ಪೈಪೋಟಿ ಕೊಡಬೇಕೆಂದರೆ ಮಂತ್ರಿ ಮಧುರನ್ನೇ ಸಮರಕ್ಕಿಳಿಸಬೇಕೆಂದು ಜಿಲ್ಲೆಯ ಚುನಾವಣಾ ಸೆಣಸಾಟದ ಪಟ್ಟು-ಪ್ರತಿಪಟ್ಟು ಬಲ್ಲವರು ಹೇಳುತ್ತಾರೆ. ಇದೇ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬಂದಂತಿದೆ.

ಮಂತ್ರಿಗಿರಿ ಬಿಡಲೊಪ್ಪದ ಮಧು ಅವರ ಮವೊಲಿಸುವ ಪ್ರಯತ್ನ ಡಿಕೆಶಿ ಮಾಡುತ್ತಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಲೋಕ ಅಖಾಡಕ್ಕೆ ಧುಮುಕಲು ಮಧು ಒಪ್ಪಿದ್ದಾರೆ; ಆದರೆ ತಾನು ಗೆದ್ದು ಲೋಕಸಭೆಗೆ ಹೋದರೆ ಸೊರಬದಲ್ಲಿ ತನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಇಲ್ಲವೆ ಮಡದಿಗೆ ಕಾಂಗ್ರೆಸ್ ಎಮ್ಮೆಲ್ಲೆ ಟಿಕೆಟ್ ಕೊಟ್ಟು ಗೆಲುವಿಗೆ ಬೇಕಾದ ಎಲ್ಲ ನೆರವು ನೀಡಬೇಕೆಂದು ಮಧು ಷರತ್ತು ಹಾಕಿದ್ದಾರೆನ್ನಲಾಗುತ್ತಿದೆ. ಹಾಗೇನಾದರೂ ಮಧು ಕಾಂಗ್ರೆಸ್ ಅಭ್ಯರ್ಥಿಯಾಗಿ ಯಡಿಯೂರಪ್ಪ ಪರಿವಾರಕ್ಕೆ ರಣವೀಳ್ಯ ನೀಡಿದ್ದೇ ಆದರೆ “ಘನಘೋರ” ಕಾಳಗೇ ಆಗುವುದು ಗ್ಯಾರಂಟಿ. ಬಂಗಾರಪ್ಪ ನಂತರ ಲಿಂಗಾಯತರೇ ಕ್ಷೇತ್ರದಲ್ಲಿ ಆಳ್ವಿಕೆ ಮಾಡುತ್ತಿರುವುದು ಬಹುಸಂಖ್ಯಾತ ದೀವರನ್ನು ಎಚ್ಚರಿಸಿದೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಒಕ್ಕಲಿಗ ಮತ್ತು ಕುರುಬ ಮತಗಳು ಡಿಕೆಶಿ, ಸಿದ್ದುರಿಂದ ಕಾಂಗ್ರೆಸ್‌ಗೆ ಬರುವುದು ಸುಲಭವಾಗಲಿದೆ; ಗ್ಯಾರಂಟಿ ಯೋಜನೆಗಳು ಹಿಂದುಳಿದ ವರ್ಗದ ಬಡವರು, ಶೋಷಿತರನ್ನು ಕಾಂಗ್ರೆಸ್ ಕಡೆಗೆ ವಾಲಿಸಿದೆ. ಸ್ವಜಾತಿ ದೀವರು ಮತ್ತು ಇತರೆ ಹಿಂದುಳಿದ ವರ್ಗದ ನಡುವೆ ಮಧು ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ದುಡ್ಡು, ಧರ್ಮಕಾರಣದ ಬಲ ಬಿಜೆಪಿಗಿದೆ. ಕಳೆದ ಹದಿನೈದು ವರ್ಷದಿಂದ ಸಂಸದ, ಶಾಸಕ ಮತ್ತು ಮುಖ್ಯಮಂತ್ರಿಯ ಮಗನೆಂಬ ಆಯಕಟ್ಟಿನ ಅಧಿಕಾರದಲ್ಲಿದ್ದರೂ ಮೃಧು ಸ್ವಭಾವದ ರಾಘು ಹೆಸರು ಕೆಡಿಸಿಕೊಳ್ಳದಿರುವುದು ಆತನ ಪ್ಲಸ್ ಪಾಯಿಂಟ್. ಈ ಹಿನ್ನೆಲೆಯ ಮದು-ರಾಘು ಮುಖಾಮುಖಿಯಾದರೆ ಫೋಟೋ ಫಿನಿಷ್ ಫಲಿತಾಂಶ ಬರುತ್ತದೆಂಬ ಚರ್ಚೆಗಳು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಈಗಲೇ ಬಿರುಸಾಗಿ ಸಾಗಿದೆ.

ಕೆಪಿಸಿಸಿ ಮಾಡಿಕೊಂಡಿರುವ ಶಾರ್ಟ್‌ಲಿಸ್ಟ್‌ನಲ್ಲಿ ಮಂತ್ರಿ ಮಧು ಮತ್ತು ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಇಬ್ಬರದೇ ಹೆಸರಿದೆ ಎಂಬ ಸುದ್ದಿ ಕಾಂಗ್ರೆಸ್ ಬಿಡಾರದಿಂದ ಬರುತ್ತಿದೆ. ಸೆಕ್ಯುಲರ್ ಬದ್ಧತೆಯಿರುವ ಕಿಮ್ಮನೆ ಅರ್ಹ ಅಭ್ಯರ್ಥಿಯಾಗಬಲ್ಲರಾದರೂ ಇಡೀ ಜಿಲ್ಲೆ ಪ್ರಭಾವಿಸುವ ಚರಿಷ್ಮಾ ಇಲ್ಲ; ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿಯೇ ದೊಡ್ಡ ಅಂತರದಲ್ಲಿ ಸೋತಿರುವ ಕಿಮ್ಮನೆಗೆ “ಆಧುನಿಕ ಚುನಾವಣಾ ರಣತಂತ್ರ”ಗಳ ತಿಳಿವಳಿಕೆಯಿಲ್ಲವೆಂಬ ಅಭಿಪ್ರಾಯವಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ರುದ್ರೇಶ್ ತಾನೂ ಕೈ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕೈಲಿದ್ದ ಎಮ್ಮೆಲ್ಸಿ ಹುದ್ದೆಗೂ ಎಳ್ಳು ನೀರುಬಿಟ್ಟು ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿರುವ ಆಯನೂರು ಮಂಜುನಾಥ್ ಕಣ್ಣು ಎಂಪಿಗಿರಿಯ ಮೇಲಿದೆ. ಹಿಂದೊಮ್ಮೆ ಅನಿರೀಕ್ಷಿತವಾಗಿ ಸಂಸದ ಸವಿ ಉಂಡಿರುವ ಲಿಂಗಾಯತ ಸಮುದಾಯದ ಆಯನೂರು ಕಾಂಗ್ರೆಸ್‌ಗೆ ಬಂದಿರುವುದೇ ಟಿಕೆಟ್ ಹಂಚಿಕೆಯ ಜಾತಿ ಲೆಕ್ಕಾಚಾರದಲ್ಲಿ ಲಕ್ ಖುಲಾಯಿಸಬಹುದೆಂಬ ಒಳಆಸೆಯಿಂದ.

ಕಾಂಗ್ರೆಸ್‌ನ ಟಿಕೆಟ್ ಕಟಿಪಿಟಿಯಲ್ಲಿ ಕುತೂಹಲಕರ ಎಪಿಸೋಡ್ ಎಂದರೆ ಸಾಗರದ ಕಾಂಗ್ರೆಸ್ ಎಮ್ಮೆಲ್ಲೆ ಬೇಳೂರು ಗೋಪಾಲಕೃಷ್ಣ ತಾನೇ ಸರ್ವಶಕ್ತ ಎಂಪಿ ಹುರಿಯಾಳು ಎಂದು ಬಹಿರಂಗವಾಗೇ ಆರ್ಭಟಿಸುತ್ತಿರುವುದು. ಬೇಳೂರರಿಗೆ ಸಂಸದನಾಗುವ ಮನಸ್ಸೇನೂ ಇಲ್ಲ. ಆದರೆ ಜಿಲ್ಲಾ ಉಸ್ತವಾರಿ ಮಂತ್ರಿ ಮಧು ತನ್ನನ್ನು ಅಡಿಗಡಿಗೆ ಕಡೆಗಣಿಸುತ್ತ ಅಪಮಾನಿಸುತ್ತಿರುವುದು ಬೇಳೂರನ್ನು ಕೆರಳಿಸಿದೆ. ತನ್ನ ಅಕ್ಕ ಗೀತಾ ಶಿವರಾಜ್ ಕುಮಾರರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿರುವ ಮಧು ಕಾಲೆಳೆಯಲೆಂದೇ ಬೇಳೂರು ಇಂಥ ಅಪಸ್ವರ ಹೊರಡಿಸುತ್ತಿದ್ದಾರೆ. ಬಂಗಾರಪ್ಪನವರಿಂದ ರಾಜಕೀಯ ದೀಕ್ಷೆ ಪಡೆದು ಶಾಸಕ ಸ್ಥಾನಮಾನ ಕಂಡ ಬೇಳೂರು “ಗುರು” ಬಿಜೆಪಿಗೆ ಗುಡ್‌ಬೈ ಹೇಳಿ ಹೋದಾಗ ಹಿಂಬಾಲಿಸಿರಲಿಲ್ಲ. ತಂದೆಗೆ ಕೊನೆಗಾಲದಲ್ಲಿ ಬೇಳೂರು ನಿಷ್ಠನಾಗಿಲಿಲ್ಲವೆಂಬ ಸಿಟ್ಟಿನ್ನೂ ಮಧುಗೆ ತಣಿದಿಲ್ಲ ಎನ್ನಲಾಗಿದೆ. ಮಧು-ಬೇಳೂರು ಮೈಮನಸ್ಯ ಕಾಂಗ್ರೆಸ್‌ಗೆ ಮುಳುವಾಗುವ ಸೂಚನೆಯಾಗಿ ಗೋಚರಿಸುತ್ತಿದೆ.

ಗೀತಾ ಶಿವರಾಜ್‌ಕುಮಾರ್

ಸಂಘ ಪರಿವಾರದ ಅವಕೃಪೆಗೀಡಾಗಿ ಸೊರಬದಲ್ಲಿ ದೊಡ್ಡ ಅಂತರದಲ್ಲಿ ಸೋತು ಬಿಜೆಪಿಯಲ್ಲಿ ಇದ್ದೂಇಲ್ಲದಂತಾಗಿರುವ ಬಂಗಾರಪ್ಪನವರ ಹಿರಿಯ ಮಗ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಲು ಭರ್ಜರಿ ಕಸರತ್ತಿಗಿಳಿದಿದ್ದಾರೆಂಬ ಸುದ್ದಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಮಧು ಮತ್ತು ಕುಮಾರ್ ವೈರತ್ವ ಬಿಟ್ಟು ಒಂದಾದರೆ ಕುಮಾರ್ ಬಲಾಢ್ಯ ಹುರಿಯಾಳಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ರಾಜಕೀಯ ವಿಶ್ಲೇಷಕರೂ ಒಪ್ಪುತ್ತಾರೆ. ಜಿಲ್ಲೆಯ ಈಡಿಗರು ಮತ್ತು ಬಂಗಾರಪ್ಪ ಅಭಿಮಾನಿ ಬಳಗ ಮಧು-ಕುಮಾರ್ ಒಂದಾಗಲೆಂದೇ ಬಯಸುತ್ತಿದೆ. ಕುಮಾರ್ ರಾಜಿಗೆ ರೆಡಿಯಿದ್ದರೂ ಮಧು ಮತ್ತವರ ಅಕ್ಕ-ತಂಗಿಯರ ಪರಿವಾರಕ್ಕಿದು ಬೇಡದ ಉಸಾಬರಿ. ತಂದೆಗೆ ಮನೆಯಿಂದ ಹೊರಹಾಕಿದ ದ್ರೋಹಿ ಎಂಬುದು ಮಧು ಬಳಗದ ಆಕ್ರೋಶ. ಇಡೀ ಬಂಗಾರಪ್ಪ ಕುಟುಂಬ ಒಂದು ಕಡೆಯಾದರೆ, ಕುಮಾರ್ ಮಾತ್ರ ಒಂಟಿ! ಕುಮಾರ್‌ಗೇನಾದರೂ ಕಾಂಗ್ರೆಸ್ ಪ್ರವೇಶ ಸಿಕ್ಕರೆ ಮಧು ಸಚಿವ ಸ್ಥಾನ, ಕಾಂಗ್ರೆಸ್ ಎರಡನ್ನೂ ಬಿಡುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂದು ಬಂಗಾರಪ್ಪ ಫ್ಯಾಮಿಲಿಯ ದಾಯಾದಿ ಮತ್ಸರದ ಹಕೀಕತ್ ಬಲ್ಲವರು ಹೇಳುತ್ತಾರೆ. ಕಾಗೋಡು ತಿಮ್ಮಪ್ಪರಂಥ ಹಿರಿಯರನ್ನೂ ಎದುರು ಹಾಕಿಕೊಂಡಿರುವ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯೇ ಇಲ್ಲ. ಆದರೂ ಕುಮಾರ್ ಕಾಂಗ್ರೆಸ್ ಸೇರ್ಪಡೆಯ ರೋಚಕತೆ ಮಾತ್ರ ಆಗಾಗ ಸೃಷ್ಟಿಯಾಗುತ್ತಲೇ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ನ ಮಧು ಮತ್ತು ಬಿಜೆಪಿಯ ರಾಘು 2024ರ ಸಮರಾಂಗಣದಲ್ಲಿ ಮತ್ತೆ ಮುಖಾಮುಖಿಯಾಗುವ ಸಕಲ ಸೂಚನೆಗಳೂ ಗೋಚರಿಸುತ್ತಿದೆ. ಈ ಬಂಗಾರಪ್ಪ-ಯಡಿಯೂರಪ್ಪ ಪರಿವಾರದ ಒಣಪ್ರತಿಷ್ಠೆಯ ತಿಣುಕಾಟದಲ್ಲಿ ಯಾರಿಗೆ ದಿಲ್ಲಿ ವಿಮಾನ ಏರುವ ಯೋಗ ಖುಲಾಯಿಸುತ್ತದೆಂಬುದು ಯಾರ ಊಹೆಗೂ ನಿಲುಕುತ್ತಿಲ್ಲ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಬಿಸಿಲಿನ ತಾಪಕ್ಕೆ ಪ್ರಜ್ಞೆ ತಪ್ಪಿದ ಶಾಲಾ ವಿದ್ಯಾರ್ಥಿಗಳು; ಆಸ್ಪತ್ರೆಗೆ ದಾಖಲು

0
ಪ್ರಸ್ತುತ ಉತ್ತರ ಭಾರತದಲ್ಲಿ ಉರಿಯುತ್ತಿರುವ ತೀವ್ರತರವಾದ ಶಾಖದ ಅಲೆಯಿಂದಾಗಿ ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್...