Homeಕರ್ನಾಟಕ‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ?’

‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ?’

- Advertisement -
- Advertisement -

(ಸಂಘಪರಿವಾರದ ಮಾಜಿ ಮುಖಂಡರಾದ ಸುನಿಲ್‌ ಬಜಿಲಕೇರಿಯವರು ‘ನಾನೇಕೆ ಆರ್‌ಎಸ್‌ಎಸ್‌ ತೊರೆದೆ?’ ಸರಣಿಯಲ್ಲಿ 2021ರ ನವೆಂಬರ್‌ನಲ್ಲಿ ಬರೆದ ಲೇಖನವಿದು. ಕರಾವಳಿಯ ಕೋಮು ರಾಜಕಾರಣ ಮತ್ತೆ ಮುನ್ನೆಲೆಗೆ ಬಂದಿದೆ. ಸಂಘಪರಿವಾರ ತೊರೆದವರ ಮಾತುಗಳನ್ನು ಕರಾವಳಿ ಯುವಕರು ಆಲಿಸಬೇಕಾದ ತುರ್ತು ಇರುವುದರಿಂದ ಈ ಲೇಖನವನ್ನು ಮರು ಪ್ರಕಟಿಸಲಾಗಿದೆ.)

ಮಂಗಳೂರಿನಲ್ಲಿರುವ ಬಜಿಲಕೇರಿಯು ಜನಸಂಘದ ಕಾಲದಿಂದಲೂ ಹಿಂದೂಪರ ಸಂಘ-ಸಂಘಟನೆಗಳೆಂದು ಹೇಳಿಕೊಳ್ಳುವವರಿಗೆ ಬೆಂಬಲ ನೀಡುವ ಪ್ರದೇಶ. ನಮ್ಮ ತಂದೆ ಹಾಗೂ ಅವರ ಸಹೋದರರು ಸೇರಿ ಐದು ಮಂದಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಜೈಲಿನಲ್ಲಿದ್ದವರು. ಬಾಲ್ಯದಿಂದಲೇ ಆರ್‌ಎಸ್‌ಎಸ್‌ನೊಂದಿಗೆ ನನ್ನ ಒಡನಾಟ ಬೆಳೆಯಿತು. ಯಾವುದೇ ಕೋಮುಗಲಭೆಯಾದರೂ ಮೊದಲು ಗದ್ದಲ ಆಗುವುದು ಬಜಿಲಕೇರಿಯಲ್ಲಿ. ನಾವು ಗದ್ದಲ ಮಾಡದಿದ್ದರೂ ನಮ್ಮ ಏರಿಯಾದ ಹುಡುಗರನ್ನು ಜನ ಬೇಕಾದಾಗಲೆಲ್ಲ ಪೊಲೀಸರಿಗೆ ಒಪ್ಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುತ್ತಿದ್ದರು. ಇದೊಂದು ಸಂಪ್ರದಾಯವೇ ಆಗಿಹೋಗಿದೆ.

ಯಾವುದೇ ತಪ್ಪು ಮಾಡದೇ ಇರುವ ಹುಡುಗರ ಮೇಲೂ ಪ್ರಕರಣ ಹಾಕಿಸುವುದು, ಜೈಲಿಗೆ ಕಳುಹಿಸುವುದು ಶುರುವಾಯಿತು. ನಮ್ಮಲ್ಲಿ ಮೊದಲು ಕಾಂಗ್ರೆಸ್ ಸ್ಟ್ರಾಂಗ್ ಇತ್ತು. ನೋಡುನೋಡುತ್ತಾ ಹಿಂದುತ್ವದ ಬೇರು ಗಟ್ಟಿಯಾಗುತ್ತಾ ಹೋಯಿತು. ಆಮೇಲೆ ಬಿಜೆಪಿ ಗೆಲ್ಲಲು ಶುರುವಾಯಿತು. ಕಾಂಗ್ರೆಸ್ ಅತೀವ ಭ್ರಷ್ಟಾಚಾರ ಮಾಡುತ್ತಿದೆ ಎಂದು ನಾವು ವಿರೋಧ ಮಾಡಿಕೊಂಡು ಬಂದಿದ್ದವು. ಆದರೆ ಬಿಜೆಪಿ ನಾಯಕರೂ ಕಾಂಗ್ರೆಸ್‌ನಂತೆಯೇ ಭ್ರಷ್ಟಾಚಾರ ಮಾಡಲು ಶುರುಮಾಡಿದರು. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ಕೇವಲ ಅಧಿಕಾರಕ್ಕಾಗಿ ಬೇರೆ ಪಕ್ಷದಿಂದ ಬಂದವರನ್ನು ಮೇಲೆ ಕೂರಿಸುವುದು ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿಗೆ ವ್ಯತ್ಯಾಸ ಇಲ್ಲದಂತೆ ಆಯಿತು. ಇದನ್ನು ನೋಡಿ ನೋವಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೇರಳದಿಂದ ಬರುವ ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಮದುವೆಯಾದಾಗ ಹಿಂದುತ್ವ, ಸಂಘಟನೆ, ಧರ್ಮ ಎನ್ನುತ್ತಾ ಆರ್‌ಎಸ್‌ಎಸ್, ಭಜರಂಗದಳಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ನಾಯಕರು ಮಾತ್ರ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ತಿಳಿಯುತ್ತಾ ಹೋಯಿತು. ಚುನಾವಣಾ ಸಮಯದಲ್ಲಿ ಕಾರ್ಯಕರ್ತರ ಕೊಲೆಯನ್ನು ಮಾಡೋದೋ, ಮಾಡಿಸುವಂತಹದ್ದೋ ಆಗುತ್ತದೆ. ಚುನಾವಣೆ ನಡೆದ ಬಳಿಕ ಎಲ್ಲರೂ ಒಟ್ಟಿಗೆ ಬಾಳೋಣ ಎನ್ನುತ್ತಾರೆ. ಚುನಾವಣೆ ಪ್ರಾರಂಭವಾದ ಕೂಡಲೇ ಕೊಲೆಗಳು ಇಲ್ಲಿ ಅನಿವಾರ್ಯವಾಗುತ್ತಿತ್ತು. ಇದನ್ನೆಲ್ಲ ನೋಡಿನೋಡಿ ಬೇಸರವಾಯಿತು. ಹಿಂದೂ ಸಂಘಟನೆಗಳಲ್ಲಿ ದುಡಿದು ಏನೂ ಪ್ರಯೋಜನವಿಲ್ಲ. ಅವರು ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮಗೆ ರಾಜಕೀಯ ಬೇಡ. ನಾವ್ಯಾಕೆ ಒಂದಾಗಿ ಬದುಕಬಾರದು? ನಮ್ಮ ಮಂಗಳೂರಿನಲ್ಲಿ ಶಾಂತಿ ಏಕೆ ನೆಲೆಸಬಾರದು? ಎಂದು ಯೋಚಿಸಿ ’ಹಿಂದುತ್ವದಿಂದ ಬಂಧುತ್ವ’ ಪರಿಕಲ್ಪನೆಯಲ್ಲಿ ಸಮಾನ ಮನಸ್ಕರು ಸೇರಿ ಜಾಗೃತಿ ಮೂಡಿಸಲು ಮುಂದಾದೆವು. ’ಹಿಂದುತ್ವದೊಂದಿಗೆ ಬಂಧುತ್ವ’ ನಮ್ಮ ಮುಂದಿನ ಹೆಜ್ಜೆಯಾಯಿತು.

ಇದನ್ನೂ ಓದಿರಿ: ಫಾಝಿಲ್‌ ಕೊಲೆ ಪ್ರಕರಣ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ- ಜಿಲ್ಲಾಧಿಕಾರಿ

ಮೋದಿ ಏನು ಹೇಳುತ್ತಿದ್ದಾರೆ? ’ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಅಲ್ಲವೇ? ಅಮೆರಿಕ, ಸೌದಿ ಎಲ್ಲ ಕಡೆಗೂ ಹೋಗಿ ಎಲ್ಲ ಧರ್ಮದವರನ್ನೂ ಮೋದಿ ಅಪ್ಪಿಕೊಳ್ಳುತ್ತಾರೆ. ಕೇಂದ್ರದಲ್ಲಿ ಅಧಿಕಾರ ನಡೆಸಲು ’ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ. ಆದರೆ ಹಿಂದುತ್ವದ ಬೇರು ಗಟ್ಟಿಯಾಗಿ ಇರುವ ಕಡೆ ಕೋಮುವಾದವನ್ನೇ ಮಾಡಿಕೊಂಡು ಹೋಗುತ್ತಿದ್ದಾರೆ. ಎಲ್ಲಿ ಹಿಂದುತ್ವದ ಅಜೆಂಡಾ ಇಲ್ಲವೋ ಅಲ್ಲಿ ಅಭಿವೃದ್ಧಿ, ಸೌಹಾರ್ದತೆ ಎನ್ನುತ್ತಾರೆ. ಒಂದೊಂದು ಊರಿಗೆ ತಕ್ಕಂತೆ ಒಂದೊಂದು ನಾಟಕ ಮಾಡುತ್ತಿದ್ದಾರೆ. ಇದು ನಾಟಕದ ರಾಜಕೀಯ. ಇದನ್ನೆಲ್ಲ ನೋಡಿ ತುಂಬಾ ಬೇಸರವಾಯಿತು. ಇವರೆಲ್ಲರನ್ನು ಹಿಂಬಾಲಿಸಿಕೊಂಡು ತುಂಬಾ ಕೇಸ್‌ಗಳನ್ನು ಮೈಮೇಲೆ ಎಳೆದುಕೊಂಡಿದ್ದು ಸಾಕಾಯಿತು!

ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಹಿಂದುತ್ವದ ಪ್ರಯೋಗಶಾಲೆ. ಈ ಜಿಲ್ಲೆಯಲ್ಲಿ ಬಹುಸಂಖ್ಯಾತರೆಂದರೆ ಬಿಲ್ಲವರು. ಆದರೆ ಈ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದನ್ನೇ ಬಿಜೆಪಿಯ ಸಂಘಪರಿವಾರದ ನಾಯಕರು ಬಳಸಿಕೊಂಡರು. ಪೇಂಟರ್ ಆಗಿರಬಹುದು, ವೆಲ್ಡರ್ ಆಗಿರಬಹುದು, ಸಣ್ಣ ಸಣ್ಣ ಕೆಲಸ ಮಾಡುವವರನ್ನೆಲ್ಲ ಹಿಂದುತ್ವದ ಬಲೆಯೊಳಗೆ ಹಾಕಿ ಗಲಾಟೆ ಮಾಡಿಸುತ್ತಾರೆ. ಜೈಲಿನಲ್ಲಿ ಇರುವ ಶೇ.90 ಜನರು ಬಿಲ್ಲವರು. ಇದೇನೂ ಈ ರೀತಿ ಮಾಡುತ್ತಿದ್ದಾರೆ? ರಾಜಕೀಯದಲ್ಲಿ ಒಳ್ಳೆಯ ಹುದ್ದೆಗಳಲ್ಲಿ ಇರುವವರೆಲ್ಲ ಮೇಲ್ವರ್ಗದವರಿಗೆ ಮೀಸಲು, ಗಲಾಟೆ ಮಾಡಿ ಜೈಲಿನಲ್ಲಿ ಇರುವವರು ಮಾತ್ರ ಹಿಂದುಳಿದ ವರ್ಗದ ಯುವಕರು! ಇದೆಲ್ಲ ನೋವು ನೀಡಿತು. ಈ ರಾಜಕೀಯದವರ ಸಹವಾಸ ಬೇಡ- ನಾವು ಎಲ್ಲರೊಟ್ಟಿಗೆ ಬಾಳೋಣ- ಎಂಬ ಪರಿಕಲ್ಪನೆಯೊಂದಿಗೆ ಈಗ ಬಂಧುತ್ವ ಎನ್ನುತ್ತಿದ್ದೇವೆ. ನಾವು ಒಟ್ಟಿಗೆ ವ್ಯವಹರಿಸಬೇಕು. ಬೇರೆ ಬೇರೆ ಆಗಿರುತ್ತೇವೆ ಎಂದರೆ ತಾಲಿಬಾನ್‌ಗೂ ನಮಗೂ ಏನು ವ್ಯತ್ಯಾಸ?

ಸಮಾನ ಮನಸ್ಕರೆಲ್ಲ ಸೇರಿಕೊಂಡು ಹೋರಾಟ ಮಾಡುತ್ತಿದ್ದೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗುವುದು ಬಹಳ ಕಷ್ಟ. ಯಾಕೆಂದರೆ ಈ ಜಿಲ್ಲೆಯನ್ನು ಸಂಘ ಪರಿವಾರದ ಪ್ರಯೋಗಶಾಲೆ ಎನ್ನುತ್ತಾರೆ. ಆರ್‌ಎಸ್‌ಎಸ್‌ನ ನಾಗಪುರದ ನಂತರ ಇನ್ನೊಂದು ಪ್ರಯೋಗಶಾಲೆ ಎಂದರೆ ಮಂಗಳೂರು. ಇಲ್ಲಿ ಯಾರೇ ಬಂದು ಬಿಜೆಪಿಯ ಟಿಕೆಟ್ ಪಡೆದು ಚುನಾವಣೆಗೆ ನಿಂತರೆ ಗೆಲ್ಲಿಸುವ ಬಿಜೆಪಿ ಕಾರ್ಯಕರ್ತರು ಇದ್ದಾರೆ.

ಇಲ್ಲಿನ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳು ಹಿಡಿತಕ್ಕೆ ತೆಗೆದುಕೊಂಡಿವೆ. ರೈತರ ಭೂಮಿಯನ್ನು ಕೈಗಾರಿಕೆಗಳು ಕಬಳಿಸಿವೆ. ಉದ್ಯೋಗವನ್ನು ಮಾತ್ರ ಉತ್ತರ ಭಾರತದವರಿಗೆ ನೀಡುತ್ತಿದ್ದಾರೆ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲಿಲ್ಲ. ಸ್ಥಳೀಯರಿಗೆ ಉದ್ಯೋಗ ಸಿಗದಿರುವುದಕ್ಕೆ ಇದೊಂದು ಹಿನ್ನಡೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಿದರೆ ಶೇ. 70ರಷ್ಟು ಉದ್ಯೋಗ ಕನ್ನಡಿಗರಿಗೆ ಸಿಗುತ್ತದೆ. ಹೆಚ್ಚಿನ ಉದ್ಯೋಗ ಕರಾವಳಿಯ ಜನರಿಗೆ ಸಿಗುತ್ತದೆ. ನಮಗೆ ಈಗ ಯಾವುದೇ ಮೀಸಲಾತಿ ಇಲ್ಲ. ಮೊನ್ನೆ ನಡೆದ 165 ಮಂದಿ ನೇಮಕಾತಿಯಲ್ಲಿ ಕರಾವಳಿಯವರಿಗೆ ಸಿಕ್ಕಿದ್ದು ಕೇವಲ 2 ಪೋಸ್ಟ್.

ಇದನ್ನೂ ಓದಿರಿ: ಶವ ಮೆರವಣಿಗೆಯ ಕರಾಳ ಇತಿಹಾಸದಿಂದ ಪಾಠ ಕಲಿತ್ತಿಲ್ಲವೇ ಕರ್ನಾಟಕ ಜನತೆ?

ಓದಿದವರಿಗೆ ಉದ್ಯೋಗ ದೊರೆತರೆ, ಮತ್ತೊಬ್ಬರು ಓದಿನತ್ತ ಗಮನ ಕೊಡುತ್ತಾರೆ. ನನಗೂ ಉದ್ಯೋಗ ದೊರಕುತ್ತದೆ ಎಂಬ ಭರವಸೆಯೊಂದಿಗೆ ವ್ಯಾಸಂಗ ಮಾಡುತ್ತಾರೆ. ಉದ್ಯೋಗ ದೊರಕಿಸುವ ಪ್ರಯತ್ನವನ್ನೇ ರಾಜಕೀಯ ನಾಯಕರು ಮಾಡುತ್ತಿಲ್ಲ. ಇವರಿಗೆ ಮಂಗಳೂರು ಇನ್ನು ಹತ್ತು ವರ್ಷ ಹೀಗೆಯೇ ಇರಬೇಕು. ಮೂರು ಬಾರಿ ಆಯ್ಕೆಯಾದರೂ ಇಲ್ಲಿನ ಸಂಸದರಿಗೆ ಭವಿಷ್ಯದ ಬಗ್ಗೆ ಆಲೋಚನೆಗಳಿಲ್ಲ. ಯಾಕೆಂದರೆ ಅವರು ಕಲಿತದ್ದು ಕೇವಲ ಏಳನೇ ಕ್ಲಾಸ್. ಏಳನೇ ಕ್ಲಾಸ್ ಓದಿದ ಜನ ಮೂರು ಸಲ ಗೆಲ್ಲುತ್ತಾರೆಂದರೆ ಇದು ಕರಾವಳಿಯ ದುರಂತ. ಹಿಂದುತ್ವದ ಹೆಸರಲ್ಲಿ ಅವರು ಗೆಲ್ಲುತ್ತಾರೆ. ಇದನ್ನೆಲ್ಲ ಸರಿ ಮಾಡಬೇಕು ಎಂದರೆ ಜನರು ಎಚ್ಚೆತ್ತುಕೊಳ್ಳಬೇಕು. ಮುಂದೆ ಸರಿಯಾಗಬಹುದು ಎಂಬ ನಂಬಿಕೆ ಇದೆ.

ಬಂಧುತ್ವದ ಕಾನ್ಸೆಪ್ಟ್‌ನಲ್ಲಿ ಕರಾವಳಿ ಜನತೆಗೆ ಉದ್ಯೋಗ ಎಂದು ಹೋರಾಟ ಮಾಡಿದಾಗ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿತು. ರಾಜಕಾರಣಿಗಳಿಗೆ ನುಂಗಲಾರದ ತುತ್ತಾಯಿತು. ಆಗ ನನ್ನ ಮೇಲೆ ಸುಳ್ಳು ಕೇಸ್‌ಗಳನ್ನು ಜಡಿದು ಹಲವು ದಿನಗಳು ಜೈಲಿಗೆ ಹಾಕಿದರು. ನಾನು ಕೂಡ ಸಂಘಪರಿವಾರದಲ್ಲಿ ಇದ್ದವನು, ಬಿಜೆಪಿಗಾಗಿ ದುಡಿದವನು, ಇವರು ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಜೈಲಿಗೆ ಹಾಕಿದರು…

ಉದ್ಯೋಗಕ್ಕಾಗಿ ಕ್ರಾಂತಿ ಮಾಡಿದರೆ ನಮ್ಮ ಮಂಗಳೂರು ಉಳಿಯುತ್ತದೆ. ಜನರಿಗೆ ಉದ್ಯೋಗ ಸಿಕ್ಕರೆ ಸುಖಾಸುಮ್ಮನೆ ಓಡಾಡಿಕೊಂಡು ಇರುವುದಿಲ್ಲ. ಸಂಘ ಪರಿವಾರದ ಕಾರ್ಯಕರ್ತನಾಗಿ ದುಡಿದೆ. ಆದರೆ ಯಾವುದೇ ಹುದ್ದೆಯನ್ನು ಹಿಡಿಯಲು ಹೋಗಲಿಲ್ಲ. ನಮ್ಮ ಬಿಲ್ಲವ ನಾಯಕರಾದ ಜನಾದನ ಪೂಜಾರಿಯವರು ಮೊದಲಿನಿಂದಲೂ ಎಚ್ಚರಿಸುತ್ತಿದ್ದರು: “ಕೋಮುಗಲಭೆಯಲ್ಲಿ, ಇನ್ನಿತರೆ ಗಲಭೆಗಳಲ್ಲಿ ಮೇಲ್ವರ್ಗದ ಜನರು ಇದ್ದಾರಾ? ಅವರಿಗೆ ಶಿಕ್ಷೆ ಆಗಿದೆಯಾ?” ಎಂದು ನಮಗೆ ಕೇಳುತ್ತಿದ್ದರು. ಈ ಎಚ್ಚರ ನನಗಿತ್ತು. ಹೀಗಾಗಿ ಯಾವುದೇ ಹುದ್ದೆಯನ್ನು ಹಿಡಿಯಲಾಗಲಿಲ್ಲ ಎಂಬುದು ಅರಿವಿಗೆ ಬರುತ್ತಾಹೋಯ್ತು.

ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪುತ್ರ ಜೈಶಾ ಅವರನ್ನು ಬಿಸಿಸಿಐ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಅವರು ಯಾಕೆ ತಮ್ಮ ಮಗನನ್ನು ಭಜರಂಗದಳದ ಅಧ್ಯಕ್ಷನನ್ನಾಗಿ ಮಾಡಲಿಲ್ಲ? ಹಿಂದುತ್ವದ ಬಗ್ಗೆ ಮಾತನಾಡುವ ನಾಯಕರು ತಮ್ಮ ಮಕ್ಕಳನ್ನು ಹತ್ತು ವರ್ಷ ಭಜರಂಗದಳದಲ್ಲೋ, ಹಿಂದೂ ಸಂಘಟನೆಗಳಲ್ಲಿಯೋ ಮುಖ್ಯವಾದ ಹುದ್ದೆಗಳಲ್ಲಿ ಕೂರಿಸಬೇಕು. ಅವರ ಮೇಲೆ ಹತ್ತು, ಹದಿನೈದು ಕೇಸ್‌ಗಳು ದಾಖಲಾಗಬೇಕು. ಈ ಸೂಕ್ಷ್ಮಗಳು ನಮ್ಮ ಯುವಕರಿಗೆ ಇದು ತಿಳಿಯುವುದಿಲ್ಲ. ಗಲಭೆಗೆ ಹೋಗುತ್ತಾರೆ. ಕೇಸ್ ಜಡಿಸಿಕೊಳ್ಳುತ್ತಾರೆ. ಯಾವುದಾದರೂ ಉದ್ಯೋಗ ಹುಡುಕಿ ಹೊರಟಾಗ ಪೊಲೀಸ್ ಪ್ರಕರಣಗಳಿಂದಾಗಿ ಕೆಲಸ ಸಿಗದೆ ಹಿಂತಿರುಗುತ್ತಾರೆ. ಸರ್ಕಾರಿ ಕೆಲಸವಂತೂ ಸಿಗುವುದೇ ಇಲ್ಲ. ಕೆಲಸ ಸಿಗದಿದ್ದಾಗ ತಪ್ಪಿನ ಅರಿವಾಗಿ ಸಂಕಟಪಡುತ್ತಾರೆ.

ಕಾಲೇಜು ದಿನಗಳಲ್ಲಿ ಈ ಯುವಕರ ತಲೆ ಬೇರೆ ರೀತಿಯಲ್ಲೇ ಇರುತ್ತದೆ. ಕೇಸರಿ ಹಾಕಿದ ಕೂಡಲೇ ಇಡೀ ದೇಶದ ಪ್ರಧಾನಿಯಾದೆ ಎಂದು ಈ ಹುಡುಗರು ಭಾವಿಸುತ್ತಾರೆ. ಅವರ ಮೇಲೆ ಎರಡು ಮೂರು ಕೇಸ್ ದಾಖಲಾಗಿ, ಕೆಲಸವಿಲ್ಲದೆ ಅಲೆದಾಡುವಾಗ ಸತ್ಯ ಅನುಭವಕ್ಕೆ ಬರುತ್ತದೆ- ನನಗೆ ಈಗ ಅನುಭವ ಆಗಿದೆಯಲ್ಲ ಹಾಗೆ. ಸಂಘಪರಿವಾರದ ಕಾರ್ಯಕರ್ತನಾಗಿದ್ದಾಗ ನನ್ನ ಮೇಲೆ ಹಲವು ಕೇಸ್‌ಗಳು ದಾಖಲಾದವು. ಬಿಜೆಪಿಯವರ ಭ್ರಷ್ಟಾಚಾರ ಪ್ರಶ್ನಿಸಿದಾಗ ಆರು ಪ್ರಕರಣಗಳನ್ನು ಬಿಜೆಪಿ ಶಾಸಕರೇ ನನ್ನ ಮೇಲೆ ದಾಖಲಿಸಿದರು. ಸುಳ್ಳು ಆರೋಪಗಳನ್ನು ಹೊರಿಸಿದರು.

ಇಲ್ಲಿ ನಡೆಯುವ ಕೋಮುಗಲಭೆಯಲ್ಲಿ ಕೊಲೆ ಮಾಡೋರೇ ಬೇರೆ, ಕೊಲೆ ಮಾಡಿದವನೆಂದು ತೋರಿಸುವುದೇ ಬೇರೆಯವನನ್ನು. ಮೊದಮೊದಲಿಗೆ ಈ ಯುವಕರಿಗೆ ಬಹಳ ಗೌರವ ಸಿಗುತ್ತದೆ. ಮರ್ಡರ್ ಕೇಸ್‌ನಲ್ಲಿ ಸಿಲುಕಿ, ಜಾಮೀನಿನ ಮೇಲೆ ಹೊರಗೆ ಬಂದಾಗ ವಿಶೇಷ ಗೌರವ ನೀಡುತ್ತಾರೆ. ಪಾಕಿಸ್ತಾನದ ಉಗ್ರಗಾಮಿಗಳನ್ನು ಕೊಂದು ಬಂದವರಂತೆಯೋ, ಮಿಲಿಟರಿಯಿಂದ ಬಂದವರಂತೆಯೋ ಈ ಹುಡುಗರನ್ನು ಟ್ರೀಟ್ ಮಾಡುತ್ತಾರೆ. ಚುನಾವಣೆ ನಂತರ ಇವರನ್ನು ಕೇಳುವವರು ಇರುವುದಿಲ್ಲ. ಪ್ರಕರಣಗಳಲ್ಲಿ ಸಿಲುಕಿದ ಮೇಲೆ ಈ ಹುಡುಗರು ಕೆಲಸಕ್ಕೆ ಹೋಗುವುದಿಲ್ಲ. ಕೇಸ್ ಜಡಿಸಿಕೊಂಡ ಹುಡುಗರನ್ನು ಚುನಾವಣೆಯ ವೇಳೆ ರಾಜಕಾರಣಿಗಳು ಮಾತನಾಡಿಸೋದೇನು, ಹೆಗಲಮೇಲೆ ಕೈಹಾಕೋದೇನು?- ಇದನ್ನೆಲ್ಲ ನೋಡುವ ಈ ಹುಡುಗರು ದೊಡ್ಡ ಸಾಧನೆ ಮಾಡಿರುವೆ ಎಂದು ಭಾವಿಸುತ್ತಾರೆ.

ಇದನ್ನೂ ಓದಿರಿ: ಪ್ರವೀಣ್‌ ಕೊಲೆ ಪ್ರಕರಣ: ನಳಿನ್‌ ಕಾರು ಉರುಳಿಸಲು ಬಿಜೆಪಿ ಕಾರ್ಯಕರ್ತರ ಯತ್ನ; ಲಾಠಿ ಚಾರ್ಜ್

ಮನುಷ್ಯನ ಭಾವನೆಗೆ ಧಕ್ಕೆಯಾದಾಗ ಕ್ರಿಯೆಗೆ ಪ್ರತಿಕ್ರಿಯೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮರ್ಥಿಸಿಕೊಂಡಿದ್ದಾರೆ. ಎಲ್ಲರೂ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ? ಉನ್ನತ ಹುದ್ದೆಯಲ್ಲಿದ್ದು, ಒಳ್ಳೆಯ ಚಿಂತನೆಗಳನ್ನು ಹೊಂದಿರುವ ವ್ಯಕ್ತಿ ಆ ರೀತಿಯ ಹೇಳಿಕೆಗಳನ್ನು ನೀಡಿದರೆ ಸಾಮಾನ್ಯ ಜನರು ಏನನ್ನು ನಿರೀಕ್ಷಿಸಬಹುದು? ಜನರು ತಮ್ಮ ಭಾವನೆಗಳನ್ನು ತೋಳ್ಬಲದಲ್ಲಿ, ತಲವಾರ್‌ನಲ್ಲಿ ತೋರಿಸಬಹುದು, ಮುಂದೆ ಪಿಸ್ತೂಲಿನಲ್ಲಿಯೂ ತೋರಿಸಬಹುದು. ಇದು ರಾಜಕಾರಣಿಗಳ ವೈಫಲ್ಯತೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರಾಜಕಾರಣಿಗಳು ಬಿಡುತ್ತಿಲ್ಲ. ಕರಾವಳಿ ರಾಜಕಾರಣಿಗಳಿಗೆ ಇದೇ ಬೇಕಾಗಿದೆ.

ಈಗ ಬಿಜೆಪಿ ಅಧಿಕಾರದಲ್ಲಿದೆ. ಚುನಾವಣೆ ಹತ್ತಿರ ಬರುವಾಗ ಕೊಲೆಗಳು ಮತ್ತೆ ಪ್ರಾರಂಭವಾಗುತ್ತವೆ. ಕೋಮುಗಲಭೆ ಆಗಬೇಕೆಂದರೆ ಕೊಲೆ ಹಿಂಸೆ ಎಲ್ಲವನ್ನೂ ಪ್ರಾರಂಭಿಸುತ್ತಾರೆ. ಚುನಾವಣೆ ಹತ್ತಿರ ಬಂದಾಗ ಅವೆಲ್ಲಕ್ಕೂ ಕುಮ್ಮಕ್ಕು ನೀಡಲಾಗುತ್ತದೆ…

ಸುನಿಲ್ ಬಜಿಲಕೇರಿ

ಸುನಿಲ್ ಬಜಿಲಕೇರಿ
ಮಂಗಳೂರಿನ ನಿವಾಸಿ. ಹಲವು ವರ್ಷಗಳ ಕಾಲ ಭಜರಂಗದಳದಲ್ಲಿದ್ದವರು, ಈಗ ಸಂಘಪರಿವಾರದಿಂದ ದೂರವಾಗಿ ’ಹಿಂದುತ್ವದಿಂದ ಬಂಧುತ್ವದೆಡೆಗೆ’ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ‘ಹಿಂದುತ್ವದಿಂದ ಬಂಧುತ್ವದ ಕಡೆಗೆ’ – ಸಂಘಪರಿವಾರದಿಂದ ಹೊರಬಂದ ನಾಯಕರೊಂದಿಗೆ ಮಾತುಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...