Homeಕರ್ನಾಟಕಕೇಸರಿ ಟಿಕೆಟ್ ಕೈತಪ್ಪುವ ಆತಂಕದಲ್ಲಿ ವಿಕ್ಷಿಪ್ತನಾಗಿರುವ ಅನಂತ್‌ಕುಮಾರ್ ಹೆಗಡೆ!! ಬಿಜೆಪಿ ಬ್ರಾಹ್ಮಣ ಹೈಕಮಾಂಡ್ ಮಣೆ ಕಾಗೇರಿಗೋ?...

ಕೇಸರಿ ಟಿಕೆಟ್ ಕೈತಪ್ಪುವ ಆತಂಕದಲ್ಲಿ ವಿಕ್ಷಿಪ್ತನಾಗಿರುವ ಅನಂತ್‌ಕುಮಾರ್ ಹೆಗಡೆ!! ಬಿಜೆಪಿ ಬ್ರಾಹ್ಮಣ ಹೈಕಮಾಂಡ್ ಮಣೆ ಕಾಗೇರಿಗೋ? ಕೋಣೆಮನೆಗೋ?

- Advertisement -
- Advertisement -

ಚುನಾವಣಾ “ರಣಭೈರವ” ಎಂದೇ ಗುರುತಿಸಲ್ಪಡುವ ಉತ್ತರ ಕನ್ನಡದ ನಿದ್ದಂಡಿ ಸಂಸದ ಅನಂತ್‌ಕುಮಾರ್ ಹೆಗಡೆ ಯಾನೆ ಅನಂತ್ ಹೆಗಡೆ ಇದ್ದಕ್ಕಿದ್ದಂತೆ ತಾರಕ ಸ್ವರದಲ್ಲಿ ಮತೀಯ ಮಸಲತ್ತಿನ ಅಪಲಾಪ ಶುರುಹಚ್ಚಿಕೊಂಡಿದ್ದಾರೆ; ಕಳೆದ ನಾಲ್ಕೂಮುಕ್ಕಾಲು ವರ್ಷದಿಂದ ನಾಪತ್ತೆಯಾಗಿದ್ದ ಅನಂತ್ ಹೆಗಡೆ ತಾನಿನ್ನೂ ಭೂಮಂಡಲದ ಮೇಲಿದ್ದೇನೆಂದು ತೋರಿಸುವ ವರಸೆಗಿಳಿದಿದ್ದಾರೆ. ಕ್ಷೇತ್ರದ ಪಾಲಿಗೆ ಇದ್ದೂಇಲ್ಲದಂತಾಗಿರುವ ಈ ಸಂಸದನ ಹೊಡಿ-ಬಡಿ-ಕಡಿ ಶೈಲಿಯ ಹಿಂದುತ್ವ ಪರಿಭಾಷೆಯ “ಟ್ಯೂನ್ ಈ ಬಾರಿ ಬದಲಾದಂತಿದೆ. ಒಂಥರಾ ಹತಾಶೆ ಧ್ವನಿಯನ್ನು ಅನಂತ್ ಹೆಗಡೆ ಮಾತಲ್ಲಿ ರಾಜಕೀಯ ವಿಶ್ಲೇಷಕರು ಕಾಣುತ್ತಿದ್ದಾರೆ. ಆರು ಬಾರಿ ಚುನಾಯಿತರಾಗಿರುವ ಅನಂತ್ ಹೆಗಡೆ ಚುನಾವಣೆ ಸಂದರ್ಭದಲ್ಲಿ ಧುತ್ತನೆ ಪ್ರತ್ಯಕ್ಷರಾಗಿ ಜಿಲ್ಲೆಯಲ್ಲಿ ಶೇಕಡಾ 68ರಷ್ಟಿರುವ ಶೂದ್ರಾದಿ ಸಮೂಹದ ತಲೆಯಲ್ಲಿ ಹಿಂದುತ್ವದ ಹುಳುಬಿಟ್ಟು ಗೆಲ್ಲುತ್ತ ಬಂದಿದ್ದಾರೆ. ಆದರೆ ಈ ಬಾರಿ ಅನಂತ್ ಹೆಗಡೆ ಅದೆಂಥ ಸಂದಿಗ್ಧಕ್ಕೆ ಸಿಲುಕಿದ್ದಾರೆಂದರೆ, ಸಂಘೀ-ಬಿಜೆಪಿ ಹೈಕಮಾಂಡ್ ಒಲಿಸಿ ಕೇಸರಿ ಟಿಕೆಟ್ ಗಿಟ್ಟಿಸಲು ತನ್ನ “ಅಸಲಿ ಅಸ್ತ್ರ” ಝಳಪಿಸಬೇಕಾಗಿ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರತಿಸಲ ಗೆಲ್ಲುತ್ತಿದ್ದಂತೆಯೇ ಜನರ ಕೈಗೆ ಸಿಗದೆ ಖಾಸಗಿ “ಸಂಭ್ರಮ”ದಲ್ಲಿ ಮೈಮರೆಯುತ್ತಿದ್ದ ಅನಂತ್ ಹೆಗಡೆಯ ಎಂಪಿ ರಿಪೋರ್ಟ್ ಕಾರ್ಡ್ ತುಂಬ ಕಪ್ಪು-ಕೆಂಪು ಕಲೆಗಳೆ. ಅಯೋಧ್ಯೋತ್ತರ ಹಿಂದುತ್ವ ರಾಜಕಾರಣದಲ್ಲಿ ತಾನು ಮೋದಿಗಿಂತಲೂ ಸೀನಿಯರ್ ಎಂಬ ಈಗೋದಿಂದ ದಿಲ್ಲಿ-ಬೆಂಗಳೂರು ಮಟ್ಟದ ಕೇಸರಿ ಪಾಳೆಯದಲ್ಲಿ ಮೂಲೆಗುಂಪಾಗಿರುವ ಅನಂತ್ ಹೆಗಡೆಗೆ ಮತ್ತೊಂದೆಡೆ ಅನಾರೋಗ್ಯ ಬಿಟ್ಟೂಬಿಡದೆ ಬಾಧಿಸತೊಡಗಿತ್ತು. ಹೀಗಾಗಿ ರಾಜಕೀಯ-ಸಾಮಾಜಿಕವಾಗಿ ಅನಂತ್ ಹೆಗಡೆ ಅನಾಸಕ್ತಿ-ಉದಾಸೀನತೆಯಿಂದ ನೇಪಥ್ಯಕ್ಕೆ ಸರಿದಿದ್ದರು. ಈ ಕೆಲಸಕ್ಕೆ ಬಾರದ ವ್ಯಕ್ತಿ ಸಂಸದನಾಗಿ ಇದ್ದರೆಷ್ಟು, ಬಿಟ್ಟರೆಷ್ಟು ಎಂಬಂತಿದ್ದ ಜಿಲ್ಲೆಯ ಜನರು ಮತ್ತು ಬಿಜೆಪಿ ಕಾರ್ಯಕರ್ತರು ಅನಂತ್‌ನ “ಅಘೋಷಿತ” ನಿವೃತ್ತಿಯಿಂದ ಒಂಥರಾ ಖುಷಿಯಾಗಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಅನಂತ್ ಹೆಗಡೆ ಪುಕ್ಕಟೆ ಭೋಗ-ಭಾಗ್ಯದ ಸಂಸದನಾಗುವ ಲಾಲಸೆಗೆ ಯಾವ್ಯಾವುದೋ ಮಸೀದಿ ಒಡೆಯುವ ಧರ್ಮೋನ್ಮಾದದ ಮಾತುಗಳ ಮುಖವಾಡ ತೊಟ್ಟುಕೊಂಡು ಬೀದಿಗೆ ಬಂದಿದ್ದಾರೆ. ಆದರೆ “ಹುಸಿ ಫಯರ್ ಬ್ರ್ಯಾಂಡ್”ಗೆ ಈ ಬಾರಿ ಕೇಸರಿ ಟಿಕೆಟ್ ಇಲ್ಲ; ಗೇಟ್ ಪಾಸ್ ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಆಚಾರ-ವಿಚಾರವಿಲ್ಲದೆ ಹಿಂದುತ್ವದ ಹೆಸರಲ್ಲಿ ನಾಲಿಗೆ ಹೊರಳಾಡಿಸುವುದಕ್ಕೆ “ಪ್ರಸಿದ್ಧ”ರಾಗಿರುವ ಅನಂತ್ ಹೆಗಡೆ ರಾಜಕೀಯ ಬದುಕು ಸಂದಿಗ್ಧಕ್ಕೆ ಸಿಲುಕಿ ಚಡಪಡಿಸುತ್ತಿದ್ದಾರೆ.

ಅನಂತ್ ಹೆಗಡೆ ಆರು ಬಾರಿ ಎಂಪಿಯಾಗಿದ್ದು ಆಯಾ ಚುನಾವಣಾ ಸಂದರ್ಭದಲ್ಲಿ ಉದ್ಭವಿಸಿದ ಆರು ನಮೂನೆಯ ಹಿಂದುತ್ವದ ಹಿಕಮತ್ತು ಅಥವಾ ಎದುರಾಳಿ ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವ ಮತ್ತು ದೇಶಪಾಂಡೆ ಬಣದ ಮನೆಮುರುಕು ಕಸರತ್ತಿನಿಂದ. ಒಂದೇ ಒಂದು ಚುನಾವಣೆಯಲ್ಲೂ ಅನಂತ್ ಹೆಗಡೆ ಜಿಲ್ಲೆಯ ಅಭಿವೃದ್ಧಿಯ ನೀಲನಕ್ಷೆ ಮುಂದಿಟ್ಟಿದ್ದಾಗಲಿ, ಜನರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವೆನೆಂದಾಗಲಿ ಹೇಳಿದ್ದೇ ಇಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸುವ ಹೊಡಿ-ಬಡಿ-ಕಡಿ ಧೋರಣೆಯ ಪಂಚರಂಗಿ ಭಾಷಣಗಳನ್ನು ಚುನಾವಣಾ ಬಂಡವಾಳ ಮಾಡಿಕೊಂಡೇ ಗೆಲುವು ಕಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಕೊಂಡಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಅನಂತ್ ಹೆಗಡೆ ಬಗ್ಗೆ ಅಸಮಾಧಾನ ಮಡುಗಟ್ಟಿದೆ; ಕೆಲಸಕ್ಕೆ ಬಾರದ ಸಂಸದನ ಸೋಗಲಾಡಿ ಮಾತುಗಾರಿಕೆ ಅಸಹ್ಯ ಮೂಡಿಸಿದೆ.

ಕೇಂದ್ರದ ಮಂತ್ರಿಯಾಗಿದ್ದಾಗಲೇ ದೇಶದ ಜೀವ-ಜೀವಾಳವಾಗಿರುವ ಸಂವಿಧಾನವನ್ನೇ ಬದಲಿಸುವುದಾಗಿ ವಿಪ್ರ ಸಮ್ಮೇಳನದಲ್ಲಿ ಬಡಬಡಿಸಿ ಪ್ರಧಾನಿ ಮೋದಿಯವರನ್ನು ಮುಜುಗರಕ್ಕೀಡುಮಾಡಿದ್ದ ಅನಂತ್ ಹೆಗಡೆ ಮತ್ತೊಂದೆಡೆ ಸಂಸತ್ತಿನಲ್ಲಿ ತನ್ನ ಲಂಗುಲಗಾಮಿಲ್ಲದ ನಾಲಿಗೆಯ ಹೊರಳಾಟದ ಪ್ರಮಾದಕ್ಕೆ ಕ್ಷಮೆ ಯಾಚಿಸಿ ತನ್ನನ್ನು ಮತ್ತೆಮತ್ತೆ ಗೆಲ್ಲಿಸಿದ ಉತ್ತರ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದ್ದರು. ಬ್ರಿಟಿಷರ ಸಹಕಾರದಿಂದಲೇ ಗಾಂಧೀಜಿ ಸ್ವಾತಂತ್ರ್ಯ ಚಳವಳಿಯ ನಾಟಕವಾಡುತ್ತಿದ್ದರೆಂದು ಮೂದಲಿಸಿದ್ದ ಅನಂತ್ ಜಾತ್ಯತೀತರೆಂದರೆ ತಂದೆ ಯಾರೆಂದು ಗೊತ್ತಿಲ್ಲದವರು ಎಂಬ ಆವಿಷ್ಕಾರ ನಡೆಸಿದ್ದರು; “ಜಾತ್ಯತೀತ” ಪದ ಸಂವಿಧಾನದಿಂದ ತೆಗೆಯುತ್ತೇವೆ ಎಂದು ಹಲುಬಿದ್ದರು. ತನ್ನ ಅಸಂಬದ್ಧ ಮಾತುಗಾರಿಕೆಯ ವಿರುದ್ಧ ಪ್ರತಿಭಟಿಸಿದ ದಲಿತರಿಗೆ ನಾಯಿಗಳೆಂದು ಕೇಂದ್ರ ಸಚಿವನಾಗಿದ್ದುಕೊಂಡೇ ಬೈದು ಸುದ್ದಿಯಾಗಿದ್ದರು.

ಡಾ.ಚಿತ್ತರಂಜನ್‌

ಶಿರಸಿಯ ಸಂಘ ಶಾಖೆಗೆ ಹೋಗುತ್ತ ಹಿಂದುತ್ವದ “ಕವಾಯತು” ಕರಗತಮಾಡಿಕೊಂಡಿದ್ದ ಬಡ ಬ್ರಾಹ್ಮಣರ ಮನೆಯ ಉಂಡಾಡಿ ಹುಡುಗ, ಪ್ರತಿಷ್ಠಿತ ಪಾರ್ಲಿಮೆಂಟ್ ಸದಸ್ಯನಾಗಿದ್ದು, ಬಾಬರಿ ಪತನಾನಂತರದ ಧರ್ಮಕಾರಣದ ದುರಂತದ ಮೈಲಿಗಲ್ಲಿನಲ್ಲಿ ಒಂದೆಂಬಂತಿದೆ! ಶಿರಸಿಯಲ್ಲಿ ಕರಾಟೆ ಕ್ಲಾಸು ನಡೆಸುತ್ತಿದ್ದ ಈ ಬ್ಲಾಕ್‌ಬೆಲ್ಟ್ ಸ್ಫುರದ್ರೂಪಿ ತರುಣನ ಮನಸ್ಸು-ಮೆದುಳಲ್ಲಿ ಅಷ್ಟೇ ವಿಕಾರವಾದ ಮನುಷ್ಯ ವಿರೋಧಿ ಮತೀಯವಾದ ತುಂಬಿಕೊಂಡಿತ್ತು. 1990ರ ದಶಕದಲ್ಲಿ ಒಂದಿಡೀ ವರ್ಷ ಕೋಮು ಕಿಚ್ಚಲ್ಲಿ ಹೊತ್ತಿ ಉರಿದಿದ್ದ ಭಟ್ಕಳವನ್ನು “ಕರ್ಮ”ಭೂಮಿ ಮಾಡಿಕೊಂಡಿದ್ದ ಅನಂತ್ ಹೆಗಡೆ ರಾತ್ರಿ ಬೆಳಗಾಗುವುದರಲ್ಲಿ ಮತೀಯ ಅಗ್ನಿ ಕುಂಡದಲ್ಲಿ ಅನಾಹುತಕಾರಿ ಮುಂದಾಳಾಗಿ ಮೂಡಿದ್ದು ದಶಕಗಳಿಂದ ಜಿಲ್ಲೆಯಲ್ಲಿ ಜನಸಂಘ-ಬಿಜೆಪಿ ಕಟ್ಟಲು ಹೋರಾಡಿದ ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿಯೇ ಮುಂತಾದ ಹಿರೀಕರನ್ನು ಬೆಚ್ಚಿಬೀಳಿಸಿತ್ತು.

ಅಂದು ಪೊಲೀಸ್ ಪಹರೆಯ ಕಣ್ಣುತಪ್ಪಿಸಿ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ನುಸುಳಿ ಧ್ವಜ ಹಾರಿಸಿದನೆಂಬ ಪ್ರಖರ ಹಿಂದುತ್ವದ ಇಮೇಜ್ ಅನಂತ್ ಹೆಗಡೆಗಿತ್ತು; ಉತ್ತರ ಕನ್ನಡ ಸಂಘ ಪರಿವಾರದ ಪ್ರಶ್ನಾತೀತ ನಾಯಕಾಗ್ರೇಸನಾಗಿದ್ದ ಡಾ.ಚಿತ್ತರಂಜನ್‌ರ ಪಟ್ಟದ ಶಿಷ್ಯತ್ವವಿತ್ತು. ಚಿತ್ತರಂಜನ್ ಅನಿರೀಕ್ಷಿತವಾಗಿ ಶಾಸಕನಾಗಿ ಆಯ್ಕೆಯಾಗಿದ್ದೇ ಅನಂತ್ ಹೆಗಡೆ ಭೂಗತನಾಗಿ ಭಟ್ಕಳದಾದ್ಯಂತ ಹಿಂಸೋನ್ಮಾದದ ಹಿಂದುತ್ವ ಹರಡಿದ್ದರಿಂದೆಂಬ ತರ್ಕವೂ ಧರ್ಮಕಾರಣದ ಪಡಸಾಲೆಯಲ್ಲಿದೆ. ಈದ್ಗಾದಲ್ಲಿ ದ್ವಜ ಹಾರಿಸಿದ್ದು ಬಿಲ್ಲವ(ಈಡಿಗ)ರ ಸತ್ಯಜಿತ್ ಸುರತ್ಕಲ್ ಎಂದು ಸಂಘ ಪರಿವಾರದ ಶೂದ್ರರು ಹೇಳುತ್ತಾರೆ. ಅದೇನೇ ಇದ್ದರೂ, ಕೇಸರಿ ಎಂಪಿ ಟಿಕೆಟ್ 1996ರಲ್ಲಿ ಪಡೆಯುವಷ್ಟರಮಟ್ಟಿನ ಕಡು ಕೇಸರಿ ಕ್ರೆಡಿಟ್ ಅಂತೂ ಅನಂತ್ ಹೆಗಡೆಗೆ ದಕ್ಕಿತ್ತು. ಚಿತ್ತರಂಜನ್ ಪೋಷಣೆಯಲ್ಲಿ ಅಂಥದೊಂದು ಪ್ರಭಾವಳಿ ಅನಂತ್ ಹೆಗಡೆಗೆ ಸೃಷ್ಟಿಯಾಗಿತ್ತು. ದಿನಕಳೆದಂತೆ ಜಿಲ್ಲೆಯಾದ್ಯಂತ ಹತ್ತಾರು ಕೊಲೆ, ಕೋಮುದಂಗೆ, ಹಲ್ಲೆಯೇ ಮುಂತಾದ ಕ್ರಿಮಿನಲ್ ಕೇಸ್‌ಗಳು ಅನಂತ್ ಹೆಗಡೆ ಮೇಲಾದವು. ಬೆಂಕಿ ಚೆಂಡು ಎಂಬ ಅಭಿದಾನವೂ ಅಂಟಿಕೊಂಡಿತು. ಭಟ್ಕಳದ ಕೋಮು ದಂಗೆಯ ದಿನಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅನಂತ್ ಹೆಗಡೆ, ಚಿತ್ತರಂಜನ್ ಮನೆಯಲ್ಲಿ ಹಾಗು ಬೆಂಗಳೂರಿನ ಶಾಸಕರ ಭವನದ ಅವರ ಕೊಠಡಿಯಲ್ಲಿ ತಲೆ ಮರೆಸಿಕೊಂಡಿರುತ್ತಿದ್ದನೆಂಬ ಸುದ್ದಿಗಳೂ ಇದೆ. ಎಂಪಿಯಾಗುತ್ತಲೇ ಅಧಿಕಾರ ಬಲದಲ್ಲಿ ಕೇಸುಗಳೆಲ್ಲ ಕರಗಿಹೋಗಿದ್ದು ಬೇರೆಯೇ ಕತೆ.

ಜನಸಂಘೀ ಪರಿವಾರದ ಚಿತ್ತರಂಜನ್ ತನ್ನ ಧಿರ್ಘಕಾಲದ ಗೆಣೆಕಾರ ಡಾ.ಕರ್ಕಿಯನ್ನು ಬದಿಗೆ ಸರಿಸಿ ಅನಂತ್ ಹೆಗಡೆಗೆ 1996ರ ಲೋಕಸಭೆ ಚುನಾವಣೆಯ ಕೇಸರಿ ಟಿಕೆಟ್ ಕೊಡಿಸಿದ್ದರು. ಅನನುಭವಿ ಎಳಸು ಮಾಣಿಗೆ ಗುರುತರ ಹೊಣೆಗಾರಿಕೆಯ ಸಂಸತ್ ಅಭ್ಯರ್ಥಿ ಮಾಡುವುದಕ್ಕೆ ಸ್ಥಳೀಯ ಬಿಜೆಪಿಯಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಆದರೆ ಹಠಕ್ಕೆಬಿದ್ದು ಚಿತ್ತರಂಜನ್ ಸದಾ ತನ್ನ ಹಿಂದೆ-ಮುಂದೆ ಸುತ್ತುತ್ತಿದ್ದ ಹುಡುಗ ಅನಂತ್ ಹೆಗಡೆಯನ್ನು ಬಿಜೆಪಿ ಕ್ಯಾಂಡಿಡೇಟಾಗಿಸುವುದರಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಗೆ ಕೆಲವೇ ದಿನಗಳಿರುವಾಗ ಮನೆಯ ಪಡಸಾಲೆಯಲ್ಲಿ ಟಿವಿ ನೋಡುತ್ತಿದ್ದಾಗ ಕಿಟಕಿಯಿಂದ ತೋರಿಬಂದ ಗುಂಡೇಟಿಗೆ ಚಿತ್ತರಂಜನ್ ಹತರಾಗಿದ್ದರು; ಇದು ಮುಸಲ್ಮಾನರೇ ನಡೆಸಿದ ಕಗ್ಗೊಲೆಯೆಂದು ವ್ಯವಸ್ಥಿತವಾಗಿ ಹುಯಿಲೆಬ್ಬಿಸಲಾಯಿತು. ಇದಕ್ಕೆ ಸಮಾನಾಂತರವಾಗಿ ಚಿತ್ತರಂಜನ್‌ರ ಚಲನ-ವಲನ ಹತ್ತಿರದಿಂದ ಬಲ್ಲ ಹಿಂದುವೇ ಕೊಲೆಗಡುಕನೆಂಬ ಅನುಮಾನದ ಚರ್ಚೆಗಳು ಇವತ್ತಿಗೂ ನಿಂತಿಲ್ಲ. ಚಿತ್ತರಂಜನ್ ’ಬಲಿದಾನ’ದಿಂದ ಕೇವಲ 27ರ “ಬಾಲಕ” ಅನಂತ್ ಹೆಗಡೆ ಜನತಾ ದಳದ ಪ್ರಮೋದ್ ಹೆಗಡೆಯನ್ನು ಮಣಿಸಿ ಮೊದಲಬಾರಿ ಸಂಸತ್ ಪ್ರವೇಶಿಸಿದ್ದರು.

ಸೋತ ಪ್ರಮೋದ್ ಹೆಗಡೆಯನ್ನು ಗೆದ್ದ ಅನಂತ್ ನಡುರಸ್ತೆಯಲ್ಲೇ ಬೈದು ಬೆದರಿಸಿದ್ದರೆಂದು ಸುದ್ದಿಯಾಗಿತ್ತು. ಅಂದು ಮಾಜಿ ಸಿಎಂ ರಾಮಕೃಷ್ಣ ಹೆಗಡೆಯ ಮಾನಸ ಪುತ್ರನೆಂದು ಬಿಂಬಿತವಾಗಿದ್ದ ಮೊದಲ ಜಿಲ್ಲಾ ಪರಿಷತ್‌ನ ಮಾಜಿ ಉಪಾಧ್ಯಕ್ಷರೂ ಆಗಿದ್ದ ಪ್ರಮೋದ್‌ಗೆ ಜಿಲ್ಲೆಯಲ್ಲಿ ಪ್ರಭಾವವಿತ್ತು. ಆನಂತರ ಪ್ರಮೋದ್ ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ನವ ನಿರ್ಮಾಣ ವೇದಿಕೆ, ಲೋಕ ಶಕ್ತಿ, ಕಾಂಗ್ರೆಸ್ ಎಂದೆಲ್ಲ ಅಂಡಲೆದು ಸಂಸದ ಅನಂತ ಹೆಗಡೆಗೆ ಶರಣಾಗಿ ಬಿಜೆಪಿ ಸೇರಿಕೊಂಡು ಗ್ರಾಮೀಣಾಭಿವೃದ್ಧಿ ಇಲಾಖೆಯ ಗೂಟದ ಕಾರು ಪಡೆದುಕೊಂಡರು. ಇದಕ್ಕೂ ಮೊದಲು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಮಾಜಿ ಮಂತ್ರಿ-ಈಗ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟು ಪಕ್ಷ್ಷಾಂತರಕ್ಕೆ ಸಮಯ ಕಾಯುತ್ತಿರುವ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ಗೆ ಅಕ್ಷರಶಃ ಕಪಾಳಮೋಕ್ಷ ಮಾಡಿದ್ದರು ಎಂಬ ಸುದ್ದಿಯೂ ಇದೆ. ಇದೆಲ್ಲ ಜಿಲ್ಲೆಯ ಮೇಲೆ ಅನಂತ್ ಹೆಗಡೆ ಸಾಧಿಸಿದ ಭಯೋತ್ಪಾದಕ ಹಿಡಿತಕ್ಕೆ ಸಾಕ್ಷಿಯಂತಿದೆ ಎಂದು ಹಿರಿಯ ಬಿಜೆಪಿಗರೇ ಹೇಳುತ್ತಾರೆ.

1998ರಲ್ಲಿ ನಡುಗಾಲ ಚುನಾವಣೆ ಎದುರಾದಾಗ ಚಿತ್ತರಂಜನ್ ಹತ್ಯೆಯ ಸೂತಕವಿನ್ನೂ ಹಿಂದೂ ವಲಯದಲ್ಲಿತ್ತು. ಇದು ಅನಂತ್ ಹೆಗಡೆಯನ್ನು ನಿರಾಯಾಸವಾಗಿ ಎರಡನೇ ಬಾರಿ ಪಾರ್ಲಿಮೆಂಟ್‌ಗೆ ತೇಲಿಸಿತು. ಮೂರನೇ ಇಲೆಕ್ಷನ್ ವೇಳೆಗೆ ಅನಂತ್ ಹೆಗಡೆಯ ಬಣ್ಣ ಬಯಲಾಗಿತ್ತು. ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವ 1999ರಲ್ಲಿ ಅನಂತ್ ಹೆಗಡೆಯನ್ನು ಹಿಮ್ಮೆಟ್ಟಿದರು. ಆದರೆ ಆ ನಂತರ ಮಾರ್ಗರೆಟ್-ದೇಶಪಾಂಡೆ ನಡುವೆ ನಡೆದ ಮೇಲಾಟದ ಪರಿಣಾಮವಾಗಿ 2004ರಲ್ಲಿ ಅನಂತ್ ಹೆಗಡೆಗೆ ಗೆಲುವಾಯಿತು. ಇದು ದೇಶಪಾಂಡೆ ಸಹಕಾರದಿಂದಾದ ದಿಗ್ವಿಜಯವಾಗಿತ್ತು ಎಂಬ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯ ರಂಗದಲ್ಲಿದೆ. 2009ರ ಚುನಾವಣೆ ಹೊತ್ತಿಗೆ ದೇಶಪಾಂಡೆ ಮತ್ತು ಮಾರ್ಗರೆಟ್ ಮಧ್ಯ ಸಣ್ಣದೊಂದು ತೇಪೆಹಾಕಲಾಗಿತ್ತು. ಆದರೆ ಮಾರ್ಗರೆಟ್ ಆಳ್ವ ಮೀನುಗಾರ ಸಮುದಾಯದ “ಮೊಗೇರ”ರಿಗೆ ಪರಿಶಿಷ್ಟ ಮೀಸಲಾತಿಯನ್ನು ಅಡ್ಡದಾರಿಯಲ್ಲಿ ಕೊಡಿಸಲು ಹವಣಿಸಿ ದಲಿತ ಸಮುದಾಯವನ್ನು ಎದುರುಹಾಕಿಕೊಂಡಿದ್ದರು. ಹೀಗಾಗಿ ಕೇವಲ 22,769 ಮತದಂತರದಿಂದ ಅನಂತ್ ಹೆಗಡೆ ಅದೃಷ್ಟ ಖುಲಾಯಿಸಿತ್ತು. 2014 ಮತ್ತು 2019ರಲ್ಲಿ ಅನಂತ್ ಹೆಗಡೆ ಪ್ರಚಾರವನ್ನೂ ಸರಿಯಾಗಿ ಮಾಡದಿದ್ದರೂ ಮೋದಿ ಮಂಕುಬೂದಿ ಪ್ರಭಾವದಿಂದ ನಿರಾಯಾಸವಾಗಿ ಸಂಸದನಾದರು. 2014-2019ರ ಲೋಕಸಭೆ ಅವಧಿಯ ಕೊನೆಯ ಕೆಲವು ತಿಂಗಳು ಕೇಂದ್ರದ ಮಂತ್ರಿಯಾಗಿದ್ದ ಅನಂತ್ ಹೆಗಡೆಯಿಂದ ಜಿಲ್ಲೆಗೇನೂ ಪ್ರಯೋಜನವಾಗಲಿಲ್ಲ. ಬರೀ ವಿಧ್ವಂಸಕ ಮಾತುಗಾರಿಕೆಯಲ್ಲೇ ಸಚಿವಗಿರಿ ಕಳೆದರೆಂಬ ಆರೋಪ ಅವರ ಮೇಲಿದೆ.

2004ರಿಂದ ಸತತ ಸಂಸದನಾಗಿರುವ ಅನಂತ್ ಹೆಗಡೆ ರೈತರು, ಮೀನುಗಾರರು ಮತ್ತು ಅಡಿಕೆ ತೋಟಿಗರ ಹಿತ ಕಾಯುವ ಒಂದೇ ಒಂದು ಕೆಲಸ-ಕಾಮಗಾರಿ ಮಾಡಿದ್ದು ಕಾಣಿಸದು. ಆರು ಬಾರಿಯ ಸಂಸದ ನಿಧಿ ಎಲ್ಲಿ ಹೇಗೆ ಬಳಕೆಯಾಗಿದೆ ಎಂಬುದನ್ನು ಹೇಳದೆ ಮೊಗಮ್ ಆಗಿದ್ದಾರೆ. ಇಪ್ಪತ್ತು ವರ್ಷದಿಂದ ಎಂಪಿಯಾಗಿರುವ ಅನಂತ್ ಹೆಗಡೆಗೆ ಕೆನರಾ ಕ್ಷೇತ್ರದ ಭೌಗೋಳಿಕ ಉದ್ದಗಲ, ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತಿ-ಗತಿಯ ನಾಡಿಮಿಡಿತವೇ ದಕ್ಕಿಲ್ಲ; ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿಲ್ಲ! ರಾಜ್ಯ ಸರಕಾರದ ವ್ಯಾಪ್ತಿಯ ಸಮಸ್ಯೆ-ಸಂಕಟ ಹೇಳಿದರೆ, ಇದು ಎಮ್ಮೆಲ್ಲೆ ಕೆಲ್ಸ; ನಿಮ್ಮ ಎಮ್ಮೆಲ್ಲೆ ಸತ್ತಿದ್ದಾನಾ? ಎಂದು ಬೈದು ಅಟ್ಟುವ ಸಂಸದ ಸಾಹೇಬರು ಕೇಂದ್ರ ಸರಕಾರದ ಮಟ್ಟದಲ್ಲಿ ಪರಿಹಾರವಾಗಬೇಕಾಗಿರುವ ಸಮಸ್ಯೆಗಳತ್ತಲೂ ಕಣ್ಣುಹಾಯಿಸಿದ ಕುರುಹುಗಳ್ಯಾವುದೂ ಕಾಣಿಸದು!! ಸುಸಜ್ಜಿತ ಆಸ್ಪತ್ರೆಯಿಲ್ಲದೆ ಜಿಲ್ಲೆಯ ಜನರು ಆತಂಕಿತರಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಆಂದೋಲನ ನಡೆಸಿದಾಗ ಈ ನಿಷ್ಪ್ರಯೋಜಕ ಸಂಸದ ಹೇಳಿದ್ದೇನು ಗೊತ್ತೆ? ಆಸ್ಪತ್ರೆ ಕಟ್ಟಿಸುವುದು ಎಂಪಿ ಕೆಲ್ಸ ಅಲ್ಲ; ನಮ್ದೇನಿದ್ದರೋ ಸಂಸತ್‌ನಲ್ಲಿ ಕುಳಿತು ಶಾಸನ ರಚಿಸೋ ದೊಡ್ಡ ಕೆಲ್ಸ ಎಂದು ಬಡಿವಾರ ತೋರಿದ್ದರು!

ಸೀ ಬರ್ಡ್ ನೌಕಾನೆಲೆ ಮತ್ತಿತರ ಸರಕಾರಿ ಯೋಜನಾ ನಿರಾಶ್ರಿತರ, ಅರಣ್ಯ ಸಾಗುವಳಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಸಣ್ಣ ಸಮುದಾಯಗಳ ರೋದನ ಸಂಸದರಿಗೆ ಕೇಳಿಸಿಲ್ಲ; ಅಂಕೋಲಾ-ಹುಬ್ಬಳ್ಳಿ ರೈಲುಮಾರ್ಗದ ಬಗ್ಗೆ ಹೇಳಿಕೆ ಕೊಟ್ಟಿದ್ದು ಬಿಟ್ಟರೆ ಸಾಧಿಸದ್ದು ಶೂನ್ಯ! ಕೊಂಕಣ ರೈಲು ಮಾರ್ಗದ ತೊಂದರೆ-ತೊಡಕು ಪರಿಹಾರಕ್ಕೆ ಸಂಸದ ಪ್ರಯತ್ನಿಸಿದ್ದು ಅಷ್ಟಕ್ಕಷ್ಟೇ. ಅಗರ್‌ವುಡ್, ವೆನಿಲಾದಿಂದ ತೋಟಿಗರ ಅಭಿವೃದ್ಧಿ ಮಾಡುತ್ತೇನೆಂದರು; ಎಲ್ಲವೂ ಬೊಗಳೆ! ಕರಾವಳಿಯಲ್ಲಿ ಬೃಹತ್ ವಾಣಿಜ್ಯ ಬಂದರುಗಳ ನಿರ್ಮಾಣದ ಪ್ರಸ್ತಾಪ ಬಂದಾಗ ಸಂತ್ರಸ್ತರಾಗುವ ಭೀತಿಯಿಂದ ಬೀದಿಗಿಳಿದಿದ್ದ ಬೆಸ್ತರ ವಿರುದ್ಧವೇ ಅನಂತ್ ಹೆಗಡೆ ಮುರಕೊಂಡುಬಿದ್ದಿದ್ದರು. ಒಟ್ಟಿನಲ್ಲಿ ಸಂಸದಗಿರಿ ನಿಭಾಯಿಸಲು ಅನಂತ್ ಹೆಗಡೆ ಅಲ್ಲಿಂದಿಲ್ಲಿಗೂ ವಿಫಲರಾಗಿದ್ದಾರೆಂಬ ಮಾತು ಸಾಮಾನ್ಯವಾಗಿದೆ.

ಚುನಾವಣಾ ಸಂದರ್ಭದಲ್ಲಾಗುವ ಆಕಸ್ಮಿಕ-ಸಹಜ ಸಾವುಗಳಿಗೆಲ್ಲ ಮತೀಯ ರಂಗೇರಿಸಿ ಧರ್ಮಕಾರಣದ ಲಾಭ ಪಡೆಯುವ ಜಾಯಮಾನದ ಅನಂತ್ ಹೆಗಡೆ “ಗುರು” ಚಿತ್ತರಂಜನ್ ಮತ್ತು ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತ್ ಸಾವಾದಾಗ ಚೆಲ್ಲಿದ ಹನಿಹನಿ ಹಿಂದೂ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದು ಆವೇಶದಿಂದ ಹಾರಾಡಿ ಬಹುಸಂಖ್ಯಾತ ಹಿಂದುಗಳ ಮತ ಧ್ರುವೀಕರಣಕ್ಕೆ ಹವಣಿಸಿದ್ದರು. ಆದರೆ ಬಿಜೆಪಿಯ ವಾಜಪೇಯಿ ಸರಕಾರವಿರುವಾಗ ಚಿತ್ತರಂಜನ್ ಕೊಲೆ ಕೇಸಿಗೆ ಸಿ-ರಿಪೋರ್ಟ್ (ಪತ್ತೆಯಾಗದ ಪ್ರಕರಣ) ಮತ್ತು “ಮೋಶಾ” ಆಡಳಿತದಲ್ಲಿ ಪರೇಶ್ ಪ್ರಕರಣಕ್ಕೆ ಬಿ-ರಿಪೋರ್ಟ್ ಅನ್ನು ಕೇಂದ್ರ ಸರಕಾರದ ಅಧೀನದ ಸಿಬಿಐ ಜಡಿದರೂ ಅನಂತ್ ಹೆಗಡೆಯಿಂದ ಏನೂ ಮಾಡಲಿಲ್ಲ. ಹಲವು ವರ್ಷ ಚಿತ್ತರಂಜನ್ ತಿಥಿ ದಿನದಂದೇ ರಾತ್ರಿ ಬೆಳಗಾಗುವುದರಲ್ಲಿ “ಚಿತ್ತರಂಜನ್ ಕೊಲೆಗಡುಕ ಅನಂತ್‌ಕುಮಾರ್ ಹೆಗಡೆ”ಎಂಬ ಭಿತ್ತಿಪತ್ರಗಳು ಭಟ್ಕಳದಾದ್ಯಂತ ಕಾಣಿಸಿಕೊಳ್ಳುತ್ತಿದ್ದವು. ಇದರ ಹಿನ್ನೆಲೆ ಇನ್ನೂ ನಿಗೂಢವಾಗೇ ಇದೆ. ಉತ್ತರ ಕನ್ನಡದ ಹಿಂದುಳಿದಿರುವಿಕೆ, ಸಮಸ್ಯೆ-ಸಂಕಟಕ್ಕೆ ಉತ್ತರವಿಲ್ಲದ ಅನಂತ್ ಹೆಗಡೆ ಈಗ ಜಿಲ್ಲೆಯ ಜನರ ಕಣ್ಣಲ್ಲಿ ಬಡಾಯಿ ಭೂಪನಾಗಿದ್ದಾನೆಂದು ಕಟ್ಟರ್ ಹಿಂದುಗಳೇ ಹೇಳುತ್ತಾರೆ.

ಹಲವು ತಲೆಮಾರುಗಳಿಂದ ಜತನದಿಂದ ಕಟ್ಟಿರುವ ಬಹುತ್ವವನ್ನು ಕೆಡಹುವ ಮತ್ತು ತನ್ನ ಅಸಹಿಷ್ಣು ಹಿಂದುತ್ವಕ್ಕೆ ಸರಿಕಾಣದ್ದೆಲ್ಲವನ್ನೂ “ದೇಶದ್ರೋಹ”ವೆಂದು ಪರಿಗಣಿಸುವ ಅನಂತ್ ಶಿರಸಿಯ ಮತ್ತಿಘಟ್ಟದ ಬಳಿ ದೇಶದ ಸಂಪತ್ತಾದ ಅರಣ್ಯವನ್ನು ಕಬಳಿಸಿ ಎಕರೆಗಟ್ಟಲೆ ಅಡಿಕೆ ತೋಟ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ; ಇದು ದೇಶಪ್ರೇಮವಾ? ದೇವರು-ಧರ್ಮ-ದೇಶದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡುವ ಅನಂತ್ ಹೆಗಡೆ ಎರಡೂವರೆ ದಶಕದಿಂದ ಎಂಪಿ ಕರ್ತವ್ಯ ನಿಭಾಯಿಸದೆ ಸಾರ್ವಜನಿಕ ಬೊಕ್ಕಸದ ಹಣದಲ್ಲಿ ಬಿಟ್ಟಿಯಾಗಿ ಸಂಬಳ-ಸೌಲತ್ತು ಪಡೆಯುತ್ತಿರುವುದು ಯಾವ ಸೀಮೆಯ ದೇಶಭಕ್ತಿ? ಎಂಬ ಜಿಜ್ಞಾಸೆ ಜಿಲ್ಲೆಯಲ್ಲಿದೆ.

ಬಿಜೆಪಿಯಲ್ಲಿನ ಬ್ರಾಹ್ಮಣ ಬಣ ಬಡಿದಾಟವೂ ಅನಂತ್ ಹೆಗಡೆ ಸಚಿವ ಸ್ಥಾನಕ್ಕೆ ಸಂಚಕಾರ ತಂದಿತ್ತು. ಕರ್ನಾಟಕದ ಯೋಗಿ; ಕೇಸರಿ ಪಕ್ಷದ ಭವಿಷ್ಯದ ಮುಖ್ಯಮಂತ್ರಿ ಎಂದೆಲ್ಲಾ ಒಂದು ಬಣದಿಂದ ತಾರೀಫು ಮಾಡಿಸಿಕೊಳ್ಳುತ್ತಿದ್ದ ಅನಂತ್‌ಗೆ ಬಿಜೆಯಲ್ಲಿನ ಬ್ರಾಹ್ಮಣ ಲಾಬಿ ವಿರುದ್ಧವಾಗಿತ್ತು. ರಾಜ್ಯ ಬಿಜೆಪಿ ಸಂಪೂರ್ಣವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪಾರುಪತ್ಯಕ್ಕೆ ಒಳಪಟ್ಟಾಗ ಆತನ ಸ್ವಜಾತಿ ಮಿತ್ರ ಪ್ರಹ್ಲಾದ್ ಜೋಶಿ ಪ್ರಭಾವ ಹೆಚ್ಚಾಯಿತು. ಅನಂತ್ ಬಿಜೆಪಿಯಲ್ಲಿ ಪ್ರಹ್ಲಾದ್ ಜೋಶಿ-ಸಂತೋಷ್‌ಗಿಂತ ಸೀನಿಯರ್ ಎಂಬುದೇನೋ ನಿಜ. ಒಣಪ್ರತಿಷ್ಠೆಯ ಸಂಘರ್ಷ ಶುರುವಾಯಿತು.

ಸಂತೋಷ್-ಪ್ರಹ್ಲಾದ್ ಜೋಶಿ ಬಿಡಿ, ಮೋದಿಗೂ ತನ್ನಷ್ಟು ಛಲ-ಹಠದ ಹಿಂದುತ್ವದ ಬದ್ಧತೆಯಿಲ್ಲವೆಂಬ ಹಮ್ಮು ಅನಂತ್‌ಗಿದೆ ಎಂಬ ಮಾತು ಸ್ಥಳೀಯ ಬಿಜೆಪಿ ವಲಯದಲ್ಲಿದೆ. ಈ ಸ್ವಭಾವದಿಂದಾಗಿಯೇ ಅನಂತ್‌ಗೆ ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದ ಕೇಶವ ಸನ್ನಿಧಿಯ ಕೃಪಾಶೀರ್ವಾದವಿದ್ದರೂ ದಿಲ್ಲಿಯ ಅಧಿಕಾರ ಪಾಳೆಯದ ದೊರೆಗಳು ಪ್ರವೇಶ ಕೊಡಲಿಲ್ಲ. ಆದರೆ ದಿವಂಗತ ಅನಂತ್‌ಕುಮಾರ್ ಜುಬ್ಬಾ ಹಿಡಿದುಕೊಂಡು ದಿಲ್ಲಿಯ ಕೇಸರಿ ಕೋಟೆಯ ಅಧಿಕಾರ ಅಂತಃಪುರ ಪ್ರವೇಶಿಸಿದ್ದ ಪ್ರಲ್ಲಾದ್ ಜೋಶಿ “ನಾಜೂಕಯ್ಯ ನಡೆ-ನುಡಿಯಿಂದ ದೊಡ್ಡವರ ಗಾಢ ಸ್ನೇಹ-ಸಂಪರ್ಕ ಬೆಳೆಸಿಕೊಂಡರು; ಅನಂತ್‌ಕುಮಾರ್ ನಿಧನದ ನಂತರ ಕರ್ನಾಟಕದ ಬ್ರಾಹ್ಮಣ ಕೋಟಾದಲ್ಲಿ ಏಕಮೇವಾದ್ವಿತೀಯರಾದರು! ಬಿ.ಎಲ್.ಸಂತೋಷ್ ಯುಗದಲ್ಲಂತೂ ಜೋಶಿ ವ್ಯವಸ್ಥಿತವಾಗಿ ಅನಂತ್ ಹೆಗಡೆಯನ್ನು ಮೂಲೆಗುಂಪು ಮಾಡಿದರೆಂಬ ಮಾತು ಕೇಳಿಬರುತ್ತಿದೆ. ಜೋಶಿ ಕೇಂದ್ರದ ಸಂಸದೀಯ ವ್ಯವಹಾರದಂಥ ಆಯಕಟ್ಟಿನ ಸಚಿವನಾಗಿ ಪ್ರಧಾನಿ ಮೋದಿಯ ಎಡ-ಬಲದಲ್ಲಿ ಠಳಾಯಿಸಲಾರಂಭಿಸಿದ ಮೇಲಂತೂ ದಿಲ್ಲಿ ಮತ್ತು ಬೆಂಗಳೂರಿನ ಬಿಜೆಪಿ ಬಿಡಾರದಲ್ಲಿ ಅನಂತ್ ಹೆಗಡೆ ಮಂಕಾದರೆಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ.

ಅನಂತ್ ಹೆಗಡೆಯನ್ನು ಉತ್ತರ ಕನ್ನಡದಲ್ಲೂ ಕಳೆಗುಂದಿಸುವ ಕಾರ್ಯಾಚರಣೆಯನ್ನು ಜೋಶಿ ಕರಾರುವಾಕ್ಕಾಗಿ ಹೆಣೆದಿದ್ದಾರೆನ್ನಲಾಗುತ್ತಿದೆ. ಲಾಗಾಯ್ತಿನಿಂದ ಒರಟು ಅನಂತ್ ಹೆಗಡೆ ಎಂದರೆ ಮೂಗುಮುರಿಯುವ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಜವಾಗೆ ಜೋಶಿಗೆ ಹತ್ತಿರಾದರು. ವೈದ್ಯರಿರಲಿ, ಅಧಿಕಾರಿಗಳಿರಲಿ, ಸ್ವಪಕ್ಷದ ಜಿಲ್ಲಾ ಅಧ್ಯಕ್ಷರು, ಶಾಸಕರೇ ಆಗಿರಲಿ ಯಾರಿಗೆ ಬೇಕಿದ್ದರೂ ಕಪಾಳ ಮೋಕ್ಷಮಾಡಿ ಅಥವಾ ಹಲ್ಲೆ ನಡೆಸಲು ಮುಂದಾಗುವ ಗುಣ-ಸ್ವಭಾವದವರು ಎಂಬ ಆರೋಪವಿರುವ ಅನಂತ್ ಹೆಗಡೆಯನ್ನು ಕಾಗೇರಿ ಆದಿಯಾಗಿ ಯಾರೂ ಬಹಿರಂಗವಾಗಿ ಎದುರುಹಾಕಿಕೊಳ್ಳುವ ಧೈರ್ಯ ತೋರಿಸಿದ್ದಿಲ್ಲ. ಹಾಗಾಗಿ ಅನಂತ್ ಹೆಗಡೆ-ಕಾಗೇರಿ ಹೆಗ್ಡೆ ಮಧ್ಯೆ ಪ್ರಚ್ಛನ್ನ ಒಳಗಲಾಟೆ ನಡೆದೇ ಇತ್ತು. ಈ ಕಾಗೇರಿ ಹಿಡಿದುಕೊಂಡೇ ಜೋಶಿ ಜಿಲ್ಲೆಯಲ್ಲಿ “ಆಟ” ಆರಂಭಿಸಿದರು. ಕುಮಟಾದ ಬರ್ಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್‌ರೊಂದು 2015ರ ಸೆಪ್ಟೆಂಬರ್ 1ರಂದು ಉರುಳಿ ಹಲವು ಸಾವು-ನೋವಾಗಿತ್ತು. ಸಾವಿಗೀಡಾಗಿದ್ದವರಲ್ಲಿ ಬಿಜೆಪಿಯ ತಾಲೂಕು ಸಮಿತಿಯ ಮಹಿಳಾ ಪದಾಧಿಕಾರಿಯೂ ಒಬ್ಬರಿದ್ದರು. ಆದರೂ ಅನಂತ್ ದುರಂತದ ಸ್ಥಳಕ್ಕೆ ಬರಲಿಲ್ಲ; ಸಂಸದನ ಹೊಣೆಗಾರಿಕೆ ನಿಭಾಯಿಸಲಿಲ್ಲ. ಸದರಿ ಸಂದರ್ಭವನ್ನು ಪ್ರಹ್ಲಾದ್ ಜೋಶಿ ಸ್ವಜಾತಿ ಶತ್ರುವನ್ನು ಹಣಿಯಲು ಬಳಸಿಕೊಂಡರು. ಅಂದು ಸಂಸತ್‌ನ ಪೆಟ್ರೋಲಿಯಂ ಸಮಿತಿಯಲ್ಲಿದ್ದ ಜೋಶಿ ಬರ್ಗಿಗೆ ಬಂದಿದ್ದರು. ಸ್ಥಳೀಯ ಸಂಸದನ ಉದಾಸೀನತೆ-ಹೊಣೆಗೇಡಿತನವನ್ನು ಪರೋಕ್ಷವಾಗಿ ಎತ್ತಿ ಆಡಿ ಹಣಿಯಲು ಹವಣಿಸಿದ್ದರು.

ಇದನ್ನೂ ಓದಿ: ಅಡ್ವಾಣಿ: ರಥಯಾತ್ರೆಯಿಂದ ಭಾರತ ರತ್ನದವರೆಗೆ; ಹಿಂಸಾಚಾರ, ಧ್ರುವೀಕರಣದಿಂದ ಮುನ್ನಡೆದ ರಾಜಕೀಯ ಪಯಣ

ಬಹುಶಃ ಆ ಹೊತ್ತಿಗಾಗಲೇ ಜೋಶಿ ಮುಂದೊಂದು ದಿನ ಅನಂತ್ ಹೆಗಡೆಗೆ ಕೊಕ್ ಕೊಟ್ಟು ಉತ್ತರ ಕನ್ನಡದಿಂದ ಸಂಸದನಾಗುವ ದೂರಾಲೋಚನೆ ಹಾಕಿದ್ದರೇನೋ ಎಂಬ ಅನುಮಾನ ಬಿಜೆಪಿಗರನ್ನು ಈಗ ಕಾಡುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ “ಲಿಂಗಾಯತ ಹಾರ್ಟ್‌ಲ್ಯಾಂಡ್” ಎನ್ನಲಾಗುವ ಧಾರವಾಡ ಮತ್ತು ಹಾವೇರಿಯಲ್ಲಿ ಬಿಜೆಪಿ ಮುಗ್ಗರಿಸಿದ ನಂತರ ಜೋಶಿ ನೆಲೆ ತಪ್ಪಿದಂತಾಗಿ ಕಂಗೆಟ್ಟಿದ್ದಾರೆ. ಮಾಜಿ ಸಿಎಂ-ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್‌ರನ್ನು ಎದುರು ಹಾಕಿಕೊಂಡಿರುವ ಜೋಶಿಗೆ ಧಾರವಾಡದಿಂದ ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಗೆದ್ದುಬರುವ ಧೈರ್ಯವಿಲ್ಲದಾಗಿತ್ತು. ಬ್ರಾಹ್ಮಣರು ಜಾಸ್ತಿಯಿರುವ ಉತ್ತರ ಕನ್ನಡ ಮತ್ತು ಕೇಸರಿ ಸೆಳೆತದ ಮರಾಠರು ನಿರ್ಣಾಯಕರಾಗಿರುವ ಖಾನಾಪುರ, ಕಿತ್ತೂರು ಉತ್ತರ ಕನ್ನಡ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ಕೆನರಾ ಮೇಲೆ ಜೋಶಿ ಕಣ್ಣುಬಿದ್ದಿತ್ತು. ಅನಂತ್ ಹೆಗಡೆಗೆ ಕೇಸರಿ ಟಿಕೆಟ್ ತಪ್ಪಿಸಲೇಬೇಕೆಂದರೆ ಜೋಶಿ-ಸಂತೋಷ್ ಕೂಟಕ್ಕೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಈಗೊಂದು ತಿಂಗಳಿಂದ ಜೋಶಿ ಅನಂತ್ ಹೆಗಡೆಯನ್ನು ಎದುರುಹಾಕಿಕೊಂಡು ಅಪರಿಚಿತ ಉತ್ತರ ಕನ್ನಡದಲ್ಲಿ ತಿಣುಕಾಡುವುದಕ್ಕಿಂತ ಲಿಂಗಾಯತರನ್ನು ರಮಿಸಿದರೆ ಧಾರವಾಡವೇ ಸುರಕ್ಷಿತ ಕ್ಷೇತ್ರವೆಂದು ತೀರ್ಮಾನಿಸಿದ್ದಾರೆ.

ಉತ್ತರ ಕನ್ನಡದಿಂದ ಸ್ಪರ್ಧಿಸಲು ಪ್ರಹ್ಲಾದ್ ಜೋಶಿ ಹಿಂಜರಿಯುತ್ತಿದ್ದಂತೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಸೆ-ಕನಸು ಅರಳಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿಯಲ್ಲಿ ಹೀನಾಯವಾಗಿ ಸೋತಿರುವ ಕಾಗೇರಿಗೆ ದಿಲ್ಲಿ ಕನಸು ಕಾಡತೊಡಗಿತ್ತು. ಸಂಸದ ಅನಂತ್ ಹೆಗಡೆ ಎರಡು ದಶಕದಿಂದ ತನ್ನನ್ನು ಎಂಪಿ ಪೀಠದಲ್ಲಿ ಪ್ರತಿಷ್ಠಾಪಿಸುತ್ತ ಬಂದಿರುವ ಕ್ಷೇತ್ರದ ಜನರಿಗೆ ಕಳೆದ ನಾಲ್ಕೂವರೆ ವರ್ಷದಿಂದ ದ್ರೋಹಮಾಡಿ ಬೆಚ್ಚನೆಯ ಗೂಡು ಸೇರಿಕೊಂಡು ಸ್ವಹಿತಾಸಕ್ತಿಯ ವ್ಯವಹಾರದಲ್ಲಿ ತಲ್ಲೀನರಾಗಿದ್ದು, ಬೆಂಬಿಡದ ಕಾಯಿಲೆ ಬಾಧಿಸುತ್ತಿರುವುದರಿಂದ ರಾಜಕೀಯದಿಂದ ದೂರಾಗುತ್ತಾರೆಂಬ ವದಂತಿಗಳು, ಬಿಜೆಪಿ ಹೈಕಮಾಂಡಿಗೂ ಅನಂತ್ ಬೇಡವಾಗಿದ್ದಾರೆಂಬ ಭಾವನೆ ಮತ್ತು ಎಲ್ಲಕ್ಕಿತ ಹೆಚ್ಚಾಗಿ ತನಗೆ ಚುನಾವಣೆ ರಾಜಕಾರಣ ಸಾಕಾಗಿದೆ-ಬಿಜೆಪಿಯಲ್ಲಿನ ಬೆಳವಣಿಗೆಯಿಂದ ಬೇಸರವಾಗಿದೆ ಎಂಬ ಒಂಥರಾ “ವೈರಾಗ್ಯ” ಮೌನ ಸಂದೇಶ ಅನಂತ್ ಹೆಗಡೆಯೇ ಹಬ್ಬಿಸಿಕೊಂಡಿದ್ದು ಕಾಗೇರಿಯನ್ನು “ಕ್ರಿಯಾಶೀಲ”ರಾಗಿ ಮಾಡಿತ್ತು. ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಜಿಲ್ಲೆ ಸುತ್ತುಹಾಕಲಾರಂಭಿಸಿದರು. ತನ್ನ ಮೂರು ದಶಕದ ಅಧಿಕಾರ ರಾಜಕಾರಣದಲ್ಲಿ ಕಾಗೇರಿ ಇಷ್ಟು ಉತ್ಸಾಹದಿಂದ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲವೆಂದು ಕೇಸರಿ ಕಾರ್ಯಕರ್ತರೇ ಹೇಳುತ್ತಾರೆ.

ಮತ್ತೊಂದೆಡೆ ಆರೆಸ್ಸೆಸ್‌ನ “ಧ್ಯೇಯನಿಷ್ಠ” ಪತ್ರಕರ್ತ-ವಿಸ್ತಾರ ಟಿವಿಯ ಮುಖ್ಯಸ್ಥ ಯಲ್ಲಾಪುರದ ಹರಿಪ್ರಕಾಶ್ ಕೋಣೆಮನೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಪ್ರಯತ್ನ ನಡೆಸಿದ್ದರು. ಈಗ ಹಿರಿಯ ಕಾಗೇರಿಗೆ ಜೂನಿಯರ್ ಕೋಣೆಮನೆ ಟಕ್ಕರ್ ಕೊಡುತ್ತಿದ್ದಾರೆ; ಕಾಗೇರಿ ಮತ್ತು ಕೋಣೆಮನೆ ಇಬ್ಬರೂ ಕೆನರಾ ಕ್ಷೇತ್ರದ ಕೇಸರಿ ಟಿಕೆಟ್ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರವಾಡುವ ಸಂತೋಷ್-ಜೋಶಿ ಬಳಗದವರು; ಇಬ್ಬರನ್ನೂ ಅನಂತ್ ಹೆಗಡೆ ವಿರುದ್ಧ ಎತ್ತಿಕಟ್ಟಿದ್ದು ಈ ಜೋಡಿಯೇ ಎಂಬ ಗುಸುಗುಸು ಬಿಜೆಪಿ ಬಿಡಾರದಲ್ಲಿದೆ. ಕಾಗೇರಿ-ಕೋಣೆಮನೆಯ ಶಕ್ತಿ-ಸಾಮರ್ಥ್ಯವನ್ನು ಸಂತೋಷ್-ಜೋಶಿ ಅಳೆದು-ತೂಗಿ ನೋಡುತ್ತಿದ್ದಾರೆಂಬ ಎಂಬ ಮಾತು ಕೇಳಿಬರುತ್ತಿದೆ. ಕಾಗೇರಿ ಕಳೆದ ಮೂರು ದಶಕದಿಂದ ಸತತ ಶಾಸಕ, ರಾಜ್ಯ ಕ್ಯಾಬಿನಟ್ ದರ್ಜೆ ಮಂತ್ರಿ ಮತ್ತು ಪ್ರಮುಖ ವಿಧಾನಸಭಾ ಅಧ್ಯಕ್ಷತೆಗೇರಿದರೂ ತವರು ಶಿರಸಿ ಆಚೆಗೆ ವರ್ಚಸ್ಸು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಭಾವನೆ ಹೈಕಮಾಂಡ್ ಮಟ್ಟದಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಯೋಚನೆ ದೊಡ್ಡವರ ತಲೆಯಲ್ಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸಂಘ ಪರಿವಾರದಲ್ಲಿ ಪ್ರಬಲ ಪ್ರಭಾವವಿರುವ ಕೋಣೆಮನೆ ಕಾಗೇರಿಯನ್ನು ಹಿಮ್ಮೆಟ್ಟಿಸಿ ಕೇಸರಿ ಪಕ್ಷದ ಕ್ಯಾಂಡಿಡೇಟಾಗುವ ಸೂಚನೆ ಗೋಚರಿಸುತ್ತಿದೆ. ರಾಷ್ಟ್ರೀಯ ಸಂಘಿ ಸಂಸ್ಥಾನದಲ್ಲಿ ಮೊಹನ ಭಾಗವತ್ ನಂತರದ ನಂಬರ್ ಟೂ ಸ್ಥಾನದಲ್ಲಿರುವ ಕರ್ನಾಟಕದ ಸೊರಬ ಮೂಲದ ದತ್ತಾತ್ರೇಯ ಹೊಸಬಾಳೆ ಪರಿವಾರಕ್ಕೆ ಅನಂತ್ ಹೆಗಡೆ ಅಂದರೆ ಆಗದು; ಈ ಹೊಸಬಾಳೆ ಕೋಣೆಮನೆ ಬೆನ್ನಿಗಿದ್ದಾರೆ ಎನ್ನಲಾಗಿದೆ.

ಈಚೆಗೆ ಕೋಣೆಮನೆಯನ್ನು ರಾಜ್ಯ ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿದೆ. ಇದು ಕೋಣೆಮನೆ ಕೇಸರಿ ಟಿಕೆಟ್ ಪೈಪೋಟಿಯಲ್ಲಿ ಮುಂದಿದ್ದಾರೆಂಬುದನ್ನು ಬಿಂಬಿಸುವಂತಿದೆ ಎಂಬ ತರ್ಕಗಳು ಬಿಜೆಪಿಯಲ್ಲಿದೆ. ಹವ್ಯಕ ಬ್ರಾಹ್ಮಣ ಅನಂತ್ ಹೆಗಡೆಗೆ ಕೊಕ್ ಕೊಟ್ಟರೆ ಅದೇ ಸಮುದಾಯದ ಕಾಗೇರಿ ಇಲ್ಲವೇ ಕೋಣೆಮನೆಗೆ ಬಿಜೆಪಿ ಮಣೆ ಹಾಕುವುದರಲ್ಲಿ ಅನುಮಾನವಿಲ್ಲ. ಸಂಘ ಪರಿವಾರದ ಸಕಲ “ಸಿದ್ಧಾಂತ”ಕ್ಕೆ ಸದಾ ಬದ್ಧರಾಗಿರುವ ಕಾಗೇರಿ-ಕೋಣೆಮನೆ ಬಿಟ್ಟು ಬಿಜೆಪಿ ಟಿಕೆಟ್ ಕಮಿಟಿಯ ಸಂಘಿ ಶ್ರೇಷ್ಠರು, ಸಂಘ “ಮರ್ಮ” ಅರ್ಥವಾಗದ ಶೂದ್ರಾದಿಗಳಿಗೆ ಅವಕಾಶ ಕೊಡುವ ಸಾಧ್ಯತೆಯಂತೂ ಸದ್ಯದ ಪರಿಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಇದು ಗೊತ್ತಿದ್ದೂ ಮಾಜಿ ಶಾಸಕ ದೀವರು ಜಾತಿಯ ಸುನಿಲ್ ನಾಯ್ಕ್ ಮತ್ತು ಪಡ್ತಿ-ಕ್ರಿಶ್ಚಿಯನ್ ಹಾಗು ಕೊಂಕಣ ಮರಾಠ ಸಮುದಾಯದ ನಂಟಿರುವ ಕಾರವಾರದ ಮಾಜಿ ಎಮ್ಮೆಲ್ಲೆ ರೂಪಾಲಿ ನಾಯ್ಕ್, ಜಿಲ್ಲಾ ಬಿಜೆಪಿ ವಕ್ತಾರ ನಾಡವ ಸಮುದಾಯದ ವಕೀಲ ನಾಗರಾಜ್ ನಾಯಕ ಮುಂತಾದ ಬಿಜೆಪಿಯಲ್ಲಿನ “ಹಿಂದುಳಿದವರು” ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ ಎಂದು ಬಿಜೆಪಿಯ ಜನಿವಾರ ನೀತಿ ಬಲ್ಲವರು ತಮಾಷೆ ಮಾಡುತ್ತಾರೆ. ಈ ವರದಿ ಸಿದ್ಧವಾಗುತ್ತಿರುವ ವೇಳೆಗೆ ತಮಿಳು ಬ್ರಾಹ್ಮಣ ಸಮುದಾಯದ ವಿದೇಶಾಂಗ ಮಂತ್ರಿ ಜೈಶಂಕರ್‌ಗೆ ಬ್ರಾಹ್ಮಣರು ದೊಡ್ಡ ಸಂಖ್ಯೆಯಲ್ಲಿರುವ ಉತ್ತರ ಕನ್ನಡದಲ್ಲಿ ಚುನಾವಣೆಗೆ ನಿಲ್ಲಿಸುವ ಚರ್ಚೆಗಳು ದಿಲ್ಲಿಯ ಕೇಸರಿ ದರ್ಬಾರಿನಲ್ಲಿ ನಡೆಯುತ್ತಿರುವ ಬಾತ್ಮಿ ಬರುತ್ತಿದೆ.

ಪ್ರಹ್ಲಾದ್ ಜೋಶಿ

ಬಿಜೆಪಿಯಲ್ಲಿ ತನ್ನ ಕಡ್ಡಾಯ ನಿವೃತ್ತಿಗೆ ಯೋಜನಾಬದ್ಧ ಸ್ಕೆಚ್ ಹಾಕಲಾಗುತ್ತಿದೆ ಎಂಬುದು ಅರಿವಿಗೆ ಬರುತ್ತಿರುವಂತೆಯೇ ಅನಂತ್ ಹೆಗಡೆ ಮೈಕೊಡವಿಕೊಂಡು ಎದ್ದು ನಿಂತಿದ್ದಾರೆ! ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲವೆಂದು ಎಲ್ಲಿಯೂ ಬಹಿರಂಗವಾಗಿ ಹೇಳದಿದ್ದರೂ ಮತ್ತೆ ಸ್ಪರ್ಧೆಯ ಆಸೆಯಿಲ್ಲವೆಂಬಂತೆ ತೋರಿಸಿಕೊಳ್ಳುತ್ತಿದ್ದ ಅನಂತ್ ಹೆಗಡೆ ಈಗ ಮತ್ತೆ ಎಂಪಿಯಾಗುವ ಹಪಾಹಪಿಗೆ ಬಿದ್ದಿದ್ದಾರೆ; ಮುಸಲ್ಮಾನರು ಮತ್ತು ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಟ್ಟುಕೊಂಡು ಜಿಲ್ಲೆಯಲ್ಲಿ “ದಂಡ” ಯಾತ್ರೆ ಮಾಡುತ್ತಿದ್ದಾರೆ. ಮೊದಲು ಅನುಯಾಯಿಗಳ ತಂಡಗಳು ಮನೆಗೆ ಬಂದು ಸಕ್ರಿಯ ರಾಜಕಾರಣಕ್ಕೆ ಬರುವಂತೆ ಒತ್ತಾಯಿಸುವ ನಾಟಕ ಶುರುಹಚ್ಚಿಕೊಂಡಿದ್ದರು. ಅದಾದನಂತರ ಊರೂರು ಸುತ್ತುತ್ತ-ಇಷ್ಟು ದಿನ ಕಾರ್ಯಕರ್ತರನ್ನು ಕಡೆಗಣಿಸಿ ತಪ್ಪುಮಾಡಿದ್ದೇನೆ; ಅನಾರೋಗ್ಯದಿಂದ ಚುನಾವಣಾ ರಾಜಕೀಯದಿಂದ ದೂರಾಗಲು ಯೋಚಿಸಿದ್ದೆ. ಆದರೆ ಅಭಿಮಾನಿಗಳು ರಾಜಕಾರಣದಲ್ಲಿದ್ದು ಮತ್ತೆ ಸಂಸದನಾಗುವಂತೆ ಒತ್ತಾಯಿಸುತ್ತಿದ್ದಾರೆ. ನಂಬಿದವರ ಕೋರಿಕೆ ಕಡೆಗಣಿಸಿದರೆ ಮೂರ್ಖತನವಾಗುತ್ತದೆ- ಎನ್ನುತ್ತಾ ಅಧಿಕಾರ ರಾಜಕಾರಣದ ವರಸೆ ಆರಂಭಿಸಿದ್ದಾರೆ. ಅಲ್ಲಿಗೆ ಸ್ವಯಂಘೋಷಿತ ದೇಶಪ್ರೇಮಿಯ ಅಧಿಕಾರ ವ್ಯಾಮೋಹದ ಹಿಂದುತ್ವ ಅನಾವರಣವಾದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಚುನಾವಣಾ ಕಣಕ್ಕಿಳಿಯುವಂತೆ ಅನಂತ್ ಹೆಗಡೆಗೆ ಹಿಂಬಾಲಕರು ದುಂಬಾಲು ಬೀಳುವ ಪ್ರಹಸನಗಳು ನಡೆಯುತ್ತಿರುವುದು ಸ್ವತಃ ಅನಂತ್ ಹೆಗಡೆಯದೇ ಪ್ರಾಯೋಜಿತ ಕಾರ್ಯಕ್ರಮವೆಂಬುದು ದಿಲ್ಲಿ-ಬೆಂಗಳೂರಿನ ಕೇಸರಿ ಕೇಂದ್ರದ ಯಜಮಾನರಿಗೆ ಪಕ್ಕಾ ಆಗಿದ್ದರೆ, ಇತ್ತ ಕ್ಷೇತ್ರದ ಮಂದಿಗೆ ತಮಾಷೆಯ ಸಂಗತಿಯಾಗಿದೆ. ಚುನಾವಣೆಯಲ್ಲಿ ಗೆದ್ದ ಮರುಕ್ಷಣವೇ ಕಣ್ಮರೆಯಾಗಿ ತನ್ನ ಲಾಭದಾಯಕ “ದಂಧೆ”ಗಳಲ್ಲಿ ತಲ್ಲೀನವಾಗುವ ಮತ್ತೆ ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಪ್ರಚೋದಕ ಹಿಂದುತ್ವದ ಮಾತುಗಾರಿಕೆ, ಸೆಕ್ಯುಲರ್ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಮುಂದಾಳುಗಳನ್ನು ಮೂದಲಿಸುವ ಮೂರನೇ ದರ್ಜೆ ಹೇಳಿಕೆ ಬಿತ್ತರಿಸುತ್ತ ಗುಟುರುಹಾಕುವುದು ಈ ಗೊರಕೆ ಎಂಪಿಯ ಚುನಾವಣಾ ಟೂಲ್‌ಕಿಟ್ ತಂತ್ರಗಾರಿಕೆ.

ಕಳೆದ ಮೂರು ಚುನಾವಣೆಗಳ ಸಂದರ್ಭದಲ್ಲಿ ಪ್ರದರ್ಶಿಸಿದ್ದ “ವಾಚಾಳಿ ಚಾಳಿ”ಯನ್ನು ಈಗ ಮತ್ತೆ ಅನಂತ್ ಶುರುಹಚ್ಚಿಕೊಂಡಿದ್ದಾರೆ; ಸುದ್ದಿ ಸದ್ದಿಗಾಗಿ ಅಯೋಧ್ಯೆಯ ರಾಮಮಂದಿರದ ನೆಪದಲ್ಲಿ ಸಿಎಂ ಸಿದ್ದುರನ್ನು ಏಕವಚನದಲ್ಲಿ ಬೈಯ್ಯುತ್ತಾ, ತನ್ನ ಸಂಸ್ಕೃತಿ-ಸಂಸ್ಕಾರ ಸಾಬೀತುಪಡಿಸಿಕೊಳ್ಳುತ್ತಿರುವ ಅನಂತ್ ಹೆಗಡೆಗೆ ಜಿಲ್ಲೆಯಲ್ಲಿ ಮೊದಲಿನ ಮತಾಂಧ ಮಾರ್ಕೆಟ್ ಮಾತ್ರ ಕುದುರುತ್ತಿಲ್ಲ; ಪ್ರಧಾನಿ ಮೋದಿ ಜಿಲ್ಲೆಗೆ ಬಂದಾಗ ಪ್ರಜ್ಞಾಪೂರ್ವಕವಾಗಿ ಧಿಕ್ಕರಿಸಿದ್ದ ಆರೋಪವನ್ನು ಸ್ವಪಕ್ಷೀಯ ವಲಯದಲ್ಲಿ ಎದುರಿಸುತ್ತಿರವ ಅನಂತ್ ಹೆಗಡೆ ಅದನ್ನು ಮರೆಮಾಚಲು “ನನ್ನ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಮತ್ತವರ ಕಾಂಗ್ರೆಸ್ ಪಾರ್ಟಿಯವ್ರು ಏಕವಚನದಲ್ಲಿ ಸಂಬೋಧಿಸುತ್ತಾರೆ; ಅದಕ್ಕೇ ನಾನು ಸಿಎಂ ಸಿದ್ದರಾಮಯ್ಯಗೆ ಏಕವಚನ ಪ್ರಯೋಗಿಸಿದ್ದೇನೆ” ಎಂದು ಅಸಂಬದ್ದವಾಗಿ ಸಮರ್ಥಿಸಿಕೊಳ್ಳುತ್ತಾ ಹಾಸ್ಯಾಸ್ಪದರಾಗುತ್ತಿದ್ದಾರೆ.

ಈ ಬಾರಿ ಅನಂತ್ ಹೆಗಡೆಗೆ ಕೇಸರಿ ಟಿಕೆಟ್‌ಅನ್ನು ಹೈಕಮಾಂಡ್ ಅಷ್ಟು ಸುಲಭಕ್ಕೆ ಮಂಜೂರು ಮಾಡದೆಂಬುದು ಖಾತ್ರಿಯಾಗಿದೆ. ಕರ್ಮಗೇಡಿ ಎಂಪಿಗೆ ಪುನಃ ಅವಕಾಶ ಕೊಡಕೂಡದೆಂಬ ಆಗ್ರಹಗಳು ಸ್ಥಳೀಯವಾಗಿಯೂ ಕೇಳಿಬರುತ್ತಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಮೀಟಿಂಗ್‌ನಲ್ಲಿ ಅವರಿಗೆ ಟಿಕೆಟ್ ಕೊಡುವುದರ ಬಗ್ಗೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಇದರಿಂದ ಕಂಗಾಲುಬಿದ್ದಿರುವ ಅನಂತ್ ಹೆಗಡೆಗೆ ಹಿಂದುತ್ವದ ಕೀಳುಭಾಷೆ ಬಿತ್ತರಿಸಿ, ತನ್ನ “ಅಸ್ತಿತ್ವ”ವನ್ನು ಹೈಕಮಾಂಡಿಗೆ ಪ್ರದರ್ಶಿಸುವುದು ಅನಿವಾರ್ಯ “ಕರ್ಮ”ದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಹಿಂದುತ್ವದ ಹೆಸರಲ್ಲಿ ಅದೆಷ್ಟೇ ಲಾಗ ಹಾಕಿದರೂ ಅನಂತ್ ಹೆಗಡೆಗೆ ಈ ಬಾರಿ ಕೇಸರಿ ಅಭ್ಯರ್ಥಿತನ ಗಗನಕುಸುಮ ಎನ್ನಲಾಗುತ್ತಿದೆ. ಪಕ್ಷಕ್ಕೆ ಡ್ಯಾಮೇಜು ಮಾಡುವ ಹುಚ್ಚು, ಹಿಂದುತ್ವ, ಪಕ್ಷದ ಸಂಘಟನೆಯ ಕಾರ್ಯಕ್ರಮಗಳಿಂದ ಬುದ್ಧಿಪೂರ್ವಕವಾಗಿ ದೂರವಾಗಿದ್ದು, ಕ್ಷೇತ್ರದಲ್ಲಿರುವ ಪ್ರಬಲ ಎಂಟಿಇನ್‌ಕಂಬೆನ್ಸ್, ಕಟ್ಟರ್ ಕಾರ್ಯಕರ್ತರ ಅಸಮಾಧಾನ ಮತ್ತು ಕೇಂದ್ರದ ಕೇಸರಿ ನಾಯಕತ್ವದೊಂದಿಗಿನ ವೈಮನಸ್ಸಿನಿಂದ ಸತ್ವ ಕಳೆದುಕೊಂಡಿರುವ ಅನಂತ್ ಹೆಗಡೆಗೆ ರಣಾಂಗಣಕ್ಕಿಳಿಸಿದರೂ ಗೆಲುವು ಕಷ್ಟವೆಂಬ ಆತಂಕವೂ ಹೈಕಮಾಂಡ್ ಮಟ್ಟದಲ್ಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಹೇಳಿದವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೆರಳಿದ್ದ ಅನಂತ್ ಹೆಗಡೆ ಸಾಕ್ಷಾತ್ ಮೋದಿಯೇ ಜಿಲ್ಲೆಯ ಅಂಕೋಲೆಗೆ ಪ್ರಚಾರಕ್ಕೆಂದು ಬಂದಾಗ ಬಹಿಷ್ಕಾರಹಾಕಿ ಅವಮಾನಿಸಿದ್ದು ಪಕ್ಷದ ಸುಪ್ರಿಮೋಗಳ ಕಣ್ಣು ಕೆಂಪಾಗಿಸಿದೆ. ಇದು ಟಿಕೆಟ್ ಪಡೆಯಲು ಅನಂತ್ ಹೆಗಡೆಗೆ ಪ್ರಮುಖ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಸಂಘೀ ಸರದಾರರ ಸಖ್ಯದ ಕಾಗೇರಿ ಹೆಗಡೆ ಮತ್ತು ಕೋಣೆಮನೆ ಜತೆ ಗುದ್ದಾಡಿ ಕೇಸರಿ ಟಿಕೆಟ್ ದಕ್ಕಿಸಿಕೊಳ್ಳುವುದು ಅನಂತ್ ಹೆಗಡೆಗೆ ಕಷ್ಟವೆಂದು ಬಿಜೆಪಿ ಬ್ರಾಹ್ಮಣ ಬಳಗದ ಕಾರ್ಯಾಚರಣೆ ಕಂಡವರು ಹೇಳುತ್ತಾರೆ. ಹಾಗೊಮ್ಮೆ ಅನಂತ್ ಹೆಗಡೆ ಬಿಜೆಪಿ ಹುರಿಯಾಳಾದರೂ ಗೆಲುವು ಮಾತ್ರ ಹಿಂದಿನಂತೆ ಸುಲಭವೇನಲ್ಲ. ಜಿಲ್ಲೆಯ ಅಭಿವೃದ್ಧಿ-ಪ್ರಗತಿಯ ಯಾವ ನಿರೀಕ್ಷೆ-ಕನಸುಗಳಿಲ್ಲದ ಸಂಸದನ ಬದಲಾವಣೆಯ ಮೂಡ್‌ನಲ್ಲಿ ಜನರಿದ್ದಾರೆ; ಕೋಮುಕಲಹ ಹುಟ್ಟುಹಾಕುವ ಪ್ರಚೋದನಾತ್ಮಕ ಭೀಷಣ ಭಾಷಣ ಬಿಗಿಯುವುದು ಮತ್ತು ಸ್ವಾರ್ಥಸಾಧನೆಯಷ್ಟೇ ಎಂಪಿಯ ಹಕ್ಕು-ಬಾಧ್ಯತೆ ಎಂಬಂತಿರುವ ಅನಂತ್ ಹೆಗಡೆಯ ಸಂಸದಗಿರಿ ಹೊರೆಯಾಗಿದೆ ಎಂಬ ಮಾತು ಜಿಲ್ಲೆಯಲ್ಲಿ ಅಷ್ಟ ದಿಕ್ಕುಗಳಲ್ಲಿ ಮೊಳಗುತ್ತಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ್ ಏನಾದರೂ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಹಣಾಹಣಿ ಕಾಳಗ ಏರ್ಪಡಲಿದೆ ಎಂದು ಜಿಲ್ಲೆಯ ಅಖಾಡದ ಸೂತ್ರ-ಸಮೀಕರಣ ಬಲ್ಲರು ಅಭಿಪ್ರಾಯಪಡುತ್ತಾರೆ. ಟಿಕೆಟ್ ಸಾಧ್ಯತೆ ಕ್ಷೀಣಿಸಿದಂತೆ ಅನಂತ್ ಹೆಗಡೆ ವಿಕ್ಷಿಪ್ತತೆ ಹೆಚ್ಚಾಗುವ ಸಾಧ್ಯತೆಯಿದೆ; ಹತಾಶ ಅನಂತ್ ಹೆಗಡೆ ಅಯೋಧ್ಯೆ ರಾಮಮಂದಿರ, ಗೋವು, ಮಸೀದಿಗಳ ಸುತ್ತ ಸುಳ್ಳು ಕತೆಗಳನ್ನು ಕಟ್ಟಿ ಊರೂರಿಗೆ ಬೆಂಕಿ ಹಚ್ಚುವ ಭಯವಿದೆ. ಇದೆಲ್ಲ ಸಿದ್ದು ಸರಕಾರದ ಗುಪ್ತಗಚರ ಇಲಾಖೆ ಗಂಭೀರವಾಗಿ ಪರಿಗಣಿಸಿ ಎಚ್ಚರದಿಂದಿರಬೇಕಿದೆ.

ಹತಾಶ ಅನಂತ್ ಹೆಗಡೆಯ ಗೋ ಪ್ರೇಮ ಪುರಾಣ!

ಚುನಾವಣೆಯಲ್ಲಿ ಗೆದ್ದ ಮರುಕ್ಷಣವೇ ಕ್ಷೇತ್ರ ಕಡೆಗಣಿಸಿ ಕಣ್ಮರೆಯಾಗುವ ಅನಂತ್ ಹೆಗಡೆಗೆ ಮತ್ತೆ ಟಿಕೆಟ್ ಕೊಡಕೂಡದೆಂಬ ಕೂಗು ಬಿಜೆಪಿಯಲ್ಲಿ ಭುಗಿಲೆದ್ದಿದೆ. ಹೈಕಮಾಂಡ್ ಹಿಟ್ ಲಿಸ್ಟ್‌ನಲ್ಲಿರುವ ಅನಂತ್ ಹೆಗಡೆ ಕೇಸರಿ ಟಿಕೆಟ್ ಕೈಗೂಡದ ಆತಂಕದಲ್ಲಿ ವಿಕ್ಷಿಪ್ತರಾದಂತಿದೆ; ಮತೀಯ ಭಾವೋದ್ವೇಗ ಕೆರಳಿಸಿ ತನ್ನ ಪ್ರಾಮುಖ್ಯತೆಯನ್ನು ಹೈಕಮಾಂಡ್‌ಗೆ ತೋರಿಸಿ ಅಭ್ಯರ್ಥಿತನ ಗಿಟ್ಟಿಸುವ ಹಿಕಮತ್ತು ಅನಂತ್ ಹೆಗಡೆ ಮಾತಿನಲ್ಲಿ ಅಡಗಿದೆ ಎಂದು ಬಿಜೆಪಿಗರೇ ತರ್ಕಿಸುತ್ತಿದ್ದಾರೆ. ಹಿಂಬಾಲಕರ ಸಭೆಗಳಲ್ಲಿ ಅನಂತ್ ಹೆಗಡೆ ಭಯೋತ್ಪಾದಕ ಭಾಷೆಯಲ್ಲಿ ಮಾತಾಡುತ್ತಿದ್ದಾರೆ; ಶಿರಸಿಯ ಸಿಪಿ ಬಝಾರ್‌ನಲ್ಲಿರುವ ಮಸೀದಿ, ಭಟ್ಕಳದ ಚಿನ್ನದ ಪಳ್ಳಿ ಮತ್ತು ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ಹಿಂದು ದೇವಾಲಯಗಳಾಗಿತ್ತು; ಇದೆಲ್ಲ ಒಡೆದು ಹಾಕುವುದು ಗ್ಯಾರಂಟಿ; ಸಾವಿರ ವರ್ಷದ ಸೇಡು ತೀರಿಸಿಕೊಳ್ಳಲು ಹಿಂದು ರಕ್ತ ಸನ್ನದ್ಧವಾಗಿದೆ. ಹಿಂದು ವಿರೋಧಿಗಳನ್ನು ಮುಂದಿನ ಜನ್ಮದಲ್ಲೂ ಸಾಯುವಹಾಗೆ ಹೊಡೆದುಹಾಕಬೇಕು. ಕಾಂಗ್ರೆಸ್ ನಮ್ಮ ವೈರಿಯಲ್ಲ; ಅಹಿಂದು ಸಿದ್ದರಾಮಯ್ಯ ನಮ್ಮ ಶತ್ರು.. ಎಂದೆಲ್ಲ ಬಡಬಡಿಸಿ ಹಿಂಬಾಲಕರನ್ನು ಕೆರಳಿಸಿ ಟಿಕೆಟ್‌ಗೆ ಲಾಗಹಾಕುತ್ತಿದ್ದಾರೆ.

ನೇತಾಜಿ ಸುಭಾಷ್‌ಚಂದ್ರ ಭೋಸರ ಆರ್ಮಿಯಲ್ಲಿದ್ದ ಒಡನಾಡಿಗಳು-ಕುಟುಂಬಿಕರನ್ನು ಕಂಡುಬಂದಿದ್ದೇನೆ; ಅವರು ನೇತಾಜಿ ನಿಗೂಢ ಸಾವಿನ “ರಹಸ್ಯ” ತನಗೆ ವಿವರಿಸಿದ್ದಾರೆಂದು ಬುರುಡೆಬಿಟ್ಟು ಬೊಗಳೆ ಭೂಪನೆಂದೇ ಹೆಸರುವಾಸಿಯಾಗಿರುವ ಅನಂತ್ ಹೆಗಡೆ ಬಹುಸಂಖ್ಯಾತ ಹಿಂದುಗಳನ್ನು ದಿಕ್ಕು ತಪ್ಪಿಸಿ ಭಾವನೆಗಳನ್ನು ಕೆರಳಿಸಿ ಓಟು ಪಡೆಯಲು ಅಥವಾ ಕೇಸರಿ ಟಿಕೆಟ್ ಪಡೆಯಲು ಪುರಾಣ, ಇತಿಹಾಸ, ಭೂಗೋಳ ತಿರುಚಿ ಕೆರಳಿಸುವ ಆಟ ಆಡಬಲ್ಲರೆಂಬುದಕ್ಕೆ ಕಂಡಕಂಡಲ್ಲಿ ಬಿತ್ತರಿಸುತ್ತಿರುವ “ಉಪಕತೆ”ಯೊಂದು ಸಣ್ಣ ಸ್ಯಾಂಪಲ್‌ನಂತಿದೆ: “ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕರಪತ್ರಿ ಮಹಾರಾಜ್ ಎಂಬ ಸಂತ ಗೋಹತ್ಯಾ ನಿಷೇಧದ ಬಗ್ಗೆ ಹೋರಾಟ ಮಾಡಿದ್ದರು. ಗೋಲಿಬಾರ್‌ನಿಂದ ಹತ್ತಾರು ಸಾಧುಗಳನ್ನು ಮತ್ತು ನೂರಾರು ಗೋವುಗಳನ್ನ ಕೊಂದುಹಾಕಲಾಗಿತ್ತು. ಇದರಿಂದ ನೊಂದಿದ್ದ ಕರಪತ್ರಿ ಮಹಾರಾಜ್ ’ಗೋಪಾಷ್ಠಮಿ'(ಗೋಕುಲಾಷ್ಠಮಿ)ಯಂದೇ ಇಂದಿರಾ ಗಾಂಧಿ ಕುಟುಂಬ ಸರ್ವನಾಶವಾಗಲೆಂದು ಶಾಪ ಕೊಟ್ಟಿದ್ದರು. ಇದರ ಪರಿಣಾಮವಾಗಿ ಇಂದಿರಾ ಗಾಂಧಿ ಹತ್ಯೆ, ಅವರ ಸಣ್ಣ ಮಗ ಸಂಜಯ್‌ನ ವಿಮಾನಾಪಘಾತದ ದುರ್ಮರಣ ಮತ್ತು ದೊಡ್ಡ ಮಗ ರಾಜೀವ್ ಗಾಂಧಿಯ ಬಾಂಬ್ ಬ್ಲಾಸ್ಟ್ ಹತ್ಯೆಗಳೆಲ್ಲ ಗೋಕುಲಾಷ್ಠಮಿಯಂದೇ ಆಗಿದೆ” ಎಂದು ಮನಸ್ಸಿಗೆ ತೋಚಿದ್ದನ್ನು ಹೇಳಿ ಸ್ಯಾಡಿಸ್ಟ್ ಉದ್ವೇಗ ಹುಟ್ಟುಹಾಕಲು ಹವಣಿಸಿದ್ದಾರೆ.

ಆದರೆ ಅನಂತ್ ಹೆಗಡೆ ಪುರಾಣ ಕಪೋಲಕಲ್ಪಿತ; ಜನರನ್ನು ಗೋವಿನ ಹೆಸರಲ್ಲಿ ಕೆರಳಿಸುವ ರಾಜಕೀಯ ಮೈಲೇಜಿನ ಹಿಕಮ್ಮತ್ತೆಂಬುದು ದಾಖಲೆಗಳು ಮತ್ತು ಇತಿಹಾಸ ಸಾರಿಹೇಳುತ್ತಿದೆ. ಕೃಷ್ಣ ಹುಟ್ಟಿದ ದಿನ-ಗೋಕುಲಾಷ್ಟಮಿ ಬರುವುದು ಶ್ರಾವಣ ಮಾಸದಲ್ಲಿ; ಅಂದರೆ ಸಾಮಾನ್ಯವಾಗಿ ಅಗಸ್ಟ್ ತಿಂಗಳಲ್ಲಿ. ಆದರೆ ಇಂದಿರಾ ಗಾಂಧಿ ಸಾವಿಗೀಡಾಗಿದ್ದು ಅಕ್ಟೋಬರ್‌ನಲ್ಲಿ; ಸಂಜಯ್ ಗಾಂಧಿ ವಿಮಾನ ದುರಂತ ನಡೆದದ್ದು ಜೂನ್‌ನಲ್ಲಿ; ರಾಜೀವ್ ಗಾಂಧಿ ಎಲ್‌ಟಿಟಿಇ ಮಾನವ ಬಾಂಬ್‌ಗೆ ಬಲಿಯಾಗಿದ್ದು ಮೇ ತಿಂಗಳಲ್ಲಿ. ಅಷ್ಟೇ ಅಲ್ಲ ಅನಂತ್ ಹೆಗಡೆಯದು ಕೋಮು ಗಲಭೆ ಹುಟ್ಟುಹಾಕುವ ಅನಂತ ಕುಚೋದ್ಯದ ಕಟ್ಟು ಕತೆ ಅಥವಾ ಅಜ್ಞಾನ ಅತಿರೇಕವೆಂಬುದನ್ನು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಅಖಿಲ ಭಾರತೀಯ ರಾಮರಾಜ್ ಪರಿಷತ್ ಸಂಸ್ಥಾಪಕ ಕರಪತ್ರಿ ಮಹಾರಾಜ್ ಗೋ ಹತ್ಯಾ ನಿಷೇಧ ಒತ್ತಾಯಿಸುವ ಹೋರಾಟ ನಡೆಸಿದ್ದೇ 1996ರಲ್ಲಿ. ಸಂಜಯ್ ಸಾವು ಸಂಭವಿಸಿದ್ದು 1980ರಲ್ಲಾದರೆ, ಇಂದಿರಾ ಕೊಲೆಯಾಗಿದ್ದು 1984ರಲ್ಲಿ. ಮಾಜಿ ಪ್ರಧಾನಿ ರಾಜೀವ್ ಹತ್ಯೆ ಸಂಭವಿಸಿದ್ದು 1991ರಲ್ಲಿ. ಕಾಲಘಟ್ಟದ ಹೊಂದಾಣಿಕೆಯೂ ಇಲ್ಲದ ಅನಂತ್ ಹೆಗಡೆ ಬೊಗಳೆ ಬಿಡುವ ಶಾಪ ಪುರಾಣಕ್ಕೇನಾದರೂ ಅರ್ಥವಿದೆಯಾ? ಕರಪತ್ರಿ ಮಹಾರಾಜ್ “ವರ”ದಿಂದೇನಾದರೂ ಅನಂತ್ ಹೆಗಡೆ ಅವಾಂತರಕ್ಕೀಡಾಗಿ ಹಾಸ್ಯಾಸ್ಪದರಾಗುತ್ತಿದ್ದಾರಾ? ಒಟ್ಟಿನಲ್ಲಿ ಕೇಸರಿ ಟಿಕೆಟ್ ಆಸೆಯಲ್ಲಿ ಅನಂತ್ ಸ್ಥಿಮಿತವನ್ನೇ ಕಳೆದುಕೊಂಡು ಬೇಕಾಬಿಟ್ಟಿ ಅಪಲಾಪಿಸುತ್ತಿದ್ದಾರೆಂದು ಜನರೀಗ ಮಾತಾಡಿಕೊಳ್ಳುವುದು ಸಾಮಾನ್ಯವಾಗಿದೆ!

ಅನಂತ್ ಹೆಗಡೆಯ ಗೋಪ್ರೇಮ ಬೂಟಾಟಿಕೆಯದು ಎಂಬುದನ್ನು ಕುಮಟಾದ “ಸೋನಿ ಪ್ರಕರಣ” ಸಾಬೀತುಪಡಿಸುವಂತಿದೆ. ಚುನಾವಣಾ ಪಂದ್ಯದಲ್ಲಿ ನಿರ್ಣಾಯಕವಾದ ಜಿಲ್ಲೆಯ ಬಹುಸಂಖ್ಯಾತ ಸಮುದಾಯದಲ್ಲಿ ಒಂದಾದ ದೀವರಲ್ಲಿ ಜಾತಿಯ ಸೂರಜ್ ನಾಯ್ಕ್ ಸೋನಿ ಅನಂತ್ ಹೆಗಡೆಯ ನಿಷ್ಠಾವಂತ ಅನುಯಾಯಿಯಾಗಿದ್ದರು. ಎಮ್ಮೆಲ್ಲೆಯಾಗುವ ಆಸೆಯಿಂದ ಕೇಸರಿ ಟಿಕೆಟ್ ಬಯಸಿದ್ದರು.ಚಂದಾವರದ ಚರ್ಚ್ ಮತ್ತು ಮಸೀದಿ ದಾಳಿಯ ರೂವಾರಿ ಎನಿಸಿದ್ದರು. ಕೇಸರಿ ಹೈಕಮಾಂಡ್ ಮೆಚ್ಚಿಸಲು ಕೌ ಬಾಯ್ ಆಗಿ ಜೈಲು ಪಾಲಾಗಿದ್ದರು. ಗುರು ಅನಂತ್ ಹೆಗಡೆ ರಕ್ಷಣೆಗೆ ಬರುತ್ತಾರೆಂದು ಕಾದರು. ಬಿಜೆಪಿಯವರ್‍ಯಾರೂ ಸಹಾಯಕ್ಕೆ ಬರಲಿಲ್ಲ; ತಿಂಗಳುಗಟ್ಟಲೆ ಜೈಲಲ್ಲಿರಬೇಕಾಯಿತು. ಹೊರಬಂದಾಗಲೂ ಅನಂತ್ ಹೆಗಡೆ ಸಾಂತ್ವನ ಹೇಳಲಿಕ್ಕೂ ಬರಲಿಲ್ಲ. ಅಸೆಂಬ್ಲಿ ಟಿಕೆಟ್ಟೂ ಸಿಗಲಿಲ್ಲ. ಬಂಡೆದ್ದು ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಸೋತು ಸುಣ್ಣವಾದರು.

ಈಗ ಅನಂತ್ ಹೆಗಡೆ ತಮ್ಮನ್ನು ಯಾಮಾರಿಸುತ್ತಲೇ ಬಂದರೆಂಬ ಸಿಟ್ಟು ದೀವರಲ್ಲಿ ಮಡುಗಟ್ಟಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೀವರು(ಈಡಿಗ) ಸಮುದಾಯವನ್ನು ಮರ್ಯಾದೆಯಿಂದ ನಡೆಸಿಕೊಂಡಿಲ್ಲವೆಂಬ ಅಸಮಾಧಾನವಿದೆ. ಈ ಆಕ್ರೋಶ ಶಿರಸಿಯಲ್ಲಿ ಕಾಗೇರಿಯ ಸಾಮ್ರಾಜ್ಯಪತನಕ್ಕೂ ಹೇತುವಾಯಿತು. ದೇವರಾಯ ನಾಯಕರ ಎಂಪಿಗಿರಿ ನಂತರ ಅಖಂಡವಾಗಿ ಬಿಜೆಪಿ ಬೆನ್ನಿಗೆ ನಿಂತಿದ್ದ ದೀವರಿಗೀಗ ಭ್ರಮನಿರಸನವಾಗಿದೆ. ಗೋರಕ್ಷಣೆ ನೆಪದಲ್ಲಿ “ಗಂಟಿ(ಜಾನುವಾರು) ಗೋಟಾವಳಿ”ಗೆ ಹಿಂದುಳಿದ ವರ್ಗದ ಹುಡುಗರನ್ನು ಹಚ್ಚಿ ಮೇಲ್ವರ್ಗದ ಹುಡುಗರು ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಉನ್ನತ ಶಿಕ್ಷಣಕ್ಕೆ ಹೋಗುವಂತೆ ನೋಡಿಕೊಂಡ ವಂಚನೆ ಈಗೀಗ ಶೋಷಿತ ಸಮುದಾಯಕ್ಕೆ ಅರಿವಾಗುತ್ತಿದೆ! ಧರ್ಮ ರಕ್ಷಣೆಯ ಉದ್ದುದ್ದ “ಪ್ರವಚನ” ಬಿಗಿಯುವ ಅನಂತ್ ಹೆಗಡೆ, ಒಬ್ಬೇ ಒಬ್ಬ ಬ್ರಾಹ್ಮಣ ಮಾಣಿಯನ್ನು ಜೈಲಿಗೆ ಹೋಗುವಂಥ ಹಿಂದುತ್ವದ ಮಿಲಿಟಂಟ್ ಆಗಿ ಏಕೆ ತಯಾರಿಸಲಿಲ್ಲ ಎಂದು ಪ್ರಜ್ಞಾವಂತ ಶೂದ್ರರೀಗ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...