ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವುದಾಗಿ ಆಮ್ ಆದ್ಮಿ ಪಕ್ಷ ಶನಿವಾರ ಘೋಷಿಸಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಈ ಘೋಷಣೆ ಮಾಡಿದ್ದಾರೆ.
“ನಮಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ಗೌರವವಿದೆ. ಆದರೆ ನಾವು ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತೇವೆ” ಎಂದು ಪಕ್ಷದ ರಾಜಕೀಯ ಸಲಹಾ ಸಮಿತಿ (ಪಿಎಸಿ) ಸಭೆಯ ನಂತರ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಮ್ ಆದ್ಮಿ ಪಕ್ಷವೂ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಿದೆ. ದೆಹಲಿಯ ಮೂವರು ಸೇರಿದಂತೆ ಎರಡು ರಾಜ್ಯಗಳಲ್ಲಿ ಪಕ್ಷವೂ 10 ರಾಜ್ಯಸಭಾ ಸಂಸದರನ್ನು ಹೊಂದಿದೆ. ಅಲ್ಲದೆ, ಪಕ್ಷವು ಪಂಜಾಬ್‌ನಲ್ಲಿ 92, ದೆಹಲಿಯಲ್ಲಿ 62 ಮತ್ತು ಗೋವಾದಲ್ಲಿ ಇಬ್ಬರು ಸೇರಿದಂತೆ ಒಟ್ಟು 156 ಶಾಸಕರನ್ನು ಹೊಂದಿದೆ.
ಇದನ್ನೂ ಓದಿ: ಬಿಜೆಪಿ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಸಾಧ್ಯತೆ
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ನಂತರ ಯಶವಂತ ಸಿನ್ಹಾ ಅವರು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಆಯ್ಕೆಯಾದ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಿಜೆಡಿ, ವೈಎಸ್ಆರ್ ಕಾಂಗ್ರೆಸ್, ಬಿಜು ಜನತಾ ದಳ, ಬಹುಜನ ಸಮಾಜ ಪಕ್ಷ, ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆಯಂತಹ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ದ್ರೌಪದಿ ಮುರ್ಮು ಅವರು ಪಡೆದಿದ್ದಾರೆ. ಹೀಗಾಗಿ ಅವರು ಬೆಂಬಲದ ಮತಗಳ ಪ್ರಮಾಣವು ಈಗಾಗಲೇ 60% ದಾಟಿದೆ. ಅವರು ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮುಂಚೆ ಎನ್‌ಡಿಎ ಬೆಂಬಲಕ್ಕೆ 50% ಮತಗಳು ಮಾತ್ರವಿತ್ತು.
ಇದನ್ನೂ ಓದಿ: Explained: ಭಾರತದ ರಾಷ್ಟ್ರಪತಿ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
64 ವರ್ಷದ ದ್ರೌಪದಿ ಮುರ್ಮು ಅವರು ಆಯ್ಕೆಯಾದರೆ ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ.


