ಕಲುಷಿತ ನೀರು ಸೇವಿಸಿ ರಾಯಚೂರಿನಲ್ಲಿ ಹಲವು ಜನ ಪ್ರಾಣ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಬಳ್ಳಾರಿಯಲ್ಲಿಯೂ ಅದೇ ರೀತಿಯ ಘಟನೆ ಜರುಗಿರುವುದು ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಲ್ಲಿ ನೀರಿನಲ್ಲಿ ಬಂದ ಕಲುಷಿತ ನೀರನ್ನು ಸೇವಿಸಿ 11 ವರ್ಷದ ಬಾಲಕಿ ಮೃತಪಟ್ಟು 20 ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾದ ಪರಿಣಾಮ ನೀರು ಕಲುಷಿತವಾಗಿದೆ ಎನ್ನಲಾಗುತ್ತಿದೆ. ಈ ನೀರು ಸೇವಿಸಿ 11 ವರ್ಷದ ಬಾಲಕಿ ಸುಕನ್ಯಾ ಆಸ್ಪತ್ರೆಯಲ್ಲಿ ಪ್ರಾಣ ತೆತ್ತಿದ್ದಾಳೆ. ಜಿಲ್ಲಾ ಆರೋಗ್ಯ ಅಧಿಕಾರಿ ಗ್ರಾಮಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿ, ‘ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿ, ಮಾಹಿತಿ ಪಡೆದಿದ್ದೇನೆ. ಗೋನಾಳ ಗ್ರಾಮಕ್ಕೆ ತಾತ್ಕಾಲಿಕವಾಗಿ ನಳದ ನೀರಿನ ಬದಲು ಶುದ್ಧ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದ್ದು,ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದಿದ್ದಾರೆ.
ಮೇ 28ರಂದು ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನಪ್ಪಿದ್ದರು. ಆರೋಗ್ಯ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ, ಅಸಲಿಗೆ ಇನ್ನು ಬಹಳ ಜನ ಸಾವನಪ್ಪಿದ್ದಾರೆ ಎಂದು ಅಲ್ಲಿನ ಸ್ಥಳೀಯರು ದೂರಿದ್ದರು. ಜುಲೈ ತಿಂಗಳ ಆರಂಭದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲ್ಕಂದಿನ್ನಿ ಮತ್ತು ಜುಕೂರ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ಇದು 8 ಮಂದಿ ಸಾವಿಗೀಡಾಗಿ, ಹಲವರು ಅನಾರೋಗ್ಯಕ್ಕೊಳಗಾಗಿದ್ದರು. ಈ ಕುರಿತು ಲೋಕಾಯುಕ್ತ ತನಿಖೆ ಸಹ ನಡೆಯುತ್ತಿದೆ.
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣ, ತನಿಖೆಗೆ ಆದೇಶ


