Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಾಪುರ: ಪರ್ಯಾಯ ದ್ವೀಪದಲ್ಲಿ ಪರ್ಯಾಯ ರಾಜಕಾರಣದ ಅನಿವಾರ್ಯತೆ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಾಪುರ: ಪರ್ಯಾಯ ದ್ವೀಪದಲ್ಲಿ ಪರ್ಯಾಯ ರಾಜಕಾರಣದ ಅನಿವಾರ್ಯತೆ

- Advertisement -
- Advertisement -

ಅರಬ್ಬೀ ಸಮುದ್ರದ ಭೋರ್ಗರೆತ ಮತ್ತು ಯಕ್ಷಗಾನದ ಚೆಂಡೆ-ಮದ್ದಳೆಯ ಅಬ್ಬರದ ಕುಂದಾಪುರ ವಿಧಾನಸಭಾ ಕ್ಷೇತ್ರ ಪರ್ಯಾಯ ದ್ವೀಪ. ದಕ್ಷಿಣದಲ್ಲಿ ಮಾತ್ರ ನೆಲವಿರುವ ಕುಂದಾಪುರವನ್ನು ಸಮುದ್ರ, ಪಂಚಗಂಗಾವಳಿ ನದಿ, ಹಾಲಾಡಿ ಹೊಳೆ ಮತ್ತು ಕೋಡಿ ಹಿನ್ನೀರು ಸುತ್ತುವರಿದಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮೃದ್ಧಿಯ ಈ ತಾಲೂಕು ರಮ್ಯ ಪ್ರಾಕೃತಿಕ ಸೊಬಗಿನಿಂದ ಸದಾ ಪ್ರವಾಸಿಗರನ್ನು ಸೆಳೆಯುತ್ತಿದೆ. ಬಡುಗುತಿಟ್ಟಿನ ಯಕ್ಷಗಾನ ರಂಗದ ಬೆಳವಣಿಗೆ, ಪ್ರಯೋಗಶೀಲತೆಯಲ್ಲಿ ಕುಂದಾಪುರದ್ದು ಮಹತ್ವದ ಪಾತ್ರ. ಯಕ್ಷರಂಗಕ್ಕೆ ಕುಂದಾಪುರ ಹಲವು ಪ್ರತಿಭಾನ್ವಿತ ಕಲಾವಿದರು ಮತ್ತು ಭಾಗವತರನ್ನು ಕೊಟ್ಟಿದೆ.

ಸಾಹಿತ್ಯ ಮತ್ತು ಸಿನಿಮಾರಂಗಕ್ಕೆ ಮಹತ್ವದ ಕೊಡುಗೆ ಕುಂದಾಪುರದಿಂದ ಸಂದಿದೆ. ಪ್ರಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತ, ನವ್ಯ ಕಾವ್ಯ ಪ್ರವರ್ತಕ ಎಂ. ಗೋಪಾಲಕೃಷ್ಣ ಅಡಿಗ, ನಂದಳಿಕೆ ಲಕ್ಷ್ಮೀನಾರಾಯಣಯ್ಯ (ಮುದ್ದಣ), ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ, ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್, ನಟ ಉಪೇಂದ್ರ, ನಟ-ನಿರ್ದೇಶಕ ಕಾಶಿನಾಥ, ಕೋಕಿಲ ಮೋಹನ್, ಛಾಯಾಗ್ರಾಹಕ ಗೌರಿಶಂಕರ್ ತವರು ಕುಂದಾಪುರ. ಸಮಾಜವಾದಿಗಳು ಮತ್ತು ಕಮ್ಯುನಿಸಮ್ ಕಾರ್ಮಿಕ ಹೋರಾಟಗಳ ನೆಲೆಯಾಗಿದ್ದ ಕುಂದಾಪುರ ಈಗ ಮತೋನ್ಮತ್ತ ಸಂಘಟನೆಗಳ ಹಿಡಿತಕ್ಕೆ ಸಿಲುಕಿದೆ. ಆದರೆ ಹಿಂದುತ್ವದ ಹುಚ್ಚು ಹವಾದ ನಡುವೆಯೂ ಕುಂದಾಪುರ ಸ್ವಲ್ಪ ಸಂಯಮದಿಂದಿದೆ.

ಇತಿಹಾಸ-ಸಂಸ್ಕೃತಿ-ಆರ್ಥಿಕತೆ

ಕುಂದಾಪುರ ನಾಮಕರಣದ ಕುರಿತು ಮೂರ್‍ನಾಲ್ಕು ತರ್ಕಗಳಿವೆ. ಪಂಚಗಂಗಾವಳಿ ತೀರದಲ್ಲಿ ಕುಂದವರ್ಮ ಎಂಬ ರಾಜನು ಕುಂದೇಶ್ವರ ದೇವಸ್ಥಾನ ಕಟ್ಟಿಸಿದ್ದರಿಂದ ಕುಂದಾಪುರವೆಂದು ಹೆಸರು ಬಂತೆಂದು ಹೇಳಲಾಗುತ್ತಿದೆ; ಕುಂದವರ್ಮನ ಆಳ್ವಿಕೆಗೆ ಒಳಪಟ್ಟಿದ್ದ ಊರು ಕುಂದಾಪುರ ಆಯಿತೆಂಬ ವಾದವಿದೆ. ಕುಂದ ಕನ್ನಡದಲ್ಲಿ ’ಕುಂದ’ ಎಂದರೆ ಮಲ್ಲಿಗೆ. ಈ ಪ್ರದೇಶ ಸುತ್ತಮುತ್ತ ಕುಂದ ವಿಪುಲವಾಗಿ ಬೆಳೆಯುವುದರಿಂದ ಕುಂದಾಪುರ ಬಂದಿರಬಹುದು ಎನ್ನಲಾಗುತ್ತದೆ. ತುಳುವಿನಲ್ಲಿ ಕುಂದ ಎಂದರೆ ಸ್ತಂಭ. ಅದರಿಂದಲೂ ಕುಂದಾಪುರ ಆಗಿರಲಿಕ್ಕೂ ಸಾಕೆಂಬ ವಾದವಿದೆ.

ಕುಂದಾಪುರದ ಮಣ್ಣಿನ ಸೊಗಡಿನ ಭಾಷೆ-ಕುಂದ ಕನ್ನಡ ಅಥವಾ ಕುಂದಪ್ರ ಕನ್ನಡ. ಹಳಗನ್ನಡದಂತೆ ಕೇಳಿಸುವ ಈ ವಿಶಿಷ್ಟ ಶೈಲಿಯ ಕನ್ನಡ ಬಾರ್ಕೂರಿಂದ ಬೈಂದೂರುತನಕ ಬದುಕಿನ ಭಾಷೆಯಾಗಿದೆ. ಕುಂದಾಪುರದಲ್ಲಿ ದೈನಂದಿನ ಸಂವಹನ-ವಹಿವಾಟೆಲ್ಲ ನಡೆಯುವುದು ಕುಂದಪ್ರ ಕನ್ನಡದಲ್ಲೆ. ತುಳು, ಬ್ಯಾರಿ, ಉರ್ದು, ಕೊಂಕಣಿ, ಕೊರಗ, ನವಾಯತಿಯಂಥ ಸಮುದಾಯ ಭಾಷೆಗಳು ಕೇಳಿಬರುತ್ತವೆ. ಕಾಡಿನಂಚಿನಲ್ಲಿ ಮರಾಠಿ, ಕುಡುಬಿಗಳಂಥ ಬುಡಕಟ್ಟು ಸಮುದಾಯವಿದೆ. ಕುಂದ ಕನ್ನಡ ಸಂಸ್ಕೃತಿಯ ಕುಂದಾಪುರದಲ್ಲಿ ದೈವಾರಾಧನೆ-ಪಾಣಾರಾಟ-ನಾಗಾರಾಧನೆ-ಯಕ್ಷಗಾನ ಹರಕೆ ಸಂಪ್ರದಾಯಗಳಿವೆ. ಹಲವು ಬಯಲಾಟ ಮೇಳಗಳನ್ನು ದೇವಸ್ಥಾನಗಳು ನಡೆಸುತ್ತಿವೆ. ಮೂರ್‍ನಾಲ್ಕು ವರ್ಷದ ತನಕದ ಹರಕೆ ಆಟಗಳು ಮುಂಗಡವಾಗಿ ನಿಗದಿಯಾಗಿರುತ್ತವೆ. ಕುಂದಾಪುರದ ರೋಸರಿ ಇಗರ್ಜಿ ಉಡುಪಿ ಜಿಲ್ಲೆ ಪ್ರಮುಖ ಚರ್ಚ್‌ಗಳಲ್ಲಿ ಒಂದಾಗಿದೆ.

ಶೈಕ್ಷಣಿಕವಾಗಿ ಮುಂದುವರಿದಿದ್ದರೂ ಊಳಿಗಮಾನ್ಯದ ದರ್ಪ-ಶೋಷಣೆ, ಅಸ್ಪೃಶ್ಯತೆ, ಮಡಿ-ಮೈಲಿಗೆ, ಮೂಢನಂಬಿಕೆಯ ಪರಂಪರೆ ಅನೂಚಾನವಾ ನಡೆಯುತ್ತಿದೆ. ಆದಿವಾಸಿ ಕೊರಗರಂತ ಸಮುದಾಯಗಳು ತಾರತಮ್ಯದ ತೊಂದರೆಗೆ ಸಿಲುಕಿದ್ದಾರೆ! ಸಮಾಜ ಕಲ್ಯಾಣ ಮಂತ್ರಿ ಕೋಟ ಶ್ರೀನಿವಾಸ ಪೂಜರಿ ಮನೆ ಪಕ್ಕದ ಕೇರಿಯಲ್ಲೇ ಕೊರಗ ಸಮುದಾಯದ ಮೇಲೆ ಮೇಲ್ವರ್ಗದ ’ಒಡೆಯ’ನ ಚಿತಾವಣೆಯಿಂದ ಪೊಲೀಸರು ಅಮಾನುಷ ಹಲ್ಲೆ ನಡೆಸಿದ್ದು ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿತ್ತು! ಈ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ನಿಭಾಯಿಸಲು ಸ್ಥಳೀಯ ಆಳುವ ಮಂದಿ ಪ್ರಜ್ಞಾಪೂರ್ವಕವಾಗೆ
ಹಿಂಜರಿಯುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

ಮೀನುಗಾರಿಕೆಯನ್ನು ಕುಂದಾಪುರದ ಜೀವ-ಜೀವನ ಬಹಳವಾಗಿ ಅವಲಂಬಿಸಿದೆ. ರಿಯಲ್ ಎಸ್ಟೇಟ್ ಹೊಡೆತಕ್ಕೆ ಕೃಷಿ ಗದ್ದೆಗಳಲೆಲ್ಲ ಕಟ್ಟಡಗಳು ಎದ್ದುನಿಂತಿವೆ. ಕುಂದಾಪುರದಲ್ಲಿ ಬೆಳೆಯುತ್ತಿದ್ದ ಭತ್ತ ಇಲ್ಲಿಯ ಊಟಕ್ಕೆ ಸಾಕಾಗುತ್ತಿತ್ತು. ಆದರೆ ಕಳೆದ ಹತ್ತು ವರ್ಷದಿಂದೀಚೆಗೆ ಅಕ್ಕಿ ಕೊಂಡುಕೊಳ್ಳುವಂತಾಗಿದೆಯೆಂದು ಹಿರಿಯ ಜೀವಗಳು ಕಳವಳಿಸುತ್ತವೆ. ಕುಂದಾಪುರದ ಆರ್ಥಿಕ ವಹಿವಾಟಿಗೆ ತೆಂಗಿನ ಫಸಲು ಮತ್ತು ಹೊಟೇಲ್ ಉದ್ಯಮ ಚೈತನ್ಯ ನೀಡಿದೆ. ಕುಂದಾಪುರದ ಗಣನೀಯ ಮಂದಿ ರಾಜ್ಯದ ವಿವಿಧ ಕಡೆ ಮತ್ತು ಮುಂಬೈ, ಹೈದರಾಬಾದ್, ಪುಣೆ ಮುಂತಾದೆಡೆ ಹೊಟೇಲ್ ನಡೆಸುತ್ತಿದ್ದಾರೆ. ಶೇ.65ಕ್ಕಿಂತ ಹೆಚ್ಚು ಜನರು ವ್ಯವಸಾಯೇತರ ಕಸುಬಿನಿಂದ ಬದುಕು ಸಾಗಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೆಂಚು ತಯಾರಿಕೆಗೆ ಹೆಸರಾಗಿದ್ದ ಕುಂದಾಪುರದಲ್ಲಿ ಆ ಉದ್ಯಮ ಕಳೆಗುಂದಿದೆ. ಅಳಿದುಳಿದ ಹೆಂಚು ಕಾರ್ಖಾನೆಗಳು ಹಾಗು ಗೋಡಂಬಿ ಸಂಸ್ಕರಣಾ ಘಟಕಗಳು ಒಂದಿಷ್ಟು ಉದ್ಯೋಗ ಕೊಟ್ಟಿವೆಯಾದರೂ ಯುವಸಮೂಹದ ವಲಸೆ ತಪ್ಪಿಸಲಾಗುತ್ತಿಲ್ಲ. ಬೀಡಿ ಕಟ್ಟುವುದು ಮತ್ತು ಮಲ್ಲಿಗೆ ಬೆಳೆದು ಒಂದಿಷ್ಟ ಕುಟುಂಬಗಳು ಸಂಸಾರ ಸಾಗಿಸುತ್ತಿವೆ. ದುಡಿವ ಕೈಗಳಿಗೆ ಇಲ್ಲಿಯೆ ಕೆಲಸ ಕೊಡುವ ಕೈಗಾರಿಕೆ ಅಥವಾ ಯೋಜನೆಗಳನ್ನು ಶಾಸಕ-ಸಂಸದರು ಮಾಡುತ್ತಿಲ್ಲವೆಂದು ಜನರು ಆಕ್ರೋಶದಿಂದ ಹೇಳುತ್ತಾರೆ. ವಾರಾಹಿ ನೀರಾವರಿ ಯೋಜನೆ ಕಾರ್ಯಗತವಾಗದೆ ರೈತರ ಹೊಲ-ಗದ್ದೆಗಳು ಬೀಳುಬಿದ್ದಿದೆ.

ರಾಜಕಾರಣದ ಚರಿತ್ರೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಗಡಿ 2008ರಲ್ಲಾದ ಕ್ಷೇತ್ರ ಪುನರ್‌ವಿಂಗಡಣೆ ಹೊತ್ತಲ್ಲಿ ಬದಲಾಗಿದೆ. ಬ್ರಹ್ಮಾವರ ಕ್ಷೇತ್ರ ರದ್ದುಮಾಡಲಾಗಿದ್ದು ಅಲ್ಲಿದ್ದ ಸೀತಾ ನದಿಯ ಉತ್ತರಭಾಗದ ಗ್ರಾಮ ಪಂಚಾಯತ್ ಪ್ರದೇಶಗಳನ್ನು ಕುಂದಾಪುರಕ್ಕೆ ಸೇರ್ಪಡೆ ಮಾಡಲಾಗಿದೆ. ಹಿಗ್ಗಿರುವ ಕ್ಷೇತ್ರದಲ್ಲಿ ಕಳೆದ ಅಸೆಂಬ್ಲಿ ಚುನಾವಣೆ ವೇಳೆ 1,99,617 ಮತದಾರರಿದ್ದರು. ಕುಂದಾಪುರದಲ್ಲಿ ರಾಜಕೀಯ-ಸಾಮಾಜಿಕವಾಗಿ ಬಲಾಢ್ಯವಾಗಿರುವ ಬಂಟರು ಮತ್ತು ಹಿಂದುತ್ವದ ಚಂಡಮಾರುತದಲ್ಲಿ ದಿಕ್ಕುತಪ್ಪಿದಂತಿರುವ ದುರ್ಬಲ ವರ್ಗದ ಬಿಲ್ಲವರು ಹೆಚ್ಚುಕಮ್ಮಿ ಸಮಬಲದಲ್ಲಿದ್ದಾರೆ. ಒಂದು ಅಂದಾಜಿನಂತೆ 62 ಸಾವಿರ ಬಂಟರು, 60 ಸಾವಿರ ಬಿಲ್ಲವರು, ದೇವಾಡಿಗರು 10, ಶೇರೆಗಾರರು 8, ಬ್ರಾಹ್ಮಣರು 7, ಖಾರ್ವಿ ಮತ್ತು ಮೊಗವೀರ (ಮೀನುಗಾರರು) 11, ಮುಸ್ಲಿಮ್-ಕ್ರಿಶ್ಚಿಯನ್ನರು 30 ಸಾವಿರ ಮತ್ತು ಪರಿಶಿಷ್ಟ ಪಂಗಡದ ಮರಾಠಿಗಳು ಹಾಗು ಕುಡುಬಿಗಳು, ದಲಿತರು, ಕುಲಾಲ, ವಿಶ್ವಕರ್ಮರಂಥ ಸಣ್ಣ ಸಂಖ್ಯೆಯಜಾತಿಯ ಮತದಾರರಿದ್ದಾರೆ.

ವಿನ್ನಿಪ್ರೆಡ್ ಫರ್ನಾಂಡಿಸ್

ಕುಂದಾಪುರದ ಎಲ್ಲ ರಂಗದಲ್ಲಿ ಬಂಟರದು ಏಕಸ್ವಾಮ್ಯವೆಂಬ ಮಾತು ಕೇಳಿಬರುತ್ತದೆ. ಶಾಲಾಭಿವೃದ್ಧಿ ಕಮಿಟಿಯಿಂದ ಹಳ್ಳಿಗಳ ಸಹಕಾರ ಸೊಸೈಟಿಗಳವರೆಗೆ ಎಲ್ಲ ಸಂಘ-ಸಂಸ್ಥೆಗಳಲ್ಲಿ ಬಂಟರದೆ ಪಾರುಪತ್ಯ. 1952ರಿಂದ 2018ರ ತನಕದ 15 ಚುನಾವಣಾ ಆಖಾಡ ಕಂಡರೆ ಕೆಲವೇ ಕೆಲವು ಬಾರಿ ಬಿಟ್ಟರೆ ಬಂಟರೆ ಪ್ರಬಲ ಪಕ್ಷದ ಅಭ್ಯರ್ಥಿಗಳಾಗಿರುವುದು ಸ್ಪಷ್ಟವಾಗುತ್ತದೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಂಜಯ್ಯ
ಶೆಟ್ಟಿ ಪಿಎಸ್‌ಪಿಯ ಶ್ರೀನಿವಾಸ್ ಶೆಟ್ಟನ್ನು ಸೋಲಿಸಿ ಶಾಸಕರಾಗಿದ್ದರು. 1957ರಲ್ಲಿ ಪಿಎಸ್‌ಪಿಯ ಶ್ರೀನಿವಾಸ್ ಶೆಟ್ಟಿ ಚುನಾಯಿತರಾಗಿದ್ದರು. 1962ರ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್ ಶೆಟ್ಟಿ ವಕೀಲರಾಗಿದ್ದ ಕಾಂಗ್ರೆಸ್ ಕ್ಯಾಂಡಿಡೇಟ್ ಎಸ್.ಎಸ್.ಕೊಳ್ಕೆಬೈಲ್ ಎದುರು ಸೋತರು. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಹುರಿಯಾಳಾಗಿದ್ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ವಿನ್ನಿಪ್ರೆಡ್ ಫರ್ನಾಂಡಿಸ್ ಕಾಂಗ್ರೆಸ್‌ನ ಎಂ.ಎಂ.ಹೆಗ್ಡೆಯವರನ್ನು 2,521 ಮತದಂತರದಿಂದ ಪರಾಭವಗೊಳಿಸಿ ಕುಂದಾಪುರದ ಮೊದಲ ಶಾಸಕಿ ಎನಿಸಿಕೊಂಡಿದ್ದರು.

1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನ್ನಿಪ್ರೆಡ್ ಫರ್ನಾಂಡಿಸ್ ಸಂಸ್ಥಾ ಕಾಂಗ್ರೆಸ್‌ನ ಕಾಪು ಸಂಜೀವ ಶೆಟ್ಟಿಯವರನ್ನು ಸೋಲಿಸಿ ಮತ್ತೆ ಶಾಸಕಿಯಾದರು. 1978ರಲ್ಲಿ ಕಾಂಗ್ರೆಸ್ ಬಹುಸಂಖ್ಯಾತ ಬಿಲ್ಲವ ಜಾತಿಯ ಮಾಣಿ ಗೋಪಾಲ್‌ರಿಗೆ ಮಣೆ ಹಾಕಿತ್ತು. ಆದರೆ ಮಾಣಿ ಗೋಪಾಲ್‌ರ ಎದುರು ಜನತಾ ಪಕ್ಷದ ಕಾಪು ಸಂಜೀವ ಶೆಟ್ಟಿ ಕೇವಲ 1,864 ಮತಗಳ ಅಂತರದಿಂದ ಗೆದ್ದರು. ರಾಜಕಾರಣದ ನೇಪಥ್ಯಕ್ಕೆ ಸರಿದಿದ್ದ ವಿನ್ನಿಪ್ರೆಡ್ ಫರ್ನಾಂಡಿಸ್‌ಗೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.

ಪ್ರತಾಪ್ ಆಗಮನ-ನಿರ್ಗಮನ

ಬಂಟರ ಪ್ರಾಬಲ್ಯದ ಕುಂದಾಪುರದಲ್ಲಿ ಬಿಲ್ಲವರು ಗೆಲ್ಲುವುದು ಕಷ್ಟವೆಂದು ಲೆಕ್ಕಹಾಕಿದ ಕಾಂಗ್ರೆಸ್‌ನ ಹಿರಿಯರು ಬಂಟ ಸಮುದಾಯದಲ್ಲಿ ಪ್ರಭಾವಿಯಾಗಿದ್ದ ಹುಯ್ಯಾರು ಪಟೇಲರ ಪುತ್ರ, ಬ್ಯಾಂಕ್ ಉದ್ಯೋಗಿಯಾಗಿದ್ದ ಪ್ರತಾಪಚಂದ್ರ ಶೆಟ್ಟಿಯನ್ನು ರಾಜಕಾರಣಕ್ಕೆ ತಂದು 1983ರ ಕಣಕ್ಕಿಳಿಸಿದರು. ಅತ್ತ ಕಾಂಗ್ರಸ್ ಬಿಟ್ಟ ಮಾಣಿ ಗೋಪಾಲ್ ಜನತಾ ಪಕ್ಷದ ಕ್ಯಾಂಡಿಡೇಟಾದರು. ಪ್ರಥಮ ಪ್ರಯತ್ನದಲ್ಲೆ ಪ್ರತಾಪ್ 7,372 ಮತದಂತರದಿಂದ ವಿಧಾನಸಭೆ ಪ್ರವೇಶಿಸಿದರು. ಸೋತ ಸರಳ-ಸಜ್ಜನ ಮಾಣಿ ಗೋಪಾಲ್ ಪಕ್ಕದ ಬೈಂದೂರು ಕ್ಷೇತ್ರದಲ್ಲಿ ಜನತಾಪಕ್ಷ ಮತ್ತು ಕಾಂಗ್ರೆಸ್‌ನಿಂದ ಮೂರು ಬಾರಿ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಜನತಾ ದಳ ಅಧಿಕಾರದಲ್ಲಿದ್ದಾಗ ಒಮ್ಮೆ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಮಾಣಿ ಗೋಪಾಲ್ ಈಗ ಕಾಂಗ್ರೆಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬಂಟ ಸಮುದಾಯದಲ್ಲಿ ವರ್ಚಸ್ಸು ಹೊಂದಿದ್ದ ಅಪ್ಪಣ್ಣ ಹೆಗ್ಡೆ 1985ರಲ್ಲಿ ಶಾಸಕ ಪ್ರತಾಪ್‌ಚಂದ್ರ ಶೆಟ್ಟಿಗೆ ಎದುರಾಳಿಯಾಗಿದ್ದರು. 1983ರಲ್ಲಿ ಪಕ್ಕದ ಬೈಂದೂರು ಕ್ಷೇತ್ರದಲ್ಲಿ ಕೇವಲ 24 ಮತಗಳಿಂದ ಗೆದ್ದು ಜನತಾ ಪಕ್ಷದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆಗೆ ಕುಂದಾಪುರದಲ್ಲಿ ಗೆಲ್ಲಲಾಗಲಿಲ್ಲ. 1989ರಲ್ಲಿ ಜನತಾ ಪಕ್ಷದಿಂದ ಆಖಾಡಕ್ಕಿಳಿದಿದ್ದ ಗಾಣಿಗ ಸಮುದಾಯದ ಕೆ.ಎನ್.ಗೋವರ್ಧನ್‌ರನ್ನು ಪ್ರತಾಪ್ ದೊಡ್ಡ ಅಂತರದಿಂದ ಮಣಿಸಿದರು. ಪ್ರತಾಪ್ ಶಾಸಕನಾಗಿ ಹತ್ತು ವರ್ಷ ಕಳೆಯುವ ಹೊತ್ತಿಗೆ ಅವರ ಮತ್ತು ಕುಂದಾಪುರ ಕಾಂಗ್ರೆಸ್‌ನ ಭೀಷ್ಮ ಎನಿಸಿದ್ದ ಮಾಜಿ ಶಾಸಕ ಎ.ಜಿ.ಕೊಡ್ಗಿ ನಡುವಿನ ಸಂಬಂಧ ಹದಗೆಟ್ಟಿತ್ತು. ಬ್ರಾಹ್ಮಣ ಸಮುದಾಯದ ಕೊಡ್ಗಿ ಹಾಗು ಬಂಟ ಶಿಷ್ಯ ಪ್ರತಾಪ್ ನಡುವೆ ಪ್ರತಿಷ್ಠೆಯ ತಿಕ್ಕಾಟ ನಡೆದಿತ್ತು. ಕೆರಳಿದ ಕೊಡ್ಗಿ ಕಾಂಗ್ರೆಸ್ ತೊರೆದು 1994ರಲ್ಲಿ ಬಿಜೆಪಿಯಿಂದ ಶಿಷ್ಯನ ವಿರುದ್ದ ಸೆಣಸಾಡಿ 3,439 ಮತಗಳಿಂದ ಸೋತರು.

ಪ್ರತಾಪಚಂದ್ರ ಶೆಟ್ಟಿ

ಬಂಟರು ಹಿಡಿತ ಸಾಧಿಸಿರುವ ಕುಂದಾಪುರದಲ್ಲಿ ಬ್ರಾಹ್ಮಣನಾದ ತಾನು ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂಬುದು ಕೊಡ್ಗಿಯವರಿಗೆ ಖಾತ್ರಿಯಾಗಿತ್ತು. ಹೇಗಾದರೂ ಮಾಡಿ ಪ್ರತಾಪ್‌ಚಂದ್ರ ಶೆಟ್ಟಿಯನ್ನು ಮಾಜಿ ಶಾಸಕನಾಗಿ ಮಾಡುವ ಹಠ ತೊಟ್ಟಿದ್ದ ಕೊಡ್ಗಿ ರೆಬೆಲ್ ಬಂಟನೊಬ್ಬನನ್ನು ಬಿಜೆಪಿಯಿಂದ ಸ್ಪರ್ಧೆಗಿಳಿಸುವ ತಂತ್ರಗಾರಿಕೆ ಹೆಣೆದರು. ಪ್ರತಾಪ್ ತಂಡದಲ್ಲಿದ್ದ ಮಾಜಿ ವಿದ್ಯಾರ್ಥಿ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಸೆಳೆದು 1999ರಲ್ಲಿ ಚುನಾವಣೆಗೆ ನಿಲ್ಲಿಸಿದರು. ಕದನ ಕುತೂಹಲ ಕೆರಳಿಸಿದ್ದ ಆ ಚುನಾವಣೆಯಲ್ಲಿ ಪ್ರತಾಪ್ ತೀರಾ ಸಣ್ಣ ಅಂತರದಲ್ಲಿ (1,021 ಮತಗಳು) ಸೋಲೊಪ್ಪಿಕೊಳ್ಳಬೇಕಾಗಿಬಂತು.

ಆ ಬಳಿಕ ಚುನಾವಣಾ ಹೋರಾಟದ ರಾಜಕಾರಣದಿಂದ ನಿವೃತ್ತಿ ಪಡೆದ ಪ್ರತಾಪ್ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾದರು. ಕಾಂಗ್ರೆಸ್ ಹೈಕಮಾಂಡ್‌ನಲ್ಲಿದ್ದ ಆಸ್ಕರ್ ಫರ್ನಾಂಡಿಸ್ ತಮ್ಮ ಪರಮಾಪ್ತನಾಗಿದ್ದ ಪ್ರತಾಪ್‌ಗೆ ಸ್ಥಳೀಯ ವಿರೋಧದ ನಡುವೆಯೂ ಮತ್ತೆಮತ್ತೆ ಎಮ್ಮೆಲ್ಸಿ ಟಿಕೆಟ್ ಕೊಟ್ಟು ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೂ ಏರಿಸಿದ್ದರು. ಆದರೆ ಪ್ರತಾಪ್ ಪಕ್ಷದ ಋಣ ತೀರಿಸಲು ಒಂಚೂರು ಪ್ರಯತ್ನಿಸಲಿಲ್ಲವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಸ್ಕರ್ ನಿಧನದ ನಂತರ ಒಂಥರಾ ತಬ್ಬಲಿಯಂತಾಗಿರುವ ಪ್ರತಾಪ್ ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸುವ ಧೈರ್ಯ ತೋರಿಸಲಿಲ್ಲ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಅಭ್ಯರ್ಥಿಯಾಗುವಂತೆ ಒತ್ತಾಯಿಸುತ್ತಿದ್ದರೂ ಬೆನ್ನುಹಾಕಿ ಕುಳಿತಿರುವ ಪ್ರತಾಪ್ ಕುಂದಾಪುರ ಕಾಂಗ್ರೆಸ್‌ನಲ್ಲಿ ಪರ್ಯಾಯ ನಾಯಕತ್ವವೂ ಬೆಳೆಯಲು ಬಿಡಲಿಲ್ಲವೆಂಬ ಆಕ್ಷೇಪ ಕಾಂಗ್ರೆಸ್ಸಿಗರದು.

ದಾನಶೂರನ ಸಾಧನೆ ಏನು?

2004ರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತಾಪ್ ಸ್ಪರ್ಧಿಸಿದ್ದರೆ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಕಠಿಣ ಸವಾಲು ಎದುರಾಗುತ್ತಿತ್ತು. ಆ ರಿಸ್ಕ್ ಪ್ರತಾಪ್ ತೆಗೆದುಕೊಳ್ಳಲಿಲ್ಲ. ಜಿಪಂ. ಮಾಜಿ ಅಧ್ಯಕ್ಷ ಅಶೋಕ್‌ಕಮಾರ್ ಹೆಗ್ಡೆ ಕಾಂಗ್ರೆಸ್ ಕ್ಯಾಂಡಿಡೇಟಾದ್ದರಿಂದ ಹಾಲಾಡಿ ಶೆಟ್ಟಿ ನಿರಾಯಾಸವಾಗಿ ಪುನರಾಯ್ಕೆಯಾದರು. 2008ರಲ್ಲಿ ಜನತಾ ಪರಿವಾರ ಮೂಲದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಬಿಜೆಪಿಯ ಹಾಲಾಡಿ ಶೆಟ್ಟಿಗೆ ಮುಖಾಮುಖಿಯಾಗಿದ್ದರು. ಬ್ರಹ್ಮಾವರ ಕ್ಷೇತ್ರದಿಂದ ಒಮ್ಮೆ ಜನತಾ ದಳ ಮತ್ತು ಎರಡು ಬಾರಿ ಪಕ್ಷೇತರರಾಗಿ ಜಯಪ್ರಕಾಶ್ ಗೆದ್ದಿದ್ದರು. 2008ರಲ್ಲಿ ಕ್ಷೇತ್ರ ಪನರ್‌ವಿಂಗಡಣೆ ಮಾಡುವಾಗ ಬ್ರಹ್ಮಾವರ ರದ್ದಾಗಿದ್ದರಿಂದ ಜಯಪ್ರಕಾಶ್ ಕಾಂಗ್ರೆಸ್ ಸೇರಿ ಕುಂದಾಪುರ ಆಖಾಡಕ್ಕೆ ಇಳಿದಿದ್ದರು. ಇಬ್ಬರು ಬಂಟರ ಬಡಿದಾಟದಲ್ಲಿ ಸ್ವಜಾತಿ ಮತದಾರರು ಹಾಲಾಡಿಯನ್ನು ಬೆಂಬಲಿಸಿದ್ದರಿಂದ ಅವರು ಮೂರನೆ ಬಾರಿ ವಿಧಾನಸಭೆ ತಲುಪಿದ್ದರು.

ಹಾಲಾಡಿ ಶೆಟ್ಟಿ ಬಿಜೆಪಿಯಲ್ಲಿದ್ದರೂ ಸಂಘಪರಿವಾರದ ’ಧ್ಯೇಯಾದರ್ಶ’ಗಳಿಂದ ದೂರವೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಕರಾವಳಿ ಸಂಘದ ಸರ್ವ ಶ್ರೇಷ್ಠ ನಾಯಕನ ಮನೆಗೆ ಹೋದಾಗ ನೆಲದಲ್ಲಿ ಕುಳಿತು ಭಯ-ಭಕ್ತಿ ಪ್ರದರ್ಶಿಸುವ ’ನಿಯಮ’ ಹಾಲಾಡಿ ಶೆಟ್ಟಿಗೆ ಒಗ್ಗುತ್ತಿಲ್ಲವಂತೆ. ಕ್ಷೇತ್ರದಲ್ಲಿ ಹಾಲಾಡಿ ಸಮಷ್ಠಿ ಕೆಲಸ ಮಾಡದಿದ್ದರೂ ಕೋಮು ಗಲಭೆಗೆ ಪ್ರಚೋದಿಸುವ ಮತಾಂಧ ಮಸಲತ್ತಿನ ಧರ್ಮಕಾರಣ ಮಾಡುವುದಿಲ್ಲವೆಂಬ ಸಮಾಧಾನ ಕ್ಷೇತ್ರದಲ್ಲಿದೆ. ಇದೆಲ್ಲ ಸಂಘ ಸರದಾರನ ಕಣ್ಣು ಕೆಂಪು ಮಾಡಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಸರಕಾರದಲ್ಲಿ ಮಂತ್ರಿಯಾಗುವ ಅವಕಾಶ ಹಾಲಾಡಿ ಶೆಟ್ಟಿಗೆ ತಪ್ಪಿಸಲಾಯಿತೆಂಬುದು ಸಾರ್ವತ್ರಿಕ ಅಭಿಪ್ರಾಯ.

ಕೋಟ ಶ್ರೀನಿವಾಸ ಪೂಜಾರಿ

ಹಾಲಾಡಿ ಶೆಟ್ಟರಿಗೆ ತನ್ನನ್ನು ಮಂತ್ರಿ ಮಾಡಲಿಲ್ಲ ಎಂಬುದಕ್ಕಿಂತ ತನ್ನ ಮನೆ ಹತ್ತಿರದ, ತನಗಿಂತ ಜೂನಿಯರ್ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿಯನ್ನು ಮಂತ್ರಿ ಮಾಡಿ ಅವಮಾನಿಸುವ ಕರಾಮತ್ತು ’ಸಂಘ ಶ್ರೇಷ್ಠ’ ಮಾಡಿದರೆಂಬುದು ಕೆರಳಿಸಿತ್ತು. ’ಮಂತ್ರಿ ಮಾಡುತ್ತೇವೆ ಪ್ರಮಾಣವಚನಕ್ಕೆ ಬನ್ನಿ’ಯೆಂದು ಬೆಂಗಳೂರಿಗೆ ಕರೆಸಿಕೊಂಡು ಬರಿಗೈಲಿ ಕಳಿಸಿದರೆಂದು ಹೇಳಿಕೆ ನೀಡಿ ಹಾಲಾಡಿ ಶೆಟ್ಟಿ 2013ರ ಚುನಾವಣೆ ಹೊತ್ತಲ್ಲಿ ಬಿಜೆಪಿ ಬಿಟ್ಟು ಪಕ್ಷೇತರನಾಗಿ ಸ್ಪರ್ಧಿಸಿದ್ದರು. ಆ ಆರ್‌ಎಸ್‌ಎಸ್-ಹಾಲಾಡಿ ಜಿದ್ದಾಜಿದ್ದಿನಲ್ಲಿ ಬಿಜೆಪಿಗೆ ಠೇವಣಿಯೂ ಉಳಿಯಲಿಲ್ಲ. ಹಾಲಾಡಿ ಶೆಟ್ಟಿಗೆ 80,563 ಮತ ಬಂದಿದ್ದರೆ, ಕಟ್ಟರ್ ಸಂಘಿಗಳ ಬೆಂಲಿತ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 14,524 ಮತ! ಆ ಹಣಾಹಣಿಯಲ್ಲಿ ಹಾಲಾಡಿ ಶೆಟ್ಟರಿಗೆ ನಿಕಟ ಸ್ಪರ್ಧಿಯಾಗಿದ್ದು ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿ (39,952).

2018ರ ಚುನಾವಣೆ ಹತ್ತಿರ ಬಂದಾಗ ಹಾಲಾಡಿ ಶೆಟ್ಟರನ್ನು ಕಾಂಗ್ರೆಸಿಗೆ ತರುವ ಪ್ರಯತ್ನ ನಡೆಯಿತು. ಹಾಲಾಡಿಗೂ ಬಿಜೆಪಿಗಿಂತ ಕಾಂಗ್ರೆಸ್ ಪರವಾಗಿಲ್ಲ ಅನಿಸಿತ್ತಂತೆ; ಆದರೆ ಆಸ್ಕರ್-ಪ್ರತಾಪ್‌ಗೆ ಇದು ಇಷ್ಟವಿರಲಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿಗೆ ಹಾಲಾಡಿ ಶೆಟ್ಟರನ್ನು ಸೆಳೆಯಹತ್ತಿದ್ದರು. ಇದು ಕರಾವಳಿಯ ಸಂಘ ಸರದಾರನಿಗೆ ಬೇಕಾಗಿರಲಿಲ್ಲ. ಕುಂದಾಪುರದ ನಿಷ್ಠಾವಂತ ಬಿಜೆಪಿಗರಿಂದಲೂ ವಿರೋಧ ಎದುರಾಗಿತ್ತು. ಕೊನೆಗೆ ಯಡಿಯೂರಪ್ಪ ಸಂಘ ದೊರೆಯನ್ನು ಸಮಾಧಾನ ಮಾಡಿದರೆನ್ನಲಾಗಿದೆ.

2018ರಲ್ಲಿ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದಿದ್ದ ಹಾಲಾಡಿ ಶೆಟ್ಟಿ ಎದುರು ಕಾಂಗ್ರೆಸ್ ಬಂಟ್ವಾಳದ ರಾಕೇಶ್ ಮಲ್ಲಿಯನ್ನು ನಿಲ್ಲಿಸಿತ್ತು. ಮಲ್ಲಿ ಬಂಟ ಸಮುದಾಯದವರಾದರೂ ಹೊರಗಿನವರೆಂಬ ಕಾರಣಕ್ಕೆ ತೀರಾ ದುರ್ಬಲ ಹುರಿಯಾಳೆನಿಸಿದ್ದರು. ಜತೆಗೆ ಕರಾವಳಿಯಲ್ಲಿ ಯಾವ್ಯಾವುದೋ ಕಾರಣಕ್ಕಾದ ಹಿಂದೂಗಳ ಸಾವನ್ನು ಮತ ಧ್ರುವೀಕರಣಕ್ಕೆ ಬಿಜೆಪಿ ಬಳಸಿಕೊಂಡಿತ್ತು. ಹೀಗಾಗಿ ಹಾಲಾಡಿ 56,405 ಮತಗಳ ಭರ್ಜರಿ ಅಂತರದಿಂದ ಗೆಲುವು ಕಂಡರು. ಕುಂದಾಪುರದಲ್ಲಿ ಹಾಲಾಡಿ ಶೆಟ್ಟರ ಇಮೇಜ್ ಹೇಗಿದೆಯೆಂದರೆ, ’ಆರ್‌ಎಸ್‌ಎಸ್ ಇಲ್ಲದಿದ್ದರೆ ಮೋದಿ ಮುಳುಗುತ್ತಾರೆ; ಆದರೆ ಹಾಲಾಡಿ ಶೆಟ್ಟಿ ಈ ಹಿಂದುತ್ವದ ಗಾಳಿಯಲ್ಲೂ ಸಂಘಿಗಳನ್ನು ಧಿಕ್ಕರಿಸಿ ಗೆಲ್ಲುತ್ತಾರೆ. ಅಷ್ಟೇ ಅಲ್ಲ, ಬಿಜೆಪಿಗೆ ಹಾಲಾಡಿ ಅನಿವಾರ್ಯವಾಗಿದ್ದಾರೆ’ ಎಂಬುದು ಜನಜನಿತ ಅಭಿಪ್ರಾಯ. ಒಂದೇ ಸೋಲಿಗೆ ಕಾಂಗ್ರೆಸ್‌ನ ಪ್ರಬಲ ಪ್ರತಾಪ್ ಯುದ್ಧಭೂಮಿಯಿಂದ ಪಲಾಯನ ಮಾಡಿದ್ದು ಹಾಲಾಡಿಯ ನಿರಂತರ ದಿಗ್ವಿಜಯದ ಗುಟ್ಟೆಂದು ರಾಜಕೀಯ ವಿಶ್ಲೇಷಕರ ಜಿಜ್ಞಾಸೆ.

ಐದು ಸಲ ಗೆದ್ದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟರ ಸಾಧನೆ ಏನೆಂದು ಕ್ಷೇತ್ರದಲ್ಲಿ ಯಾರನ್ನೇ ಕೇಳಿದರೂ ಬರುವ ಉತ್ತರ ಒಂದೇ- ’ಶೆಟ್ಟರ ಸಾಧನೆ ಶೂನ್ಯ’! ಅವರೆಂದೂ, ಕ್ಷೇತ್ರದ ಬೇಕು-ಬೇಡ, ಇಷ್ಟ-ಕಷ್ಟದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ; ದೂರದೃಷ್ಟಿಯ ಯೋಜನೆ, ಕೆಲಸ-ಕಾರ್ಯ ಅವರಿಂದಾಗಿಲ್ಲ. ಹಾಲಾಡಿ ಶೆಟ್ಟರ ಇಪ್ಪತ್ತೆರಡು ವರ್ಷದ ಶಾಸಕತ್ವದ ಅವಧಿಯಲ್ಲಿ ಯಾರೇ ಎಮ್ಮೆಲ್ಲೆಯಾದರು ಬರುವ ಒಂದಿಷ್ಟು ಬಜೆಟ್ ಕೆಲಸ-ಕಾಮಗಾರಿ ಆಗಿದೆಯೆ ಹೊರತು ಇನ್ನೇನೂ ಆಗಿಲ್ಲವೆಂಬ ಆಕ್ಷೇಪ ಕ್ಷೇತ್ರದಲ್ಲಿದೆ. ಕೈ-ಬಾಯಿ ಶುದ್ಧವಾಗಿ ಇಟ್ಟುಕೊಂಡಿರುವ ಶೆಟ್ಟರು ಶಂಕು ಸ್ಥಾಪನೆ, ಉದ್ಘಾಟನೆಗೂ ಹೋಗುವವರಲ್ಲ; ಭಟ್ಟಂಗಿಗಳಿಂದ ಅಭಿನಂದನೆಯ ಬ್ಯಾನರ್-ಪ್ಲೆಕ್ಸ್ ಹಾಕಿಸಿಕೊಳ್ಳುವವರಲ್ಲ. ಕುಂದಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ತಯಾರಿಸಿಕೊಂಡು ಸತತ ಶಾಸಕನನ್ನಾಗಿ ಮಾಡಿದವರ ಋಣ ತೀರಿಸಬೇಕೆಂಬ ಬದ್ಧತೆಯೂ ಹಾಲಾಡಿ ಶೆಟ್ಟರಲಿಲ್ಲ ಎಂದು ಜನರು ಹೇಳುತ್ತಾರೆ.

ರಾಕೇಶ್ ಮಲ್ಲಿ

’ಹಾಗಿದ್ದರೆ ನಿರಂತರವಾಗಿ ಅದ್ಹೇಗೆ ಗೆದ್ದು ಬರುತ್ತಿದ್ದಾರೆ’ ಎಂದು ಕೇಳಿದರೆ ಕುಂದಾಪುದಲ್ಲಿ ಮಾರ್ಮಿಕ ಉತ್ತರ ಸಿಗುತ್ತದೆ. ಬ್ರಹ್ಮಚಾರಿ ಹಾಲಾಡಿ ಶೆಟ್ಟರು ಸಮಷ್ಠಿಯ ಕೆಲಸಗಾರನಲ್ಲದಿದ್ದರು ವೈಯಕ್ತಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಮದುವೆ-ಮುಂಜಿ-ಕ್ರೀಡಾ ಕಾರ್ಯಕ್ರಮ, ಅನಾರೋಗ್ಯವೆಂದು ಹೇಳಿಕೊಂಡು ಬರುವವರಿಗೆ ಕಾಫಿ-ತಿಂಡಿ ಕೊಟ್ಟು, ಐದೋಹತ್ತೋ ಸಾವಿರ ಕಿಸೆಗಿಟ್ಟು, ಹೋಗುವಾಗ ಬಸ್ ಚಾರ್ಜಿಗೆಂದು ಚಿಲ್ಲರೆ ಕಾಸು ಕೊಟ್ಟು ಕಳಿಸುತ್ತಾರೆ. ಇದೇ ಹಾಲಾಡಿ ಶೆಟ್ಟರ ಓಟ್ ಬ್ಯಾಂಕ್ ರಹಸ್ಯವೆಂಬುದು ಸಾಮಾನ್ಯ ಅಭಿಪ್ರಾಯ. ’ಲಂಚದ ಅರೋಪಗಳಿಲ್ಲದ ಹಾಲಾಡಿ ಶೆಟ್ಟರಿಗೆ ಅಷ್ಟೆಲ್ಲ ಹಣ ಎಲ್ಲಿಂದ ಬರುತ್ತದೆ’ ಎಂದರೆ ’ಅವರು ರಿಯಲ್ ಎಸ್ಟೇಟ್ ಉದ್ಯಮಿ’ ಎಂಬ ಮಾತು ಬರುತ್ತದೆ!!

ಕ್ಷೇತ್ರದಲ್ಲಿ ಏನಿದೆ? ಏನಿಲ್ಲ?

ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಪ್ರತಾಪ್‌ಚಂದ್ರ ಶೆಟ್ಟಿ ಎಮ್ಮೆಲ್ಲೆ-ಎಮ್ಮೆಲ್ಸಿಯಾಗಿ ಇಪ್ಪತ್ತೊಂದು ವರ್ಷ ಆಡಳಿತ ನಡೆಸಿದ್ದರು; ಹಾಲಿ ಎಮ್ಮೆಲ್ಲೆ ಹಾಲಾಡಿ ಶೆಟ್ರ ಪಾರುಪತ್ಯ ಎರಡು ಕಾಲು ದಶಕದಿಂದ ಕುಂದಾಪುರದಲ್ಲಿದೆ. ಕರಾವಳಿ ಸಂಘ ಶ್ರೇಷ್ಠರ ಆಜ್ಞಾನುಧಾರಿ ಎನ್ನಲಾಗಿರುವ ಮಂತ್ರಿ ಕೋಟ ಶ್ರೀವಿವಾಸ್ ಪೂಜಾರಿ 2008ರಿಂದ ವಿಧಾನ ಪರಿಷತ್ ಸದಸ್ಯ, ವಿರೋಧ ಪಕ್ಷದ ನಾಯಕ, ಮಂತ್ರಿಯಂಥ ಅಧಿಕಾರದ ಆಯಕಟ್ಟಿ ಸ್ಥಾನಮಾನದಲ್ಲಿದ್ದಾರೆ. ದೀರ್ಘಕಾಲ ಅಧಿಕಾರ ಅನುಭವಿಸಿದ ಈ ಮೂವರಿಂದ ಕುಂದಾಪುರಕ್ಕಾದ ಅನುಕೂಲ ಅಷ್ಟಕ್ಕಷ್ಟೇ ಎಂದು ಕ್ಷೇತ್ರದ ಜನರು ನೊಂದು ನುಡಿಯುತ್ತಾರೆ. ಸಚಿವ ಪೂಜಾರಿಯಂತೂ ಸ್ವಜಾತಿ ಬಿಲ್ಲವ ತರುಣರು ಹಿಂದುತ್ವದ ಧರ್ಮಯುದ್ಧದಲ್ಲಿ ಕಾಲಾಳುಗಳಾಗಿ ಬಲಿ ಬೀಳುತ್ತಿದ್ದರೂ ಸುಮ್ಮನಿದ್ದರೆಂದು ಪ್ರಜ್ಞಾವಂತರು ಕಳವಳಿಸುತ್ತಾರೆ. ಕುಂದಾಪುರದ ರೈತರ ಬದುಕು ಹಸನುಗೊಳಿಸುತ್ತದೆಂಬ ನಿರೀಕ್ಷೆಯಿಂದ ಶುರುಮಾಡಲಾಗಿದ್ದ ವಾರಾಹಿ ನೀರಾವರಿ ಯೋಜನೆ ಕಳೆದ 40 ವರ್ಷದಿಂದ ಆಳುವವರ ಉದಾಸೀನ-ಅವ್ಯವಹಾರಕ್ಕೆ ಬಳಲಿ ತಾರ್ಕಿಕ ಅಂತ್ಯ ಕಂಡಿಲ್ಲ.

ಗುಂಡೂರಾವ್ ಈ ಯೋಜನೆಗೆ ಅಡಿಗಲ್ಲು ಹಾಕುವಾಗ 9 ಕೋಟಿಯ ಕಾಮಗಾರಿ ಎಂದು ಘೋಷಿಸಲಾಗಿತ್ತು. ನಾಲ್ಕು ದಶಕದಿಂದ ನಡೆಯುತ್ತಿರುವ ಈ ಕಾಮಗಾರಿ ವೆಚ್ಚ ಸಾವಿರ ಕೋಟಿ ದಾಟಿದೆ. ಆದರೂ ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ. ಈಚೆಗಷ್ಟೇ ಎಡ ಕಾಲುವೆ ನೀರು ಕಂಡಿದ್ದರೆ, ಬಲ ಕಾಲುವೆ ಬರಿದಾಗೆಯೇ ಇದೆ! ಸಿಆರ್‌ಝಡ್ ನಿಯಮದಿಂದ ಕಡಲತಡಿಯ ಮಂದಿ ಸಂಕಷ್ಟದಲ್ಲಿದ್ದಾರೆ; ಕಸ್ತೂರಿ ರಂಗನ್ ವರದಿಯಿಂದ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಬುಡಕಟ್ಟು ಜನಾಂಗ ಸಂಕಷ್ಟದಲ್ಲದೆ. ಇವ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ-ಸಂಸದರಿದ್ದಾರೆಂದು ಆಕ್ಷೇಪ ವ್ಯಾಪಕವಾಗಿದೆ.

ಅವೈಜ್ಞಾನಿಕವಾಗಿ ಚತುಷ್ಪಥಗೊಳಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರಿಗರನ್ನು ಭಯಾನಕ ಸಮಸ್ಯೆಯಾಗಿ ಕಾಡುತ್ತಿದೆ. ಪ್ಲೈಓವರ್ ಮುಗಿಸಲು ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯ ಐಆರ್‌ಬಿ ಗುತ್ತಿಗೆದಾರ ಕಂಪನಿ 12 ವರ್ಷ ತೆಗೆದುಕೊಂಡು ಜನರನ್ನು ಗೋಳುಹೊಯ್ದುಕೊಂಡದ್ದು ಹೇಳತೀರದು. ವಿವೇಚನಾರಹಿತವಾಗಿ ಕಟ್ಟಲಾಗಿರುವ ಪ್ಲೈಓವರ್‌ನಿಂದ ಕುಂದಾಪುರದ ಕಳೆಯೆ ಕೆಟ್ಟಿದ್ದು ಶೇ.50ರಷ್ಟು ವಹಿವಾಟು ಕಡಿಮೆಯಾಗಿದೆಯೆಂದು ವ್ಯವಹಾರಸ್ಥರು ಅಭಿಪ್ರಾಯಪಡುತ್ತಾರೆ. ಸರಿಯಾದ ಸರ್ವಿಸ್ ರಸ್ತೆಗಳಿಲ್ಲದೆ ನಿತ್ಯ ನರಬಲಿಯಾಗುತ್ತಿದೆ. ರಸ್ತೆ ಸುಂಕ ವಸೂಲಿ ಹೆಸರಲ್ಲಿ ಹಗಲು ದರೋಡೆಯಾಗುತ್ತಿದೆ. ಉಡುಪಿ ಆರ್‌ಟಿಓ ಕಚೇರಿಗೆ ದೊಡ್ಡ ಆದಾಯವಿರುವುದೆ ಕುಂದಾಪುರ ಭಾಗದಿಂದ. ಆದರೂ ಇಲ್ಲೊಂದು ವಾಹನ ನೋಂದಣಿ ಕಚೇರಿಯಿಲ್ಲ. ತಾಲೂಕಿಗೆ ಅವಶ್ಯವಾಗಿದ್ದ ಮಹಿಳಾ ಪೊಲೀಸ್ ಠಾಣೆ ಉಡುಪಿಗೆ ಸ್ಥಳಾಂತರಿಸಲಾಗಿದೆ. ಉದ್ಯೋಗ ವಿನಿಮಯ ಕಚೇರಿಯಿಲ್ಲ. ಬಡ ವಿದ್ಯಾರ್ಥಿಗಳ ಕೈಗೆಟುಕುವ ಸರಕಾರಿ ಪಿಯು, ಡಿಗ್ರಿ ಕಾಲೇಜುಗಳು ಬೇಕಾಗಿದೆ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿಗೆ ಒತ್ತಾಯ ಬಹಳ ಕಾಲದಿಂದ ಕೇಳಿಬರುತ್ತಿದೆ.

ಕಿರಣ್ ಕೊಡ್ಗಿ

ಕುಂದಾಪುರ ಸದಾ ಪ್ರವಾಸಿಗರನ್ನು ಸೆಳೆಯುವ ಚೇತೋಹಾರಿ ಪ್ರಕೃತಿ ಸೌಂದರ್ಯದ ತಾಣ. ಇಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಬಹುದಾಗಿದೆ. ತನ್ಮೂಲಕ ನಿರುದ್ಯೋಗಿ ಯುವ ಸಮುದಾಯ ಆರ್ಥಿಕ ಸ್ವಾವಲಂಬಿಯಾಗಲು ಅವಕಾಶವಾಗುತ್ತದೆ. ಶಾಸಕ ಮತ್ತು ಸಂಸದರು ಇತ್ತಕಡೆ ಗಮನ ಹರಿಸುತ್ತಿಲ್ಲವೆಂಬ ಅಸಮಾಧಾನ ಕುಂದಾಪುರದಲ್ಲಿದೆ. ವಿಪುಲವಾಗಿ ಉತ್ಪತ್ತಿಯಾಗುತ್ತಿರುವ ತೆಂಗಿನ ಕಾಯಿ ಆಧಾರಿತ ಆಹಾರ ತಯಾರಿಕಾ ಘಟಕ, ಕೈಗಾರಿಕೆ ಸ್ಥಾಪನೆಗೆ ಅನುಕೂಲ ಕಲ್ಪಿಸಬೇಕಾಗಿದೆ ಎಂದು ಜನರು ಹೇಳುತ್ತಾರೆ. ಮೀನು ಸಂಸ್ಕರಣಾ ಘಟಕ ಆದರೆ ಉದ್ಯೋಗ ಸೃಷ್ಟಿಯಾಗುತ್ತದೆಂಬ ನಿರೀಕ್ಷೆ ಬೆಸ್ತ ಸಮೂಹದ್ದು. ಇದೆಲ್ಲ ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದಾರೆ ಶಾಸಕ ಹಾಲಾಡಿ ಶೆಟ್ಟಿ, ಈ ಭಾಗದ ಸಂಸದೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಎಂಬ ಆರೋಪ ಕೇಳಿಬರುತ್ತಿದೆ.

ಪರ್ಯಾಯ ರಾಜಕಾರಣದ ಹಂಬಲ

ಕುಂದಾಪುರದ ರಾಜಕಾರಣ ನಿಂತ ನೀರಾಗಿದೆ; ಶಾಸಕ ಹಾಲಾಡಿ ಶೆಟ್ಟರ ಕೆಲಸಕ್ಕೆ ಬಾರದ ಒಳ್ಳೆತನ; ಶಾಪದಂತಾಯಾಗಿದೆ ಎಂಬ ಅಭಿಪ್ರಾಯ ಕೇತ್ರದಲ್ಲಿದೆ. ಪರ್ಯಾಯ ರಾಜಕಾರಣದ ಅನಿವಾರ್ಯತೆ ಕುಂದಾಪುರದಲ್ಲಿದೆ ಎನ್ನುವ ರಾಜಕೀಯ ವಿಮರ್ಶಕರು ಕಾಂಗ್ರೆಸ್‌ನ ಬದ್ಧತೆಯಿಲ್ಲದ ನಾಯಾಕಾಗ್ರೇಸರಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ನಾಯಕತ್ವ ಇಲ್ಲದೆ ಕಾಂಗ್ರೆಸ್ ಸೊರಗಿದೆಯಾದರೂ 40 ಸಾವಿರದಷ್ಟು ತಳಪಾಯದ ಮತಗಳು ಹಾಗೆಯೇ ಇವೆ. ಕಾಂಗ್ರೆಸ್ ಸಮರ್ಥ ಹುರಿಯಾಳನ್ನು ಈಗಲೆ ಆಯ್ಕೆ ಮಾಡಿ ಆಖಾಡಕ್ಕೆ ಬಿಟ್ಟರೆ ಪರ್ಯಾಯ ರಾಜಕಾರಣ ಶುರುವಾಗಿ ಹಾಲಾಡಿ ಶೆಟ್ಟರಿಗೆ ಪ್ರತಿಸ್ಪರ್ಧಿಗಳೆ ಇಲ್ಲವೆಂಬಂತ ವಾತಾವರಣ ಬದಲಾಗಬಹುದೆಂಬ ಚರ್ಚೆ ಕ್ಷೇತ್ರದಲ್ಲಾಗುತ್ತಿದೆ.

ಖುದ್ದು ಹಾಲಾಡಿ ಶೆಟ್ಟರೆ ತಾನು ಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; ತನ್ನ ಗುರು ಎ.ಜಿ.ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ತನ್ನ ಉತ್ತರಾಧಿಕಾರಿ ಆಗಲಿದ್ದಾರೆಂದು ಆಗಾಗ ಹೇಳುತ್ತಾ ಬಂದಿದ್ದಾರೆ. ಕಳೆದ ಬಾರಿಯೂ ಶೆಟ್ರು ಹೀಗೇ ಹೇಳಿದ್ದರು; ಅಷ್ಟು ಸುಲಭಕ್ಕೆ ಶೆಟ್ರು ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಅತ್ತ ಕಾಂಗ್ರೆಸ್‌ನಲ್ಲಿ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯೆ ಸಮರ್ಥ ಅಭ್ಯರ್ಥಿಯೆಂದು ಕಾರ್ಯಕರ್ತರು ಹೇಳುತ್ತಾರಾದರೂ ಆ ಧೈರ್ಯ ಪ್ರತಾಪ್‌ರಿಗಿಲ್ಲ ಎನ್ನಲಾಗುತ್ತಿದೆ. ಎಕ್ಸಲೆಂಟ್ ಕಾಲೇಜು ಮಾಲಿಕ ಮಹೇಶ್ ಹೆಗ್ಡೆ ಮತ್ತವರ ಸಹೋದರ ದಿನೇಶ್ ಹೆಗ್ಡೆ ಹೆಸರು ಕೇಳಿಬರುತ್ತಿದೆ. ಆದರೆ ಹಾಲಾಡಿ ಎದುರಿಸುವ ತಾಕತ್ತು ಇವರಿಗಿಲ್ಲವೆಂದು ಕಾಂಗ್ರೆಸಿನಲ್ಲಿ ಚರ್ಚೆಯಾಗುತ್ತಿದೆ.

ಕಳೆದ ಬಾರಿ ಸ್ಪರ್ಧೆ ನಡೆಸಿದ್ದ ಇಂಟೆಕ್‌ನ ರಾಕೇಶ್ ಮಲ್ಲಿ ಮತ್ತೆ ಬಂಟ್ವಾಳದಿಂದ ಬಂದು ಹೋರಾಡುವ ಯೋಜನೆಯಲ್ಲಿಲ್ಲ ಎನ್ನಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿ ಕ್ಯಾಂಡಿಡೇಟ್ ಎಂದರೆ ಮಲ್ಯಾಡಿ ಶಿವರಾಮ ಶೆಟ್ಟಿ ಎಂಬ ಲೆಕ್ಕಾಚಾರ ನಡೆದಿದೆ. 2013ರಲ್ಲಿ 40 ಸಾವಿರ ಮತ ಪಡೆದಿದ್ದ ಮಲ್ಯಾಡಿ ಶೆಟ್ಟಿ ಜನಬಳಕೆಯ ರಾಜಕಾರಣಿ ಎಂದು ಗುರುತಿಸಲ್ಪಟ್ಟಿದ್ದಾರೆ. ಹೆಚ್ಚುಕಮ್ಮಿ ಬಂಟರಷ್ಟೆ ಇರುವ ಬಿಲ್ಲವ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣ್ಣಕ್ಕಿಳಿಸಿದರೆ ಪರ್‍ಯಾಯ ರಾಜಕಾರಣದ ಟ್ರೆಂಡ್ ಸೆಟ್ ಆಗಬಹುದೆಂಬ ಮಾತೂ ಕೇಳಿಬರುತ್ತಿದೆ. ಪರ್‍ಯಾಯ ರಾಜಕಾರಣಕ್ಕೆ ಈ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಬದ್ಧತೆಯ ಸಿದ್ಧತೆ ಮಾಡಿಕೊಳ್ಳದಿದ್ದರೆ 2023ರ ಕುಂದಾಪುರ ಆಖಾಡದಲ್ಲಿ ಮತ್ತದೆ ನೀರಸ ಪ್ರದರ್ಶನ ಗ್ಯಾರಂಟಿಯೆಂಬ ಸಂಕೇತಗಳು ಬಿತ್ತರವಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...