Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳ್ತಂಗಡಿ: ಮತೋನ್ಮತ್ತ ತುತ್ತತುದಿಯಲ್ಲಿ ಸಂಘಟಿತ ಕಾಂಗ್ರೆಸ್‌ನ ಹೋರಾಟ ಸಾಧ್ಯವೇ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳ್ತಂಗಡಿ: ಮತೋನ್ಮತ್ತ ತುತ್ತತುದಿಯಲ್ಲಿ ಸಂಘಟಿತ ಕಾಂಗ್ರೆಸ್‌ನ ಹೋರಾಟ ಸಾಧ್ಯವೇ?

- Advertisement -
- Advertisement -

ಚಾರ್ಮಾಡಿ-ಶಿರಾಡಿ ಮತ್ತು ಕುದುರೆಮುಖ ಘಟ್ಟದ ಬೆಟ್ಟಸಾಲುಗಳ ಬುಡದಲ್ಲಿರುವ ಬೆಳ್ತಂಗಡಿ ದಕ್ಷಿಣ ಕನ್ನಡದ ಅತಿ ವಿಸ್ತಾರವಾದ ತಾಲೂಕು; ದಟ್ಟ ಕಾಡು-ಕಣಿವೆ-ಝರಿ-ತೊರೆ-ಅಪರೂಪದ ಜೀವ ವೈವಿಧ್ಯದ ಅಪ್ಪಟ ಮಲೆನಾಡು ಪ್ರದೇಶ. ಸಮುದ್ರಮಟ್ಟದಿಂದ 685 ಮೀಟರ್ ಎತ್ತರದಲ್ಲಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪೂರ್ವ-ಉತ್ತರದಲ್ಲಿ ಜೀವವಿಕಾಸದ ತೊಟ್ಟಿಲಿನಂತಿರುವ ಹಚ್ಚಹಸಿರಿನ ರಮಣೀಯ ಸಹ್ಯಾದ್ರಿ ಗಿರಿ-ಶಿಖರ ಹಬ್ಬಿದೆ. ಮೈದುಂಬಿ ಹರಿಯುವ ನೇತ್ರಾವತಿ ಜೀವನದಿ. ಬಹುತೇಕ ಕುಟುಂಬಗಳು ತೋಟಗಾರಿಕೆ, ಹೈನುಗಾರಿಕೆ, ಕೃಷಿ ಕೂಲಿಯಿಂದ ಬದುಕು ಕಟ್ಟಿಕೊಂಡಿವೆ. ಒಂದಿಷ್ಟು ಮಂದಿಗೆ ಬೀಡಿ ಕಟ್ಟುವುದು ಕುಲ ಕಸುಬಾಗಿದ್ದು ಮತ್ತಿತರ ವ್ಯಾಪಾರ-ವಹಿವಾಟಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರಕೃತಿ ಮಡಿಲಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ಬೆಳ್ತಂಗಡಿಗರನ್ನು ಇತ್ತೀಚಿನ ವರ್ಷದಲ್ಲಿ ಧರ್ಮಕಾರಣದ ಕ್ರೌರ್ಯ ಕಂಗೆಡಿಸುತ್ತಿದೆಯೆಂದು ಹಿರಿಯ ಜೀವಗಳು ಕಳವಳಿಸುತ್ತವೆ!

ಇತಿಹಾಸ-ಸಂಸ್ಕೃತಿ-ಆರ್ಥಿಕತೆ

ಅಚ್ಚ ತುಳುವ ಸಂಸ್ಕೃತಿಯ ಬೆಳ್ತಂಗಡಿಯ ಉದ್ದಗಲದಲ್ಲಿ ಭೂತಕೋಲ, ದೈವಾರಾಧನೆ, ನಾಗಾರಾಧನೆಯಷ್ಟೇ ಪ್ರಖರವಾಗಿ ತೆಂಕುತಿಟ್ಟಿನ ಯಕ್ಷಗಾನದ ಗಾನ-ತಾಳ-ನೃತ್ಯ ವೈಭವ ಹಾಸುಹೊಕ್ಕಾಗಿದೆ. ತುಳು ಇಲ್ಲಿಯ
ಜವ-ಜೀವನದ ಭಾಷೆ! ದೈನಂದಿನ ಸಂವಹನ-ವಹಿವಾಟು ಪ್ರಮುಖವಾಗಿ ತುಳುವಿನಲ್ಲೆ ನಡೆಯುವ ಬೆಳ್ತಂಗಡಿಯಲ್ಲಿ ಕನ್ನಡ ಕೇಳಿಸದ ಪ್ರದೇಶಗಳಿವೆ; ಕನ್ನಡ ಅರ್ಥವಾಗದವರೂ ಇದ್ದಾರೆ! ಕೊಂಕಣಿ, ಬ್ಯಾರಿ, ಮರಾಠಿ, ಉರ್ದು, ಹವ್ಯಕ ಬ್ರಾಹ್ಮಣ ಕನ್ನಡದಂಥ ಸಾಮುದಾಯಿಕ ಭಾಷೆಗಳು ಬೆಳ್ತಂಗಡಿಯಲ್ಲಿ ಇದೆಯಾದರೂ ಹೊರಪ್ರಪಂಚದದಲ್ಲಿ ತುಳು ಭಾಷೆಗೆ ಪ್ರಾಮುಖ್ಯತೆ ಹೆಚ್ಚು. ತುಳುವಿನಲ್ಲಿ ’ಬೋಲ್ತೇರ್’ಎಂದು ಕರೆಯಲ್ಪಡುವ ಬೆಳ್ತಂಗಡಿಯ ಕಾಡಿನಂಚಿನಲ್ಲಿರುವ ಆದಿವಾಸಿ ಕೊರಗರು, ಬುಡಕಟ್ಟು ಮಲೆಕುಡಿಯರು, ಮರಾಠಿ, ನರಸಣ್ಣ ಮುಂತಾದ ಜನಾಂಗದ ನೆಲೆಗಳು ನಾಗರಿಕ ಪ್ರಪಂಚದ ನಡುಗಡ್ಡೆಗಳಂತೆ ಭಾಸವಾಗುತ್ತದೆ. ಬುದ್ಧಿವಂತರ ಜಿಲ್ಲೆಯೆಂಬ ಹೆಗ್ಗಳಿಕೆಯ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮಡಿ-ಮೈಲಿಗೆ, ಮೇಲು-ಕೀಳು, ಧಾರ್ಮಿಕ ಕಂದಾಚಾರ, ಮೂಢನಂಬಿಕೆ, ಜಮೀನ್ದಾರಿ ದರ್ಪ-ಶೋಷಣೆ, ಅನೈತಿಕ ಪೊಲೀಸ್‌ಗಿರಿ ಅಟ್ಟಹಾಸ ನಾಜೂಕಾಗಿ ನಡೆದಿರುವುದು ದುರಂತ. ತಲೆಯ ಮೇಲೊಂದು ಸೂರಿಲ್ಲದ ಸಾವಿರಾರು ಜನರಿರುವ ಬೆಳ್ತಂಗಡಿಯಲ್ಲಿ ಸಾವಿರಾರು ಎಕರೆ ಜಮೀನಿರುವ ಹಲವು ’ಲ್ಯಾಂಡ್ ಲಾರ್ಡ್’ಗಳೂ ಇದ್ದಾರೆ!

ಬೆಳ್ತಂಗಡಿಯಿಂದ 6 ಕಿ.ಮೀ. ದೂರದಲ್ಲಿರುವ ನಡ ಎಂಬಲ್ಲಿ ’ಕಡಾಯಿಕಲ್ಲು’ ಕೋಟೆಯಿರುವ ಹೆಬ್ಬಂಡೆಯಿದೆ. ಈ ಸೀಮೆ ಆಳಿದ ಬಲ್ಲಾಳ ರಾಜ ವಂಶಸ್ಥರಲ್ಲಿ ಒಬ್ಬನಾದ ನರಸಿಂಹ ವರ್ಮ ಬೆಟ್ಟದಲ್ಲಿ ಕೋಟೆ ಕಟ್ಟಿಸಿ ಸುತ್ತಲೂ ಪಟ್ಟಣ ನಿರ್ಮಿಸಿದ್ದ. ಇದು ’ನರಸಿಂಹಗಡ’ ಎಂದಾಯಿತು. ಕೋಟೆ ಅದೇ ಹೆಸರಿಂದ ಪ್ರಸಿದ್ಧವಾಯಿತು. 1794ರಲ್ಲಿ ಈ ಕೋಟೆಯನ್ನು ಟಿಪ್ಪು ಸುಲ್ತಾನ್ ಪುನರ್ ನಿರ್ಮಾಣ ಮಾಡಿ ತನ್ನ ತಾಯಿಯಾದ ಜಮಾಲಾಬಿ ನೆನಪಿಗಾಗಿ ಜಮಾಲಾಬಾದ್ ಎಂದು ಹೆಸರಿಟ್ಟಿದ್ದ. ಪ್ರೇಕ್ಷಣೀಯ ಸ್ಥಳವಾಗಿರುವ ಈ ಕೋಟೆ ಈಗ ನರಸಿಂಹಗಡ ಕೋಟೆ ಮತ್ತು ಜಮಾಲಾಬಾದ್ ಕೋಟೆಯೆಂದು ಗುರುತಿಸಲ್ಪಡುತ್ತಿದೆ. ಹತ್ತಿರದ ಪೆರ್ಮಾಣು ಎಂಬಲ್ಲಿ ಜೈನ ಬಸದಿಯಿದೆ. ಬೆಳ್ತಂಗಡಿ ಬಳಿಯಿರುವ ಬಂಗವಾಡಿ ದಕ್ಷಿಣ ಕನ್ನಡ ಆಳಿದ ಬಂಗ ಅರಸರ ರಾಜಧಾನಿಯಾಗಿತ್ತು. ಬೆಳ್ತಂಗಡಿ ಬಳಿ ವೇಣೂರು ಜೈನ ಕ್ಷೇತ್ರವಿದೆ. ಫಲ್ಗುಣಿ ನದಿದಂಡೆಯಲ್ಲಿರುವ ಈ ಊರು ಜೈನ ಅರಸರ ರಾಜಧಾನಿಯಾಗಿತ್ತು. ಇಲ್ಲಿ 11 ಮೀ. ಎತ್ತರದ ಗೊಮ್ಮಟ ಮೂರ್ತಿಯಿದೆ. ಅಳದಂಗಡಿಯಲ್ಲಿ ರಾಣಿ ಮದರಕ್ಕ ಅರಮನೆಯಿದೆ.

ಬೆಳ್ತಂಗಡಿಯ ಆರ್ಥಿಕತೆ ತೋಟಗಾರಿಕೆ ಹಾಗು ಹೈನುಗಾರಿಕೆ ಮೇಲೆ ಅವಲಂಬಿಸಿದೆ. ಅಡಿಕೆ, ಕೊಕ್ಕೋ, ತೆಂಗು ಮತ್ತು ರಬ್ಬರ್ ವಾಣಿಜ್ಯ ಬೆಳೆಗಳು. ಭತ್ತದ ಕೃಷಿಯಿದೆಯಾದರೂ ಹೈನುಗಾರಿಕೆ ಹಲವರ ಬದುಕಿಗೆ
ಆಧಾರವಾಗಿದೆ. ಅಡಿಕೆ ಬೆಲೆ ಏರಿಕೆಯಾಗಿರುವುದರಿಂದ ತೋಟಿಗರ ಮುಖದಲ್ಲಿ ಮಂದಹಾಸ ಮೂಡಿದೆ. ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಸ್ತ್ರೀ ಸ್ವ-ಸಹಾಯ ಸಂಘಗಳಿವೆ. ಸಹಕಾರಿ ಆಂದೋಲನ ಬೆಳ್ತಂಗಡಿಯಲ್ಲಿ ಪ್ರಬಲವಾಗಿದೆ. ಅಡಿಕೆ ವಹಿವಾಟು ತೇಜಿಯಾಗಿರುವುದರಿಂದ ತೋಟದಲ್ಲಿ ಕೂಲಿ ಮಾಡವವರಿಗೂ ಸಮಾಧಾನಕರ ಸಂಬಳ ಸಿಗುತ್ತಿದೆ ಎನ್ನಲಾಗಿದೆ. ಬೀಡಿ ಉದ್ಯಮಕ್ಕೆ ಮೊದಲಿನ ಖದರಿಲ್ಲ; ಆದರೂ ಇವತ್ತಿಗೂ ಬೀಡಿ ಕಟ್ಟುವುದರಿಂದಲೆ ಕೆಲವು ಕುಟುಂಬಗಳ ಉದರ ಪೋಷಣೆಯಾಗುತ್ತಿದೆ. ದುಡಿವ ಕೈಗಳಿಗೆ ಕೆಲಸ ಕೊಡುವ ಯೋಜನೆ ತರುವ ಯೋಚನೆ ಬಿಟ್ಟು ಬರಿ ಧರ್ಮಕಾರಣದಲ್ಲಿ ಸಂಸದ ನಳಿನ್‌ಕಮಾರ್ ಕಟೀಲ್ ಮತ್ತು ಶಾಸಕ ಹರೀಶ್ ಪೂಂಜಾ ನಿರತರಾಗಿದ್ದಾರೆಂಬ ಆಕ್ಷೇಪ ಸಾಮಾನ್ಯವಾಗಿದೆ.

ಧರ್ಮಸ್ಥಳ ದೇವರ ಪ್ರಭಾವ

ಆಣೆ-ಪ್ರಮಾಣಕ್ಕೆ ಪ್ರಸಿದ್ಧವಾಗಿರುವ ’ದೊಡ್ಡ ದೇವರ’ಗುಡಿ ಧರ್ಮಸ್ಥಳ ಬೆಳ್ತಂಗಡಿಯಲ್ಲಿದೆ. ದೊಡ್ಡ ದೇವರಿಗಿಂತ ’ಖಾವಂದರೆ’ ದೊಡ್ಡವರೆಂಬ ಭಯ-ಭಕ್ತಿಯಿಂದ ಅಡ್ಡಬೀಳುವ ಭಕ್ತ ಸಮೂಹ ಭಾರತದಲ್ಲಿದೆ! ಕೋಟಿಕೋಟಿ ಹರಿದು ಬರುವ ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ತುತಿ ಮತ್ತು ಟೀಕೆ ಎರಡಕ್ಕೂ ಒಳಗಾಗಿದ್ದಾರೆ. ಉಜಿರೆಯನ್ನು ಶಿಕ್ಷಣ ವ್ಯಾಪಾರ ಕೇಂದ್ರವಾಗಿ ಮಾಡಿದ್ದಾರೆನ್ನಲಾಗಿರುವ ಹೆಗ್ಗಡೆ ಪರಿವಾರದ ಪ್ರಭಾವ ಬೆಳ್ತಂಗಡಿಯಲ್ಲಿದೆ. ಹೆಗ್ಗಡೆಗಳ ತಪ್ಪುಒಪ್ಪುಗಳ ವಿಮರ್ಶೆ ದುಃಸ್ಸಾಹಸ ಎಂಬ ಭಯ ಈ ಭಾಗದಲ್ಲಿದ್ದು, ಖಾವಂದರ ಕೃಪಾಶೀರ್ವಾದ ಇಲ್ಲದೆ ಬೆಳ್ತಂಗಡಿಯಲ್ಲಿ ರಾಜಕಾರಣ ಮಾಡುವುದು, ಯಾವುದೆ ಪಕ್ಷದ ಟಿಕೆಟ್ ತರುವುದು ಮತ್ತು ಎಮ್ಮೆಲ್ಲೆಯಾಗುವುದು ಕಷ್ಟವೆಂಬುದು ಸಾರ್ವತ್ರಿಕ ಅನಿಸಿಕೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜೈನರಾದ ಹೆಗ್ಗಡೆ ವಂಶಸ್ಥರು ಶೈವ ದೇಗುಲದ ಪಾರುಪತ್ಯ ನಡೆಸುವುದು ಮತ್ತು ವಾರ್ಷಿಕ ನೂರಾರು ಕೋಟಿ ರೂ. ಆದಾಯದ ಮೇಲೆ ಏಕಸ್ವಾಮ್ಯ ಸಾಧಿಸಿರುವ ಬಗ್ಗೆ ಲಾಗಾಯ್ತಿನಿಂದ ಟೀಕೆಟಿಪ್ಪಣಿಗಳು ಕೇಳಿಬರುತ್ತಿದೆ. ಭೂಸ್ವಾಧೀನ, ಗ್ರಾಮಾಭಿವೃದ್ಧಿ ಸಂಘ, ಸ್ತ್ರೀ ಸ್ವಸಹಾಯ ಸಂಘ, ಮೈಕ್ರೋ ಫೈನಾನ್ಸ್ ಮಾದರಿಯ ಸಾಲ ವಿತರಣೆಯಲ್ಲಿ ಅಸಾಹಾಯಕರಿಗೆ ಶೋಷಣೆ-ಅನ್ಯಾಯ ಆಗುತ್ತಿದೆಯೆಂಬ ಆರೋಪ ಕೇಳಿಬರುತ್ತಿದೆ. ಕೆಲವು ವರ್ಷದ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೇವಧೂತ ಪರಿವಾರದ ತರುಣರ ಶಾಮೀಲಾತಿ ದೂರು ನ್ಯಾಯಾಲಯದ ತನಕವೂ ಹೋಗಿತ್ತು. ಯಾತ್ರಾ ಸ್ಥಳವಾದ ಧರ್ಮಸ್ಥಳದಲ್ಲಿ ಮೇಲಿಂದಮೇಲೆ ಹೊರಗಿನ ಮತ್ತು ಸ್ಥಳೀಯ ಮಹಿಳೆಯರ ಅಸಹಜ ಸಾವು ಸಂಭವಿಸುತ್ತಿರುವ ಬಗ್ಗೆ ಅನೇಕ ರೀತಿಯ ಅನುಮಾನ ಹುಟ್ಟುಹಾಕಿತ್ತು. ಸೌಜನ್ಯ ಸಾವಿಗೆ ನ್ಯಾಯ ಒದಗಿಸುವಂತೆ ಹಲವು ಬಾರಿ ಸಾವಿರಾರು ಜನ ಸೇರಿ ಪ್ರಚಂಡ ಪ್ರತಿಭಟನೆ ಮಾಡಿದ್ದರು. ಧರ್ಮಸ್ಥಳದ ಪ್ರತಿಷ್ಠೆಗೆ ದೃಷ್ಟಿ ಬೊಟ್ಟಾದ ಈ ಪ್ರಕರಣ ಭಕ್ತಗಣದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು!

ಭಜರಂಗ ದಳದ ಆಡಳಿತ!

ಕರಾವಳಿ ಸಂಘಪರಿವಾರದ ಪ್ರಶ್ನಾತೀತ ನಾಯಕನ ನೆಚ್ಚಿನ ಆಡಂಬೊಲದಲ್ಲಿ ಬೆಳ್ತಂಗಡಿ ಒಂದೆನ್ನಲಾಗುತ್ತಿದೆ. ಭಜರಂಗ ದಳದ ನೇತಾರರ ಇಷ್ಟಾನಿಷ್ಟದಂತೆ ಬೆಳ್ತಂಗಡಿಯ ಸರಕಾರಿ ಆಡಳಿತ ನಡೆಯುತ್ತಿದೆ ಎಂಬ ಅಳಲಿನ ಆರೋಪ ಜನಸಾಮಾನ್ಯರದ್ದಾಗಿದೆ. ತಾಲೂಕಿನಲ್ಲಿ ಒಂದು ಸುತ್ತು ಹಾಕಿದರೆ ಭಜರಂಗದಳ ಮತ್ತು ಕೌಬ್ರಿಗೇಡ್ ಆರ್ಭಟಕ್ಕೆ ಇಡೀ ಬೆಳ್ತಂಗಡಿ ಬೆಚ್ಚಿಬಿದ್ದಿರುವುದು ಸ್ಪಷ್ಟವಾಗುತ್ತದೆಂದು ಹೆಸರು ಹೇಳಲಿಚ್ಛಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ಸಾಕ್ಷ್ಯಾಧಾರ ಸಮೇತ ವಿವರಿಸಿದರು. ಸರಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗುವುದಿಲ್ಲ; ಶಾಸಕರ ಆಪ್ತರಾದ ಭಜರಂಗ ದಳಿಗಳೆ ಸರಕಾರಿ ಆಫೀಸುಗಳಲ್ಲಿ ದಲ್ಲಾಳಿಗಳು; ಈ ಉದ್ದ ಕುಂಕುಮ ನಾಮ-ಕೇಸರಿ ಶಾಲಿನ ಏಜೆಂಟರು ಹೇಳಿದರೆ ಮಾತ್ರ ಅಧಿಕಾರಿಗಳು ಕೆಲಸ ಮಾಡುತ್ತಾರೆಂಬ ಮಾತು ಬೆಳ್ತಂಗಡಿಯಾದ್ಯಂತ ಜೋರಾಗಿ ಕೇಳಿಬರುತ್ತಿದೆ. ಸರಕಾರಿ ಜಾಗ ಕೇಸರಿ ರಕ್ಷಣೆಯಲ್ಲಿ ಕಬಳಿಕೆಯಾಗುತ್ತಿದೆ; ಸರಕಾರಿ ಜಮೀನಿನಲ್ಲಿ ಒಂದು ಗುಡಿಸಲು ಕಟ್ಟಿ, ಅದರ ಮೇಲೊಂದು ಕೇಸರಿ ಪತಾಕೆ ಹಾರಿಸಲಾಗುತ್ತದೆ. ಆ ಕೇಸರಿ ಬಾವುಟ ಕಂಡರೆ ಸಾಕು, ಕಂಗಾಲಾಗುವ ಅಧಿಕಾರಿಗಳು ಅತಿಕ್ರಮಣ ತರವುಗೊಳಿಸುವ ಗೋಜಿಗೆ ಹೋಗುವುದಿಲ್ಲವೆಂದು ಜನರು ಆರೋಪಿಸುತ್ತಾರೆ.

ರತ್ನವರ್ಮ ಹೆಗ್ಗಡೆ

ಬೆಳ್ತಂಗಡಿಯ ಪಶ್ಚಿಮಘಟ್ಟದ ದಟ್ಟಕಾಡಿನ ಅಮೂಲ್ಯ ಮರಗಳು ಹಾಡುಹಗಲೆ ಲೂಟಿಯಾಗುತ್ತಿದೆ. ನೇತ್ರಾವತಿ ನದಿ ಮತ್ತು ತಾಲೂಕಿನ ಹಲವು ಹೊಳೆಗಳಲ್ಲಿ ಹಿಟಾಚಿಯಂಥ ಯಂತ್ರಗಳಿಂದ ಮರಳೆತ್ತಿ ಕೋಟ್ಯಂತರ ರೂ. ಅವ್ಯವಹಾರ ರಾಜಾರೋಷವಾಗಿಯೇ ನಡೆಸಲಾಗುತ್ತಿದೆ. ಶಿಲೆ ಕಲ್ಲು-ಕೆಂಪು ಕಲ್ಲುಗಳನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡಲಾಗುತ್ತಿದೆ. ಗೋರಕ್ಷಣೆ ಹೆಸರಲ್ಲಿ ಅಮಾಯಕರ ರಕ್ತಪಾತ ಆಗುತ್ತಿದೆ. ಬಲಾಢ್ಯ ಬಂಟ ಜಾತಿಯ ಶಾಸಕ ದುರ್ಬಲ ಬಿಲ್ಲವರಿಗೆ ತೊಂದರೆ ಕೊಡುತ್ತಿದ್ದಾರೆಂಬ ಭಾವನೆ ಕ್ಷೇತ್ರದಲ್ಲಿದೆ. ಬಿಲ್ಲವ ಸಮುದಾಯದ ಮಹಿಳಾ ಅಧಿಕಾರಿಯ ವರ್ಗಾವಣೆ ಪ್ರಕರಣದ ನಂತರ ಕ್ಷೇತ್ರದ ಬಹುಸಂಖ್ಯಾತ ಬಿಲ್ಲವರಿಗೆ ಶಾಸಕ ಪೂಂಜಾ ಮೇಲೆ ಅಸಮಾಧಾನ ಉಂಟಾಗಿದೆಯೆನ್ನಲಾಗುತ್ತಿದೆ.

ಸುಮಾರು ಎರಡು ತಿಂಗಳ ಹಿಂದೆ ಕನ್ಯಾಡಿಯಲ್ಲಿ ದಿನೇಶ್ ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಭಜರಂಗ ದಳದ ಕೃಷ್ಣ ನಾಯರ್ ಹೊಡೆದು ಕೊಲೆ ಮಾಡಿದ್ದ. ಮಾಜಿ ಶಾಸಕ ವಸಂತ ಬಂಗೇರರ ಹೋರಾಟದಿಂದ ಬಂಧನ ಆಯಿತಾದರೂ ಆರೋಪಿ ಅಧಿಕಾರಸ್ಥರ ಸಹಕಾರದಿಂದ ಆರಾಮಾಗಿದ್ದಾನೆಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಜೆಪಿ ಮತ್ತು ಸಂಘ ಪರಿವಾರಿಗರು ಸೇರಿ ಉಜಿರೆ ಬಳಿ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದು ತಲ್ಲಣ ಮೂಡಿಸಿತ್ತು.
ಬೆಳ್ತಂಗಡಿಯಲ್ಲಿ ಬೇರುಬಿಟ್ಟಿರುವ ಶೂದ್ರಾದಿಗಳನ್ನು ಕೀಳಾಗಿ ಕಾಣುವ ಬ್ರಾಹ್ಮಣಿಕೆ ಸಂಪ್ರದಾಯ ಶಾಸಕ ಹರೀಶ್ ಪೂಂಜಾರ ಸ್ವಾಭಿಮಾನ ಶೂನ್ಯತೆಯನ್ನು ಬಹಿರಂಗಪಡಿಸಿದೆಯೆಂಬ ಚರ್ಚೆಗಳು ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಈಚೆಗೊಂದು ದಿನ ಕೊಂಕಣಿ ಬ್ರಾಹ್ಮಣರ (ಜಿಎಸ್‌ಬಿ) ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿ ಮೆರವಣಿಗೆ ಹೊರಟಿತ್ತು. ಮೆರವಣಿಗೆಯಲ್ಲಿದ್ದ ಶಾಸಕರ ಬೆಂಬಲಿಗ ಕೊಂಕಣಿ ಹುಡುಗರು ಪಲ್ಲಕ್ಕಿ ಎಮ್ಮೆಲ್ಲೆ ಸಾಹೇಬರ ಹೆಗಲಿಗೇರಿಸಿದ್ದಾರೆ. ಬಂಟ ಸಮುದಾಯದ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತಿದ್ದು ಕರ್ಮಠ ಕೊಂಕಣಿಗಳಲ್ಲಿ ಇರಿಸುಮುರಿಸು ಮೂಡಿಸಿದೆ! ಶೂದ್ರನ ಸ್ಪರ್ಶದಿಂದ ಮೇಲ್ವರ್ಗದ ದೇವರಿಗೆ ಮೈಲಿಗೆಯಾಗಿದೆಯೆಂಬ ಅಸಮಾಧಾನ ರಾತ್ರಿ ಬೆಳಗಾಗುವುದರಲ್ಲಿ ಭುಗಿಲೆದ್ದಿದೆ.

ಶಾಸಕನ ’ಅಧಿಕಪ್ರಸಂಗ’ಕ್ಕೆ ಪ್ರಾಯಶ್ಚಿತ್ತ ಆಗಬೇಕು, ಶುದ್ಧೀಕರಣ ಆಗಬೇಕೆಂಬ ಬಗ್ಗೆ ಸರಣಿ ಸಭೆಗಳಾಯಿತು. ಅಂತಿಮವಾಗಿ, ಶಾಸಕನಿಗೆ ಶಿಕ್ಷೆ ವಿಧಿಸಿದರೆ ಹಿಂದುತ್ವದ ಮೇಲೆ ಅಡ್ಡಪರಿಣಾಮ ಬೀರಬಹುದೆಂದು ಶಾಸಕನಿಗೆ ಪಲ್ಲಕ್ಕಿ ಹೊರಿಸಿದ ಸ್ವಜಾತಿ ಹುಡುಗರಿಗೆ ದೇವಸ್ಥಾನದ ಪಾರುಪತ್ಯಗಾರರು ದಂಡ ವಿಧಿಸಿದರು; ಹೋಮ-ಬ್ರಹ್ಮಕಲಶ ಮಾಡಿ ದೇವರನ್ನು ಶುದ್ಧೀಕರಿಸಲಾಯಿತು!

ಚುನಾವಣಾ ರಾಜಕಾರಣ

ಧರ್ಮಕಾರಣ ಮತ್ತು ಧನಕಾರಣದ ಆಖಾಡದಂತಾಗಿರುವ ಬೆಳ್ತಂಗಡಿಯಲ್ಲಿ ಸಂಘ ಪರಿವಾರದ ಅಬ್ಬರ ಬಿರುಸಾಗಿದೆ. ಆದರೆ ಈವರೆಗೆ ನಡೆದ ಚುನಾವಣೆಗಳ ಫಲಿತಾಂಶದ ಮೇಲೆ ಕಣ್ಣು ಹಾಯಿಸಿದರೆ ಬೆಳ್ತಂಗಡಿ ಬಿಜೆಪಿಯ ಭದ್ರಕೋಟೆಯೇನಲ್ಲವೆಂಬುದು ಸ್ಪಷ್ಟವಾಗುತ್ತದೆ. ಕಳೆದ ಚುನಾವಣೆ ಹೊತ್ತಲ್ಲಿ 2,18,935 ಮತದಾರರಿದ್ದ ಬೆಳ್ತಂಗಡಿಯಲ್ಲಿ ಬಿಲ್ಲವರು 60 ಸಾವಿರವಿದ್ದಾರೆ. ಒಕ್ಕಲಿಗ ಸಮುದಾಯದ ಮತದಾರರು 50 ಸಾವಿರದಷ್ಟಿದ್ದಾರೆಂದು ಅಂದಾಜಿಸಲಾಗಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರು 40 ಸಾವಿರವಿದ್ದರೆ, ಕೊಂಕಣಿ-ಹವ್ಯಕ-ಶಿವಳ್ಳಿಯೇ ಮುಂತಾದ ಬ್ರಾಹ್ಮಣರು 15 ಸಾವಿರ ಇದ್ದಾರೆ. ಪಜಾ-ಪಪಂ ಮತದಾರರು 30 ಸಾವಿರವಿದ್ದಾರೆ. ಸಾಮಾಜಿಕವಾಗಿ ಬಲಿಷ್ಟರಾಗಿರುವ ಬಂಟರು 8-10 ಸಾವಿರದವರೆಗಿದ್ದಾರೆ.

ಬಾಳಗೋಡು ವೆಂಕಟರಮಣ ಗೌಡ ಬೆಳ್ತಂಗಡಿಯ ಮೊದಲ ಶಾಸಕರು. ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ (ಈಗಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಂದೆ) 1957ರಲ್ಲಿ ಕಾಂಗ್ರೆಸ್‌ನಿಂದ ಶಾಸನಸಭೆಗೆ ಹೋಗಿದ್ದರು. 1962ರಲ್ಲಿ ಕಾಂಗ್ರೆಸ್ ರತ್ನವರ್ಮ ಹೆಗ್ಗಡೆಯವರನ್ನು ಕಾಪು ಕೇತ್ರದಲ್ಲಿ ಚುನಾವಣೆಗಿಳಿಸಿ, ಬಂಟ್ವಾಳದ ಕೊಂಕಣಿ ಸಮುದಾಯದ ವೈಕುಂಠ ಬಾಳಿಗರಿಗೆ
ಅವಕಾಶಕೊಟ್ಟಿತ್ತು. 1962 ಮತ್ತು 1967ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಬಾಳಿಗರು ವಿಧಾನಸಭೆಯ ಸ್ಪೀಕರ್ ಸಹ ಆಗಿದ್ದರು. ಸುಳ್ಯದ ಸುಬ್ರಹ್ಮಣ್ಯ ಗೌಡ 1972ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1978ರಲ್ಲಿ ಸ್ಥಳೀಯ ಒಕ್ಕಲಿಗ ಸಮುದಾಯದ ಗಂಗಾಧರ ಗೌಡ 31,255 ಮತ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದರು. ಗುಂಡೂರಾವ್ ಸರಕಾರದಲ್ಲಿ ಯುವಜನ ಮತ್ತು ಕ್ರೀಡಾ ಮಂತ್ರಿಯೂ ಆಗಿದ್ದ ಗೌಡರಿಗೆ 1983ರಲ್ಲಿ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಬಿಲ್ಲವ ಸಮುದಾಯದ ವಸಂತ ಬಂಗೇರ ಎದುರು ಗೆಲ್ಲಲಾಗಲಿಲ್ಲ.

ವಸಂತ ಬಂಗೇರ

ಬಿಜೆಪಿ ಶಾಸಕರಾಗಿದ್ದ ಬಂಗೇರ ಹೆಗಡೆ ಸರಕಾರಕ್ಕೆ ತನ್ನ ಬೆಂಬಲವಿಲ್ಲವೆಂದು ಹೇಳಿಕೆ ಕೊಟ್ಟಿದ್ದು ಅಂದು ಬೃಹನ್ನಾಟಕಕ್ಕೆ ಕಾರಣವಾಗಿತ್ತು. ಬಿಜೆಪಿಯ 18 ಶಾಸಕರ ಬಾಹ್ಯ ಬೆಂಬಲದಿಂದ ಸರಕಾರ ನಡೆಸುತ್ತಿದ್ದ ಹೆಗಡೆ ಹಾಗು ಬಂಗಾರಪ್ಪ ನಡುವೆ ಜಿದ್ದಾಜಿದ್ದಿ ನಡೆದಿದ್ದ ಕಾಲವದು. ಬಂಗಾರಪ್ಪರ ಕಡೆ ಒಲವು ವ್ಯಕ್ತಪಡಿಸಿದ್ದ ಬಂಗೇರ ರಾತ್ರಿ ಬೆಳಗಾಗುವುದರಲ್ಲಿ ಯೂಟರ್ನ್ ಹೊಡೆದಿದ್ದರು. 1985ರಲ್ಲಿ ಮತ್ತೆ ಬಿಜೆಪಿಯಿಂದ ಆಖಾಡಕ್ಕಿಳಿದಿದ್ದ ವಸಂತ ಬಂಗೇರ ಕಾಂಗ್ರೆಸ್‌ನ ಲೋಕೇಶ್ವರಿ ವಿನಯಚಂದ್ರ ವಿರುದ್ಧ 6,330 ಮತಗಳ ಅಂತರದಿಂದ ಶಾಕನಾಗಿದ್ದರು. ಸಂಘ ಶ್ರೇಷ್ಠರಿಗೆಲ್ಲ ಡೊಗ್ಗುಸಲಾಮು ಹಾಕದ, ಧರ್ಮಕಾರಣ ಮಾಡದ ವಸಂತ ಬಂಗೇರರಿಗೆ 1989ರಲ್ಲಿ ಬಿಜೆಪಿ ಟಿಕೆಟ್ ಕೊಡಲಿಲ್ಲ. ಸಂಘ ಪರಿವಾರ ಅವರ ಖಾಸಾ ಸೋದರ ಪ್ರಭಾಕರ ಬಂಗೇರರನ್ನು ಎತ್ತಿಕಟ್ಟಿ ಕ್ಯಾಂಡಿಡೇಟ್ ಮಾಡಿತ್ತು. ಆದರೆ ಅವರು ಅಂದು ಪಡೆದದ್ದು ಕೇವಲ 8,225 ಮತಗಳಷ್ಟೆ. ಪಕ್ಷೇತರನಾಗಿ ಹೋರಾಟಕ್ಕಿಳಿದಿದ್ದ ವಸಂತ ಬಂಗೇರ 39,754 ಮತಗಳನ್ನು ಪಡೆದಿದ್ದರು. ಬಂಗೇರ ಸೋದರರ ಕಾಳಗದಲ್ಲಿ ಕಾಂಗ್ರೆಸ್‌ನ ಗಂಗಾಧರ ಗೌಡರು ತೀರಾ ಸಣ್ಣ ಅಂತರದಲ್ಲಿ (1,210) ಗೆಲವು ಕಂಡರು.

1994ರ ಚುನಾವಣೆಯಲ್ಲಿ ಅಣ್ಣ-ತಮ್ಮ ಮತ್ತೆ ಮುಖಾಮುಖಿಯಾಗಿದ್ದರು. ಜೆಡಿಎಸ್ ಹುರಿಯಾಳಾಗಿದ್ದ ವಸಂತ ಬಂಗೇರ 39,871 ಮತಗಳನ್ನು ಪಡೆದು ನಿಕಟ ಸ್ಪರ್ಧಿ ಬಿಜೆಪಿಯ ಪ್ರಭಾಕರ ಬಂಗೇರರನ್ನು (32,433) ಸೋಲಿಸಿದರು. ಆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹಿಂದುತ್ವದ ಬೀಜಾಂಕುರ ಆಯಿತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ದೇವೇಗೌಡರ ಆಪ್ತರಾಗಿದ್ದ ಬಂಗೇರರಿಗೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸ್ಥಾನವೂ ಒಲಿದಿತ್ತು. ಗೌಡರ ಪ್ರಧಾನಿ ಅಧಿಕಾರ ಅಭಾದಿತವಾಗಲೆಂದು ಬಂಗೇರ ಬೆಳ್ತಂಗಡಿಯ ರಿಮೋಟ್ ಪ್ರದೇಶವೊಂದರಲ್ಲಿ ದೊಡ್ಡ ಯಾಗ ಮಾಡಿಸಿದ್ದರೆಂದು ಸುದ್ದಿಯಾಗಿತ್ತು. 1999 ಮತ್ತು 2004ರಲ್ಲಿ ಬಿಜೆಪಿಯ ಪ್ರಭಾಕರ ಬಂಗೇರ ಗೆಲ್ಲುವ ಮೂಲಕ ಕೇಸರಿ ಕ್ಷೇತ್ರದಲ್ಲಿ ನೆಲೆ ಕಂಡಿತ್ತು. ಅಣ್ಣ-ತಮ್ಮರ ಜಿದ್ದಾಜಿದ್ದಿಯಲ್ಲಿ ಬಿಲ್ಲವ ಓಟ್ ಬ್ಯಾಂಕ್ ಹರಿದುಹಂಚಿಹೋಗಿದ್ದು, ಮುಸ್ಲಿಮ್-ಕ್ರಿಶ್ಚಿಯನ್ ಮತ ಜೆಡಿಎಸ್‌ನ ವಸಂತ ಬಂಗೇರರಿಂದ ಸೆಳೆಯಲು ಸಾಧ್ಯವಾಗದಿದ್ದು ಮತ್ತು ಹಿಂದುತ್ವದ ಅಜೆಂಡಾದ ಅನುಕೂಲದಿಂದ ಬಿಜೆಪಿ ಗೆಲುವು ಕಂಡಿತ್ತೆಂದು ವಿಶ್ಲೇಷಿಸಲಾಗುತ್ತದೆ.

2004ರಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಹುರಿಯಾಳು ಗಂಗಾಧರಗೌಡರನ್ನು ಬದಲಿಸಿತ್ತು. ಬಿಲ್ಲವ ಸಮುದಾಯದ ಹರೀಶ್‌ಕುಮಾರ್‌ಗೆ ಜನಾರ್ದನ ಪೂಜಾರಿ ಟಿಕೆಟ್ ಕೊಡಿಸಿದ್ದರು. ಹರೀಶ್‌ಕುಮಾರ್‌ಗೂ ಗೆಲ್ಲಲಾಗಲಿಲ್ಲ. ಜೆಡಿಎಸ್‌ನಲ್ಲಿದ್ದರೆ ಗೆಲುವು ಸಾಧ್ಯವಿಲ್ಲವೆಂಬುದು ಪಕ್ಕಾ ಆಗಿದ್ದ ವಸಂತ ಬಂಗೇರ ಕರಾವಳಿ ಕಾಂಗ್ರೆಸ್‌ನ ಹೈಕಮಾಂಡ್ ಆಗಿದ್ದ ಆಸ್ಕರ್ ಫರ್ನಾಂಡಿಸ್ ಹಾಗು ಜನಾರ್ದನ ಪೂಜಾರಿಯವರನ್ನು ಒಲಿಸಿಕೊಂಡು ಕಾಂಗ್ರೆಸ್ ಸೇರಿದ್ದರು. 2008ರಲ್ಲಿ ಕಾಂಗ್ರೆಸ್ ಹುರಿಯಾಳಾಗಿದ್ದ ವಸಂತ ಬಂಗೇರ ಬಿಜೆಪಿಯ ಪ್ರಭಾಕರ ಬಂಗೇರರನ್ನು 16,103 ಮತಗಳಿಂದ ಸೋಲಿಸಿದರು. ಪ್ರಭಾಕರ ಬಂಗೇರ ಬೆಳ್ತಂಗಡಿ ಬಿಜೆಪಿಯ ಮೇಲ್ವರ್ಗದ ಸೂತ್ರಧಾರರ ತಾತ್ಸಾರಕ್ಕೆ ತುತ್ತಾಗಿದ್ದೇ ಇಷ್ಟು ದೊಡ್ಡ ಅಂತರದಿಂದ ಸೋಲಲು ಕಾರಣ
ಆಗಿತ್ತೆನ್ನಲಾಗುತ್ತದೆ.

2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಗಂಗಾಧರ ಗೌಡ ಆ ಬಳಿಕ ತನ್ನ ಮಗ ರಂಜನ್ ಗೌಡರಿಗೆ 2013ರ ಚುನಾವಣೆಯಲ್ಲಿ ಟಿಕೆಟ್ ಕೊಡುವ ಷರತ್ತು ವಿಧಿಸಿ ಬಿಜೆಪಿ ಸೇರಿದ್ದರು. ಹಣ ಹರಿಸಿ ಬಿಜೆಪಿಯನ್ನು ಸಂಘಟಿಸಿದ್ದ ರಂಜನ್ ಗೌಡರಿಗೆ ಬಿಜೆಪಿ ಟಿಕೆಟ್ ಏನೋ ಸಿಕ್ಕಿತು. ಆದರೆ ಹಳೆ ಹುಲಿ ವಸಂತ ಬಂಗೇರರನ್ನು ಎದುರಿಸಲಾಗದೆ ದೊಡ್ಡ ಅಂತರದಿಂದ (15,741) ಪರಾಭವಗೊಂಡರು. ಜನ ಬಳಕೆಯ-ಜನಪರ ಕೆಲಸಗಾರಿಕೆಯ ವಸಂತ ಬಂಗೇರ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿದ್ದರು. ಆದರೆ 2018ರ ಇಲೆಕ್ಷನ್ ಸಂದರ್ಭದಲ್ಲಿ ಬೀಸಿದ ಹಿಂದುತ್ವದ ಹುಚ್ಚು ಗಾಳಿ ಮತ್ತು ಬಿಜೆಪಿ ಕ್ಯಾಂಡಿಡೇಟ್ ಹರೀಶ್ ಪೂಂಜಾರ ಗಣಿ ಹಣದ ಹೊಡೆತ ತಡೆಯಲಾಗದೆ ದೊಡ್ಡ ಸೋಲು (22,974 ಮತಗಳ ಅಂತರ) ಅನುಭವಿಸಬೇಕಾಯಿತೆಂದು ಜನರು ಹೇಳುತ್ತಾರೆ.

ಕ್ಷೇತ್ರದ ಸ್ಥಿತಿ-ಗತಿ

ಚಿಕ್ಕಮಗಳೂರು ಜಿಲ್ಲೆಯೊಂದಿಗೆ (ಮೂಡಿಗೆರೆ) ಗಡಿ ಹಂಚಿಕೊಂಡಿರುವ ಬೆಳ್ತಂಗಡಿ 84 ಗ್ರಾಮಗಳಿರುವ, ಕಾಡು-ಕಣಿವೆಗಳ ದರ್ಗಮ ಜನವಸತಿ ಪ್ರದೇಶಗಳ ತಾಲೂಕು. ಒಂದಿಷ್ಟು ರಸ್ತೆ, ಕಿಂಡಿ ಆಣೆಕಟ್ಟು ಆಗಿದ್ದು ಬಿಟ್ಟರೆ ಜನಜೀವನ ಮಟ್ಟ ಸುಧಾರಿಸುವ ಯೋಜನೆಗಳಾವುವೂ ಆಳುವವರ ಖಾಲಿ ತಲೆಗೆ ಹೊಳೆಯುತ್ತಿಲ್ಲವೆಂದು ಜನರು ಆಕ್ರೋಶದಿಂದ ಹೇಳುತ್ತಾರೆ. ನ್ಯಾಷನಲ್ ಪಾರ್ಕ್ ಯೋಜನಾ ಪ್ರದೇಶ ಮತ್ತು ಬುಡಕಟ್ಟು ಮಂದಿಯ ಕೇರಿಗಳಿಗೆ ಪ್ರಗತಿ-ಅಭಿವೃದ್ಧಿಯೆಂಬುದು ಕನಸಾಗಿಯೆ ಉಳಿದಿದೆ. ಮಲೆಕುಡಿಯರೆ ಮುಂತಾದ ಬುಡಕಟ್ಟುಗಳಿಗಾಗುತ್ತಿರುವ ಕಷ್ಟ-ನಷ್ಟ-ನೋವು-ಶೋಷಣೆ-ಪೀಡಣೆ ಮತ್ತು ಬಲಾಢ್ಯರು ಹಾಡುಹಗಲೆ ಕಾಡುಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದರಿಂದಲೆ ಇಲ್ಲಿ ನಕ್ಸಲ್ ಹೆಜ್ಜೆ ಗುರುತು ಮೂಡಿತ್ತೆಂಬ ಅಭಿಪ್ರಾಯ ಪಡಲಾಗುತ್ತಿದೆ.
ಬೆಳ್ತಂಗಡಿಯಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಹಾವಳಿ ಮಿತಿಮೀರಿದೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆ, ಹೈಸ್ಕೂಲ್, ಕಾಲೇಜುಗಳ ಅವಶ್ಯಕತೆ ಇದೆ. ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದೂಇಲ್ಲದಂತಾಗಿದೆ. ಖಾಸಗಿ ಆಸ್ಪತ್ರೆಗಳು ಬಡವರ ರಕ್ತಹೀರುವ ಕೇಂದ್ರಗಳಾಗಿವೆ. ಭೂ ಅಕ್ರಮ ಸಕ್ರಮ ಮಂಜೂರಾತಿ ಬಿಜೆಪಿ ಕಾರ್ಯಕರ್ತರದಷ್ಟೇ ಆಗುತ್ತಿದೆ; ಅರ್ಹರರಿಗೆ ಅನ್ಯಾಯವಾಗುತ್ತಿದೆ. ಇದೆಲ್ಲ ತಮಗೆ ಸಂಬಂಧಿಸಿದ್ದಲ್ಲ ಎಂಬಂತಿರುವ ಶಾಸಕ-ಸಂಸದರು ಓಟು ತರುವ ಧಾರ್ಮಿಕ ಲೇಪದ ಭಾವನಾತ್ಮಕ ಘಟನೆ-ಗೊಂದಲ ಹುಟ್ಟುಹಾಕುವ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುತ್ತಾರೆಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಪ್ರಭಾಕರ ಬಂಗೇರ

1980ರ ದಶಕದಲ್ಲಿ ಗೇರು ಮರಗಳಿಗೆ ಸಿಂಪಡಿಸಿದ್ದ ಎಂಡೊಸಲ್ಫಾನ್ ರಾಸಾಯನಿಕದ ಘೋರ ಪರಿಣಾಮದಿಂದ ಬದುಕು ಕಳೆದುಕೊಂಡಿರುವ ಸಂತ್ರಸ್ತರ ಯಾವ ಸಮಸ್ಯೆಯೂ ಶಾಸಕ ಹರೀಶ್ ಪೂಂಜಾರಿಂದ ಪರಿಹರಿಸಲಾಗಿಲ್ಲ ಎಂಬ ಸಿಟ್ಟು ಗ್ರಾಮೀಣ ಪ್ರದೇಶದಲ್ಲಿದೆ. ಬೆಳ್ತಂಗಡಿಯಲ್ಲಿ ಹೆಚ್ಚು ಬೆಳೆಯುವ ವಾಣಿಜ್ಯ ತೋಟಗಾರಿಕಾ ಉತ್ಪನ್ನ ಅಡಿಕೆ, ರಬ್ಬರ್, ಕೊಕ್ಕೋ ಮತ್ತು ತೆಂಗಿಗೆ ಸಂಬಂಧಿಸಿದ ಕೈಗಾರಿಕೆ ಸ್ಥಾಪಿಸುವ ಅನೇಕ ಅವಕಾಶಗಳಿವೆ. ಆಳುವವರು ಕಿಮ್ಮತ್ತೂ ಗಮನಹರಿಸುತ್ತಿಲ್ಲ ಎಂಬ ಅರೋಪ ಕೇಳಿಬರುತ್ತಿದೆ. ಈ ಆಡಳಿತಾತ್ಮಕ-ಆರ್ಥಿಕ ಸಮಸ್ಯೆಗಳನ್ನೆಲ್ಲ ಹೇಗೋ ನಿಭಾಯಿಸಿ ಬದುಕು ಸಾಗಿಸುತ್ತಿರುವ ಬೆಳ್ತಂಗಡಿಗರನ್ನು ಸಾಮರಸ್ಯ, ಸಹಿಷ್ಣುತೆ ಮತ್ತು ಮಾನವೀಯತೆಯ ಬಿಕ್ಕಟ್ಟುಗಳು ಮಾತ್ರ ಬಿಟ್ಟೂಬಿಡದೆ ಸತಾಯಿಸುತ್ತಿದೆ ಎಂದು ಪ್ರಜ್ಞಾವಂತರು ಕಳವಳಿಸುತ್ತಾರೆ. ಮತೋನ್ಮತ್ತರ ಹಾವಳಿಯಿಂದ ಬೆಳ್ತಂಗಡಿ ಕಂಗಾಲಾಗಿ ಕೂತಿದೆಯೆಂಬ ಮಾತು ಜಾತಿ-ಧರ್ಮ,
ಪಕ್ಷ-ಪಂಗಡದ ಹಂಗಿಲ್ಲದೆ ಕೇಳಿಬರುತ್ತಿದೆ.

ಶಾಸಕ-ನಾಟಕ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತುಹಾಕಿದರೆ ಇಲ್ಲಿಯ ರಾಜಕಾರಣಕ್ಕೆ ಜನಪರ ಬದ್ಧತೆ, ಪ್ರಗತಿಯ ಹಂಗಿಲ್ಲವೆಂಬುದು ಪಕ್ಕಾ ಆಗುತ್ತದೆ. 2018ರ ಚುನಾವಣೆಗೆ ಎರಡು ವರ್ಷವಿರುವಾಗ ಹಾಲಿ ಶಾಸಕ ಹರೀಶ್ ಪೂಂಜಾ ಭಜರಂಗ ದಳದ ನಾಯಕ ತಾನೆಂದು ಹೇಳಿಕೊಂಡು ಕ್ಷೇತ್ರದಲ್ಲಿ ಪ್ರತ್ಯಕ್ಷರಾದರು. ಗಣಿ ಧಣಿ ಜನಾರ್ದನ ರೆಡ್ಡಿ ಕಂಪನಿಯ ಲೀಗಲ್ ಎಡ್ವೈಸರ್ ತಂಡದಲ್ಲಿ ಜೂನಿಯರ್ ಆಗಿದ್ದರೆನ್ನಲಾದ ಪೂಂಜಾ ಮೂಲ ಬಿಜೆಪಿಗರೆ ಬೆಚ್ಚಿಬೀಳುವಂತೆ ಬೆಳ್ತಂಗಡಿಯ ಭಜರಂಗ ದಳದ ಮೇಲೆ ಹಿಡಿತ ಸಾಧಿಸಿದರು. ತೀರಾ ಅಲ್ಪಸಂಖ್ಯಾತ ಬಂಟ ಜಾತಿಯ ಪೂಂಜಾ ತಾಲೂಕಿನ ಹತ್ತಾರು ದೇವಸ್ಥಾನದ ಕಮಿಟಿ ಸೇರಿಕೊಂಡು ಧಾರ್ಮಿಕ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ. ಕೊಡಹತ್ತಿದರು; ಅನೈತಿಕ ಪೊಲೀಸರು ಮತ್ತು ಕೌಬ್ರಿಗೇಡ್ ಪೋಷಿಸಿದರೆಂದು ಜನರು ಪೂಂಜಾರ ಟ್ರ್ಯಾಕ್ ಹಿಸ್ಟರಿಯನ್ನು ನೆನಪು ಮಾಡುತ್ತಾರೆ.

ತಾನೆ ಬಿಜೆಪಿ ಅಭ್ಯರ್ಥಿ ಆಗುವೆನೆಂಬ ಭರವಸೆಯಲ್ಲಿ ಪಕ್ಷ ಸಂಘಟಿಸಿಕೊಂಡಿದ್ದ ರಂಜನ್ ಗೌಡರ ಬದಲಿಗೆ ಆಶ್ಚರ್ಯಕರವಾಗಿ ಪೂಂಜಾರಿಗೆ ಟಿಕೆಟ್ ಸಿಕ್ಕಿತ್ತು. ಮತದಾರರ ಬೇಡಿಕೆ ಇಲ್ಲದಿದ್ದರೂ ಮನೆಮನೆಯಲ್ಲಿ ದುಡ್ಡಿನ ಕಂತೆಯಿಟ್ಟು ಗೆದ್ದರೆಂದು ಈಗಲೂ ಮಾಜಿ ಶಾಸಕ ವಸಂತ ಬಂಗೇರ ದೊಡ್ಡ ಗಂಟಲಲ್ಲಿ ಆರೋಪಿಸುತ್ತಾರೆ. ಬಡಕುಟುಂಬದ ಶಾಸಕ ಪೂಂಜಾರ ತಂದೆ ಇವತ್ತಿಗೂ ಸೈಕಲ್‌ನಲ್ಲಿ ಹಾಲು ಒಯ್ದು ಮಾರಿಬರುತ್ತಾರೆ.
ಭೂ ಮಸೂದೆಯಲ್ಲಿ ಸಿಕ್ಕ ಎರಡೆಕರೆ ಜಮೀನೇ ಪೂಂಜಾ ಪರಿವಾರಕ್ಕೆ ಜೀವನಾಧಾರ. ಇಂಥ ಹಿನ್ನೆಲೆಯ ಶಾಸಕ ಮದುವೆ, ಮುಂಜಿ, ಕ್ರೀಡಾ ಕಾರ್ಯಕ್ರಮ, ಧಾರ್ಮಿಕ ಉತ್ಸವ, ಭಜರಂಗ ದಳದ ಚಟುವಟಿಕೆಗೆ ಧಾರಾಳವಾಗಿ ಹಣ ಹಂಚುವುದು ಬೆಳ್ತಂಗಡಿಗರಿಗೆ ಬಿಡಿಸದ ಒಗಟಾಗಿದೆ. “ಶಾಸಕ ಈಗ ಕಮ್ಮಿಯೆಂದರೂ 500 ಕೋಟಿಯ ಒಡೆಯ. ನಾನು ಶಾಸಕನಾಗಿದ್ದಾಗ 1,000 ಕೋಟಿ ಅನುದಾನ ತಂದಿದ್ದೆ. ಅದು ತಾನು ತಂದಿದ್ದೆಂದು ಹೇಳಿ ಪರ್ಸೆಂಟೇಜ್ ಹೊಡೆಯಲಾಗುತ್ತಿದೆ. ಪತ್ರಿಕೆಯವರೂ ಶಾಸಕನ ಪರವೆ ಬರೆಯುತ್ತಿದ್ದಾರೆ. ಎಲ್ಲ ಹಣದ ಮಹಿಮೆ. ಬಿಜೆಪಿ ಆಡಳಿತದಲ್ಲಿ ಬೆಳ್ತಂಗಡಿ ಬರ್ಬಾದ್ ಆಗಿದೆ..” ಎಂದು ಮಾಜಿ ಶಾಸಕ ವಸಂತ ಬಂಗೇರ ನೇರಾನೇರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸಿವಿಲ್ ಕಾಮಗಾರಿಯನ್ನು ಶಾಸಕರ ಬೇನಾಮಿ ಕಂಪನಿ ’ಬಿಮಲ್’ ಮೂಲಕ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅಷ್ಟೆ ಅಲ್ಲ, ಬಿಜೆಪಿಯವರೂ ಹೇಳುತ್ತಾರೆ.

ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?

ಬೆಳ್ತಂಗಡಿಯ ಕಾಂಗ್ರೆಸ್‌ನಲ್ಲಿರುವಂತೆ ಬಿಜೆಪಿಯಲ್ಲೂ ಬಣಗಳಿವೆ. ಹಿಂದುತ್ವದ ಹೆಸರಲ್ಲಿ ಮತ ಸೆಳೆಯುವ ಸಂಘಪರಿವಾರದ ಹೆಡ್ ಮಾಸ್ತರಿಕೆ ಹೆದರಿಕೆ ಬಿಜೆಪಿಗಿದ್ದರೆ, ಕಾಂಗ್ರೆಸ್‌ನಲ್ಲಿ ಖಡಕ್ ನಾಯಕತ್ವವಿಲ್ಲದೆ ದುರ್ಬಲವಾಗಿದೆ. ಎಮ್ಮೆಲ್ಸಿ ಪ್ರತಾಪಸಿಂಹ ನಾಯಕರಂಥ ಸಂಘಪರಿವಾರದ ಮೂಲ ಬಿಜೆಪಿಗರಿಗೆ ಶಾಸಕ ಹರೀಶ್ ಪೂಂಜಾ ’ಉದ್ಧಟ’ನಂತೆ ಕಾಣಿಸುತ್ತಿದ್ದಾರೆನ್ನಲಾಗಿದೆ. ಕರಾವಳಿ ಸಂಘಪರಿವಾರದ ಸರ್ವೋಚ್ಛ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರಿಗೂ ಪೂಂಜಾ ಎಂದರೆ ಅಷ್ಟಕ್ಕಷ್ಟೆ ಎಂಬ ಮಾತೂ ಇದೆ. ಸಂಘದ ’ಶಿಸ್ತು’ ಪರಿಪಾಲಿಸದ ಪೂಂಜಾ ಧನಕಾರಣ ಮಾಡುತ್ತಿದ್ದಾರೆಂಬ ಅಸಮಾಧಾನ ಬಿಜೆಪಿಯಲ್ಲಿದ್ದು, ಪ್ರಬಲ ಸಮುದಾಯವಾದ ಬಿಲ್ಲವ ಅಥವಾ ಒಕ್ಕಲಿಗ ಹುರಿಯಾಳನ್ನು ಅಣಿಗೊಳಿಸುವ ಪ್ರಯತ್ನ ಸಂಘ ಸರದಾರರು ರಹಸ್ಯವಾಗಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹಣ ಬಲದ ಪೂಂಜಾ ಬೆನ್ನ ಹಿಂದೆ ಗಣಿ ಲಾಬಿಯಿರುವುದರಿಂದ ಆವರು ಸುಲಭಕ್ಕೆ ಶರಣಾಗಲಾರರೆಂಬ ಚರ್ಚೆಯೂ ಬಿಜೆಪಿಯಲ್ಲಿದೆ.

ಕಾಂಗ್ರೆಸ್‌ನಲ್ಲಿ ಮೂರು ಬಣಗಳಿವೆ. ಕ್ಷೇತ್ರದಾದ್ಯಂತ ಬೇರುಬಿಟ್ಟಿರುವ ಮಾಜಿ ಶಾಸಕ ವಸಂತ ಬಂಗೇರರದು ಒಂದು ಗುಂಪಾದರೆ, ಮತ್ತೊಂದು ತಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್‌ರದು. ಮೂರನೆ ಬಣ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್, ಸಹೋದರ-ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಪುತ್ರ ರಕ್ಷಿತ್ ಶಿವರಾಮ್‌ರದು. ರಕ್ಷಿತ್ ಅಜ್ಜನ ಮನೆ (ತಾಯಿಯ ತವರು) ಬೆಳ್ತಂಗಡಿಯಲ್ಲಿದೆ. ರಕ್ಷಿತ್ ಓದಿ ಬೆಳೆದಿದ್ದು ಬೆಳ್ತಂಗಡಿಯಲ್ಲಿ. ಕಾಂಗ್ರೆಸ್ ಎಮ್ಮೆಲ್ಲೆಯಾಗುವ ಆಸೆಯಲ್ಲಿ ರಾಜಕಾರಣ ಮಾಡುತ್ತಿರುವ ರಕ್ಷಿತ್‌ಗೆ ಡಿಸಿಸಿ ಅಧ್ಯಕ್ಷ ಹರೀಶ್‌ಕುಮಾರ್ ಬಣದ ಬೆಂಬಲವಿದೆಯೆನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಹತಾಶೆಯಿಂದ ಕಾಂಗ್ರೆಸ್ ಸೇರಿರುವ ಪ್ರಬಲ ಒಕ್ಕಲಿಗ ಸಮುದಾಯದ ರಂಜನ್ ಗೌಡ ವಸಂತ ಬಂಗೇರರ ಬೆನ್ನಿಗಿದ್ದಾರೆ. ಕಾಂಗ್ರೆಸಿಗರು ಬಣ ಬಡಿದಾಟ ಬಿಟ್ಟು ಸಂಘಟಿತರಾಗಿ ಹೋರಾಡಿದರೆ ವಸಂತ ಬಂಗೇರ, ರಂಜನ್ ಗೌಡ ಮತ್ತು ರಕ್ಷಿತ್ ಶಿರಾಮ್‌ರಲ್ಲಿ ಯಾರು ಸ್ಪರ್ಧಿಸಿದರೂ ಗೆಲ್ಲುತ್ತಾರೆಂಬ ಅಭಿಪ್ರಾಯ ಬೆಳ್ತಂಗಡಿಯಲ್ಲಿದೆ. ಈ ಲೆಕ್ಕಾಚಾರ ಬಿಜೆಪಿಯಲ್ಲೂ ಇದೆ. ಕ್ಷೇತ್ರದ ಹಿಂದಿನ ಚುನಾವಣಾ ಚಿತ್ರಣಗಳು ಈ ಸಾಧ್ಯತೆಯನ್ನೇ ಪುಷ್ಠೀಕರಿಸವಂತಿವೆ. ಸದ್ಯದ ಕುತೂಹಲವೆಂದರೆ, ಕಾಂಗ್ರೆಸ್ ಕ್ಯಾಂಡಿಡೇಟ್ ಯಾರಾಗಬಹುದು? ಸಂಘ ಶ್ರೇಷ್ಠರು ಪೂಂಜಾರಿಗೆ ಕಡ್ಡಾಯ ನಿವೃತ್ತಿ ಘೋಷಿಸಬಹುದೆ? ಎಂಬುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೈಂದೂರು: ಪ್ರಕೃತಿ ಸೊಬಗಿನ ತಾಣದಲ್ಲಿ ’ಹಣಾ’ಹಣಿ ಮತ್ತು ಧರ್ಮಕಾರಣದ ಮೇಲಾಟ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. sampoorna baravanige poorvagraha peeditavaagide. yavudannu kuda khachitavaagi heluva dairya lekhakaralli iddantilla. idu patrike hana kottu baresidante ide. melnotakke ‘Oh Howda?’ ennabahudaadaroo Harish Poonja avara abhivrudhi kelasagala onde ondu ullekha illadiruvudu dukhada vishaya. Nijavaagiyuu idu Patrikege Shobhe taruvudilla.

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...