Homeಕರ್ನಾಟಕ"ಲೋಕ" ಸಮರಕ್ಕೆ ಸಿದ್ಧವಾಗುತ್ತಿದೆ ಉಡುಪಿ-ಚಿಕ್ಕಮಗಳೂರು ಅಖಾಡ! ಸಿ.ಟಿ.ರವಿಗೆ ಸಿಗಬಹುದೆ ಕೇಸರಿ ಟಿಕೆಟ್?

“ಲೋಕ” ಸಮರಕ್ಕೆ ಸಿದ್ಧವಾಗುತ್ತಿದೆ ಉಡುಪಿ-ಚಿಕ್ಕಮಗಳೂರು ಅಖಾಡ! ಸಿ.ಟಿ.ರವಿಗೆ ಸಿಗಬಹುದೆ ಕೇಸರಿ ಟಿಕೆಟ್?

- Advertisement -
- Advertisement -

ರುದ್ರ ರಮಣೀಯ ಅರಬ್ಬೀ ಸಮುದ್ರ ಮತ್ತು ನಯನ ಮನೋಹರ ಪಶ್ಚಿಮಘಟ್ಟದ ಗಿರಿ ಶ್ರೇಣಿಯ ಸಂಗಮ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ; ಇಲ್ಲಿ ಕಾಫಿ ಮತ್ತು ಹುರಿದ ಮೀನಿನ ಘಮಲು ಸಮನಾಗಿ ಹಬ್ಬಿದೆ. ಮಲೆನಾಡು ಮತ್ತು ಕರಾವಳಿಯ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ-ಆರ್ಥಿಕ ಸಮಸ್ಯೆ, ಸ್ಥಿತಿ-ಗತಿ ವಿಭಿನ್ನ; ರಾಜಕೀಯ ಸೂತ್ರ-ಸಮೀಕರಣದಲ್ಲೂ ವ್ಯತ್ಯಾಸವಿದೆ; ಸಾಮ್ಯತೆಯಿರುವುದು ಸಂಘ ಪರಿವಾರ ಪ್ರಣೀತ ಧರ್ಮಕಾರಣದಲ್ಲಿ ಮಾತ್ರ. ಅತ್ತ ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿಯ ಹಾವಳಿಯಾದರೆ ಇತ್ತ ಮಲೆನಾಡಿನಲ್ಲಿ ದತ್ತಪೀಠ-ಬಾಬಾ ಬುಡನ್‌ಗಿರಿ ನೆಪದ ಧರ್ಮೋನ್ಮಾದ. ಉಡುಪಿ ಮತ್ತು ಚಿಕ್ಕಮಗಳೂರು “ಲೋಕ” ಕದನದ ಇತಿಹಾಸದ ಮೇಲೆ ಹಾಗೇ ಸುಮ್ಮನೆ ಒಮ್ಮೆ ಕಣ್ಣು ಹಾಯಿಸಿದರೆ ಎರಡೂ ಪ್ರತಿಷ್ಠಿತರ ಆಡುಂಬೊಲ ಎಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರ ರಾಜಕಾರಣದ ಗಮನ ಸೆಳೆದ ಘಟಾನುಘಟಿಗಳು ಇಲ್ಲಿಂದ ಸಂಸದರಾಗಿದ್ದಾರೆ.

1952ರಿಂದ 2009ರ ತನಕ ಉಡುಪಿ ಮತ್ತು ಚಿಕ್ಕಮಗಳೂರು ಎರಡು ಪ್ರತ್ಯೇಕ ಪಾರ್ಲಿಮೆಂಟ್ ಕ್ಷೇತ್ರಗಳಾಗಿದ್ದವು. ಉಡುಪಿ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಎಂಟು ಅಸೆಂಬ್ಲಿ ಕಾನ್ಸ್ಟಿಟ್ಯೂಯೆನ್ಸಿಗಳಿದ್ದವು. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳೊಂದಿಗೆ ಅಂದಿನ ದಕ್ಷಿಣ ಕನ್ನಡದ ಕಾರ್ಕಳ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಚಿಕ್ಕಮಗಳೂರು ಲೋಕ ಅಖಾಡವನ್ನು ರಚಿಸಲಾಗಿತ್ತು. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ ದಿಗ್ಗಜರು ಎಂಪಿಗಳಾಗಿದ್ದಾರೆ. ಉಡುಪಿಯಿಂದ ಆಧುನಿಕ ದಕ್ಷಿಣ ಕನ್ನಡದ ನಿರ್ಮಾತೃಗಳೆನಿಸಿರುವ ಉಳ್ಳಾಲ ಶ್ರೀನಿವಾಸ್ ಮಲ್ಯ, ರಂಗನಾಥ ಶೆಣೈ, ಟಿ.ಎಂ.ಎ.ಪೈ ಮತ್ತು ಆಸ್ಕರ್ ಫರ್ನಾಂಡಿಸ್ ಸಂಸದರಾಗಿದ್ದರು; ಡಿ.ಬಿ.ಚಂದ್ರೇಗೌಡ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಡಿ.ಕೆ.ತಾರಾದೇವಿ, ಬಿ.ಎಲ್.ಶಂಕರ್‌ರಂಥ “ಹೆವಿವೈಟ್”ಗಳು ಲೋಕಸಭೆಯಲ್ಲಿ ಚಿಕ್ಕಮಗಳೂರನ್ನು ಪ್ರತಿನಿಧಿಸಿದ್ದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಇಲ್ಲಿಂದ ಸಂಸದ ಸಾಹೇಬರಾಗಲು ವಿಫಲ ಪ್ರಯತ್ನ ಮಾಡಿದ್ದೂ ಇದೆ.

ಇಂದಿರಾ ಗಾಂಧಿ

ತುರ್ತು ಪರಿಸ್ಥಿತಿಯ ಅತಿರೇಕದಿಂದ ಇಡೀ ಭಾರತದ ವಿರೋಧ ಕಟ್ಟಿಕೊಂಡಿದ್ದ ಇಂದಿರಾ ಗಾಂಧಿ 1977ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಷ್ಟೇ ಅಲ್ಲ, ಮಾಜಿ ಸಂಸದೆಯೂ ಆಗಿದ್ದರು. ಇಂದಿರಾರನ್ನು ಜನತಾ ಪಕ್ಷದ ಸರಕಾರ ಜೈಲಿಗೂ ಕಳುಹಿಸಿತ್ತು. ಇನ್ನೇನು ತನ್ನ ರಾಜಕೀಯ ಜೀವನದ ಅವಸಾನವಾಯಿತು ಎಂದು ಕಂಗಾಲಾಗಿ ಮನೆಯಲ್ಲಿ ಕುಳಿತಿದ್ದ ಇಂದಿರಾರಿಗೆ ಅಂದಿನ ಕರ್ನಾಟಕ ಮುಖ್ಯಮಂತ್ರಿ ದೇವರಾಜ ಅರಸು ಚಿಕ್ಕಮಗಳೂರಿಂದ ಸಂಸತ್ತಿಗೆ ಕಳಿಸುವ ಯೋಜನೆ ಹಾಕಿದ್ದರು. ಚಿಕ್ಕಮಗಳೂರಿನ ಎಂಪಿಯಾಗಿದ್ದ ಡಿ.ಬಿ.ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ ಕ್ಷೇತ್ರ ಖಾಲಿ ಮಾಡಿಸಿದರು. ಚಂದ್ರೇಗೌಡರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ನೀರಾವರಿ ಮಂತ್ರಿಗಿರಿ ಕೊಟ್ಟರು; ಚಿಕ್ಕಮಗಳೂರಿನ ಉಪಚುನಾವಣೆ ಅಖಾಡದಲ್ಲಿ ಅಂದಿನ ಸಂಯುಕ್ತ ಜನತಾ ಪಕ್ಷದ ದಿಗ್ಗಜ-ಮಾಜಿ ಸಿಎಂ ವೀರೇಂದ್ರ ಪಾಟೀಲ್ ಮತ್ತು ಇಂದಿರಾ ಗಾಂಧಿ (ದೇವರಾಜ್ ಅರಸು ಅವರೇ ಅಭ್ಯರ್ಥಿ ಎಂಬಂತಿತ್ತು) ನಡುವೆ ರಣರೋಚಕ ಹಣಾಹಣಿಯೇ ನಡೆದುಹೋಯಿತು. ಇಂದಿರಾ ಗೆದ್ದು ಸಂಸತ್ ಪ್ರವೇಶಿಸಿ ರಾಜಕೀಯ ಮರುಹುಟ್ಟು ಪಡೆದರು! ಚಿಕ್ಕಮಗಳೂರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು. ಆ “ಖ್ಯಾತಿ” ಇವತ್ತಿಗೂ ಚಿಕ್ಕಮಗಳೂರಿಗಿದೆ.

ಡಿಲಿಮಿಟೇಷನ್ ಆಫ್ ಇಂಡಿಯಾದ ಶಿಫಾರಸ್ಸಿನಂತೆ 2008ರಲ್ಲಾದ ಲೋಕಸಭಾ ಕ್ಷೇತ್ರಗಳ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಚಿಕ್ಕಮಗಳೂರು ಲೋಕ ಪೈಪೋಟಿಯ ಅಂಕಣದ ಚಹರೆಯಲ್ಲಿ ಮಹತ್ವದ ಬದಲಾವಣೆಯಾಯಿತು. 2009ರ ಚುನಾವಣೆಯ ಸಂದರ್ಭದಲ್ಲಿ ಮಲೆನಾಡಿನ ತಪ್ಪಲಿನ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ ಮತ್ತು ಮೂಡಿಗೆರೆ ಅಸೆಂಬ್ಲಿ ಸೆಗ್ಮೆಂಟ್‌ಗಳನ್ನು ಮತ್ತು ಕಡಲ ತಡಿಯ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಹಾಗು ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ “ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ” ಎಂಬ ಹೆಸರಿನ ಹೊಸ ಕ್ಷೇತ್ರವನ್ನು ರಚಿಸಲಾಯಿತು. ಅರ್ಧ ತಂಪು ಹವಾಮಾನ ಇನ್ನರ್ಧ ಶುಷ್ಕ ವಾತಾವರಣದ ಈ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ. ಎರಡು ಬಾರಿ ಮಂಗಳೂರು ಕ್ಷೇತ್ರದಿಂದ ಸಂಸದರಾಗಿದ್ದ ಸದಾನಂದ ಗೌಡರಿಗೆ ಅಲ್ಲಿ ಎಂಟಿಇನ್ಕಂಬೆನ್ಸ್ ಭಯ ಶುರುವಾಗಿತ್ತು; ಅಲ್ಲಿಯ ಆರೆಸ್ಸೆಸ್ ಅಧಿನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಜತೆಗೆ ವೈಮನಸ್ಯ ಬೆಳೆದಿತ್ತು. ಕಲ್ಲಡ್ಕ ಭಟ್ ತಮ್ಮ ಅಂದಿನ ಆಜ್ಞಾನುಧಾರಿ ಶಿಷ್ಯ (ಈಗ ಸಂಬಂಧ ಅಷ್ಟಕ್ಕಷ್ಟೇ) ನಳಿನ್ ಕುಮಾರ್ ಕಟೀಲ್‌ಗೆ ಅವಕಾಶ ಕೊಡುವ ಹಠಕ್ಕೆ ಬಿದ್ದಿದ್ದರು.

ಒಕ್ಕಲಿಗರ ಕುಲ ಕಂಠೀರವ ತಾನೆನ್ನುತ್ತ ವಲಸೆ ಬಂದಿದ್ದ ತುಳು ಗೌಡ (ಅರೆಭಾಷೆ ಗೌಡ) ಸದಾನಂದಗೌಡರನ್ನು ಘಟ್ಟದ ಪ್ರತ್ಯೇಕ ಸಂಸ್ಕೃತಿಯ ಒಕ್ಕಲಿಗರು ಅನುಮಾನದಿಂದಲೇ ನೋಡಿದರು. ಆದರೆ ಘಟ್ಟದ ಮೇಲೆ ಮತ್ತು ಕೆಳಗೆ ಸಂಘ ಪರಿವಾರ ಹುಟ್ಟುಹಾಕಿದ್ದ ಹಿಂದುತ್ವದ ವಿಭಜಕ ರಾಜಕಾರಣ ಪ್ರಬಲವಾಗಿದ್ದರಿಂದ ಸದಾನಂದ ಗೌಡರು ಗೆದ್ದು ದಿಲ್ಲಿ ವಿಮಾನ ಹತ್ತಲು ಅನುಕೂಲವಾಯಿತು. 2011ರಲ್ಲಿ ಗಣಿ ಧಣಿ ಜನಾದನ ರೆಡ್ಡಿ ತಂಡದ ವ್ಯಾವಹಾರಿಕ ರಾಜಕಾರಣದ ಕಿರುಕುಳ ಮತ್ತು ಇನ್ನೊಂದೆಡೆ ಭಿನ್ನಮತೀಯರ ಬಣದ ಪ್ರಚಂಡ ಬೊಬ್ಬೆಗೆ ಹೈರಾಣಾಗಿದ್ದ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ಸದಾನಂದ ಗೌಡರಿಗೆ ಮುಖ್ಯಮಂತ್ರಿ ಯೋಗ ಖುಲಾಯಿಸಿತ್ತು. ಸದಾನಂದ ಗೌಡ ಚಿಕ್ಕಮಗಳೂರು-ಉಡುಪಿ ಎಂಪಿ ಸ್ಥಾನ ತೆರವು ಮಾಡಬೇಕಾಯಿತು; ಉಪಚುನಾವಣೆ(2012)ಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿಜಯಿಯಾದರು; ಚಿಕ್ಕಮಗಳೂರಿನ ದತ್ತ ಪೀಠದ ವಿವಾದದ ಮೂಸೆಯಲ್ಲಿ ಹಿಂದುತ್ವ ನಾಯಕನಾಗಿ ಮೂಡಿ ಬಂದಿರುವ ಬಿಜೆಪಿಯ ಸುನಿಲ್‌ಕುಮಾರ್‌ಗೆ ಗೆಲ್ಲಲಾಗಲಿಲ್ಲ.

2009ರಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಎದುರು ಕೇವಲ 27,018 ಮತದಿಂದ ದಡ ತಲುಪಿದ್ದ ಸದಾನಂದ ಗೌಡರಿಗೆ 2014ರಲ್ಲಿ ಮತ್ತೆ ಚಿಕ್ಕಮಗಳೂರಿನಲ್ಲಿ ಚುನಾವಣೆ ಎದುರಿಸುವ ಧೈರ್ಯವಿರಲಿಲ್ಲ. ಸದಾನಂದ ಗೌಡರ ಮೇಲೆ ಸಿಟ್ಟಾಗಿದ್ದ ಯಡಿಯೂರಪ್ಪ ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರಲ್ಲಿ ನೆಲೆ ಕಲ್ಪಿಸುವ ಪ್ರಯತ್ನದಲ್ಲಿದ್ದರು. ಒಕ್ಕಲಿಗರ ಬಾಹುಳ್ಯದ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣುಹಾಕಿದ್ದ ಸದಾನಂದ ಗೌಡ ಆರೆಸ್ಸೆಸ್‌ನ ಆಶ್ರಯದಾತರನ್ನು ಹಿಡಿದುಕೊಂಡು ಟಿಕೆಟ್ ಪಡೆದುಕೊಂಡರು. ಸುಳ್ಯದ ಅರೆ ಭಾಷೆ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಲ್ಲಿ ಕೇಸರಿ ಕ್ಯಾಂಡಿಡೇಟಾದರು. ಸದಾನಂದಗೌಡರಂತೆಯೇ ಶೋಭಾ ಕರಂದ್ಲಾಜೆ ಜನಪರ ಕೆಲಸಗಾರ ಇಮೇಜಿನ ಜಯಪ್ರಕಾಶ್ ಹೆಗಡೆ ಎದುರು ತಿಣುಕಾಡಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ 2014 ಚುನಾವಣಾ ಅಖಾಡದಲ್ಲಿ ಸಂಘ ಪರಿವಾರ ಮತೀಯ ರಾಜಕಾರಣದ ಚಾಂಪಿಯನ್ ಮೋದಿ ಮುಖ ಮುಂದಿಟ್ಟು ಮಾಡಿದ ಧರ್ಮಕಾರಣದ ತಂತ್ರಗಾರಿಕೆಯ ಲಾಭ ಶೋಭಾ ಕರಂದ್ಲಾಜೆಗೆ ದಕ್ಕಿತು. ಮೊದಲೇ ಇಸ್ಲಾಮೋಫೋಭಿಯಾದಿಂದ ಹಿಂದುತ್ವದ ಹಾಟ್ ಸ್ಪಾಟ್‌ನಂತಾಗಿದ್ದ ಉಡುಪಿ-ಚಿಕ್ಕಮಗಳೂರಿನಲ್ಲಿ ಮೋದಿ ಫ್ಯಾಕ್ಟರ್ ಸೇರಿಕೊಂಡು ಖುದ್ದು ಶೋಭಾ ಕರಂದ್ಲಾಜೆಯವರೇ ಬೆಚ್ಚಿಬೀಳುವಷ್ಟು ದೊಡ್ಡ ಅಂತರದಲ್ಲಿ ಚುನಾಯಿತರಾದರು.

ಶೋಭಾ ಕರಂದ್ಲಾಜೆ

ಶೋಭಾ 2019ರ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರ ತಾತ್ಸಾರ-ತಿರಸ್ಕಾರಕ್ಕೆ ತುತ್ತಾಗಿದ್ದರು. ಕ್ಷೇತ್ರವನ್ನು ಕಡೆಗಣಿಸಿ ಸ್ವಹಿತದ ದಿಲ್ಲಿ, ಬೆಂಗಳೂರು ರಾಜಕಾರಣದಲ್ಲಿ ಮೈಮರೆತ, ಅಭಿವೃದ್ಧಿ ಯೋಜನೆಗಳ್ಯಾವುದನ್ನೂ ತರಲು ಪ್ರಯತ್ನಿಸದ ಮತ್ತು ನೊಂದವರ ಕೈಗೆಟುಕದ ಗಂಭೀರ ಆರೋಪ ಶೋಭಾ ಮೇಲೆ ಕೇಳಿಬಂದಿತ್ತು. ಆ ವೇಳೆಗೆ ಜಯಪ್ರಕಾಶ್ ಹೆಗ್ಡೆ ಕರಾವಳಿ ಕಾಂಗ್ರೆಸ್‌ನ ಪರವೋಚ್ಛ ನಾಯಕ ಆಸ್ಕರ್ ಫರ್ನಾಂಡಿಸ್ ಜತೆ ಜಗಳವಾಡಿ ಬಿಜೆಪಿ ಸೇರಿದ್ದರು. ಒಮ್ಮೆ ಕಾಂಗ್ರೆಸ್‌ನಿಂದ ಎಂಪಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ಸಂಸತ್ ಸದಸ್ಯತ್ವದ ಬದ್ಧತೆಯಿಂದ ಕ್ಷೇತ್ರದಲ್ಲಿ ಪರಿಚಿತರಾಗಿದ್ದರು; ಶೋಭಾ ಅವರಿಗಿಂತ ಹೆಚ್ಚು ಜನಾನುರಾಗಿ ಮತ್ತು ಪ್ರಭಾವಿ ಎನಿಸಿಕೊಂಡಿದ್ದರು. ಬಿಜೆಪಿಯಲ್ಲಿ ಶೋಭಾಗೆ ಟಿಕೆಟ್ ಕೊಡಕೂಡದೆಂಬ ಕೂಗೆದ್ದಿತ್ತು. ಜಯಪ್ರಕಾಶ್ ಹೆಗ್ಡೆಯನ್ನು ಬಿಜೆಪಿ ಅಭ್ಯರ್ಥಿ ಮಾಡಬೇಕೆಂಬ ಒತ್ತಾಯ ಜೋರಾಗಿತ್ತು. “ಗೋ ಬ್ಯಾಕ್ ಶೋಭಾ”ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಬಿರುಸು ಪಡೆದುಕೊಂಡಿತ್ತು. ಸಂಘ ಶ್ರೇಷ್ಠರ ಮತ್ತು ಯಡಿಯೂರಪ್ಪರ ಕೃಪಾಶೀರ್ವಾದದ ಶೋಭರನ್ನು ಮಣಿಸಿ ಕೇಸರಿ ಟಿಕೆಟ್ ಪಡೆಯಲು “ಹಿಂದುತ್ವದ ಪ್ರೊಬೇಷನರಿ ಪೀರಿಯಡ್”ನಲ್ಲಿದ್ದ ಹೆಗ್ಡೆಗೆ ಸಾಧ್ಯವಾಗಲಿಲ್ಲ ಎಂದು ಅಂದು ವ್ಯಾಖ್ಯಾನಿಸಲಾಗಿತ್ತು.

ಶೋಭಾಗೆ ಬಿಜೆಪಿ ಕ್ಯಾಂಡಿಡೇಟಾಗಲು ಆದಷ್ಟು ಕಷ್ಟ ಚುನಾವಣೆ ಸೆಣಸಾಟದಲ್ಲಿ ಆಗಲಿಲ್ಲ. ದೇಶದಾದ್ಯಂತ ಪುಲ್ವಾಮಾ ಘಟನೆಯನ್ನು ಚುನಾವಣೆಗೆ ಬಳಸಿಕೊಂಡಿದ್ದ ಬಿಜೆಪಿ ಉಡುಪಿ-ಚಿಕ್ಕಮಗಳೂರಿನಲ್ಲೂ ಮತೀಯ ಮತ ಧ್ರುವೀಕರಣವನ್ನು ಈ ಬಾರಿಯೂ ಸುಲಭವಾಗಿ ಸಾಧಿಸಿತ್ತು. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನೊಂದಿಗಿನ ಸೀಟು ಹೊಂದಾಣಿಕೆಯಲ್ಲಿ ಕ್ಷೇತ್ರದಲ್ಲಿ ನೆಲೆ-ಬೆಲೆಯೇ ಇಲ್ಲದ ಜೆಡಿಎಸ್ ಉಡುಪಿ-ಚಿಕ್ಕಮಗಳೂರನ್ನು ಹಠಹಿಡಿದು ಪಡೆದುಕೊಂಡಿತ್ತು. ತಮಾಷೆಯೆಂದರೆ, ಜೆಡಿಎಸ್‌ಗಿಲ್ಲಿ ಹುರಿಯಾಳೇ ಇರಲಿಲ್ಲ. ಮಲೆನಾಡಿನಲ್ಲಿ ಬಿಡಿ, ಕರಾವಳಿಯಲ್ಲೂ ಯಾವುದೇ ಚರಿಷ್ಮಾ ಇಲ್ಲದ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್‌ರನ್ನು ಕಾಂಗ್ರೆಸ್‌ನಿಂದ ಎರವಲು ಪಡೆದು ಜೆಡಿಎಸ್ ಕಣಕ್ಕಿಳಿಸಿತ್ತು! ಉಡುಪಿ-ಚಿಕ್ಕಮಗಳೂರಲ್ಲಿ ಸಂಸದನಾಗಿ ಕೇಂದ್ರ ರಕ್ಷಣಾ ಮಂತ್ರಿಯಾಗುತ್ತಾರೆಂಬ ಅದ್ಯಾವುದೋ ಜ್ಯೋತಿಷ್ಯ ಮಾರ್ತಾಂಡನ ಮೋಡಿಯ ಮಾತನ್ನು ನಂಬಿ ಚುನಾವಣೆಗೆ ಧುಮುಕಿದ್ದ ಪ್ರಮೋದ್ ಮಧ್ವರಾಜ್ 3,49,599 ಮತಗಳ ಆಗಾಧ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಕರಾವಳಿಯ ಸ್ವಜಾತಿ ಮೊಗವೀರರ ಮತಗಳನ್ನೂ ಪಡೆಯಲಾಗದ ತೀರಾ ದುರ್ಬಲ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ತಮ್ಮ ಸೋಲಿನ ಬೆನ್ನಿಗೇ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿಕೊಂಡಿದ್ದರು. ನಂತರ 2023ರ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿದರು!

ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹರಿಂದ ಪಾಸ್ ಪಡೆದಿದ್ದರೇ ಆಗಂತುಕರು?

ಈಗ ಪ್ರಮೋದ್ ಮಧ್ವರಾಜ್ ಬಿಜೆಪಿ ಅಭ್ಯರ್ಥಿಯಾಗಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕೇಸರಿ ಎಂಪಿಯಾಗುವ ಹಪಾಹಪಿಯಿಂದಲೇ ಅತ್ತೂಕರೆದು ಬಿಜೆಪಿ ಸೇರಿರುವ ಪ್ರಮೋದ್ ತಾನೇ ಬಿಜೆಪಿ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡು ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಘಟ್ಟದ ಮೇಲೆ ದೊಡ್ಡದೊಡ್ಡ ಬ್ಯಾನರ್ ಹಾಕಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗಲೂ ಪ್ರಮೋದರದು ಹಿಂದುತ್ವದ ಮನಃಸ್ಥಿತಿಯೇ ಆಗಿತ್ತು. ಸಂಘ ಸರದಾರರನ್ನು ಸಂಪ್ರೀತಗೊಳಿಸಲು ಟಿಪ್ಪು ವಿರುದ್ಧ ಭಾಷಣ ಬಿಗಿಯುವುದು, ಮೇಲು-ಕೀಳು, ಮಡಿ-ಮೈಲಿಗೆ ಪರಂಪರೆಯ ಉಡುಪಿಯ ಅಷ್ಠಮಠದ ಪರ ವಕಾಲತ್ತು ವಹಿಸುವುದನ್ನೇ ಮಾಡಿಕೊಂಡು ಬಂದಿದ್ದರು; ಒಂದೇ ಅವಧಿಯಲ್ಲಿ ಶಾಸಕ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ, ಸಹಾಯಕ ಮಂತ್ರಿ ಮತ್ತು ಕ್ಯಾಬಿನೆಟ್ ಮಂತ್ರಿಯಂಥ ಸತತ ನಾಲ್ಕು ಪದೋನ್ನತಿ ಹುದ್ದೆಗಳನ್ನು ಕೊಟ್ಟರೂ ಪ್ರಮೋದ್‌ಗೆ ಕೃತಜ್ಞತೆ ಎಂಬುದಿರಲಿಲ್ಲ ಎಂದು ನಿಷ್ಠಾವಂತ ಕಾಂಗ್ರೆಸಿಗರು ಆಕ್ರೋಶದಿಂದ ಹೇಳುತ್ತಾರೆ. ಗರ್ಭಗುಡಿ ಸಂಸ್ಕೃತಿಯ ಸಂಘ ಪರಿವಾರದಲ್ಲಿನ್ನೂ ಸರಿಯಾಗಿ ಎಂಟ್ರಿಯೇ ಸಿಗದ ಪ್ರಮೋದ್ ಬಿಜೆಪಿ ಹುರಿಯಾಳಾಗಲು ಹವಣಿಸುತ್ತಿರುವುದೇ ಹಾಸ್ಯಾಸ್ಪದ ಎಂದು ಕಟ್ಟರ್ ಕೇಸರಿ ಪಡೆಯವರು ಮಾಡಿಕೊಳ್ಳತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ನಲ್ಲೂ ಗಾಡ್ ಫಾದರ್ ಇಲ್ಲದ ಪ್ರಮೋದ್‌ಗೆ ಕೇಸರಿ ಹುರಿಯಾಳಾಗುವುದು ಸಾಧ್ಯವೇ ಇಲ್ಲ ಎಂಬ ಚರ್ಚೆ ಸ್ಥಳೀಯ ರಾಜಕೀಯ ಕಟ್ಟೆಯಲ್ಲಿ ನಡೆದಿದೆ.

ಹಾಲಿ ಸಂಸದೆ-ಕೇಂದ್ರದ ಮಂತ್ರಿ ಶೋಭಾ ಕರಂದ್ಲಾಜೆ ಬಗ್ಗೆ ಕ್ಷೇತ್ರದ ಉದ್ದಗಲಕ್ಕೆ ದೊಡ್ಡ ಪ್ರಮಾಣದಲ್ಲಿ ಅಸಮಾಧಾನವಿದೆ. ಎರಡೆರಡು ಬಾರಿ ಎಂಪಿಯಾಗಿಸಿದರೂ ಕೇಂದ್ರದಲ್ಲಿ ಸಚಿವೆಯಾಗಿದ್ದರೂ ಕ್ಷೇತ್ರಕ್ಕೆ ಶೋಭಾರಿಂದ ಪೈಸೆ ಪ್ರಯೋಜನವಾಗಿಲ್ಲ ಎಂಬ ಸಿಟ್ಟು ಉಡುಪಿ ಮತ್ತು ಚಿಕ್ಕಮಗಳೂರು ಎರಡೂ ಏರಿಯಾದಲ್ಲಿ ಸಮನಾಗಿ ಮಡುಗಟ್ಟಿದೆ. ಕೇಂದ್ರ ಸರಕಾರದ ಮಟ್ಟದಲ್ಲಿ ಕ್ಷೇತ್ರದ ಯಾವ ಸಮಸ್ಯೆಯ ಪರಿಹಾರಕ್ಕೂ ಶೋಭಾ ಪ್ರಯತ್ನಿಸಿಲ್ಲ; ವಿಶೇಷವಾಗಿ ಅಡಿಕೆ ಬೆಳೆಗಾರರ ಮತ್ತು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಯಾವುದೇ ಹೊಸ ಯೋಜನೆ ತರಲು ಶೋಭಾ ಯೋಚಿಸಿಲ್ಲ. ಕ್ಷೇತ್ರದ ಬೇಕು-ಬೇಡಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬರೀ ಲವ್ ಜಿಹಾದ್, ಹಲಾಲ್ ಕಟ್, ಆಝಾನ್, ದತ್ತ ಪೀಠ-ಬಾಬಾಬುಡನ್‌ಗಿರಿಯಂಥ ಕಪೋಲಕಲ್ಪಿತ ಸಂಗತಿಗಳನ್ನು ಮುಂದೆಮಾಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬೇಳೆಬೇಯಿಸಿಕೊಳ್ಳಲು ಶೋಭಾ ಹವಣಿಸಿದ್ದೇ ಹೆಚ್ಚೆಂದು ಬಿಜೆಪಿಗರೇ ಬೇಸರಿಸುತ್ತಾರೆ. ವಲಸೆಗಾರ್ತಿ ಶೋಭಾರನ್ನು ಓಡಿಸಲು ಲೋಕಲ್ ಲೀಡರ್ ಸಿ.ಟಿ ರವಿ ಬಳಗ ಪಣ ತೊಟ್ಟದೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲ ಕಾರಣಗಳಿಂದ ಶೋಭಾಗೆ ಮತ್ತೆ ಟಿಕೆಟ್ ಕೊಟ್ಟರೆ ಸೋಲು ಖಾತ್ರಿ ಎಂಬ ಆತಂಕ ಬಿಜೆಪಿಯ ಯಜಮಾನರ ತಲೆತುಂಬಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಕುರ್ಚಿಗೇರಿಸುವ ಆಸೆ ಹುಟ್ಟಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಗೊಳಿಸಲಾಗಿದ್ದ ಹಿಂದುತ್ವ ರಾಜಕಾರಣದ ಮುಂಚೂಣಿ ಮುಂದಾಳು ಸಿ.ಟಿ.ರವಿ, ತಮ್ಮ ವಿರೋಧಿ ಪಡೆಯ ವಿಜಯೇಂದ್ರರ ಪಟ್ಟಾಭಿಷೇಕದ ಬಳಿಕ ಮೈಕೊಡವಿಕೊಂಡು ನಿಂತಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರ್ಣಾಯಕರಾದ ಸ್ವಜಾತಿ ಲಿಂಗಾಯತರ ಮತ ತನಗೆ ಬರದಂತೆ ಯಡಿಯೂರಪ್ಪ ಕಾರಸ್ಥಾನಮಾಡಿ ಸೋಲಿಸಿದರೆಂಬ ಸಿಟ್ಟಿನ್ನೂ ಸಿಟಿಗೆ ಕಡಿಮೆಯಾಗಿಲ್ಲ. ರಾಜ್ಯಮಟ್ಟದಲ್ಲಿ ವಿಜಯೇಂದ್ರರಿಗೆ ತೊಡೆತಟ್ಟಿ ನಿಂತಿರುವ ಸಿಟಿ ಇತ್ತ ಚಿಕ್ಕಮಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಯಡಿಯೂರಪ್ಪ ಬಳಗದ ಶೋಭಾಗೆ ಕೊಕ್ ಕೊಟ್ಟು ಕೇಸರಿ ಕ್ಯಾಂಡಿಡೇಟಾಗುವ ಬಿರುಸಿನ ಪ್ರಯತ್ನ ಶುರುಹಚ್ಚಿಕೊಂಡಿದ್ದಾರೆ. ದಿಲ್ಲಿ ದೊರೆಗಳಿಂದಲೂ ಸಿಟಿಗೆ ಅಭಯ ದೊರೆತಿದೆಯಂತೆ. ಬಿಜೆಪಿ ಬಿಡಾರದಿಂದ ಹೊರಬರುತ್ತಿರುವ ಸುದ್ದಿಗಳು ಸಿಟಿಗೆ ಸೀಟು ಖಾತ್ರಿಯಾಗಿದೆ ಎಂಬ ಸಂದೇಶ ಬಿತ್ತರಿಸುತ್ತದೆ. ಸದಾನಂದ ಗೌಡರ ಹತಾಶೆಯ ನಿವೃತ್ತಿಯಿಂದ ಖಾಲಿಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾರನ್ನು ರವಾನೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅಭಿವೃದ್ಧಿ ಚಿಂತನೆಗಳಿಲ್ಲದೆ ಬರೀ ವಿಭಜಕ ಧರ್ಮಕಾರಣವನ್ನೂ ಮಾಡಿಕೊಂಡು ಬಂದಿರುವ ಸಿಟಿ ಬಗ್ಗೆಯೂ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಅಖಂಡ ಒಲವೇನಿಲ್ಲ. ಶಾಸಕ-ಮಂತ್ರಿಯಾಗಿದ್ದಾಗ ಸಿಟಿ ಬಂಧು-ಬಳಗ ಮಾಡಿದ ಅವ್ಯವಹಾರ-ಭ್ರಷ್ಟಾಚಾರದ ಭೂತವಿನ್ನೂ ಬೆನ್ನು ಬಿದ್ದುಕೊಂಡೇ ಇದೆ. ಈ “ಪಾಪ” ಸಿಟಿಗೆ ಸುಲಭವಾಗಿ ತಪ್ಪುವುದಿಲ್ಲ; ಏಕೆಂದರೆ ಹಿಂದುತ್ವವನ್ನು ಅನೂಚಾನಾಗಿ ಪಾಲಿಸುವ ಕೇಸರಿ ನೇತಾಗಳ ಅವ್ಯವಹಾರಕ್ಕೆ ಬಿಜೆಪಿಯಲ್ಲಿ ವಿನಾಯಿತಿಯಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಹೈಕಮಾಂಡ್‌ನಲ್ಲಿ ಬಿ.ಎಲ್.ಸಂತೋಷ್‌ರಂಥ ಶಕ್ತಿಶಾಲಿ ಆಶ್ರಯದಾತರನ್ನು ಕಂಡುಕೊಂಡಿರುವ ಸಿಟಿಗೆ ಕೇಸರಿ ಸೀಟು ದಕ್ಕುವ ಸಕಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಆದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೀರಾ ಸಣ್ಣ ಅಂತರದಲ್ಲಿ ಹಿಮ್ಮೆಟ್ಟಿದ ಶೃಂಗೇರಿಯ ಮಾಜಿ ಶಾಸಕ ಜೀವರಾಜ್, ಉಡುಪಿಯ ಹನುಮಾನ್ ಮೋಟರ್ಸ್‌ನ ವಿಲಾಸ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಉದಯ್‌ಕುಮಾರ್‌ಶೆಟ್ಟಿ ಮತ್ತು ಎಮ್ಮಲ್ಸಿಗಿರಿಯೂ ಕೈಗೂಡದೆ ಕಂಗೆಟ್ಟಿರುವ ಉಡುಪಿಯ ಮಾಜಿ ಎಮ್ಮೆಲ್ಲೆ ರಘುಪತಿ ಭಟ್ ಸರತಿಸಾಲಲ್ಲಿ ನಿಂತು ಆಸೆಯಿಂದ ಕಾಯುತ್ತಿದ್ದಾರೆ.

ಜಯಪ್ರಕಾಶ್ ಹೆಗ್ಡೆ

ಕಾಂಗ್ರೆಸ್ ಪರಿಸ್ಥಿತಿ ಕಳೆದ ಅಸೆಂಬ್ಲಿ ಚುನಾವಣೆಯ ನಂತರ ಸುಧಾರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದೆ; ಕಾರ್ಕಳದಲ್ಲಿ ಬಿಜೆಪಿಗೆ ಬೆವರಿಳಿಸುವಷ್ಟು ಪ್ರಬಲವಾಗಿದ್ದರೆ, ಕಾಪು, ಕುಂದಾಪುರ ಮತ್ತು ಉಡುಪಿಯಲ್ಲಿ ತೀರಾ ದುರ್ಬಲವಾಗೇನೂ ಇಲ್ಲ. ಹೀಗಾಗಿ ಕಾಂಗ್ರೆಸ್ ಎಂಪಿ ಟಿಕೆಟ್‌ಗೂ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಚರ್ಚೆಯಲ್ಲಿರುವ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳಲ್ಲಿ ಮಾಜಿ ಸಂಸದ, ಹಾಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೆಸರು ಕೂಡ ಹೆಚ್ಚು ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಹಾಲಿ ಬಿಜೆಪಿಯಲ್ಲಿರುವ ಹೆಗ್ಡೆ ಆ ಪಕ್ಷದ ಮತೀಯ ಸಿದ್ಧಾಂತಕ್ಕೆ ಒಗ್ಗಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ; ಕಟ್ಟರ್ ಸಂಘಿಗಳು ಹೆಗ್ಡೆಯನ್ನು ಹತ್ತಿರ ಸೇರಿಸಿಕೊಳ್ಳುತ್ತಿಲ್ಲ. ಶೋಭಾ, ಸಿಟಿಯಂಥವರೂ ಹೆಗ್ಡೆಯನ್ನು ಲೆಕ್ಕಕ್ಕೇ ಇಟ್ಟಿಲ್ಲ. ಬಿಜೆಪಿಯಲ್ಲಿದ್ದೂ ಇಲ್ಲದಂತಿರುವ ಹೆಗ್ಡೆ ಜನತಾ ಪರಿವಾರದ ಹಳೆಯ ನಂಟನ್ನು ಸಿಎಂ ಸಿದ್ದರಾಮಯ್ಯನವರ ಜತೆ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಜೀವನದಲ್ಲಿ ಮತ್ತೊಮ್ಮೆ ಎಂಪಿಯಾಗಿ ರಾಜಕೀಯದಿಂದ ದೂರಾಗುವ ಯೋಚನೆಯಲ್ಲಿರುವ ಹೆಗ್ಡೆ ಕಾಂಗ್ರೆಸ್ ಟಿಕೆಟ್ ಕನಸು ಕಾಣುತ್ತಿದ್ದಾರೆಂಬ ಸಂದೇಶವನ್ನು, ಆ ಪಕ್ಷದ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಹಾಗೆ ನೋಡಿದರೆ ಕಾಂಗ್ರೆಸಿನಲ್ಲಿ ಹೆಗ್ಡೆಯಷ್ಟು ವರ್ಚಸ್ಸಿರುವ ಕ್ಯಾಂಡಿಡೇಟ್ ಬೇರೆ ಯಾರೂ ಇಲ್ಲ. ಒಂದೂವರೆ ವರ್ಷ ಈ ಕ್ಷೇತ್ರದ ಜನಪ್ರಿಯ ಸಂಸದರಾಗಿದ್ದ ಹೆಗ್ಗಳಿಕೆ ಹೆಗ್ಡೆಗಿದೆ. ಚಿಕ್ಕಮಗಳೂರು ಭಾಗದಲ್ಲಿ ಇವತ್ತಿಗೂ ಸಂಸದೆ ಶೋಭಾಗಿಂತ ಹೆಚ್ಚು ಜನ ಸಂಪರ್ಕ ಹೊಂದಿರುವ ಹೆಗ್ಡೆ ಕರಾವಳಿಯಲ್ಲಿ ಸ್ವಜಾತಿ ಬಂಟ್ಸ್ ಕಾರ್ಡ್ ಬಳಸಿ ಹಿಂದುತ್ವದ ತಂತ್ರಗಾರಿಕೆಗೆ ಕಡಿವಾಣ ಹಾಕಬಲ್ಲವರಾಗಿದ್ದಾರೆ. ಕಾರ್ಕಳ, ಕುಂದಾಪುರ, ಕಾಪು ಮತ್ತು ಬ್ರಹ್ಮಾವರ ಬೆಲ್ಟ್‌ನಲ್ಲಿ ಬಿಜೆಪಿಗೆ ಟಕ್ಕರ್ ಕೊಡುವ ಸಾಮರ್ಥ್ಯವಿದೆ. ಜಾತಿಗಣತಿ ವರದಿಗಾಗಿ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಅವಧಿಯನ್ನು ಈಚೆಗೆ ಸಿಎಂ ಸಿದ್ದು ವಿಸ್ತರಿಸಿದ್ದಾರೆ. ಸಿದ್ದು ನಂಬಿಕಸ್ಥರಾದ ಹೆಗ್ಡೆಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂಬ ಮಾತು ಕೇಳಿಬರಲಾರಂಭಿಸಿದೆ. ಆದರೆ ಹಗ್ಡೆಗಿರುವ ಏಕೈಕ ಅಡೆತಡೆಯೆಂದರೆ ವಿಧಾನಪರಿಷತ್ ಮಾಜಿ ಸಭಾಪತಿ-ದಿವಂಗತ ಆಸ್ಕರ್ ಫರ್ನಾಂಡಿಸ್ ಶಿಷ್ಯ ಕುಂದಾಪುರದ ಪ್ರತಾಪ್ ಚಂದ್ರ ಶೆಟ್ಟಿ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಥವಾ ಸಿಎಂ ಸಿದ್ದು ಈ ಇಬ್ಬರ ಮಧ್ಯೆ ರಾಜಿಮಾಡಿಸಿದರೆ, ಉಡುಪಿ-ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಂದು ಕಾಂಗ್ರೆಸ್-ಬಿಜೆಪಿಗರಷ್ಟೇ ಅಲ್ಲ, ಕ್ಷೇತ್ರದ ಧರ್ಮ-ಜಾತಿ ರಾಜಕಾರಣದ ರಾಸಾಯನಿಕ ಕ್ರಿಯೆ ಬಲ್ಲವರೂ ಹೇಳುತ್ತಾರೆ.

ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ, ಮಂತ್ರಿ ಸ್ಥಾನ-ಮಾನದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ (ಮಾಜಿ ಮಂತ್ರಿ ಬೇಗಾನೆ ರಾಮಯ್ಯ ಮಗಳು), ಉಡುಪಿಯ ಮಾಜಿ ಸಂಸದ ವಿನಯಕುಮಾರ್ ಸೊರಕೆಗಳಿದ್ದಾರೆ. ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಕೊಪ್ಪದ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಸಂಘ ಪರಿವಾರದ ಹಿಡನ್ ಹುನ್ನಾರಗಳನ್ನು ಬಹಿರಂಗಗೊಳಿಸಿ ಹೋರಾಟ ಕಟ್ಟುವ ಛಲಗಾರ. ಕ್ಷೇತ್ರದಾದ್ಯಂತ ಕೋಮು ಸಾಮರಸ್ಯ ಹದಗೆಟ್ಟಿರುವ ಈ ಕಾಲಘಟ್ಟದಲ್ಲಿ ಸುಧೀರ್‌ಕುಮಾರ್ ಮುರೊಳ್ಳಿಯಂಥ ಕಾನೂನು ಜ್ಞಾನ, ಕ್ಷೇತ್ರದ ಸಾಮಾಜಿಕ ಪರಿಸ್ಥಿತಿ, ಹಿಂದುತ್ವದ ಹಿಕಮತ್ತುಗಳ ಅರಿವಿರುವ ಹೋರಾಟಗಾರ ಎಂಪಿಯಾಗುವ ಅವಶ್ಯಕತೆಯಿದೆ ಎಂದು ಕಾಂಗ್ರೆಸ್‌ನ ಒಂದು ವರ್ಗ ವಾದಿಸುತ್ತಿದೆ. ಆದರೆ ಕರಾವಳಿಯಲ್ಲಿ ಸುಧೀರ್‌ಗೆ ಮತ ಗಳಿಕೆ ಕಷ್ಟವಾಗುತ್ತದೆ ಎಂಬ ಅನಿಸಿಕೆ ಕಾಂಗ್ರೆಸ್ ಪಡಸಾಲೆಯಲ್ಲಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಸೋತಿರುವ ಸೊರಕೆಗೆ ಸ್ವಜಾತಿ ಬಿಲ್ಲವರದ್ದೇ ಓಟು ಪಡೆಯಲು ಆಗುತ್ತಿಲ್ಲ; ಮತ್ತೊಂದೆಡೆ ಸೊರಕೆ ಸ್ವಜಾತಿಗಷ್ಟೇ ಸೀಮಿತವಾಗಿದ್ದಾರೆಂಬ ಆಕ್ಷೇಪವಿದೆ.

ಎಂಪಿಗಿರಿ ಆಕಾಂಕ್ಷಿಗಳ ಕಸರತ್ತಿನ ನಡುವೆಯೇ ಮಲೆನಾಡಿನ ಕಡೆಯವರಿಗೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಕಣಕ್ಕಿಳಿಸಬೇಕೆಂಬ ಆಗ್ರಹ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಬಿಜೆಪಿಯಲ್ಲೇ ಈ ಕೂಗು ಜೋರಾಗಿದೆ. ಶೋಭಾ ಕರಂದ್ಲಾಜೆಗೆ ಬಿಜೆಪಿ ದೊಡ್ಡವರು ಮತ್ತೆ ಅವಕಾಶ ಕೊಡದಂತೆ ಮಾಡಲು ಸಿಟಿ ರವಿ ಈ ಒಳಪ್ರಾದೇಶಿಕತೆಯ ಟ್ರಿಕ್ ಪ್ರಯೋಗಿಸುತ್ತಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಅದೇನೇ ಇರಲಿ, ಕಾಂಗ್ರೆಸ್-ಬಿಜೆಪಿ ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಚಿಕ್ಕಮಗಳೂರು ಸೀಮೆಯಲ್ಲಿರುವುದೇನೋ ನಿಜ. 2009ರಲ್ಲಿ ಕ್ಷೇತ್ರ ಪುನರ್ ರಚನೆಯಾದ ನಂತರ ಕಾಂಗ್ರೆಸ್ ಹಾಗು ಬಿಜೆಪಿ ಕರಾವಳಿ ಭಾಗದವರಿಗೇ ಅವಕಾಶ ಕೊಟ್ಟಿದೆ. ಬಿಜೆಪಿಯಂತೂ ಕ್ಷೇತ್ರ ವ್ಯಾಪ್ತಿಯನ್ನು ಹೊರಗಿನವರಿಗೆ ರಫ್ತು ಮಾಡಿದೆ. ಕಳೆದ ಮೂರು ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಗೆಲುವು ಪಡೆದ ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. 1991ರಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ತಾರಾದೇವಿ ಮತ್ತು 2004ರಲ್ಲಿ ಬಿಜೆಪಿಯಿಂದ ಡಿ.ಸಿ.ಶ್ರೀಕಂಠಪ್ಪ ಎಂಪಿಯಾಗಿದ್ದೇ ಕೊನೆ; ಆ ನಂತರ ಚಿಕ್ಕಮಗಳೂರಿನವರಿಗೆ ಸಂಸದರಾಗುವ ಭಾಗ್ಯ ಬಂದಿಲ್ಲ.

ಭೌಗೋಳಿಕವಾಗಿ ಉಡುಪಿಗಿಂತ ಚಿಕ್ಕಮಗಳೂರಿನಲ್ಲಿಯೇ ಸಮಸ್ಯೆಗಳು ಹೆಚ್ಚು; “ಧರ್ಮಸಂಕಟ” ಚಿಕ್ಕಮಗಳೂರಿಗಿಂತ ಉಡುಪಿ ಆಸುಪಾಸು ಹೆಚ್ಚು. ತೀರಾ ಸಣ್ಣ ಅವಧಿಗೆ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ಕ್ಷೇತ್ರದ ಬೇಕುಬೇಡಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದರು. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಕ್ಷೇತ್ರದ ನಾಡಿಮಿಡಿತ ಅರಿಯುವ ಗೋಜಿಗೆ ಹೋಗಲಿಲ್ಲ. ಅಭ್ಯರ್ಥಿಯ ಬದ್ಧತೆ, ಕ್ಷೇತ್ರದ ಸಮಸ್ಯೆ ಮತ್ತು ಧರ್ಮ ಸೂಕ್ಷ್ಮದ ಆಧಾರದ ಮೇಲೆ ಈ ಬಾರಿ ಅಖಾಡ ರಂಗೇರುವ ಸಾಧ್ಯತೆಯಿದೆ. ಸಿಎಂ ಸಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ, ಕಾಂಗ್ರೆಸ್ ಗೆಲ್ಲಬಲ್ಲ ಕ್ಷೇತ್ರಗಳ ಪಟ್ಟಿಯಲ್ಲಿ ಉಡುಪಿ-ಚಿಕ್ಕಮಗಳೂರು ಕೂಡ ಸೇರಿದೆ. ಸದ್ಯದ ಟಿಕೆಟ್ ಟ್ರೆಂಡ್‌ಅನ್ನು ಅವಲೋಕಿಸಿದರೆ ಬಿಜೆಪಿಯ ಸಿ.ಟಿ.ರವಿ ಮತ್ತು ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ಮುಖಾಮುಖಿಯಾಗುವ ಸಾಧ್ಯತೆ ಕಾಣಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...