Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸುಳ್ಯ: ದಲಿತ ಮೀಸಲು ಕ್ಷೇತ್ರದಲ್ಲಿ ಬಲಿತವರ ಧರ್ಮಾಕಾರಣ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸುಳ್ಯ: ದಲಿತ ಮೀಸಲು ಕ್ಷೇತ್ರದಲ್ಲಿ ಬಲಿತವರ ಧರ್ಮಾಕಾರಣ!

- Advertisement -
- Advertisement -

ದಟ್ಟ ಮಲೆಗಳ ಮಧ್ಯದಲ್ಲಿರುವ ಹಚ್ಚಹಸುರಿನ ಸುಳ್ಯ ಕೆಚ್ಚೆದೆಯ ಕ್ರಾಂತಿಯ ನೆಲ! ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಗುರುತಿಸಲಾಗಿರುವ ಸಿಪಾಯಿ ದಂಗೆಗೂ ಇಪ್ಪತ್ತು ವರ್ಷ ಮೊದಲೆ, 1837ರಲ್ಲಿ ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ರೈತರು ಬ್ರಿಟಿಷರ ವಿರುದ್ಧ ಬಂಡೆದ್ದಿದ್ದರು. ಅರೆಭಾಷಿಕರ ಮುಂದಾಳತ್ವದಲ್ಲಿ ನಡೆದ ಈ ಸ್ವಾತಂತ್ರ್ಯ ಹೋರಾಟದ ಕಿಚ್ಚು ಸಂಪೂರ್ಣ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿತ್ತು. ಈ ಸಶಸ್ತ್ರ ಹೋರಾಟ ಕೊಡಗು-ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ ಅಥವಾ ಅಮರ ಸುಳ್ಯ ರೈತ ದಂಗೆ ಎಂದು ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಜಾತಿ-ಪಂಥದ ಸೋಂಕು ಬಹಳ ಹರಡದೆ, ಸ್ವಾಭಿಮಾನದ ಸಮರಕ್ಕೆ ಸ್ಫೂರ್ತಿಯಾಗಿದ್ದ ಸುಳ್ಯ-ಕಡಬ ವಿಧಾನಸಭಾ ಕ್ಷೇತ್ರವೀಗ ಅಸಹಿಷ್ಣುತೆಯ ಧರ್ಮಯುದ್ಧದ ಪ್ರಯೋಗಶಾಲೆಯಂತಾಗಿರುವುದು ವಿಪರ್‍ಯಾಸವೆಂದು ಹಿರಿಯ ಜೀವಗಳು ಕಳವಳಿಸುತ್ತವೆ.

ಭೂಗೋಳ-ಇತಿಹಾಸ-ಸಂಸ್ಕೃತಿ-ವಾಣಿಜ್ಯ

ಜನವಸತಿಗಿಂತ ಕಾಡು ಪ್ರದೇಶವೇ ಹೆಚ್ಚಿರುವ ಸುಳ್ಯ ಹಾಗು ಕಡಬ ತಾಲೂಕಲ್ಲಿ ಮಳೆಗಾಲದಲ್ಲಿ ಧೋ ಎಂದು ಮುಸಲಧಾರೆ ಸುರಿಯುತ್ತದಾದರೂ ಕರಾವಳಿಯ ಪರ್ವತಗಳ ಉಷ್ಣ ಹವಾಮಾನ ಬಾಧಿಸುತ್ತದೆ. ಅರಣ್ಯ, ಭತ್ತದ ಗದ್ದೆಗಳು ಮತ್ತು ಅಡಿಕೆ-ರಬ್ಬರ್-ತೆಂಗು-ಕೊಕ್ಕೊ ತೋಟಗಳ ಹಸಿರಿನಿಂದ ನಳನಳಿಸುವ ಎರಡೂ ತಾಲೂಕಿಗೆ ಪಯಸ್ವಿನಿ ಮತ್ತು ಕುಮಾರಧಾರಾ ನದಿಗಳು ಜೀವ-ಜೀವನ ತುಂಬಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿದ್ದ ಸುಳ್ಯ 1965ರಲ್ಲಿ ದಕ್ಷಿಣ ಕನ್ನಡದ ದಕ್ಷಿಣ ತುದಿಯ ಸ್ವತಂತ್ರ ತಾಲೂಕಾಯಿತು.

ಹಾಸನ, ಕೊಡಗು ಮತ್ತು ಕೇರಳದೊಂದಿಗೆ ಗಡಿಹಂಚಿಕೊಂಡಿರುವ ಸುಳ್ಯಕ್ಕೆ ಎರಡು ಸ್ಥಳನಾಮ ಪುರಾಣಗಳಿವೆ. ಸುಳಿ ಶಬ್ದದಿಂದ ಸುಳ್ಯ ಉದ್ಭವವಾಯಿತು ಎಂಬುದು ಒಂದು ವಾದ. ಮತ್ತೊಂದು ತರ್ಕದಂತೆ ಸೂಳೆ ಗದ್ದೆ ಸೂಳಯ ಎಂದಾಯಿತಂತೆ. ನಂತರ ಸೂಳ್ಯ ಪದ ಹುಟ್ಟಿಕೊಂಡಿತು. ಅಂತಿಮವಾಗಿ ಸುಳ್ಯ ಎಂದು ಕರೆಯಲ್ಪಡುತ್ತಿದೆ ಎನ್ನಲಾಗುತ್ತಿದೆ. ದೊಡ್ಡ ತಾಲೂಕಾದ ಸುಳ್ಯದ ಕಡಬ ಮತ್ತದರ ಸುತ್ತಲಿನ ಗ್ರಾಮಗಳನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚಿಸುವಂತೆ ಎರಡು ದಶಕಗಳ ಕಾಲ ಹೋರಾಟ ನಡೆದಿತ್ತು. 2018ರಲ್ಲಿ ಸುಳ್ಯ-ಪುತ್ತೂರು ಮತ್ತು ಬೆಳ್ತಂಗಡಿಯ ಕೆಲವು ಹಳ್ಳಿಗಳನ್ನು ಸೇರಿಸಿ ಕಡಬ ತಾಲೂಕು ಘೋಷಿಸಲಾಗಿದೆ.

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲೆ ಅತಿಹೆಚ್ಚು ಕೋಟಿಗಳ ಆದಾಯವಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪಡೆದಿರುವ ನೂತನ ಕಡಬ ತಾಲೂಕು ಕದಂಬ ಸಂಸ್ಥಾನದ ಪ್ರಮುಖ ಭಾಗವಾಗಿತ್ತೆಂಬ ಚರಿತ್ರೆಯಿದೆ. ಸುಳ್ಯದಂತೆ ಕಡಬದಲ್ಲೂ ಪಶುಸಂಗೋಪನೆ ಹಲವು ಕುಟುಂಬಗಳ ಆರ್ಥಿಕ ಮೂಲವಾಗಿದೆ. ಅಡಿಕೆ, ತೆಂಗು, ರಬ್ಬರ್, ಗೋಡಂಬಿ, ಕೋಕೋ, ವೀಳ್ಯದ ಎಲೆ, ಕರಿಮೆಣಸು, ಶುಂಠಿ, ಯಾಲಕ್ಕಿ, ಮರ ಗೆಣಸು ಅವಿಭಜಿತ ಸುಳ್ಯದ ವಾಣಿಜ್ಯ ಬೆಳೆಗಳು. ಸುಳ್ಯ ಹಾಗು ಕಡಬದ ಆರ್ಥಿಕತೆಯ ಜೀವ-ಜೀವಾಳ ಅಡಿಕೆ ಮತ್ತು ರಬ್ಬರ್. ಅಡಿಕೆ ಬೆಲೆ ತೇಜಿಯಾಗಿರುವದರಿಂದ ತೋಟಿಗರು ಮತ್ತು ತೋಟ ಕಾರ್ಮಿಕರು ಮೊದಲಿನಷ್ಟು ಹತಾಶೆಯಲ್ಲಿಲ್ಲ. ಆದರೆ ಅಡಿಕೆ ಮರಗಳಿಗೆ ಹಬ್ಬುತ್ತಿರುವ ಹಳದಿ ರೋಗ ತೋಟ ಅವಲಂಬಿತರನ್ನು ಆತಂಕಕ್ಕೆ ಈಡುಮಾಡಿದೆ.

ತುಳುವ ಸಂಸ್ಕೃತಿಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಭೂತ ಕೋಲ, ನಾಗಾರಾಧನೆ, ದೈವಾರಾಧನೆ, ಯಕ್ಷಗಾನ ಸಂಪ್ರದಾಯ ಜನಜೀವನದ ಅವಿಭಾಜ್ಯ ಅಂಗ. ಶೇ.41ರಷ್ಟು ಮಂದಿಯ ಮಾತೃಭಾಷೆಯಾದ ತುಳು ಹೊರ ಪ್ರಪಂಚದ ಸಂವಹನಕ್ಕೆ ಶೇ.90ರಷ್ಟು ಬಳಕೆಯಾಗುತ್ತಿದೆ. ಸಮುದಾಯ ಭಾಷೆಗಳಾದ ಅರೆ ಭಾಷೆ, ಕೊಂಕಣಿ, ಹವ್ಯಕ ಬ್ರಾಹ್ಮಣ ಕನ್ನಡ, ಬ್ಯಾರಿ, ಮರಾಠಿ, ಮಲಯಾಳಂ, ಕೊರಗ ಭಾಷೆಗಳು ಕೇಳಿಬರುತ್ತದೆ. ಕೇರಳದಿಂದ ವಲಸೆ ಬಂದು ರಬ್ಬರ್ ಪ್ಲಾಂಟೇಶನ್ ಮಾಡಿಕೊಂಡು ನೆಲೆನಿಂತಿರುವ ಕ್ರಿಶ್ಚಿಯನ್ ಸಮುದಾಯ ಮತ್ತು ಶಾಸ್ತ್ರಿ-ಸಿರಿಮಾವೊ ಒಪ್ಪಂದದಂತೆ ಬಂದಿರುವ ಶ್ರೀಲಂಕಾದ ನಿರಾಶ್ರಿತ ತಮಿಳರು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟ ಮತ್ತು ರಬ್ಬರ್ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದಾರೆ.

ಬಹುಜನ ಸಮಾಜವೆ ದೊಡ್ಡದಿರುವ ಜಲ-ಸಸ್ಯ ಸಮೃದ್ಧಿಯ ಸುಳ್ಯ-ಕಡಬದಲ್ಲಿ ಮಡಿ-ಮೈಲಿಗೆ, ಮೇಲು-ಕೀಳು, ಜಮೀನ್ದಾರಿ ಪಾಳೆಗಾರಿಕೆಯ ಶೋಷಣೆ ನಾಜೂಕಾಗಿ ನಡೆದುಕೊಂಡಿದೆ. ಕಾಡಿನಂಚಿನಲ್ಲಿ ಮಲೆಕುಡಿಯ, ಕೊರಗ ಮತ್ತು ಮಾರಾಠಿ ಬುಡಕಟ್ಟು ಸಮುದಾಯ ಗೋಳಿನ ಬಾಳು ಸಾಗಿಸುತ್ತಿವೆ. ಕನಿಷ್ಟ ನಾಗರಿಕ ಸೌಲಭ್ಯಗಳೆ ಇಲ್ಲದ ಬುಡಕಟ್ಟು ಮಂದಿಯ ಕೇರಿಗಳ ಅಭಿವೃದ್ಧಿಗೆ ಈ ದಲಿತ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಯಾವ ಶಾಸಕನೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸದಿರುವುದು ದುರಂತವೆಂಬ ಆಕ್ಷೇಪ ಸಾಮಾನ್ಯವಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಯೋಜನೆ-ಕಾರ್ಖಾನೆಗಳಿಲ್ಲದ ಸುಳ್ಯ-ಕಡಬದಿಂದ ಹೊಟ್ಟೆಪಾಡಿನ ವಲಸೆ ನಡೆದಿದೆ!

ಪೇಜಾವರರ ಕಾರಿಗೆ ’ಕಲ್ಪಿತ’ ದಾಳಿ

1993ರ ತನಕ ಶಾಂತಿ-ಸೌಹಾರ್ದತೆಯಿಂದಿದ್ದ ಅವಿಭಜಿತ ಸುಳ್ಯ ಆ ಬಳಿಕ ಸಂಘಪರಿವಾರದ ಆಡಂಬೊಲದಂತಾಗಿ ಹೋಗಿದೆ; ಯಕಶ್ಚಿತ್ ವೈಯಕ್ತಿಕ ಸಮಸ್ಯೆ-ಸಂಘರ್ಷವೂ ಕೋಮುದಳ್ಳುರಿಯಾಗುವ ಸೂಕ್ಷ್ಮ ಪ್ರದೇಶವೆನಿಸಿದೆ. 1993ರ ಜನವರಿ ಕೊನೆಯಲ್ಲಿ ಹಿಂದುತ್ವ ಆಸ್ಥಾನದ ರಾಜರ್ಷಿಯಂತಿದ್ದ ದಿವಂಗತ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮಿ ಮತ್ತವರ ಶಿಷ್ಯ ಸಂಕುಲ ಸುಳ್ಯದ ಮೂಲಕ ಮೈಸೂರಿಗೆ ಹೊರಟಿತ್ತು. ಸ್ವಾಮಿ ಕಾರು ಸುಳ್ಯ ಗಡಿ ದಾಟಿತ್ತು. ಆದರೆ ಶಿಷ್ಯರ ಟೆಂಪೋ ಪುತ್ತೂರು-ಸುಳ್ಯ ಮುಖ್ಯರಸ್ತೆಯ ಬದಿಯಲ್ಲಿರುವ ಪೈಚಾರು ಬಳಿಯ ಒಡಬಾಯ್ ಎಂಬಲ್ಲಿಯ ಪಯಸ್ವಿನಿ ನದಿ ದಂಡೆಗೆ ಹೋಗಿತ್ತು. ಅಲ್ಲಿ ಒಂದೆರಡು ಮುಸ್ಲಿಮರ ಮನೆಗಳಿವೆ. ಅಲ್ಲಿ ಆಟ ಆಡುತ್ತಿದ್ದ ಮಕ್ಕಳ ಒಂದು ಗುಂಪಿಂದ ಸಣ್ಣ ಕಲ್ಲೊಂದು ಪೇಜಾವರ ಶಿಷ್ಯರ ಬಳಿ ಬಂದುಬಿದ್ದಿದೆ. ಪೇಜಾವರರ ಶಿಷ್ಯರು ಸುಳ್ಯದ ಸಂಘ ಪರಿವಾರದ ಮುಂದಾಳುಗಳ ಹತ್ತಿರ ತಮ್ಮ ಮೇಲೆ ಪೈಚಾರುನಲ್ಲಿ ಕಲ್ಲು ಬೀಸಲಾಗಿದೆ ಎಂದು ಹೇಳಿದ್ದಾರೆ. ಸಂಘದ ನೇತಾರರು ಪೇಜಾವರ ಸ್ವಾಮಿ ಮೇಲೆಯೆ ಮುಸ್ಲಿಮರು ಕಲ್ಲು ದಾಳಿ ಮಾಡಿದ್ದಾರೆಂದು ವದಂತಿ ಹಬ್ಬಿಸಿದರೆಂದು ಸುಳ್ಯದ ಹಿರಿಯರೊಬ್ಬರು ’ನ್ಯಾಯಪಥ’ಕ್ಕೆ ಅಂದಿನ ಗಲಭೆ ಕತೆ ವಿವರಿಸಿದರು.

1993ರ ಫೆಬ್ರವರಿ 1ರಂದು ಮುಸ್ಲಿಮರು ಪೇಜಾವರರಿಗೆ ಕಲ್ಲಿನಿಂದ ಹೊಡೆದರೆಂಬ ಪ್ರಚೋದಿತ ಗುಲ್ಲು ಹಬ್ಬಿ ಶೇ.14ರಷ್ಟು ಮುಸ್ಲಿಮರಿರುವ ಸುಳ್ಯ ಹೊತ್ತಿ ಉರಿಯಿತು. ಈ ಘಟನೆಯ ನಂತರ ಹಿಂದುತ್ವದ ಪಾಳೆಪಟ್ಟಾದಂತ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದೇ ಇಲ್ಲ!

ಕೋಮು ಅಗ್ನಿ ಕುಂಡದ ಮುಖಂಡ ಸದಾನಂದ ಗೌಡ!

ಪೇಜಾವರರ ಕಾರಿಗೆ ಮುಸ್ಲಿಮರು ಕಲ್ಲು ಹೊಡೆದರೆಂಬ ಪುಕಾರಿನ ಹಿನ್ನಲೆಯಲ್ಲಿ ಹುಟ್ಟಿಕೊಂಡ ಕೋಮು ವೈಷಮ್ಯದ ಅಗ್ನಿಕುಂಡದಲ್ಲಿ- ಅಂದು ತೀರಾ ಸಮಾನ್ಯ ವಕೀಲರಾಗಿದ್ದ ಡಿ.ವಿ. ಸದಾನಂದ ಬಿಜೆಪಿಯ ಮಹಾನ್ ನಾಯಕನಾಗಿ ರೂಪುಗೊಂಡರೆಂದು ಸುಳ್ಯದ ಜನರು ನೆನಪು ಮಾಡುತ್ತಾರೆ. 1993ರ ಸುಳ್ಯ ಕೋಮುಗಲಭೆಯಲ್ಲಿ ಸುಮಾರು ನಾಲ್ಕು ನೂರು ಹಿಂದುಗಳ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಪುಕ್ಕಟೆಯಾಗಿ ನಿಭಾಯಿಸಿದ ಸದಾನಂದರಿಗೆ ಇನಾಮಾಗಿ ಸಂಘ ಪರಿವಾರ ಪಕ್ಕದ ಪುತ್ತೂರು ಅಸೆಂಬ್ಲಿ ಕ್ಷೇತ್ರದ ಟಿಕೆಟ್ ಕೊಟ್ಟಿತು. ಅಲ್ಲಿ ತೀರಾ ಸಣ್ಣ ಅಂತರದಲ್ಲಿ ಅಚಾನಕ್ ಗೆದ್ದ ಡಿ.ವಿ. ಸದಾನಂದ ಬಿಜೆಪಿಯ ಕಟ್ಟರ್ ಹಿಂದುತ್ವ ನಾಯಕರಾಗಿ ಬೆಳೆದರೆಂಬ ಮಾತು ಕೇಳಿಬರುತ್ತದೆ. ಆ ಬಳಿಕ ಕ್ಷೇತ್ರದ ಬಹುಸಂಖ್ಯಾತ ಅರೆಭಾಷೆ ಗೌಡರನ್ನು ಸೆಳೆಯಲು ತನ್ನ ಹೆಸರಿನ ಮುಂದೆ ’ಗೌಡ’ ಸೇರಿಸಿಕೊಂಡು ಡಿ.ವಿ. ಸದಾನಂದ ಗೌಡ ಆದರು. ಸುಳ್ಯದ 1993ರ ಕೋಮುಗಲಭೆ ಸದಾನಂದ ಗೌಡರ ದೆಸೆಯನ್ನು ಯಾವ ರೀತಿ ಬದಲಿಸಿತೆಂದರೆ, ಎರಡು ಬಾರಿ ಪುತ್ತೂರಿನ ಎಮ್ಮೆಲ್ಲೆ, ಮಂಗಳೂರು ಎಂಪಿ, ಉಡುಪಿ-ಚಿಕ್ಕಮಗಳೂರು ಎಂಪಿ, ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯದ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಎಂಪಿ, ಕೇಂದ್ರ ಮಂತ್ರಿಯಂಥ ಆಯಕಟ್ಟಿನ ಸ್ಥಾನಕ್ಕೆ ಏರಿ ಇಳಿದರು; ಇದು ಸುಳ್ಯದ ಮತಾಂಧ ಗಲಭೆಯ ಮಹಿಮೆಯೆಂದು, ಸುಳ್ಯದಲ್ಲಿ ಪಕ್ಷ-ಪಂಗಡ, ಜಾತಿ-ಧರ್ಮದ ಹಂಗಿಲ್ಲದೆ ವ್ಯಕ್ತವಾಗುವ ಅಭಿಪ್ರಾಯ.

ಸದಾನಂದ ಗೌಡ

1993ರ ಕೋಮುದಂಗೆಯ ನಂತರ ಸುಳ್ಯದ ಹಳ್ಳಿಹಳ್ಳಿಗಳಲ್ಲಿ ಭಜರಂಗ ದಳ, ಹಿಂದು ಜಾಗರಣಾ ವೇದಿಕೆಯಂಥ ಅಸಹಿಷ್ಣುತೆಯ ಸಂಘಟನೆಗಳ ಏಕಪಕ್ಷೀಯ ಆಡಳಿತ ನಡೆದಿದೆ; ದಲಿತ ಮೀಸಲು ಕ್ಷೇತ್ರ ಸುಳ್ಯ ಬಲಿತರ ಏಕಸ್ವಾಮ್ಯಕ್ಕೆ ಒಳಪಟ್ಟಿದೆ; ಸಂಘಪರಿವಾರದ ಇಷ್ಟಾನಿಷ್ಟವೆ ಇಲ್ಲಿ ಅಂತಿಮವೆಂಬ ಮಾತುಗಳು ಕೇಳಿಬರುತ್ತಿದೆ. ಸದರಿ ಶಾಸಕ 6 ಬಾರಿ ಆಯ್ಕೆಯಾಗಿದ್ದರೂ ಅವರು ಸ್ವಂತಿಕೆಯಿಂದ ಕೆಲಸ ಮಾಡಲಾಗುತ್ತಿವೆ ಎಂಬುದು ಕ್ಷೇತ್ರದ ಸ್ಥಿತಿ-ಗತಿ ಅರ್ಥಮಾಡಿಸುವಂತಿದೆ ಎಂದು ಕ್ಷೇತ್ರದ ಮೂರು ದಶಕದ ರಾಜಕಾರಣವನ್ನು ಹತ್ತಿರದಿಂದ ನೋಡಿದ ಹಿರಿಯರೊಬ್ಬರು ’ನ್ಯಾಯಪಥ’ಕ್ಕೆ ವಿವರಿಸಿದರು. ಶಾಸಕ-ಮಂತ್ರಿ ಅಂಗಾರ ಆರ್‌ಎಸ್‌ಎಸ್ ಹಾಕಿದ ಗೆರೆ ದಾಟುವಂತಿಲ್ಲ; ಅವರೂ ಸ್ವಭಾವತಃ ಸಂಘ ಶ್ರೇಷ್ಠರಿಗೆ ವಿಧೇಯರೆಂದು ಜನರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಎರಡೂವರೆ ದಶಕದಿಂದ ಸುಳ್ಯ ಸಾಮಾಜಿರ್ -ರಾಜಕೀಯವಾಗಿ ನಿಂತನೀರಾಗಿದೆ ಎನ್ನಲಾಗುತ್ತಿದೆ. ಇತ್ತ ಅಭಿವೃದ್ಧಿಯೂ ಆಗದೆ, ಅತ್ತ ಕೇಸರಿ ಕಟ್ಟುನಿಟ್ಟಿನಿಂದ ಹೊರಬರಲಾಗದೆ ಸುಳ್ಯ ಕ್ಷೇತ್ರ ಕಷ್ಟಪಡುತ್ತಿದೆ ಎಂಬುದು ಸಾಮಾನ್ಯ ಅನಿಸಿಕೆಯಾಗಿದೆ. ಅನೈತಿಕ ಪೊಲೀಸ್ ಪಡೆ ಮತ್ತು ಗೋ ರಕ್ಷಣಾ ದಳದ ಹಾವಳಿ ಮಿತಿಮೀರಿದೆ ಎನ್ನಲಾಗುತ್ತಿರುವ ಸುಳ್ಯದ ಸರಕಾರಿ ಕಚೇರಿಗಳಲ್ಲಿ ಭಜರಂಗ ದಳಿಗಳದೆ ಆಡಳಿತವೆಂಬ ಆರೋಪ ಜೋರಾಗಿ ಕೇಳಿಬರುತ್ತಿದೆ! ಕಲ್ಲಡ್ಕ ಪ್ರಭಾಕರ ಭಟ್ಟ ಆರ್‌ಎಸ್‌ಎಸ್‌ನಲ್ಲಿ ಹೊಂದಿರುವಂಥದ್ದೆ ಹುದ್ದೆಯಲ್ಲಿರುವ ಸುಳ್ಯದ ನ.ಸೀತಾರಾಮ್ ಶಾಸಕ ಅಂಗಾರರ ’ಮಾರ್ಗದರ್ಶಕ’ರೆನ್ನಲಾಗಿದೆ.

ಚುನಾವಣಾ ಹಣಾಹಣಿ

ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ದಲಿತ ಮೀಸಲು ಕ್ಷೇತ್ರ. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. ಮೊದಲು ಪುತ್ತೂರು ಕ್ಷೇತ್ರದೊಂದಿಗೆ ಸೇರಿಕೊಂಡಿದ್ದ ಸುಳ್ಯ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ಸಾಮಾನ್ಯ ಕೋಟಾದಲ್ಲಿ ವೆಂಕಟರಮಣ ಗೌಡ ಶಾಸಕರಾಗಿದ್ದರೆ, ಸುಬ್ಬಯ್ಯ ನಾಯಕ ಪರಿಶಿಷ್ಟ ಮೀಸಲಾತಿಯ ಎಮ್ಮೆಲ್ಲೆಯಾಗಿದ್ದರು. 1962ರಲ್ಲಿ ಸುಳ್ಯ ಸ್ವತಂತ್ರ ಕ್ಷೇತ್ರವಾಯಿತಾದರೂ ಮೀಸಲಾತಿ ಬದಲಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಕ್ಷೇತ್ರ ಕಾಯ್ದಿಡಲಾಯಿತು. 1972ರಿಂದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶವಾಗಿರುವುದು ಕಂಡುಬರುತ್ತದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 1,98,823 ಮತದಾರರಿದ್ದ ಸುಳ್ಯ ಕ್ಷೇತ್ರದಲ್ಲಿ ಸುಮಾರು 65 ಸಾವಿರದಷ್ಟಿರುವ ಅರೆಭಾಷೆ ಗೌಡರು (ಒಕ್ಕಲಿಗರು) ಪ್ರಥಮ ಬಹುಸಂಖ್ಯಾತರು. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮತದಾರರು 45 ಸಾವಿರವಿದ್ದಾರೆ. ಮುಸ್ಲಿಮ್ ಮತ್ತು ಕ್ರೈಸ್ತರು 40 ಸಾವಿರ ಇದ್ದಾರೆ. ಕೊಂಕಣಿ ಮತ್ತು ಕನ್ನಡ ಮಾತಾಡುವ ವಿವಿಧ ಬ್ರಾಹ್ಮಣ ಪಂಗಡದವರು 15 ಸಾವಿರವಿದ್ದಾರೆ. ಬಂಟ, ಬಿಲ್ಲವ, ಜೈನ ಮುಂತಾದ ಸಣ್ಣ ಸಂಖ್ಯೆಯ ಜಾತಿ ಮತದಾರರಿದ್ದಾರೆ. ಸ್ವತಂತ್ರ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜರುಗಿದ ಮೊದಲ ಚುನಾವಣೆಯಲ್ಲಿ (1962) ಕಾಂಗ್ರೆಸ್‌ನ ಸುಬ್ಬಯ್ಯ ನಾಯಕ ಆಯ್ಕೆಯಾಗಿದ್ದರು.

1967ರಲ್ಲಿ ಸ್ವತಂತ್ರ ಪಕ್ಷದ ಎಂ.ರಾಮಚಂದ್ರ ಕಾಂಗ್ರೆಸ್‌ನ ಕೆ.ಬಿ.ನಾಯಕರನ್ನು ಕೇವಲ 240 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಹೋಗಿದ್ದರು. 1972ರಲ್ಲಿ ಭಾರತೀಯ ಜನಸಂಘದ ಮುಂದಾಳನ್ನು ಕಾಂಗ್ರೆಸ್‌ನ ಪಿ.ಡಿ. ಬಂಗೇರ ಪರಾಭವಗೊಳಿಸಿದ್ದರು. ಆದರೆ ಕಾಂಗ್ರೆಸ್ ಶಾಸಕ ಬಂಗೇರರಿಗೆ 1978ರಲ್ಲಿ ಜನತಾ ಪಕ್ಷದ ಹುರಿಯಾಳಾಗಿದ್ದ ಮಾಜಿ ಶಾಸಕ ಎಂ.ರಾಮಚಂದ್ರರನ್ನು ಸೋಲಿಸಲಾಗಲಿಲ್ಲ. ರಾಮಚಂದ್ರ ಮತ್ತು ಬಂಗೇರ ಸುಳ್ಯದವರಾಗಿರಲಿಲ್ಲ. ಮಂಗಳೂರಲ್ಲಿ ವಾಸಿಸುತ್ತಿದ್ದ ಈ ಇಬ್ಬರೂ ಕ್ಷೇತ್ರವನ್ನು ಕಡಗಣಿಸಿದ್ದರಿಂದ ಶುರುವಿನಲ್ಲೆ ಸುಳ್ಯದ ಪ್ರಗತಿಯು ಹಳಿತಪ್ಪಿತ್ತೆಂದು ಜನರು ಹೇಳುತ್ತಾರೆ.

1983ರಲ್ಲಿ ಬೀಸಿದ ಕಾಂಗ್ರೆಸ್ ವಿರೋಧಿ ಗಾಳಿಯಲ್ಲಿ ಬಿಜೆಪಿಯ ಬಾಕಿಲ ಹುಕ್ರಪ್ಪ ಗೆದ್ದರು. ಬಿಜೆಪಿ ಅಭ್ಯರ್ಥಿ ಎಂಬುದಕ್ಕಿಂತ ಸ್ಥಳೀಯ, ದಲಿತ ಸಮುದಾಯದ ವಿದ್ಯಾವಂತ ಮತ್ತು ಜನರೊಂದಿಗೆ ಬೆರೆಯುವ ತರುಣನೆಂಬ ಕಾರಣಕ್ಕೆ ಮತದಾರರು ಮೆಚ್ಚಿದ್ದರು. ಎರಡೇ ವರ್ಷಕ್ಕೆ ಬಂದ ಮಧ್ಯಂತರ ಚುನಾವಣೆಯಲ್ಲಿ ಬಾಕಿಲ ಹುಕ್ರಪ್ಪ ಜನತಾದಳದ ಕ್ಯಾಂಡಿಡೇಟಾದರು. ಗ್ರಾಮ ಕರಣಿಕ (ವಿಎ) ಆಗಿದ್ದ ಕೆ.ಕುಶಲರನ್ನು ಕಾಂಗ್ರೆಸ್ ಸ್ಫರ್ದೆಗಿಳಿಸಿತ್ತು. ಕೇವಲ 793 ಮತಗಳ ಅಂತರದಿಂದ ಸೋತ ಹುಕ್ರಪ್ಪರ ರಾಜಕೀಯ ಜೀವನವೂ ಕೊನೆಗೊಂಡಿತ್ತು. ಜನತಾದಳ, ಬಂಗಾರಪ್ಪರ ಕೆಸಿಪಿ ಮತ್ತೆ ಬಿಜೆಪಿ ಎಂದೆಲ್ಲ ಸುತ್ತು ಹೊಡೆದ ಹುಕ್ರಪ್ಪರನ್ನು ಸ್ವಂತಿಕೆಯಿರುವ ಸ್ವಾಭಿಮಾನಿ ಎಂಬ ಕಾರಣಕ್ಕೆ ಕ್ಷೇತ್ರದ ದಲಿತ ರಾಜಕಾರಣ ನಿಯಂತ್ರಿಸುವ ಸವರ್ಣೀಯರು ಮೇಲೇಳಲು ಬಿಡಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮಾಜಿ ಶಾಸಕ ಹುಕ್ರಪ್ಪ ಮೇಲ್ವರ್ಗದವರ ಅಡಿಕೆ ಮರ ಹತ್ತಿ ಅಡಕೆ ಕೊಯ್ಲು ಮಾಡುವುದು, ಮದ್ದು ಸಿಂಪಡಿಸುವುದು, ರಬ್ಬರ್ ಮರ ಹತ್ತಿ ಟ್ಯಾನಿಂಗ್, ಕೂಲಿ-ನಾಲಿ ಮಾಡುತ್ತ ನಿಧನರಾದರು! ಪ್ರಜ್ಞಾವಂತರಾಗಿದ್ದ ಬಾಕಿಲ ಹುಕ್ರಪ್ಪರ ರಾಜಕೀಯ ದುರಂತ ಮೀಸಲು ಕ್ಷೇತ್ರ ಸುಳ್ಯ ಮೇಲ್ವರ್ಗದ ಪಾರುಪತ್ಯಕ್ಕೆ ಒಳಗಾಗಿರುವುದನ್ನು ನಿಸ್ಸಂದಿಗ್ಧವಾಗಿ ಸಾಬೀತುಪಡಿಸುತ್ತದೆಂಬ ಮಾತು ಕೇಳಿಬರುತ್ತದೆ.

ನಳಿನ್‌ಕುಮಾರ್ ಕಟೀಲ್‌

ಕಾಂಗ್ರೆಸ್‌ನ ಕುಶಲ 1989ರಲ್ಲಿ ಈಗಿನ ಬಿಜೆಪಿ ಶಾಸಕ-ಮಂತ್ರಿ ಅಂಗಾರರನ್ನು ಸೋಲಿಸಿ ಎರಡನೇ ಬಾರಿ ಅಸೆಂಬ್ಲಿಗೆ ಆಯ್ಕೆಯಾದರು. 1992ರ ಕೋಮುಗಲಭೆಯ ಫಲ ಬಿಜೆಪಿಗೆ 1994ರ ಚುನಾವಣೆಯಲ್ಲಿ ಲಭಿಸಿತ್ತು. ಬಿಜೆಪಿಯ ಎಸ್.ಅಂಗಾರ ಕಾಂಗ್ರೆಸ್‌ನ ಕುಶಲರನ್ನು ಸುಮಾರು ಹದಿನಾಲ್ಕೂವರೆ ಸಾವಿರ ಮತಗಳಿಂದ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಮತ್ತೆ ಸಂಘ ಶ್ರೇಷ್ಠರ ಆಜ್ಞಾನುಧಾರಿ ಎನ್ನಲಾಗಿರುವ ಅಂಗಾರ ಮತ್ತು ಕಾಂಗ್ರೆಸ್‌ನ ಕುಶಲ ಮುಖಾಮುಖಿಯಾದರು. ಈ ಬಾರಿಯೂ ಅಂಗಾರ ಗೆದ್ದರಾದರೂ ಅವರ ಲೀಡ್ 6,997 ಮತಗಳಿಗಿಳಿದಿತ್ತು. 2004ರ ಇಲೆಕ್ಷನ್‌ನಲ್ಲಿ ಕಾಂಗ್ರೆಸ್ ಜನಪರ ವೈದ್ಯರಾಗಿದ್ದ ಡಾ.ಬಿ.ರಘುರನ್ನು
ಹುರಿಯಾಳಾಗಿಸಿತ್ತು. ಅಂಗಾರರೆ ಗೆದ್ದರು.

2008ರಲ್ಲೂ ಡಾ.ರಘುರಿಗೆ ದುಡ್ಡು-ಧರ್ಮದ ಅಬ್ಬರ ಎದುರಿಸಲಾಗಲಿಲ್ಲ. ಆದರೆ ಡಾ.ರಘು ಕಠಿಣ ಹೋರಾಟಕ್ಕೆ ಬಿಜೆಪಿ ಹೈರಾಣಾಗಿತ್ತು! ಸಂಘಪರಿವಾರದ ಬೂಟಾಟಿಕೆ ಜನರಿಗೆ ಅರ್ಥವಾಗಿದ್ದರಿಂದ ಬಿಜೆಪಿ ಲೀಡ್ 4322ಕ್ಕೆ ಇಳಿಯಿತೆಂಬ ವಾದ ಕ್ಷೇತ್ರದಲ್ಲಿದೆ. ಆದರೆ ಡಾ.ರಘು 2013ರಲ್ಲಿ ಸೋತು ಗೆದ್ದಿದ್ದರು! 64,540 ಮತ ಪಡೆದಿದ್ದ ಡಾ.ರಘು ಕೇವಲ 1,373 ಮತಗಳಿಂದ ಸೋಲುವಂತಾಯಿತು. 2013ರಲ್ಲಿ ಬಿಜೆಪಿಯ ಎಲ್ಲ ಮತ ಧ್ರುವೀಕರಣದ ತಂತ್ರಗಾರಿಕೆ ವಿಫಲವಾಗಿತ್ತು. ಎಸ್‌ಡಿಪಿಐ ಗಳಿಸಿದ 2,569 ಮತ ಕಾಂಗ್ರೆಸ್‌ಗೆ ಒಲಿದಿದ್ದರೆ, ಬಿಜೆಪಿ-ಹಿಂದುತ್ವದ ಪ್ರಯಾಸದ ಗೆಲುವು ಬಹುಶಃ ಇಲ್ಲವಾಗುತ್ತಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಆ ಚುನಾವಣೆಯಲ್ಲಿ ಜನತಾ ದಳ ಪಡೆದ 8,551 ಮತಗಳು ಕೂಡ ಕಾಂಗ್ರೆಸಿಗೆ ಹಾನಿ ಮಾಡಿತ್ತೆನ್ನಲಾಗಿದೆ. 2018ರಲ್ಲಿ ಕರಾವಳಿಯಲ್ಲಿ ಹಠದ ಹಿಂದುತ್ವ ರಾಜಕಾರಣ ನಡೆದಿದ್ದರಿಂದ ಅಂಗಾರ 26,068 ಮತಗಳ ಅಂತರದಿಂದ ಚುನಾಯಿತರಾಗಲು ಸಾಧ್ಯವಾಯಿತೆನ್ನಲಾಗುತ್ತಿದೆ.

ಕ್ಷೇತ್ರಕ್ಕೆ ಏನು ಬೇಕು? ಏನು ಬೇಡ?

ರಸ್ತೆ-ಕಾಲುವೆ ಸಂಕ-ವಿದ್ಯುತ್-ಶಾಲೆ-ಆರೋಗ್ಯದಂಥ ಮೂಲ ಸೌಲಭ್ಯಗಳೆ ಇಲ್ಲದ ಕಾಡು, ಕಣಿವೆಯಿಂದ ಆವೃತವಾದ ಹಳ್ಳಿಗಳಿರುವ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸಾಮಾನ್ಯ ಬಜೆಟ್ ಕಾಮಗಾರಿಗಳು ಬರುತ್ತಿವೆಯೆ ಹೊರತು ಯೋಜನಾಬದ್ಧ ಅಭಿವೃದ್ಧಿ ಎಂಬುದು ಮರೀಚಿಕೆ ಆಗಿದೆಯೆಂಬ ಅಸಮಾಧಾನದಲ್ಲಿ ಕ್ಷೇತ್ರದ ಜನರಿದ್ದಾರೆ. ರೈತ, ತೋಟಿಗ, ಪಶುಸಂಗೋಪನೆ ಮಾಡುವವರಿಗೆ ನೆರವಾಗುವಂಥ ಯೋಜನೆಯಾಗಲಿ ಅಥವಾ ನಿರುದ್ಯೋಗಿ ಯುವ ಸಮುದಾಯಕ್ಕೆ ಬದುಕು ರೂಪಿಸಿಕೊಳ್ಳಲು ಅನುಕೂಲವಗುವಂಥ ಕೈಗಾರಿಕೆಯಾಗಲೀ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಲ್ಲ. ಸರಿಯಾದ ವಿದ್ಯುತ್ ಪೂರೈಕೆಯಿಲ್ಲದ ಸುಳ್ಯದ ಜನರ ಗೋಳು ಹೇಳತೀರದು. 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಬೇಕೆಂದು ಜನರು ಆಗ್ರಹಿಸುತ್ತಲೆ ಇದ್ದಾರೆ. ಶಾಸಕ ಅಂಗಾರ ಮತ್ತು ಸಂಸದ ನಳಿನ್‌ಕುಮಾರ್ ಕಟೀಲ್‌ರಲ್ಲಿ ಇಚ್ಛಾಶಕ್ತಿ ಇಲ್ಲದೆ ಅದು ಕಾರ್ಯಗತ ಆಗುತ್ತಿಲ್ಲವೆಂದು ಜನರು ಆಕ್ರೋಶಿತರಾಗಿದ್ದಾರೆ.

ಅನಿಯಮಿತ ವಿದ್ಯುತ್ ಪೂರೈಕೆಯಿಂದ ಜನರು ಯಾವ ಮಟ್ಟಕ್ಕೆ ರೋಸಿಹೋಗಿದ್ದಾರೆಂದರೆ ಮಂತ್ರಿ, ಶಾಸಕರಿಗೆಲ್ಲ ಹಿಡಿಶಾಪ ಹಾಕುವುದು, ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಡಿ.ಕೆ.ಶಿವಕುಮಾರ್ ವಿದ್ಯುತ್ ಮಂತ್ರಿಯಾಗಿದ್ದಾಗ ಸಾಯಿಗಿರಿಧರ್ ರೈ ಎಂಬವರು ರಾತ್ರಿ 1 ಗಂಟೆಗೆ ಫೋನಾಯಿಸಿ ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಜೋರಾಗಿ ಮಾತಾಡಿದ್ದರೆನ್ನಲಾಗಿದೆ. ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿ ನ್ಯಾಯಾಲಯಕ್ಕೂ ಹೋಯಿತು. ಮಂತ್ರಿಗಳಿಗೆ ಸರೊತ್ತಿನಲ್ಲಿ ಸಾಯಿಗಿರಿಧರ್ ಬೈದು ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿತ್ತು. ಡಿಕೆಶಿ ಸುಳ್ಯ ನ್ಯಾಯಾಲಯದಲ್ಲಿ ಸಾಕ್ಷಿಯೂ ಹೇಳಿದರು. ಹೀಗಾಗಿ ಸಾಯಿಗಿರಿಧರ್ ರೈಗೆ ಶಿಕ್ಷೆಯ ತೀರ್ಪೂ ಬಂದಿದೆ. ಇಷ್ಟೆಲ್ಲ ಅನಾಹುತವಾದರೂ 110 ಕೆ.ವಿ ಸ್ಟೇಷನ್ ಸ್ಥಾಪನೆಗೆ ಅಧಿಕಾರಸ್ಥರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.

ಡಾ.ರಘು

ಸುಳ್ಯ ಮತ್ತು ಕಡಬದ ಬಹುಪಾಲು ಮಂದಿಗೆ ಅಡಿಕೆ ಅನ್ನದ ಫಸಲು. ಎರಡೂ ತಾಲೂಕಿನ ವಾಣಿಜ್ಯ-ವ್ಯಾಪಾರ ಅಡಿಕೆಯನ್ನೇ ಅವಲಂಬಿಸಿದೆ. ಈ ಅಡಿಕೆ ಮರಗಳಿಗೆ ಹಳದಿ ಎಲೆ ರೋಗ ಶುರುವಾಗಿದೆ. ಹಳದಿ ರೋಗದ ಹೆಸರಲ್ಲಿ 25 ಕೋಟಿ ಮಂಜೂರಾಗಿದೆ. ಆದರೆ ಇದು ರೋಗ ತಡೆಗಟ್ಟುವ ಸಂಶೋಧನೆಗೋ? ತೋಟಿಗರಿಗೆ ಪರಿಹಾರ ವಿತರಿಸಲೋ? ಎಂಬುದೇ ಯಾರಿಗೂ ಗೊತ್ತಿಲ್ಲವೆಂದು ತೋಟಿಗರು ಬೇಸರಿಸುತ್ತಾರೆ. ಇದು ಶಾಸಕ-ಸಂಸದರ ಹೊಣೆಗೇಡಿತನಕ್ಕೆ ನಿದರ್ಶನವೆಂಬ ಮಾತು ಕೇಳಿಬರುತ್ತಿದೆ.

ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಮೆಡಿಕಲ್, ಇಂಜಿನಿಯರಿಂಗ್, ಮತ್ತಿತರ ಕ್ಯಾಪಿಟೇಶನ್ ಕಾಲೇಜುಗಳ ಸಮೂಹ ಸುಳ್ಯದಲ್ಲಿದೆ. ಈ ಶಿಕ್ಷಣ ಸಂಸ್ಥೆಯಿಂದ ಒಂದಿಷ್ಟು ವ್ಯಾಪಾರ-ವಹಿವಾಟು ಜಾಸ್ತಿಯಾಗಿದ್ದು ಬಿಟ್ಟರೆ ಸ್ಥಳೀಯ ವಿದ್ಯಾರ್ಥಿಗಳಿಗಾದ ಅನುಕೂಲ ಅಷ್ಟಕ್ಕಷ್ಟೆ ಎನ್ನಲಾಗುತ್ತಿದೆ. ಸುಳ್ಯ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಸರಕಾರಿ ಹೈಸ್ಕೊಲು, ಕಾಲೇಜುಗಳ ಅವಶ್ಯಕತೆಯಿದೆ. ಸುಳ್ಯದ ಬಳಿಯೊಂದು ಆಣೆಕಟ್ಟಾದರೆ ರೈತರಿಗೆ ಅನುಕೂಲವಾಗುತ್ತದೆ. ಸ್ಟೇಡಿಯಂ ಬೇಡಿಕೆ ಈಡೇರುತ್ತಿಲ್ಲ.

ಅರ್ಹರ ಅಕ್ರಮ-ಸಕ್ರಮ ಭೂ ಮಂಜೂರಾತಿ ಆಗುತ್ತಿಲ್ಲ; ಸಂಘ ಶಿಫಾರಸ್ಸಿನವರಿಗೆ ಮಾತ್ರ ಅಕ್ರಮ-ಸಕ್ರಮಕ್ಕೆ ಮಂಜೂರಾತಿ ಸಿಗುತ್ತಿದೆಯೆಂಬ ಆರೋಪ ಕೇಳಿಬರುತ್ತಿದೆ. ಪ್ರಕೃತಿ ಮಡಿಲಲ್ಲಿರುವ ಸುಳ್ಯ-ಕಡಬದಲ್ಲಿ ಪ್ರವಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಮಂಗ ಮತ್ತು ಆನೆ ಹಾವಳಿಯಿಂದ ರೈತರ ಕೈಗೆ ಫಸಲು ಸಿಗದಂತಾಗಿದೆ. ಸ್ಥಳೀಯರೆ ಆಗಿರುವ ಮಾಜಿ ಸಿಎಂ ಸದಾನಂದ ಗೌಡ ಮಂಕಿ ಪಾರ್ಕ್ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಇದ್ಯಾವುದರ ಬಗ್ಗೆ ಆಳುವ ಮಂದಿ ತಲೆಕೆಡಿಸಿಕೊಳ್ಳದೆ ಓಟು ತರಬಲ್ಲ ಭಾವನಾತ್ಮಕ ಗೊಂದಲ-ಗಲಾಟೆ ಹುಟ್ಟುಹಾಕುವುದರಲ್ಲಿ ಸಂಘಪರಿವಾರ ಮುಖಂಡರು ಆಸಕ್ತರಾಗಿದ್ದಾರೆಂಬ ಆಕ್ಷೇಪ ಸುಳ್ಯ-ಕಡಬದಲ್ಲಿದೆ.

ಕಡಬ ತಾಲೂಕು ಉದ್ಘಾಟನೆಯಾಗಿ ನಾಲ್ಕು ವರ್ಷ ಕಳೆದಿದೆ. ಆದರೆ ತಾಲೂಕಿಗೆ ಬೇಕಾದ ಮೂಲಸೌಕರ್ಯ, ಸರಕಾರಿ ಕಚೇರಿಗಳು ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅಡಿಕೆ, ರಬ್ಬರ್ ಹೆಚ್ಚು ಬೆಳೆಯುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ತೋಟಗಾರಿಕಾ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆಯಾದರೆ ಉದ್ಯೋಗಾವಕಾಶದಿಂದ ವಲಸೆ ತಪ್ಪುತಿತ್ತು ಎಂದು ಅಭಿಪ್ರಾಯಪಡಲಾಗುತ್ತಿದೆ. ಅರಣ್ಯ ಅಭಿವೃದ್ಧಿ ನಿಗಮ ಸುಳ್ಯದಲ್ಲಿ 4,390 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯುತ್ತಿದೆ; ರೈತರೂ ಸಾವಿರಾರು ಎಕರೆಯಲ್ಲಿ ರಬ್ಬರ್ ಪ್ಲಾಂಟೇಶನ್ ಮಾಡಿದ್ದಾರೆ. ಶ್ರೀಲಂಕಾದ ತಮಿಳು ನಿರಾಶ್ರಿತರಿಗಾಗಿ ಸ್ಥಾಪಿಸಲಾಗಿರುವ ಕೆಎಫ್‌ಡಿಸಿಯ ಕಚ್ಚಾ ರಬ್ಬರ್ ಉತ್ಪಾದನಾ ಘಟಕಗಳಿವೆ. ಇಲ್ಲಿ ತಯಾರಾದ ಕಚ್ಚಾ ರಬ್ಬರ್ ಹೊರ ರಾಜ್ಯಗಳ ಟೈರ್ ಇನ್ನಿತರ ರಬ್ಬರ್ ಉತ್ಪಾದನಾ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದೆ. ಈ ಕಚ್ಚಾ ರಬ್ಬರ್ ಘಟಕಗಳೂ ಕೆಎಫ್‌ಡಿಸಿಯ ಅಸಮರ್ಪಕ ನಿರ್ವಹಣೆಯಿಂದ ಮುಚ್ಚುವ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಸುಳ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಚ್ಚಾ ರಬ್ಬರ್ ಬಳಸಲಾಗುವ ಟೈರ್ ಇನ್ನಿತರ ರಬ್ಬರ್ ಉತ್ಪನ್ನಗಳ ಕಾರ್ಖಾನೆ ಸ್ಥಾಪಿಸಿ ’ರಬ್ಬರ್ ಕಾಂಪ್ಲೆಕ್ಸ್’ ರಚಿಸಲಾಗುವುದೆಂದು ಜನತಾದಳ ಸರಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ಬಿ.ಎ.ಮೊಯ್ದಿನ್ ಹೇಳಿದ್ದರು. ಮಾಜಿ ಸಿಎಂ ಸದಾನಂದ ಗೌಡರು ಟೈರ್ ಫ್ಯಾಕ್ಟರಿ ನಿರ್ಮಿಸುವುದಾಗಿ ಹೇಳಿದ್ದರು. ಇದೆಲ್ಲಾ ಮರೀಚಿಕೆಯಾಗಿಯೆ ಉಳಿದಿದ್ದು, ರಬ್ಬರ್ ಕಾಂಪ್ಲೆಕ್ಸ್ ಅಥವಾ ಟೈರ್ ಫ್ಯಾಕ್ಟರಿಯಾಗಿದ್ದರೆ ಸುಳ್ಯದ ಆರ್ಥಿಕ ದೆಸೆಯೆ ಬದಲಾಗುತ್ತಿತ್ತೆಂದು ಜನರು ಹೇಳುತ್ತಾರೆ. ಎರಡೂ ಮುಕ್ಕಾಲು ದಶಕದಿಂದ ಶಾಸಕ-ಮಂತ್ರಿಯಾಗಿರುವ ಅಂಗಾರರಿಗೆ ಪ್ರಗತಿಯ ಯೋಜನೆಗಳು ಅರ್ಥವಾಗುವುದಿಲ್ಲ; ಸಲಹೆ, ಭಿನ್ನಹವೂ ಕೇಳಿಸದೆಂಬ ಬೇಸರ, ಬೇಗುದಿ ಕ್ಷೇತ್ರದಲ್ಲಿದೆ!

ಇದೆಲ್ಲಕ್ಕಿಂತ ದೊಡ್ಡ ದುಗುಡದ ಸಮಸ್ಯೆಯೆಂದರೆ ಸುಳ್ಯ-ಕಡಬದಲ್ಲಿ ಸಾಮರಸ್ಯ, ಶಾಂತಿ ಮತ್ತು ಸಹಿಷ್ಣುತೆಗೆ ಎದುರಾಗಿರುವ ಗಂಡಾಂತರ! ಹಿಂದು-ಮುಸ್ಲಿಮ್ ಸಹಪಾಠಿ ಹುಡುಗ-ಹುಡುಗಿಯರು ಪರಸ್ಪರ ಮಾತಾಡುವಂತಿಲ್ಲ; ಒಂದೇ ಬಸ್ಸಿನಲ್ಲಿ ಪ್ರಯಾಣಿಸುವುದೂ ಅಪರಾಧ; ಹಿಂದು ಸಂಸ್ಕೃತಿ ರಕ್ಷಣೆ ಹೆಸರಲ್ಲಿ ನಡುಬೀದಿಯಲ್ಲೇ ಕೋರ್ಟ್ ಮಾರ್ಷಲ್ ನಡೆಸಿ ಅಮಾಯಕ ಹಿಂದು ಹುಡುಗಿಯರ ಮಾನ ಹರಾಜು ಹಾಕಲಾಗುತ್ತಿದೆ. ಗೋರಕ್ಷಣೆಯ ನೆಪದಲ್ಲಿ ಯಾವ ಮುಸ್ಲಿಮನಿಗೆ ಯಾವಾಗ ಹಲ್ಲೆಯಾಗುತ್ತದೊ ಹೇಳಲಾಗದು; ಹಿಂದುತ್ವದಲ್ಲಿ ಮುಳುಗಿರುವವರು ಮನುಷ್ಯತ್ವವನ್ನೆ ಆಪೋಷನ ಪಡೆಯುತ್ತಿದ್ದಾರೆಂದು ಪ್ರಜ್ಞಾವಂತರು ಕಳವಳಿಸುತ್ತಿದ್ದಾರೆ.

ಸಂಘ ಪರಿವಾರಕ್ಕೆ ಸಚಿವ ಅಂಗಾರ ಹೊರೆಯೆ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಧ್ರುವೀಕರಣ ಅತಿಯಾಗಿದೆ ಎಂಬ ಭಾವನೆ ಹೊರ ಪ್ರಪಂಚದಲ್ಲಿದೆ. ಇದಕ್ಕೆ ಕಾರಣ ಇಲ್ಲಾಗಿರುವ ಪಬ್, ಚರ್ಚ್, ಮಸೀದಿ ದಾಳಿಗಳು, ಆಗುತ್ತಿರುವ ಅನೈತಿಕ ಪೊಲೀಸ್‌ಗಿರಿ ಮತ್ತು ಕೌಬಾಯ್ಸ್ ಹಾವಳಿ ಎನ್ನಲಾಗುತ್ತಿದೆ. ಆದರೆ ಹಳೆಯ ಚುನಾವಣಾ ಚಿತ್ರಣ ಹಾಗು ಫಲಿತಾಂಶಗಳ ಅಂಕಿಅಂಶ ಮೆಲುಕು ಹಾಕಿದರೆ ಸುಳ್ಯ ವಿಧಾನಸಭಾ ಕ್ಷೇತ್ರ ಒಂದನ್ನು ಬಿಟ್ಟರೆ ಉಳಿದೆಲ್ಲೂ ಕೋಮು ಧ್ರುವೀಕರಣ ಆ ಮಟ್ಟದಲ್ಲಿ ಆದಂತೆ ಅನ್ನಿಸುವುದಿಲ್ಲವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಅಸಮರ್ಥ ಶಾಸಕ ಆರು ಬಾರಿ ಆಯ್ಕೆಯಾಗಿದ್ದರೂ ಮೂರು ಬಿಲ್ಲಿ ಪ್ರಯೋಜನ ಆಗಿಲ್ಲವೆಂಬ ಅಸಮಧಾನ, ಆಕ್ರೋಶ ಕ್ಷೇತ್ರದಲ್ಲಿದ್ದರೂ 1994ರಿಂದ ಮತ್ತೆಮತ್ತೆ ಗೆಲ್ಲುತ್ತಿರುವ ಅಂಗಾರರ ಗೆಲುವಿನ ಬಹಿರಂಗ ರಹಸ್ಯ- ’ಮತೀಯ ಧ್ರುವೀಕರಣದ ಮತ ಬ್ಯಾಂಕ್’ ಎನ್ನಲಾಗಿದೆ.

ಯಾರೇ ಶಾಸಕನಾದರು ಬರುವ ಸಾಮಾನ್ಯ ಬಜೆಟ್ ಕಾಮಗಾರಿ ಬಿಟ್ಟರೆ ಅಂಗಾರರ ಪ್ರಯತ್ನದಿಂದ ಜನರ ಜೀವನಮಟ್ಟ ಸುಧಾರಿಸುವಂಥ ಯೋಜನೆ, ಕಾಮಗಾರಿ ಅಥವಾ ಕೈಗಾರಿಕೆ ಕ್ಷೇತ್ರಕ್ಕೆ ಬಂದಿಲ್ಲವೆಂದು ಬೇಸರದಿಂದ ಜನರು ಹೇಳುತ್ತಾರೆ. ಸುಳ್ಯ-ಕಡಬದ ಭೌಗೋಳಿಕ ಸ್ಥಿತಿಗತಿ, ಜನಜೀವನದ ನಾಡಿಮಿಡಿತವೇ ತಿಳಿಯದ ಶಾಸಕ ಅಂಗಾರ ತಮ್ಮ 28 ವರ್ಷಗಳ ಶಾಸಕತ್ವದ ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಸಣ್ಣದೊಂದು ನೀಲಿ ನಕ್ಷೆ ಸಹ ತಯಾರಿಸಿಕೊಂಡಿಲ್ಲ. ಅಂಗಾರ ಸದಾ ನಾಟ್ ರೀಚೆಬಲ್ ಶಾಸಕ; ಮಂತ್ರಿ ಆದಮೇಲಂತೂ ಜನರ ಕೈಗೆ ಸಿಗುತ್ತಿಲ್ಲ.

ಅಂಗಾರ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರಿಗಷ್ಟೆ ಅಲ್ಲ, ಸಂಘ ಪರಿವಾರ ಮತ್ತು ಬಿಜೆಪಿ ಬಿಡಾರದಲ್ಲಿಯೂ ಅಸಮಾಧಾನದ ಹೊಗೆಯಾಡುತ್ತಿದೆಯೆಂಬ ಸುದ್ದಿಹಬ್ಬಿದೆ. ಕರಾವಳಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಹಣೆಬರಹ
ನಿರ್ಧರಿಸುವ ಆರ್‌ಎಸ್‌ಎಸ್ ಸುಪ್ರಿಮೋ ಎನ್ನಲಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರ ತಲೆಯಲ್ಲೂ ಅಂಗಾರರನ್ನು ಕಡ್ಡಾಯ ವಿಶ್ರಾಂತಿಗೆ ಕಳಿಸುವ ಯೋಚನೆ ಸುಳಿದಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸಂಘ ಶ್ರೇಷ್ಠರು ಪರಿಶೀಲಿಸುತ್ತಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಳ್ಯ ಸಂಘ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಜಗನ್ನಾಥ, ಮಾಜಿ ಜಿಪಂ ಸದಸ್ಯೆ ಬಾಗೀರಥಿ ಮರಳ್ಯ ಮತ್ತು ಕಲ್ಲಡ್ಕದ ವಕೀಲರೊಬ್ಬರ ಹೆಸರುಗಳಿವೆ ಎನ್ನಲಾಗುತ್ತಿದೆ.

ಸತತ ನಾಲ್ಕು ಬಾರಿ ಸೋತಿರುವ ಕಾಂಗ್ರೆಸ್‌ನ ಡಾ.ರಘು ಈ ಬಾರಿ ಸ್ಪರ್ಧಿಸುವ ಉತ್ಸಾಹ ತೋರಿಸುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ. ಜನಾನುರಾಗಿ ಸರಕಾರಿ ವೈದ್ಯ ಎನಿಸಿಕೊಂಡಿದ್ದ ಡಾ.ರಘು ಈಗಲೂ ಬೇರುಮಟ್ಟದ ಜನ ಸಂಪರ್ಕ ಉಳಿಸಿಕೊಂಡಿದ್ದಾರೆಂಬ ಅಭಿಪ್ರಾಯವಿದೆ. ಆದರೆ ಸಂಘ ಪರಿವಾರದ ಕುರುಡು ಕಾಂಚಾಣದ ಅಬ್ಬರ ಎದುರಿಸಲು ಅವರಿಂದಾಗದೆಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆದಿದೆಯಂತೆ. ಹಣವಂತರಾದ ನಂದಕುಮಾರ್ ಮತ್ತು ಕೃಷ್ಣಪ್ಪರ ನಡುವೆ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ನಡೆದಿದೆ. ಇಬ್ಬರೂ ರಾಜಕೀಯ, ಸಾಮಾಜಿಕ, ಕ್ರೀಡೆ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ಹಣಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಕ್ಕದ ಮಡಿಕೇರಿಯ ನಂದಕುಮಾರ್ ಅಲ್ಲಿಯ ನಗರಸಭೆಯ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಕ್ಯಾಂಡಿಡೇಟ್ ಯಾರಾಗಬಹುದೆಂಬ ಕತೂಹಲಕರ ಜಿಜ್ಞಾಸೆ ಸುಳ್ಯ-ಕಡಬದಲ್ಲಿ ಜೋರಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳ್ತಂಗಡಿ: ಮತೋನ್ಮತ್ತ ತುತ್ತತುದಿಯಲ್ಲಿ ಸಂಘಟಿತ ಕಾಂಗ್ರೆಸ್‌ನ ಹೋರಾಟ ಸಾಧ್ಯವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಬೇರು ಇದೇ ಕ್ಷೇತ್ರದ ಅರಂತೋಡುವಿನಲ್ಲಿದೆ. ಮನೆ ಇದೇ ಕ್ಷೇತ್ರದ ಸವಣೂರಿನ ಪಕ್ಕದಲ್ಲಿದೆ.

    ಇವರು ಆರಿಸಿಕೊಂಡ ಸಂಸದರ ಆದರ್ಶ ಗ್ರಾಮ ಬಳ್ಪ ಇದೇ ಕ್ಷೇತ್ರದಲ್ಲಿದ್ದು ಅಭಿವೃದ್ಧಿಯ ನೀರೀಕ್ಷೆಯಲ್ಲಿ ಸಂಸದ-ಶಾಸಕರ ಮುಖ ನೋಡುತ್ತಿದೆ.

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...