ಪಡುಕಡಲ ತಡಿ ಮತ್ತು ಸಹ್ಯಾದ್ರಿ ಶಿಖರಶ್ರೇಣಿಯ ನಡುವೆ ಹಬ್ಬಿರುವ ಬೈಂದೂರು ವಿಧಾನಸಭಾ ಕ್ಷೇತ್ರ ಕಾಶ್ಮೀರದ ಸೌಂದರ್ಯದೊಂದಿಗೆ ಹೋಲಿಕೆಯಾಗುವ ಪ್ರಕೃತಿ ಚೆಲುವಿನ ಭೂಪ್ರದೇಶ. ಹೆಜ್ಜೆಹೆಜ್ಜೆಗೆ ಗುಡ್ಡ-ಬೆಟ್ಟ, ನದಿ-ಕಣಿವೆ, ಝರಿ-ಜಲಪಾತ, ಕಡಲ ತೀರಗಳಿರುವ ಚಂದದ ಬೈಂದೂರು ಕರಾವಳಿಯಲ್ಲಿ ತೀರಾ ಹಿಂದುಳಿದಿರುವ ಗುಡ್ಡಗಾಡು ವಿಧಾನಸಭಾ ಕ್ಷೇತ್ರ. ಬೈಂದೂರು 2018ರ ತನಕ ಕುಂದಾಪುರ ತಾಲೂಕಲ್ಲಿತ್ತು. ಸ್ವತಂತ್ರ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ತಾಲೂಕಿನ ಕಳೆಕಟ್ಟಿಲ್ಲ. ಸರ್ವರಿಗೂ ಸಮ ಬಾಳು; ಸರ್ವರಿಗೂ ಸಮ ಪಾಲು ಧ್ಯೇಯದ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರ ನೆಲವಾಗಿದ್ದ ಬೈಂದೂರಲ್ಲಿ ಅಸಹಿಷ್ಣುತೆಯ ಪತಾಕೆಗಳು ಹಾರುತ್ತಿರುವುದು ಆಘಾತಕಾರಿ ಆಗಿದೆಯೆಂದು ಜೀವಪರ ಜನರು ಹೇಳುತ್ತಾರೆ
ಬೈಂದೂರಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ಥಿತಿಗತಿ ಹಾಗೂ ಧರ್ಮಕಾರಣ-ಜಾತಿಕಾರಣದ ಲೆಕ್ಕಾಚಾರಗಳು ಕುಂದಾಪುರದಲ್ಲಿ ಇರುವಂತೆಯೇ ಹೆಚ್ಚುಕಮ್ಮಿ ಇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಬೈಂದೂರು, ಆರಿಸಿ ಕಳಿಸಿರುವ ಶಾಸಕ, ಸಂಸದರ ಅವಜ್ಞೆಗೆ ಲಾಗಾಯ್ತಿನಿಂದ ಒಳಗಾಗುತ್ತ ಬಂದಿದೆ. ಶಾಸಕರಾಗಿದ್ದಾಗ ಗೋಪಾಲ ಪೂಜಾರಿ ಒಂದಿಷ್ಟು ರಸ್ತೆ, ಕಾಲು ಸಂಕ, ಸಣ್ಣ ಸೇತುವೆ ನಿರ್ಮಿಸಲು ಪ್ರಯತ್ನಿಸಿದ್ದಾರಾದರೂ ಸ್ಥಳೀಯರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವಂತ ಯೋಜನೆ-ಪ್ರಯೋಜನ ಅಧಿಕಾರಸ್ಥರಿಂದಾಗಿಲ್ಲ ಎಂಬ ಸಾಮಾನ್ಯ ಅಭಿಪ್ರಾಯ ಕ್ಷೇತ್ರದಲ್ಲಿದೆ.
ಇತಿಹಾಸ-ಸಮಾಜ-ಸಂಸ್ಕೃತಿ
ಬೈಂದೂರು ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ’ಬಿಂದುಪುರ’ ಆಗಿತ್ತೆಂದು ಒಂದು ಸ್ಥಳಪುರಾಣ ಹೇಳುತ್ತೆ. ಮತ್ತೊಂದು ತರ್ಕದಂತೆ ಬಿಂದು ಋಷಿ ಇಲ್ಲಿ ತಪಸ್ಸು ಮಾಡಿದ್ದರಿಂದ ಊರಿಗೆ ಬಿಂದು ನಾಡೆಂಬ ಹೆಸರು ಬಂತೆನ್ನಲಾಗಿದೆ. ಅದು ಕಾಲಕ್ರಮೇಣ ಬಿಂದು ಪುರವಾಗಿ, ಬಿಂದೂರಾಗಿ ಅಂತಿಮವಾಗಿ ಬೈಂದೂರು ಆಯಿತೆಂದು ಹೇಳಲಾಗುತ್ತದೆ. ಬೈಂದೂರಿನ ಶಿಲ್ಪಕಲಾ ವೈಭವದ ಸೇನೇಶ್ವರ ದೇವಾಲಯಕ್ಕೆ ತರ್ಕಬದ್ಧ ಇತಿಹಾಸವಿದೆ. ಇಲ್ಲಿರುವ ತೇರು ಕಾಷ್ಟ ಶಿಲ್ಪದ ಅಪರೂಪದ ಚಂದದ ಮಾದರಿ.
ಬೇಲೂರು-ಹಳೆಬೀಡು ಶಿಲ್ಪಕಲೆಯನ್ನು ಹೋಲುವ ಈ ದೇವಾಲಯವನ್ನು ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತರಾಗಿದ್ದ ಸೇನಾ ಅರಸರು ಕಟ್ಟಿಸಿದ್ದರಿಂದ ’ಶೈನೇಶ್ವರ ದೇವಸ್ಥಾನ’ ಎಂಬ ಹೆಸರು ಬಂದಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಿಲೆಯ ಗುಡ್ಡವನ್ನೇ ಕಡಿದು ಮಾಡಿರುವ ಲೇಪಾಕ್ಷಿಯ ಬೃಹತ್ ಗಾತ್ರದ ನಂದಿಯ ಸೊಬಗಿಗೆ ಕೆಳದಿ, ಇಕ್ಕೇರಿ, ಹಳೆಬೀಡಿನ ಬಸವಗಳೂ ಸರಿಸಾಟಿ ಆಗಲಾರದೆಂಬ ವಾದವಿದೆ. ’ದಕ್ಷಿಣ ಕನ್ನಡದ ಹಳೆಬೀಡು’ ಎಂದು ಇತಿಹಾಸ ತಜ್ಞರಿಂದ ಗುರುತಿಸಲ್ಪಟ್ಟಿರುವ ಬೈಂದೂರಿನ ಅಸ್ತಿತ್ವ ಮತ್ತು ಮಹತ್ವಕ್ಕೆ ಈ ಐತಿಹ್ಯದ ಬಲವಿದೆ. ಬೈಂದೂರಿನ ಒತ್ತಿನೆಣೆ ಕ್ಷಿತಿಜ ನೇಸರ ಧಾಮ ಸೂರ್ಯೋದಯ-ಸೂರ್ಯಾಸ್ತ ಹಾಗು ಚಂದ್ರೋದಯ-ಚಂದ್ರಾಸ್ತ ವೀಕ್ಷಿಸಬಹುದಾದ ರಾಜ್ಯದ ಏಕೈಕ ತಾಣವೆಂಬ ಹೆಗ್ಗಳಿಕೆ ಪಡೆದಿದೆ. ಬೈಂದೂರು ಕ್ಷೇತ್ರದ ಹೊಸಂಗಡಿಯಲ್ಲಿ ರಾಜ್ಯದ ಮೊಟ್ಟಮೊದಲ ಭೂಗತ ಜಲವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಸೌಪರ್ಣಿಕಾ ನದಿಯಂತೆಯೆ ಬೈಂದೂರು ಕ್ಷೇತ್ರದ ಜೀವನದಿಯಾದ ವಾರಾಹಿ ನಾಡಿಗೆ ಬೆಳಕು (230 ಮೆಗಾ ವ್ಯಾಟ್) ನೀಡುತ್ತಿದೆ.
ಬೈಂದೂರಿನದು ಅಪ್ಪಟ ಕುಂದ ಕನ್ನಡ ಸಂಸ್ಕೃತಿ; ನಾಗಾರಾಧನೆ, ಪಾಣಾರಾಟ, ದೈವಾರಾಧನೆ, ಯಕ್ಷಗಾನ ಸಂಪ್ರದಾಯವಿದೆ. ದೈನಂದಿನ ಮಾತು-ಕತೆ, ವ್ಯಾಪಾರ-ವಹಿವಾಟು ಕುಂದಪ್ರ ಕನ್ನಡದಲ್ಲಿ ನಡೆಯುತ್ತದೆ. ಕೊಂಕಣಿ, ಬ್ಯಾರಿ, ಉರ್ದು, ಮರಾಠಿ, ಕೊರಗ ಸಮುದಾಯ ಭಾಷೆ ಮಾತಾಡುವ ಜನರು ಇಲ್ಲಿದ್ದಾರೆ. ಮೀನುಗಾರಿಕೆ ಮತ್ತು ಕೃಷಿ ಮೇಲೆ ಬೈಂದೂರಿನ ಬದುಕು ಅವಲಂಬಿಸಿದೆ. ತೆಂಗು, ಭತ್ತ ಬೆಳೆಯುವ ಬೈಂದೂರಲ್ಲಿ ಗೋಡಂಬಿ ತೋಟಗಳಿವೆ. ಹೆಂಚಿನ ಕಾರ್ಖಾನೆಗಳು, ಗೋಡಂಬಿ ಸಂಸ್ಕರಣಾ ಘಟಕಗಳು ಮತ್ತು ಉಪ್ಪುಂದದಲ್ಲಿರುವ ಕೈಗಾರಿಕೆ ಒಂದಿಷ್ಟು ಉದ್ಯೋಗ ನೀಡಿದೆಯಾದರೂ ಬಹುತೇಕ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ವಲಸೆ ಮಾರ್ಗ ಕಂಡುಕೊಳ್ಳಬೇಕಾದ ಸ್ಥಿತಿಯಿದೆ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೀನು, ತೆಂಗು, ಗೋಡಂಬಿ ಮತ್ತು ಹೊಟೇಲ್ ಉದ್ಯಮ ಬೈಂದೂರಿನ ಆರ್ಥಿಕತೆ ನಿಭಾಯಿಸುತ್ತಿದೆ. ಬೈಂದೂರಿನ ಹಳ್ಳಿಹಳ್ಳಿಗಳ ಅನೇಕ ಮಂದಿ ಮುಂಬೈ, ಬೆಂಗಳೂರು, ಹೈದರಾಬಾದ್ ಮುಂತಾದ ದೊಡ್ಡ ನಗರ ಮತ್ತು ರಾಜ್ಯದ ವಿವಿಧೆಡೆ ಹೋಟೆಲ್ಲು ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದ ಅನೇಕ ದುರ್ಗಮ ಹಳ್ಳಿಗಳಿರುವ ಬೈಂದೂರಲ್ಲಿ ಊಳಿಗಮಾನ್ಯದ ಶೋಷಣೆ, ದರ್ಪ-ದೌಲತ್ತು, ಮಡಿ-ಮೈಲಿಗೆ, ಮೇಲು-ಕೀಳು ಆಚರಣೆ ಕಂಡೂಕಾಣದಂತೆ ನಡೆಯುತ್ತಿದೆ. ಕಾಡಂಚಿನಲ್ಲಿರುವ ಬುಡಕಟ್ಟು ಮರಾಠಿ, ಕುಡುಬಿ ಜನಾಂಗದ ಗೋಳು ಹೇಳತೀರದಾಗಿದೆ. ಆದಿವಾಸಿ ಕೊರಗ ಜನಾಂಗ ಬದುಕುವ ಅವಕಾಶದಿಂದ ವಂಚಿತವಾಗಿ ನಶಿಸುತ್ತಿದೆ. ಪ್ರವಾಸೋದ್ಯಮ, ಮತ್ಸ್ಯೋದ್ಯಮ, ತೆಂಗು ಆಧಾರಿತ ಕೈಗಾರಿಕೆಯಿಂದ ನಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಅನುಕೂಲ ಕಲ್ಪಿಸುವ ಅವಕಾಶ ಬೈಂದೂರಿನಲ್ಲಿರುವಷ್ಟು ಕರಾವಳಿಯಲ್ಲಿ ಮತ್ತೆಲ್ಲಿಯೂ ಇಲ್ಲ; ಹೀಗಿದ್ದರೂ ಅಧಿಕಾರಸ್ಥರು ಉದಾಸೀನದಲ್ಲಿದ್ದಾರೆಂದು ಜನರು ಬೇಸರದಿಂದ ಹೇಳುತ್ತಾರೆ!
ಚುನಾವಣಾ ಕದನಗಳ ಕತೆ
ಬ್ರಾಹ್ಮಣ ಅಥವಾ ಬಂಟರಿಗೆ ಕಾಯ್ದಿಟ್ಟ ಕ್ಷೇತ್ರದಂತಿದ್ದ ಬೈಂದೂರು 1994ರ ಚುನಾವಣೆಯಿಂದ ಧನಾಧಾರಿತ ಆಖಾಡ ಎಂಬಂತಾಗಿದೆ. ಚುನಾವಣಾ ಸಂದರ್ಭದಲ್ಲಿ ಕಳ್ಳ ಕಾಸು ಯಥೇಚ್ಛವಾಗಿ ಹರಿಯುವ ಬೈಂದೂರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಕೊಪ್ಪರಿಗೆ ಹಣವಿರುವವರನ್ನೇ ಹುಡುಕಿ ಅಳೆದು, ತೂಗಿ ಟಿಕೆಟ್ ಕೊಡುತ್ತಾರೆ. ಸಾಮಾಜಿಕವಾಗಿ ಬಲಾಢ್ಯರಾಗಿರುವ ಬಂಟರು ಹಾಗು ಹಿಂದುಳಿದಿರುವ ಬಿಲ್ಲವರು (ಈಡಿಗ) ಸಮ ಬಲದಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಪರಿಧಿ 2008ರಲ್ಲಾದ ಕ್ಷೇತ್ರ ಪುನರ್ ವಿಂಗಡಣೆ ನಂತರ ಬದಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿದ್ದ ಕೆಲವು ಪ್ರದೇಶ ಬೈಂದೂರಿಗೆ ಸೇರಿಸಲಾಗಿದೆ. ಕಳೆದ ಇಲೆಕ್ಷನ್ ಸಂದರ್ಭದಲ್ಲಿ ಒಟ್ಟು 2,22,427 ಮತದಾರರಿದ್ದ ಬೈಂದೂರಲ್ಲಿ 55 ಸಾವಿರದಷ್ಟು ಬಿಲ್ಲವ, 50 ಸಾವಿರ ಬಂಟ, 35 ಸಾವಿರ ಮುಸ್ಲಿಮ್ ಮತ್ತು ಕ್ರಿಶ್ಚಿಯನ್, ಮೀನು ತಿನ್ನುವ ಕೊಂಕಣಿ ಬ್ರಾಹ್ಮಣ ಹಾಗು ಮೀನು ತಿನ್ನದವರೆನ್ನಲಾದ ವೈಷ್ಣವ-ಶೈವ ಬ್ರಾಹ್ಮಣರು ಸುಮಾರು 16 ಸಾವಿರ, ಮೀನುಗಾರರು 15 ಸಾವಿರ, ದೇವಾಡಿಗರು 10 ಸಾವಿರ, ಶೇರೆಗಾರರು 7-8 ಸಾವಿರ, ಸಣ್ಣ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮತದಾರರಿದ್ದಾರೆ.

1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಡ್ತರೆ ಮಂಜಯ್ಯ ಶೆಟ್ಟಿ ಅವಿರೋಧವಾಗಿ ಶಾಸಕರಾಗಿದ್ದರು. ಬಂಟ ಸಮುದಾಯದ ಅದೆ ಮಂಜಯ್ಯ ಶೆಟ್ಟರು 1962ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಸುಬ್ಬರಾವ್ ಹಲ್ಸನಾಡ್‌ರನ್ನು 1,839 ಮತಗಳಿಂದ ಸೋಲಿಸಿ ಚುನಾಯಿತರಾಗಿದ್ದರು. ಒಂದೆ ಜಾತಿಯ (ಬ್ರಾಹ್ಮಣ) ಸುಬ್ಬರಾವ್ ಹಲ್ಸನಾಡ್ (ಪಿಎಸ್‌ಪಿ) ಮತ್ತು ಅಮಾಸೆಬೈಲ್ ಗೋಪಲಕೃಷ್ಣ ಕೊಡ್ಗಿ (ಕಾಂಗ್ರೆಸ್) 1967ರಲ್ಲಿ ಮುಖಾಮುಖಿಯಾಗಿದ್ದರು. ಈ ಚುನಾವಣೆಯಲ್ಲಿ ಪಿಎಸ್‌ಪಿಯ ಹಲ್ಸನಾಡ್ ಆಯ್ಕೆಯಾಗಿದ್ದರು. 1972ರಲ್ಲಿ 9,496 ಮತ ಗಳಿಸಿದ ಎ.ಜಿ.ಕೊಡ್ಗಿ ಶಾಸಕರಾದರು. 1978ರಲ್ಲಿ ಜನತಾ ಪಕ್ಷದ ಎಲ್ವಿನ್ ಪಿಂಟೋರನ್ನು ಸೋಲಿಸಿದ ಕೊಡ್ಗಿ ಎರಡನೇ ಬಾರಿ ಶಾಸನಸಭೆಗೆ ಹೋದರು. 1983ರಲ್ಲಿ ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಶಾಸಕರಾಗಿದ್ದರು. ಆ ಚುನಾವಣೆ ಸಂದರ್ಭದಲ್ಲಿ ಬೈಂದೂರಿನ ಬಿಲ್ಲವರ ಮೇಲೆ ಪ್ರಭಾವ ಹೊಂದಿದ್ದ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಜನತಾರಂಗದ ಸ್ಥಾಪಕರಲ್ಲೊಬ್ಬರಾಗಿದ್ದರು. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಜಿ.ಎಸ್.ಆಚಾರ್‌ರನ್ನು ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಕೇವಲ 24 ಮತಗಳಿಂದ ಸೋಲಿಸಿದ್ದರು. ಇದಕ್ಕೆ ಕಾರಣ ಬಂಗಾರಪ್ಪನವರ ಪ್ರಭಾವ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಕುರುಡು ಕಾಂಚಾಣ ಕುಣಿತ!
1985ರಲ್ಲಿ ಜಿ.ಎಸ್.ಆಚಾರ್ ಜನತಾ ಪಕ್ಷದ ಮಾಣಿ ಗೋಪಾಲ್‌ರ ಎದುರು ಕೇವಲ 314 ಮತದ ಅಂತರದಿಂದ ಗೆದ್ದರು. ಪ್ರಬಲ ಬಿಲ್ಲವ ಸಮುದಾಯದ ಸರಳ-ಸಜ್ಜನ ಮಾಣಿ ಗೋಪಾಲರಿಗೆ 1989ರಲ್ಲೂ ಅದೃಷ್ಟ ಕೈಕೊಟ್ಟಿತ್ತು. ಜನತಾ ದಳದ ಅಭ್ಯರ್ಥಿಯಾಗಿದ್ದ ಮಾಣಿ ಗೋಪಾಲ್‌ರನ್ನು ಕಾಂಗ್ರೆಸ್‌ನ ಆಚಾರ್ ಬರೀ 509 ಮತದಿಂದ ಸೋಲಿಸಿದ್ದರು. 1994ರ ಚುನಾವಣೆ ಹೊತ್ತಲ್ಲಿ ಬೈಂದೂರಲ್ಲಿ ಕುರುಡು ಕಾಂಚಾಣದ ಕುಣಿತ ಶುರುವಾಗಿತ್ತು. ಬೆಂಗಳೂರಲ್ಲಿ ಮಲ್ಟಿಮಿನ್ ಹೆಸರಿನ ರಸಗೊಬ್ಬರ ಮತ್ತು ಕ್ರಿಮಿನಾಶಕ ತಯಾರಿಕಾ ಕಂಪನಿ ನಡೆಸುತ್ತಿದ್ದ ಕುಂದಾಪುರ ಮೂಲದ ಐ.ಎಂ.ಜಯರಾಮ ಶೆಟ್ಟಿ ಹಣದ ಚೀಲದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಪ್ರತ್ಯಕ್ಷರಾಗಿದ್ದರೆಂದು ಹಳಬರು ನೆನಪು ಮಾಡುತ್ತಾರೆ.
ಅಂದಿನ ಮಂಗಳೂರು ಸಂಸದ ಧನಂಜಯ್‌ಕುಮಾರ್‌ರ ಆಪ್ತ ಮಿತ್ರರಾಗಿದ್ದ ಐಎಂಜೆ ತಮ್ಮ ಹಣ ಬಲದಿಂದ ಬಿಜೆಪಿಯ ವಿ.ಎಸ್.ಆಚಾರ್ಯ, ಎ.ಜಿ.ಕೊಡ್ಗಿ, ಕಲ್ಲಡ್ಕ ಭಟ್‌ರಂಥ ಅತಿರಥ ಮಹಾರಥರ ಸಖ್ಯ ಬೆಳೆಸಿಕೊಂಡಿದ್ದರೆಂದು ಹಳೆಯ ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ಜೈನ ವಂಶದ ಧನಂಜಯ್‌ಕುಮಾರ್ ಮೂಲಕ ಮಧ್ಯಪ್ರದೇಶಕ್ಕೆ ಕಳಪೆ ಗೊಬ್ಬರ ಸರಬರಾಜು ಮಾಡಿ ಅಪಾರ ಹಣ ಐಎಂಜೆ ಗಳಿಸಿದ್ದರೆಂಬ ಆರೋಪವಿತ್ತು. ಅಂದು ಮಧ್ಯಪ್ರದೇಶದ ಸಿಎಂ ಆಗಿದ್ದ ಸುಂದರ್‌ಲಾಲ್ ಪಟ್ವಾ ಜೈನರಾಗಿದ್ದರು. ಧನಂಜಯ್‌ಕುಮಾರ್ ಮತ್ತು ಪಟ್ವಾ ನಡುವೆ ಆಪ್ತ ನಂಟಿತ್ತೆನ್ನಲಾಗಿದೆ.
1994ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ 29,841 ಮತ ಪಡೆದ ಬಿಜೆಪಿ ಹುರಿಯಾಳು ಐಎಂಜೆ ಕಾಂಗ್ರೆಸ್‌ನ ಮಾಣಿಗೋಪಾಲರನ್ನು (18,541) ದೊಡ್ಡ ಅಂತರದಲ್ಲಿ ಸೋಲಿಸಿದರು. ಐಎಂಜೆರ ಗೊಬ್ಬರದ ಕಾಸಿನ ಆರ್ಭಟದಲ್ಲಿ ಸಂಪನ್ಮೂಲ ಕೊರತೆಯ ಮಾಣಿ ಗೋಪಾಲ್ ಹೈರಾಣಾಗಿ ಹೋದರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಐಎಂಜೆ ಶಾಸಕರಾದ ಎರಡೆ ವರ್ಷದಲ್ಲಿ (1996) ಎದುರಾಗಿದ್ದ ಪಾರ್ಲಿಮೆಂಟ್ ಚುನಾವಣೆಯಲ್ಲಿ, ಅವರನ್ನು ಬಿಜೆಪಿ ಕ್ಯಾಂಡಿಡೇಟ್ ಮಾಡಿತ್ತು. ದೀರ್ಘ ಕಾಲ ಉಡುಪಿಯ ಸಂಸದರಾಗಿ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಮತ್ತು ಕಾಂಗ್ರೆಸ್‌ನ ಅಧಿಕಾರದ ಆಯಕಟ್ಟಿನ ಸ್ಥಾನದಲ್ಲಿದ್ದ ಆಸ್ಕರ್ ಫರ್ನಾಂಡಿಸ್‌ರನ್ನು ಐಎಂಜೆ ಸೋಲಿಸಿದರು. ಆ ವೇಳೆ ಐಎಂಜೆ ಸರಬರಾಜು ಮಾಡುವ ಗೊಬ್ಬರ ಮತ್ತು ಕ್ರಿಮಿನಾಶಕ ಕಳಪೆಯೆಂಬ ಆರೋಪ ಜೋರಾಗಿ ಕೇಳಿಬಂದಿತ್ತು. ಐಎಂಜೆ ಕಂಪನಿಯ ಕ್ರಿಮಿನಾಶಕ ಸಿಂಪಡಿಸಿ ಬೆಳೆನಾಶವಾದ ಕಲ್ಯಾಣ ಕರ್ನಾಟಕದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಅದೆ ಹೊತ್ತಿಗೆ ಕರಾವಳಿಯ ಸಂಘ ಶ್ರೇಷ್ಟರು ಮತ್ತು ಐಎಂಜೆ ನಡುವಿನ ಸಂಬಂಧ ಹಳಸಲಾರಂಭಿಸಿತ್ತು. ಒಂದು ಸುದ್ದಿಯ ಪ್ರಕಾರ ಐಎಂಜೆ ಸಂಘ ಸರದಾರರಿಗೆ ಕಾಸು ಕೊಟ್ಟುಕೊಟ್ಟು ಸುಸ್ತಾಗಿದ್ದರಂತೆ. 1999ರ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಐಎಂಜೆಗೆ ಬಿಜೆಪಿಗರೆ ಕೈಕೊಟ್ಟರೆಂಬ ಮಾತು ಈಗಲೂ ಕೇಳಿಬರುತ್ತದೆ. ಕಾಂಗ್ರೆಸ್‌ನ ವಿನಯ್‌ಕುಮಾರ್ ಸೊರಕೆ ಎದುರು ಸೋತ ಐಎಂಜೆ ಹೆಚ್ಚು ದಿನ ಬಿಜೆಪಿಯಲ್ಲಿ ಏಗಲಾಗಲಿಲ್ಲ. ರಸಭರಿತ ಕಬ್ಬಾಗಿ ಬಿಜೆಪಿ ಸೇರಿದ್ದ ಐಎಂಜೆ ಜಲ್ಲೆಯಾಗಿ ಹೊರಬಂದಿದ್ದರೆಂದು ಕರಾವಳಿ ರಾಜಕೀಯ ಹತ್ತಿರದಿಂದ ಕಂಡ ಹಿರಿಯರು ಹೇಳುತ್ತಾರೆ.
ಬೈಂದೂರು ಶಾಸಕರಾಗಿದ್ದ ಐಎಂಜೆ ಪಾರ್ಲಿಮೆಂಟಿಗೆ ಹೋಗಿದ್ದರಿಂದ 1998ರಲ್ಲಿ ಉಪ ಚುನಾವಣೆ ನಡೆಯಿತು. ರಾಮಕೃಷ್ಣ ಹೆಗಡೆ ಅನುಯಾಯಿಯಾಗಿದ್ದ ಮಾಜಿ ಶಾಸಕ ಅಪ್ಪಣ್ಣ ಹಗ್ಡೆ ಲೋಕಶಕ್ತಿ-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೆ, ಬೆಂಗಳೂರಲ್ಲಿ ಹೆಸರಾಂತ ಹೊಟೇಲಿಯರ್ ಆಗಿದ್ದ ಗೋಪಾಲ ಪೂಜಾರಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು. ಈ ಸಮರದಲ್ಲಿ ಗೋಪಾಲ ಪೂಜಾರಿ ಗೆದ್ದರು. ಅಲ್ಲಿಗೆ ಬೈಂದೂರಿನ ಬಹುಸಂಖ್ಯಾತ ಹಿಂದುಳಿದ ವರ್ಗದ ಬಿಲ್ಲವ ಸಮುದಾಯಕ್ಕೆ ಮೊದಲ ಬಾರಿ ಶಾಸಕ ಸ್ಥಾನ ಸಿಕ್ಕಂತಾಗಿತ್ತು.
1999 ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಮತ್ತು ಬೆಂಗಳೂರಲ್ಲಿ ಬಿಲ್ಡರ್ ಆಗಿದ್ದ ಬಿಜೆಪಿಯ ಲಕ್ಷ್ಮೀನಾರಾಯಣ ಮುಖಾಮುಖಿಯಾಗಿದ್ದರು. ಕಾಂಚಾಣ ಕಾಳಗದಲ್ಲಿ ಎರಡು ಬಾರಿಯೂ ಗೋಪಾಲ ಪೂಜಾರಿ ಗೆಲುವು ಕಂಡರು. ಆದರೆ 2008ರಲ್ಲಿ ಹಿಂದುತ್ವದ ಹವಾ, ಗೋಪಾಲ ಪೂಜಾರಿಗಿದ್ದ ಎಂಟಿ ಇನ್‌ಕಂಬೆನ್ಸ್ ಅಲೆ ಮತ್ತು ಸತತ ಸೋತಿದ್ದ ಲಕ್ಷ್ಮೀನಾರಾಯಣರ ಬಗೆಗಿದ್ದ ಸಿಂಪಥಿಯಿಂದ ಗೋಪಾಲ ಪೂಜಾರಿಗೆ ಗೆಲ್ಲಲಾಗಲಿಲ್ಲ. ತೀರ ಸಣ್ಣ ಶೇರುಗಾರ ಸಮುದಾಯದ ಲಕ್ಷ್ಮೀನಾರಾಯಣರ ಗೆಲುವಿಲ್ಲಿ ಕುರುಡು ಕಾಂಚಾಣದ ಮಹಿಮೆ ಅಡಗಿದೆಯೆಂಬ ಅಭಿಪ್ರಾಯವೂ ಇದೆ.
ಸಿಡಿಮಿಡಿ ಸ್ವಭಾವ ಮತ್ತು ವಯೋಸಹಜ ನಿಷ್ಕ್ರಿಯತೆಯಿಂದ ಲಕ್ಷ್ಮೀನಾರಾಯಣ ಬಹುಬೇಗ ಜನರ ಬೇಸರ ಮತ್ತು ಸಂಘ ಸರದಾರರ ತಿರಸ್ಕಾರಕ್ಕೆ ಈಡಾದರು. ಹೀಗಾಗಿ 2013ರಲ್ಲಿ ಬಿಜೆಪಿ ಟಿಕೆಟ್ ಲಕ್ಷ್ಮೀನಾರಾಯಣರಿಗೆ ಸಿಗಲಿಲ್ಲ. ಕಾಂಗ್ರೆಸ್ ಟಿಕೆಟ್‌ಗೆ ವಿಫಲ ಪ್ರಯತ್ನ ನಡೆಸಿ ಬಿಜೆಪಿ ಸೇರಿದ್ದ ಬಿ.ಎಂ.ಸುಕುಮಾರ ಶೆಟ್ಟಿ ಆ ಪಕ್ಷದ ಕ್ಯಾಂಡಿಡೇಟಾದರು. ಒರಟು ಸ್ವಭಾವ, ಫ್ಯೂಡಲ್ ಮನಸ್ಥಿತಿಯ ರಾಜಕಾರಣಿ ಎಂಬ ಆರೋಪ ಹೊತ್ತಿದ್ದ ಸುಕುಮಾರ್ ಶೆಟ್ಟಿ ಕಾಂಗ್ರೆಸ್‌ನ ಗೋಪಾಲ ಪೂಜಾರಿಗೆ 31,149 ಮತದಂತರದಿಂದ ಶರಣಾಗಬೇಕಾಯಿತು. 2018ರ ಚುನಾವಣಾ ಸಂದರ್ಭದಲ್ಲಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸತ್ತುಹೋಗಿದ್ದ ಹೊನ್ನಾವರದ ಪರೇಶ್ ಮೇಸ್ತ ಮತ್ತು ಕೊಲೆಗೀಡಾಗಿದ್ದ ಸುರತ್ಕಲ್‌ನ ದೀಪಕ್ ರಾವ್ ಪ್ರಕರಣದಿಂದಾದ ಹಿಂದು ಮತ ಧ್ರುವೀಕರಣವಾಗಿ ಸುಕುಮಾರ ಶೆಟ್ಟಿಗೆ ಶಾಸಕನಾಗುವ ಭಾಗ್ಯ ಬಂತೆಂಬುದು ಕ್ಷೇತ್ರದಲ್ಲಿರುವ ಸಾಮಾನ್ಯ ಅಭಿಪ್ರಾಯ!
ಕ್ಷೇತ್ರದ ಕಷ್ಟ-ಇಷ್ಟ
ಪ್ರಗತಿಶೀಲ ಕರಾವಳಿಯ ದೃಷ್ಠಿಬೊಟ್ಟಿನಂತಿರುವ ಬೈಂದೂರಿನ ನಾಡಿಮಿಡಿತವೆ ಇಲ್ಲಿಂದ ಶಾಸಕರಾದವರಿಗೆ ಅಥವಾಗುತ್ತಿಲ್ಲವೆಂದು ಕ್ಷೇತ್ರದ ಮಂದಿ ನೋವು-ವಿಷಾದದಿಂದ ಹೇಳುತ್ತಾರೆ. ತೀರಾ ಹಿಂದುಳಿದಿರುವ ಬೈಂದೂರಲ್ಲಿ ಸರಕಾರಿ ಸ್ಥಾವರಗಳು, ರಸ್ತೆ, ಕಾಲುಸಂಕದಂತ ಮಾಮೂಲಿ ಬಜೆಟ್ ಕಾಮಗಾರಿಗಳಾಗಿವೆಯೆ ಹೊರತು ದುಡಿಯುವ ಕೈಗಳು ಇಲ್ಲಿಯೆ ನೆಲೆ ನಿಂತು ಬದುಕಲು ಅನುಕೂಲ ಕಲ್ಪಿಸುವ ಯೋಜನೆಗಳನ್ನು ಶಾಕರಾದವರೊಬ್ಬರೂ ತಂದಿಲ್ಲವೆಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಮಾಜಿ ಶಾಸಕ ಗೋಪಾಲ ಪೂಜಾರಿ ಕಾಲಕೀರ್ದಿಯಲ್ಲಿ ಒಂದಿಷ್ಟು ಸಿವಿಲ್ ಕಾಮಗಾರಿಯ ಬದಲಾವಣೆಯಾಗಿದೆ; ಇದೇ ರೀತಿಯ ಕಾಮಗಾರಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಮಾಡಿಸುತ್ತಿದ್ದಾರೆ. ಇದೆಲ್ಲ ರಾಜಕಾರಣಿಗಳು-ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಪರ್ಸೆಂಟೇಜ್ ಸಿಗುವಂತೆ ಮಾಡುವ ಮೂಲಸೌಕರ್ಯ ಒದಗಿಸುವ ಕೆಲಸಗಳೆ ಹೊರತು ಇಡೀ ಕ್ಷೇತ್ರದ ಆರ್ಥಿಕ, ಸಾಮಾಜಿಕ ಚಹರೆ ಬದಲಿಸುವ ಪ್ರಗತಿಯ ಕೆಲಸಕಾರ್ಯವಲ್ಲವೆಂದು ಮಾತು ಕೇಳಿಬರುತ್ತಿದೆ. ಮಾಜಿ ಶಾಸಕ ಮತ್ತು ಹಾಲಿ ಶಾಸಕ ಕೋಟ್ಯಂತರ ರುಪಾಯಿ ಅನುದಾನ ತಂದಿದ್ದೇವೆಂದು ಹೇಳುತ್ತಿದ್ದರೂ ಕನಿಷ್ಠ ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಕುಗ್ರಾಮಗಳು ಬೈಂದೂರು ಕ್ಷೇತ್ರದಲ್ಲಿರುವುದು ವಿಪರ್ಯಾಸ!

ರೈತಾಪಿ ವರ್ಗಕ್ಕೆ ಅತಿ ಅವಶ್ಯವಿರುವ ಸೌಪರ್ಣಿಕಾ ಏತ ನೀರಾವರಿ ಯೋಜನೆ ಕೋಟಿಕೋಟಿ ನುಂಗಿದರೂ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಬೈಂದೂರು ಭಾಗದ ರೈತರು ಕಬ್ಬು ಬೆಳೆದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಪೂರೈಸುವಂತಾಗಲೆಂದು ಸೌಪರ್ಣಿಕಾ ನೀರಾವರಿ ಯೋಜನೆ ಶುರುಮಾಡಲಾಗಿತ್ತು. ಆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಂದ್ ಆಗಿ ಯಂತ್ರಗಳು ತುಕ್ಕು ಹಿಡಿದು ಗುಜರಿಗೆ ಮಾರುವ ಪರಿಸ್ಥಿತಿ ಬಂದರೂ ಈ ನೀರಾವರಿ ಯೋಜನೆ ಮುಗಿಯುತ್ತಿಲ್ಲವೆಂದು ಜನರು ಜೋಕ್ ಮಾಡುತ್ತಾರೆ. ಕಿಂಡಿ ಆಣೆಕಟ್ಟುಗಳು ಉಪ್ಪು ನೀರಿಂದ ವಿಫಲವಾಗಿ ರೈತರಿಗೆ ಪ್ರಯೊಜನವಾಗದಿರುವ ಉದಾಹರಣೆಯೂ ಇದೆ.
ಮೀನುಗಾರಿಕೆಯೆ ಪ್ರಮುಖ ವಹಿವಾಟಾಗಿರುವ ಬೈಂದೂರಲ್ಲಿ ಜೀವನ ನಿರ್ವಹಣೆಗೆ ಪೂರಕವಾದ ಮತ್ಸ್ಯೋದ್ಯಮ ಬೆಳೆಸುವ ಯೋಜನೆ ಆಳುವವರ ತಲೆಗೇಕೆ ಹೊಳೆಯುತ್ತಿಲ್ಲ ಎಂಬುದು ಬೈಂದೂರಲ್ಲಿ ಬಿಡಿಸದ ಒಗಟಾಗಿದೆ. ಮೀನಿಗೆ ಮಂಜುಗಡ್ಡೆ ಹಾಕಿ ಮಾರುವುದು ಬಿಟ್ಟರೆ ಮೀನುಗಾರರಿಗೆ ಅವಶ್ಯವಾಗಿರುವ ಒಂದು ಶೈತ್ಯಾಗಾರವೂ ಇಲ್ಲವೆಂದು ಬೆಸ್ತರು ಬೇಸರಿಸುತ್ತಾರೆ. ನಾಲ್ಕೈದು ಮೀನುಗಾರಿಕಾ ಬೋಟು, ತಂಗುದಾಣ ನಿರ್ಮಾಣ ಕೆಲಸ ಹದಿನೈದು ವರ್ಷದಿಂದ ತೆವಳುತ್ತ ಸಾಗಿದೆ. ಮೀನುಗಾರಿಕಾ ರಸ್ತೆ ಸರಿಯಿಲ್ಲದೆ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ. ಬೈಂದೂರಿನ ಪ್ರಮುಖ ಕೃಷಿ ಉತ್ಪನ್ನವಾದ ತೆಂಗು ಆಧಾರಿತ ಕೈಗಾರಿಕೆ ತರಲು ಅಧಿಕಾರಸ್ಥರು ಪ್ರಯತ್ನ ಮಾಡಿದ್ದರೆ ಹಲವು ಕುಟುಂಬಗಳು ಆರ್ಥಿಕ ಸ್ವಾವಲಂಬನೆಯಿಂದ ಬದುಕುವಂತಾಗುತಿತ್ತು ಎಂದು ಕೃಷಿಕರು ಹೇಳುತ್ತಾರೆ. ಕಸಬರಿಗೆಯಿಂದ ಕಾಲೊರೆಸುವ ಮ್ಯಾಟ್ ತನಕ, ಅಲ್ಲದೆ ಆರೋಗ್ಯಕರ ನೀರಾದಿಂದ ಕಿಕ್ ಕೊಡುವ ಶೇಂದಿವರಗೆ 25-30 ನಮೂನೆಯ ಉತ್ಪನ್ನ ತೆಂಗಿನಿಂದ ತಯಾರಿಸಬಹುದಾಗಿದೆ. ಇದೆಲ್ಲ ಇಲ್ಲಿಯ ಶಾಸಕ, ಸಂಸದರಿಗ ಅರ್ಥವೆ ಆಗುತ್ತಿಲ್ಲವೇಕೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನೈಸರ್ಗಿಕ ರಮ್ಯ ಪ್ರದೇಶವಾದ ಬೈಂದೂರಿನಲ್ಲಿರುವ ಹಲವು ಪ್ರೇಕ್ಷಣೀಯ ತಾಣಗಳಲ್ಲಿ ಕೆಲವೇ ಕೆಲವನ್ನು ಅಭಿವೃದ್ಧಿಪಡಿಸಿದರೂ ಸಾಕು, ಪ್ರವಾಸೋದ್ಯಮ ಸೃಷ್ಟಿಯಾಗಿ ಬೈಂದೂರಿನ ಭಾಗ್ಯದ ಬಾಗಿಲೆ ತೆರೆದುಕೊಳ್ಳುತ್ತದೆಂಬ ಮಾತಿದೆ. ಬೇಲೂರು-ಹಳೆಬೀಡು ಶಿಲಾಕೆತ್ತನೆಯ ವೈಭವ ಮೀರಿಸುವ ಚಿತ್ತಾಕರ್ಷಕ ಶಿಲಾ ಕಲೆಯ ಸೇನೇಶ್ವರ ದೇವಸ್ಥಾನ, ರಾಷ್ಟ್ರೀಯ ಹದ್ದಾರಿ 66ರ ಆಚೀಚೆ ಅರಬ್ಬೀ ಸಮುದ್ರ ಮತ್ತು ಸೌಪರ್ಣಿಕಾ-ಚಕ್ರಾ ನದಿಯಿರುವ ಮರವಂತೆ ಬೀಚ್, ಸೋಮೇಶ್ವರ ಬೀಚ್, ಕೋಸಳ್ಳಿ ಜಲಪಾತ, ಒತ್ತಿನೆಣೆಯ ಕ್ಷಿತಿಜ ನೇಸರ ಧಾಮ, ಆನೆ ಝರಿ ಚಿಟ್ಟೆ ಧಾಮ, ಸೆಲಿಬ್ರಿಟಿಗಳು ಭಕ್ತರಾಗಿರುವ ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರವಾಸೋದ್ಯಮ ಜಾಲ ನಿರ್ಮಿಸಿದರೆ ಅಪಾರ ಉದ್ಯೋಗ ಸೃಷ್ಟಿಯಾಗುತ್ತದೆಂಬ ನಿರೀಕ್ಷೆಯಲ್ಲಿ ಯುವಕರಿದ್ದಾರೆ.
ವಿನಯ್‌ಕುಮಾರ್ ಸೊರಕೆ ಮಂತ್ರಿಯಾಗಿದ್ದಾಗ ತ್ರಾಸಿಯಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ಹೇಳಿದ್ದರು. ಅದು ಕಾರ್ಯಗತ ಆಗಲಿಲ್ಲವೆಂಬ ಬೇಸರ ಕೇತ್ರದಲ್ಲಿದೆ. ಬೈಂದೂರಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಯೋಜನೆಗೆ ಅಧಿಕಾರಸ್ಥರ ಇಚ್ಛಾಶಕ್ತಿಯ ಕೊರತೆಯಿಂದ ವೇಗ ಬರುತ್ತಿಲ್ಲವೆನ್ನಲಾಗಿದೆ.
ಬದಲಾಗಬಹುದೆ ಬಿಜೆಪಿ ಅಭ್ಯರ್ಥಿ?!
ಶಾಸಕ ಸುಕುಮಾರ ಶೆಟ್ಟಿಯೆಂದರೆ ಬಿಜೆಪಿಯ ಒಂದು ವರ್ಗಕ್ಕೆ ಆಗುವುದಿಲ್ಲ. ಕೈ-ಬಾಯಿ ಮಲಿನ ಮಾಡಿಕೊಂಡಿರುವ ಶಾಸಕ ಶೆಟ್ಟಿ ಗುತ್ತಿಗೆದಾರರ ಲಾಬಿ ಬೆಳೆಸಿ ಕಳಪೆಕಾಮಗಾರಿಗೆ ಕಾರಣರಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಊಳಿಗಮಾನ್ಯದ ದರ್ಪದ ಶೆಟ್ಟಿ ಯಾರಿಗೂ ಗೌರವ ಕೊಡುವುದಿಲ್ಲ; ತನಗೆಲ್ಲರೂ ಸಲಾಮು ಹೊಡೆಯಬೇಕೆಂದು ಬಯಸುತ್ತಾರೆಂಬ ಆಕ್ಷೇಪ ಕ್ಷೇತ್ರದಲ್ಲಿದೆ. ಅಧಿಕಾರಶಾಹಿಯನ್ನು ಜನಪರವಾಗಿ ಪಳಗಿಸಲಾಗದ ಶೆಟ್ಟಿಗೆ ಬೈಂದೂರಿನ ಬೇಕುಬೇಡಗಳ ಪರಿಜ್ಞಾನವೇ ಇಲ್ಲವೆನ್ನಲಾಗುತ್ತಿದೆ. ಶೆಟ್ಟಿಯ ಋಣಾತ್ಮಕ ಅಂಶಗಳಿಂದಾಗಿ ಜನರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಲೆಕ್ಕಹಾಕಿರುವ ಸಂಘ ಸೂತ್ರಧಾರರು 2023ರ ಚುನಾವಣೆಗೆ ಹೊಸಮುಖ ಹುಡುಕುತ್ತಿದ್ದಾರೆಂಬ ಸುದ್ದಿಹಬ್ಬಿದೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರರ ಕೃಪಾಕಟಾಕ್ಷದಲ್ಲಿರುವ ಶೆಟ್ಟರಿಗೆ ಬಿಜೆಪಿ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭವಲ್ಲವೆಂಬ ಮಾತೂ ಇದೆ.
ಸುರತ್ಕಲ್ (ಮಂಗಳೂರು ಉತ್ತರ) ಶಾಸಕ ಡಾ.ಭರತ್ ಶೆಟ್ಟಿ, ಗೋವಿಂದ ಪೂಜಾರಿ ಮತ್ತು ಕಾಪುದ ಗುರ್ಮೆ ಸುರೇಶ ಶೆಟ್ಟಿ ಹೆಸರು ಸಂಘಪರಿವಾರದ ಪರಿಶೀಲನೆಯಲ್ಲಿದೆಯಂತೆ. ಬಿಜೆಪಿಯಲ್ಲಿನ ಗುಜರಾತಿ ಲಾಬಿಯ ಸಖ್ಯದವರೆನ್ನಲಾದ ಬಂಟ ಸಮುದಾಯದ ಡಾ.ಭರತ್ ಶೆಟ್ಟಿ ಮೂಲ ಬೈಂದೂರು. ಕಾಪುದಲ್ಲಿ ಟಿಕೆಟ್ ಕೇಳುತ್ತಿರುವ ಬಂಟ ಜಾತಿಯ ಗುರ್ಮೆ ಸುರೇಶ ಶೆಟ್ಟಿ ಬಳ್ಳಾರಿ ಗಣಿಗಾರಿಕೆಯಲ್ಲಿ ಅಪಾರ ಹಣ ಸಂಪಾದಿಸಿರುವುದರಿಂದ ಬೈಂದೂರಿನ ’ಹಣಾ’ಹಣಿಗೆ ಸಮರ್ಥ ’ಹೋರಾಟಗಾರ’ನೆಂದು ಸಂಘ ಸೂತ್ರಧಾರರ ಸಮೀಕರಣ ಎನ್ನಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆದಾರ ಗೋವಿಂದ ಪೂಜಾರಿ ಬೈಂದೂರಲ್ಲಿ ಹಣದ ಹೊಳೆ ಹರಿಸುತ್ತ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ದಾನ, ಬಡವರಿಗೆ ಮನೆ ನಿರ್ಮಿಸಿಕೊಡುವುದು, ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಕರೆಸಿ ಧಾರ್ಮಿಕ ಕಾರ್ಯಕ್ರಮ ನಡೆಸುವುದೆಲ್ಲವನ್ನೂ ಗೋವಿಂದ ಪೂಜಾರಿ ಮಾಡುತ್ತಿದ್ದಾರೆ.
ಜನರ ಸಮಸ್ಯೆಗಳಿಗೆ ಸ್ಪಂದಿಸದ ಒರಟು ಸ್ವಭಾವದ ಶಾಸಕ ಸುಕುಮಾರ ಶೆಟ್ಟಿಗಿಂತ ಸದಾ ಜನರ ನಡುವೆಯೆ ಇರುವ ಮಾಜಿ ಶಾಸಕ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಬೆಟರ್ ಎಂಬ ಭಾವನೆ ಕ್ಷೇತ್ರದಲ್ಲಿದೆ. ಸೋತರು ಕ್ಷೇತ್ರದ ಸಂಪರ್ಕ ಕಾಯ್ದುಕೊಂಡಿರುವ ಸುಖಸಾಗರ್ ಗ್ರೂಪ್ ಆಪ್ ಹೊಟೇಲ್ಸ್ ಮಾಲಿಕ ಗೋಪಾಲ ಪೂಜಾರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ ಎನ್ನಲಾಗುತ್ತಿದೆಯಾದರೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತ ಬಳಗದ ಹಣವಂತ ಗುತ್ತಿಗೆದಾರ ಯು.ಬಿ.ಶೆಟ್ಟಿ ಹೆಸರು ಇತ್ತೀಚೆಗೆ ಕೇಳಿಬರಲಾರಂಭಿಸಿದೆ. ಬೆಂಗಳೂರಲ್ಲಿ ಕಾಂಗ್ರೆಸ್‌ನ ಯಾವ ಕಾರ್ಯಕ್ರಮವಾದರೂ ಊಟತಿಂಡಿ ಬರುವುದು ಗೋಪಾಲ ಪೂಜಾರಿ ಹೊಟೇಲ್‌ನಿಂದ ಆಗಿರುವುದರಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪುವುದಿಲ್ಲ ಎಂಬ ಜೋಕ್ ಬೈಂದೂರಲ್ಲಿದೆ.
ಬಿಜೆಪಿ ಬಂಟ ಸಮುದಾಯದ ಹಣವಂತನಿಗೆ ಆಖಾಡಕ್ಕಿಳಿಸುವ ಅನಿವಾರ್ಯತೆಯಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಲ್ಲವ ಜಾತಿಯ ಗೋಪಾಲ ಪೂಜಾರಿ ಆಗುವ ಸಾಧ್ಯತೆಯೇ ಜಾಸ್ತಿ. ಹಾಗಾಗಿ ಪ್ರಬಲ ಬಂಟ-ಬಿಲ್ಲವ ಕಲಿಗಳ ’ಹಣಾ’ಹಣಿಗೆ ಬೈಂದೂರು ಯುದ್ಧಭೂಮಿ ಹದಗೊಳ್ಳುತ್ತಿದೆ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಾಪುರ: ಪರ್ಯಾಯ ದ್ವೀಪದಲ್ಲಿ ಪರ್ಯಾಯ ರಾಜಕಾರಣದ ಅನಿವಾರ್ಯತೆ