Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಸಮೀಕ್ಷೆ; ಪುತ್ತೂರು: ಸಂಘ ಪರಿವಾರದ ಆಡಂಬೊಲದಲ್ಲಿ ಸಜ್ಜುಗೊಳ್ಳುತ್ತಿದ್ದಾರೆಯೇ ನಳಿನ್?

ಕರ್ನಾಟಕ ವಿಧಾನಸಭಾ ಕ್ಷೇತ್ರಸಮೀಕ್ಷೆ; ಪುತ್ತೂರು: ಸಂಘ ಪರಿವಾರದ ಆಡಂಬೊಲದಲ್ಲಿ ಸಜ್ಜುಗೊಳ್ಳುತ್ತಿದ್ದಾರೆಯೇ ನಳಿನ್?

- Advertisement -
- Advertisement -

ಪಶ್ಚಿಮಘಟ್ಟದ ಸಮೃದ್ಧ ಕಾಡುಗಳಿಂದ ಆವೃತ್ತವಾಗಿರುವ ಪುತ್ತೂರು ತಾಲೂಕು ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ಸಂಗಮ ಮತ್ತು ಏರು ಗುಡ್ಡಗಳಿಂದ ಸುತ್ತುವರಿದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಅಡಿಕೆ, ತೆಂಗು, ಕೋಕೊ, ವೀಳ್ಯದೆಲೆ, ಕಾಳು ಮೆಣಸು ತೋಟಗಳ ಹಚ್ಚ ಹಸಿರಿನ ಗಣಿ. ತೋಟಗಾರಿಕೆ, ಹೈನುಗಾರಿಕೆ ಜೀವನಾಧಾರವಾಗಿರುವ ಈ ತಾಲೂಕಿನಲ್ಲಿ ಎಕರೆಗಟ್ಟಲೆ ಅಡಿಕೆ ತೋಟದ ಜಮೀನುದಾರರ ನಡುವೆ ಸೂರು ಕಟ್ಟಿಕೊಳ್ಳಲು ಅಂಗೈ ಅಗಲದ ಜಾಗವೂ ಇಲ್ಲದ ಕೃಷಿ ಕಾರ್ಮಿಕರು ಮತ್ತು ಬುಡಕಟ್ಟು ಮಂದಿಯಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಆಗ್ನೇಯ ಭಾಗದ ಕೇಂದ್ರದಂತಿದೆ. ದಕ್ಷಿಣ ಕನ್ನಡದ ಎರಡನೆ ದೊಡ್ಡವಾಣಿಜ್ಯ ನಗರ ಎನಿಸಿರುವ ಪುತ್ತೂರಲ್ಲಿ 1909ರಲ್ಲಿ ಜಿಲ್ಲೆಯಲ್ಲೆ ಪ್ರಥಮ ಸಹಕಾರ ಸಂಘ ಸ್ಥಾಪನೆಯಾಗಿತ್ತು.

ಪುತ್ತೂರು ಕರ್ನಾಟಕ ಕರಾವಳಿಯಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೆ ಸಂಘ ಪರಿವಾರದ ಪ್ರಮುಖ ಕೇಸರಿ ನೆಲೆಯೆಂದು ಸುಮಾರು ಐದು ದಶಕದ ಹಿಂದೆಯೆ ಗುರುತಿಸಲ್ಪಟ್ಟಿದೆ! ಕರಾವಳಿ ಆರ್‌ಎಸ್‌ಎಸ್-ಬಿಜೆಪಿಯ ಪ್ರಶ್ನಾತೀತ ನಾಯಕ ಡಾ.ಪ್ರಭಾಕರ್ ಭಟ್ಟರಿರುವ ಬಂಟ್ವಾಳ ತಾಲೂಕಿನ ಕಲ್ಲಡ್ಕವನ್ನು ಈಗ ಸಂಘಿ ಹೆಡ್‌ಕ್ವಾಟ್ರರ್ಸ್ ಎಂದು ಪರಿಗಣಿಸಲಾಗುತ್ತಿದೆ. ಆದರೆ 1960-1970ರ ದಶಕದಲ್ಲೆ ಪುತ್ತೂರಲ್ಲಿ ಸಂಘ ಮತ್ತು ಜನಸಂಘದ ’ಪ್ರಜ್ಞೆ’ಯನ್ನು ಬ್ರಾಹ್ಮಣ ಮುಂದಾಳುಗಳು ನಾಜೂಕಾಗಿ ಜಾಗೃತಗೊಳಿಸಿದ್ದರು ಎನ್ನಲಾಗುತ್ತಿದೆ. ಕಲ್ಲಡ್ಕ ಭಟ್ಟರ ಭಾವ ನೆಂಟ ಉರಿಮಜಲು ರಾಮ್‌ಭಟ್ ಐದಾರು ದಶಕದ ಹಿಂದೆಯೆ ’ಸಂಘಕಾರಣ’ ಕಟ್ಟಿ ಬೆಳೆಸಿದ್ದರು. ’ಮತೀಯ ಸೂಕ್ಷ್ಮಪ್ರದೇಶ’ ಎಂದು ಪೊಲೀಸ್ ಫೈಲ್‌ನಲ್ಲಿ ದಾಖಲಾಗಿರುವ ಪುತ್ತೂರಲ್ಲೀಗ ಮತೋನ್ಮತ್ತತೆ ತುತ್ತತುದಿಗೇರಿದ್ದು, ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಭೀತಿಯಲ್ಲಿ ಜನರಿದ್ದಾರೆ. ಇಲ್ಲಿ ಧರ್ಮಕಾರಣ ಯಾವ ಮಟ್ಟಕ್ಕಿದೆಯೆಂದರೆ ಕಾಲುಜಾರಿ ಬಿದ್ದವನನ್ನು ಎತ್ತುವಾಗಲೂ ಧರ್ಮ ನೋಡಲಾಗುತ್ತಿದೆ ಎಂದು ಮಾನವೀಯತೆಯ ಬಗ್ಗೆ ಕಾಳಜಿಯುಳ್ಳ ಮಂದಿ ಕಳವಳಿಸುತ್ತಾರೆ.

ಚರಿತ್ರೆ-ಸಂಸ್ಕೃತಿ-ಆರ್ಥಿಕತೆ

ಪುತ್ತೂರು ಸ್ಥಳನಾಮ ಪುರಾಣದ ಬಗ್ಗೆ ಹಲವು ಪ್ರತೀತಿ-ತರ್ಕಗಳಿವೆ. ಬಂಗ ರಾಜರ ರಾಜಧಾನಿಯಾಗಿದ್ದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದ ಪಶ್ಚಿಮಕ್ಕಿರುವ ಕೊಳದಲ್ಲಿ ಮುತ್ತುಗಳು ಪುರಾತನ ಕಾಲದಲ್ಲಿ ಸಿಕ್ಕಿದ್ದವಂತೆ. ಹೀಗಾಗಿ ಊರು ಮುತ್ತೂರು ಆಯಿತಂತೆ. ಕ್ರಮೇಣ ಆಡು ಭಾಷೆಯಲ್ಲಿ ಪುತ್ತೂರು ಆಯಿತೆನ್ನುವುದು ಒಂದು ಐತಿಹ್ಯ. ಪುತ್ತೂರು ಪದ ಕೊಡವ ಭಾಷೆಯಿಂದ ಉತ್ಪತ್ತಿಯಾಗಿದೆ ಎನ್ನಲಾಗುತ್ತಿದೆ. 1834ರವರೆಗೆ ಕೊಡವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಪುತ್ತೂರನ್ನು ಬಿಟ್ಟುಕೊಟ್ಟರೆ ನಾಲ್ಕು ಬಲಿಷ್ಠವಾದ ಪ್ರದೇಶ ಕೊಡುವುದಾಗಿ ಬ್ರಿಟಿಷರು ಹೇಳಿದ್ದರಂತೆ. ಆಡಳಿತ ಕೇಂದ್ರ ಮಾಡಲು ಅನುಕೂಲಕರವಾಗಿದ್ದ ಪುತ್ತೂರು ಬ್ರಿಟಿಷರಿಗೆ ಅನಿವಾರ್ಯವಾಗಿತ್ತು. ಆದರೆ ಕೊಡವ ಅರಸ ’ಹತ್ತೂರು ಕೊಟ್ಟರೂ ಪುತ್ತೂರು ಕೊಡೆ’ ಎಂದು ನಿರಾಕರಿಸಿದ್ದರಂತೆ. ತುಳುನಾಡು ಪುತ್ತೂರು ತನಕ ವಿಸ್ತರಣೆಯಾದಾಗ ಮುತ್ತೂರು ಪುತ್ತೂರು ಎಂದು ಕರೆಯಲ್ಪಟ್ಟಿತೆಂಬ ಪ್ರತೀತಿಯಿದೆ. ಕೊಡವ ಭಾಷೆಯಲ್ಲಿ ಪುತ್ತೂರು ಎಂದರೆ ’ಹೊಸ ಊರು’ ಎಂದರ್ಥ.

ಧೋ ಎಂದು ಬಿಟ್ಟೂಬಿಡದೆ ಮಳೆ ಸುರಿವ ಪುತ್ತೂರಿನ ಆರ್ಥಿಕ ಜೀವಕಳೆ ಅಡಿಕೆ ಫಸಲಿನಲ್ಲಿ ಅಡಗಿದೆ. ಅಡಿಕೆ ತೋಟಿಗರಲ್ಲಿ ಸಕಲ ಜಾತಿ-ಧರ್ಮದವರಿದ್ದಾರೆ. ಹೆಚ್ಚಿನವರು ಅಡಿಕೆ ತೋಟಗಾರಿಕೆ ಅಥವಾ ತೋಟದ ಕೂಲಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಬೀಡಿ ಕಟ್ಟಿ ಬದುಕುವ ಕಸುಬು ಕಮ್ಮಿಯಾಗಿದೆ. ದಕ್ಷಿಣಕ್ಕೆ ಕೇರಳದ ಹಳ್ಳಿಗಳೊಂದಿಗೆ ಗಡಿ ಹಂಚಿಕೊಂಡಿರುವ ಪುತ್ತೂರು, ವಾಣಿಜ್ಯ ಬೆಳೆಗಳಾದ ಅಡಿಕೆ-ತೆಂಗು-ಕೊಕ್ಕೊ-ಕಾಳು ಮೆಣಸು-ರಬ್ಬರ್-ಗೋಡಂಬಿ ವಹಿವಾಟಿಂದ ಶ್ರೀಮಂತ ತಾಲೂಕೆಂದು ಗುರುತಿಸಲ್ಪಟ್ಟಿದೆಯಾದರೂ ಬಡತನ, ಉಳ್ಳವರ ಮನೆ-ತೋಟದಲ್ಲಿ ಗೇಯಬೇಕಾದ ಅನಿವಾರ್ಯತೆ ಇಲ್ಲಿಯ ಅಸಹಾಯಕ ಮಂದಿಗಿದೆ. ಬುಡಕಟ್ಟು ಮರಾಠಿಗರು ಮತ್ತು ದಲಿತ ಆದಿದ್ರಾವಿಡರ ಗೋಳು ಲಾಗಾಯ್ತಿನಿಂದ ಆಳುವವರಿಗೆ ಅರ್ಥವೆ ಆಗುತ್ತಿಲ್ಲವೆಂಬ ಅಳಲು ಕೇಳಿಬರುತ್ತಿದೆ.

ಪುತ್ತೂರಲ್ಲಿ ಸಾಕ್ಷರತಾ ಪ್ರಮಾಣ ಶೇ.77ರಷ್ಟಿದ್ದರೂ ಊಳಿಗಮಾನ್ಯದ ದರ್ಪ, ಮಡಿ-ಮೈಲಿಗೆ, ಮೇಲು-ಕೀಳು, ಮಂತ್ರ-ತಂತ್ರ-ಮೂಢನಂಬಿಕೆ, ಅಸಹಿಷ್ಣುತೆ, ಧರ್ಮೋನ್ಮಾದದ ಹಿಂಸಾಚಾರದ ಸಾಮಾಜಿಕ ಸ್ಥಿತಿ-ಗತಿಯಿದೆ; ಭೂ ಮಸೂದೆ, ಅಸ್ಪೃಶ್ಯತೆ ಆಚರಣೆ ನಿಷೇಧ ಕಾನೂನುಗಳಿದ್ದರೂ ಜಮೀನ್ದಾರ ಧಣಿಯ ಮನೆಯ ಹೊಸಿಲಾಚೆ ’ಆಧುನಿಕ ಜೀತ’ ಮಾಡಬೇಕಾದ ಬ್ರಾಹ್ಮಣಿಕೆ ಪದ್ಧತಿ ಹಳ್ಳಿಗಳಲ್ಲಿನ್ನೂ ಕಂಡೂಕಾಣದಂತಿದೆ ಎಂದು ಹೇಳುವ ಪ್ರಜ್ಞಾವಂತರು, ತಾಲೂಕನ್ನು ಕಂಗೆಡಿಸಿರುವ ಅನೈತಿಕ ಪೊಲೀಸ್‌ಗಿರಿ ಮತ್ತು ಕೌಬಾಯ್ಸ್ ಕ್ರೌರ್ಯದ ಮೂಲವಿರುವುದೇ ಇಲ್ಲಿ ಎಂದು ಅಭಿಪ್ರಾಯಪಡುತ್ತಾರೆ!

ಶುದ್ಧ ತುಳುವ ಸಂಸ್ಕೃತಿಯ ಪುತ್ತೂರಲ್ಲಿ ಭೂತ, ಕೋಲ, ನೇಮ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ವಿಶಿಷ್ಟ ಕಂಬಳ ಕ್ರೀಡೆಯ ಸಂಪ್ರದಾಯ ಹಾಸುಹೊಕ್ಕಾಗಿದೆ. ತುಳು ಇಲ್ಲಿಯ ಶೇ.60ರಷ್ಟು ಮಂದಿಯ ಮಾತೃಭಾಷೆ. ಕನ್ನಡ, ಕೊಂಕಣಿ, ಹವ್ಯಕ ಬ್ರಾಹ್ಮಣ ಕನ್ನಡ, ಬ್ಯಾರಿ, ಮಲಯಾಳಂ, ಮರಾಠಿ ಭಾಷೆಗಳು ಇದೆಯಾದರೂ ಮನೆಯ ಹೊರಗೆ ವ್ಯವಹಾರ-ಸಂವಹನ ನಡೆಯುವುದು ಬಹುತೇಕ ತುಳುವಿನಲ್ಲಿ. ಇಲ್ಲಿಯ ’ಜೋಡು ಕೆರೆ’ ಕಂಬಳ ಇತಿಹಾಸ ಪ್ರಸಿದ್ಧ. ಜಾನಪದ ವೀರರಾದ ಕೋಟಿ-ಚನ್ನಯರು ಜನ್ಮವೆತ್ತಿದ್ದು ಪುತ್ತೂರಿನ ಪಡುಮಲೆಯಲ್ಲಿ.

ಗೋವಾದ ಕ್ಯಾಥೋಲಿಕ್ ಪಾದ್ರಿಗಳು ಗೋಥಿಕ್ ಶೈಲಿಯಲ್ಲಿ ಕಟ್ಟಿಸಿದ ಡಿ ಡಿಯೋಸ್ ಚರ್ಚ್, 300 ವರ್ಷದ ಹಿಂದೆ ಟಿಪ್ಪು ಕಟ್ಟಿಸಿದ ಜುಮ್ಮಾ ಮಸೀದಿ ಕಲ್ಲೇಗಾ, ಸೂಫಿ ಸಂತರಾಗಿದ್ದ ಪೀರಝದೆ ಮುಸ್ತಾದ್ ಹಬಿಮಲ್ಲಾಶಾ ಮುಸ್ತಾನ್ ನೆನಪಿಗಾಗಿ ಕೂರ್ನಡ್ಕದಲ್ಲಿ 1899ರಲ್ಲಿ ಕಟ್ಟಿಸಲಾದ ಪೀರ್ ಮೊಹಲ್ಲಾ ಜುಮ್ಮಾ ಮಸೀದಿ (ಟಿಪ್ಪು ಆಳ್ವಿಕೆಯಿಂದ ಐತಿಹಾಸಿಕ ಮಹತ್ವ ಪಡೆದ) ಪುತ್ತೂರಿನ ಸುತ್ತಲಿನಲ್ಲಿ ಪ್ರಸಿದ್ಧವಾಗಿವೆ. ಪುತ್ತೂರಿಂದ 15 ಕಿ.ಮೀ ದೂರದಲ್ಲಿರುವ ಸೀರೆ ಹೊಳೆ ದಡದಲ್ಲಿ ಬೆಂದ್ರ (ಬೆಂದ್ರು-ತುಳು) ತೀರ್ಥವಿದೆ. ಇದು ದಕ್ಷಿಣ ಭಾರತದಲ್ಲೆ ಏಕೈಕ ಎನ್ನಲಾದ ನೈಸರ್ಗಿಕ ಬಿಸಿನೀರಿನ ಬುಗ್ಗೆ.

ಕರ್ನಾಟಕ ಮತ್ತು ಕೇರಳದ ಕೋಕೋ ಹಾಗು ಅಡಿಕೆ ತೋಟಿಗರ ಕಲ್ಯಾಣಕ್ಕೆಂದು ಎರಡೂ ರಾಜ್ಯದ ಜಂಟಿ ಉದ್ಯಮ ’ಕ್ಯಾಂಪ್ಕೋ’ ಪುತ್ತೂರಲ್ಲಿ ಸ್ಥಾಪಿಸಲಾಗಿತ್ತು. ಈಗದು ಸರಕಾದ ಶೇರುಗಳನ್ನು ಮರಳಿಸಿ ಸ್ವತಂತ್ರ ಸಂಸ್ಥೆಯಾಗಿದ್ದು ಸಂಘಿಗಳ ಪಾರುಪತ್ಯಕ್ಕೆ ಒಳಪಟ್ಟಿದೆ. ಏಷಿಯಾದಲ್ಲೆ ಅತಿ ದೊಡ್ಡದಾದ ಚಾಕಲೆಟ್ ಕಾರ್ಖಾನೆಯನ್ನು ಕ್ಯಾಂಪ್ಕೋ ನಡೆಸುತ್ತಿದೆ. ಕ್ಯಾಂಪ್ಕೋದಿಂದ ಅಡಿಕೆ ಬೆಳೆಗಾರರಿಗೆ ಸ್ಥಿರ ಮಾರುಕಟ್ಟೆ ಒದಗಿಸುವ ಪ್ರಯತ್ನ ಆಗುತ್ತಿದೆಯಾದರೂ ಸಂಸ್ಥೆಯ ಒಳಗಿನ ವ್ಯವಹಾರದ ಬಗ್ಗೆ ಅನುಮಾನದ ಮಾತುಗಳು ಕೇಳಿಬರುತ್ತಿವೆ. ಗೋಡಂಬಿ ಉತ್ಪಾದನೆಯಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿರುವ ಪುತ್ತೂರಿನಲ್ಲಿ ಗೋಡಂಬಿ ಸಂಶೋಧನಾ ಕೇಂದ್ರವಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆ ಪರಿಚಯಿಸುವ ಆಕರ್ಷಕ ಮ್ಯೂಸಿಯಂ ಪುತ್ತೂರಲ್ಲಿದೆ. ಕಾರಂತರು 40 ವರ್ಷ ವಾಸವಾಗಿದ್ದ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ’ಡಾ.ಕೋಟ ಶಿವರಾಮ ಕಾರಂತ ಬಾಲವನ’ ಎಂದು ಹೆಸರಿಡಲಾಗಿದೆ. ಈ ಸರಕಾರಿ ಸಂಸ್ಥೆ ಕೂಡ ಕೇಸರೀಕರಣಗೊಂಡಿದೆಯೆಂದು ವಿವಾದಕ್ಕೊಳಗಾಗಿತು.

ಚುನಾವಣಾ ರಣಕಣದ ಚಿತ್ರಣ

ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ ಪುತ್ತೂರು ಮತ್ತು ಸುಳ್ಯ ಸೇರಿಸಿ ದ್ವಿಸದಸ್ಯ ಶಾಸನಸಭಾ ಕ್ಷೇತ್ರ ರಚಿಸಲಾಗಿತ್ತು. 1951ರ ಚುನಾವಣೆಯಲ್ಲಿ ವೆಂಕಟರಮಣ ಗೌಡ ಮತ್ತು ಕೆ.ಈಶ್ವರ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಮೈಸೂರು ರಾಜ್ಯ ರಚನೆಯಾದ ಬಳಿಕ ನಡೆದ ಇಲೆಕ್ಷನ್‌ನಲ್ಲಿ ಒಂದು ಸ್ಥಾನವನ್ನು ದಲಿತರಿಗೆ ಮೀಸಲಿಡಲಾಯಿತು. 1957ರ ಚುನಾವಣೆಯಲ್ಲಿ ಕಾಂಗ್ರಸ್‌ನ ವೆಂಕಟರಮಣ ಗೌಡ ಸಾಮಾನ್ಯ ಕೋಟಾದಲ್ಲಿ ಚುನಾಯಿತರಾದರೆ, ಸುಬ್ಬಯ್ಯ ನಾಯ್ಕ ಪರಿಶಿಷ್ಠ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದರು. 1962ರಲ್ಲಿ ಪುತ್ತೂರು ಮತ್ತು ಸುಳ್ಯವನ್ನು ಸ್ವತಂತ್ರ ಅಸೆಂಬ್ಲಿ ಕ್ಷೇತ್ರಗಳಾಗಿ ವಿಂಗಡಿಸಲಾಯಿತು. 1962ರಲ್ಲಿ ವೆಂಕಟರಮಣ ಗೌಡ ಮತ್ತು 1967ರಲ್ಲಿ ಬಿ.ವಿಠ್ಠಲದಾಸ ಶೆಟ್ಟಿ ಕಾಂಗ್ರೆಸ್‌ನಿಂದ ಶಾಸನಸಭೆಯಲ್ಲಿ ಪುತ್ತೂರನ್ನು ಪ್ರತಿನಿಧಿಸಿದ್ದರು. 1972ರಲ್ಲಿ ಎ.ಶಂಕರ ಆಳ್ವ ಶಾಸಕರಾಗಿದ್ದರು. ಜನಸಂಘದಿಂದ ಸ್ಪರ್ಧಿಸಿದ್ದ ಉರಿಮಜಲು ರಾಮ್ ಭಟ್ ದೊಡ್ಡ ಅಂತರದಲ್ಲಿ ಪರಾಭವಗೊಂಡಿದ್ದರು.

ಕರ್ನಾಟಕ ರಾಜ್ಯ ಉದಯವಾದ ನಂತರದ 1978ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯಥಿಯಾಗಿದ್ದ ಜನಸಂಘ ಮೂಲದ ಉರಿಮಜಲು ರಾಮ್ ಭಟ್ ಕಾಂಗ್ರೆಸ್ ಹುರಿಯಾಳು ಈಶ್ವರ ಭಟ್‌ರನ್ನು 642 ಮತಗಳ ಅಂತರದಿಂದ ಸೋಲಿಸಿದ್ದರು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ನಂತರದ ಚುನಾವಣೆ ಇದಾದ್ದರಿಂದ ಕಾಂಗ್ರೆಸ್ ವಿರೋಧಿ ಗಾಳಿ ಪುತ್ತೂರಲ್ಲಿ ಬೀಸಿತ್ತು. 1983ರಲ್ಲಿ ಬಿಜೆಪಿಯಿಂದ ಅಖಾಡಕ್ಕಿಳಿದಿದ್ದ ಉರಿಮಜಲು ರಾಮ್ ಭಟ್ಟರು ಕಾಂಗ್ರೆಸ್‌ನ ಸಂಕಪ್ಪ ರೈಗಳನ್ನು ಮಣಿಸಿ ಮತ್ತೆ ಶಾಸಕರಾದರು. ಆದರೆ
ರಾಮ್‌ಭಟ್ಟರಿಗೆ 1985ರಲ್ಲಿ ಕಾಂಗ್ರೆಸ್‌ನ ಬಿಲ್ಲವ ಸಮುದಾಯದ ಜನಾನುರಾಗಿ ತರುಣ ವಿನಯ್ ಕುಮಾರ್ ಸೊರಕೆ ವಿರುದ್ಧ ಸೆಣಸಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೊರಕೆ 20,823 ಮತಗಳ ಅಂತರದಿಂದ ಗೆದ್ದರು.

ಉರಿಮಜಲು ರಾಮ್ ಭಟ್

ಪುತ್ತೂರಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು 2,01,948 ಮತದಾರರಿದ್ದರು.
ಕ್ಷೇತ್ರದಲ್ಲಿ ತುಳು ಗೌಡ ಮತ್ತು ಅರೆಭಾಷೆ ಗೌಡರು ಸೇರಿ ಸುಮಾರು 45 ಸಾವಿರವಿದ್ದರೆ, ಮುಸ್ಲಿಮರು 40 ಸಾವಿರದಷ್ಟಿದ್ದಾರೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಾಢ್ಯವಾದ ಬಂಟ ಜಾತಿಯ ಓಟುಗಳು 30 ಸಾವಿರ, ಸಾಮಾಜಿಕ-ರಾಜಕೀಯ-ಆರ್ಥಿಕವಾಗಿ ದುರ್ಬಲವಾಗಿರುವ ಬಿಲ್ಲವರು 25 ಸಾವಿರ, ಎಸ್‌ಸಿ-ಎಸ್‌ಟಿ 18 ಸಾವಿರ, ಹವ್ಯಕ ಬ್ರಾಹ್ಮಣ, ಶಿವಳ್ಳಿ ಬ್ರಾಹ್ಮಣ, ಕೊಂಕಣಿ ಬ್ರಾಹ್ಮಣರೆ ಮುಂತಾದ ಮಾಂಸ ತಿನ್ನುವ ಹಾಗು ಮಾಂಸ ತಿನ್ನದವರು ಸೇರಿ 15 ಸಾವಿರ ಮತ್ತು ಒಬಿಸಿ ಸಮುದಾಯದ ಮತಗಳು 20 ಸಾವಿರವಿದೆ ಎಂದು ಅಂದಾಜಿಸಲಾಗಿದೆ.

ಡಿವಿ ಆಗಮನ-ನಿರ್ಗಮನ

1951ರಿಂದ ಕಳೆದ 2018ವರೆಗಿನ ಚುನಾವಣಾ ಫಲಿತಾಂಶದ ಮೇಲೆ ಕಣ್ಣು ಹಾಯಿಸಿದರೆ, ಆರಂಭದಲ್ಲಿ ಡಿ.ವಿ.ಸದಾನಂದ ಎಂದು ಗುರುತಿಸಲ್ಪಡುತ್ತಿದ್ದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಚುನಾವಣಾ ಅಖಾಡ ಪ್ರವೇಶಿಸಿದಾಗ (1989) ಜಾತಿಕಾರಣ-ಧರ್ಮಕಾರಣದ ಜುಗಲ್‌ಬಂದಿ ಶುರುವಾಗಿರುವುದು ಸ್ಪಷ್ಟವಾಗುತ್ತದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಸುಳ್ಯ-ಪುತ್ತೂರು ಭಾಗದಲ್ಲಿ ಡಿವಿಯೆಂದೆ ಕರೆಯಲ್ಪಡುವ ಸದಾನಂದ ಗೌಡರು ಉರುಳಿಸಿದ ಜಾತಿದಾಳದಿಂದ, ವೈವಾಹಿಕ ಸಂಬಂಧ ಕೂಡ ನಡೆಸದೆ ದೂರವಿರುತ್ತಿದ್ದ ತುಳು ಗೌಡ ಹಾಗು ಅರೆಭಾಷೆ ಗೌಡರಲ್ಲಿ ’ಗೌಡ ಸ್ಪಿರಿಟ್’ ಜಾಗೃತಿ ಆಯಿತೆನ್ನಲಾಗುತ್ತಿದೆ. ಈಗ ಆದಿಚುಂಚನಗಿರಿ ಮಠದ ಕೃಪಾಶ್ರಯದಲ್ಲಿ ನಾವೆಲ್ಲ ಒಂದು ಎನ್ನುತ್ತಿರುವ ಅರೆಭಾಷೆ ಮತ್ತು ತುಳು ಗೌಡ ಸಮುದಾಯವಿನ್ನೂ ಬ್ರಾಹ್ಮಣರ ಶೃಂಗೇರಿ ಮಠದ ಪ್ರಭಾವದಿಂದ ಹೊರಬಂದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಅದೇನೇ ಇರಲಿ, ಕರಾರುವಾಕ್ ಜಾತಿ ಲೆಕ್ಕಾಚಾರ ಹಾಕಿದ ಡಿವಿಗದು ರಾಜಕೀಯ ನೆಲೆ ಒದಗಿಸಿತ್ತು. ಶಿರಸಿ ಕೋರ್ಟಿನಲ್ಲಿ ಸರಕಾರಿ ವಕೀಲರಾಗಿ ನಿಯೋಜಿತರಾಗಿದ್ದ ಡಿವಿ ಅಲ್ಲಿ ಹೆಚ್ಚು ಸಮಯ ನಿಲ್ಲಲಿಲ್ಲ. ಸರಕಾರಿ ಚಾಕರಿಗೆ ರಾಜೀನಾಮೆ ನೀಡಿ ಸುಳ್ಯ-ಪುತ್ತೂರಲ್ಲಿ ವಕೀಲಿ ಕಾಯಕ ಶುರುಹಚ್ಚಿಕೊಂಡಿದ್ದ ಡಿವಿ, ಅದರ ಜತೆಗೆ ಬಿಜೆಪಿ ರಾಜಕಾರಣದಲ್ಲಿ ತೊಡಗಿಸಿಕೊಂಡದ್ದರು; ಆ ಪಾರ್ಟಿಯ ಸ್ಥಳೀಯ ಬಹುಸಂಖ್ಯಾತ ಗೌಡ ಸಮುದಾಯದ ಮುಂದಾಳೆಂದು ಪರಿಗಣಿಸಲ್ಪಟ್ಟರು. ಬಿಜೆಪಿಯಲ್ಲಿ ಡಿವಿಯ ಗೌಡಿಕೆ ಎಷ್ಟು ಜೋರಾಯಿತೆಂದರೆ, 1989ರಲ್ಲಿ ಸಂಘ ಸರದಾರರು ಹಳೆ ಹುಲಿ ಉರಿಮಜಲು ರಾಮ್‌ಭಟ್ಟರಿಗೆ ಅವಕಾಶ ನಿರಾಕರಿಸಿ ಡಿವಿಯವರನ್ನು ಕಣಕ್ಕಿಳಿಸಿದರು! ಸಣ್ಣ ಜಾತಿಯ (ಬಿಲ್ಲವ) ಕಾಂಗ್ರೆಸ್ ಕ್ಯಾಂಡಿಡೇಟ್ ವಿನಯ್‌ಕುಮಾರ್ ಸೊರಕೆ ಬಲಾಢ್ಯ ಗೌಡ ವಂಶಸ್ಥ ಡಿವಿ ಎದುರು ಗೆಲ್ಲಲು ತಿಣುಕಾಡಬೇಕಾಯಿತು. ಕತ್ತುಕತ್ತಿನ ಹೋರಾಟ ನಡೆಸಿದ ಡಿವಿ ಬರೀ 1,561 ಮತಗಳಿಂದ ಸೋತರು.

1994ರಲ್ಲಿ ಡಿವಿ ಮತ್ತು ಸೊರಕೆ ಮತ್ತೆ ಮುಖಾಮುಖಿಯಾದರು. ಡಿವಿ ಕೇವಲ 404 ಮತಗಳ ಅಂತರದಿಂದ ಗೆದ್ದು ಅವರಿಗೇ ಅಚ್ಚರಿಯಾಗುವಂತೆ ಶಾಸಕನಾದರೆಂಬ ಮಾತು ಕ್ಷೇತ್ರದಲ್ಲಿ ಇವತ್ತಿಗೂ ಪ್ರಚಲಿತದಲ್ಲಿದೆ. ಡಿವಿಯವರ ಈ ಅಚಾನಕ್ ಗೆಲುವಿನ ಕುರಿತು ಎರಡು ತರ್ಕವಿದೆ. ಸುಳ್ಯದಲ್ಲಿ ಪೇಜಾವರ ಸ್ವಾಮಿ ಕಾರಿಗೆ ಮುಸ್ಲಿಮರು ಕಲ್ಲು ಹೊಡೆದರೆಂದು ಹುಟ್ಟುಹಾಕಲಾಗಿದ್ದ ಸುಳ್ಯ-ಪುತ್ತೂರು ಗಲಭೆ ಡಿವಿಗೆ ವರವಾಯಿತೆನ್ನಲಾಗುತ್ತಿದೆ. ಮತ್ತೊಂದು ವಾದದ ಪ್ರಕಾರ ಕಾಂಗ್ರೆಸ್ಸಿಗರ ಮನೆಮುರಕುತನದಿಂದ ಡಿವಿಗೆ ಶಾಸಕ ಸೌಭಾಗ್ಯ ಪ್ರಾಪ್ತವಾಯ್ತೆನ್ನುತ್ತದೆ. ಜನಪರ ಉತ್ಸಾಹಿ ಕೆಲಸಗಾರ ಶಾಸಕ ಎನಿಸಿದ್ದ ವಿನಯ್‌ಕುಮಾರ್ ಸೊರಕೆ ವಿರದ್ಧ ತಿರುಗಿಬಿದ್ದಿದ್ದ ಕಾಂಗ್ರೆಸ್‌ನಲ್ಲಿಯ ಬಂಟರ ಒಂದು ತಂಡ ಹೇಮನಾಥ ಶೆಟ್ಟಿಯನ್ನು ಬಂಗಾರಪ್ಪರ ಕೆಸಿಪಿಯಿಂದ ಚುನಾವಣೆಗೆ ನಿಲ್ಲಿಸಿತ್ತು. ಹೇಮನಾಥ ಶೆಟ್ಟಿ ಕಾಂಗ್ರೆಸ್ ಬುಟ್ಟಿಯಿಂದ 1,782 ಮತ ತೆಗೆದದ್ದು ಡಿವಿಯವರಿಗೆ ವರವಾಯಿತೆಂದು ಅಂದಿನ ಹಣಾಹಣಿ ಕಂಡವರು ರೋಚಕವಾಗಿ ವಿವರಿಸುತ್ತಾರೆ. ಎಷ್ಟೇ ಜಾತಿ-ಮತದ ಮಸಲತ್ತು ಮಾಡಿದರೂ ಗೆಲುವಿನ ಗೆರೆ ದಾಟುವ ಸಾಮರ್ಥ್ಯ ಪಡೆಯಲಾಗದ ಬಿಜೆಪಿಗೆ ಕಾಂಗ್ರೆಸ್‌ನ ಭಿನ್ನಮತವೆ ಬಲವಾಗಿದ್ದು ಹಳೆಯ ಚುನಾವಣಾ ಅಖಾಡದ ಜಿದ್ದಾಜಿದ್ದಿ ಸೂಕ್ಷ್ಮವಾಗಿ ಅವಲೋಕಿಸಿದರೆ
ಅರ್ಥವಾಗುತ್ತದೆ.

ಡಿ.ವಿ.ಸದಾನಂದಗೌಡ

ಸೋತ ಸೊರಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಎಂಪಿಯಾಗಿ ಅಲ್ಲೆ ನೆಲೆನಿಂತರು. ಸೊರಕೆ ಪುತ್ತೂರು ಬಿಟ್ಟುಹೋದರೂ ಸ್ಥಳೀಯ ಕಾಂಗ್ರೆಸ್‌ನ ಕಾಲೆಳೆದಾಟ ಮಾತ್ರ ಕಡಿಮೆಯಾಗಲಿಲ್ಲ. ಹೀಗಾಗಿ ಡಿವಿ 1999ರಲ್ಲಿ ಕಾಂಗ್ರೆಸ್‌ನ ಸುಧಾಕರ ಶೆಟ್ಟಿಯನ್ನು ಸುಲಭವಾಗಿ ಸೋಲಿಸಿ ಎರಡನೆ ಬಾರಿ ಶಾಸಕರಾದರು. ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕರಾಗಿದ್ದ ಡಿವಿ 2004ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬದಲಿಗೆ ವಿಧಾನಸಭಾ ಚುನಾವಣೆಯ ಜತೆಯಲ್ಲೆ ಬಂದಿದ್ದ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಬಂಟ್ವಾಳದಲ್ಲಿ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ವಿಫಲರಾಗಿದ್ದ ಶಕುಂತಲಾ ಶೆಟ್ಟಿಯನ್ನು ಸಂಘ ಪರಿವಾರ ಪುತ್ತೂರಲ್ಲಿ ಹುರಿಯಾಳಾಗಿಸಿತು. ಆ ವೇಳೆಗೆ ಕಾಂಗ್ರೆಸ್‌ನ ಭಿನ್ನಮತ ಮತ್ತು ಹಿಂದುತ್ವದಿಂದ ಬಿಜೆಪಿ ಪ್ರಬಲವಾಗಿದ್ದರಿಂದ ಶಕುಂತಲಾ ಶೆಟ್ಟಿ 11,112 ಮತಗಳ ಅಂತರದಿಂದ ಕಾಂಗ್ರೆಸ್‌ನ ಸುಧಾಕರ ಶೆಟ್ಟಿಯವರನ್ನು ನಿರಾಯಾಸವಾಗಿ ಸೋಲಿಸಿ ಶಾಸಕಿಯಾದರು.

ಶಕುಂತಲಾ ಬಿಜೆಪಿ ಬಿಟ್ಟಿದ್ಯಾಕೆ?

ಧರ್ಮಕಾರಣಕ್ಕೆ ಹೆಚ್ಚು ಮಹತ್ವ ಕೊಡದೆ ಕ್ಷೇತ್ರದ ಬೇಕು-ಬೇಡಗಳತ್ತ ಗಮನ ಹರಿಸಿದ್ದ ಶಾಸಕಿ ಶಕುಂತಲಾ ಶೆಟ್ಟಿಯವರಿಗೆ ಸಂಘ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗಲಿಲ್ಲ ಎನ್ನಲಾಗುತ್ತದೆ. ಸ್ಥಳೀಯ ಸಂಘಿ ಸರ್ವೋಚ್ಚ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಕಾಣಿಕೆ-ದೇಣಿಗೆ ಪೂರೈಸದೆ ಅವರ ಕೆಂಗಣ್ಣಿಗೆ ಶಕುಂತಲಾ ತುತ್ತಾಗಿದ್ದರೆಂಬ ಮಾತು ಈಗಲೂ ಕ್ಷೇತ್ರದಲ್ಲಿ ಕೇಳಿಬರುತ್ತಿದ. ಹೀಗಾಗಿ ಅವರಿಗೆ 2008ರಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಲಾಯ್ತು. ಕಲ್ಲಡ್ಕ ಭಟ್ಟರು ತಮ್ಮ ಪರಮಾಪ್ತ ಮಿತ್ರ ಡಾ.ಪ್ರಸಾದ್ ಭಂಡಾರಿ ಮಡದಿ ಮಲ್ಲಿಕಾರನ್ನು ಬಿಜೆಪಿ ಅಭ್ಯರ್ಥಿಯನ್ನಾರುಗಿಮಾಡಿದ್ದರು. ಈ ಕದನ ಕುತೂಹಲದಲ್ಲಿ ಬಿಜೆಪಿಯ ಮಲ್ಲಿಕಾ 46,605, ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ 45,180, ಪಕ್ಷೇತರರಾಗಿ ಸೆಡ್ಡು ಹೊಡೆದಿದ್ದ ಶಾಸಕಿ ಶಕುಂತಲಾ ಶೆಟ್ಟಿ 25,171 ಮತ ಪಡೆದರು. ಬಿಜೆಪಿ ಅಭ್ಯರ್ಥಿ ಮಲ್ಲಿಕಾ ಭಂಡಾರಿ 1,425 ಮತಗಳ ತೀರಾ ಸಣ್ಣ ಅಂತರದಲ್ಲಿ ದಡ ಸೇರಿದ್ದರು. ಕಲ್ಲಡ್ಕ ಭಟ್ಟರು ಗೆದ್ದು ಸೋತಿದ್ದರೆಂದು 2008ರ ಕದನ ಕಥನವನ್ನು ಪುತ್ತೂರಿನ ಜನರು ಮೆಲಕು ಹಾಕುತ್ತಾರೆ!

2013ರ ಚುನಾವಣೆ ಬರುವ ಹೊತ್ತಿಗೆ ಶಕುಂತಲಾ ಕಾಂಗ್ರೆಸ್ ಸೇರಿದ್ದರು. ಆಗ ಬಿಸಿಸಿ ಅಧ್ಯಕ್ಷರಾಗಿದ್ದ ಹೇಮನಾಥ ಶೆಟ್ಟಿಗೆ ಟಿಕೆಟ್ ಎನ್ನಲಾಗಿತ್ತು. ಆದರೆ 1994ರಲ್ಲಿ ತನ್ನ ಸೋಲಿಗೆ ಕಾರಣವಾಗಿದ್ದ ಹೇಮನಾಥ ಶೆಟ್ಟಿಗೆ ಟಿಕೆಟ್ ತಪ್ಪಿಸಲು ವಿನಯ್‌ಕಮಾರ್ ಸೊರಕೆ ಶಕುಂತಲಾ ಅವರನ್ನು ಕಾಂಗ್ರೆಸ್ಸಿಗೆ ಸೇರುವಂತೆ ನೋಡಿಕೊಂಡರೆನ್ನಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯೂ ಆದ ಶಕುಂತಲಾ ತನ್ನ ವೈಯಕ್ತಿಕ ವರ್ಚಸ್ಸಿನ ಮತಗಳನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಜತೆ ಸೇರಿಸಿಕೊಂಡು ಗೆದ್ದರು. ಅಂದು 4,283 ಮತಗಳ ಅಂತರದಿಂದ ಸೋತಿದ್ದ ಬಿಜೆಪಿಯ ಸಂಜೀವ ಮಠಂದೂರು. 2018ರಲ್ಲಿ ಕರಾವಳಿಯಲ್ಲಾದ ಮತೀಯ ಧ್ರುವೀಕರಣದ ಆರ್ಭಟದಲ್ಲಿ ಶಕುಂತಲಾ ಶೆಟ್ಟಿಯವರನ್ನು ದೊಡ್ಡ ಅಂತರದಲ್ಲಿ (19,477) ಮಣಿಸಿ ಅವರು ಎಮ್ಮೆಲ್ಲೆ ಎನಿಸಿಕೊಂಡರೆಂದು ವ್ಯಾಖ್ಯಾನಿಸಲಾಗುತ್ತಿದೆ.

ಕ್ಷೇತ್ರದ ಕಥೆ-ವ್ಯಥೆ

ಕೋಟ್ಯಂತರ ರೂ ಅಡಿಕೆ ವ್ಯವಹಾರದ ದುಡ್ಡಿನ ಪುತ್ತೂರು ಪೇಟೆಯ ಥಳುಕು-ಬಳುಕು ಕಂಡರೆ ಇಡೀ ತಾಲೂಕು ಸುಭಿಷ್ಟವಾಗಿರಬಹುದೆಂಬ ಭ್ರಮೆ ಮೂಡುತ್ತದೆ. ಆದರೆ ವಾಸ್ತವ ವಿರುದ್ಧವಾಗಿದೆ. ಸರಿಯಾದ ರಸ್ತೆ, ಸಂಪರ್ಕ ಸೇತುವೆ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಸೌಕರ್ಯ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮಸ್ಯೆಗಳಿವೆ. ಮೂಲ ಸೌಲಭ್ಯಗಳಿಲ್ಲದ ಶಾಲೆ-ಹೈಸ್ಕೂಲ್-ಜೂನಿಯರ್ ಕಾಲೇಜುಗಳಿರವ ಹಲವು ಹಳ್ಳಿಗಳು ಪುತ್ತೂರಲ್ಲಿವೆ. ಶಾಸಕ ಸಂಜೀವ ಮಠಂದೂರರ ತವರು ಗ್ರಾಮ ಹಿರೇಬಂಡಾಡಿಯ ಮಂದಿಯೆ ರಸ್ತೆ ನಿರ್ಮಾಣಕ್ಕಾಗಿ ಮತ್ತು ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿ ಶಾಸಕರಿಗೆ ಘೇರಾವ್ ಹಾಕಿದ್ದೂ ಆಗಿದೆ.

ಸದಾನಂದ ಗೌಡ ಸಿಎಂ ಆಗಿದ್ದಾಗ ಟೈರ್ ಫ್ಯಾಕ್ಟರಿ ಸ್ಥಾಪಿಸುವುದಾಗಿ ಹೇಳಿದ್ದು ಹುಸಿಯಾಗಿದೆ ಎಂಬ ಆಕ್ರೋಶ ಜನರಲ್ಲಿದೆ. ಸ್ಥಳೀಯರ ಜೀವನಮಟ್ಟ ಸುಧಾರಿಸುವ ಸಣ್ಣ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಪ್ರೇಕ್ಷಣೀಯ ಸ್ಥಳಗಳಾದ ಬೆಂದ್ರುತೀರ್ಥ, ಗೆಜ್ಜೆಗಿರಿ, ನಿನ್ನಿಕಲ್ಲು, ಹನುಮಗಿರಿ, ಬಿರುಮಲೆ ಬೆಟ್ಟಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಬೆಳೆದು ನಿರುದ್ಯೋಗಿ ಯುವಸಮೂಹ ಅನೈತಿಕ ಪೊಲೀಸ್‌ಗಿರಿ, ದನ ಹಿಡಿಯುವ ’ಸಾಹಸ’ ಬಿಟ್ಟು ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಾರೇನೋ ಎಂದು ಹಿರಿಯರು ಹೇಳುತ್ತಾರೆ.

ಶಕುಂತಲಾ ಶೆಟ್ಟಿ

ಜಿಲ್ಲಾ ಕೇಂದ್ರ ಮಂಗಳೂರಿಂದ ದೂರದಲ್ಲಿರುವ ಪುತ್ತೂರು ಮತ್ತದರ ಸುತ್ತಲಿನ ತಾಲೂಕುಗಳಲ್ಲಿ ವಾಸಿಸುವ ಬಡ ಜನರ ಕೈಗೆಟುಕುವ ಒಂದು ಸರಕಾರಿ ಹೈಟೆಕ್ ಆಸ್ಪತ್ರೆ ಬೇಕಾಗಿದೆ. ಕಿಡ್ನಿ ರೋಗಿಗಳಿಗೆ ಅನಿವಾರ್ಯವಾದ ಡಯಾಲಿಸಿಸ್ ಸೆಂಟರ್‌ಗಳು ಹೆಚ್ಚಾಗಬೇಕಿದೆ.

ಶಾಸಕ ಸಂಜೀವ ಮಠಂದೂರು ಮತ್ತು ಪುತ್ತೂರಿನವರೆ ಆಗಿರುವ ಸಂಸದ ನಳಿನ್‌ಕುಮಾರ್ ಕಟೀಲ್‌ಗೆ ಕ್ಷೇತ್ರದ ಬೇಕು-ಬೇಡಗಳ ಅರಿವಿಲ್ಲ ಎಂಬ ಅಸಮಾಧಾನ-ಆಕ್ರೋಶ ಪುತ್ತೂರಲ್ಲಿದೆ. ರಿಂಗ್ ರಸ್ತೆ ವೇಗವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಅನಿವಾರ್ಯವಾಗಿದೆ. ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿವರೆಗೆ ದ್ವಿಪಥ ರಸ್ತೆಯಾಗಬೇಕಾಗಿದೆ.

ಶಾಸಕರ ಉದಾಸೀನದಿಂದ ಕ್ರೀಡಾಂಗಣ ಅಭಿವೃದ್ಧಿ ಕೆಲಸ ನೆನೆಗುದಿಗೆ ಬಿದ್ದಿದೆಯೆಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಆರೋಪಿಸುತ್ತಾರೆ. ಪುತ್ತೂರಲ್ಲಿ ಒಂದು ಪಾಲಿಟೆಕ್‌ನಿಕ್ ಕಾಲೇಜು ಸಹ ಇಲ್ಲವೆಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಮತೀಯ ಧ್ರುವೀಕರಣ ಪುತ್ತೂರನ್ನು ಹೋಳಾಗಿಸಿರುವುದು. ಶಾಲೆ-ಕಾಲೇಜಿನ ಮುಗ್ಧ ಮಕ್ಕಳ ಮನಸ್ಸಿಗೂ ಕೋಮು ಕಾರ್ಕೋಟಕ ವಿಷ ತುಂಬಲಾಗಿದೆ. ಹಿಂದು-ಮುಸ್ಲಿಮ್ ಸಹಪಾಠಿ ಹುಡುಗ-ಹುಡುಗಿ ಮಾತಾಡುವುದೂ ನಿಷಿದ್ಧ; ಬಸ್ಸಲ್ಲಿ ಹತ್ತಿರ ನಿಂತರೂ ಅಪರಾಧ. ಜಾನುವಾರು ಸಾಗಾಟದ ನೆಪದಲ್ಲಿ ಯಾವ ಅಮಾಯಕ ಮುಸ್ಲಿಮ್ ಮನುಷ್ಯನಿಗೆ ಎಲ್ಲಿ ಯಾವಾಗ ಹಲ್ಲೆ-ಸುಲಿಗೆ ಆಗುತ್ತದೋ ಹೇಳಲಾಗದು; ಈಚೆಗೆ ಎಲ್ಲ ಧರ್ಮೀಯರು ಬೆರೆತು ಆಚರಿಸುವ ಮಾಹಾಲಿಂಗೇಶ್ವರ ಜಾತ್ರೆಯಲ್ಲಿ ರಿಕ್ಷಾದವರು ಕೇಸರಿ ಬಾವುಟ ಹಾಕಿಕೊಂಡು ಹಿಂದುಗಳಿಗೆ ಮಾತ್ರ ರಿಕ್ಷಾ ಬಾಡಿಗೆಗೆ ಪಡೆಯುವ ಅವಕಾಶ ಕೊಡಬೇಕು-ಮುಸ್ಲಿಮರ ಬಾಡಿಗೆಗೆ ಹೋಗಬಾರದೆಂಬ ಫರ್ಮಾನು ಹೊರಡಿಸಲಾಗಿತ್ತು. ಆದರೆ ಇದಕ್ಕೆ ರಿಕ್ಷಾ ಯೂನಿಯನ್‌ನಲ್ಲೆ ಸಹಮತ ವ್ಯಕ್ತವಾಗದ್ದರಿಂದ ಪುತ್ತೂರು ಸಂಭವನೀಯ ಅನಾಹುತದಿಂದ ಪಾರಾಯಿತು; ಪುತ್ತೂರಿನ ಪೊಲೀಸ್ ಸ್ಟೇಷನ್ ಮತ್ತಿತರ ಸರಕಾರಿ ಕಚೇರಿಗಳಲ್ಲಿ ಕೇಸರಿ ಶಾಲು-ಕಡು ಕೆಂಪು ಕುಂಕುಮದವರ ಇಷ್ಟಾನಿಷ್ಟವೆ ಆಡಳಿತ. ತಾಲಿಬಾನಿ ಮಾದರಿಯ ಕಾರ್ಯಾಚರಣೆ ಪುತ್ತೂರಲ್ಲಿ ನಿತ್ಯ ’ಕರ್ಮ’ದಂತಾಗಿದೆಯೆಂದು ಹೆಸರು ಹೇಳಲಿಚ್ಚಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ದುಗುಡದಿಂದ ಅಲ್ಲಿನ ಪರಿಸ್ಥಿತಿ ವಿವರಿಸಿದರು.

ಶಾಸಕನಾಗುವ ಇರಾದೆಯಲ್ಲಿ ನಳಿನ್?!

ಪುತ್ತೂರು ವಿಧಾನಸಭಾ ಕ್ಷೇತ್ರದ ನಾಡಿಮಿಡಿತ ಅರ್ಥವಾಗದ ಬಿಜೆಪಿ ಶಾಸಕ ಸಂಜೀವ ಮಠಂದೂರು ಇತ್ತ ಜನರೂ ಮೆಚ್ಚದ, ಅತ್ತ ಸಂಘಿಗಳಿಗೂ ಬೇಡದವರಾಗಿದ್ದಾರೆ. ಮಠಂದೂರು ಮೂಲ ಬಿಜೆಪಿ ಅಥವ ಸಂಘ ಸಂಸ್ಕಾರದವರಲ್ಲ. ಕಮ್ಯುನಿಸ್ಟ್ ಸಿದ್ಧಾಂತದ ಮಠಂದೂರು ಸಿಪಿಎಂನಿಂದ ರಾಜಕಾರಣ ಶುರುಮಾಡಿದವರು; ನಂತರ ಜನತಾದಳದಲ್ಲಿದ್ದರು. ಪುತ್ತೂರು ರಾಜಕಾರಣದಲ್ಲಿ ಮಾಜಿ ಸಿಎಂ ಸದಾನಂದ ಗೌಡ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಅವರ ಸಂಬಂಧಿಯಾದ ಮಠಂದೂರು ಬಿಜೆಪಿ ಸೇರಿದ್ದರು. ಆದರೆ ಸದಾನಂದ ಗೌಡರು ರಿಯಲ್ ಎಸ್ಟೇಟ್ ಉದ್ಯಮಿ ಅಶೋಕ್‌ಕುಮಾರ್ ರೈಯನ್ನು ಹೆಚ್ಚು ಹತ್ತಿರ ಇಟ್ಟುಕೊಂಡಿದ್ದರು. ಇದು ತಿಳಿದ ಸಂಸದ ನಳಿನ್‌ಕುಮಾರ್ ಕಟೀಲ್ ಮಠಂದೂರನ್ನು ಸೆಳೆದು ಡಿವಿಗೆ ಚೆಕ್‌ಮೇಟ್ ಕೊಟ್ಟಿದ್ದರೆಂದು ಹೇಳಲಾಗುತ್ತಿದೆ.

ಶಾಸಕನಾಗುವ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದ ಹಣವಂತ ಅಡಿಕೆ ತೋಟಿಗ ಮಠಂದೂರನ್ನು ಕಟೀಲ್ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದರು. 2018ರ ಚುನಾವಣೆಯಲ್ಲಿ ಸದಾನಂದ ಗೌಡರು ತಮ್ಮ ಅನುಯಾಯಿ ಅಶೋಕ್‌ಕುಮಾರ್‌ರನ್ನು ಬಿಜೆಪಿ ಹುರಿಯಾಳಾಗಿಸಲು ಶತಪ್ರಯತ್ನ ಮಾಡಿದ್ದರಾದರೂ, ಸಂಸದ ಕಟೀಲ್ ಕೈಮೇಲಾಗಿ ಮಠಂದೂರು ಟಿಕೆಟ್ ಗಿಟ್ಟಿಸಿದರೆಂದು ಬಿಜೆಪಿಯವರು ಹೇಳುತ್ತಾರೆ. ಪಕ್ಕದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಹೋಲಿಸಿದರೆ ಸೌಮ್ಯವಾದಿ ಎಂಬ ಅಭಿಪ್ರಾಯವನ್ನು ಕ್ಷೇತ್ರದಲ್ಲಿ ಹೊಂದಿರುವ ಮಠಂದೂರು ಕಂಡರೆ ಕಟ್ಟರ್ ಸಂಘೀ ಗುಂಪಿಗೆ ಆಗುವುದಿಲ್ಲ ಎನ್ನಲಾಗುತ್ತಿದೆ. ಮಠಂದೂರು ಮುಸ್ಲಿಮರ ಮೇಲೆ ಮುಗಿಬೀಳುವುದಿಲ್ಲ, ನಾವು ದಾಳಿ ಮಾಡಿದಾಗಲೂ ಸಪೋರ್ಟ್ ಮಾಡುವುದಿಲ್ಲ ಎಂಬ ಆಕ್ರೋಶ ಕೇಸರಿ ಪಡೆಯ ಕೌ ಬಾಯ್ಸ್ ಮತ್ತು ಅನೈತಿಕ ಪೊಲೀಸರದೆನ್ನುವ ಮಾತು ಕೇಳಿಬರುತ್ತಿದೆ.

ನಳಿನ್‌ಕುಮಾರ್ ಕಟೀಲ್

ಮಠಂದೂರರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ತಂತ್ರಗಾರಿಕೆ ಬಿಜೆಪಿ ಒಳಗೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಅಸಮರ್ಥನೆಂದು ಬಿಂಬಿಸಲು ಕಳಪೆ ಕಾಮಗಾರಿಯ ಬಗ್ಗೆ ಆಕ್ಷೇಪ, ಮೂಲ ಸೌಕರ್ಯ ಬೇಡಿಕೆ ಮುಂದಿಟ್ಟು ಪ್ರತಿಭಟನೆ, ಶಾಸಕರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮಗಳನ್ನು ಸಂಘಿ ಸರದಾರರೆ ವ್ಯವಸ್ಥಿತವಾಗಿ ಮಾಡಿಸುತ್ತಿದ್ದಾರೆಂಬ ಭಾವನೆ ಕ್ಷೇತ್ರದಲ್ಲಿ ಮೂಡಿದೆ. ಇದರ ಹಿಂದೆ ಕಟೀಲ್ ಕೈವಾಡವಿರುವ ಅನುಮಾನದ ಮಾತುಗಳು ಕೇಳಿಬರುತ್ತಿದೆ. ಸದಾನಂದ ಗೌಡರ ಶಿಷ್ಯ ಅಶೋಕ್‌ಕುಮಾರ್ ರೈ ತನಗೆ ಟಿಕೆಟ್ ಸಿಗದಂತೆ ಕಟೀಲ್ ಮಾಡುತ್ತಾರೆಂಬುದು ಖಾತ್ರಿ ಆಗಿರುವುದರಿಂದ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆನ್ನಲಾಗುತ್ತಿದೆ.

ಮುಖ್ಯಮಂತ್ರಿಯಾಗಿದ್ದಾಗಲೂ ಪುತ್ತೂರು ಪ್ರಗತಿಗೆ ಪ್ರಯತ್ನ ಮಾಡಲಿಲ್ಲವೆಂಬ ಅಸಮಾಧಾನ ಮತ್ತು ಸೆಕ್ಸ್ ಸಿಡಿ ಆರೋಪ ಸದಾನಂದ ಗೌಡರನ್ನು ಕಳೆಗುಂದಿಸಿದ್ದು, ಸ್ಥಳೀಯ ಬಿಜೆಪಿಯಲ್ಲೀಗ ಕಟೀಲ್ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿದ್ದಾರೆಂದು ರಾಜಕೀಯಾಸಕ್ತರು ವ್ಯಾಖ್ಯಾನಿಸುತ್ತಾರೆ. ಪುತ್ತೂರಿನ ಅನೈತಿ ಪೊಲೀಸ್ ಮತ್ತು ಕೌ ಬ್ರಿಗೇಡ್‌ನ ಕಣ್ಮಣಿಯಾಗಿರುವ ಕಟೀಲ್ ಶಾಸಕನಾಗುವ ಯೋಜನೆ ಹಾಕಿಕೊಂಡಿದ್ದಾರೆಂಬ ಸುದ್ದಿ ಹಬ್ಬಿದೆ. ಬಿಜೆಪಿಯ ರಾಜ್ಯಾಧಕ್ಷತೆಯಿಂದ ಕಟೀಲ್‌ರನ್ನು ಕೆಳಗಿಳಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ; ಮೂರು ಬಾರಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಎಂಪಿಯಾಗಿರುವ ಕಟೀಲ್‌ರಿಗೆ ಮತ್ತೆ ಅವಕಾಶ ಪಡೆಯಲು ಕರಾವಳಿ ಸಂಘ ಸುಪ್ರಿಮೋ ಕಲ್ಲಡ್ಕ ಭಟ್ಟರು ಬಿಡರು ಎನ್ನುವ ಮಾತೂ ಕೇಳಿಬರುತ್ತಿದೆ. ಹೀಗಾಗಿ ಕಟೀಲ್ ಶಾಸಕನಾಗಲು ಕ್ಷೇತ್ರ ಹದಗೊಳಿಸಿಕೊಳ್ಳುತ್ತಿದ್ದಾರೆಂಬ ತರ್ಕಗಳು ನಡೆದಿವೆ.

ಅತ್ತ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮತ್ತು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ನಡುವೆ ಟಿಕೆಟ್ ಟಸಲ್ ನಡೆಯುತ್ತಿದೆ. ಉಡುಪಿಯ ಕಾಪು ಕ್ಷೇತ್ರಕ್ಕೆ ನೆಲೆ ಬದಲಿಸಿದರೂ ತವರು ಪುತ್ತೂರಲ್ಲಿನ್ನೂ ವರ್ಚಸ್ಸು ಉಳಿಸಿಕೊಂಡಿರುವ ಮಾಜಿ ಮಂತ್ರಿ ವಿನಯ್‌ಕುಮಾರ್ ಸೊರಕೆ ಶಕುಂತಲಾ ಶೆಟ್ಟಿಯವರ ಬೆನ್ನಿಗಿದ್ದಾರೆನ್ನಲಾಗುತ್ತಿದೆ. ಮಾಜಿ ಶಾಸಕಿಯವರಿಗೆ 77 ವರ್ಷ ಆಗಿರುವುದರಿಂದ ತಾನೆ ಕಾಂಗ್ರೆಸ್ ಕ್ಯಾಂಡಿಡೇಟಾಗಲು ಅರ್ಹನೆನ್ನುತ್ತಿರುವ ಹೇಮನಾಥ ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೃಪಾಶೀರ್ವಾದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರ ಜಗಳದಲ್ಲಿ ಈಗಾಗಲೆ ಒಂದು ಕಾಲು ಕಾಂಗ್ರೆಸ್‌ನಲ್ಲಿಟ್ಟಿರುವ ಬಿಜೆಪಿಯ ಅಶೋಕ್‌ಕುಮಾರ್ ರೈ ರಾಜಿ ಅಭ್ಯರ್ಥಿಯಾಗಿ ಅವತರಿಸಬಹುದೇ ಎಂಬ ಕುತೂಹಲ ಮೂಡಿದೆ. ಈ ಇಳಿವಯಸ್ಸಿನಲ್ಲೂ ಕ್ಷೇತ್ರ ಕಾಳಜಿ ಮತ್ತು ಜನಸಂಪರ್ಕ ಕಡಿಮೆಯಾಗದ ಶಕುಂತಲಾ ಶೆಟ್ಟಿಯಷ್ಟು ಗಟ್ಟಿ ಅಭ್ಯರ್ಥಿ ಕಾಂಗ್ರೆಸ್‌ನಲ್ಲಿ ಇಲ್ಲವೆಂಬ ಮಾತು ಕೇಳಿಬರುತ್ತಿದೆ.

ಕಟೀಲ್ ಬಿಜೆಪಿಯ ಕಪ್ಪುಕುದುರೆ ಆಗುವರೆ? ಕಲ್ಲಡ್ಕ ಭಟ್ಟರು ಹಳೆ ಶಿಷ್ಯನ ಮೇಲಿನ ಸಿಟ್ಟು ಬಿಟ್ಟು ಸಹಕರಿಸುವರೆ ಎಂಬ ರೋಚಕ ಚರ್ಚೆಗಳು ಕಟ್ಟೆ ಪುರಾಣಗಳು ಕ್ಷೇತ್ರದಲ್ಲಿ ಚಾಲ್ತಿಯಲ್ಲಿವೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸುಳ್ಯ: ದಲಿತ ಮೀಸಲು ಕ್ಷೇತ್ರದಲ್ಲಿ ಬಲಿತವರ ಧರ್ಮಾಕಾರಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...