ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್-ಡ್ರಾಯಿಂಗ್-ಪ್ರಿಂಟಿಂಗ್ ಇಂಕ್, ಪೇಪರ್, ಚಾರ್ಟ್ಸ್, ಗ್ರಾಫ್ ಪೇಪರ್, ನೋಟ್ ಬುಕ್ ಮೇಲೆ ಜಿಎಸ್‌ಟಿ ಹಾಕಿರುವುದು ವಿದ್ಯಾರ್ಥಿಗಳಿಗೆ ‘ಹೊರೆಯಾಗಲಿದೆ’ ಎಂದು ಪ್ರತಿಪಾದಿಸಿರುವ ಭಾರತ ವಿಧ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸರ್ಕಾರದ ಈ ನಡೆಯು ‘ಶಿಕ್ಷಣ ವಿರೋಧಿ ನೀತಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಹೊಸ ಜಿಎಸ್‌ಟಿ ಬಗ್ಗೆ ಎಸ್‌ಎಫ್‌ಐ ರಾಜ್ಯ ಸಮಿತಿ, “ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶಿಕ್ಷಣದ ಮೇಲೆ ದಾಳಿಗಳು ಹೆಚ್ಚಾಗಿವೆ. ಶಿಕ್ಷಣದ ವ್ಯಾಪಾರೀಕರಣ ತೀವ್ರಗೊಂಡು ತಳಸಮುದಾಯದ ಮಕ್ಕಳು ಶಿಕ್ಷಣದಿಂದ ಹೊರ ಹೋಗುತ್ತಿರುವ ಹೆಚ್ಚಾಗುತ್ತಿದೆ” ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಂತಹ ವಿಷಮ ಸಂಧರ್ಭದಲ್ಲಿ ಅಪ್ರಜಾಸತ್ತತ್ಮಕವಾಗಿ, ಅವೈಜ್ಞಾನಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ ಜಾರಿಗೊಳಿಸುತ್ತಿದೆ. ಇದರ ನಡುವೆಯೇ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್-ಡ್ರಾಯಿಂಗ್-ಪ್ರಿಂಟಿಂಗ್ ಇಂಕ್, ಪೇಪರ್ ಮೇಲೆ 18% ಜಿಎಸ್‌ಟಿ ಹೇರಿ, ಚಾರ್ಟ್ಸ್, ಗ್ರಾಫ್ ಪೇಪರ್, ನೋಟ್ ಬುಕ್ ಮೇಲೆ 12% ಜಿಎಸ್ಟಿ ತೆರಿಗೆ ಹೊರೆ ಹಾಕಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ” ಎಂದು ಎಸ್ಎಫ್ಐ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ‘ಮತ್ತೆ ಗಬ್ಬರ್ ಸಿಂಗ್ ಸ್ಟ್ರೈಕ್’: ಜಿಎಸ್‌ಟಿ ಏರಿಕೆಯ ಬಗ್ಗೆ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಒಕ್ಕೂಟ ಸರ್ಕಾರದ ಈ ನೀತಿಯು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಶಿಕ್ಷಣದ ವೆಚ್ಚ ವಿಪರೀತ ಏರಿಕೆ ಮಾಡಲಿದೆ. ಇದು ತಳಸಮುದಾಯಗಳ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕ್ರಮಗಳಾಗಿವೆ ಎಂದು ಎಸ್ಎಫ್‌ಐ ಆರೋಪಿಸಿದೆ.
“ಕೂಡಲೇ ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಧಿಸಿರುವ ಲೂಟಿಕೋರ ಜಿಎಸ್ಟಿ ತೆರಿಗೆಯನ್ನು ವಾಪಸ್ ಪಡೆಯಬೇಕು. ಶಿಕ್ಷಣದ ಸಮಗ್ರ ಅಭಿವೃದ್ದಿಗೆ ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿಯ 6% ಅಥವಾ ಕೇಂದ್ರ ಬಜೆಟ್ ನಲ್ಲಿ 10% ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು” ಎಂದು ಎಸ್ಎಫ್ಐ ಒತ್ತಾಯಿಸಿದೆ.


