ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಿವಸೇನೆಯ ಬಂಡಾಯ ನಾಯಕರನ್ನು ಮರದ ಕೊಳೆತ ಎಲೆಗಳಿಗೆ ಹೋಲಿಸಿದ್ದಾರೆ. ಬಂಡಾಯ ಎದ್ದಿರುವವರನ್ನು ಜನರು ಬೆಂಬಲಿಸುತ್ತಾರೆಯೇ ಎಂಬುದನ್ನು ತಿಳಿಯಲು ಚುನಾವಣೆ ನಡೆಯಲಿ ಎಂದು ಆಶಿಸಿದ್ದಾರೆ.
ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಶಿವಸೇನಾ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿರುವ ಮೊದಲ ಮೊದಲ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ‘ಪಕ್ಷದ ಕೆಲವು ನಾಯಕರನ್ನು ಹೆಚ್ಚು ನಂಬಿರುವುದು ತಪ್ಪು’ ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಕಳೆದ ತಿಂಗಳು ಪಥನಗೊಂಡಿತು. ಶಿವಸೇನಾ ಶಾಸಕ ಏಕನಾಥ್ ಶಿಂಧೆ ಮತ್ತು ಇತರ 39 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದರಿಂದ ಉದ್ಧವ್ ನೇತೃತ್ವದ ಸರ್ಕಾರ ಉರುಳಿಬಿದ್ದಿತು.
ನಂತರ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
“ಈ ದಂಗೆಕೋರರು ಮರದ ಕೊಳೆತ ಎಲೆಗಳಂತಿದ್ದಾರೆ. ಅವುಗಳು ಉದುರಲೇಬೇಕು. ಹೊಸ ಎಲೆಗಳು ಬಂದರೆ ಮರಕ್ಕೆ ಒಳ್ಳೆಯದು” ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ತಾವು ನಿಜವಾದ ಶಿವಸೇನೆಯನ್ನು ಪ್ರತಿನಿಧಿಸುತ್ತೇವೆ ಎಂಬ ಬಂಡಾಯ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಠಾಕ್ರೆ, ‘ಚುನಾವಣೆ ನಡೆಯಲಿ. ಜನರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ನೋಡೋಣ’ ಎಂದು ತಿಳಿಸಿದ್ದಾರೆ.
“ಜನರು ನಮಗೆ ಮತ ಹಾಕುತ್ತಾರೋ ಅಥವಾ ಅವರನ್ನು ಬೆಂಬಲಿಸುತ್ತಾರೋ ಎಂಬುದು ಒಮ್ಮೆ ಸ್ಪಷ್ಟವಾಗುತ್ತದೆ” ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಬಂಡಾಯಕ್ಕೆ ಯಾರನ್ನು ದೂಷಿಸಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, “ನಾನು ಕೆಲವು ಸೇನಾ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವಂತೆ ತೋರುತ್ತಿದೆ. ಇಷ್ಟು ದಿನ ಅವರನ್ನು ನಂಬಿದ್ದು ನನ್ನ ತಪ್ಪು. ಬಿಜೆಪಿಯು ಶಿವಸೇನೆಯನ್ನು ಒಡೆಯಲು ಪ್ರಯತ್ನಿಸುತ್ತಿಲ್ಲ. ಆದರೆ ಇತರ ಪಕ್ಷಗಳ ಶ್ರೇಷ್ಠ ನಾಯಕರನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್‌ನವರಾದ ಸರ್ದಾರ್ ಪಟೇಲ್ ಅವರನ್ನು ಹೇಗೆ ತಮ್ಮವರೆಂದು ಬಿಂಬಿಸಲು ಯತ್ನಿಸಿದರೋ, ಹಾಗೆಯೇ ಶಿವಸೇನೆಯನ್ನು ಸ್ಥಾಪಿಸಿದ ನನ್ನ ತಂದೆ ಬಾಳಾಸಾಹೇಬ್ ಠಾಕ್ರೆಯವರನ್ನು ತಮ್ಮವರೆಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ” ಎಂದು ದೂರಿದ್ದಾರೆ.
ಇದನ್ನೂ ಓದಿರಿ: ಕೇರಳ: ಎದೆನೋವು ಎಂದರೂ ಬಿಡದೆ ಥಳಿಸಿದ ಪೊಲೀಸರು; ಕಸ್ಟಡಿ ಚಿತ್ರಹಿಂಸೆಗೆ ವ್ಯಕ್ತಿ ಬಲಿ
“ಈ ಜನರು ನಂಬಲರ್ಹರಲ್ಲ ಎಂದು ತೋರುತ್ತಿದೆ. ಅವರು ಮೂಲತಃ ಸೇನಾ ಕಾರ್ಯಕರ್ತರ ನಡುವೆ ಆಂತರಿಕ ಕಲಹವನ್ನು ಉಂಟುಮಾಡುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ಮೈತ್ರಿಯು ರಾಜಕೀಯದಲ್ಲಿ ಪ್ರಯತ್ನಿಸಲು ಯೋಗ್ಯವಾಗಿದೆ ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ.
“ಜನರ ಪ್ರಕಾರ ಅದು ತಪ್ಪು ಹೆಜ್ಜೆಯಾಗಿದ್ದರೆ, ಅವರು ನಮ್ಮ ಮೈತ್ರಿ ವಿರುದ್ಧ ಬಂಡೇಳುತ್ತಿದ್ದರು. ಮಹಾ ವಿಕಾಸ್ ಅಘಾಡಿಯಲ್ಲಿ ನಾವು ಪರಸ್ಪರ ಗೌರವವನ್ನು ಹೊಂದಿದ್ದೇವೆ” ಎಂದು ಉದ್ಧವ್ ಸ್ಪಷ್ಟಪಡಿಸಿದ್ದಾರೆ.


