Homeಕರ್ನಾಟಕಕಾರ್ಕಳ: ನಕಲಿ ಪರಶುರಾಮ ಪುತ್ಥಳಿ ಸುತ್ತ "ಅಸಲಿ" ಹಿಂದುತ್ವದ ಧರ್ಮಕಾರಣ! ಗ್ಲಾಸ್ ಫೈಬರ್ ಪರಶುರಾಮನನ್ನು ಶಾಸಕ...

ಕಾರ್ಕಳ: ನಕಲಿ ಪರಶುರಾಮ ಪುತ್ಥಳಿ ಸುತ್ತ “ಅಸಲಿ” ಹಿಂದುತ್ವದ ಧರ್ಮಕಾರಣ! ಗ್ಲಾಸ್ ಫೈಬರ್ ಪರಶುರಾಮನನ್ನು ಶಾಸಕ ಸುನಿಲ್ ಕುಮಾರ್ ಕಂಚಿನದ್ದೆಂದು ವಂಚಿಸಿದ್ದೇಕೆ?!

- Advertisement -
- Advertisement -

ಹಿಂದುತ್ವದ ಪ್ರಯೋಗಶಾಲೆ ಎಂಬ ಅಡ್ಡ ಅಬಿದಾನದಿಂದ ಗುರುತಿಸಲಾಗುತ್ತಿರುವ ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ ಅದ್ಯಾಕೋ ಒಂದರ ಹಿಂದೊಂದರಂತೆ ಸಂಘ ಪರಿವಾರ ಪ್ರಣೀತ “ಅಸಲಿ” ಹಿಂದುತ್ವ ಅನಾವರಣ ಪ್ರಕರಣಗಳು ನಡೆಯಲಾರಂಭಿಸಿದೆ. ಪುತ್ತೂರಿನ ಕೇಸರಿ ಪಡೆಯ ಬಂಡುಕೋರ ಮುಂದಾಳು ಅರುಣ್ ಕುಮಾರ್ ಪುತ್ತಿಲ ವರ್ಸಸ್ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್-ಕರಾವಳಿ ಆರೆಸ್ಸೆಸ್ ಸುಪ್ರೀಮೋ ಕಲ್ಲಡ್ಕ ಪ್ರಭಾಕರ ಭಟ್ ತಂಡಗಳ ಕಿತ್ತಾಟ, ಕಾರ್ಕಳದ ಭಜರಂಗಿ ಶಾಸಕ ಸುನಿಲ್ ಕುಮಾರ್ ಮತ್ತು ಶ್ರೀರಾಮ ಸೇನೆಯ ಕಮಾಂಡರ್ ಪ್ರಮೋದ್ ಮುತಾಲಿಕ್ ಮೇಲಾಟ, ಬೆಳ್ತಂಗಡಿಯ ವಿವಾದಗ್ರಸ್ಥ ಶಾಸಕ ಹರೀಶ್ ಪೂಂಜ ಗುಂಪು ಹಾಗು ಹಳೆಯ ನುರಿತ ಕೇಸರಿ ಕಲಿಗಳಾದ ಮಹೇಶ್ ತಿಮರೋಡಿ, ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಬೆಟಾಲಿಯನ್‌ನ ಪ್ರಚ್ಛನ್ನ ಕಾಳಗ, ಧರ್ಮಸ್ಥಳದ ಮುಗ್ಧ ಬಾಲಕಿ ಸೌಜನ್ಯ ರೇಪ್ ಅಂಡ್ ಮರ್ಡರ್ ಮರುತನಿಖೆಗಾಗಿ ನಡೆಯುತ್ತಿರುವ ಜನಾಂದೋಲನ-ಹೀಗೆ ಪ್ರತಿ ಹೋರಾಟದಲ್ಲಿನ ಅದೃಶ್ಯ ಕೇಸರಿ ಸಂಘರ್ಷದ ಘಟನಾವಳಿಯ ಸರಣಿಗೀಗ ಕಾರ್ಕಳದ ಖೋಟಾ ಪರಶುರಾಮ ಥೀಮ್ ಪಾರ್ಕ್ “ಧರ್ಮಸಂಕಟ” ಸೇರಿಕೊಂಡು ಭರ್ಜರಿ ಸುದ್ದಿ-ಸದ್ದು ಮಾಸಡುತ್ತಿದೆ.

ಏನಿದು ಥೀಮ್ ಪಾರ್ಕ್?

ವಿಭಜಕ ರಾಜಕಾರಣದ ದೂ(ದು)ರಾಲೋಚನೆಯದು ಎನ್ನಲಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆ ಕಟ್ಟರ್ ಹಿಂದುತ್ವದ ವ್ಯಾವಹಾರಿಕ “ಸಿದ್ಧಾಂತ”ದ ಮೂಲಕ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಕಾರ್ಕಳದ ಶಾಸಕ ವಿ.ಸುನಿಲ್ ಕುಮಾರ್‌ರ ಕನಸಿನ ಕೂಸು. ಪುರಾಣಪುರುಷ ಪರಶುರಾಮ ತುಳುನಾಡಿನ ಸೃಷ್ಟಿಕರ್ತನೆಂಬ ಸ್ಥಳೀಯರ ಧಾರ್ಮಿಕ ನೆಲೆಯ ಭಾವನಾತ್ಮಕ ನಂಬುಗೆಯನ್ನು ಬಂಡವಾಳ ಮಾಡಿಕೊಂಡು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ದುಬಾರಿ ಪ್ರಾಜೆಕ್ಟ್‌ಅನ್ನು ಸುನಿಲ್ ಕುಮಾರ್ ಹೆಣೆದು ಬಹಳಷ್ಟು ಲಾಭ ಗಳಿಸಿದರೆಂಬ ಆರೋಪ ಕರಾವಳಿಯಲ್ಲಿ ಸಾಮಾನ್ಯವಾಗಿದೆ. ಅದು ಸುನಿಲ್ ಕುಮಾರ್ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಸರಕಾರದಲ್ಲಿ ಇಂಧನ ಮತ್ತು ಕನ್ನಡ-ಸಂಸ್ಕೃತಿ ಸಚಿವನಾಗಿದ್ದ ಸಮಯ; ವ್ಯಾಪಕ ಭ್ರಷ್ಟಾಚಾರ, ಪ್ರಜಾಪೀಡಣೆಯೇ ಮುಂತಾದ ಜೀವವಿರೋಧಿ ಆಡಳಿತದಿಂದ ಜನಸಾಮಾನ್ಯರದಷ್ಟೇ ಅಲ್ಲ, ಹುಟ್ಟಾ ಹಿಂದುತ್ವವಾದಿ ಕಾರ್ಯಕರ್ತರದೇ ತಿರಸ್ಕಾರ-ತಾತ್ಸಾರಕ್ಕೆ ತುತ್ತಾಗಿದ್ದ ಸುನಿಲ್ ಕುಮಾರ್ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಸೋಲುವ ಆತಂಕದಲ್ಲಿದ್ದರು. ಏನಾದರೂ ಮಾಡಿ ಮತ್ತೆ ಎಮ್ಮೆಲ್ಲೆ ಆಗಲೇಬೇಕೆಂಬ ಯೋಚನೆಯಲ್ಲಿ ಸುನಿಲ್ ಕುಮಾರ್ ದುಂದು ವೆಚ್ಚ-ಅಬ್ಬರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳ ಮೂಲಕ ಜನರಿಗೆ ಮಂಕುಬೂದಿ ಎರಚಲು ಸ್ಕೆಚ್ ಹಾಕಿದ್ದರು. ಆಗ ಸುನಿಲ್ ಕುಮಾರ್ ಸಲಹೆಗಾರರಿಗೆ ಹೊಳೆದಿದ್ದೇ ಈ ಪರಶುರಾಮ ಥೀಮ್ ಪಾರ್ಕ್ ಮತ್ತು ಕಾರ್ಕಳ ಉತ್ಸವಗಳಂಥ ಮೂರ್ನಾಲ್ಕು ದಿನಗಳ “ಜಾತ್ರೆ ಕಾರ್ಯಕ್ರಮಗಳು ಎನ್ನಲಾಗುತ್ತಿದೆ.

ಪರಶುರಾಮ ಥೀಮ್ ಪಾರ್ಕ್‌ನಿಂದ ಕಾರ್ಕಳ ತಾಲೂಕಿನ ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ದಿಕ್ಕು-ದೆಸೆಯೇ ಬದಲಾಗಲಿದೆ ಎಂಬ ದೊಡ್ಡ ಪ್ರಚಾರ ನಡೆಸಿದ್ದ ಸುನಿಲ್ ಕುಮಾರ್ ಚುನಾವಣೆಗೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದರು. ಬರೋಬ್ಬರಿ ಹದಿನಾಲ್ಕು ವರೆ ಕೋಟಿ ರೂಪಾಯಿಗಳ ಧರ್ಮಾಧಾರಿತ ಪ್ರವಾಸೋದ್ಯಮದ ಭರ್ಜರಿ ಯೋಜನೆಯಿದು. ಕಾರ್ಕಳದ ಬೈಲೂರು ಬಳಿಯ 400 ಅಡಿ ಎತ್ತರದ ಉಮ್ಮಿಕಲ್ ಬೆಟ್ಟದ ಬೃಹತ್ ಬಂಡೆಯ ಮೇಲೆ 33 ಅಡಿಯ ಕಂಚಿನ ಮಿಂಚು ನಿರೋಧಕ ಪರಶುರಾಮನ ವಿಗ್ರಹ ಸ್ಥಾಪನೆ; ಸುತ್ತಲಿನ 1.58 ಎಕರೆ ಪ್ರದೇಶದಲ್ಲಿ ಉದ್ಯಾನವನ, ಬಯಲು ರಂಗಮಂದಿರ, ಭಜನಾ ಮಂದಿರ, ಆಧುನಿಕ ಆಡಿಯೋ ವಿಷುವಲ್ ಮ್ಯೂಸಿಯಂ ಮತ್ತು ಪರಶುರಾಮನ ಜೀವನ ವೃತ್ತಾಂತದ ಗ್ಯಾಲರಿ ನಿರ್ಮಾಣದ ನೀಲನಕ್ಷೆ ಹಾಕಲಾಗಿತ್ತು. ಈ ಕಾಮಗಾರಿಯನ್ನು ಸರಕಾರಿ ಸ್ವಾಮ್ಯದ “ನಿರ್ಮಿತಿ ಕೇಂದ್ರ”ಕ್ಕೆ ವಹಿಸಲಾಗಿತ್ತು. 15 ಟನ್ ಭಾರದ ಪರಶುರಾಮನ ಶುದ್ಧ ಕಂಚಿನ ಮೂರ್ತಿ ನಿರ್ಮಾಣಕ್ಕೆ 2.4 ಕೋಟಿ ರೂ.ಗಳ ಗುತ್ತಿಗೆಯನ್ನು ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕರಿಗೆ ವಹಿಸಲಾಗಿತ್ತು.

ಪರಶುರಾಮನ ಡೆಮೋ ಪೀಸ್!

ಅಸೆಂಬ್ಲಿ ಚುನಾವಣೆಗೆ ಐದಾರು ತಿಂಗಳಷ್ಟೇ ಬಾಕಿಯಿತ್ತು; ಸ್ಥಳೀಯ ಶಾಸಕರೂ ಆದ ಮಂತ್ರಿ ಸುನಿಲ್ ಕುಮಾರ್ ಥೀಮ್ ಪಾರ್ಕ್ ಕೆಲಸ-ಕಾಮಗಾರಿ ಬೇಗ ಆರಂಭಿಸಲು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಕುಮಾರ್‌ಗೆ ಒತ್ತಡ ಹಾಕುತ್ತಿದ್ದರು; ತರಾತುರಿಯಲ್ಲಿ ಕಂಚಿನದೆಂದು ಹೇಳಲಾದ ಪರಶುರಾಮನ ಮೂರ್ತಿಯನ್ನು ತಯಾರಿಕೆಗೆ ಆದೇಶ ನೀಡಿದ ನಲವತ್ತೇ ದಿನಗಳಲ್ಲಿ ಅದನ್ನು ತಂದು ನಿಲ್ಲಿಸಲಾಯಿತು. ಶೇಕಡಾ 50ರಷ್ಟೂ ಕೆಲಸವಾಗದ ಥೀಮ್ ಪಾರ್ಕ್‌ಗೆ ಸುಣ್ಣ-ಬಣ್ಣ ಬಳಿದು ಉದ್ಘಾಟನೆಗೆ ಸಿದ್ಧಗೊಳಿಸಲಾಯಿತು. ಸಾಕ್ಷಾತ್ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೇ ಲೋಕಾರ್ಪಣೆಗೆ ಬಂದರು. ಜತೆಗೆ ಬಿಜೆಪಿಯ ಲೀಡರ್‌ಗಳಾದ ಸಿ.ಟಿ.ರವಿ, ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಿನಿಮಾ ನಟ-ನಿರ್ದೇಶಕ ರಿಶಬ್ ಶೆಟ್ಟಿ ಮುಂತಾದ ಸೆಲಿಬ್ರಿಟಿಗಳು ಈ ಅಪೂರ್ಣ-ಅಸಮರ್ಪಕ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಗೆ ಸಾಕ್ಷಿಯಾದರು. ಮಂತ್ರಿ ಸುನಿಲ್ ಕುಮಾರ್‌ರನ್ನು ಗುಣಗಾನ ಮಾಡುವ ಮೂರು ದಿನದ ಧಾರ್ಮಿಕ-ಸಾಂಸ್ಕೃತಿಕ ಅದ್ದೂರಿಯ ಜನಜಾತ್ರೆಯೇ ನಡೆಯಿತು; ಕಾರ್ಯಕ್ರಮದಲ್ಲಿ ಸಂಭ್ರಮದಲ್ಲಿ ಓಡಾಡಿದ ಮಂತ್ರಿ ಸುನಿಲ್ ಕುಮಾರ್ ಸಾವಿರಾರು ಜನರಿಂದ ಶಂಖ ಊದಿಸಿ ಧರ್ಮಕಾರಣದ ಚುನಾವಣಾ ಪ್ರಚಾರ ರಥಕ್ಕೆ ಪರೋಕ್ಷವಾಗಿ ಚಾಲನೆ ಕೊಟ್ಟಿದ್ದರೆಂದು ಕಾರ್ಕಳದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ (27.01.23) ಕೆಲವೇ ದಿನಗಳಲ್ಲಿ ಅನುಮಾನ, ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಶುರುವಾಯಿತು. ಇದೊಂದು ನಕಲಿ ಪ್ರತಿಮೆ; ಮಿಂಚು ನಿರೋಧಕ ಕಂಚಿನದ್ದೆಂದು ಸುನಿಲ್ ಕುಮಾರ್ ಕಾರ್ಕಳದ ಜನರನ್ನು ಯಾಮಾರಿಸಿದ್ದಾರೆ; ಜನರ ಧಾರ್ಮಿಕ ಭಾವುಕತೆಯನ್ನು ಇಲೆಕ್ಷನ್ ಗೆಲ್ಲಲು ಬಳಸಿಕೊಂಡು ಮೋಸ ಮಾಡಿದ್ದಾರೆ; ಜನರ ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಾರೆ ಎಂಬ ಪುಕಾರುಗಳು ಭುಗಿಲೇಳತೊಡಗಿತು. ನೋಡನೋಡುತ್ತಿದ್ದಂತೆಯೇ ಪರಶುರಾಮ ಪ್ರತಿಮೆಯ ಕಾಲಿನಲ್ಲಿ ಬಿರುಕು ಕಾಣಿಸಿಕೊಂಡಿತು; ಪರಶುರಾಮನ ಕೊಡಲಿಯ ತುಂಡೊಂದು ಹಾರಿಹೋಯಿತು! ಮೂರ್ತಿಯ ಬಣ್ಣ ಮಾಸಲಾರಂಭಿಸಿತು. ಈ ದುರ್ಬಲ ಮೂರ್ತಿ ಉರುಳುವ ಭೀತಿ ಜನರಲ್ಲಿ ಮೂಡಿತು. ಮೂರ್ತಿಯೇನಾದರೂ ಕುಸಿದರೆ ಗುಡ್ಡದ ಬುಡದಲ್ಲಿರುವ 15-20 ಮನೆಗಳ ಜನಜೀವನಕ್ಕೆ ಗಂಡಾಂತರ ಎಂಬ ಆತಂಕ ಶುರುವಾಯಿತು. ಆಗ ಗಡಿಬಿಡಿಗೆ ಬಿದ್ದ ನಿರ್ಮಿತಿ ಕೇಂದ್ರ ಅಧಿಕಾರಿಗಳು ಮತ್ತು ತಾಲೂಕಾಡಳಿತ ಪ್ರತಿಮೆಯ ಸುತ್ತ ಕಬ್ಬಿಣದ ಸರಳುಗಳ ಸ್ಟಾಂಡ್ ಕಟ್ಟಿದರು; ತಿಂಗಳಿಗೊಮ್ಮೆ ವಿಗ್ರಹಕ್ಕೆ ಕಂಚಿನ ಕಲರ್ ಬಳಿದು ಪರಶುರಾಮ ಮಿರುಗುವಂತೆ ನೋಡಿಕೊಂಡು ಮಂತ್ರಿಗಳ ಬಣ್ಣ ಬಯಲಾಗದಂತೆ ಎಚ್ಚರ ವಹಿಸಿದರು ಎಂದು ಸ್ಥಳೀಯ ಸಂಘ ಪರಿವಾರದ ಬಂಡುಕೋರರು ಇವತ್ತಿಗೂ ಡಂಗುರ ಸಾರುತ್ತಲೇ ಇದ್ದಾರೆ.

ಇದು ಪಕ್ಕಾ ನಕಲಿ ಪ್ರತಿಮೆ; 15 ಟನ್ ಕಂಚು ಬಳಸಿ ತಯಾರಿಸಿದ ವಿಗ್ರಹದಂತಿದು ಅನ್ನಿಸುತ್ತಿಲ್ಲ. ಮೂರ್ತಿಯನ್ನು ಬೆಂಗಳೂರಿಂದ ತರಿಸಿದ್ದಲ್ಲ; ಸ್ಥಳೀಯ ಕಲಾವಿದರ್‍ಯಾರೋ ನಿರ್ಮಿಸಿದ್ದಾರೆ; ಇದು ಪ್ಲಾಸ್ಟರ್ ಆಫ್ ಪ್ಯಾರಿಸ್ ಪುತ್ಥಳಿ ಎಂಬ ಸಂಶಯ, ಆರೋಪಗಳ ಚರ್ಚೆಗಳು ಜೋರಾಗತೊಡಗಿತು. ಅದೇ ಹೊತ್ತಿಗೆ ಅಸೆಂಬ್ಲಿ ಇಲೆಕ್ಷನ್ ಘೋಷಣೆಯಾಯಿತು. ಚುನಾವಣೆಯ ಆರ್ಭಟದಲ್ಲಿ ಡೆಮೋ ಪರಶುರಾಮ ಪುರಾಣ ಕೊಂಚ ಗೌಣವಾಯಿತು; ಚುನಾವಣಾ ರಣರಂಗದಲ್ಲಿ ಸಚಿವ ಸುನಿಲ್‌ಗೆ ಸೆಡ್ಡು ಹೊಡೆದು ಮುಖಾಮುಖಿಯಾಗಿ ನಿಂತಿದ್ದ ಉಗ್ರ ಬಲಪಂಥೀಯ ಆಕ್ರಮಣಕಾರ-ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ದಿನಕ್ಕೊಂದು ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ, ಢೋಂಗಿ ಹಿಂದುತ್ವ ಆರೋಪ ಎಂದು ದಾಖಲೆ ಬಿಡುಗಡೆ ಮಾಡುತ್ತ, ತಾರಕ ಸ್ವರದಲ್ಲಿ ಭಾಷಣ ಬಿಗಿಯುತ್ತಿದ್ದುದೇ ಆಗ ರೋಚಕತೆಯ ಸಮಾಚಾರವಾಗಿತ್ತು. ಕೇಸರಿ ಕಮಾಂಡರ್ ಮುತಾಲಿಕ್ ದಾಳಿಯಿಂದ ಸುನಿಲ್ ಅದ್ಯಾವ ಪರಿ ತತ್ತರಿಸಿ ಹೋದರೆಂದರೆ, ಗೆಲ್ಲಲು ಲೀಟರ್‌ಗಟ್ಟಲೆ ಬೆವರು, ಟನ್‌ಗಟ್ಟಲೆ ಕಾಸು ಹರಿಸಬೇಕಾಯಿತೆಂದು ಸ್ಥಳೀಯ ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಸುನಿಲ್‌ರ ಲಾಭಕೋರ ಹಿಂದುತ್ವದಿಂದ ಬೇಸತ್ತು ಸಿಡಿದೆದ್ದಿತ್ತೆನ್ನಲಾದ ಹಿಂದುತ್ವದ ಒಂದು ಬಣವಂತೂ ಸುನಿಲ್‌ರನ್ನು ಮಾಜಿ ಮಾಡಲು ಪಣತೊಟ್ಟಿತ್ತು. ಸೋತೇ ಹೋದರೆಂದು ಭಾವಿಸಿದ್ದ ಸುನಿಲ್ ಹಿಂದುತ್ವದ “ಕರ್ಮ” ಭೂಮಿಯಲ್ಲೇ ಕೂದಲೆಳೆ ಅಂತರದಲ್ಲಿ ಬಚಾವಾದರು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೇಸರಿ ಕ್ಯಾಂಡಿಡೇಟ್‌ಗಳೆಲ್ಲ ದೊಡ್ಡ ಅಂತರದಲ್ಲೇ ಗೆದ್ದರೆ ಸುನಿಲ್ ಮಾತ್ರ ತಿಣುಕಾಡಿ ಕೇವಲ 4,602 ಮತದಂತರದಿಂದ ಗೆದ್ದು ಚುನಾಯಿತರಾದರು.

ಸುನಿಲ್ ಬೆನ್ನುಬಿದ್ದ ಕೇಸರಿ ಕೇಡರ್!

ನಕಲಿ ಪರಶುರಾಮ ಮೂರ್ತಿ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಕಂಗಾಲಾಗಿದ್ದ ಸಚಿವ ಸುನಿಲ್ ಚುನಾವಣೆ ಮುಗಿಯುವವರೆಗೆ ಹೇಗೆಹೇಗೋ ಪರಿಸ್ಥತಿ ನಿಭಾಯಿಸಿದರು. ಚುನಾವಣೆಯಲ್ಲಿ ಗೆದ್ದಿದ್ದೇ ತಡ ಗದ್ದಲ ಶುರುಹಚ್ಚಿಕೊಂಡರು! ಚುನಾವಣಾ ರಣಕಣದಲ್ಲಿ ತನ್ನನ್ನು ಅಡಿಗಡಿಗೆ ಕಾಡಿದ ಮುತಾಲಿಕ್ ಮತ್ತವರನ್ನು ಬೆಂಬಲಿಸಿದ ಸ್ಥಳೀಯ ಹಿಂದುತ್ವ ತಂಡದ ಮೇಲೆ ಸುನಿಲ್ ವಿಜಯೋತ್ಸವ ಭಾಷಣದಲ್ಲಿ ಮುರಕೊಂಡು ಬಿದ್ದರು. ಮುತಾಲಿಕ್ ಹಿಂದುತ್ವದ ಮುಖವಾಡದ ಡೀಲ್ ಮಾಸ್ಟರ್ ಎಂದು ಮೂದಲಿಸಿದರು; ಉತ್ತರ ಕರ್ನಾಟಕದ ಹಿಂದುಗಳನ್ನೇ ಹಣಕ್ಕಾಗಿ ಟೈಗರ್ ಗ್ಯಾಂಗ್‌ನಿಂದ ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಹಲವು ಬಾರಿ ಮಾಡಿದರು.

ಪ್ರಮೋದ್ ಮುತಾಲಿಕ್

ಇದರಿಂದ ಕೆರಳಿದ ಮುತಾಲಿಕ್ ಹಿಂಬಾಲಕರು ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ, ಉದ್ಘಾಟನಾ ಕಾರ್ಯಕ್ರಮದ ಹೆಸರಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದೆ; ಕಂಚಿನದೆಂದು ಗ್ಲಾಸ್ ಫೈಬರ್‌ನ ಪರಶುರಾಮ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿಷ್ಣುವಿನ ಆರನೇ ಅವತಾರವೆಂದು ನಂಬುವ ಪರಶುರಾಮನಿಗೆ ಅಪಚಾರಮಾಡಿ ಹಿಂದುಗಳ ಭಾವನೆಯನ್ನು ಘಾಸಿಗೊಳಿಸಲಾಗಿದೆ; ಪುತ್ಥಳಿಯ ನೈಜತೆ-ಪರಿಶುದ್ಧತೆ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಹೋರಾಟ ಆರಂಭಿಸಿದರು; ಬಂಡುಕೋರ ಕೇಸರಿ ತಂಡದ ಪ್ರಮುಖ ಕಾರ್ಯಕರ್ತೆ ದಿವ್ಯಾ ನಾಯಕ್ ಮಾಹಿತಿ ಹಕ್ಕು ಕಾಯಿದೆಯಡಿ ಪರಶುರಾಮ್ ಥೀಮ್ ಪಾರ್ಕ್‌ಗೆ ಸಂಬಂಧಿಸಿದ ದಾಖಲೆ ಪಡೆದುಕೊಂಡರು. ಈ ಒಂದೊಂದು ದಾಖಲೆ ಪರಶುರಾಮ ಪ್ರತಿಮೆ ತಯಾರಿಕೆಯ ಖೋಟಾ ಕೊಟೇಶನ್‌ನಿಂದ ಹಿಡಿದು ಪಾರ್ಕ್ ನಿರ್ಮಾಣದ ಕಾಮಗಾರಿಯವರೆಗೆ, ಅಲ್ಲಿಂದ ಉದ್ಘಾಟನಾ ಸಮಾರಂಭದ ಮೋಜು-ಮಜಾವರೆಗಿನ ಪ್ರತಿ ಹಂತದಲ್ಲಿ ಕೋಟಿಗಳ ಲೆಕ್ಕದ ಅವ್ಯವಹಾರ, ಕಾನೂನು ಉಲ್ಲಂಘನೆ ಮತ್ತು ಹಿಂದುತ್ವದ ಮುಖವಾಡದಡಿ ಮೋಸ-ವಂಚನೆ ಯೋಜನಾಬದ್ಧವಾಗಿ ನಡೆದಿರುವುದನ್ನು ಎಳೆಎಳೆಯಾಗಿ ಸ್ಪಷ್ಟಪಡಿಸುವಂತಿತ್ತು. ಹಿಂದುತ್ವದ ಭಿನ್ನಮತೀಯರು ಈ ದಾಖಲೆ, ಪುರಾವೆಗಳನ್ನು ಬಹಿರಂಗಪಡಿಸಿ ಹಿಂದುತ್ವದ ರಾಜಕಾರಣಿ ಸುನಿಲ್ ವಿರುದ್ಧ ಯುದ್ಧ ಸಾರಿಬಿಟ್ಟರು!

ಪ್ರತಿಭಟನೆಯ ಧ್ವನಿಗೆ ಶಾಸಕ ಸುನಿಲ್, ಡಿಸಿ, ಎಸಿ, ತಹಶೀಲ್ದಾರ್ ಮತ್ತು ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಬೆಚ್ಚಿಬಿದ್ದರು! ಜಿಲ್ಲಾಡಳಿತ ಥೀಮ್ ಪಾರ್ಕ್‌ಗೆ ಸಾರ್ವಜನಿಕರು ಪ್ರವೇಶಿಸದಂತೆ 2023ರ ಜೂನ್ 25ರಂದು ಆದೇಶ ಹೊರಡಿಸಿತು; ಪರಶುರಾಮ ಪ್ರತಿಮೆ ಮತ್ತು ಪಾರ್ಕ್‌ನ ನ್ಯೂನತೆ ಜನರ ಕಣ್ಣಿಂದ ತಪ್ಪಿಸುವ ತಂತ್ರಗಾರಿಕೆ ಇದಾಗಿತ್ತೆನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಜಿಲ್ಲಾಡಳಿತ ಮಾತ್ರ ಬಿಜೆಪಿ ಶಾಸಕ ಸುನಿಲ್ ಮರ್ಜಿ-ಮುಲಾಜಿನಲ್ಲಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಒಂದೆಡೆ ನಕಲಿ ಪ್ರತಿಮೆ ಮತ್ತು ಶಾಸಕ ಸುನಿಲ್ ಕುಮಾರ್‌ರ ಢೋಂಗಿ ಹಿಂದುತ್ವ ಮತ್ತು ಅವ್ಯವಹಾರ ಬಯಲಾಗಿಸುವ ಪ್ರತಿಭಟನೆ ಜೋರಾದರೆ, ಮತ್ತೊಂದೆಡೆ ಜಿಲ್ಲಾಡಳಿತ ರಿಪೇರಿ ನೆಪದಲ್ಲಿ ಪರಶುರಾಮನ ಮೂರ್ತಿಗೆ ಕಪ್ಪು ಟಾರ್ಪಲ್‌ನಿಂದ ಸುತ್ತಿ ದೂರದಿಂದಲೂ ಕರ್ಮಕಾಂಡ ಕಾಣದಂತೆ ನೋಡಿಕೊಂಡಿದೆ ಎಂದು ಜನರು ಹೇಳುತ್ತಾರೆ.

ಇದನ್ನೂ ಓದಿ: ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಉ.ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಮಾಡಿಸಿದ್ದಾರೆ: ಸುನೀಲ್ ಕುಮಾರ್

ಶಾಸಕ ಸುನಿಲ್‌ರ ರಾಜಕೀಯ ಉತ್ಕರ್ಷೆಗೆ ಕೋಟಿಕೋಟಿ ಸರಕಾರಿ ಹಣ ಪೋಲುಮಾಡಿ ಹಿಂದುತ್ವದ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚಿದರೂ ತನಿಖೆ ನಡೆಸಲು ಕಾಂಗ್ರೆಸ್ ಸರಕಾರ ಉದಾಸೀನ ತೋರಿಸಿದ್ದು ಪ್ರತಿಭಟನೆಯ ಕಾವನ್ನು ಹೆಚ್ಚಿಸಿತು. ತನಿಖೆಗೆ ಆಗ್ರಹಿಸಿ ಕೇಸರಿ ಸಂಕುಲ ಪರಶುರಾಮನ ಪ್ರತಿಮೆ ಎದುರಲ್ಲೇ ಉಪವಾಸ ಸತ್ಯಾಗ್ರಹಕ್ಕೆ ಆರಂಭಿಸಿತು. ಶಾಸಕ ಸುನಿಲ್ ಹೋರಾಟಗಾರರ ಬಳಿ ತಹಶೀಲ್ದಾರ್ ಮತ್ತು ಸಬ್ ಇನ್‌ಸ್ಪ್ಪೆಕ್ಟರ್‌ಗಳನ್ನು ಕಳಿಸಿ ಧರಣಿ ನಿಲ್ಲಿಸುವ ಪ್ರಯತ್ನ ಮಾಡಿಸಿದರು; ಆದರೆ ಪರಶುರಾಮನ ವಿಗ್ರಹದ ನೈಜತೆಯ ತನಿಖೆ ಆಗುವತನಕ ಕದಲುವುದಿಲ್ಲವೆಂದು ಹೋರಾಟಗಾರರು ಖಡಾಖಂಡಿತವಾಗಿ ಹೇಳಿದರು.

ಆನಂತರ ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ಸಮಾಧಾನಿಸಲು ಮುಂದಾಯಿತು. ಉಪ ವಿಭಾಗಾಧಿಕಾರಿಣಿ ಜಿಲ್ಲಾಧಿಕಾರಿ ಪರವಾಗಿ ಧರಣಿನಿರತರಲ್ಲಿಗೆ ಬಂದು ಒಂದು ವಾರದಲ್ಲಿ ತನಿಖೆ ಮಾಡಿಸುವ ಭರವಸೆ ನೀಡಿದರು. ಎಸಿ ಮಾತು ನಂಬಿ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದ ಹೋರಾಟಗಾರರು ಬೇಸ್ತುಬಿದ್ದಿದ್ದರು! ತನಿಖೆ ನಡೆಸುವ ಬದಲು ತಪ್ಪಿತಸ್ಥರನ್ನು ಕಾಪಾಡಲು ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಅಧಿಕಾರಿಗಳು ರಾತ್ರಿ ಬೆಳಗಾಗುವುದರಲ್ಲಿ ನಾಪತ್ತೆ ಮಾಡಿಬಿಟ್ಟರು! ಥೀಮ್ ಪಾರ್ಕ್‌ನಲ್ಲೀಗ ಗ್ಲಾಸ್ ಫೈಬರ್ ತುಂಡುಗಳು ಬಿದ್ದುಕೊಂಡಿವೆ. ಅಲ್ಲಿಗೆ ಶಾಸಕ ಸುನಿಲ್ ತರಾತುರಿಯಲ್ಲಿ ಪ್ರತಿಷ್ಠಾಪಿಸಿದ ಪರಶುರಾಮ ವಿಗ್ರಹದ ಸೊಂಟದ ಕೆಳಗಿನ ಭಾಗ ಮಾತ್ರ ಕಂಚು; ಮೇಲಿನದು ಪಿಒಪಿ (ಗ್ಲಾಸ್ ಫೈಬರ್) ಎಂಬುದು ನಿಸ್ಸಂಶಯವಾಗಿ ಸಾಬೀತಾದಂತಾಗಿದೆ!

ಕಾಂಗ್ರೆಸ್ ಸರಕಾರವೇಕೆ ಸುಮ್ಮನಿದೆ?!

ಅಧಿಕಾರಗಳೀಗ ಸುಳ್ಳು ಸಬೂಬು ಹೆಣೆಯುತ್ತಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಪ್ರತಿಮೆ ಪೂರ್ಣವಾಗಿ ಸಿದ್ಧವಾಗಿರಲಿಲ್ಲ. ಅಂದಿನ ಆಡಳಿತಗಾರ ಒತ್ತಡದಿಂದ ಅಪೂರ್ಣ ಮೂರ್ತಿ ನಿಲ್ಲಿಸಲಾಗಿತ್ತು; ಪರಶುರಾಮನ ಬಲಗೈನಲ್ಲಿರುವ ಕೊಡಲಿ ತುಂಬ ಭಾರವಾಗಿದೆ. ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಬಲಗೈಗೆ ಇಲ್ಲ; ಕೊಡಲಿಯನ್ನು ಜುಟ್ಟಿಗೆ ಸೇರಿಸಿ ಪ್ರತಿಮೆಯನ್ನು ಸುಭದ್ರಗೊಳಿಸಬೇಕಿದೆ. ಪ್ರತಿಮೆಯನ್ನು ಪುನರ್ ವಿನ್ಯಾಸಗೊಳಿಸಬೇಕಾಗಿದೆ; ಮಿಂಚು ನಿರೋಧಕ ಅಳವಡಿಸಬೇಕಾಗಿದೆ. ಹಾಗಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾಜಿ ಮಂತ್ರಿ ಸುನಿಲ್ ಹೇಳಿಕೊಟ್ಟಂತೆ ಕೇಳಿ, ಅಕ್ರಮಮಾಡಿ ಹಳ್ಳಕ್ಕೆ ಬಿದ್ದಿದ್ದಾರೆ; ಈಗ ತಮ್ಮ ಲೋಪದೋಷ, ಅಪರಾಧಗಳನ್ನು ಮರೆಮಾಚಲು ಹೀಗೆ ಸುಳ್ಳು ಹೇಳುತ್ತಿದ್ದಾರೆಂದು ಬಂಡುಕೋರ ಕೇಸರಿ ಪಡೆಯವರು ಮತ್ತು ಸ್ಥಳೀಯ ಕಾಂಗ್ರೆಸ್ ವಕ್ತಾರ-ಪುರಸಭೆ ಸದಸ್ಯ ಶುಭದ ರಾವ್ ಹೇಳುತ್ತಾರೆ. ಪ್ರತಿಮೆ ಸುತ್ತ ಕಬ್ಬಿಣದ ಸ್ಟಾಂಡ್ ಕಟ್ಟಿದ್ದೇಕೆ? ಆನಂತರ ಟಾರ್ಪಲ್‌ನಿಂದ ಮೂರ್ತಿ ಮುಚ್ಚಿದ್ದೇಕೆ? ಪುತ್ಥಳಿಯ ಮೇಲ್ಭಾಗ ಕದ್ದುಮುಚ್ಚಿ ಕೆಳಗಿಳಿಸಿ ಕಂಟೇನರ್‌ನಲ್ಲಿ ಅಜ್ಞಾತ ಸ್ಥಳಕ್ಕೆ ಸಾಗಿಸಿದ್ದೇಕೆ? ಸೊಂಟದ ಕೆಳಗಿನ ಭಾಗ ಹಾಗೇ ಉಳಿಸಿದ್ದೇಕೆ? 10 ಟನ್ ತೂಕದ ಪ್ರತಿಮೆಯ ಮೇಲ್ಭಾಗ ಅಷ್ಟು ಸಲಭವಾಗಿ ಇಳಿಸಲು ಸಾಧ್ಯವೇ? ಎಂದು ಸುನಿಲ್ ವಿರುದ್ಧ ಸೆಟೆದು ನಿಂತಿರುವ ಹೋರಾಟಗಾರರು ವಾದಿಸುತ್ತಾರೆ.

ನಕಲಿ ಪರಶುರಾಮ ಪ್ರತಿಮೆ ರಚನೆಯ ಗುತ್ತಿಗೆ, ಪ್ರತಿಷ್ಠಾಪನೆ ಹಾಗು ಥೀಮ್ ಪಾರ್ಕ್ ಕಾಮಗಾರಿಯ ಸಕಲ ಗೋಲ್‌ಮಾಲ್‌ನ “ಕಾರ್ಯಾಂಗ” ಸೂತ್ರಧಾರ ಉಡುಪಿಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಎಂಬ ಆರೋಪ ಕಾರ್ಕಳದಲ್ಲಿ ಟಾಕ್ ಆಫ್ ದಿ ಟೌನ್. ಜಿಲ್ಲಾ ಉಸ್ತುವಾರಿ ಮಂತ್ರಿಣಿ ಲಕ್ಷ್ಮೀ ಹೆಬ್ಬಾಳ್ಕರ್ ಥೀಮ್ ಪಾರ್ಕ್‌ಗೆ ಪರಶುರಾಮ ಪುತ್ಥಳಿ ಪರಿಶೀಲನೆಗೆ ಹೋದಾಗ ಈ ಅರುಣ್ ಕುಮಾರ್ ಅಪರಾಧಿ ಪ್ರಜ್ಞೆಯಲ್ಲಿ ನಿಂತಿದ್ದರು; ಮಂತ್ರಿಣಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸಿದರು ಎಂದು ಹೋರಾಟಗಾರರು ಹೇಳುತ್ತಾರೆ. ಪರಶುರಾಮ ಅರ್ಧ ಕಂಚು-ಇನ್ನರ್ಧ ಫೈಬರ್ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣವನ್ನು ತಾರ್ಕಿಕ ಅಂತ್ಯ ತಲುಪಿಸುವ ಪ್ರಯತ್ನ ಮಾಡಲಿಲ್ಲ; ಬೆಳಗಾವಿಯಲ್ಲಿ ಸಂಘ ಪರಿವಾರಿಯೊಬ್ಬನನ್ನು ಸರಕಾರಿ ಸಲಹೆಗಾರನಾಗಿ ನೇಮಿಸಿಕೊಂಡಿರುವ ಸಚಿವೆ ಲಕ್ಷ್ಮೀಯವರಿಗೆ ಉಡುಪಿ ಜಿಲ್ಲೆಯ ಸಂಚುಕೋರ ಹಿಂದುತ್ವ ನಿಯಂತ್ರಿಸುವ ಬದ್ಧತೆಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಸಚಿವೆ ಲಕ್ಷ್ಮೀಯವರ ಮೊಗಮ್ ಮೌನ ಮತ್ತು ಸಿದ್ದು ಸರಕಾರದ ಉದಾಸೀನ, ನಕಲಿ ಪರಶುರಾಮ ನಿಲ್ಲಿಸಿದ ಆರೋಪಿ ಶಾಸಕ ಸುನಿಲ್ ಕುಮಾರ್‌ಗೆ ವರವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಹಿಂದುತ್ವಕ್ಕೆ ಅಪಚಾರಮಾಡಿ ಸ್ವಾರ್ಥಕ್ಕಾಗಿ ಮೋಸ, ವಂಚನೆ, ಭ್ರಷ್ಟಾಚಾರ ನಡೆಸಿದ್ದಾರೆಂಬ ನಿರಂತರ ದಾಳಿಯಿಂದ ಡಿಮಾರಲೈಸ್ ಆಗಿದ್ದರೂ ಶಾಸಕ ಸುನಿಲ್ ತನ್ನ ಮಾಮೂಲಿ ಹಿಂದುತ್ವ ವರಸೆಯ ಮೂಲಕವೇ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ; ಜಿಲ್ಲೆಯ ಪ್ರವಾಸೋದ್ಯಮ ಹಾಳುಗೆಡುವ ವ್ಯವಸ್ಥಿತ ಅಪಪ್ರಚಾವಿದು; ಈ ಷಡ್ಯಂತ್ರದ ತಂಡದಲ್ಲಿ ಅನ್ಯ ಧರ್ಮೀಯರು, ನಗರ ನಕ್ಸಲರು, ಬುದ್ಧಿಜೀವಿಗಳು ಇದ್ದಾರೆ; ಕಾಂಗ್ರೆಸ್ ಸರಕಾರವಿದ್ದರೂ ತನಿಖೆ ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ. ಇಂಥ “ಹಿಂದುತ್ವ”ದ ಪ್ರಕರಣವೇನಾದರೂ ಬಿಜೆಪಿಗರಿಗೆ ಸಿಕ್ಕರೆ ಕಾಂಗ್ರೆಸ್ಸಿಗರನ್ನು ಹಣಿಯದೆ ಬಿಡುತ್ತಿದ್ದರಾ? ರಾಷ್ಟ್ರಮಟ್ಟದ ಸುದ್ದಿಯಾಗಿಸಿ ಸಂಘ ಪರಿವಾರ ಲಾಭ ಎತ್ತದೆ ಇರುತ್ತಿತ್ತಾ? ಜಿಲ್ಲಾ ಮಂತ್ರಿಣಿ ಲಕ್ಷ್ಮೀ ಹೆಬ್ಬಾಳ್ಕರ್, ಡಿಸಿಎಂ ಡಿಕೆಶಿ, ಸಿಎಂ ಸಿದ್ದು ಸುಮ್ಮನಿರುವುದು ಏಕೆ? ಕಾಂಗ್ರೆಸ್ ಸರಕಾರದ ದೌರ್ಬಲ್ಯದ ಗುಟ್ಟೇನು? ಎಂಬ ರೋಚಕ ಚರ್ಚೆಗಳು ಕರಾವಳಿಯಲ್ಲೀಗ ಜೋರಾಗಿದೆ.

ಗೋಮಾಳದಲ್ಲಿ ಥೀಮ್ ಪಾರ್ಕ್

ಪ್ರತಿಮೆ ಕಂಚಿನದ್ದಲ್ಲ; ಥೀಮ್ ಪಾರ್ಕ್ ಹೆಸರಲ್ಲಿ ದೊಡ್ಡ ಅವ್ಯವಹಾರ-ಅವಾಂತರ ನಡೆದಿದೆ; ಥೀಮ್ ಪಾರ್ಕ್ ನಿರ್ಮಾಣಕ್ಕೆ ಅರಣ್ಯ, ಪರಿಸರವೇ ಮುಂತಾದ ಸರಕಾರಿ ಇಲಾಖೆಗಳದ್ದೇ ಅನುಮತಿ ಸಿಕ್ಕಿಲ್ಲ. ಎಲ್ಲ ಕಾನೂನು ಧಿಕ್ಕರಿಸಿ ಗೋಮಾಳದಲ್ಲಿ ಪರಶುರಾಮ ಪ್ರತಿಮೆ ಮತ್ತಿತರ ಕಟ್ಟಡಗಳನ್ನು ಸ್ಥಾಪಿಸಲಾಗಿದೆ ಎಂಬುದಕ್ಕೆ ಬೇಕಾದಷ್ಟು ಪುರಾವೆಗಳು ಆರ್‌ಟಿಐನಡಿ ಪಡೆದಿರುವ ದಾಖಲೆಗಳು ಸಾರಿಸಾರಿ ಹೇಳುತ್ತವೆ! ಯರ್ಲಪಾಡಿ ಗ್ರಾಮ ಪಂಚಾಯತ್ 2019ರಲ್ಲಿ ಉಮ್ಮಿಕಲ್ ಕುಂಜದ ಸರ್ವೆ ನಂಬರ್:329/1ರ 1.58 ಎಕರೆ ಪ್ರದೇಶವನ್ನು ಪರಶುರಾಮ್ ಥೀಮ್ ಪಾರ್ಕ್‌ಗಾಗಿ ಕಾಯ್ದಿರಿಸುವಂತೆ ಕಾರ್ಕಳ ತಹಶೀಲ್ದಾರ್‌ರನ್ನು ಕೋರುವ ನಿರ್ಣಯ ಕೈಗೊಳ್ಳತ್ತದೆ. ತಹಶೀಲ್ದಾರ್ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಗಳ ಗಮನಕ್ಕೆ ತರುತ್ತಾರೆ.

ಜಿಲ್ಲಾಧಿಕಾರಿ ಅರಣ್ಯ ಇಲಾಖೆಯ ಅಭಿಪ್ರಾಯ ಕೇಳುತ್ತಾರೆ. ಅರಣ್ಯ ಇಲಾಖೆಯಿಂದ ಈ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ರವಾನೆಯಾಗುತ್ತದೆ. ಸದ್ರಿ ಜಾಗ ಗೋಮಾಳದ ವ್ಯಾಪ್ತಿಯಲ್ಲಿರುವುದರಿಂದ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಆಡಳಿತಾರೂಢ ಬಿಜೆಪಿಯ ಪ್ರಭಾವಿ ಶಾಸಕ ಸುನಿಲ್ ಕುಮಾರ್ ಜಾಗಕ್ಕಾಗಿ ಶತಾಯಗತಾಯ ಪ್ರಯತ್ನ ಮಾಡುತ್ತಾರೆ. ಆಗ ಬರೋಬ್ಬರಿ ಆರು ತಿಂಗಳು ಸರ್ವೆ ನಡೆಯುತ್ತದೆ. ಅಂತಿಮವಾಗಿ ದಿ.18.3.2023ರಂದು ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿ- ಇದು ಗೋಮಾಳ ಆಗಿರುವುದರಿಂದ ಪ್ರಸ್ತಾವಿತ ಉದ್ದೇಶ (ಥೀಮ್ ಪಾರ್ಕ್)ಕ್ಕೆ ಮಂಜೂರಿ ಮಾಡಲು ಅವಕಾಶವಿರುವುದಿಲ್ಲ- ಎಂದು ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾರೆ.

ಆ ಹೊತ್ತಿಗೆ ಸುನಿಲ್ ಕುಮಾರ್ ಅವರ ಸಚಿವ ಸ್ಥಾನದ ಬಲದಿಂದ ಗೋಮಾಳ ಜಾಗದಲ್ಲೇ ಹಠದಿಂದ ಪರಶುರಾಮನ ಪ್ರತಿಮೆ ಮತ್ತು ಥೀಮ್ ಪಾರ್ಕ್ ಅಕ್ರಮವಾಗಿ ನಿರ್ಮಿಸಿ ಅಂದಿನ ಸಿಎಂ ಬೊಮ್ಮಾಯಿ ಕೈಯ್ಯಿಂದ ಲೋಕಾರ್ಪಣೆ ಮಾಡಿಸಿ ಒಂದೂ ಮುಕ್ಕಾಲು ತಿಂಗಳು ಕಳೆದಿರುತ್ತದೆ. ಅಷ್ಟೇ ಅಲ್ಲ ಭೂಮಿ ಮಂಜೂರಾತಿ ಮತ್ತಿತರ ಒಪ್ಪಿಗೆಯಿಲ್ಲದೆ ಮೂರ್ತಿ ತಯಾರಿಕೆ, ಕಟ್ಟಡಗಳ ಸ್ಥಾಪನೆ ಮತ್ತು “ವಿವಿಧ ವಿನೋದಾವಳಿ” ಕಾರ್ಯಕ್ರಮಕ್ಕೆ ಸರಕಾರದ ಬೇರೆಬೇರೆ ಇಲಾಖೆಯಿಂದ 6,71,92,943 ರೂ. ಪಡೆಯಾಲಾಗಿದೆ. ಯಾವುದೇ ಪ್ರಸ್ತಾವನೆ ಇಲ್ಲದೆ ಇಷ್ಟು ದೊಡ್ಡ ಮೊತ್ತದ ಹಣ ಸರಕಾರದಿಂದ ಹೇಗೆ ಬಿಡುಗಡೆಯಾಯಿತು? ಅನುಮೋದನೆಯೇ ಇಲ್ಲದ ಕಾಮಗಾರಿಗೆ ಸರಕಾರ ಕಾರ್ಯಾದೇಶ ನೀಡಲು ಸಾಧ್ಯವೇ? ಎಲ್ಲ ಮಂತ್ರಿ ಮಹಿಮೆ ಎಂಬ “ಜೋಕ್” ಕಾರ್ಕಳದಲ್ಲಿ ಕೇಳಿಬರುತ್ತದೆ.

ಅದ್ದೂರಿ ಅನಾವರಣಕ್ಕೆ 2.18 ಕೋಟಿ ಖರ್ಚು!!

2023ರ ಅಸೆಂಬ್ಲಿ ಇಲೆಕ್ಷನ್‌ಗೆ ಕೆಲವೇ ತಿಂಗಳು ಬಾಕಿಯಿರುವಾಗ ಭರ್ಜರಿಯಾಗಿ ನಡೆಸಲಾದ ಪರಶುರಾಮ ಥೀಮ್ ಪಾರ್ಕ್ ಮತ್ತು ಪರಶುರಾಮ ವಿಗ್ರಹ ಅನಾವರಣ ಕಾರ್ಯಕ್ರಮವಿದೆಯಲ್ಲ, ಅದು ಅಂದು ಸಚಿವರಾಗಿದ್ದ ಶಾಸಕ ಸುನಿಲ್ ಕುಮಾರ್‌ರ ಚುನಾವಣಾ ಪ್ರಚಾರದ ಉದ್ಘಾಟನೆ ಆಗಿತ್ತೆಂಬ ಮಾತು ಕಾರ್ಕಳದಲ್ಲಿ ಇವತ್ತಿಗೂ ಚಾಲ್ತಿಯಲ್ಲಿದೆ! ವ್ಯಾಪಕ ಪ್ರಚಾರಮಾಡಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜನಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಹೆಸರಾಂತ ಸಿನೆಮಾ ನಟರು, ಹಾಡುಗಾರರು, ಯಕ್ಷಗಾನ ಕಲಾವಿದರೇ ಮುಂತಾದ ವಿವಿಧ ರಂಗದ ಸೆಲಿಬ್ರಿಟಿಗಳನ್ನು ಕರೆಸಿ ಮನರಂಜನೆ ಕಾರ್ಯಕ್ರಮ ನಡೆಸಲಾಗಿತ್ತು. ಯಾವ ಮಟ್ಟದಲ್ಲಿ ಸುನಿಲ್ ಕುಮಾರ್‌ರ ಪ್ರಚಾರ ನಡೆಯಿತೆಂದರೆ, ಬಯಲು ರಂಗಮಂದಿರದಲ್ಲಿ ಹಾಕಲಾಗಿದ್ದ ಎಲ್‌ಇಡಿ ಪರದೆಗಳ ಮೇಲೆ ಒಮ್ಮೆ ಪರಶುರಾಮ ಬಂದರೆ, ಮತ್ತೊಮ್ಮೆ ಸುನಿಲ್ ವಿಜೃಂಭಿಸುತ್ತಿದ್ದರು. ಲಕ್ಷಾಂತರ ಜನರು ಸೇರಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ವಂದಿಮಾಗಧರು ಸುನಿಲ್‌ರನ್ನು ಯಾವ ಮಟ್ಟಕ್ಕೆ ಅಟ್ಟಕ್ಕೇರಿಸಿದರೆಂದರೆ ಕರಾವಳಿಯ ಸೃಷ್ಟಿಕರ್ತ ಪರಶುರಾಮನನ್ನೇ “ಮರು ಸೃಷ್ಟಿ” ಮಾಡಿದ ಅಭೂತಪೂರ್ವ ನಾಯಕನೆಂದು ಕೊಂಡಾಡಿದರು; ಮುಂದಿನ ಮುಖ್ಯಮಂತ್ರಿ ಎಂದರು.

ಸುನಿಲ್ ಕುಮಾರ್‌ರನ್ನು ವೈಭವೀಕರಿಸುವ ಈ ಕಾರ್ಯಕ್ರಮಕ್ಕೆ ಸರಕಾರಿ ಬೊಕ್ಕಸದಿಂದ ಬರೋಬ್ಬರಿ 2,18,33,270 ರೂ. ಖರ್ಚು ಮಾಡಲಾಗಿದೆ!! “ಜಾತ್ರೆ”ಯ ಉಸ್ತುವಾರಿ ನೋಡಿಕೊಂಡಿದ್ದು ಅಂದಿನ ಮಂತ್ರಿ ಸುನಿಲ್ ಸುಪರ್ದಿಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜಕೀಯ ಲಾಭ ಪಡೆಯುವ ಉದ್ದೇಶದ ಈ ಫಂಕ್ಷನ್‌ಗೆ 1 ಕೋಟಿ 93 ಲಕ್ಷ ನೀಡಿದ್ದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ಖರ್ಚನ್ನು ಹಾಕಲಾಗಿತ್ತು. ಅದೇ ಪ್ರಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಗಳಿಂದಲೂ ದುಡ್ಡು ಪಡೆಯಲಾಗಿತ್ತು. ಒಟ್ಟಿನಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿತ್ತು ಎಂದು ಕಾರ್ಕಳದ ಜನರು ಹೇಳುತ್ತಾರೆ.

ಕೊಟೇಷನ್‌ಗೂ ಮೊದಲೇ ಕಾಸು!!

ಕಾರ್ಕಳದ ಅರ್ಧ ಕಂಚು-ಅರ್ಧ ಗ್ಲಾಸ್ ಫೈಬರ್‌ನ ಪರಶುರಾಮ ಪುತ್ಥಳಿ ಪುರಾಣ ಬಗೆದಷ್ಟೂ ಬಿಚ್ಚಿಕೊಳ್ಳುತ್ತದೆ. ಈ ಮೂರ್ತಿ ತಯಾರಿಕೆ ಮತ್ತು ಸ್ಥಾಪನೆಯ ಜವಾಬ್ದಾರಿ ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್‌ಗೆ ಮೂರ್ತಿಯ ತಯಾರಿಕೆ ಅಥವಾ ಸಾಗಾಣಿಕಾ ವಿವರ ಕೇಳಿದರೆ, ’ಮೂರ್ತಿ ರಚನೆ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ; ಹಾಗಾಗಿ ಮಾಹಿತಿ ಲಭ್ಯವಿಲ್ಲ’ ಎಂಬ ಉತ್ತರ ಬರುತ್ತದೆ! ತಮಾಷೆಯೆಂದರೆ, ಶಾಸಕ ಸುನಿಲ್ ಕುಮಾರ್ ಅಧ್ವರ್ಯದಲ್ಲಿ ಬೈಲೂರು ಬಳಿಯ ಉಮ್ಮಿಕಲ್ ಗುಡ್ಡದ ಮೇಲೆ “ಹಿಂದುತ್ವ”ದ ವಿಧಿವಿಧಾನದಲ್ಲಿ ಪರಶುರಾಮನ ಪ್ರತಿಮೆ ಪ್ರತಿಷ್ಠಾಪಿಸಿ ಆಗಿನ ಮುಖ್ಯಮಂತ್ರಿಗಳಿಂದಲೇ ಅಪಾರ ಜನರೆದುರು ಲೋಕಾರ್ಪಣೆ ಮಾಡಿಸಲಾಗಿದೆ.

ಆರ್‌ಟಿಐನಲ್ಲಿ ಅಧಿಕಾರಿಗಳು ಕೊಟ್ಟಿರುವ ಈ ಉತ್ತರ ಜನಮಾನಸದಲ್ಲಿ ಮೂಡಿರುವ ಅನೇಕ ಅನುಮಾನಗಳನ್ನು ಖಾತ್ರಿ ಪಡಿಸುವಂತಿದೆ; ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್ ಎಂಬ ಮೂರ್ತಿ ತಯಾರಿಕಾ ಕಂಪನಿಗೆ ಪರಶುರಾಮನ ಪ್ರತಿಮೆಗಾಗಿ 2.4 ಕೋಟಿ ರೂ.ಗಳ ಗುತ್ತಿಗೆ ಕೊಡಲಾಗಿತ್ತು. ಈ ಕಂಪನಿಯ ಕೊಟೇಷನ್ ನಿರ್ಮಿತಿ ಕೇಂದ್ರಕ್ಕೆ 6.12.2022ರಂದು ಬರುತ್ತದೆ. ಕೇವಲ ಎಂಟೊಂಭತ್ತು ದಿನಗಳಲ್ಲಿ (15.12.2022)ದಲ್ಲಿ ವರ್ಕ್ ಆರ್ಡರ್ ಕೊಡಲಾಗುತ್ತದೆ. ಈ ಅಕ್ರಮ ಕಾರ್ಯಾಚರಣೆಯಲ್ಲಿ ಕಾನೂನನ್ನು ಯಾವ ಥರ ಮನಸೋಇಚ್ಛೆ ಕಡೆಗಣಿಸಲಾಗಿದೆಯೆಂದರೆ, ಕೊಟೇಷನ್ ಮತ್ತು ಕಾರ್ಯಾದೇಶಕ್ಕೂ ಮೊದಲೇ ತಲಾ 50 ಲಕ್ಷದಂತೆ ಎರಡು ಬಿಲ್‌ನಲ್ಲಿ 1 ಕೋಟಿ ರೂಗಳನ್ನು ಕ್ರಿಸ್ ಆರ್ಟ್ ವರ್ಲ್ಡ್‌ನವರಿಗೆ ಸಂದಾಯವಾಗಿದೆ. ಪರಶುರಾಮನ ತಯಾರಿಕೆ “ಪ್ರಕ್ರಿಯೆ”ಯಲ್ಲಿ ಅಕ್ರಮಗಳ ಜತೆ “ಅದ್ಭುತ”ಗಳೂ ಘಟಿಸಿವೆಯೆಂದು ಕಾರ್ಕಳದ ಜನ ಆಡಿಕೊಳ್ಳುತ್ತಿದ್ದಾರೆ. ಅದೆಂದರೆ, ಕ್ರಿಸ್ ಆರ್ಟ್‌ನ “ಶಿಲ್ಪಿ”ಗಳು ಕೇವಲ 44 ದಿನದಲ್ಲಿ 33 ಅಡಿಯ 15 ಟನ್ ತೂಕದ ಕಂಚಿನ ಬೃಹತ್ ಪುತ್ಥಳಿಯನ್ನು ತಯಾರಿಸಿ ಬೆಂಗಳೂರಿಂದ ಕಾರ್ಕಳಕ್ಕೆ ಸಾಗಿಸಿದ್ದಾರೆ! ಇದು ಯಾವ ಟೆಕ್ನಾಲಜಿಯಲ್ಲೂ ಸಾಧ್ಯವಿಲ್ಲದ “ಪವಾಡ” ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ವಿಚಿತ್ರವೆಂದರೆ, ಕೋಟ್ಯಂತರ ರೂ.ಗಳ ಈ ಬೃಹದಾಕಾರದ ವಿಗ್ರಹದ ಸಾಗಾಣಿಕಾ ವಿವರ ನಿರ್ಮಿತಿ ಕೇಂದ್ರ ಅಧಿಕಾರಿಗಳಲ್ಲಿಲ್ಲ! 50 ಸಾವಿರ ರೂಗಳಿಗಿಂತ ಹೆಚ್ಚಿನ ಸರಕು ಸಾಗಾಣಿಕೆಗೆ ಇ-ವೇ ಬಿಲ್ ಕಡ್ಡಾಯ. ಸಾಗಾಣಿಕಾ ವಿವರ ಕೇಳಿದರೆ, ನಿರ್ಮಿತಿ ಕೇಂದ್ರದವರು ’ಮೂರ್ತಿಯೇ ತಯಾರಾಗಿಲ್ಲ; ವಿವರ ಹೇಗೆ ಕೊಡುವುದು’ ಎನ್ನುತ್ತಾರೆ. ಹಾಗಿದ್ದರೆ ಉಮ್ಮಿಕಲ್ ಬೆಟ್ಟದಲ್ಲಿ ನಿಲ್ಲಿಸಲಾಗಿದ್ದ, ಈಗ ತೆರವು ಮಾಡಲಾಗಿರುವ ಪ್ರತಿಮೆ ಯಾವುದು?! ಈ ಪ್ರಶ್ನೆಗೆ ಉತ್ತರ ಗೊತ್ತಿರುವುದು ಶಾಸಕ ಸುನಿಲ್ ಕುಮಾರ್‌ಗೆ ಮಾತ್ರವೆಂದು ಕಾರ್ಕಳದ ಮಂದಿ ಹೇಳುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...