ಜನಪ್ರಿಯ ಶೈಲಿ: ಭಾರತೀಯ ಕಾವ್ಯ ಮೀಮಾಂಸೆಯಲ್ಲಿ (ಇದನ್ನ ಕೇವಲ ಸಂಸ್ಕೃತ ಕಾವ್ಯ ಮೀಮಾಂಸೆ ಅಂತಲೂ ಹೇಳೋದಿದೆ) ಒಂದು ಪ್ರತೀತಿ ಇದೆ: ಒಂದು ಕಾವ್ಯ ಅಥವಾ ಕೃತಿಯನ್ನು ’ಮಹಾಕಾವ್ಯ’ವೆಂದು ಪರಿಗಣಿಸಬೇಕಿದ್ದರೆ, ಅದರಲ್ಲಿ ಅಷ್ಟದಶಾ ವರ್ಣನೆಗಳು ಮತ್ತು ಒಬಂತ್ತು ರಸಗಳು ಇರಲೇಬೇಕೆಂಬುದು! ಅಂದರೆ ಕಾವ್ಯ ಕಟ್ಟುವಿಕೆಯಲ್ಲಿ ಒಂದು ನಿರ್ದಿಷ್ಟವಾದ ಕ್ರಮವನ್ನ ಕೃತಿಕಾರ ಅನುಸರಿಸಬೇಕಾಗಿತ್ತು. ಹಾಗೆಯೇ, ನಮ್ಮಲ್ಲಿ ಬಹುತೇಕ ಜನಪ್ರಿಯ ಸಿನಿಮಾಗಳಲ್ಲಿ ಈ ತರಹದ ಒಂದು ನಿರ್ದಿಷ್ಟವಾದ ಕ್ರಮವನ್ನ/ಕಟ್ಟುವಿಕೆಯನ್ನ ಗುರುತಿಸಬಹುದು. ಹಾಡು, ಕುಣಿತ, ಹೊಡೆದಾಟ, ಅಬ್ಬರದ ಸಂಗೀತ, ಅತಿಯಾದ ಬೆಳಕು, ಆಡಂಬರದ ವಸ್ತ್ರವಿನ್ಯಾಸ, ರಮ್ಯ ಪ್ರದೇಶಗಳ ಚಿತ್ರಣ, ಪ್ರಸಿದ್ಧ ನಟ ನಟಿಯರ ತಾರಾಗಣ, ಅತೀ ಎಂಬಷ್ಟು ನಾಟಕೀಯತೆ ಇತ್ಯಾದಿಗಳು. ಔಚಿತ್ಯವೋ ಅಲ್ಲವೋ ಒಟ್ಟಿನಲ್ಲಿ ಇರುತ್ತಿದ್ದವು.

ಆದರೆ, ಈ ತರಹದ ಸಿನಿಮಾಗಳಲ್ಲಿ ಸಮಸ್ಯೆಗಳ ಸರಮಾಲೆಗಳೇ ಇರುತ್ತವೆ. ಮನರಂಜನೆಯನ್ನೇ ಗುರಿಯಾಗಿಸಿಕೊಂಡು ಗಂಭೀರವಾದ ವಿಷಯವನ್ನು ಸರಳೀಕರಿಸುವುದು, ಯಾವುದೋ ಒಂದು
ಆದರ್ಶವನ್ನು ಪ್ರೇಕ್ಷಕನಿಗೆ ದಾಟಿಸುವ ಧಾವಂತದಲ್ಲಿ ಹಲವು ಮನುಷ್ಯ ವಿರೋಧಿ ಆಲೋಚನೆಗಳನ್ನ ಸಹ್ಯವಾಗಿಸಿಬಿಡುವುದು, ವಿಚಾರದಲ್ಲಿ ಸ್ಫಷ್ಟತೆ ಇಲ್ಲದಿರುವುದು, ಹೀರೋ-ವಿಲನ್ ಎಂಬ ಕಪ್ಪು-ಬಿಳಪು ಮಾದರಿಯ ಚಿತ್ರಣ, ಶ್ರೇಷ್ಠತೆಯ ವ್ಯಸನ, ವ್ಯಕ್ತಿ ಕೇಂದ್ರಿತ-ನಾಯಕ ಪ್ರಧಾನ ಚಿತ್ರಕತೆ ಹೀಗೆ ಪಟ್ಟಿ ಬೆಳೆಯುತ್ತದೆ.

ಈ ಬಗೆಯ ಜನಪ್ರಿಯ ಸಿನಿಮಾಗಳಲ್ಲಿ ಬಳಕೆಯಾಗುವ ಪರಿಕರಗಳನ್ನು ಪ್ರೇಕ್ಷಕನನ್ನು ಸಮ್ಮೋಹನಗೊಳಿಸಿ ಅಗ್ಗದ ಮನರಂಜನೆಗೆ ಸೀಮಿತಗೊಳಿಸಿ ಬಳಸದೇ, ನಮ್ಮ ಸಮಾಜದಲ್ಲಿರುವ ಕಟುವಾಸ್ತವಗಳನ್ನು ತೆರೆಮೇಲೆ ತಂದು, ಇದರ ಕಾರ್ಯ ಕಾರಣ ಸಂಬಂಧಗಳನ್ನು ಪ್ರೇಕ್ಷಕ ಹುಡುಕಲು ಪ್ರೇರಪಿಸುವಂತಹ ಸಿನಿಮಾಗಳನ್ನು ಕೆಲವೇ ಕೆಲವು ನಿರ್ದೇಶಕರು ಮಾಡುತ್ತಿದ್ದಾರೆ. ಈ ರೀತಿಯ ವಾಸ್ತವಗಳಲ್ಲಿ ಪ್ರಧಾನವಾದ ಜಾತಿ ದೌರ್ಜನ್ಯದ ಕಥನಗಳನ್ನು ಜನಪ್ರಿಯ ಶೈಲಿಯಲ್ಲಿ ಕಟ್ಟಿಕೊಟ್ಟ ಸಿನಿಮಾಗಳು ತುಸು ಹೆಚ್ಚೇ ಗಮನ ಸೆಳೆದಿವೆ.

PC : The Indian Wire (ನಾಗರಾಜ್ ಮಂಜುಳೆ)

ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆ ಜನಪ್ರಿಯ ಶೈಲಿ ಮತ್ತು ಪ್ರಾರಲೆಲ್ ಸಿನಿಮಾ ಎಂದು ಕರೆಯಲ್ಪಡುವ ಶೈಲಿಯಲ್ಲಿಯೂ ನಿರ್ದೇಶಿಸಿರುವುದು ವಿಶೇಷ. ’ಫಂಡ್ರಿ’ಯಲ್ಲಿ ಜಾತಿ ದೌರ್ಜನ್ಯ ಮತ್ತು ಈ ದೌರ್ಜನ್ಯಕ್ಕೆ ಒಳಗಾದವರ ಅವಮಾನಗಳೆಲ್ಲವನ್ನೂ ಪ್ರತಿಮೆಗಳ ಮೂಲಕ ಬಹಳ ಸೂಕ್ಷ್ಮವಾಗಿ ಮತ್ತು ಅಷ್ಟೇ ವಿವರವಾಗಿ ಕಟ್ಟಿಕೊಟ್ಟಿದ್ದರೆ. ಅದೇ ’ಸೈರಾಟ್‌’ನಲ್ಲಿ ಜಾತಿ ಶ್ರೇಷ್ಠತೆಯ ಕಾರಣವಾಗಿ ಮನುಷ್ಯನ ಆಳದಲ್ಲಿ ಹುದುಗಿರುವ ಕ್ರೌರ್ಯವನ್ನು ಜನಪ್ರಿಯ ಶೈಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಮಂಜುಳೆ ಜನಪ್ರಿಯ ಸಿನಿಮಾದ ಎಲ್ಲಾ ಪರಿಕರಗಳನ್ನು ಬಹಳ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಸಿನಿಮಾದ ಅಂತ್ಯದೊತ್ತಿಗೆ ಇನ್ನೇನು ಕಥೆ ಸುಖಾಂತ್ಯವಾಯ್ತು ಅಂತ ಪ್ರೇಕ್ಷಕ ನಿಟ್ಟುಸಿರು ಬಿಡುವಷ್ಟರಲ್ಲಿ, ಜಾತಿ ಕ್ರೌರ್ಯದ ಸುಡುವ ವಾಸ್ತವವನ್ನು ಒಂದೇ ದೃಶ್ಯದಲ್ಲಿ ಅನಾವರಣಗೊಳಿಸಿ ಭ್ರಮೆಯಲ್ಲಿದ್ದ ಪ್ರೇಕ್ಷಕನ ತಲೆಗೆ ಸುತ್ತಿಗೆಯಿಂದ ರಪ್ ಅಂತ ಬಾರಿಸಿಬಿಡುತ್ತಾರೆ.

ಸೈರಾಟ್ ಸಿನಿಮಾ ಮಹಾರಾಷ್ಟ್ರ ಮಾತ್ರವಲ್ಲದೆ ದೇಶದ ಇತರ ಭಾಗದಲ್ಲಿಯೂ ಹೆಚ್ಚೆಚ್ಚು ಪ್ರದರ್ಶನ ಕಂಡಿತು. 66ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಅಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ದೀರ್ಘಕಾಲ ಕರತಾಡನದ ಮೂಲಕ ಸಿಮಗೆ ಗೌರವ ಸಲ್ಲಿಸುವಂತೆ ಮಾಡಿತು. 63ನೇ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಯಿತು. ಒಡಿಯಾ, ಬೆಂಗಾಲಿ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಇದು ರಿಮೇಕ್ ಆಯ್ತು. ಇನ್ನು ಮರಾಠಿ ಸಿನಿಮಾ ಉದ್ಯಮದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನೆ ಸೃಷ್ಟಿ ಮಾಡಿತು. ಈ ಸಿನಿಮಾದ ಹಾಡು ಮತ್ತು ಸಂಗೀತ ಭಾಷೆಗಳ ಗಡಿದಾಟಿ ದೇಶದ ಎಲ್ಲರ ಮೊಬೈಲ್‌ಗಳಲ್ಲಿ ರಿಂಗಣಿಸಿತು.

ಮಲೆಯಾಳಂನ ನಿರ್ದೇಶಕ ರಾಜೀವ್ ರವಿ ಮೂಲತಃ ಸಿನಿಮಾಟೋಗ್ರಾಫರ್. ಈತ ಸಿನಿಮಾಟೋಗ್ರಾಫರ್ ಆಗಿ ಹೆಚ್ಚು ಕೆಲಸ ಮಾಡಿದ್ದು ಹಿಂದಿ ಸಿನಿಮಾಗಳಲ್ಲಿ, ಅದರಲ್ಲೂ ಅನುರಾಗ್ ಕಶ್ಯಪ್‌ರ ಸಿನಿಮಾಗಳಲ್ಲಿ. ರಾಜೀವ್ ರವಿಯವರ ’ಅನ್ನಯುಂ ರಸೂಲುಂ’ ನೋಡಲು ಸೂಚಿಸಿದ ಸ್ನೇಹಿತರು ಹೀಗೆಂದಿದ್ದರು: ’ಈ ಸಿನಿಮಾದಲ್ಲಿ ಕಥೆ, ಪಾತ್ರಗಳು ಯಾವುದು ಬೇಡ ದೃಶ್ಯಗಳನ್ನಷ್ಟೆ ಫಾಲೊ ಮಾಡಿ ಸಾಕು. ಒಳ್ಳೆಯ ಸಿನಿಮ್ಯಾಟಿಕ್ ಅನುಭವ ನೀಡುತ್ತೆ’ ಅಂತ. ಒಂದು ದೃಶ್ಯದ ಫ್ರೇಂ ಒಳಗೆ ಬರುವ ಎಲ್ಲವನ್ನು ಬಹಳ ನೈಜವಾಗಿ ರಾಜೀವ್ ಕಟ್ಟಿಕೊಡುತ್ತಾರೆ. ಪಾತ್ರ, ಆ ಪಾತ್ರದ ಕಾಸ್ಟ್ಯೂಮ್, ಆ ಪಾತ್ರದ ಸ್ವಭಾವ, ದೈಹಿಕ ಚಲನೆ ಮತ್ತು ಆ ದೃಶ್ಯದ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಪರಿಸರದ ಚಿತ್ರಣ ಎಲ್ಲವೂ ಕೂಡ ವಾಸ್ತವಕ್ಕೆ ಹತ್ತಿರವಾಗಿರುತ್ತದೆ.

ರಾಜೀವ್ ರವಿಯ ’ಕಮ್ಮಟಿಪಡಂ’ ಸಿನಿಮಾ ಹಲವಾರು ಕಾರಣಗಳಿಗಾಗಿ ಬಹಳ ಮುಖ್ಯವಾದದ್ದು. ಅದು ಪ್ರಸ್ತುತಪಡಿಸುವ ವಸ್ತು, ಕಟ್ಟಿದ ಕ್ರಮ (Narrative Style), ಕಾಲದೇಶಗಳ ಚಿತ್ರಣ, ಕಥೆ ಚಲಿಸುತ್ತಿದ್ದಂತೆ ಕಥಾ ಪಾತ್ರಗಳಲ್ಲಿ ಕಾಣುವ ಭಿನ್ನ ಛಾಯೆಗಳು, ಆ ಪಾತ್ರಗಳಿಗೆ ಜೀವ ತುಂಬಿದ ನಟರು, ಸಿನಿಮಾದ ವಸ್ತುವಿಗೆ ಪೂರಕವಾಗಿ ಬರುವ ಹಾಡಿನ ಸಾಹಿತ್ಯ ಇನ್ನೂ ಮುಂತಾದ ಕಾರಣಕ್ಕೆ ಈ ಸಿನಿಮಾ ಮುಖ್ಯವಾಗುತ್ತದೆ. ಸಿನಿಮಾದಲ್ಲಿ ಬರುವ ಎರಡು ಪ್ರಧಾನ ಪಾತ್ರಗಳು ಕೃಷ್ಣ ಮತ್ತು ಗಂಗ. ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಕೃಷ್ಣ ಬಾಲ್ಯದಿಂದ ತನ್ನ ಸಹವಾಸ, ಒಡನಾಟ ಎಲ್ಲಾ ದಲಿತ ಸಮುದಾಯಕ್ಕೆ ಗಂಗನ ಪರಿಸರದಲ್ಲೇ ಇರುತ್ತದೆ. ಈ ಸಿನಿಮಾದಲ್ಲಿ ಆ ಪಾತ್ರ ತನ್ನನ್ನು ತಾನು ಯಾವಾಗಲೂ ಗುರುತಿಸಿಕೊಳ್ಳುವುದು ದಲಿತನಾಗಿಯೇ. ಯಾಕೆ ಬಹುತೇಕ ಭಾರತೀಯ ಸಿನಿಮಾಗಳಲ್ಲಿ ಕಥಾನಾಯಕ ಮೇಲ್‌ಸಮುದಾಯದವನೇ ಆಗಿರುತ್ತಾನೆ? ತಳ ಸಮುದಾಯದ ಕಥೆ ಹೇಳುವಾಗಲೂ ಮೇಲ್ಜಾತಿಯವರೇ ಕಥಾನಾಯಕರಾಗಿ ತಳಸಮುದಾಯದವರಿಗೆ ದೌರ್ಜನ್ಯದಿಂದ ಮುಕ್ತಿ ನೀಡುವ ರೀತಿ ಯಾಕೆ ಚಿತ್ರಿಸಲಾಗುತ್ತೆ ಎಂಬ ತಕರಾರು ಇದ್ದರೂ, ಕಮ್ಮಟಿಪಡಂ ಸಿನಿಮಾದ ’ಕೃಷ್ಣ’ ಪಾತ್ರ ಕನ್ವಿನ್ಸ್ ಮಾಡುವ ರೀತಿಯದ್ದಾಗಿದೆ. ಇದೇ ತಕರಾರನ್ನು ಸ್ನೇಹಿತರು ನನ್ನ ಮುಂದಿಟ್ಟಾಗ: ’ಕೃಷ್ಣನ ಪಾತ್ರ ಸಿನಿಮಾದಲ್ಲಿ ಚಿತ್ರಿತವಾಗಿರುವುದು ’ದಲಿತ’ನಾಗಿ’ ಅಂತ ಸಮರ್ಥಿಸಿಕೊಂಡಿದ್ದೆ. ಆದರೆ ಇದು ತಪ್ಪು ಗ್ರಹಿಕೆ ಅಂತ ನಂತರ ಅನ್ನಿಸ್ತು. ರಾಜೀವ್ ರವಿಗೆ ಯಾವುದೇ ದುರುದ್ದೇಶ ಇಲ್ಲದೇ ಇರಬಹುದು ಆದರೆ, ಪ್ರೇಕ್ಷಕನಾದ ನನಗೆ ಯಾವಾಗಲೂ ಮನಸ್ಸಿನಲ್ಲಿ ಕಾಡುವ ಮತ್ತು ಉದಾತ್ತ ಪಾತ್ರವಾಗಿ ಉಳಿಯುವುದು ಅದೇ ದೌರ್ಜನ್ಯ ಸಮುದಾಯಕ್ಕೆ ಸೇರಿದ ’ಕೃಷ್ಣ’ ಮಾತ್ರ. ಮತ್ತೆ ಗಂಗ? ರಾಜೀವ್ ರವಿ ಆದಿಯಾಗಿ ಇದು ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ.

PC : The Times of India (ರಾಜೀವ್ ರವಿ)

ತಮಿಳಿನ ಹಲವಾರು ನಿರ್ದೇಶಕರು ತಮ್ಮ ವೃತ್ತಿಜೀವನದ ಪ್ರಾರಂಭದಲ್ಲಿ ಬಹಳ ಸೂಕ್ಷ್ಮವಾದ ವಸ್ತುಗಳನ್ನು ಇಟ್ಟುಕೊಂಡು ಸಣ್ಣ ಪ್ರಮಾಣದ ಬಜೆಟ್‌ನಲ್ಲಿ ಸಿನಿಮಾ ಮಾಡಿ ಯಶಸ್ವಿಯಾಗಿದ್ದಾರೆ. ಉದಾ: ಕನಗರಾಜ್, ವಿನೋದ್, ಕಾರ್ತಿಕ್ ಸುಬ್ಬುರಾಜ್, ಶಶಿಕುಮಾರ್ ಮುಂತಾದವರು. ಮುಂದೆ ಇವರೆಲ್ಲಾ ಸ್ಟಾರ್ ನಟನ ಸಿನಿಮಾ ಮಾಡಿ ಜನಪ್ರಿಯವಾಗುವ ಭರದಲ್ಲಿ ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡದ್ದೂ ಇದೆ. ಆ ಸ್ಟಾರ್ ನಟರನ್ನು
ಮತ್ತವರ ಮ್ಯಾನರಿಸಂಗಳನ್ನು ತೆರೆ ಮೇಲೆ ವಿಜೃಂಭಿಸುವ ಸಲುವಾಗಿ ತಮ್ಮ ಸೂಕ್ಷ್ಮತೆಯ ಕಥಾನಿರೂಪಣೆಯ ಜೊತೆಗೆ ರಾಜಿಮಾಡಿಕೊಂಡು ದಾರಿ ತಪ್ಪಿದ್ದೇ ಹೆಚ್ಚು. ಆದರೆ, ಪ.ರಂಜಿತ್, ಮಾರಿ ಸೆಲ್ವರಾಜ್ ಮತ್ತು ವೆಟ್ರಿಮಾರನ್ ಅಂತ ನಿರ್ದೇಶಕರು ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚು ಕಾಳಜಿಯುಳ್ಳ ಸೂಕ್ಷ್ಮ ನಿರ್ದೇಶಕರಾಗುತ್ತಿದ್ದಾರೆ. ಸ್ಟಾರ್ ನಟರ ಜನಪ್ರಿಯತೆಯನ್ನು ತಾವು ಸಿನಿಮಾದಲ್ಲಿ ಹೇಳಬೇಕಾದ ವಿಚಾರಗಳನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸಲು ಪೂರಕವಾಗಿ ದುಡಿಸಿಕೊಳ್ಳುತ್ತಿದ್ದಾರೆ.

ಸಿನಿಮಾದಲ್ಲಿ ಜಾತಿನೇ ಇಲ್ಲ, ಸರ್ವರೂ ಸಮಾನವಾಗಿ ಕೂತು ನೋಡುವ ಕಲಾಪ್ರಕಾರ ಯಾವುದಾದರೂ ಇದ್ದರೆ ಅದು ಸಿನಿಮಾ ಮಾತ್ರ, ಆ ಕಾರಣವಾಗಿ ಅಲ್ಲಿ ಜಾತಿಯತೇ ಇಲ್ಲ ಎಂದು ಬಡಬಡಾಯಿಸುವ ಸ್ಟಾರ್ ನಿರ್ದೇಶಕರ ನಡುವೆ ಸಿನಿಮಾಗಳಲ್ಲಿ ಒಂದು ದಲಿತ ಪಾತ್ರ ಹೀರೋವಾಗಲು ಪ.ರಂಜಿತ್‌ಗಾಗಿ ಕಾಯಬೇಕಾಯ್ತು. ಪ.ರಂಜಿತ್ರ ಕಬಾಲಿ ಸಿನಿಮಾದ ಕಥೆ ಮಲೇಷಿಯಾದಲ್ಲಿನ ತಮಿಳರ ಹಕ್ಕಿಗಾಗಿ ಹೋರಾಡುವ ಒಬ್ಬ ದಲಿತ ನಾಯಕನದು. ’ಕಾಲ’ ಸಿನಿಮಾದ ಕಥೆ ಮುಂಬೈನ ಧರಾವಿ ಸ್ಲಂನಲ್ಲಿ ವಾಸಿಸುವ ತಮಿಳರ ಅಸ್ಮಿತೆಗಾಗಿ ಹೋರಾಡುವ ದಲಿತ ನಾಯಕನದು. ಇದುವರೆಗೂ ತಳ ಸಮುದಾಯದವರ ಆಹಾರ, ಉಡುಪು,
ಆಚಾರಗಳನ್ನು ತೆರೆಮೇಲೆ ತರಲು ಇದ್ದ ಮಡಿವಂತಿಕೆಯನ್ನು ಪ.ರಂಜಿತ್ ತಮ್ಮ ಸಿನಿಮಾಗಳ ಮುಖಾಂತರ ಮುರಿಯುತ್ತಿದ್ದಾರೆ. ಇದುವರೆಗೂ ಪ್ರೇಕ್ಷಕನಿಗೆ ಉಣಬಡಿಸಿದ ಏಕ ಸಂಸ್ಕೃತಿಯ ಯಜಮಾನಿಕೆಯನ್ನು ಮುರಿದು ಬಹು ಸಮಾಜದ, ಬಹು ಸಂಸ್ಕೃತಿಯ ವಾಸ್ತವಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ರಂಜಿತ್ ಅವರಿಗೆ ಅಪಾರ ಓದಿನ ಹಿನ್ನೆಲೆ ಇದೆ. ರಾಜಕೀಯ ಪ್ರಜ್ಞೆ ಇದೆ. ಈ ಎಲ್ಲವುಗಳ ಪ್ರಭಾವದಿಂದ ತಾವು ಸಿನಿಮಾದಲ್ಲಿ ಏನನ್ನು ಪ್ರಸ್ತುತಪಡಿಸಬೇಕು ಎಂಬುದರ ಬಗ್ಗೆ ಖಚಿತವಾದ ನಿಲುವಿದೆ. ಕಲೆ/ಸಿನಿಮಾ ಕೂಡ ರಾಜಕೀಯದ ಭಾಗ, ಆ ಮೂಲಕ ಪ್ರೇಕ್ಷಕರನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಜ್ಞಾವಂತರನ್ನಾಗಿ ಮಾಡಬಹುದು ಎಂಬ ನಂಬಿಕೆ ಅವರಿಗಿದೆ. ಸಿನಿಮಾದಿಂದ ಸಿನಿಮಾಗೆ ದೃಶ್ಯ ಮಾಧ್ಯಮದ ಸಾಧ್ಯತೆಗಳನ್ನು ಶೋಧಿಸುತ್ತಿದ್ದಾರೆ, ಕಲಾತ್ಮಕವಾಗಿ ಹೊಸಹೊಸದನ್ನು ಸಾಧಿಸುತ್ತಿದ್ದಾರೆ. ಅವರ ಇತ್ತೀಚಿನ ’ಸರ್‌ಪಟ್ಟ ಪರಂಬರೈ’ ಇದಕ್ಕೆ ಬಹಳ ದೊಡ್ಡ ಉದಾಹರಣೆ.

ಮಾರಿ ಸೆಲ್ವರಾಜ್ ತಮ್ಮ ಮೊದಲ ಸಿನಿಮಾ ’ಪರೆಯೇರುಂ ಪೆರುಮಾಳ್’ ಮುಖಾಂತರ ಬಹಳ ಘನವಾದದ್ದನ್ನೆ ಸಾಧಿಸಿದರು. ಇದುವರೆಗೆ ಜಾತಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇವಲ ಏಕಮುಖದ ಚಿತ್ರಣದ ಸಿನಿಮಾಗಳನ್ನು ನೋಡಿದ ನಮಗೆ, ಮೊದಲ ಬಾರಿಗೆ ಪರಿಯೇರುಂ ಪೆರುಮಾಳ್‌ನಲ್ಲಿ ನಮ್ಮ ಸಮಾಜದಲ್ಲಿರುವ ಜಾತಿಪದ್ಧತಿಯ ಕ್ರೌರ್ಯದ ವಿವಿಧ ಆಯಾಮಗಳು ಮತ್ತು ಆ ಕ್ರೌರ್ಯದ ಹಿಂದಿನ ಕಾರ್ಯ ಕಾರಣ ಸಂಬಂಧಗಳನ್ನೆಲ್ಲಾ ಸೆಲ್ವರಾಜ್ ಚರ್ಚಿಸುತ್ತಾರೆ. ಸಿನಿಮಾದ ನಾಯಕ ಕದೀರ್ ತನ್ನ ಮೇಲೆ ಜರುಗುವ ಜಾತಿ ದೌರ್ಜನ್ಯದ ವಿರುದ್ಧ ತಕ್ಷಣ ಪ್ರತಿಕಾರಕ್ಕೆ ಮುಂದಾಗುವುದಿಲ್ಲ, ದೌರ್ಜನ್ಯ ಮಾಡಿದವರ ಮನಃಪರಿವರ್ತನೆಗೆ ಮುಂದಾಗುತ್ತಾನೆ. ಒಂದು, ಸಮನ್ವಯದ ದಾರಿ ಹುಡುಕುತ್ತಾನೆ. ಅದೇ ರೀತಿ ಕದೀರ್ ಓದುವ ಕಾಲೇಜಿನ ಪ್ರಾಂಶುಪಾಲರು ಹೇಳುವ ಮಾತು: ’ಈ ಜಾತಿ ದೌರ್ಜನ್ಯಕ್ಕೆ ಒಳಗಾಗಿ ಅಪಮಾನದಿಂದ ನಾಲ್ಕು ಗೋಡೆ ಒಳಗೆ ನೇಣುಹಾಕಿಕೊಂಡು ಸಾಯುವ ಬದಲು, ಅದರ ವಿರುದ್ಧ ಬೀದಿಯಲ್ಲಿ ಹೋರಾಡಿ ಸಾಯುವುದು ಮೇಲು’. ಸಿನಿಮಾದಲ್ಲಿ ಈ ಎರಡು ದಾರಿಗಳಲ್ಲಿ ಹೆಚ್ಚು ವ್ಯಕ್ತವಾಗಿರುವುದು ಮೊದಲನೆಯದ್ದು.

PC : Film Companion (ಮಾರಿ ಸೆಲ್ವರಾಜ್)

ನಮ್ಮಲ್ಲಿ ಪುರಾಣದ ಕಥೆಗಳನ್ನ ಅಂದರೆ ರಾಮಾಯಣ, ಮಹಾಭಾರತದಂತಹ ಕಥೆಗಳನ್ನ ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಬಹಳಷ್ಟು ಸಿನಿಮಾಗಳು ಬಂದಿವೆ. ಆದರೆ ಅವೆಲ್ಲಾ ಪ್ರತಿನಿಧಿಸುವುದು ಮೇಲ್ವರ್ಗದ ಸಮುದಾಯವನ್ನ ಮತ್ತು ಅವರು ಪ್ರತಿಪಾದಿಸುವ ತಾರತಮ್ಯದ ಮೌಲ್ಯಗಳನ್ನ. ಮಾರಿ ಸೆಲ್ವರಾಜ್ ತಮ್ಮ ಎರಡನೇ ಸಿನಿಮಾ ’ಕರ್ಣನ್‌’ನಲ್ಲಿ ಈ ಕ್ರಮವನ್ನ ಮುರಿಯುತ್ತಾರೆ. ಮಹಾಭಾರತದ ಕೆಲವು ಸಂಗತಿಗಳನ್ನು ಮತ್ತು ಪಾತ್ರಗಳನ್ನು ತಳ ಸಮುದಾಯದ ಆಸ್ಮಿತೆಗೆ ಅನ್ವಯಿಸಿ ಹೇಳುತ್ತಾರೆ. ಕರ್ಣನ್ ಸಿನಿಮಾದಲ್ಲಿ ಬರುವ ಒಂದೊಂದು ಪ್ರತಿಮೆಗಳು ಅದ್ಭುತವಾಗಿವೆ: ಜಾತಿಸಂಕೋಲೆಯನ್ನು ಸೂಚಿಸುವ ಕಾಲಿಗೆ ಕಟ್ಟಿದ ಕತ್ತೆ ಚಿತ್ರಣವಾಗಿರಬಹುದು, ತಳ ಸಮುದಾಯದವರು ಅನರ್ಹರು ಎಂಬ ಮಿಥ್‌ಅನ್ನು ಒಡೆಯುವ,
ಕಥಾನಾಯಕ ಬೃಹತ್ ಗಾತ್ರದ ಮೀನನ್ನು ಒಂದೇ ಏಟಿಗೆ ಕತ್ತರಿಸುವ ದೃಶ್ಯ ಆಗಿರಬಹುದು.

ಮತ್ತೊಬ್ಬ ತಮಿಳು ನಿರ್ದೇಶಕ ವೆಟ್ರಿ ಮಾರನ್ ತಾವು ಹೇಳಬೇಕಾದದ್ದನ್ನು ಚುರುಕಾಗಿ, ಅಷ್ಟೇ ತೀಷ್ಣಣವಾಗಿ ಬಹಳ ಇಂಟೆನ್ಸ್ ಆಗಿ ದೃಶ್ಯಗಳಲ್ಲಿ ಕಟ್ಟುತ್ತಾರೆ. ವೆಟ್ರಿ ಕೂಡ ರಂಜಿತ್ ಮತ್ತು ಮಾರಿಸೆಲ್ವರಾಜ್ ರೀತಿ ಓದಿನ ಹಿನ್ನೆಲೆ ಇರುವ ಮತ್ತು ಸೂಕ್ಷ್ಮ ಸಂವೇದನೆ ಇರುವ ವ್ಯಕ್ತಿ. ವೆಟ್ರಿ ಕೂಡ ತಮ್ಮ ಎಲ್ಲ ಸಿನಿಮಾಗಳಲ್ಲೂ ಪ್ರತಿನಿಧಿಸಿದ್ದು ತಳ ಸಮುದಾಯವನ್ನೆ. ಅವರ ’ಪೊಲ್ಲಾದವನ್, ’ಆಡುಕುಳಾಂ’, ’ವಿಸಾರಣೈ’, ’ವಡಾ ಚೆನೈ’ ಮತ್ತು ’ಅಸುರನ್ ಸಿನಿಮಾಗಳಲ್ಲಿ ಬರುವ ನಾಯಕ ನಟ-ನಟಿಯರು ತಳ ಸಮುದಾಯದವರು. ಅವರು ನಿರೂಪಿಸುವ ಕಥೆ ಕೂಡ ತಳ ಸಮುದಾಯದವರದ್ದೆ.

ವೆಟ್ರಿ ಸಿನಿಮಾಗಳಲ್ಲಿ ಕಥೆಯ ನಿರೂಪಣೆ, ದೃಶ್ಯಗಳ ಬಂಧ ಬಹಳ ಬಿಗಿಯಾಗಿರುತ್ತದೆ. ವೆಟ್ರಿ ಹೆಚ್ಚು ವಿವರಣೆಗಳಿಗೆ ಹೋಗುವುದಿಲ್ಲ. ಅಸುರನ್ ಸಿನಿಮಾ ಪ್ರೇಕ್ಷಕನ ಏಕಾಗ್ರತೆಯನ್ನು ಬಹಳ ಬೇಗ ಸೆಳೆಯುವುದು ಈ ಕಾರಣದಿಂದಲೇ. ಮೆಲೋಡ್ರಮಾಟಿಕ್ ಅಂಶಗಳು ಜಾಸ್ತಿ ಅನಿಸಿದರೂ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ದಾಟಿಸುವಲ್ಲಿ ಇದರ ಕೊಡುಗೆ ಹೆಚ್ಚು.

ಹಿಂದಿಯಲ್ಲಿ ವಾಸ್ತವ ಸಮಾಜದಿಂದ ಪ್ರತ್ಯೇಕವಾಗಿರುವ ಸಿನಿಮಾಗಳೇ ಹೆಚ್ಚು. ಅಲ್ಲಿಯೂ ಸಂವೇದನಾಶೀಲ ಕೆಲವು ಸಿನಿಮಾ ನಿರ್ದೇಶಕರಿದ್ದಾರೆ. ಅಂತವರಲ್ಲಿ ಅನುಭವ್ ಸಿನ್ಹಾ ಕೂಡ ಒಬ್ಬರು. ಇವರ ಸಿನಿಮಾಗಳಲ್ಲಿ ವಿಚಾರದಲ್ಲಿ ಅಸ್ಪಷ್ಟತೆ, ಅವರು ಡೀಲ್ ಮಾಡುವ ವಸ್ತುಗಳ ಬಗ್ಗೆ ಆಳವಾದ ಒಳನೋಟದ ಕೊರತೆ ಇದ್ದಾಗ್ಯೂ ಸಿನಿಮಾ ಮಾಡಲು ಆಯ್ದುಕೊಂಡ ವಸ್ತುಗಳ ಮಾತ್ರ ಪ್ರಶಂಸನೀಯ. ಇವರ ’ಮುಲ್ಕ್’, ’ಆರ್ಟಿಕಲ್ 15’ ಮತ್ತು ’ತಪ್ಪಡ್’ ವಿಶೇಷವಾದ ಸಿನಿಮಾಗಳು. ತಮ್ಮ ಸಿನಿಮಾದ ಕೊರತೆಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿ ಅದನ್ನು ಮುಂದಿನ ಸಿನಿಮಾಗಳಲ್ಲಿ ತಿದ್ದಿಕೊಳ್ಳುತ್ತೇನೆ ಎನ್ನುವ ವಿಶಾಲವಾದ ಮನಸ್ಸುಳ್ಳವರು ಅನುಭವ್.

ಕೊನೆಯದಾಗಿ: ಇತ್ತೀಚಿಗೆ ದಕ್ಷಿಣದ ಸೆಲೆಬ್ರಿಟಿ ನಟ ಸೂರ್ಯ ’ಜೈ ಭೀಮ್’ ಎಂಬ ಸಿನಿಮಾದಲ್ಲಿ ನಟಿಸುವುದು ಮಾತ್ರ ಅಲ್ಲ, ಅದನ್ನು ಅವರೇ ನಿರ್ಮಿಸುತ್ತಿದ್ದಾರೆ. ಒಬ್ಬ ಸ್ಟಾರ್ ನಟನಲ್ಲಿ ಈ ರೀತಿಯ ಸ್ಥಿತ್ಯಂತರ
ಬಹಳ ಖುಷಿಯ ಸಂಗತಿ. ಇದು, ಮುಂದಿನ ದಿನಗಳು ಹೆಚ್ಚು ಆಶಾದಾಯಕವಾಗಿರಲಿದೆ ಎಂಬ ನಂಬಿಕೆ ಹುಟ್ಟಿಸಿದೆ. ಈ ಬದಲಾವಣೆ ಅದಾಗಿ ಅದೇ ಆಗಿದ್ದಲ್ಲ. ಈ ಮೇಲೆ ಹೆಸರಿಸಿದ ನಿರ್ದೇಶಕರು ತಮ್ಮ ಸಿನಿಮಾಗಳ ಮುಖಾಂತರ ಅದಕ್ಕೆ ನಾಂದಿ ಹಾಡಿದ್ದು ಮುಖ್ಯ. ಈ ನಿರ್ದೇಶಕರು ಮತ್ತು ಅವರ ಸಿನಿಮಾಗಳು ಭವಿಷ್ಯದ ಸಿನಿಮಾ ನಿರ್ಮಾತೃಗಳಿಗೆ ದಾರಿದೀಪವಾಗುತ್ತವೆ ಎಂಬ ನಂಬಿಕೆ ಇದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

LEAVE A REPLY

Please enter your comment!
Please enter your name here