ಮಹಾರಾಷ್ಟ್ರ ಶಿವಸೇನೆಯ ಮುಖಂಡ ಏಕನಾಥ್ ಶಿಂಧೆ ನೇತೃತ್ವದಲ್ಲಿ 40 ಶಿವಸೇನಾ ಪಕ್ಷದ ಶಾಸಕರು ಬಂಡಾಯವೆದ್ದು ಗೌಹಾತಿ ತಲುಪಿರುವುದರಿಂದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಏಕನಾಥ್ ಶಿಂಧೆ ತನಗೆ 6 ಪಕ್ಷೇತರ ಶಾಸಕರ ಬೆಂಬಲ ಸಹ ಇದೆಯೆಂದು ಹೇಳಿಕೊಂಡಿದ್ದಾರೆ. ಇಂದು ಸಂಜೆ 5 ಗಂಟೆಗೆ ಎಲ್ಲಾ ಶಿವಸೇನೆ ಶಾಸಕರು ಸಭೆಗೆ ಹಾಜರಾಗಬೇಕೆಂದು, ತಪ್ಪಿದ್ದಲ್ಲಿ ತಮ್ಮ ಸದಸ್ಯ ಸ್ಥಾನ ರದ್ದುಗೊಳಿಸುವುದಾಗಿ ಉದ್ಧವ್ ಠಾಕ್ರೆ ಸಂದೇಶ ರವಾನಿಸಿದ್ದಾರೆ. ಆದರೆ ಅದನ್ನು ಏಕನಾಥ್ ಶಿಂಧೆ ಮಾನ್ಯತೆಯಿಲ್ಲದ ಹೇಳಿಕೆ ಎಂದು ಕರೆದಿದ್ದಾರೆ.
ಈ ಎಲ್ಲದರ ನಡುವೆ ಸರ್ಕಾರ ಉಳಿಯಬೇಕಾದರೆ ಅಥವಾ ಬೀಳಿಸಬೇಕಾದರೆ ಬೇಕಾಗುವ ಶಾಸಕರ ಸಂಖ್ಯೆಗಳೆಷ್ಟು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯರನ್ನು ಹೊಂದಿದೆ. ಒಬ್ಬ ಸದಸ್ಯ ಸಾವನಪ್ಪಿದ್ದು, ಇಬ್ಬರು ಜೈಲಿನಲ್ಲಿದ್ದಾರೆ. ಹಾಗಾಗಿ ಸದಸ್ಯಬಲ 285ಕ್ಕೆ ಕುಸಿದಿದೆ. ಅಲ್ಲಿಗೆ ಯಾವುದೇ ಸರ್ಕಾರಕ್ಕೆ ಬಹುಮತ ತೋರಿಸಲು 143 ಸದಸ್ಯರ ಬೆಂಬಲ ಬೇಕಿದೆ.
ಸದ್ಯಕ್ಕೆ ಮಹಾವಿಕಾಸ್ ಅಘಾಡಿ (ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್) ಸರ್ಕಾರದ ಬಳಿ 152 ಶಾಸಕರಿದ್ದಾರೆ. 55 ಶಿವಸೇನೆ, 51 ಎನ್‌ಸಿಪಿ ಮತ್ತು 44 ಕಾಂಗ್ರೆಸ್ ಸದಸ್ಯರಿದ್ದು ಉಳಿದವರು ಪಕ್ಷೇತರರಾಗಿದ್ದಾರೆ.
55 ಶಿವಸೇನೆ ಶಾಸಕರಲ್ಲಿ 40 ಜನ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದ ಕಾರಣ ಶಿವಸೇನೆಯ ಬಲ ಕೇವಲ 15ಕ್ಕೆ ಕುಸಿದಿದೆ. ಹಾಗಾಗಿ ಸರ್ಕಾರದ ಬಲ 102ಕ್ಕೆ ಕುಸಿಯುತ್ತದೆ. ಏಕನಾಥ್ ಶಿಂಧೆಯ ಗುಂಪು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮೂರನೇ ಎರಡರಷ್ಟು ಸದಸ್ಯರನ್ನು (37) ಹೊಂದಿರಬೇಕು.
ಏಕನಾಥ್ ಶಿಂಧೆ ತಮ್ಮೊಡನೆ 37ಕ್ಕಿಂತ ಹೆಚ್ಚು ಶಿವಸೇನೆ ಶಾಸಕರನ್ನು ಹೊಂದಿದ್ದಲ್ಲಿ ಅವರು ತಮ್ಮದೇ ಪ್ರತ್ಯೇಕ ಪಕ್ಷವನ್ನು ಘೋಷಿಸಿಕೊಳ್ಳಬಹುದು. ಅಲ್ಲದೆ ಅವರು ಶಿವಸೇನೆಯ ಅಧಿಕೃತ ಚಿಹ್ನೆ ಪಡೆಯಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಈ ರೀತಿಯ ಪ್ರಕರಣಗಳು ಎದುರಾದಾಗ ಬಹುಮತ ಹೊಂದಿದವರಿಗೆ ಪಕ್ಷದ ಚಿಹ್ನೆ ನೀಡಿದ ಉದಾಹರಣೆಗಳಿವೆ.
ಒಂದು ವೇಳೆ ಏಕನಾಥ್ ಶಿಂಧೆ ಜೊತೆಗಿರುವ ಶಿವಸೇನೆಯ 40 ಶಾಸಕರು ಬಿಜೆಪಿ ಸೇರುವುದಕ್ಕಾಗಿ ರಾಜೀನಾಮೆ ನೀಡಿದ್ದಲ್ಲಿ ಬಹುಮತಕ್ಕೆ 123 ಸ್ಥಾನಗಳು ಅಗತ್ಯ ಬೀಳುತ್ತವೆ. ಮಹಾವಿಕಾಸ್ ಅಘಾಡಿ ಸರ್ಕಾರದ ಬಳಿ 102 ಸದಸ್ಯರಿದ್ದರೆ ಬಿಜೆಪಿ ಬಳಿ 106 ಸದಸ್ಯರಿರುತ್ತಾರೆ. ಆದರೆ ಹೆಚ್ಚಿನ ಪಕ್ಷೇತರರು ಬಿಜೆಪಿ ಬೆಂಬಲಿಸುವ ಸಾಧ್ಯತೆಯಿದೆ.
ಏಕನಾಥ್ ಶಿಂಧೆ ಜೊತೆಗೆ ಹೋಗಿದ್ದ ಒಬ್ಬ ಶಿವಸೇನೆಯ ಶಾಸಕ ವಾಪಸ್ ಬಂದಿದ್ದು, ತನ್ನನ್ನು ಅಪಹರಿಸಿದ್ದರು ಎಂದು ದೂರಿದ್ದಾರೆ. ಇದೇ ರೀತಿ ಕನಿಷ್ಟ ಅರ್ಧದಷ್ಟು ಜನರನ್ನು ಶಿವಸೇನೆ ವಾಪಸ್ ಕರೆಸಿಕೊಂಡಲ್ಲಿ ಸರ್ಕಾರ ಉಳಿಯುತ್ತದೆ. ಇಲ್ಲದಿದ್ದಲ್ಲಿ ಅಸ್ಥಿರತೆ ಉಂಟಾಗಿ ಸರ್ಕಾರ ಬಿದ್ದುಹೋಗಲಿದೆ. ಬಿಜೆಪಿ ಬಹುಮತ ತೋರಿಸಿ ಅಧಿಕಾರಕ್ಕೆ ಬರಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬಹುದಾಗಿದೆ.
ಇದನ್ನೂ ಓದಿ; ಮಹಾರಾಷ್ಟ್ರ: ಬಂಡಾಯ ಶಾಸಕರಿಗೆ ಸಂಜೆ 5 ಗಂಟೆವರೆಗೆ ಗಡುವು ನೀಡಿದ ಉದ್ಧವ್ ಸರ್ಕಾರ


