ಸಾಹಿತ್ಯ ಕೃತಿಗಳನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸಿ ಸಿನಿಮಾ ಮಾಡುವುದು ಪ್ರಪಂಚದದೆಲ್ಲೆಡೆ ಪ್ರಯೋಗ ಆಗಿರುವಂತಹ ಒಂದು ಮಾದರಿ. ಭಾರತದ ಬಹು ಭಾಷೆಗಳ ಸಿನಿಮಾಗಳಲ್ಲಿ ಕೂಡ ಇದನ್ನ ನೋಡಬಹುದು. ಇಪ್ಪತ್ತನೇ ಶತಮಾನದ ಬಹಳ ಪ್ರಭಾವಿ ನಿರ್ದೇಶಕರಾದ ಸತ್ಯಜಿತ್ ರೇ, ಋತ್ವಿಕ್ ಘಟಕ್, ಮೃಣಾಲ್ ಸೇನ್, ಅಡೂರ್ ಗೋಪಾಲಕೃಷ್ಣ, ಷಾಜಿ ಕರಣ್, ಶ್ಯಾಂ ಬೆನಗಲ್, ಗೋವಿಂದ ನಿಹಲಾನಿ, ಗಿರೀಶ್ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್ ಇನ್ನೂ ಸಾಕಷ್ಟು ನಿರ್ದೇಶಕರು ತಮ್ಮ ಕಾಲದ ಪ್ರಖ್ಯಾತ ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾಗಳನ್ನು ಮಾಡಿದ್ದಾರೆ. ಬೆಂಗಾಲಿಯ ರಬೀಂದ್ರನಾಥ್ ಟ್ಯಾಗೋರ್, ಬಿಭೂತಿಭೂಷಣ್ ಬಂಡೋಪಾಧ್ಯಾಯ ಇವರ ಆದಿಯಾಗಿ ಮರಾಠಿಯ ಸಾನೆ ಗೂರೂಜಿ, ಲಕ್ಷ್ಮಣ್ ಗಾಯಕ್ವಾಡ್, ಪಂಜಾಬಿಯ ಅಮೃತ ಪ್ರೀತಂ, ಮಲೆಯಾಳಂನಲ್ಲಿ ವೈಕಂ ಮುಹಮ್ಮದ್ ಬಶೀರ್, ಕಮಲ ದಾಸ್ ಮುಂತಾದವರ ಕೃತಿಗಳು ಸಿನಿಮಾಗಳಾಗಿವೆ. ಇಲ್ಲಿ ಕೇವಲ ಪ್ರಾತಿನಿಧಿಕವಾಗಿ ಕೆಲವರನ್ನ ಹೆಸರಿಸಲಾಗಿದೆ ಅಷ್ಟೆ, ಈ ಪಟ್ಟಿ ಬಹಳ ದೊಡ್ಡದಿದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಕುವೆಂಪು, ಶಿವರಾಮ ಕಾರಂತ, ದೇವುಡು, ತ.ರಾ. ಸುಬ್ಬರಾಯ, ಲಂಕೇಶ್, ತೇಜಸ್ವಿ, ಆನಂತಮೂರ್ತಿ, ದೇವನೂರು ಮಹಾದೇವ, ಆಲನಳ್ಳಿ ಕೃಷ್ಣ, ತ್ರೀವೇಣಿ, ಎಸ್.ಎಲ್. ಭೈರಪ್ಪ, ಅಮರೇಶ್ ನುಡಗೋಣಿ, ವೈದೇಹಿ ಇನ್ನೂ ಮುಂತಾದವರ ಸಾಹಿತ್ಯ ಕೃತಿಗಳು ಸಿನಿಮಾಗಳಾಗಿ ತೆರೆ ಮೇಲೆ ಮೂಡಿಬಂದಿವೆ.

ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಿನಿಮಾಗಳು ಕೆಲವು ಕಾರಣಗಳಿಗಾಗಿ ಸ್ವಲ್ಪ ಮಟ್ಟಿಗೆ ವಿಶೇಷ ಅಂತಲೇ ಹೇಳಬಹುದು. ಸ್ವತಃ ಫೋಟೋಗ್ರಾಫರ್ ಆಗಿದ್ದ ತೇಜಸ್ವಿ ತಮ್ಮ ಕಥೆ ಸಿನಿಮಾಗಳ ನಿರ್ಮಾಣ ಹಂತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬ ಕಾರಣಕ್ಕಿರಬಹುದು ಅಥವಾ ಆ ಕಥೆಗಳು ಸಿನಿಮಾ ಆಗುವಾಗ ಅವರು ಯಾವುದೇ ಪೂರ್ವ ಷರತ್ತು ಇಲ್ಲದೆ ನಿರ್ದೇಶಕನಿಗೆ ತನ್ನ ಸೃಜನಶೀಲತೆಗೆ ಅನುಕೂಲಕ್ಕೆ ತಕ್ಕಂತೆ ಕಥೆಗಳನ್ನು ಬಳಸಿಕೊಳ್ಳಲು ನೀಡಿದ ಮುಕ್ತ ಅವಕಾಶಕ್ಕಾಗಿ ಇರಬಹುದು ಅಥವಾ ಆ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕರ ಕಾರಣಕ್ಕಿರಬಹುದು.

ತೇಜಸ್ವಿ ಅವರ ನಾಲ್ಕು ಕಥೆಗಳು ಕನ್ನಡದಲ್ಲಿ ಸಿನಿಮಾಗಳಾಗಿವೆ. 1. ಅಬಚೂರಿನ ಪೋಸ್ಟಾಫೀಸು (1973) 2. ತಬರನ ಕಥೆ (1987) 3. ಕುಬಿ ಮತ್ತು ಇಯಾಲ (1992) 4. ಕಿರಗೂರಿನ ಗಯ್ಯಾಳಿಗಳು (2016)

1. ಅಬಚೂರಿನ ಪೋಸ್ಟಾಫೀಸು

ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಎನ್ ಲಕ್ಷ್ಮೀನಾರಾಯಣ ಅವರು. ಕಪ್ಪು ಬಿಳುಪಿನಲ್ಲಿರುವ ಈ ಸಿನಿಮಾವನ್ನ ಈಗ ನೋಡಿದರೆ ಬಹಳಷ್ಟು ನ್ಯೂನ್ಯತೆಗಳು ಕಾಣುತ್ತವೆಯಾದರೂ ಆ ಸಿನಿಮಾದಲ್ಲಿನ ಲವಲವಿಕೆಯ ಸಂಭಾಷಣೆ ಮತ್ತು ಕಥಾ ಪಾತ್ರಗಳಲ್ಲಿ ಕಾಣಿಸಿಕೊಂಡ ರಮೇಶ್ ಭಟ್, ಗಿರಿಜಾ ಲೋಕೇಶ್, ನಾಣಿ ಅವರ ನಟನೆಯ ಕಾರಣಕ್ಕೆ ಬಹಳ ಆಪ್ತವಾಗುತ್ತದೆ. ಕಥೆಯ ಸಂಕೀರ್ಣತೆ ಸಿನಿಮಾದಲ್ಲಿ ಅಭಿವ್ಯಕ್ತಿಸಲಾಗಿದೆಯೇ ಅಂತ ಕೇಳಿಕೊಂಡರೆ ಸ್ವಲ್ಪ ನಿರಾಸೆ ಆಗುತ್ತದೆ. ಅಬಚೂರು ಎಂಬ ತುಂಬಾ ದೂರದ ಹಳ್ಳಿಗೆ ಪೋಸ್ಟಾಫೀಸು ಅನ್ನುವುದು ಆಧುನಿಕತೆಯ ಪ್ರವೇಶದ ಪ್ರತೀಕ. ಸಿನಿಮಾದಲ್ಲಿ ಬರುವ ಪೋಸ್‌ಮ್ಯಾನ್ ಬೋಬಣ್ಣ ಮತ್ತು ಎಸ್ಟೇಟ್ ಓನರ್ ಮಗ (ರಮೇಶ್ ಭಟ್) ಈ ಎರಡು ಪಾತ್ರಗಳು, ಸಮಾಜದ ಎರಡು ತುದಿಗಳನ್ನು ಪ್ರತಿನಿದಿಸುತ್ತವೆ. ಈ ಆಧುನಿಕತೆ ಮತ್ತು ಅದರ ಪರಿಕರಗಳನ್ನ, ಬೇರೆಬೇರೆ ಸಾಮಾಜಿಕ ಸ್ತರದ ಮನುಷ್ಯರು ಹೇಗೆ ಎದುರುಗೊಳ್ಳುತ್ತಾರೆ ಮತ್ತು ಅವರಲ್ಲಾಗುವ ಪಲ್ಲಟಗಳನ್ನು ಶೋಧಿಸುವುದು ಕೃತಿಕಾರನ ಆಶಯ. ಆದರೆ 70ರ ದಶಕದ ಕನ್ನಡ ಪರಿಸರದಲ್ಲಿನ ದೃಶ್ಯ ಮಾಧ್ಯಮದ ಸಾಧ್ಯತೆ ಮತ್ತು ಅದರ ಶಿಕ್ಷಣದ ಕೊರತೆಯ ಕಾರಣಕ್ಕಾಗಿ ಕೃತಿಕಾರನ ಆಶಯ ಪರಿಣಾಮಕಾರಿಯಾಗಿ ದೃಶ್ಯದಲ್ಲಿ ಬಂದಿಲ್ಲ ಅನಿಸುತ್ತದೆ. ಕನ್ನಡದಲ್ಲಿ ಉತ್ತಮ ಚಿತ್ರ ಕೆಟಗರಿಯಲ್ಲಿ ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

2. ತಬರನ ಕಥೆ

ಬಹುಶಃ 1990ನೇ ಇಸವಿ, ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ದೂರದರ್ಶನದಲ್ಲಿ ಪ್ರತಿ ಶನಿವಾರ ಸಂಜೆ 5:30ಕ್ಕೆ ಒಂದು ಕನ್ನಡ ಸಿನಿಮಾ ಪ್ರದರ್ಶನ ಆಗೋದು. ಇಡೀ ಊರಿನ ಕೆಲವೇ ಮನೆಗಳಲ್ಲಿ ಟಿವಿ ಇದ್ದಿದ್ದರಿಂದ, ನಮ್ಮ ಅಣ್ತಮ್ಕೆ ಪೈಕಿಯ ಕೆಳಟ್ಟಿ ಶಿವಲಿಂಗಣ್ಣನ(ಸೂಲಿಂಗಣ್ಣ) ಮನೆಗೆ ಅರ್ಧ ಗಂಟೆ ಮುಂಚಿತವಾಗಿ ಹೋಗಿ ಆಯಕಟ್ಟಿನ ಜಾಗ ಹಿಡಿದು ’ತಬರನ ಕಥೆ’ ನೋಡಲು ಸಿದ್ಧನಾದೆ. ಸಿನಿಮಾ ಅಂದರೆ ಮನರಂಜನೆ, ಅದರಲ್ಲೂ ಹೀರೋ, ವಿಲನ್, ಫೈಟಿಂಗ್, ಹಾಡು, ಕುಣಿತ ಎಲ್ಲಾ ಇರಬೇಕು ಎಂಬ ನಂಬಿಕೆ ನನ್ನದ್ದು ಆವಾಗ. ಸಿನಿಮಾ ಪ್ರಾರಂಭವಾಗಿ ಬಹಳ ಸಮಯವಾದರೂ ಈ ಯಾವ ಪರಿಕರಗಳೂ ಕಾಣಲಿಲ್ಲ. ಸಮಯ ಆಯ್ತಾ ಆಯ್ತಾ
ಕಿಕ್ಕಿರಿದು ತುಂಬಿದ್ದ ಪಡಸಾಲೆ ಖಾಲಿ ಆಯ್ತಾ ಬಂತು. ನನಗಂತೂ ಬಹಳ ನಿರಾಸೆ. ಸಿನಿಮಾ ಮುಗಿಯುವ ಹೊತ್ತಿಗೆ ಅಲ್ಲಿದ್ದದ್ದು ನಾನು ಮಾತ್ರ. (ಸಿನಿಮಾ ಅಂತ್ಯಕ್ಕಾದರೂ ಒಂದು ಫೈಟಿಂಗ್ ದೃಶ್ಯ ಬರಬಹುದು ಎಂಬ ದೂರದ ಆಸೆ ಇರಬೇಕು, ಸರಿಯಾಗಿ ನೆನಪಿಲ್ಲ). ಆದರೆ ಸಿನಿಮಾ ಅಂತ್ಯದ ದೃಶ್ಯ ಮಾತ್ರ ಇವತ್ತಿಗೂ ನನ್ನ ಮನಸ್ಸಿನ ಆಳದಲ್ಲಿ ಉಳಿದಿದೆ. ಸಿನಿಮಾ ಅಂತ್ಯದಲ್ಲಿ ಕಥೆಯ ಪ್ರಧಾನ ಪಾತ್ರ ’ತಬರ ಶೆಟ್ಟಿ’ ಬೆಟ್ಟದ ಮೇಲೆ ನಿಂತು ಆಕಾಶ ದಿಟ್ಟಿಸುತ್ತಿದ್ದಾನೆ (ಸೂರ್ಯ ಮುಳುಗುತ್ತಿದ್ದಾನೆ). ಈ ಪಾತ್ರವನ್ನು ಅಭಿನಯಿಸಿದ ಚಾರುಹಾಸನ್ ಅವರ ಆ ನೋಟವನ್ನ ನನ್ನ ಸ್ಮೃತಿಯಿಂದ ಅಳಿದೇ ಇಲ್ಲ.

ಬಹಳ ವರ್ಷಗಳ ನಂತರ ಈ ಕಥೆಯನ್ನು ಓದಿದಾಗ ಅದು ಅಲುಗಾಡಿಸಿಬಿಟ್ಟಿತು. ಮತ್ತೆ ಈ ಸಿನಿಮಾ ನೋಡಿದೆ. ಗಿರೀಶ್ ಕಾಸರವಳ್ಳಿಯವರ ಹಲವು ಉತ್ತಮವಾದ ಸಿನಿಮಾಗಳಲ್ಲಿ ಇದು ಕೂಡ ಒಂದು ಅನಿಸಿತು. ತೇಜಸ್ವಿಯವರ ಕಥೆಗಳನ್ನ ಬಹಳ ಸಶಕ್ತವಾಗಿ ದೃಶ್ಯದಲ್ಲಿ ಕಟ್ಟಿದ್ದು ’ತಬರನ ಕಥೆ’ ಮತ್ತು ’ಕುಬಿ ಮತ್ತು ಇಯಾಲ’ ಸಿನಿಮಾಗಳು. ಸಾಹಿತ್ಯ ಕೃತಿಗಳನ್ನು ಆಧರಿಸಿ ಕಾಸರವಳ್ಳಿಯವರು ಸಿನಿಮಾ ನಿರ್ದೇಶಿಸಿದಾಗ, ಆ ಕೃತಿಗಳನ್ನು ತಮ್ಮ ಅಲೋಚನೆಗೆ ಅಥವಾ ಸಿನಿಮಾ ಮಾಧ್ಯಮಕ್ಕೆ ತಕ್ಕಂತೆ ಬದಲಾಯಿಸಿಕೊಂಡಿರುವುದನ್ನ ಅಥವಾ ವಿಸ್ತರಿಸಿಕೊಂಡಿರುವುದನ್ನು ಕಾಣುತ್ತೇವೆ. ಆದರೆ ತಬರನ ಕಥೆ ಸಿನಿಮಾದಲ್ಲಿ ಈ ರೀತಿ ಮಾಡಿಕೊಂಡಿಲ್ಲ. ’ತಬರನ ಕಥೆ’ ತಬರ ಶೆಟ್ಟಿ ಎಂಬ ಏಕ ವ್ಯಕ್ತಿಯ ಸುತ್ತಲೇ ಘಟಿಸುವ ಕಥೆಯಾದ್ದರಿಂದಲೂ ಇರಬಹುದು. ಘಟಶ್ರಾದ್ಧ, ನಾಯಿ ನೆರಳು, ಗುಲಾಬಿ ಟಾಕೀಸ್, ಕನಸೆಂಬ ಕುದುರೆಯನೇರಿ ಮುಂತಾದ ಸಿನಿಮಾಗಳಲ್ಲಿ ಒಂದು ಸಮುದಾಯದ ಸುತ್ತ ಕಥೆ ಘಟಿಸುವುದರಿಂದ, ಇಲ್ಲಿ ಆ ಮೂಲಕಥೆಗಳನ್ನು ದೃಶ್ಯರೂಪಕ್ಕೆ ತರುವಾಗ ಬದಲಾವಣೆ ಅಥವಾ ವಿಸ್ತರಣೆಗೆ ಅವಕಾಶವಿದೆ. ತಬರನ ಕಥೆ ಸಿನಿಮಾಗೆ ಪ್ರತಿಷ್ಠಿತ ’ಸ್ವರ್ಣ ಕಮಲ’ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳು, ತಬರ ಶೆಟ್ಟಿಯ ಪಾತ್ರಕ್ಕಾಗಿ ಚಾರುಹಾಸನ್ ಅವರಿಗೆ ಉತ್ತಮ ನಟ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿತು.

3. ಕುಬಿ ಮತ್ತು ಇಯಾಲ

ಅಬಚೂರಿನ ಪೋಸ್ಟಾಫೀಸು, ತಬರನ ಕಥೆ ಮತ್ತು ಕುಬಿ ಮತ್ತು ಇಯಾಲ ಈ ಮೂರು ತೇಜಸ್ವಿ ಅವರ ಒಂದೇ ಕಥಾ ಸಂಕಲನದಲ್ಲಿ (ಅಬುಚೂರಿನ ಪೋಸ್ಟಾಫೀಸು) ಇರುವ ಕಥೆಗಳು. ಈ ಕಥೆಗಳ ಕಾಲ-ದೇಶ, ಸಮಾಜಗಳು ಒಂದೇ ಆದರೂ ಅವುಗಳು ಚರ್ಚಿಸುವ ವಿಷಯಗಳು ಮಾತ್ರ ಭಿನ್ನವಾದವುಗಳು. ಅಬುಚೂರಿನ ಪೋಸ್ಟಾಫೀಸು, ಆಧುನಿಕತೆ ಗ್ರಾಮಗಳನ್ನು ಪ್ರವೇಶಿಸುತ್ತಿರುವ ಮತ್ತದನ್ನು ಸ್ವೀಕರಿಸುತ್ತಿರುವ ವಿವಿಧ ಸಮುದಾಯಗಳಲ್ಲಿ ಉಂಟಾಗುತ್ತಿದ್ದ ಸಂಘರ್ಷದ ಕಥೆ. ’ತಬರನ ಕಥೆ’ಯಲ್ಲಿ, ವಸಾಹತು ಆಳ್ವಿಕೆಯಿಂದ ಮುಕ್ತಗೊಂಡ ಸ್ವತಂತ್ರ ಪ್ರಜಾಪ್ರಭುತ್ವ ಭಾರತಕ್ಕೆ 25 ವಸಂತ ಕಳೆದರೂ, ಅಮೂಲಾಗ್ರ ಬದಲಾವಣೆಗೆ ತೆರೆದುಕೊಂಡಿಲ್ಲದ ಹತಾಶೆಯ ಕಥೆಯಿದೆ. ’ಕುಬಿ ಮತ್ತು ಇಯಾಲ’ ಜಾತಿ, ಮಾಟ ಮಂತ್ರ, ದೆವ್ವ ಇತ್ಯಾದಿ ಮೌಢ್ಯದಲ್ಲಿ ಮುಳುಗಿರುವ ಗ್ರಾಮ ಆ ಗ್ರಾಮಕ್ಕೆ ಬರುವ ಡಾಕ್ಟರ್ ವೈಚಾರಿಕತೆಯ ಪ್ರತೀಕ. ಈ ಎರಡರ ನಡುವಿನ ಸಂಘರ್ಷದ ಕಥೆ.

’ಕುಬಿ ಮತ್ತು ಇಯಾಲ’ ನಿರ್ದೇಶನ ಮಾಡಿದವರು ’ಗುಡ್ಡದ ಭೂತ’ ಖ್ಯಾತಿಯ ಸದಾನಂದ ಸುವರ್ಣ, ಚಿತ್ರಕಥೆ ಬರೆದವರು ಗಿರೀಶ್ ಕಾಸರವಳ್ಳಿ, ಬಹುಶಃ ಕಥೆ ಮತ್ತು ಸಂಭಾಷಣೆ ತೇಜಸ್ವಿಯವರದು. ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಕನ್ವಿನ್ಸ್ ಆಗುತ್ತದೆ. ಕಥೆಯಲ್ಲಿರುವ ಸೂಕ್ಷ್ಮ ಹೆಣಿಕೆ ಮತ್ತು ಬಹು ಆಯಾಮದ ಗ್ರಹಿಕೆಯನ್ನು ಯಶಸ್ವಿಯಾಗಿ ದೃಶ್ಯಗಳಲ್ಲಿ ಕಟ್ಟಿಕೊಡಲಾಗಿದೆ. ಚಾರು ಹಾಸನ್ ಇದರಲ್ಲಿ ಡಾಕ್ಟರ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

4. ಕಿರಗೂರಿನ ಗಯ್ಯಾಳಿಗಳು

ಜನಪ್ರಿಯ ಶೈಲಿಗೆ ಪರ್ಯಾಯವಾಗಿ ಬರುತ್ತಿದ್ದ ಬ್ರಿಡ್ಜ್ ಸಿನಿಮಾ ಮಾದರಿಯಂತವು ಮೇಲಿನ ಮೂರು ಸಿನಿಮಾಗಳು. ಅವುಗಳನ್ನು ನಿರ್ದೇಶಿಸಿದವರು ಕೂಡ ಅದೇ ಮಾದರಿಯಲ್ಲಿ ಗುರುತಿಸಿಕೊಂಡವರು. ಆದರೆ, ’ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ನಿರ್ದೇಶನ ಮಾಡಿದವರು ಈ ತಲೆಮಾರಿನ ಜನಪ್ರಿಯ ಮಾದರಿಯ ಯುವ ನಿರ್ದೇಶಕಿ ಸುಮನ ಕಿತ್ತೂರು. ನಿರ್ದೇಶನ ಕ್ಷೇತ್ರದಲ್ಲಿ ಮಹಿಳಾ ಮಹಿಳೆಯರು ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿಯಲ್ಲಿ, ಅದರಲ್ಲೂ ಕನ್ನಡದ ಪುರುಷ ಪ್ರಧಾನ ಸಿನಿಮಾ ಪರಿಸರದಲ್ಲಿ ಇದು ಪ್ರಮುಖ ಬೆಳವಣಿಗೆಯಾಗಿತ್ತು. ಇಂತಹ ಪರಿಸರದಲ್ಲಿ ಸುಮನ ಕಿತ್ತೂರು ತಮ್ಮ ಮೊದಲ ಸಿನಿಮಾದಲ್ಲೇ ಅಚ್ಚರಿ ಮೂಡಿಸಿದ್ದವರು. ’ಎದೆಗಾರಿಕೆ’ ಮತ್ತು ’ಸ್ಲಂ ಬಾಲ’ ಈ ಎರಡು ಸಿನಿಮಾಗಳು ಯಶಸ್ಸನ್ನು ಕಂಡಿದ್ದವು.

ಪೋಲೆಂಡ್‌ನ ಖ್ಯಾತ ಸಿನಿಮಾ ನಿರ್ದೇಶಕ ಕಿಸ್ಲೋವಸ್ಕಿ ಒಂದು ಸಂದರ್ಶನದಲ್ಲಿ ಹೀಗೆನ್ನುತ್ತಾರೆ: ’ಒಬ್ಬ ಲೇಖಕನಿಗೆ, ತನ್ನ ಕೃತಿಯಲ್ಲಿ ಪಾತ್ರವೊಂದರ ಒಂದು ಮನಸ್ಥಿತಿಯನ್ನು ಅಥವಾ ಒಂದು ಕ್ಷಣದ ಮೂಡ್‌ಅನ್ನು ಕಟ್ಟಿಕೊಡಲು ಒಂದು ಪ್ಯಾರಾದಿಂದ ಪುಟದವರೆಗೂ ವಿವರಿಸಬೇಕಾಗುತ್ತದೆ. ಈ ವಿಷಯದಲ್ಲಿ ಸಿನಿಮಾ ನಿರ್ದೇಶಕನಿಗೆ ಅನುಕೂಲ ಹೆಚ್ಚು. ಯಾಕೆಂದರೆ ಪಾತ್ರದ ಕಣ್ಣಿನ ನೋಟ ಅಥವಾ ಚಲನೆ ಅಥವಾ ಗೆಸ್ಚರ್ ಮೂಲಕ ಒಂದು ಕ್ಷಣದ ದೃಶ್ಯದಲ್ಲಿ ಅದನ್ನು ಸಾಧಿಸಬಹುದು’ ಎಂದು. ದೃಶ್ಯ ಮಾಧ್ಯಮಕ್ಕೆ ಇಷ್ಟೆಲ್ಲಾ ಸಾಧ್ಯತೆಗಳು ಇದ್ದಾಗಿಯೂ, ಕಿರಗೂರಿನ ಗಯ್ಯಾಳಿಗಳು ಸಿನಿಮಾ, ಮೂಲ ಕಥೆಯಲ್ಲಿ ಬರುವ ಪಾತ್ರಗಳನ್ನು ಅಷ್ಟೇ ತೀವ್ರವಾಗಿ ಮತ್ತು ಆ ಪಾತ್ರಗಳ ವಿವಿಧ ಛಾಯೆಗಳನ್ನು ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯವಾಗಿಲ್ಲ. ನಿರ್ದೇಶಕರು ಕಥೆಯ ಆಶಯವನ್ನಷ್ಟೇ ಮುಖ್ಯವಾಗಿಟ್ಟುಕೊಂಡು ಪಾತ್ರಗಳನ್ನು ಕಟ್ಟಿದ್ದಾರೆ. ಪಾತ್ರಗಳು ಮತ್ತು ಕಥೆಯ ಕಾಲ-ದೇಶದ ಪರಿಸರ ತೀರಾ ಸಾಧಾರಣವಾಗಿ ಅಭಿವ್ಯಕ್ತಿಗೊಂಡಿದೆ. ಇಷ್ಟಾಗಿಯೂ ಈ ಸಿನಿಮಾ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿ ಯಶಸ್ವಿಯಾಯಿತು.

ಈಗ ಮತ್ತೊಬ್ಬ ಯುವ ನಿರ್ದೇಶಕ ಶಶಾಂಕ್ ಶೋಗಲ್, ತೇಜಸ್ವಿ ಅವರ ಮತ್ತೊಂದು ಸಣ್ಣ ಕಥೆ ’ಡೇರ್ ಡೆವಿಲ್ ಮುಸ್ತಫಾ’ವನ್ನು ಸಿನಿಮಾಗೆ ಅಳವಡಿಸಿದ್ದಾರೆ. ಅದಿನ್ನೂ ಬಿಡುಗಡೆಯಾಗಬೇಕಿದೆ. ’ಜುಗಾರಿ ಕ್ರಾಸ್’ ಕಾದಂಬರಿ, ’ನಿಗೂಢ ಮನುಷ್ಯರು’ ನೀಳ್ಗತೆ ಸಿನಿಮಾ ಮಾಧ್ಯಮದಲ್ಲಿ ಮೂಡಿಸುವ ಆಸಕ್ತಿ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಆಗಾಗ ಮಾತು ಕೇಳಿಬರುವುದೂ ನಿಜ. ಒಟ್ಟಿನಲ್ಲಿ ತೇಜಸ್ವಿಯವರ ಕಥನ ಶೈಲಿ ಸಿನಿಮಾ ನಿರ್ದೇಶಕರನ್ನು ಮತ್ತು ಆಸಕ್ತರನ್ನು ಎಕ್ಸೈಟ್ ಮಾಡುತ್ತಿರುತ್ತದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು: ಭಾಗ-2

LEAVE A REPLY

Please enter your comment!
Please enter your name here