Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

- Advertisement -
- Advertisement -

ಸಹ್ಯಾದ್ರಿಯ ತಪ್ಪಲಲ್ಲಿರುವ ಕಾರ್ಕಳ ಮತ್ತು ಹೆಬ್ರಿ ತಾಲೂಕು ಒಳಗೊಂಡಿರುವ ವಿಧಾನಸಭಾ ಕ್ಷೇತ್ರ ತುಳುನಾಡಿನ ಉತ್ತರ ಗಡಿ. ನಿತ್ಯ ಹರಿದ್ವರ್ಣ ಕಾಡು, ಕಣಿವೆ, ಜಲಪಾತ, ವೈವಿಧ್ಯಮಯ ಜೀವಸಂಕುಲ, ವಿಶಿಷ್ಟ ಬಸದಿಗಳ ಈ ಮಲೆನಾಡು ಪ್ರದೇಶ ಜೈನ ಕಾಶಿಯೆಂದೇ ಪ್ರಸಿದ್ಧಿ. ಜೈನ ರಾಜರ ಕಾಲದಲ್ಲಿ ’ಪಾಂಡ್ಯ ನಗರಿ’ಯೆಂದು ಕರೆಯಲ್ಪಡುತ್ತಿದ್ದ ಕಾರ್ಕಳದ ಸುತ್ತಲಿನಲ್ಲಿ ಕಡುಕಪ್ಪು ಬಂಡೆಗಳು ಹೇರಳವಾಗಿದೆ. ಹೀಗಾಗಿ ಕಾರ್ಕಳ ಕರಿಕಲ್ಲ್ (ಕರಿಕಲ್ಲು) ಎಂದು ಗುರುತಿಸಲ್ಪಡುತ್ತಿತ್ತಂತೆ. ಕಾಲಕ್ರಮೇಣ ತುಳುವಿನಲ್ಲಿ ’ಕಾರ್ಲ’ ಎಂದಾಯಿತು; ಕನ್ನಡದಲ್ಲಿ ’ಕಾರ್ಕಳ’ ಎಂದು ಹೆಸರಾಯಿತೆಂಬುದು ಭಾಷಾ ಶಾಸ್ತ್ರದ ತರ್ಕ.

ಮತ್ತೊಂದು ಮೂಲದ ಪ್ರಕಾರ ಕಾರ್ಕಳದ ಮಧ್ಯದಲ್ಲಿರುವ ಆನೆಕೆರೆ ಜೈನ ಅರಸರ ಆಳ್ವಿಕೆಯಲ್ಲಿ ’ಕರಿ ಕೊಳ’ ಎಂದು ಹೆಸರಾಗಿತ್ತು. ಜೈನ ದೊರೆಗಳ ಪರಿವಾರದ ಆನೆಗಳಿಗೆ ಸ್ನಾನ ಮಾಡಿಸುವ ಈ ಕರಿ (ಆನೆ) ಕೊಳದಿಂದಾಗಿ ಊರು ಕಾರ್ಕಳ ಎಂದಾಯಿತಂತೆ. ದಟ್ಟ ಕಾಡಿನಿಂದ ಆವೃತವಾಗಿರುವ ಸೀತಾ ನದಿ ದಂಡೆಯಲ್ಲಿರುವ ಹೆಬ್ರಿಗೆ ಆ ಹೆಸರು ಬರಲು ಅಲ್ಲಿದ್ದ ದೊಡ್ಡ ಭೇರಿ ಕಾರಣವೆಂದು, ಸ್ಥಳ ಪುರಾಣ ಹೇಳುತ್ತದೆ. ವಿಪತ್ತಿನ ಸಮಯದಲ್ಲಿ ಜನರನ್ನು ಎಚ್ಚರಿಸಲು ಬೃಹತ್ ಭೇರಿಯೊಂದನ್ನು ಹೆಬ್ರಿಯಲ್ಲಿ ಇಡಲಾಗಿತ್ತಂತೆ. ಹೀಗಾಗಿ ಆ ಊರು ’ಹೆಬ್ಬೇರಿ’ ಎನಿಸಿಕೊಂಡಿತಂತೆ. ದಿನಗಳೆದಂತೆ ಅದು ’ಹೆಬ್ರಿ’ ಆಯಿತೆಂಬುದು ಸ್ಥಳನಾಮ ಮಹಿಮೆಯ ವಾದ.

ಇತಿಹಾಸ-ಸಂಸ್ಕೃತಿ-ವ್ಯಾಪಾರ

ಬಹುಸಂಖ್ಯಾತ ತುಳುವರು ಕಾರ್ಲ ಎನ್ನುವ ಕಾರ್ಕಳವನ್ನು ಕೊಂಕಣಿಗರು ’ಕಾರ್ಕೋಳ್’ಅಂತಾರೆ. ಜೈನ ವಂಶಸ್ಥ ಬೈರರಸ ಆಳ್ವಿಕೆಯಲ್ಲಿ ಕಾರ್ಕಳ ಜೈನ ಕ್ಷೇತ್ರವಾಗಿ ಮಾರ್ಪಾಡಾಯಿತು. ಅರಸರು ಬಹಳಷ್ಟು ಬಸದಿ ಮತ್ತು ಕೆರೆಗಳನ್ನು ಕಟ್ಟಿಸಿದ್ದರು. 13 ಮೀಟರ್ ಎತ್ತರದ ಏಕಶಿಲೆಯ ಬಾಹುಬಲಿ (ಗೊಮ್ಮಟೇಶ್ವರ) ಮೂರ್ತಿ ಮತ್ತು ಸುಮಾರು 18 ಆಕರ್ಷಕ ಬಸದಿಗಳಿಂದ ’ಜೈನ ತೀರ್ಥ’ ಎಂದು ಕಾರ್ಕಳ ಖ್ಯಾತವಾಗಿದೆ. ಕಾರ್ಕಳದ ಬಾಹುಬಲಿ ಮೂರ್ತಿ ಕೆತ್ತಿದ್ದು ಬೀರ ಕಲ್ಕುಡ ಎಂಬ ಶಿಲ್ಪಿ; ಅವರ ತಂದೆ ಶಂಭು ಕಲ್ಕುಡ ಕರ್ನಾಟಕದಲ್ಲೇ ಅತಿ ಎತ್ತರದ ಏಕಶಿಲೆ ವಿಗ್ರಹ ಎನಿಸಿರುವ ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ತಯಾರಿಸಿದ್ದರು.
ತುಳುನಾಡಲ್ಲಿ ಕಲ್ಕುಡ ನಾಮಧೇಯದಿಂದ ದೈವಗಳ ಆರಾಧನೆ ನಡೆಯುತ್ತದೆಂದು ತುಳು ನಾಡ ಶಾಸನಗಳಲ್ಲಿ ಉಲ್ಲೇಖವಿದೆ. (ಶಂಭು ಕಲ್ಕುಡ ಐತಿಹ್ಯದ ಬಗ್ಗೆ ಹಲವು ಗೊಂದಲಗಳಿದ್ದು, ಅದು ಇತ್ತೀಚಿನ ದಿನಗಳಲ್ಲಿ ಸೇರ್ಪಡೆಯಾಗಿದ್ದು ಎಂಬ ವಾದ ಕೂಡ ಇದೆ.)

ಶುದ್ಧ ತುಳು ಸಂಸ್ಕೃತಿಯ ಕಾರ್ಕಳ ಮತ್ತು ಹೆಬ್ರಿಯಲ್ಲಿ ಭೂತಕೋಲ, ನೇಮ, ನಾಗಾರಾಧನೆ ಆಚರಣೆಯಿದೆ. ಯಕ್ಷಗಾನದ ಚೆಂಡೆ-ಮದ್ದಳೆ-ಗಾನ-ತಾಳ-ಕುಣಿತ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅತ್ತೂರಲ್ಲಿರುವ ಸೇಂಟ್ ಲಾರೆನ್ಸ್ ಶ್ರೈನ್ (ಅತ್ತೂರು ಇಗರ್ಜಿ) ಕ್ರೈಸ್ತರ ಪ್ರಸಿದ್ದ ಧಾರ್ಮಿಕ ಕ್ಷೇತ್ರ. ಇಲ್ಲಿ ಪ್ರತಿ ವರ್ಷ ಐದು ದಿನಗಳ ಕಾಲ ನಡೆಯುವ ಫೀಸ್ಟ್‌ಗೆ (ಚರ್ಚ್ ಹಬ್ಬ) ಸುತ್ತಲಿನ ಜಿಲ್ಲೆಗಳ ಎಲ್ಲ ಧರ್ಮದ ಸಾವಿರಾರು ಮಂದಿ ಬರುತ್ತಾರೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆಗಳಾದ ಕಂಬಳ, ಕೋರಿದ ಕಟ್ಟಾ (ಕೋಳಿ ಕಾಳಗ) ಇಲ್ಲಿಯ ಜನಪದ ಕ್ರಿಡೆಗಳು. ಕಾರ್ಕಳದಲ್ಲಿ ತುಳು ಪ್ರಮುಖ ಆಡು ಭಾಷೆಯಾದರೆ ಹೆಬ್ರಿ ಕಡೆಯಲ್ಲಿ ಕುಂದ ಕನ್ನಡದಲ್ಲಿ ಸಂವಹನ ನಡೆಯುತ್ತದೆ. ಸಮುದಾಯ ಭಾಷೆಗಳಾದ ಕೊಂಕಣಿ, ಮರಾಠಿ, ಬ್ಯಾರಿ, ಉರ್ದು, ಕೊರಗ ಭಾಷೆ ಕಾರ್ಕಳದಲ್ಲಿ ಕೇಳಿಬರುತ್ತದೆ.

ನಗರದಲ್ಲಿ ಕೊಂಕಣಿಗರು (ಜಿಎಸ್‌ಬಿ) ಗಣನೀಯವಾಗಿದ್ದರೆ, ಕಾಡಂಚಿನಲ್ಲಿ ಮಲೆಕುಡಿಯ ಎಂಬ ಶೋಷಿತ ಬುಡಕಟ್ಟು ಜನ ಸಮೂಹವಿದೆ. ಕೊರಗ ಜನಾಂಗವಿನ್ನೂ ಅಸ್ಪೃಶ್ಯತೆ, ಅಸಮಾನತೆ, ಅಸಹನೆಯ ಅನಿಷ್ಟ ಶೋಷಣೆಯ ಕಷ್ಟದಲ್ಲೆ ಕಾಲ ಕಳೆಯುತ್ತಿದೆ; ಕೊರಗರಿಗಾಗಿರುವ ಯೋಜನೆಗಳೇ ಅವರಿಗೆ ತಲುಪದಿರುವುದು ವಿಪರ್ಯಾಸ! ಕೊರಗರು, ಮಲೆ ಕುಡಿಯರಂತ ಧ್ವನಿಯಿಲ್ಲದ ಮಂದಿ ಶಾಸಕ-ಸಂಸದರಿಗೆ ಚುನಾವಣೆ ಹತ್ತಿರ ಬಂದಾಗಷ್ಟೆ ನೆನಪಾಗುತ್ತಾರೆಂಬುದು ಸಾಮಾನ್ಯ ಅಭಿಪ್ರಾಯ. ಹಿಂದು-ಮುಸ್ಲಿಮ್-ಕ್ರೈಸ್ತ-ಜೈನ ಜನಾಂಗದ ಸಮರಸದ ತೋಟದಂತಿದ್ದ ಕಾರ್ಕಳ ಕೌ ಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯ ಆರ್ಭಟಕ್ಕೆ ಕಂಗೆಟ್ಟು ಕೂತಿದೆ. ಗೋ ರಕ್ಷಣೆಯ ನೆಪದಲ್ಲಿ ಮುಗ್ಧ ಮಲೆಕುಡಿಯ ಬುಡಕಟ್ಟಿನ ಕುಟುಂಬಗಳ ಮೇಲೂ ಹಿಂದುತ್ವದ ಹಲ್ಲೆಗಳಾಗುತ್ತಿರುವುದು ಕಾರ್ಕಳದ ಭಯಾನಕ ರಾಜಕೀಯ, ಧಾರ್ಮಿಕ ಸ್ಥಿತಿ-ಗತಿ ಬಿಂಬಿಸುವಂತಿದೆಯೆಂದು ಸೌಹಾರ್ದತೆಯ ತುಡಿಯುವ ಮಂದಿ ಆತಂಕಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾರ್ಕಳ ಮತ್ತು ಹೆಬ್ರಿಯಲ್ಲಿ ಕೃಷಿ ಹಾಗೂ ಕೃಷಿ ಆಧಾರಿತ ಕೆಲವು ಕೈಗಾರಿಕೆ ಬಿಟ್ಟರೆ ಯುವ ಸಮೂಹದ ದುಡಿಯುವ ಕೈಗಳಿಗೆ ಕೆಲಸ ಕೊಡುವ ಯಾವ ನೀರಾವರಿ ಯೋಜನೆ ಅಥವಾ ಉಳಿದ ಯೋಜನೆ ಮತ್ತು ಉದ್ಯಮವಿಲ್ಲ. ಶೇ.60ರಷ್ಟು ಜನರು ವ್ಯವಸಾಯೇತರ ಕಸುಬಿನಿಂದ ಜೀವನ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವಹಿವಾಟೇ ಕಾರ್ಕಳದ ಆರ್ಥಿಕತೆಯ ಜೀವಾಳ. ಕಾರ್ಕಳದಲ್ಲಿ ಉಕ್ಕಿನ ಕಾರ್ಖಾನೆಯಿದೆಯಾದರೂ ಇದರಿಂದ
ದೊಡ್ಡಮಟ್ಟದ ಉದ್ಯೋಗಾವಕಾಶವೇನಿಲ್ಲ. ಎರಡೂ ತಾಲೂಕಲ್ಲಿ ಅಕ್ಕಿ ಗಿರಣಿಗಳು, ತೆಂಗಿನೆಣ್ಣೆ ಮಿಲ್‌ಗಳು, ಗೋಡಂಬಿ ಸಂಸ್ಕರಣಾ ಘಟಕಗಳು, ಪಶು ಆಹಾರ ತಯಾರಿಕೆ ಕೇಂದ್ರ ಒಂದಿಷ್ಟು ಉದ್ಯೋಗಾವಕಾಶ ಕಲ್ಪಿಸಿದೆ. ಹೆಬ್ರಿ ಭಾಗದಲ್ಲಿ ಭತ್ತ ಬೇಯಿಸಿ ಕುಚ್ಚಲಕ್ಕಿ ತಯಾರಿಸುವ ಮಿಲ್‌ಗಳಿರುವುದು ವಿಶೇಷ. ಭತ್ತ, ಅಡಿಕೆ, ತೆಂಗು, ಗೋಡಂಬಿ, ರಬ್ಬರ್ ಬೆಳೆಯಲಾಗುತ್ತಿದೆ. ಯುವಕರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದರೂ ಇವರಿಗೆ ಇಲ್ಲಿಯೆ ಬದುಕು ಸಾಗಿಸಲು ಅನುಕೂಲ ಮಾಡಿಕೊಡುವ ಯೋಜನೆ ತರುವ ಬಗ್ಗೆ ಆಳುವ ಮಂದಿ ಪ್ರಯತ್ನಿಸುತ್ತಿಲ್ಲ ಎಂಬ ಆಕ್ರೋಶ ಕ್ಷೇತ್ರದಲ್ಲಿದೆ.

ರಾಜಕಾರಣದ ಕಾಲಘಟ್ಟ

ಉಡುಪಿ ಜಿಲ್ಲೆಯ ಘಟ್ಟದ ಮೇಲಿರುವ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿ ಬಿರುಬೀಸಾಗಿ ಸಾಗಿದೆ. ತೀರಾ ಸಣ್ಣ ಜಾತಿಯ (ದೇವಾಡಿಗ) ಎಂ.ವೀರಪ್ಪ ಮೊಯ್ಲಿಯವರು ಸತತ ಆರು ಬಾರಿ ಮತ್ತು ಕ್ಷೌರಿಕ ಸಮುದಾಯದ ಗೋಪಾಲಭಾಂಡಾರಿ ಎರಡು ಸಲ ಗೆದ್ದಿದ್ದ ಕಾರ್ಕಳ-ಹೆಬ್ರಿ ಇವತ್ತು ಪ್ರಬಲ ಜಾತಿಯ- ಬಲಾಢ್ಯ ಧರ್ಮದ ಕಟ್ಟರ್ ಹಿಂದುತ್ವವಾದಿಯ ಕಪಿಮುಷ್ಠಿಗೆ ಸಿಲುಕಿರುವುದು ವಿಪರ್ಯಾಸವೆಂದು ಈ ಕ್ಷೇತ್ರದ ನಾಲ್ಕೈದು ದಶಕದ ರಾಜಕಾರಣವನ್ನು ಹತ್ತಿರದಿಂದ ಕಂಡವರು ಆತಂಕದಿಂದ ಹೇಳುತ್ತಾರೆ! ಹತ್ತಿರದ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ-ದತ್ತಪೀಠ ವಿವಾದದ ಮುಂಚೂಣಿಯಲ್ಲಿ ನಿಂತು ಸಂಘಪರಿವಾರದ ಹಿರಿಯರ ಕೃಪಾಶೀರ್ವಾದ ಪಡೆದಿದ್ದ ವಿ.ಸುನೀಲ್‌ಕುಮಾರ್ ತಾನು ಕಾರ್ಕಳದ ಮಣ್ಣಿನ ಮಗ-ಬಹುಸಂಖ್ಯಾತ ಬಿಲ್ಲವರ ಮನೆಮಗನೆಂದು ಹೇಳುತ್ತ 2004ರಲ್ಲಿ ಬಿಜೆಪಿ ಕ್ಯಾಂಡಿಡೇಟಾದ ಘಳಿಗೆಯಿಂದ ಜಾತಿ-ಧರ್ಮದ ವಿಷ ಹೆಚ್ಚು ಏರಿರದ ಕಾರ್ಕಳ-ಹೆಬ್ರಿ ರಾಜಕಾರಣಕ್ಕೆ ಕಡುಕೇಸರಿಯ ಲೇಪವಾಯಿತೆಂಬುದು ಸಾಮಾನ್ಯವಾಗಿ ವ್ಯಕ್ತವಾಗುವ ಅಭಿಪ್ರಾಯ.

ಎಂ.ವೀರಪ್ಪ ಮೊಯ್ಲಿ

2000 ಮತ್ತು 2010ರ ದಶಕದಲ್ಲಿ ಸೀತಾ ನದಿ ದಂಡೆಯ ಕಾಡು-ಮೇಡುಗಳಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆಂದು ಹೆಚ್ಚು ಸುದ್ದಿಯಾಗಿದ್ದರೆ ಕಾರ್ಕಳ-ಹೆಬ್ರಿಯಲ್ಲೀಗ ಮತ ಧ್ರುವೀಕರಣದ ಹಿಂಸಾತ್ಮಕ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಕಳೆದ ಎಲೆಕ್ಷನ್ ಹೊತ್ತಲ್ಲಿ 1,81,031 ಮತದಾರರಿದ್ದ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಂದಾಜಿನಂತೆ 45 ಸಾವಿರದಷ್ಟು ಬಿಲ್ಲವರು, 40 ಸಾವಿರ ಬಂಟರು, 28 ಸಾವಿರ ಅಲ್ಪಸಂಖ್ಯಾತರು (ಕ್ರೈಸ್ತರು 12 ಸಾವಿರ, ಮುಸ್ಲಿಮರು 10 ಸಾವಿರ ಮತ್ತು ಜೈನರು 6ಸಾವಿರ], ಬ್ರಾಹ್ಮಣರು 10ಸಾವಿರ (ಕೊಂಕಣಿಗಳು 6 ಸಾವಿರ, ಬ್ರಾಹ್ಮಣರು 4 ಸಾವಿರ), ದೇವಾಡಿಗ, ಕುಲಾಲ, ವಿಶ್ವಕರ್ಮ ಮುಂತಾದ ಹಿಂದುಳಿದ ವರ್ಗದವರು 40 ಸಾವಿರ ಮತ್ತು 10ರಿಂದ 12 ಸಾವಿರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮತದಾರರಿದ್ದಾರೆ. 1952ರಲ್ಲಿ ಬಂಟ ಸಮುದಾಯದ ಎ.ಬಿ.ಶೆಟ್ಟಿ ಕಾರ್ಕಳದ ಪ್ರಥಮ ಶಾಸಕರಾಗಿದ್ದರು. 1957ರಲ್ಲಿ ಗೆಲುವು ಕಂಡಿದ್ದ ಡಾ.ಕೆ.ಕೆ.ಹೆಗ್ಡೆ, ಬಿ.ಡಿ.ಜತ್ತಿ ಮಂತ್ರಿ ಮಂಡಲದಲ್ಲಿ ಆರೋಗ್ಯ ಮಂತ್ರಿಯೂ ಆಗಿದ್ದರು. ಬಿಲ್ಲವ ಜನಾಂಗದ ದಯಾನಂದ ಕಲ್ಲೆ ಪಿಎಸ್‌ಪಿಯಿಂದ 1962ರಲ್ಲಿ ಶಾಸನಸಭೆಗೆ ಆಯ್ಕೆಯಾಗಿದ್ದರು. 1967ರ ಚುನಾವಣೆಯಲ್ಲಿ ಜನಸಂಘದ ಬೋಳ ರಘುರಾಮ ಶೆಟ್ಟಿ ಗೆದ್ದಿದ್ದರು.

ಎಲ್‌ಐಸಿ ಮೊಯ್ಲಿ-ಸಿಎಂ ಮೊಯ್ಲಿ

ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರಂಥ ಉನ್ನತ ಹುದ್ದೆಗೇರಿದ್ದ ಮೂಡಬಿದರೆ ಬಳಿಯ ಮಾರ್ಪಾಡಿಯ ವೀರಪ್ಪ ಮೊಯ್ಲಿ ಕಾರ್ಕಳದಿಂದ ಸತತ ಆರು ಬಾರಿ ಶಾಸಕರಾಗಿದ್ದರು. ಎಲ್‌ಐಸಿಯಲ್ಲಿ ಕಾರಕೂನರಾಗಿದ್ದ ಬಡ ದೇವಾಡಿಗರ ಕುಟುಂಬದ ಮೊಯ್ಲಿ ಆ ಬಳಿಕ ಕಾನೂನು ವ್ಯಾಸಂಗ ಮಾಡಿಕೊಂಡು ಅಂದು ಖ್ಯಾತ ವಕೀಲರಾಗಿದ್ದ ಶಿರ್ತಾಡಿ ವಿಲಿಯಂ ಪಿಂಟೋ ಬಳಿ ಜೂನಿಯರ್ ಆಗಿ ಸೇರಿಕೊಂಡಿದ್ದರು. ದೇವಸ್ಥಾನಗಳ ಉತ್ಸವ, ಮದುವೆ, ಮುಂಜಿಯಂಥ ಕಾರ್ಯಕ್ರಮಗಳಲ್ಲಿ ವಾಲಗ ಊದುವ ಕಸುಬಿನ ದೇವಾಡಿಗರ ಹುಡುಗ ವೀರಪ್ಪರ ನೊಂದವರ-ಶೋಷಿತರ ಪರ ನಿಲುವು ದೇವರಾಜ ಅರಸರ ಗಮನ ಸೆಳೆದಿತ್ತು. ಹಿಂದುಳಿದ ವರ್ಗದವರನ್ನು ಮುನ್ನಲೆಗೆ ತರುವ ಅರಸರ ’ಸಂಗ್ರಾಮ’ದಲ್ಲಿ ಮೊಯ್ಲಿಗೆ 1972ರಲ್ಲಿ ಕಾರ್ಕಳದ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಅವಕಾಶ ಸಿಕ್ಕಿತು. ಸುಂದರ್ ಹೆಗ್ಡೆವರನ್ನು ಸೋಲಿಸಿ ಮೊಯ್ಲಿ ಶಾಸನಸಭೆ ಪ್ರವೇಶಿಸಿದರು. ದೇವರಾಜ ಅರಸು ಮೊಯ್ಲಿಯವರನ್ನು ಸಣ್ಣ ಕೈಗಾರಿಕೆ ಮಂತ್ರಿ ಮಾಡಿದ್ದರು. 1978ರ ಚುನಾವಣೆಯಲ್ಲಿ ಜನತಾ ಪಕ್ಷದ ಎಂ.ಕೆ.ವಿಜಯಕುಮಾರ್‌ರನ್ನು 8,956 ಮತದಂತರದಿಂದ ಸೋಲಿಸಿದ ಮೊಯ್ಲಿಯನ್ನು ಅರಸು ಮತ್ತೆ ಮಂತ್ರಿ ಮಾಡಿದ್ದರು. ಗುಂಡೂರಾವ್ ಸರಕಾರದಲ್ಲಿ ಮೊಯ್ಲಿ ಹಣಕಾಸು ಇಲಾಖೆಯ ಮಂತ್ರಿಯಾಗಿದ್ದರು.

1983ರಲ್ಲಿ ಬಿಜೆಪಿ ಹುರಿಯಾಳಾಗಿದ್ದ ಜನಸಂಘ ಮೂಲದ ಎಂ.ಕೆ.ವಿಜಯಕುಮಾರ್‌ರನ್ನು ಮೊಯ್ಲಿ 5,904 ಮತದಂತರದಿಂದ ಸೋಲಿಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಜನತಾರಂಗದ ರಾಮಕೃಷ್ಣ ಹೆಗಡೆ ಸರಕಾರ ರಚನೆಯಾಗಿತ್ತು. ಮೊಯ್ಲಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದುಬಂತು. 1985ರ ಮಧ್ಯಂತರ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಜೈನ ಸಮುದಾಯದ ವಿಜಯಕುಮಾರ್‌ರನ್ನು ಮಣಿಸಿ ನಾಲ್ಕನೆ ಬಾರಿ ಶಾಸಕರಾದರು. 1989ರ ಎಲೆಕ್ಷನ್‌ನಲ್ಲಿ ವಿಜಯಕುಮಾರ್ ಜನತಾ ದಳದ ಉಮೇದುವಾರರಾಗಿದ್ದರು. 18,780 ಮತಗಳ ದೊಡ್ಡ ಅಂತರದಿಂದ ಗೆದ್ದ ಮೊಯ್ಲಿ ವೀರೇಂದ್ರ ಪಾಟೀಲ್ ಮತ್ತು ಬಂಗಾರಪ್ಪ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಬಂಗಾರಪ್ಪ ಅಂದಿನ ಪಿಎಂ ನರಸಿಂಹರಾವ್ ವಿರುದ್ಧ ಬಂಡೆದ್ದಾಗ ಮೊಯ್ಲಿಗೆ ಸಿಎಂ ಆಗುವ ಅವಕಾಶ (1992-1994) ಸಿಕ್ಕಿತು.

ಸತತ ನಾಲ್ಕು ಬಾರಿ ಮೊಯ್ಲಿ ಎದುರು ಸೋತ ವಿಜಯಕುಮಾರ್ 1994ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಪಿ.ಶೆಣೈಗೂ ಮೊಯ್ಲಿಯನ್ನು ಜಯಿಸಲಾಗಲಿಲ್ಲ. ಆನಂತರ ಮೊಯ್ಲಿ ಪಾರ್ಲಿಮೆಂಟಿಗೆ ಹೋಗುವ ಪ್ರಯತ್ನ ನಡೆಸಿದ್ದರು. ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಚಿಕ್ಕಬಳ್ಳಾಪುರದಿಂದ ಪಾರ್ಲಿಮೆಂಟಿಗೆ ಎರಡು ಬಾರಿ ಆಯ್ಕೆಯಾದ ಮೊಯ್ಲಿ ಮೂರನೆ ಪ್ರಯತ್ನದಲ್ಲಿ ಎಡವಿದರು. ಸಾಹಿತಿ, ಬುದ್ಧಿಜೀವಿ, ಆರ್ಥಿಕ ಪರಿಸ್ಥಿತಿ ವಿಶ್ಲೇಷಕ, ಇಂಗ್ಲಿಷ್-ಕನ್ನಡ ಪತ್ರಿಕೆಗಳ ಅಂಕಣಕಾರರೆಂದು ಗುರುತಿಸಲ್ಪಟ್ಟಿರುವ ಮೊಯ್ಲಿ ಒಕ್ಕೂಟ ಸರಕಾರದಲ್ಲೂ ಕ್ಯಾಬಿನೆಟ್ ಮಂತ್ರಿಯಾಗಿದ್ದರು. ಮೊಯ್ಲಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಾಗ ಕಾರ್ಕಳ ಕ್ಷೇತ್ರಕ್ಕೆ ತಮ್ಮ ಪಟ್ಟ ಶಿಷ್ಯ ಗೋಪಾಲಭಂಡಾರಿಯನ್ನು ಉತ್ತರಾಧಿಕಾರಿಯಾಗಿ ಮಾಡಿದ್ದರು. ಮಂತ್ರಿ, ಮುಖ್ಯಮಂತ್ರಿ ಮೊಯ್ಲಿಯ ಶಾಸಕ ಕ್ಷೇತ್ರದ ಉಸ್ತುವಾರಿಯಾಗಿ, ಜಿಪಂ ಸದಸ್ಯನಾಗಿ ಜನಾನುರಾಗಿಯಾಗಿದ್ದ ಕೆಲಸಗಾರ-ಸರಳ-ಸಜ್ಜನ ಗೋಪಾಲ ಭಂಡಾರಿ 1999ರಲ್ಲಿ ಬಿಜೆಪಿಯ ಕೆ.ಪಿ.ಶೆಣೈರನ್ನು 20,734 ಮತದಂತರದಿಂದ ಮಣಿಸಿ ಶಾಸಕರಾಗಿದ್ದರು.

ಭಜರಂಗ ದಳದ ಸುನೀಲ್ ಆರಂಗೇಟ್ರಂ

2004ರ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಕ್ಯಾಂಡಿಡೇಟಾಗಿ ಕಾರ್ಕಳಕ್ಕೆ ಸುನೀಲ್‌ಕುಮಾರ್ ಬರುವ ಮೊದಲು ಯಾರಿಗೂ ಅವರ ಪರಿಚಯವೆ ಇರಲಿಲ್ಲ. ಸುನೀಲ್ ಚಿಕ್ಕಮಗಳೂರು ಭಾಗದಲ್ಲಿ ಸಿ.ಟಿ.ರವಿ ಜತೆಗೂಡಿ ಭಜರಂಗ ದಳದ ’ಆಂದೋಲನ’ ನಡೆಸಿ ಚಲಾವಣೆಯಲ್ಲಿದ್ದರು. ಕಾರ್ಕಳದಲ್ಲಿ ಬಹುಸಂಖ್ಯಾತ ಬಿಲ್ಲವರ ಹುಡುಗನೆಂದು ಪರಿಚಯಿಸಿಕೊಂಡು ಧರ್ಮಕಾರಣ ಓಟ್‌ಬ್ಯಾಂಕ್ ದಾಳವನ್ನು ನಾಜೂಕಾಗಿ ಸುನೀಲ್ ಉರುಳಿಸಿದರೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಶಾಸಕ, ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್‌ಕುಮಾರ್ ತಂದೆ ಬ್ರಾಹ್ಮಣ; ತಾಯಿ ಕಾರ್ಕಳದ ಬಿಲ್ಲವ ಸಮುದಾಯದವರು. ’ಕಾರ್ಕಳದಲ್ಲಿ ತಾನು ಬಿಲ್ಲವನೆಂದು ಹೇಳಿಕೊಳ್ಳುವ ಸುನೀಲ್ ಸಂಘಪರಿವಾರದಲ್ಲಿ ಬ್ರಾಹ್ಮಣನೆಂದು ಪರಿಚಯಿಸಿಕೊಂಡಿರುವುದು ವಿಪರ್ಯಾಸ’ ಎಂದು ಹೆಸರು ಹೇಳಲಿಚ್ಛಸದ ಕಾಂಗ್ರೆಸ್‌ನ ಯುವ ಮುಖಂಡರೊಬ್ಬರು ’ನ್ಯಾಯಪಥ’ದ ಮುಂದೆ ವಾದ ಮಂಡಿಸಿದರು. ಸುನೀಲ್ ರಾಜಕಾರಣ ಆರಂಭಿಸಿದ ನಂತರ ಕಾರ್ಕಳ ಜಾತಿ ಮತ್ತು ಧರ್ಮದ ಸ್ಪಿರಿಟ್‌ನ ಆಖಾಡವಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಗೋಪಾಲಭಂಡಾರಿ

ಮೊದಲ ಪ್ರಯತ್ನದಲ್ಲೆ ಸುನೀಲ್ ಕಾಂಗ್ರೆಸ್‌ನ ಶಾಸಕರಾಗಿದ್ದ ಜನಪರ ಕೆಲಸಗಾರ ಗೋಪಾಲ ಭಂಡಾರಿಯವರನ್ನು 9,795 ಮತದಿಂದ ಸೋಲಿಸಿದರು. ಹಿಂದುತ್ವದ ರಾಜಕಾರಣಕ್ಕೆ ಅಭಿವೃದ್ಧಿ, ಮಾನವೀಯತೆಯ ಹಂಗಿಲ್ಲವೆಂಬುದನ್ನು ಆ ಚುನಾವಣೆ ಸಾಬೀತುಪಡಿಸಿತ್ತೆಂದು ಕಾರ್ಕಳದ ಪ್ರಜ್ಞಾವಂತರು ಹೇಳುತ್ತಾರೆ. 2008ರಲ್ಲಿ ಮತದಾರರು ಸುನೀಲ್‌ಕುಮಾರ್‌ರನ್ನು ತಿರಸ್ಕರಿಸಿ ಗೋಪಾಲ ಭಂಡಾರಿಯವರನ್ನು ಮತ್ತೆ ಆಯ್ಕೆ ಮಾಡಿಕೊಂಡಿದ್ದರು. ಆದರೆ 2013ರ ಚುನಾವಣೆಯಲ್ಲಿ ಅತಿಸಣ್ಣ ಕೆಳಸ್ತರದ ಕ್ಷೌರಿಕ
ಜಾತಿಯವರಾಗಿದ್ದ ಗೋಪಾಲ ಭಂಡಾರಿಯವರಿಗೆ ಚುನಾವಣೆಗೆ ಬೇಕಾದ ಸಂಪನ್ಮೂಲ
ಕ್ರೋಢಿಕರಿಸಲಾಗದ ಕಾರಣ ಮತ್ತು ಬಿಜೆಪಿಯ ಸುನೀಲ್‌ಕುಮಾರ್‌ರ ಪ್ರಬಲ ಬಿಲ್ಲವ ಜಾತಿಕಾರಣ ಮತ್ತು ಧರ್ಮಕಾರಣದ ಅಬ್ಬರ ಎದುರಿಸಲಾಗದೆ ಸೋತರೆಂದು ಜನರು ಹೇಳುತ್ತಾರೆ.

ಸುನೀಲ್ ಸಣ್ಣ ಅಂತರದಲ್ಲಿ (4,254) ಬಚಾವಾಗಿದ್ದರು. 2018ರ ಅಸೆಂಬ್ಲಿ ಎಲೆಕ್ಷನ್ ಸಂದರ್ಭದಲ್ಲಾದ ಹೊನ್ನಾವರದ ಹುಡುಗ ಪರೇಶ್ ಮೇಸ್ತನ ಆಕಸ್ಮಿಕ ಸಾವು ಮತ್ತು ಸುರತ್ಕಲ್‌ನ ಮರಾಠ ಯುವಕ ದೀಪಕ್ ರಾವ್‌ನ ಕೊಲೆಯಿಂದಾದ ಮತ ಧ್ರುವೀಕರಣದ ಹುಚ್ಚು ಮಾರುತಕ್ಕೆ ಗೋಪಾಲ ಭಂಡಾರಿ ತತ್ತರಿಸಿಹೋದರು! ಸೋತರೂ ಜನರ ನಡುವೆಯೆ ಇರುತ್ತಿದ್ದ ಭಂಡಾರಿ ಎರಡು ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾದರು. ಭಂಡಾರಿ ಸಾವಿನ ಬಳಿಕ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾದ ನಿರ್ವಾತ ಹಾಗೆಯೇ ಉಳಿದಿದೆ.

ಕ್ಷೇತ್ರದ ಕಷ್ಟ-ಇಷ್ಟ

ಸಮುದ್ರದ ನೆಂಟಸ್ತನ, ಉಪ್ಪಿಗೆ ಬರಗಾಲ ಎನ್ನುವಂತಾಗಿದೆ ಕಾರ್ಕಳ-ಹೆಬ್ರಿಯ ಪ್ರಗತಿ-ಅಭಿವೃದ್ಧಿಯ ಅವಸ್ಥೆ. ಸತತ 22 ವರ್ಷ ಕಾರ್ಕಳವನ್ನು ಶಾಸನಸಭೆಯಲ್ಲಿ ಪ್ರತಿನಿಧಿಸಿದ್ದ ವೀರಪ್ಪ ಮೊಯ್ಲಿ ಸುದೀರ್ಘ ಕಾಲ ಮಂತ್ರಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಕೇಂದ್ರ ಸಚಿವನಂಥ ಅಧಿಕಾರದ ಆಯಕಟ್ಟಿನ ಜಾಗದಲ್ಲಿದ್ದರು. ಈಗ ಬಿಜೆಪಿ ಸರಕಾರ ಮತ್ತು ಸಂಘದಲ್ಲಿ ಪ್ರಭಾವಶಾಲಿಯಾಗಿರುವ ಮಂತ್ರಿ ಸುನೀಲ್‌ಕುಮಾರ್ ಮೂರು ಸಲ ಶಾಸಕರಾಗಿದ್ದಾರೆ. ಆದರೆ ಕಾರ್ಕಳಕ್ಕೇನು ಭಾಗ್ಯ ಬಂದಿಲ್ಲ; ಮಾಮೂಲಿ ಬಜೆಟ್ ಯೋಜನೆಗಳನ್ನು ಬಿಟ್ಟರೆ ಬೊಟ್ಟು ಮಾಡಿ ತೋರಿಸುವಂಥ ಕೆಲಸ-ಕಾಮಗಾರಿ ಮೊಯ್ಲಿ ಅಥವಾ ಸುನೀಲ್‌ಕುಮಾರ್‌ರಿಂದ ಆಗಿಲ್ಲವೆಂದು ಜನರು ಬೇಸರದಿಂದ ಹೇಳುತ್ತಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡುವ ನೀರಾವರಿ ಮತ್ತು ಕೈಗಾರಿಕಾ ಯೋಜನೆ, ಉನ್ನತ ಶಿಕ್ಷಣದ ಸವಲತ್ತು ಕ್ಷೇತ್ರಕ್ಕೆ ಜರೂರ್ ಬೇಕಾಗಿದೆಯೆಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿದೆ.

ಕಾರ್ಕಳ-ಹೆಬ್ರಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಕೊಡ್ಲ ತೀರ್ಥ, ಒನಕೆಯಂತೆ ಕಾಣಿಸುವ ಒನಕೆ ಜಲಪಾತ, ವಾಸ್ತುಶಿಲ್ಪದ ಹಿರಿಮೆಯಿಂದ ಪ್ರಸಿದ್ಧವಾಗಿರುವ ವರಂಗದ 14 ಎಕರೆ ಕೆರೆಯಲ್ಲಿರುವ ನಕ್ಷತ್ರದಾಕಾರದ ಚತುರ್ಮುಖ ಬಸದಿ, ಕಬ್ಬಿನಾಲೆಯ ಪ್ರಕೃತಿ ಸೌಂದರ್ಯ, ರಾಮಸಮುದ್ರದಂತ ಜನಾಕರ್ಷಕ ತಾಣಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಟ್ಟರೆ ಸ್ಥಳೀಯವಾಗಿ ಒಂದಿಷ್ಟು ಉದ್ಯೋಗ ಸೃಷ್ಟಿಯಾಗುತ್ತಿತ್ತೆಂದು ಯುವಕರು ಹೇಳುತ್ತಾರೆ. ಕಾರ್ಕಳದಲ್ಲಿ ಸಿಟಿ ಬಸ್ ವ್ಯವಸ್ಥೆಯಿಲ್ಲ. ಕೆಎಸ್‌ಆರ್‌ಟಿಸಿ ಡಿಪೋ ಇಲ್ಲ. ಕುಡಿಯುವ ನೀರಿಗೆ ಹಲವೆಡೆ ಬವಣೆಯಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲವಾಗಿರುವ ಗ್ರಾಮಗಳಿವೆ; ಕನಿಷ್ಟ ಮೂಲಸೌಕರ್ಯಗಳಿಲ್ಲದ ಗುಡ್ಡಗಾಡು ಹಳ್ಳಿಗಳೂ ಇವೆ.

ಹರ್ಷ್ ಮೊಯ್ಲಿ

ಮೆಡಿಕಲ್ ಕಾಲೇಜು ಬೇಡಿಕೆ ಬಹಳ ದಿನಗಳಿಂದ ಕೇಳಿಬರುತ್ತಿದೆ. ಸರಕಾರಿ ಹೈಸ್ಕೂಲ್, ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಇಲ್ಲಿರುವ ಹೆಸರುವಾಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸ್ಥಳೀಯ ಪ್ರತಿಭಾವಂತರಿಗೆ
ಲಾಭವೇನಿಲ್ಲವೆಂಬ ಆಕ್ಷೇಪ ಕೇಳಿಬರುತ್ತಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಸೂರಿಲ್ಲದವರಿಗೆ
ನಿವೇಶನ ಕೊಡಲಾಗುತ್ತಿಲ್ಲ. ಕಾಡಿನಂಚಿನಲ್ಲಿ ಇರುವ ಬುಡಕಟ್ಟು ಮಂದಿಗೆ ಹಕ್ಕುಪತ್ರ ಸಿಗುತ್ತಿಲ್ಲ. ನಾಲ್ಕು ವರ್ಷದ ಹಿಂದೆ ಹೆಬ್ರಿ ಮತ್ತದರ ಸುತ್ತಲಿನ ಹಳ್ಳಿಗಳನ್ನು ಕಾರ್ಕಳ ತಾಲೂಕಿಂದ ಬೇರ್ಪಡಿಸಿ ಪ್ರತ್ಯೇಕ ತಾಲೂಕೆಂದು ಘೋಷಿಸಲಾಗಿದೆಯಾದರು ಜನರ ಪರದಾಟವಿನ್ನೂ ತಪ್ಪಿಲ್ಲ. ಮೊಯ್ಲಿ ಒತ್ತಾಸೆಯಿಂದ ತಾಲೂಕೆನಿಸಿಕೊಂಡಿರುವ ಹೆಬ್ರಿಗೆ ಸರಕಾರಿ ಕಚೇರಿಗಳು ಮತ್ತಿತರ ಸೌಲಭ್ಯ ಬರದೆ ಪೂರ್ಣ ಪ್ರಮಾಣದ ತಾಲೂಕಾಗಿ ರೂಪುಗೊಂಡಿಲ್ಲ. ಈ ಅನಿವಾರ್ಯ-ಅವಶ್ಯ ಕೆಲಸಗಳನ್ನು ಕಡೆಗಣಿಸಿ ಶಾಸಕರು-ಸಂಸದರು ಕಮಿಷನ್ ಬರುವ ಕಾಂಕ್ರೀಟ್ ಕಾಮಗಾರಿ, ರಸ್ತೆ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆಂದು ಜನರು ಆರೋಪಿಸುತ್ತಾರೆ.

ಭಾವನಾತ್ಮಕ ಸಂಗತಿಗಳನ್ನು ಬಳಸಿಕೊಂಡು ಅಬ್ಬರದ ಪ್ರಚಾರ ಪಡೆಯುವ ಶಾಸಕ ಸುನೀಲ್‌ಕುಮಾರ್ ಮತ ಧ್ರುವೀಕರಣ ಆಗುವಂಥ ಕೆಲಸ, ಕಾರ್ಯಕ್ರಮಗಳನ್ನು ಹೆಚ್ಚು ಮಾಡುತ್ತಾರೆಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆ ಕನ್ನಡ ಸಂಸ್ಕೃತಿ ಮಂತ್ರಿ ಸುನೀಲ್ ’ಕಾರ್ಕಳ ಉತ್ಸವ’ ಅದ್ಧೂರಿಯಾಗಿ ಹಮ್ಮಿಕೊಂಡಿದ್ದು ವ್ಯಾಪಕ ಟೀಕೆಗೀಡಾಗಿತ್ತು. ಆರ್ಥಿಕ ಹಿಂಜರಿತ, ವಿಪರೀತ ಬೆಲೆಯೇರಿಕೆ ಮತ್ತು ಕೊರೊನಾ ಲಾಕ್‌ಡೌನ್‌ನಿಂದಾದ ಕಷ್ಟ-ನಷ್ಟದಿಂದ ಜರ್ಜರಿತರಾಗಿರುವ ಜನರಿಗೆ ಅಗತ್ಯವೇ ಇಲ್ಲದ ಹಬ್ಬ ಇದಾಗಿತ್ತೆಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ಒಂದು ಅಂದಾಜಿನಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ನಡೆದ ಈ ಉತ್ಸವ 20 ಕೋಟಿ ಬಜೆಟ್‌ನ ಪ್ರಾಜೆಕ್ಟ್ ಆಗಿತ್ತೆನ್ನಲಾಗಿದೆ. ಉತ್ಸವದ ವಿವಿಧ ತಯಾರಿ, ಉಸ್ತುವಾರಿ ವಹಿಸಿಕೊಂಡಿದ್ದ ಶಾಸಕರ ಆಪ್ತರಿಗೆ ಸದ್ರಿ ಕಾರ್ಯಕ್ರಮದಿಂದ ಲಾಭವಾಯಿತೆ ಹೊರತು ಜನಸಾಮಾವ್ಯರಿಗೆ ಅನುಕೂಲವೇನಾಗಿಲ್ಲವೆಂಬ ಚರ್ಚೆಗಳೀಗ ಕ್ಷೇತ್ರದಲ್ಲಿ ಜೋರಾಗಿದೆ.

ಎಣ್ಣೆಹೊಳೆ ಎಂಬಲ್ಲಿ ಕುಡಿವ ನೀರು ಮತ್ತು ಕೃಷಿಗೆ ನೀರಾವರಿ ಒದಗಿಸುವ 160 ಕೋಟಿ ಆಣೆಕಟ್ಟು ಕಾಮಗಾರಿ ನಡೆಯುತ್ತಿದೆ. ಇದು ಎಣ್ಣೆಹೊಳೆಗೆ ಗಂಡಾಂತರಕಾರಿ ಎಂದು ವಿರೋಧ ವ್ಯಕ್ತವಾಗುತ್ತಿದ್ದು, ತಾಂತ್ರಿಕವಾಗಿಯೂ ಕಾರ್ಯಗತವಾಗುವುದು ಕಷ್ಟವೆನ್ನಲಾಗುತ್ತಿದೆ. ವೀರಪ್ಪ ಮೊಯ್ಲಿ ಅಧಿಕಾರದಲ್ಲಿದ್ದಾಗ ಕಟ್ಟಿಬಾಹು ಪ್ರದೇಶವನ್ನು ಡ್ಯಾಮ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ ಅಲ್ಲಿ ಆಣೆಕಟ್ಟಾದರೆ ಅಧಿಕಾರಸ್ಥರ ಆಪ್ತರ ಜಾಗ ಮುಳುಗಡೆ ಆಗುವುದರಿಂದ ಎಣ್ಣೆಹೊಳೆಗೆ ಪ್ರಾಜೆಕ್ಟ್ ಸ್ಥಳಾಂತರಿಸಲಾಯಿತು ಎನ್ನಲಾಗುತ್ತಿದೆ.

ಕೊರೊನಾ ವೈರಸ್‌ನ ಮೊದಲ ಅಲೆಯ ಸಂದರ್ಭದಲ್ಲಿ ಕಾರ್ಕಳದ ಕಟ್ಟಡ ಕಾರ್ಮಿಕರಿಗೆ
ಕಾರ್ಮಿಕ ಇಲಾಖೆಯಿಂದ 5,000 ಆಹಾರ ಸಾಮಗ್ರಿ ಕಿಟ್ ಮಂಜೂರಾಗಿತ್ತು. ಪ್ರತಿ ಕಿಟ್ ಬೆಲೆ ರೂ.800. ಇದರಲ್ಲಿ ಒಂದೇ ಒಂದು ಕಿಟ್‌ಅನ್ನು ಕೂಡ ಬಡ ಕಾರ್ಮಿಕರಿಗೆ ಹಂಚದೆ ಸುಮಾರು 40 ಲಕ್ಷ ರೂ. ಅವ್ಯವಹಾರ ನಡೆಸಲಾಗಿದೆಯೆಂದು ಪುರಸಭೆ ಸದಸ್ಯ ಸುಭೋದರಾವ್ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಶಾಸಕರ ಶಾಮಿಲಾತಿಯಿಂದಲೆ ನಡೆದಿರುವ ಈ ಹಗರಣದಲ್ಲಿ ಸ್ಥಳೀಯ ಬಿಜೆಪಿ ಉಪಾಧ್ಯಕ್ಷನ ಬ್ಯಾಂಕ್ ಖಾತೆಗೂ ಹಣ ಸಂದಾಯವಾಗಿದೆ ಎಂದು ಸುಭೋದರಾವ್ ಆರೋಪಿಸಿದ್ದಾರೆ. ಆದರೆ ಲೋಕಾಯುಕ್ತ ತನಿಖೆ ಮಾತ್ರ ಈವರೆಗೆ ಆರಂಭವಾಗದಿರುವುದು ಅನೇಕ ಅನುಮಾನ ಹುಟ್ಟುಹಾಕಿದೆ.

ಜಾನುವಾರು ಕಳ್ಳಸಾಗಾಣಿಕೆ ಕಾರ್ಕಳ ಮತ್ತು ಹೆಬ್ರಿಯ ಸಾಮರಸ್ಯ ಕೆಡಿಸುತ್ತಿದೆ. ಜಾನುವಾರು ಕದ್ದು ಸಾಗಿಸಲಾಗುತ್ತಿದೆ ಎಂಬ ಹುಯಿಲು ಕಾರ್ಕಳದಲ್ಲಿ ಕೇಳಿಬರುವಷ್ಟು ಕರಾವಳಿಯ ಇನ್ನೆಲ್ಲಿಯೂ ಇಲ್ಲ. ಕೌಬ್ರಿಗೇಡ್ ಹಾವಳಿಗೆ ಕಾರ್ಕಳ ಕಂಗಾಲಾಗಿದೆ. ಭಜರಂಗ ದಳದವರು ಪಿಎಸ್‌ಐ ಮತ್ತು ಪೊಲೀಸರನ್ನು ಜತೆಗಿಟ್ಟುಕೊಂಡು, ನಡುರಾತ್ರಿ ಪಾಪದ ಮಲೆ ಕುಡಿಯರೊಬ್ಬರ ಮನೆಗೆ ನುಗ್ಗಿ, ದನ ಕದ್ದು ಬ್ಯಾರಿಯೊಬ್ಬರಿಗೆ ಮಾರಿದ ಆರೋಪ ಹೊರಿಸಿ ಎಗರಾಡಿ ಅವರ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಹೆದರಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ಕಾರ್ಕಳದ ಪೊಲೀಸರು ಭಜರಂಗದಳದವರು ಬರೆದ ಎಫ್‌ಐಆರ್‌ಗೆ ಸಹಿ ಹಾಕುತ್ತಾರೆಂಬ ಆಕ್ಷೇಪ ವ್ಯಾಪಕವಾಗಿ ಕೇಳಿಬರುತ್ತಿದೆ. ನಿರಂತರವಾಗಿ ದನ ಕಳ್ಳ ಸಾಗಾಣಿಕಾ ಘಟನೆ ವರದಿಯಾಗುತ್ತಿದ್ದು, ಈ ನೆಪದಲ್ಲಿ ಹಲ್ಲೆ, ದಾಂಧಲೆಗಳಾಗುತ್ತಿವೆ. ಪೊಲೀಸ್ ಠಾಣೆ ಮೆಟ್ಟಿಲೇರಿರುವ ಕೆಲವು ಪ್ರಕರಣದಿಂದ ಭಜರಂಗದಳದ ಮುಂದಾಳುಗಳೆ ದಲ್ಲಾಳಿಗಳೆಂಬುದು ಬಹಿರಂಗವಾಗಿದೆ ಎನ್ನಲಾಗಿದೆ. ಭಜರಂಗಿ ದಲ್ಲಾಳಿಗಳ ಮೇಲೆ ಎಫ್‌ಐಆರ್ ಸಹ ದಾಖಲಾಗಿದೆ. ಕಾರ್ಕಳದಲ್ಲಿ ಆಗುತ್ತಿರುವ ಗೋರಕ್ಷಣೆಯ ನಾಟಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಜರಂಗದಳದವರೊಂದಿಗಿನ ಹೊಂದಾಣಿಕೆಯಿಂದಲೆ ಜಾನುವಾರು ಕಳ್ಳ ದಂಧೆ ನಡೆಯುತ್ತಿದೆಯೆಂಬ ಅನುಮಾನ ಮೂಡಿಸಿದೆಯೆಂದು ಪ್ರಜ್ಞಾವಂತರು ಹೇಳುತ್ತಾರೆ.

ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?

ಶಾಸಕ ಸುನೀಲ್‌ಕುಮಾರ್ ಬಗ್ಗೆ ಬಿಜೆಪಿಯ ಒಂದು ವರ್ಗಕ್ಕೆ ತೀವ್ರ ಅಸಮಾಧಾನವಿದೆ ಎನ್ನಲಾಗುತ್ತಿದೆ. ಭಜರಂಗದಳ ಮೂಲದ ಶಾಸಕರು ಹಿಂದು ಜಾಗರಣಾ ವೇದಿಕೆಯನ್ನು ಎದುರು ಹಾಕಿಕೊಂಡಿದ್ದಾರೆ. ಭಜರಂಗದಳ ಮತ್ತು ಹಿಂಜಾವೆ ನಡುವೆ ಘನಘೋರ ಕಾಳಗಗಳು ನಡೆಯುತ್ತಿವೆ. ಹಿಂಜಾವೆ ಹಾಲಿ ಶಾಸಕರಿಗೆ ಟಿಕೆಟ್ ಕೊಡಬಾರದೆಂದು ಒತ್ತಾಯಿಸುತ್ತಿದ್ದು, ಅವಕಾಶ ಕೊಟ್ಟರೆ ಸೋಲಿಸುವ ಪ್ರಯತ್ನ ಮಾಡಬೇಕಾಗುತ್ತದೆಂದು ಸಂಘ ಶ್ರೇಷ್ಠರಿಗೆ ತಿಳಿಸಿದೆಯೆನ್ನಲಾಗುತ್ತಿದೆ. ಜತೆಗೆ ಭ್ರಷ್ಠಾಚಾರದ ಆರೋಪಕ್ಕೆ ತುತ್ತಾಗಿರುವ ಶಾಸಕನ ಬಗ್ಗೆ ಜನರಿಗೂ ಬೇಸರ ಬಂದಿದೆ ಎಂಬುದು ಬೈಠಕ್‌ಗಳಲ್ಲಿ ಚರ್ಚೆಯಾಗುತ್ತಿದೆಯಂತೆ. ಹಾಗಾಗಿ ಕರಾವಳಿ ಆರ್‌ಎಸ್‌ಎಸ್‌ನ ಪ್ರಶ್ನಾತೀತ ನಾಯಕ ಹೊಸ ಮುಖವನ್ನು ಆಖಾಡಕ್ಕಿಳಿಸಿದರೆ ಏನಾದಿತೆಂಬ ಲೆಕ್ಕಾಚಾರದಲ್ಲಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಒಂದು ಮೂಲದ ಪ್ರಕಾರ ಸಂಘದ ಹಿರಿಯರು ಉಡುಪಿ ಜಿಲ್ಲೆಯ ಐದೂ ಬಿಜೆಪಿ ಶಾಸಕರನ್ನು ಬದಲಿಸುವ ಯೋಚನೆಯಲ್ಲಿದ್ದಾರಂತೆ!

ಉದಯಕುಮಾರ್ ಶೆಟ್ಟಿ

ಜನಾನುರಾಗಿಯಾಗಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿ ಸಾವಿನ ನಂತರ ಕಾರ್ಕಳ ಕಾಂಗ್ರೆಸ್‌ಗೆ ಸರಿಯಾದ ನಾಯಕತ್ವ ಇಲ್ಲದಾಗಿದೆ. ಕಳೆದ ಚುನಾವಣೆ ಹೊತ್ತಲ್ಲಿ ಕ್ಷೇತ್ರದ ದ್ವಿತೀಯ ಬಹುಸಂಖ್ಯಾತ ಬಂಟ ಸಮುದಾಯದ ಮುನಿಯಾಲ ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ತನಗೆ ಅಭ್ಯರ್ಥಿ ಮಾಡುತ್ತದೆಂಬ ನಿರೀಕ್ಷೆಯಿಂದ ಹಣ ಖರ್ಚು ಮಾಡಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಆದರಿದು ಮೊಯ್ಲಿಯವರಿಗೆ ಇಷ್ಟವಿರಲಿಲ್ಲ. ತನ್ನ ಮಗ ಹರ್ಷ್ ಮೊಯ್ಲಿಯನ್ನು ಕಾರ್ಕಳದ ಎಮ್ಮೆಲ್ಲೆ ಮಾಡುವ ಪ್ಲಾನು ಹಾಕಿರುವ ಮೊಯ್ಲಿ ಒಮ್ಮೆ ಬಹುಸಂಖ್ಯಾತರ ಕೈಗೆ ಕಾಂಗ್ರೆಸ್ ಶಾಸಕ ಸ್ಥಾನ ಹೋದರೆ ಮರಳಿ ಪಡೆಯಲಾಗದೆಂಬ ಕಾರಣಕ್ಕೆ ಅಡ್ಡಗಾಲು ಹಾಕಿದರೆಂಬ ಆಕ್ರೋಶ ಪಕ್ಷದ ಒಂದು ಬಣಕ್ಕಿದೆ. ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಉದಯಕುಮಾರ್ ಶೆಟ್ಟಿ ತನ್ನ ಮೇಲಾದ ಐಟಿ ರೇಡು ಮತ್ತು ಕಾಂಗ್ರೆಸ್ ಟಿಕೆಟ್ ತಪ್ಪಿದ ಬೇಸರದಿಂದ ರಾಜಕಾರಣದಿಂದ ದೂರಾಗಿದ್ದರು. ಆದರೆ ಈಗವರು ಮತ್ತೆ ಸಕ್ರಿಯರಾಗಿದ್ದು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕುಂದಾಪುರದಲ್ಲಿ ಸಹನಾ ಕನ್‌ವೆನ್‌ಷನ್ ನಡೆಸುತ್ತಿರುವ ಬಂಟ ಜಾತಿಯ ಸುರೇಂದ್ರ ಶೆಟ್ಟಿ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದಾರೆ. ಮೊಯ್ಲಿ ಆಶೀರ್ವಾದ ಇರುವ ಶೆಟ್ಟರಿಗೆ ಡಿಕೆಶಿ ಜತೆಗೂ ವ್ಯಾವಹಾರಿಕ ನಂಟಿದೆಯೆನ್ನಲಾಗುತ್ತಿದೆ. ಆದರೆ ಶೆಟ್ಟರು ಕಾರ್ಕಳದವರಾದರು ಪರಿಚಿತ ಮುಖವಲ್ಲವೆಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮತ್ತು ಮಾಜಿ ಜಿಪಂ ಸದಸ್ಯ ಮಂಜುನಾಥ ಪೂಜಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಲ್ಲವರಾದ ಈ ಇಬ್ಬರಿಂದ ಅದೇ ಸಮುದಾಯದ ಬಿಜೆಪಿ ಸುನೀಲ್‌ಕುಮಾರ್‌ರನ್ನು ಎದುರಿಸಲು ಕಷ್ಟವಾಗುತ್ತದೆಂಬ ವಾದ ಕಾಂಗ್ರೆಸ್‌ನಲ್ಲಿದೆ. ಸಾಮಾಜಿಕ ಕೆಲಸಗಳಿಂದ ಸಾಧಿಸಿರುವ ಜನ ಸಂಪರ್ಕ, ಚುನಾವಣೆ ಎದುರಿಸುವ ಸಂಪನ್ಮೂಲದ ಶಕ್ತಿ ಮತ್ತು ಜಾತಿಬಲದ ಮುನಿಯಾಲ್ ಉದಯ್‌ಕುಮಾರ್ ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಪ್ರಬಲ ಹುರಿಯಾಳೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಸುನೀಲ್-ಉದಯ್ ಮುಖಾಮುಖಿಯಾದರೆ ತುರುಸಿನ ಸ್ಪಧೆ ಏರ್ಪಡಲಿದೆಯೆಂಬ ವಿಶ್ಲೇಷಣೆ ಕ್ಷೇತ್ರದ ಜಾತಿಕಾರಣ-ಧರ್ಮಕಾರಣದ ಹಿನ್ನೆಲೆಯಲ್ಲಿ ನಡೆಯುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾಪು: ಮಲ್ಲಿಗೆಯ ಕಂಪು ಕೆಡಿಸುತ್ತಿರವ ಧರ್ಮೋನ್ಮಾದದ ಘಾಟು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...