ಆಹ್ ಚೋಗೆ ಫ್ರೆಂಚ್ ಭಾಷೆ ಅರ್ಥವಾಗುತ್ತಿರಲಿಲ್ಲ. ಕಿಕ್ಕಿರಿದ ನ್ಯಾಯಾಲಯದಲ್ಲಿ ಒಬ್ಬನಾದ ಮೇಲೆ ಮತ್ತೊಬ್ಬ ಅಧಿಕಾರಿಯ ಸ್ಫೋಟದಂತಹ ಫ್ರೆಂಚನ್ನು ಕೇಳುತ್ತಾ ಕುಳಿತವನಿಗೆ ದಣಿವೂ ಆಗಿತ್ತು, ಬೋರೂ ಆಗಿತ್ತು.
ಫ್ರೆಂಚ್ ಅಧಿಕಾರಿಗಳ ಮಾತು ಏನೋ ಬಡಬಡಿಕೆಯಂತೆ ಕೇಳುತ್ತಿತ್ತು ಆಹ್ ಚೋಗೆ. ಚುಂಗ್ ಗಾನ ಕೊಲೆಗಾರನನ್ನು ಪತ್ತೆ ಹಚ್ಚಲು ದೀರ್ಘ ಕಾಲ ವ್ಯಯಿಸಿದ್ದಲ್ಲದೆ ಕೊನೆಗೂ ಅವನನ್ನು ಹಿಡಿಯದ ಫ್ರೆಂಚರ ಮೂರ್ಖತನವನ್ನು ಕಂಡು ಆಶ್ಚರ್ಯವಾಗಿತ್ತು ಅವನಿಗೆ.. ಪ್ಲಾಂಟೇಷನ್‌ನಲ್ಲಿ ದುಡಿಯುತ್ತಿರುವ ಎಲ್ಲಾ 500 ಕಾರ್ಮಿಕರಿಗೂ ಗೊತ್ತಿತ್ತು ಚುಂಗ್ ಗಾನನ್ನು ಕೊಂದಿದ್ದು ಆಹ್ ಸ್ಯಾನ್ ಅಂತ. ಅವನು ಮಾತ್ರ ಅರೆಸ್ಟ್ ಆಗದೆ ಅರಾಮಾಗಿ ತಿರುಗಿಕೊಂಡಿದ್ದಾನೆ. ಎಲ್ಲಾ ಕೂಲಿಗಳೂ ಒಬ್ಬರ ವಿರುದ್ಧ ಇನ್ನೊಬ್ಬರು ಸಾಕ್ಷ್ಯ ಹೇಳಬಾರದೆಂದು ಗೌಪ್ಯವಾಗಿ ತೀರ್ಮಾನ ತೆಗೆದುಕೊಂಡಿದ್ದೇನೋ ನಿಜ. ಆದರೂ ಫ್ರೆಂಚರು ಸುಲಭವಾಗಿ ಆಹ್ ಸ್ಯಾನ್‌ನನ್ನು ಹಿಡಿಯಬಹುದಾಗಿತ್ತು. ಆದರೆ ಫ್ರೆಂಚರು ಮಹಾ ಮೂರ್ಖರು!!
ಆಹ್ ಚೋ ಹೆದರಲು ಕಾರಣವೇ ಇಲ್ಲ ಯಾಕೆಂದರೆ ಅವನೇನೂ ಮಾಡಿಲ್ಲ. ಕೊಲೆಯಲ್ಲಿ ಅವನ ಪಾತ್ರ ಏನೂ ಅಂದರೆ ಏನೂ ಇಲ್ಲ. ಕೊಲೆಯಾದ ಸ್ಥಳದಲ್ಲಿ ಅವನಿದ್ದದ್ದು ಹೌದು. ತೋಟದ ಮೇಲ್ವಿಚಾರಕ ಸ್ಖೆಮ್ಮರ್ ಕೊಲೆ ನಡೆದ ತಕ್ಷಣ ಇವರಿದ್ದ ಕೋಣೆಗೆ ನುಗ್ಗಿದವನು ಆಹ್ ಚೋನನ್ನು ಇನ್ನಿತರ ನಾಲ್ಕೋ ಐದೋ ಜನರ ಜೊತೆಗೆ ಹಿಡಿದ. ಆದರೆ ಅದರಿಂದೇನಾಗುತ್ತದೆ? ಚುಂಗ್ ಗಾನಿಗೆ ಎರಡೇ ಇರಿತ ಆಗಿದ್ದು. ನಾಲ್ಕೈದು ಜನ ಎರಡೇ ಇರಿತ ಮಾಡಲು ಸಾಧ್ಯವಿಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ.
ಉಳಿದ ನಾಲ್ಕು ಜನರ ಜೊತೆ ಆಹ್ ಚೋ ಕೂಡ ಕೋರ್ಟಿನಲ್ಲಿ ಘಟನೆಯ ವಿವರದ ಬಗ್ಗೆ ಏನೇನೋ ಹೇಳಿ ಗಲಿಬಿಲಿ ಸೃಷ್ಟಿಸಿದರೂ ಲಾಜಿಕ್ ಪ್ರಕಾರ ಯೋಚಿಸಿದರೆ ಯಾರಿಗಾದರೂ ಈ ಐವರೂ ಅಮಾಯಕರು ಎಂಬುದು ಗೊತ್ತಾಗುವುದಿಲ್ಲವೇ? ಹೀಗೆ ಯೋಚಿಸುತ್ತಿದ್ದ ಆಹ್ ಚೋ. ಅವತ್ತು ಜಗಳದ ಶಬ್ದ ಕೇಳಿ ಅಲ್ಲೇ ಹೋಗುತ್ತಿದ್ದ ಸ್ಖೆಮ್ಮರ್ ಆ ಸ್ಥಳಕ್ಕೆ ಓಡಿ ಬಂದಂತೆಯೇ ಇವರೂ ಹೋಗಿದ್ದರು. ಹೌದು, ಸ್ಖೆಮ್ಮರ್‌ಗಿಂತ ಮೊದಲೇ ಇವರು ಹೋಗಿದ್ದು ನಿಜ ಅಷ್ಟೇ. ಜಗಳವಾಡುವ ಶಬ್ದ ಕೇಳಿ ಅಲ್ಲೇ ಹೋಗುತ್ತಿದ್ದ ಸ್ಖೆಮ್ಮರ್ ಐದು ನಿಮಿಷ ಹೊರಗೆ ನಿಂತು ಆಲಿಸಿ ಆಮೇಲೆ ಒಳಹೋಗಿದ್ದ. ಅದಾಗಲೇ ಈ ಐವರೂ ಖೈದಿಗಳೂ ಅಲ್ಲಿದ್ದರು. ಹೀಗಾಗಿ ಅವರು ಆಗಷ್ಟೇ ಒಳಬಂದವರಲ್ಲ ಎಂದು ಸ್ಖೆಮ್ಮರ್ ಪ್ರತಿಪಾದಿಸುತ್ತಿದ್ದ. ಯಾಕೆಂದರೆ ಐದು ನಿಮಿಷ ಅವನು ಬಾಗಿಲ ಬಳಿಯೇ ನಿಂತಿದ್ದ. ಆದರೇನು? ಇವರು ಸ್ಖೆಮ್ಮರ್ ತಪ್ಪು ತಿಳಿದಿದ್ದಾನೆ ಎಂದು ವಾದಿಸಲಿಲ್ಲವೇ? ಐವರೂ ತಮಗೆ ಖಂಡಿತ ಬಿಡುಗಡೆಯಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಬರಿ ಎರಡು ಇರಿತಕ್ಕೆ ಐವರ ತಲೆ ಯಾಕಾದರೂ ತೆಗೆದಾರು? ಅದಲ್ಲದೆ ಯಾವ ವಿದೇಶಿ ಪಿಶಾಚಿಯೂ ಕೊಲೆಯನ್ನು ನೋಡಿಲ್ಲ. ಆದರೂ ಈ ಫ್ರೆಂಚರು ಮೂರ್ಖರು. ಚೈನಾದಲ್ಲಾಗಿದ್ರೆ ಮ್ಯಾಜಿಸ್ಟ್ರೇಟ್ ಎಲ್ಲರಿಗೂ ಚಿತ್ರಹಿಂಸೆ ಕೊಟ್ಟು ಸತ್ಯ ಹೊರತರಲು ಆದೇಶ ಕೊಟ್ಟೇಬಿಡುತ್ತಿದ್ದರು. ಥರ್ಡ್ ಡಿಗ್ರಿ ಪ್ರಯೋಗ ಸತ್ಯ ಹೊರತರಲು ಸುಲಭವಾದ ಮಾರ್ಗ. ಆದರೆ ಈ ಫ್ರೆಂಚರು ಹಿಂಸೆ ಪ್ರಯೋಗಿಸಲಿಲ್ಲ. ಶತ ಮೂರ್ಖರು. ಅವರಿಗೆ ಚುಂಗ್ ಗಾನ ಕೊಂದವರು ಯಾರೆಂದು ತಿಳಿಯುವುದು ಸಾಧ್ಯವೇ ಇಲ್ಲ.
ಆಹ್ ಚೋಗೆ ಅರ್ಥವೇ ಆಗದ್ದು ಏನೆಂದರೆ: ಸಿಕ್ಕಾಪಟ್ಟೆ ದುಡ್ಡು ಸುರಿದು ತಹಿತಿಗೆ ಐನೂರು ಕಾರ್ಮಿಕರನ್ನು ಕರೆದು ತಂದಿದ್ದು ಪ್ಲಾಂಟೇಶನ್‌ನ ಮಾಲಿಕತ್ವ ಹೊಂದಿದ್ದ ಇಂಗ್ಲಿಷ್ ಕಂಪೆನಿ. ಹಾಗಾಗಿ ಅವರಂತೂ ಈ ದುಬಾರಿ ಕೆಲಸಗಾರರನ್ನು ಕಳೆದುಕೊಳ್ಳಲು ಇಚ್ಛಸುವುದಿಲ್ಲ. ಅವರವರೇ ಜಗಳ ತೆಗೆದುಕೊಂಡು ಒಬ್ಬರನ್ನೊಬ್ಬರು ಕೊಂದುಕೊಳ್ಳಲು ಪ್ರಚೋದಿಸುವುದು ಇಂಗ್ಲಿಷರಿಂದ ಸಾಧ್ಯವೇ ಇಲ್ಲ. ಇನ್ನು ಫ್ರೆಂಚರು. ಅವರೋ ತಮ್ಮ ಮಹತ್ತರವಾದ ಕಾನೂನು ವ್ಯವಸ್ಥೆಯ ಮೌಲ್ಯಗಳನ್ನು ಚಿಂಗಿಗಳ ಮೇಲೆ ಹೇರಲು ತುದಿಕಾಲಿನಲ್ಲಿ ನಿಂತಿದ್ದವರು. ಆಗಾಗ ಒಂದು ಒಳ್ಳೆಯ ನಿದರ್ಶನ ಹುಟ್ಟು ಹಾಕುವುದು ಅವರಿಗೆ ಬಹಳ ಹೆಸರು ತಂದುಕೊಡುವಂತದ್ದು. ಈ ಅವಕಾಶ ಯಾಕಾದರೂ ತಪ್ಪಿಸಿಕೊಂಡಾರು? ಹಂಗಲ್ಲದೆ ಮಾನವೀಯ ಕಾಳಜಿ ಹೊಂದಿ, ದುರ್ಬಲರಾದ ಕಾರಣಕ್ಕೆ ಬೆಲೆ ತೆರುತ್ತಾ ನೋವಿನಲ್ಲಿ, ದುಗುಡದಲ್ಲಿ, ಕಾಲ ಕಳೆಸುವುದಾದರೆ ಈ ನ್ಯೂ ಕ್ಯಾಲೆಡೋನಿಯಾದ (ಫ್ರೆಂಚರ ವಸಾಹತು) ಉದ್ದೇಶವಾದರೂ ಏನು? ಏನೂ ಬಗೆಹರಿಯುತ್ತಿಲ್ಲ ಆಹ್ ಚೋಗೆ.
ಏನೂ ಅರ್ಥ ಆಗುತ್ತಲೇ ಇಲ್ಲ ಆಹ್ ಚೋಗೆ. ನ್ಯಾಯಾಲಯದಲ್ಲಿ ಕುಳಿತು ಅತ್ಯಂತ ಗೊಂದಲದಿಂದ ಕೂಡಿದ ತೀರ್ಮಾನ ಬಂದು ತನ್ನ ಮತ್ತು ಸಂಗಡಿಗರ ಬಿಡುಗಡೆಯಾಗಿ ವಾಪಸ್ಸು ತೋಟಕ್ಕೆ ಹೋಗಿ ಉಳಿದ ಒಪ್ಪಂದದ ದಿನಗಳನ್ನು ಪೂರೈಸುವಂತಾಗಲಿ ಎಂದು ಆಶಿಸುತ್ತಿದ್ದಾನೆ. ತೀರ್ಮಾನ ಸದ್ಯದಲ್ಲೇ ಬರುವಂತಿದೆ. ವಾದ-ಪ್ರತಿವಾದ ಅಂತಿಮ ಘಟ್ಟ ತಲುಪುತ್ತಿದೆ. ಸಾಕ್ಷಿಗಳ ಹೇಳಿಕೆ ಮುಗಿದಿದೆ. ನಾಲಗೆ ಆ ಕಡೆ ಈ ಕಡೆ ಹೊರಳಿಸಿ ವಾದ ಮಂಡನೆ ಮಾಡುವುದು ಮುಗಿದಿದೆ. ಫ್ರೆಂಚ್ ಪಿಶಾಚಿಗಳೂ ಸುಸ್ತಾಗಿದ್ದಾರೆ. ಅವರೂ ತೀರ್ಮಾನ ಕೇಳಲು ಕಾದಿದ್ದಾರೆ. ಕಾಯುತ್ತಾ ಕೂತಂತೇ ಅವನ ಮನ ಹಿಂದಕ್ಕೋಡಿತು. ತಹಿತಿಗೆ ಬರಲು ಒಪ್ಪಂದಕ್ಕೆ ಸಹಿ ಹಾಕಿ ಹಡಗು ಹತ್ತಿದ ದಿನಕ್ಕೆ ಹೋಯ್ತು ನೆನಪು. ಅವನ ಹಳ್ಳಿಯಲ್ಲಿ ಬಹಳ ಕಷ್ಟ ಇತ್ತು. ಹಾಗಾಗಿ ದಕ್ಷಿಣ ಸಮುದ್ರ ಪ್ರದೇಶಗಳಲ್ಲಿ ಐದು ವರ್ಷಗಳವರೆಗೆ ದಿನಕ್ಕೆ ಐವತ್ತು ಮೆಕ್ಸಿಕನ್ ಸೆಂಟ್ಸ್‌ಗೆ ದುಡಿಯಲು ಸೈನ್ ಮಾಡಿದಾಗ ಅವನು ತನ್ನನ್ನು ತಾನು ಅದೃಷ್ಟಶಾಲಿ ಎಂದು ಬಗೆದಿದ್ದ. ಇಡೀ ವರ್ಷ ಹತ್ತು ಮೆಕ್ಸಿಕನ್ ಡಾಲರ್‌ಗೆ ದುಡಿಯುವ ಗಂಡಸರು ಅವನ ಊರಲ್ಲಿದ್ದರು. ಇನ್ನು ಐದೇ ಡಾಲರ್‌ಗೆ ಬಲೆ ಹೆಣೆಯುವ ಹೆಂಗಸರು, ಅಂಗಡಿ ಮಾಲೀಕರ ಮನೆಗಳಲ್ಲಿ ವರ್ಷಕ್ಕೆ ನಾಲ್ಕು ಡಾಲರ್ ಪಡೆದು ಕೆಲಸ ಮಾಡುವ ಹೆಂಗಸರು ಅವನ ಊರಲ್ಲಿದ್ದರು. ಇಲ್ಲಿ ಇವನಿಗೆ ಒಂದೇ ದಿನಕ್ಕೆ ಐವತ್ತು ಸೆಂಟ್ಸ್! ಒಂದೆ ದಿನಕ್ಕೆ ಅಷ್ಟೊಂದು ದುಡ್ಡು!! ಹಾಗಾಗಿ ಕೆಲಸ ಕಷ್ಟದ್ದಾದರೆ ಏನಾಯ್ತು? ಐದು ವರ್ಷದ ಕೊನೆಗೆ ಅವನು ಮನೆಗೆ ಮರಳಬಹುದು (ಕಾಂಟ್ರಾಕ್ಟ್‌ನಲ್ಲಿ ಹಾಗೆ ಇದ್ದಿದ್ದು). ಮತ್ತು ಯಾವತ್ತೂ ಕೆಲಸ ಮಾಡುವುದೇ ಬೇಡ ಅಷ್ಟು ಶ್ರೀಮಂತನಾಗಿರುತ್ತಿದ್ದ. ಅವನದೇ ಮನೆ, ಹೆಂಡತಿ, ಬೆಳೆಯುವ ಮಕ್ಕಳು. ಹೌದು ಮನೆಯ ಹಿಂಬದಿ ಒಂದು ಸಣ್ಣ ಕೈತೋಟ, ಧ್ಯಾನ ಮಾಡುವ ಸ್ಥಳ, ಚಿಕ್ಕ ಕೊಳ, ಅದರಲ್ಲಿ ಬಂಗಾರದ ಬಣ್ಣದ ಮೀನುಗಳು, ಸುತ್ತಲೂ ಇರುವ ವಿವಿಧ ಮರಗಳಿಗೆ ಕಟ್ಟಿರುವ ಗೆಜ್ಜೆಗಳ ನಾದ, ಧ್ಯಾನಕ್ಕೆ ಅಡಚಣೆಯಾಗದಂತೆ ಸುತ್ತಲೂ ಎತ್ತರದ ಗೋಡೆ ಇವೆಲ್ಲವನ್ನೂ ಹೊಂದಬಹುದು.
ಹ್ಞಾ, ಈಗಾಗಲೇ ಅವ ಮೂರು ವರ್ಷಗಳನ್ನು ಪೂರೈಸಿದ್ದಾನೆ. ಅವನ ಊರಿನ ಲೆಕ್ಕದಲ್ಲಿ ಈಗಾಗಲೇ ಶ್ರೀಮಂತ ಅವನು. ಈಗ ಇಲ್ಲಿಯ ತೋಟದ ಕೆಲಸ ಮತ್ತು ಅವನ ಕನಸಿನ ಧ್ಯಾನ ಮಂದಿರದ ನಡುವೆ ಎರಡೇ ವರ್ಷಗಳು ಉಳಿದಿವೆ. ಆದರೆ ಈಗ ಚುಂಗ್ ಗಾನ ಕೊಲೆಯಾದ ಅದೃಷ್ಟಹೀನ ಘಟನೆಯ ವೇಳೆ ಆ ಸ್ಥಳದಲ್ಲಿ ಹಾಜರಿದ್ದ ಮಾತ್ರಕ್ಕೆ ಅವನ ಗಳಿಕೆ ಕರಗುತ್ತಾ ಇದೆ. ಈಗಾಗಲೇ ಮೂರು ವಾರಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಈ ಮೂರು ವಾರಗಳ ಕಾಲ ಪ್ರತಿದಿನ ಐವತ್ತು ಸೆಂಟ್ಸ್ ಕಳೆದುಕೊಂಡಿದ್ದಾನೆ. ಆದರೆ ಏನು? ಈಗ ತೀರ್ಮಾನ ಜಾರಿಗೊಂಡು ಮತ್ತೆ ಮರಳಿ ಕೆಲಸಕ್ಕೆ ಹೋಗುತ್ತಾನಲ್ಲ?
ಆಹ್ ಜೋ ಇಪ್ಪತ್ತೆರಡು ವರ್ಷದ ಯುವಕ. ಉಲ್ಲಾಸವಾಗಿರುವವ ಮತ್ತು ತುಂಬಾ ಒಳ್ಳೆಯ ಸ್ವಭಾವದವ. ಹಸನ್ಮುಖಿಯಾಗಿರುವುದು ತುಂಬಾ ಸುಲಭ ಅವನಿಗೆ. ಆ ಕೀಳು ಏಷ್ಯನ್ನರಂತೆ ಅವನ ಶರೀರ ತೆಳ್ಳಗಿದ್ದರೂ ಮುಖ ಗುಂಡಾಗಿದೆ. ಅವನ ಗುಂಡಗಿನ ಚಂದ್ರನಂಥಾ ಮುಖ ಒಂದು ಅಪರೂಪದ, ಸುಂದರ, ಸಹೃದಯ ಭಾವವನ್ನು ಸೂಸುತ್ತಿತ್ತು. ಅವನ ದೇಶದವರಲ್ಲಿ ಅಪರೂಪವಾದ ಭಾವ ಅದು. ಅವನ ನೋಡಿದರೆ ಸಾಕು ಗೊತ್ತಾಗುತ್ತಿತ್ತು ಒಳ್ಳೆಯ ನಡವಳಿಕೆಯ ಹುಡುಗ ಎಂದು. ಯಾರೊಂದಿಗೂ ಜಗಳ, ಮನಸ್ತಾಪ ಅವನಿಗಿಲ್ಲ. ಜೂಜು ಆಡುವುದಿಲ್ಲ ಕೂಡ. ಅವನ ಆತ್ಮ ಜೂಜು ಆಡುವವರಷ್ಟು ಒರಟಲ್ಲ. ಅಲ್ಪತೃಪ್ತ. ಹತ್ತಿಯ ಹೊಲದಲ್ಲಿ ಸಿಕ್ಕಾಪಟ್ಟೆ ಕಷ್ಟದ ಕೆಲಸದ ನಂತರ ಸಿಗುವ ವಿರಾಮವೇ ಅಪರಿಮಿತ ಸಂತೋಷ ಕೊಡುವ ವಿಚಾರ ಅವನಿಗೆ. ಒಂಟಿ ಹೂವನ್ನು ನೋಡುತ್ತ ಬದುಕಿನ ವೈಚಿತ್ರ್ಯಗಳ ಬಗ್ಗೆ ಧ್ಯಾನಿಸುತ್ತ ಗಂಟೆಗಟ್ಟಲೆ ಕೂರಬಲ್ಲ. ಮರಳುದಂಡೆಯಿಂದ ಕಾಣುವ ನೀಲಿ ಕೊಕ್ಕರೆ ನೀರಿನಲ್ಲಿ ಸೃಷ್ಟಿಸುವ ಕಣ್ಣಲಗೆ ಚಂದ್ರಾಕೃತಿ, ಬೆಳ್ಳಿ ಹನಿಗಳನ್ನು ಸಿಡಿಸುತ್ತಾ ಮೇಲೇಳುವ ಮೀನುಗಳು, ಮುತ್ತು, ಗುಲಾಬಿ ಪೋಣಿಸಿದಂತೆ ಕಾಣುವ ನೀರಿನ ಸಣ್ಣ ಹರವಿನ ಮೇಲೆ ಕಾಣುವ ಸೂರ್ಯಾಸ್ತ ಎಲ್ಲವೂ ನೋವಿನ ಸರಮಾಲೆಯನ್ನು, ಸ್ಖೆಮ್ಮರ್‌ನ ಚಾಟಿ ಏಟಿನ ಉರಿಯನ್ನೂ ಕ್ಷಣ ಮಾತ್ರದಲ್ಲಿ ಮರೆಯಿಸುವ ಲೋಕಕ್ಕೆ ಕೊಂಡೊಯ್ಯುತ್ತವೆ.
ಕಾರ್ಲೌ ಸ್ಖೆಮ್ಮರ್ ಕಟುಕ. ಕಟುಕರಲ್ಲಿ ಕಟುಕ. ಆದರೇನು? ಅವನೂ ಸಂಬಳ ಗಳಿಸುವವನು! ಐನೂರು ಗುಲಾಮರಲ್ಲಿ ಒಬ್ಬೊಬ್ಬರ ಮೈಯಲ್ಲಿಯ ಕಟ್ಟಕಡೆಯ ಬಿಂದುವಿನ ಉಪಯೋಗ ಆಗುವವರೆಗೂ ಕೆಲಸ ತೆಗೆಯುತ್ತಿದ್ದ. ಹೇಗೂ ಅವರ ಅವಧಿ ಮುಗಿಯುವವರೆಗೂ ಐನೂರು ಜನರೂ ಗುಲಾಮರಾಗೇ ಉಳಿಯುವವರು. ಇವರ ಕೊನೆ ಹನಿವರೆಗಿನ ಶಕ್ತಿಯನ್ನು ರಫ್ತಿಗೆ ತಯಾರಾದ ಹಗುರವಾದ ಉತ್ಕೃಷ್ಟ ಹತ್ತಿಯ ಮೂಟೆಗಳನ್ನಾಗಿ ಪರಿವರ್ತಿಸಲು ಸ್ಖೆಮ್ಮರ್ ಕೂಡ ಪರಿಶ್ರಮಿಸುತ್ತಿದ್ದ. ಅವನ ಅನಾಗರಿಕ ಕ್ರೌರ್ಯವೇ ಈ ಪರಿವರ್ತನೆಯನ್ನು ಸಾಧ್ಯ ಮಾಡುತ್ತಿತ್ತು! ಜೊತೆಗೆ ಅವನು ಉಪಯೋಗಿಸುತ್ತಿದ್ದ ಮೂರಿಂಚು ಅಗಲದ ಮಾರುದ್ದದ ದಪ್ಪ ಚರ್ಮದ ಬೆಲ್ಟ್ ಕೂಡ ಅವನ ಕೆಲಸ ತೆಗೆಯುವ ಕಾರ್ಯಕ್ಕೆ ಸಹಾಯ ಮಾಡುತ್ತಿತ್ತು. ಯಾವಾಗಲೂ ಅವನ ಜೊತೆ ಇರುತ್ತಿದ್ದ ಆ ಬೆಲ್ಟ್ ಆಗಾಗ ಸ್ಫೋಟಕ ಶಬ್ದದೊಂದಿಗೆ ಯಾವುದಾದರೂ ಕೂಲಿಯ ಬಾಗಿದ ಬೆತ್ತಲೆ ಬೆನ್ನಿನ ಮೇಲೆ ಇಳಿಯುತ್ತಿತ್ತು. ಕೂಲಿಗಳು ಕೆಲಸ ಮಾಡುತ್ತಿರುವ ಗದ್ದೆಯಲ್ಲಿ ಸ್ಖೆಮ್ಮರ್ ಇಳಿದಾಗ ಈ ಶಬ್ದ ಪದೇಪದೇ ಕೇಳುತ್ತಿತ್ತು.
ಕೂಲಿ ಕೆಲಸದ ಗುತ್ತಿಗೆ ವಹಿಸಿಕೊಂಡ ಮೊದಲ ವರ್ಷದಲ್ಲಿ ಒಂದೇಒಂದು ಮುಷ್ಟಿ ಪ್ರಹಾರದಿಂದ ಒಬ್ಬ ಕೂಲಿಯ ಜೀವ ತೆಗೆದಿದ್ದ ಈ ಸ್ಖೆಮ್ಮರ್. ಒಂದೇ ಬಾರಿಗೆ ಮೊಟ್ಟೆಯನ್ನು ಹಿಸುಕಿದಂತೇನೂ ಕೂಲಿಯ ತಲೆ ಒಡೆಯಲಿಲ್ಲ ಅವನು. ಆದರೆ ಆ ಹೊಡೆತ ಕೂಲಿಯ ತಲೆಯ ಒಳಗೆ ಇರುವುದನ್ನೆಲ್ಲಾ ಎಗ್ ಬೀಟ್ ಮಾಡಿದಂತೆ ಕಲಸಲು ಸಾಧ್ಯವಾಗುವಷ್ಟು ಜೋರಾಗಿತ್ತು.
ಒಂದು ವಾರ ಅಸೌಖ್ಯದಿಂದ ನರಳಿ ಅವ ತೀರಿಹೋದ. ಆದರೆ ಚೀನಿಯರು ತೆಹಿತಿಯನ್ನು ಆಳುವ ಫ್ರೆಂಚ್ ಸೈತಾನರಿಗೆ ದೂರು ಕೊಡಲಿಲ್ಲ. ಯಾಕೆಂದರೆ ಅವರ ಸಮಸ್ಯೆ ಸ್ಖೆಮ್ಮರ್. ಅವನಿಗೆ ಕೋಪ ಬಾರದಂತೆ ನೋಡಿಕೊಳ್ಳಬೇಕಾದ್ದು ಅವರ ಜವಾಬ್ದಾರಿ. ಹೊಲದಲ್ಲಿ ಮತ್ತು ಎಷ್ಟೋ ಸಾರಿ ಮಲಗುವ ಜಾಗಗಳಲ್ಲೂ ನುಸುಳುವ ವಿಷ ಜಂತುಗಳಿಂದ ಪಾರಾಗುವುದು ಅವರದೇ ಜವಾಬ್ದಾರಿ ಅಲ್ಲವೇ? ಇದೂ ಹಾಗೇ. ಚಿಂಗಿಗಳು- ಆ ದ್ವೀಪದ ಕಂದು ಚರ್ಮದ ಸೋಮಾರಿ ಜನ ಅವರನ್ನು ಹಾಗೇ ಕರೆಯುವುದು- ಸ್ಖೆಮ್ಮರಿಗೆ ಜಾಸ್ತಿ ಕೋಪ ಬಾರದಂತೆ ಎಚ್ಚರ ವಹಿಸುತ್ತಿದ್ದರು. ಅಂದರೆ ಶಕ್ತಿಯ ಕೊನೆ ಹನಿಯವರೆಗೂ ದುಡಿಯುವುದು ಎಂದು ಅರ್ಥ. ಅವನ ಒಂದು ಹೊಡೆತ ಅಂದರೆ ಕಂಪನಿಗೆ ಸಾವಿರಾರು ಡಾಲರಿನ ನಷ್ಟ. ಆದರೆ ಸ್ಖೆಮ್ಮರಿಗೆ ಏನೂ ಬಾಧಿಸುವುದಿಲ್ಲ!
ಫ್ರೆಂಚರಿಗೆ ಇಲ್ಲಿ ವಸಾಹತು ನಿರ್ಮಿಸುವ ಯಾವ ಇರಾದೆಯೂ ಇಲ್ಲ. ಇಲ್ಲಿಯ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವ ಮಕ್ಕಳಾಟಿಕೆಯಂತಹ ಆಟದಿಂದ ಸುಸ್ತು ಹೊಡೆದ ಅವರು ಇಂಗ್ಲಿಷ್ ಕಂಪನಿ ದ್ವೀಪದ ಉತ್ತರಾಧಿಕಾರಿಯಾಗುವುದನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದರು. ಸ್ಖೆಮ್ಮರನ ಮುಷ್ಟಿ ಗುದ್ದು, ಚಿಂಗಿಯ ಸಾವು ಇವು ಫ್ರೆಂಚರನ್ನು ಯಾವ ರೀತಿಯಿಂದ ಬಾಧಿಸಬಲ್ಲದು? ಅವನೊಬ್ಬ ಚಿಂಗಿ ಬೇರೆ!
ಅಷ್ಟಕ್ಕೂ ಡಾಕ್ಟರರ ಸರ್ಟಿಫಿಕೇಟ್ ಪ್ರಕಾರ ಅವನು ಸತ್ತಿದ್ದು ಬಿಸಿಲಿನ ಝಳದಿಂದ! ತೆಹಿತಿಯ ಇತಿಹಾಸದಲ್ಲೇ ಬಿಸಿಲಿನ ಝಳದಿಂದ ಸತ್ತವರ ಉದಾಹರಣೆ ಇಲ್ಲ. ಆದರೆ ಈ ಕೂಲಿ ಸತ್ತಿದ್ದು ಅದರಿಂದಲೇ. ಮತ್ತು ಆ ಕಾರಣವೇ ಅವನ ಸಾವನ್ನು ಅನನ್ಯ ಅನಿಸಿದ್ದು. ಅದನ್ನೇ ಡಾಕ್ಟರರು ಕೂಡ ಸರ್ಟಿಫಿಕೇಟಲ್ಲಿ ನಮೂದಿಸಿದ್ದರು. ಪ್ರಾಮಾಣಿಕ ವ್ಯಕ್ತಿ ಆತ. ಸಲ್ಲಬೇಕಾದ್ದು ಸಂದಿರಬಹುದು. ಇಲ್ಲದಿದ್ದರೆ ತೆಹಿತಿಯ ಉದ್ದದ ಸೋಲಿನ ಇತಿಹಾಸಕ್ಕೆ ಇನ್ನೊಂದು ಸೋಲು ಸೇರ್ಪಡೆಯಾಗುತ್ತಿತ್ತು.
ಈ ಬಿಳಿಯ ಪಿಶಾಚಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನ್ಯಾಯಾಲಯದ ಕೊಠಡಿಯಲ್ಲಿ ತೀರ್ಪಿಗಾಗಿ ಕಾದು ಕುಳಿತ ಆಹ್ ಚೋ ಅರ್ಥವೇ ಆಗದ ಊಹಿಸಲೂ ಸಾಧ್ಯವಿಲ್ಲದ ಬಿಳಿಯರ ಸ್ವಭಾವದ ಬಗ್ಗೆಯೇ ಯೋಚಿಸುತ್ತಿದ್ದ. ಅವರ ಮೆದುಳಿನಲ್ಲಿ ಏನಾಗುತ್ತಿದೆ ಎಂಬುದನ್ನು ಯಾರೂ ಹೇಳಲಾರರು. ಅವನು ಕೆಲ ಬಿಳಿಯರನ್ನು ಕಂಡಿದ್ದ. ಎಲ್ಲರೂ ಒಂದೇ ಥರ. ನಾವಿಕರು, ಅಧಿಕಾರಿಗಳು, ಫ್ರೆಂಚ್ ಅಧಿಕಾರಿಗಳು, ತೋಟದಲ್ಲಿರುವ ಬಿಳಿಯರು, ಸ್ಖೆಮ್ಮರನಾದಿಯಾಗಿ. ಎಲ್ಲರೂ ಒಂದೇ, ಅವರೆಲ್ಲರ ಮನಸ್ಸೂ ವಿಚಿತ್ರವಾಗಿ, ಯಾರ ಜಪ್ತಿಗೂ ನಿಲುಕದಂತೆ ಚಲಿಸುತ್ತಿತ್ತು. ಹೇಳುವಂತಾ ಕಾರಣವೇ ಇಲ್ಲದೆ ಸಿಟ್ಟಿಗೇಳುತ್ತಾರೆ, ಮತ್ತು ಅವರ ಸಿಟ್ಟು ಯಾವಾಗಲೂ ಅಪಾಯಕಾರಿ. ಅಂತಹ ಸಮಯದಲ್ಲಿ ಅವರು ಕಾಡು ಪ್ರಾಣಿಗಳಂತೆ ವರ್ತಿಸುವರು. ಸಣ್ಣಸಣ್ಣ ವಿಷಯಗಳಿಗೂ ತಲೆ ಬಿಸಿ ಮಾಡಿಕೊಳ್ಳುವರು. ಅದರಿಂದ ಕೆಲವು ಸಾರಿ ಚಿಂಗಿಗಳಿಗಿಂತ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವರು! ಚಿಂಗಿಗಳಂತೆ ಸಮಾಧಾನಿಗಳಲ್ಲ. ಬಕಾಸುರರಂತೆ ತಿನ್ನುವರು ಮತ್ತು ಕುಡಿಯುವರು. ಯಾವ ವರ್ತನೆ ಅವರನ್ನು ಪ್ರಸನ್ನಗೊಳಿಸುವುದು ಅಥವಾ ಹಠಾತ್ತನೆ ಸಿಟ್ಟಿಗೆಬ್ಬಿಸುವುದು ಎಂದು ಯಾವ ಚೀನೀಗೂ ಊಹಿಸಲು ಸಾಧ್ಯವಿಲ್ಲ. ಒಂದು ಸಲ ಅವರ ಮನಗೆದ್ದ ಕೆಲಸ ಇನ್ನೊಂದು ಸಾರಿ ಸಿಟ್ಟಿಗೇಳಿಸುತ್ತಿತ್ತು. ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ನೋಡಲು ಚೀನಿಯರಿಗೆ ಸಾಧ್ಯವಾಗದಂತೆ ಬಿಳಿ ಪಿಶಾಚಿಗಳ ಕಣ್ಣ ಹಿಂದೆ ಒಂದು ಪರದೆ ಇರುತ್ತಿತ್ತು. ಇವೆಲ್ಲದರ ಹೊರತಾಗಿ ಅವರು ಕೆಲಸ ತೆಗೆಯುವುದರಲ್ಲಿ, ಫಲಿತಾಂಶ ತರುವುದರಲ್ಲಿ ನಿಷ್ಣಾತರು. ಹೌದು ಬಿಳಿಯರು ಒಂಥರಾ ಅಧ್ಬುತ ಜೀವಿಗಳು ಆದರೂ ಪಿಶಾಚಿಗಳು. ಸ್ಖೆಮ್ಮರನನ್ನೇ ನೋಡಿ…
ತೀರ್ಪು ಇಷ್ಟು ನಿಧಾನ ಯಾಕಾಗುತ್ತಿದೆ ಎಂದು ಆಹ್ ಚೋಗೆ ಆಶ್ಚರ್ಯ ಆಗುತ್ತದೆ. ವಿಚಾರಣೆಗೆ ಬಂದ ಆಪಾದಿತರಲ್ಲಿ ಒಬ್ಬರೂ ಕೊಲೆಯಾದ ಚುಂಗ್ ಗಾನ ಮೈಮೇಲೆ ಕೈ ಹಾಕಿದವರಲ್ಲ. ಆಹ್ ಸ್ಯಾನ್ ಒಬ್ಬನೇ ಅವನನ್ನು ಕೊಂದವನು. ಅವನೇ ಚುಂಗ್ ಗಾನ ಹೆಣೆದ ಜಡೆಯನ್ನು ಹಿಡಿದು ಅವನ ತಲೆಬಗ್ಗಿಸಿ ಹಿಂದಿನಿಂದ ಚೂರಿ ಇರಿದು ಕೊಂದದ್ದು. ಎರಡು ಬಾರಿ ಇರಿದ. ನ್ಯಾಯಾಲಯದಲ್ಲಿ ಕುಳಿತಂತೇ ಆಹ್ ಚೋ ಮತ್ತೆ ಕೊಲೆ ನಡೆದದ್ದನ್ನು (ಕಣ್ಣು ಮುಚ್ಚಿ) ಕಣ್ಣ ಮುಂದೆ ತಂದುಕೊಂಡ. ಜಗಳ, ಕೆಟ್ಟ ಬೈಗುಳಗಳ ವಿನಿಮಯ, ಗೌರವಾನ್ವಿತ ಹಿರಿಯರನ್ನು ಅವಮಾನಿಸುವ ಬೈಗುಳಗಳು, ಇನ್ನೂ ಹುಟ್ಟದ ಮುಂದಿನ ಪೀಳಿಗೆಗೆ ಹಾಕುವ ಶಾಪ, ಆಹ್ ಸ್ಯಾನ್ ಚಂಗನೆ ಎಗರಿದ್ದು, ಚುಂಗ್ ಗಾನ ಹೆಣೆದ ಜಡೆಯನ್ನು ಹಿಡಿದು ಬಗ್ಗಿಸಿದ್ದು, ಎರಡು ಬಾರಿಯ ಇರಿತ, ಬಾಗಿಲು ಪಟ್ಟಂತ ತೆರೆದುಕೊಂಡು ಸ್ಖೆಮ್ಮರ್ ಒಳನುಗ್ಗಿದ್ದು, ಬಾಗಿಲ ಬಳಿ ಓಡಿ ಆಹ್ ಸ್ಯಾನ್ ತಪ್ಪಿಸಿಕೊಂಡದ್ದು, ಸ್ಖೆಮ್ಮರನ ಬೆಲ್ಟ್ ಗಾಳಿಯಲ್ಲಿ ಹಾರುತ್ತಾ ಬಂದು ಅಪ್ಪಳಿಸಿದ್ದು, ಅದರ ಶಬ್ದಕ್ಕೆ ಉಳಿದವರೆಲ್ಲ ಕೋಣೆಯ ಅಂಚಿಗೆ ಸರಿದದ್ದು, ರಿವಾಲ್ವಾರ್ ಶಬ್ದ ಮಾಡಿದ್ದು, ಆ ಶಬ್ದ ಕೇಳಿ ಸ್ಖೆಮ್ಮರನ ಸಹಾಯಕ್ಕೆ ಜನ ಬಂದದ್ದು. ಎಲ್ಲಾ. ಎಲ್ಲವನ್ನೂ ಒಳಗಣ್ಣಿನಿಂದ ಇನ್ನೊಮ್ಮೆ ನೋಡಿದ ಆಹ್ ಚೋ ನಡುಗಿದ. ಬೆಲ್ಟಿನ ಒಂದು ಹೊಡೆತ ಇವನ ಕೆನ್ನೆಯ ಮೇಲೆ ಸ್ವಲ್ಪ ಚರ್ಮ ಎಬ್ಬಿಸಿ ಗಾಯಗೊಳಿಸಿತ್ತು. ಕಟಕಟೆಯಲ್ಲಿ ನಿಂತಾಗ ಈ ಗಾಯ ತೋರಿಸಿಯೇ ಸ್ಖೆಮ್ಮರ್ ಇವನ ಗುರುತು ಹಿಡಿದಿದ್ದ. ಈಗಷ್ಟೇ ಗಾಯ ಮಾಗಿತ್ತು. ಎಲ್ಲಾದರೂ ಅರ್ಧ ಇಂಚು ಈಚೆ ಬಿದ್ದಿದ್ದರೆ ಆಹ್ ಚೋ ಕಣ್ಣು ಕಳೆದುಕೊಳ್ಳಬೇಕಿತ್ತು. ಯಾವಾಗ ಅವನ ಒಳ ಮನದ ದೃಷ್ಟಿ ಅವನದಾಗಬಹುದಾದ ಧ್ಯಾನದ ತೋಟದತ್ತ ಹೊರಳಿತೋ ಇಲ್ಲಿ ನಡೆದದ್ದು, ನಡೆಯುತ್ತಿರುವುದೆಲ್ಲಾ ಮರೆವೆಯಾಯಿತು.

ನ್ಯಾಯಾಧೀಶರು ತೀರ್ಪು ಓದುತ್ತಾ ಹೋದಂತೆ ಆಹ್ ಚೋ ನಿರ್ಲಿಪ್ತ ಮುಖಭಾವದಿಂದ ಕುಳಿತಿದ್ದ. ಆದೇ ನಿರ್ಲಿಪ್ತತೆಯಲ್ಲಿ ಅವನ ಉಳಿದ ಸಂಗಡಿಗರು ಕುಳಿತಿದ್ದರು. ಐವರೂ ತಪ್ಪಿತಸ್ಥರೆಂದು ಕಂಡುಬಂದಿರುವುದು, ಆಹ್ ಚೌನಿಗೆ ಮರಣದಂಡನೆ (ತಲೆ ಕತ್ತರಿಸಿ) ವಿಧಿಸಿದ್ದು ಎಲ್ಲಾ ಕೇಳಿಸಿಕೊಳ್ಳುತ್ತಿರುವಾಗಲೂ ಎಲ್ಲರೂ ಇದೇ ಮುಖಭಾವದಲ್ಲಿ ಕುಳಿತಿದ್ದರು. ಆಹ್ ಚೋನಿಗೆ ನ್ಯೂ ಕ್ಯಾಲೆಡೋನಿಯದಲ್ಲಿ 20 ವರ್ಷ ಸಜ, ವೋಂಗ್ ಲೀ ಗೆ 12 ವರ್ಷ, ಆಹ್ ತೋಂಗ್‌ಗೆ ಹತ್ತು ವರ್ಷ. ಉದ್ವೇಗಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ತನ್ನ ತಲೆಯೇ ಹೋಗುವುದೆಂದು ಗೊತ್ತಾದರೂ ಆಹ್ ಚೌ ಕೂಡ ಯಾವುದೇ ಭಾವನೆ ವ್ಯಕ್ತಪಡಿಸದೆ ಇದ್ದ. ಅದರ ಜೊತೆಗೆ ನ್ಯಾಯಾಧೀಶರು ಕೆಲವು ವಾಕ್ಯಗಳನ್ನು ಉಚ್ಚರಿಸಿದರು. ಅವನ್ನು ಅನುವಾದಕರು ವಿವರಿಸಿದರು. ಸ್ಖೆಮ್ಮರನ ಬೆಲ್ಟಿನಿಂದ ಆಹ್ ಚೌನ ಮುಖದ ಮೇಲೆ ಆತೀ ದೊಡ್ಡ ಗಾಯ ಆಗಿತ್ತು. ಆದ್ದರಿಂದ ಅವನನ್ನು ಕೊಲೆಯಾದ ಸ್ಥಳದಲ್ಲಿ ಇದ್ದನೆಂದು ಗುರುತಿಸುವುದು ಸುಲಭವಾಗಿತ್ತು. ಇನ್ನೊಂದೇನೆಂದರೆ ಯಾರನ್ನಾದರೂ ಮರಣದಂಡನೆಗೆ ಒಳಪಡಿಸಲೇಬೇಕಿತ್ತು. ಅದು ಆಹ್ ಚೌ ಆಗಬಹುದಾಗಿತ್ತು ಅಷ್ಟೇ. ಆಹ್ ಚೋನ ಮುಖದ ಗಾಯವೂ ಏನು ಕಡಿಮೆ ಇರಲಿಲ್ಲ. ಹಾಗಾಗಿ ಕೊಲೆಯಾದ ಜಾಗದಲ್ಲಿ ಇವನ ಇರುವಿಕೆ ಸಾಬೀತಾದದ್ದಲ್ಲದೆ ಕೊಲೆಯಲ್ಲಿ ಭಾಗೀದಾರ ಎಂಬುದಕ್ಕೆ ಪುರಾವೆಯೂ ಆಗಿತ್ತು. ಆದ್ದರಿಂದ ಅವನಿಗೆ 20 ವರ್ಷ ಸಜೆ ವಿಧಿಸಲಾಯಿತು. ಆಹ್ ತೋಂಗನಿಗೆ ವಿಧಿಸಿದ ಹತ್ತು ವರ್ಷದ ಶಿಕ್ಷೆಗೆ- ಅಂದರೆ ಯಾಕೆ ಶಿಕ್ಷೆ ಕಡಿಮೆ ಆಗುತ್ತಾ ಹೋಯಿತು ಎಂಬುದರ ತರ್ಕ, ಕಾರಣ ವಿವರಿಸಲಾಯಿತು. ಕೊನೆಯದಾಗಿ ನ್ಯಾಯಾಲಯ ಹೇಳಿತು: ಚಿಂಗಿಗಳು ಸರಿಯಾದ ಪಾಠ ಕಲಿಯಲಿ, ಸ್ವರ್ಗವೇ ಬಿದ್ದು ಹೋದರೂ ಸರಿ, ತಹಿತಿಯಲ್ಲಿ ನ್ಯಾಯದಾನ ನಡೆದೇ ತೀರುವುದೆಂದು.
ಐವರನ್ನೂ ಹಿಂದಿರುಗಿ ಜೈಲಿಗೆ ಕರೆದೊಯ್ಯಲಾಯಿತು. ಅವರಿಗೆ ಆಘಾತವೂ ಆಗಲಿಲ್ಲ, ಅವರು ಸಂಕಟ ಪಡಲೂ ಇಲ್ಲ. ಬಿಳಿ ಪಿಶಾಚಿಗಳ ಜೊತೆಯ ವ್ಯವಹಾರದಲ್ಲಿ ಇಂತಹಾ ಅನಿರೀಕ್ಷಿತಗಳೆಲ್ಲಾ ಅಭ್ಯಾಸವಾಗಿ ಹೋಗಿತ್ತು. ತಾವು ಮಾಡದೇ ಇದ್ದ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ; ಆದರೆ ಇದು ಬಿಳಿ ಪಿಶಾಚಿಗಳು ತೋರಿಸಿದ ಮತ್ತು ಎಣಿಸಲಾಗದಷ್ಟು ವೈಚಿತ್ರಗಳ ಮುಂದೆ ಹೆಚ್ಚಿನದೇನೂ ಅಲ್ಲ. ನಂತರದ ವಾರಗಳಲ್ಲಿ ಆಹ್ ಚೋ, ಆಹ್ ಚೌನ ಬಗ್ಗೆ ಸ್ವಲ್ಪ ಕುತೂಹಲದಿಂದ ಯೋಚಿಸಿದ. ತೋಟದಲ್ಲಿ ಹುಗಿದಿರಿಸಿದ ಗಿಲೋಟಿನ್‌ನಿಂದ ಅವನ ತಲೆ ತುಂಡರಿಸಲಾಗುತ್ತದೆ. ಅವನಿಗೆ ವೃದ್ಧಾಪ್ಯ ಇಲ್ಲ, ಶಾಂತಿಯ ತೋಟವೂ ಇಲ್ಲ. ಸಾವು ಮತ್ತು ಬದುಕಿನ ಬಗ್ಗೆ ಆಹ್ ಚೋ ತರ್ಕಿಸುತ್ತಾನೆ. ಅವನ ವಿಷಯಕ್ಕೆ ಬಂದರೆ ಅವನೇನೂ ತಲೆಕೆಡಿಸಿಕೊಳ್ಳುವುದಿಲ್ಲ. 20 ವರ್ಷ. ಬರೀ 20 ವರ್ಷ. ಅಷ್ಟು ವರ್ಷ ಅವನ ತೋಟ ಅವನಿಂದ ದೂರ ಉಳಿಯುವುದು ಅಷ್ಟೇ. ಅವನಿನ್ನೂ ಸಣ್ಣ ಪ್ರಾಯದವ. ಏಷ್ಯಾದ ಜನರ ತಾಳ್ಮೆ ಅವನ ಎಲುಬಿನಲ್ಲಿ ಹಾಸುಹೊಕ್ಕಿದೆ. ಅವನು ಕಾಯಬಹುದು. ಅಷ್ಟೊತ್ತಿಗೆ ಅವನ ಬಿಸಿರಕ್ತ ಸ್ವಲ್ಪ ತಣ್ಣಗಾಗಿ ಅವನ ಶಾಂತಿ ಸಂತೋಷದ ತೋಟಕ್ಕೆ ಇನ್ನಷ್ಟು ಯೋಗ್ಯನಾಗಬಹುದು. ಆ ತೋಟಕ್ಕೊಂದು ಹೆಸರನ್ನು ಯೋಚಿಸುತ್ತಾನೆ. ಪ್ರಶಾಂತ ಬೆಳಗಿನ ತೋಟ ಅಂತ ಇಟ್ಟರೆ? ಯೋಚನೆಯೇ ಇಡೀ ದಿನ ಅವನನ್ನು ಉಲ್ಲಸಿತನನ್ನಾಗಿಸುತ್ತದೆ. ಈ ಉಲ್ಲಾಸದಿಂದ ಪ್ರೇರಿತನಾಗಿ ತಾಳ್ಮೆಯ ಸದ್ಗುಣದ ಮೇಲೆ ಒಂದು ಸೂತ್ರ ರಚಿಸುತ್ತಾನೆ. ಆ ಸೂತ್ರ ವೋಂಗ್ ಲಿ ಮತ್ತು ಆಹ್ ತೋಂಗನಿಗೆ ಸಮಾಧಾನ ತರುತ್ತದೆ. ಆಹ್ ಚೌ ಮಾತ್ರ ಸೂತ್ರದ ಬಗ್ಗೆ ಯಾವ ಆಸಕ್ತಿಯನ್ನೂ ತೋರುವುದಿಲ್ಲ. ಸದ್ಯದಲ್ಲೇ ಅವನ ತಲೆ ಕತ್ತರಿಸಲಾಗುವುದರಿಂದ ತಾಳ್ಮೆಯ ಬಗ್ಗೆ ತಿಳಿಯುವ ಅವಶ್ಯಕತೆಯೇ ಇಲ್ಲ ಅವನಿಗೆ. ಚೆನ್ನಾಗಿ ತಂಬಾಕು ಸೇದಿದ, ಚೆನ್ನಾಗಿ ಊಟ ಮಾಡಿದ ಮತ್ತು ಚೆನ್ನಾಗಿ ನಿದ್ರೆ ಮಾಡಿದ. ನಿಧಾನವಾಗಿ ಸರಿಯುತ್ತಿರುವ ಸಮಯದ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ ಅವ.
ಕ್ರುಶೋ ಒಬ್ಬ ಝೆಂಡಾರ್ಮೌ ಫ್ರೆಂಚ್ ಪೋಲಿಸ್ ಸೈನಿಕ. ಸೈನಿಕನಾಗಿದ್ದೂ ಸಾರ್ವಜನಿಕ ಜೀವನದಲ್ಲಿ ಸುವ್ಯವಸ್ಥೆ ಕಾಪಾಡಲು ಸಹಾಯ ಮಾಡುವುದು ಅವನ ಕೆಲಸ- ಪೊಲೀಸು. ನೈಜೀರಿಯಾದಿಂದ ಸೆನೆಗಾಲ್ ಮತ್ತು ಅಲ್ಲಿಂದ ಸೌತ್ ಸೀಸ್‌ವರೆಗೆ ಇಪ್ಪತ್ತು ವರ್ಷಗಳ ಕಾಲ ವಸಾಹತುಗಳಲ್ಲಿ ಕರ್ತವ್ಯ ಸಲ್ಲಿಸಿದ್ದಾನೆ. ಆದರೂ
ಇಪ್ಪತ್ತು ವರ್ಷಗಳ ನೌಕರಿ ಅವನ ಮಂದ ಬುದ್ಧಿಯನ್ನೇನೂ ಚುರುಕುಗೊಳಿಸಲಿಲ್ಲ. ದಕ್ಷಿಣ ಫ್ರಾನ್ಸ್‌ನಲ್ಲಿ ರೈತನಾಗಿದ್ದಾಗಿದ್ದಷ್ಟೇ ಪೆದ್ದ ಈಗಲೂ ಆಗಿರುವನು. ಶಿಸ್ತು ಗೊತ್ತಿತ್ತು ಅವನಿಗೆ ಮತ್ತು ಅಧಿಕಾರಿಗಳ ಬಗ್ಗೆ ಭಯವೂ ಇತ್ತು. ದೇವರು, ದೇವರಿಂದ ಕೆಳಗೆ ಝೆಂಡಾರ್ಮೌಗಳ ಸಾರ್ಜೆಂಟ್‌ವರೆಗೆ ಎಲ್ಲರಿಗೂ
ವಿಧೇಯನಾಗಿದ್ದ. ಗುಲಾಮೀ ವಿಧೇಯತೆ. ಆದರೆ ಅಲ್ಲಿಂದ ಇಲ್ಲಿಯವರೆಗಿನ ವಿಧೇಯತೆಯ ಅಳತೆಯಲ್ಲಿ ಕೊಂಚ ವ್ಯತ್ಯಾಸವಿರುತ್ತಿತ್ತು. ನಿಜ ಹೇಳಬೇಕೆಂದರೆ ದೇವರಿಗಿಂತಾ ಸಾರ್ಜೆಂಟನೇ ಹೆಚ್ಚಿನವನಾಗಿದ್ದ ಕ್ರುಶೋಗೆ. ಆದರೆ ಭಾನುವಾರದ ದಿನಗಳಲ್ಲಿ ದೇವರೇ ಹೆಚ್ಚಿನವ. ಆ ದಿನಗಳಲ್ಲಿ ದೇವರ ಮುಖವಾಣಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದನಲ್ಲಾ.. ಅದಕ್ಕೆ.
ದೇವರು ಎಷ್ಟಿದ್ದರೂ ದೂರದಲ್ಲೆಲ್ಲೋ ಇರುವವನು. ಸಾರ್ಜೆಂಟ್ ಆದರೆ ಕೂಗಳತೆಯಲ್ಲಿರುವವನು. ಮುಖ್ಯ ನ್ಯಾಯಾಧೀಶನಿಂದ ಆದೇಶ ಪ್ರತಿಯನ್ನು ತಂದು ಜೈಲರಿಗೆ ಕೊಟ್ಟು, ಅವನಿಂದ ಆಹ್ ಚೌನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕಾದ್ದು ಕ್ರುಶೋನೇ. ಅಷ್ಟೊತ್ತಿಗೆ ಏನಾಗಿತ್ತೆಂದರೆ ಮುಖ್ಯ ನ್ಯಾಯಾಧೀಶ ಹಿಂದಿನ ದಿನ, ರಾತ್ರಿಯಷ್ಟೇ ಫ್ರೆಂಚ್ ಸೈನ್ಯಾಧಿಕಾರಿ ಮತ್ತು ಕೆಲ ಅಧಿಕಾರಿಗಳಿಗೆ ಔತಣ ಏರ್ಪಡಿಸಿದ್ದ. ಹಾಗಾಗಿ ಈ ಆದೇಶ ಬರೆಯುವ ಹೊತ್ತಿಗೆ ಅವನ ಕೈ ನಡುಗುತ್ತಿತ್ತು. ಕಣ್ಣು ಎಷ್ಟು ನೋಯುತ್ತಿತ್ತು ಅಂದರೆ ಆದೇಶವನ್ನು ಸರಿಯಾಗಿ ಓದಲೇ ಆಗಲಿಲ್ಲ. ಏನೇ ಆದರೂ ಒಬ್ಬ ಚಿಂಗಿಯ ಬದುಕು ತಾನೇ ಅವನು ರುಜು ಮಾಡಿ ಅಳಿಸಿ ಹಾಕುತ್ತಿದ್ದದ್ದು? ಹಾಗಾಗಿ ಆಹ್ ಚೌನ ಹೆಸರನ್ನು ಬರೆಯುವಾಗ ವ್ಯತ್ಯಾಸ ಆಗಿದ್ದೇ ಗೊತ್ತಾಗಲಿಲ್ಲ. ಇಂಗ್ಲಿಷಿನಲ್ಲಿ ಬರೆಯುವಾಗ ಕೊನೆಯ ಅಕ್ಷರ ಬಿಟ್ಟುಹೋಯಿತು. ಚೌ ಹೋಗಿ ಚೋ ಆಗಿಬಿಟ್ಟಿತು. ಕ್ರುಶೋ ಆದೇಶವನ್ನು ಜೈಲರಿಗೆ ಕೊಟ್ಟಾಗ ಜೈಲರನು ಆಹ್ ಚೋನನ್ನು ಕ್ರುಶೋನ ವಶಕ್ಕೆ ಒಪ್ಪಿಸಿದನು. ಎರಡು ಹೇಸರಗತ್ತೆಗಳು ಎಳೆಯುವ ಗಾಡಿಯಲ್ಲಿ ತನ್ನ ಪಕ್ಕ ಆಹ್ ಚೋನನ್ನು ಕೂರಿಸಿಕೊಂಡು ಕ್ರುಶೋ ಹೊರಡುತ್ತಾನೆ.
ಬಿಸಿಲಿನಲ್ಲಿ ಹೊರಹೊರಟಿದ್ದಕ್ಕೆ ಆಹ್ ಚೋನಿಗೆ ಬಹಳ ಖುಷಿಯಾಗುತ್ತದೆ. ಝೆಂಡಾರ್ಮ್‌ನ ಪಕ್ಕ ಕುಳಿತು ಸಂಭ್ರಮ ಪಟ್ಟ. ಹೇಸರಗತ್ತೆಗಳು ಆಟಿಮಾವೊನೋ ಕಡೆ ತಿರುಗಿದಾಗ ಇನ್ನೂ ಸಂಭ್ರಮಪಟ್ಟ. ಸ್ಖೆಮ್ಮರ್ ಅವನನ್ನು ಕೆಲಸಕ್ಕೆ ವಾಪಾಸು ಕರೆಸಿಕೊಳ್ಳುತ್ತಿರುವುದು ಖಚಿತವಾಯಿತು. ಸ್ಖೆಮ್ಮರನಿಗೆ ಇವನ ಕೆಲಸ ಬೇಕಾಗಿದೆ ಎಂದಾಯಿತು. ಸರಿ ಅವನು ಚೆನ್ನಾಗಿಯೇ ಕೆಲಸ ಮಾಡುತ್ತಾನೆ. ದೂರಲು ಕಾರಣಗಳೇ ಇರುವುದಿಲ್ಲ ಇನ್ನು ಮುಂದೆ, ಹಾಗೆ ಕೆಲಸ ಮಾಡುತ್ತಾನೆ ಅವನು; ಬಿರುಬಿಸಿಲಿನ ದಿನವಾಗಿತ್ತು ಅಂದು. ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಂತಿತ್ತು. ಹೇಸರಗತ್ತೆಗಳಿಗೂ ಬೆವರು ಹರಿಯುತ್ತಿತ್ತು. ಕ್ರುಶೋಗೂ ಬೆವರು ಹರಿಯುತ್ತಿತ್ತು. ಆಹ್ ಚೋಗೂ ಸಹಾ. ಆದರೆ ಆ ಯಮ ಬಿಸಿಲನ್ನು ಹೆಚ್ಚು ಲಕ್ಷಿಸದೇ ಇದ್ದವನೆಂದರೆ ಆಹ್ ಚೋನೇ. ಮೂರು ವರ್ಷಗಳ ಕಾಲ ಇದೇ ಬಿಸಿಲಿನಲ್ಲಿ ಕೆಲಸ ಮಾಡಿದ್ದವನು. ಎಷ್ಟು ಸಹಜ ಸ್ವಭಾವದಿಂದ ಅವನು ಉಲ್ಲಾಸಿತನಾಗಿದ್ದನೆಂದರೆ ಕ್ರುಶೋನ ಬಂಡೆಯಂಥಾ ಮನಸ್ಸು ಕೂಡ ಆಶ್ಚರ್ಯದಿಂದ ಅಲುಗಾಡಿತು. ನೋಡಿನೋಡಿ ಅಂತೂ ಕೊನೆಗೆ, “ನೀನು ಬಹಳಾ ಮಜಾ ಇದೀಯ” ಅಂದ.
ತಲೆಯಾಡಿಸಿದ ಆಹ್ ಚೋ. ಇನ್ನೂ ಉತ್ಕಟವಾಗಿ ಉಲ್ಲಸಿತನಾದ. ಕ್ರುಶೋ ಕಾಮಕಾ ಭಾಷೆ ಮಾತನಾಡುತ್ತಿದ್ದ (ನ್ಯಾಯಾಧೀಶನ್ಹಂಗಲ್ಲ). ಈ ಭಾಷೆ ಎಲ್ಲಾ ಚಿಂಗಿಗಳಿಗೆ ಮತ್ತು ಎಲ್ಲಾ ವಿದೇಶಿ ಗೂಬೆಗಳಿಗೆ ಅರ್ಥವಾದಂತೆ ಆಹ್ ಚೋಗೂ ಅರ್ಥವಾಗುತ್ತಿತ್ತು. “ನೀನು ತುಂಬಾ ನಗ್ತೀಯ” ಕ್ರುಶೋ ದೂರಿದ. “ಇಂಥ ದಿನದಲ್ಲಿ ಯಾರದ್ದೇ ಹೃದಯವಾದರೂ ದುಃಖದಿಂದ ಸ್ರವಿಸುತ್ತಿತ್ತು.”
“ಜೈಲಿನಿಂದ ಹೊರಬಂದದ್ದಕ್ಕೆ ನಾನು ಖುಷಿಯಾಗಿದ್ದೇನೆ.”
“ಅಷ್ಟಕ್ಕೇನಾ?.” ಕ್ರುಶೋ ಭುಜ ಹಾರಿಸಿದ.
“ಇಷ್ಟು ಸಾಲದಾ?.” ಮಾರುತ್ತರ
“ಅಂದ್ರೆ ನಿನ್ನ ತಲೆ ಉರುಳುತ್ತಿರುವುದಕ್ಕೆ ಅಲ್ವಾ ನೀನು ಖುಷಿ ಪಡುತ್ತಿರುವುದು?.”
ಥಟ್ಟನೆ ಆದ ಗೊಂದಲದಿಂದ ಆಹ್ ಚೋ ಅವನತ್ತ ನೋಡಿದ.
“ಯಾಕೆ ನಾನು ಆಚಿಮಾವೊನೋಗೆ ತೋಟದ ಕೆಲಸಕ್ಕೆ ಹಿಂತಿರುಗುತ್ತಿದ್ದೇನೆ. ನೀನು ನನ್ನ ಅಲ್ಲಿಗೆ ಅಲ್ವಾ ಕರೆದೊಯ್ಯುತ್ತಿರುವುದು?.”
ತನ್ನ ಉದ್ದ ಮೀಸೆ ನೀವಿಕೊಳ್ಳುತ್ತಾ ಕ್ರುಶೋ ವಿಚಾರಮಗ್ನನಾದ. ಕೊನೆಗೆ “ಸರಿ, ಸರಿ. ಅಂದ್ರೆ
ನಿಂಗೆ ಗೊತ್ತಿಲ್ಲ?.” ಪ್ರಶ್ನಿಸುತ್ತಾ ದಾರಿಬಿಟ್ಟು ಹೋಗುತ್ತಿದ್ದ ಹೇಸರಗತ್ತೆಗೆ ಚಾಟಿ ಬೀಸಿದ.
“ಏನ್ ಗೊತ್ತಿಲ್ಲ?” ಆಹ್ ಚೋಗೆ ಅಸ್ಪಷ್ಟವಾಗಿ ಕೆಟ್ಟ ಸೂಚನೆ ಬಂತು. “ಇನ್ನು ಮುಂದೆ ಸ್ಖೆಮ್ಮರ್ ನನ್ನ ಕೆಲಸಕ್ಕೆ ಕರೆಯುವುದಿಲ್ವಾ?.”
“ನಾಳೆಯಿಂದ ಇಲ್ಲ ಕ್ರುಶೋ ಹೃದಯತುಂಬಿ ನಕ್ಕ. ಅದೊಂದು ತಮಾಷೆ. “ನೋಡು, ನಾಳೆಯಿಂದ ನಿನಗೆ ಕೆಲಸ ಮಾಡಲು ಆಗುವುದಿಲ್ಲ. ತಲೆ ಕತ್ತರಿಸಿದ ಮೇಲೆ ಆ ಮನುಷ್ಯನಿಗೆ ಕೆಲಸ ಮಾಡಲು ಆಗುವುದಿಲ್ಲ ಅಲ್ವಾ?.” ಅವನು ವ್ಯಂಗ್ಯ ನಗೆ ನಗುತ್ತಾ ಆಹ್ ಚೋ ಪಕ್ಕೆಗೆ ಕಚಗುಳಿಯಿಡುವಂತೆ ತಿವಿದ.
ಹೇಸರಗತ್ತೆಗಳು ಬಿಸಿಲಿನಲ್ಲಿ ಒಂದು ಮೈಲು ದೂರ ಹೋಗುವವರೆಗೂ ಆಹ್ ಚೋ ಮೌನವಾಗಿದ್ದ. ಆಮೇಲೆ “ಸ್ಖೆಮ್ಮರ್ ನನ್ನ ತಲೆ ತೆಗೆಯುತ್ತಾನಾ?” ಕೇಳಿದ.
ಕ್ರುಶೋ ಹಲ್ಲು ಕಿರಿಯುತ್ತಾ ತಲೆಯಾಡಿಸಿದ.
“ಇದು ಪ್ರಮಾದ. ಹೋಗಬೇಕಾದ ಚಿಂಗಿ ನಾನಲ್ಲ. ನಾನು ಆಹ್ ಚೋ. ಗೌರವಾನ್ವಿತ ನ್ಯಾಯಾಧೀಶರು ನನಗೆ 20 ವರ್ಷ ನ್ಯೂ ಕ್ಯಾಲೆಡೋನಿಯಾದಲ್ಲಿರಲು ಹೇಳಿದ್ದರು”, ಆಹ್ ಚೋ ಗಂಭೀರವಾಗಿ ಹೇಳಿದ.
ಝೆಂಡಾರ್ಮ್ ನಕ್ಕ. ಒಳ್ಳೇ ತಮಾಷೆ ಆಯ್ತಲ್ಲಾ, ಈ ಚಿಂಗಿ ಗಿಲೋಟಿನ್‌ನೆ ಮೋಸಗೊಳಿಸಲು ನೋಡುತ್ತಿದ್ದಾನೆ. ಹೇಸರಗತ್ತೆಗಳು ನೆಗೆಯುತ್ತಾ ಹೋಗುತ್ತಿದ್ದವು. ಒಂದು ಕಡೆ ತೆಂಗಿನ ತೋಪು. ಇನ್ನೊಂದು ಕಡೆ ಬಿಸಿಲಿಗೆ ಫಳಫಳ ಹೊಳೆಯುವ ಸಮುದ್ರ. ಹೀಗೇ ಅರ್ಧ ಮೈಲು ದಾಟಿತು. ಆಹ್ ಚೋ ಮತ್ತೆ ಬಾಯಿ ಬಿಟ್ಟ.
“ನಾನ್ಹೇಳ್ತೀನಿ, ಆಹ್ ಚೌ ನಾನಲ್ಲ. ಆದರಣೀಯ ನ್ಯಾಯಾಧೀಶರು ನನ್ನ ತಲೆ ಹೋಗುವುದೆಂದು ಹೇಳಿದ್ದಲ್ಲ.”
“ಹೆದರಬೇಡ” ತನ್ನ ಖೈದಿಯ ಬಗ್ಗೆ ಮಾನವೀಯ ಕಾಳಜಿ ತೋರಿಸುತ್ತಾ ಕ್ರುಶೋ ಹೇಳಿದ. “ಹಾಗೆ ಸಾಯುವುದು ಕಷ್ಟ ಅಲ್ಲ.” ತನ್ನ ಬೆರಳುಗಳಿಂದ ಚಿಟಿಕೆ ಹೊಡೆದು, “ಚಕ್ ಅಂತ ಆಗಿಹೋಗುತ್ತದೆ. ನೇಣು ಹಾಕಿದಂತಲ್ಲ. ಅದಾದರೆ ಕಾಲು ಬಡಿಯುವುದು, ವಿಕಾರ ಮುಖ ಮಾಡುವುದು ಎಲ್ಲಾ ಐದು ನಿಮಿಷಗಳ ಕಾಲ! ಇದಾದರೆ ಕತ್ತಿಯಿಂದ ಕೋಳಿ ಕುಯ್ದಷ್ಟೇ ಸುಲಭ. ಕಚಕ್! ಅಷ್ಟೇ. ನೋವಾಗುವುದಿಲ್ಲ. ತಲೆ ಹೋಯ್ತು ಅಷ್ಟೇ. ನೋವಾಗ್ತಾ ಇದೀಯಾ ಅಂತ ಯೋಚಿಸುವುದೂ ಸಾಧ್ಯವಿಲ್ಲ. ಇದೇ ಒಳ್ಳೆಯದು. ನಾನೂ ಹೀಗೇ ಸಾಯಲು ಬಯಸುತ್ತೇನೆ. ಚಕ್ ಅಂತ. ನೀನು ಅದೃಷ್ಟವಂತ, ಈ ತರಹದ ಸಾವು ಹೊಂದಲು. ಇಲ್ಲಾ ಅಂದರೆ ನಿನಗೆ ಕುಷ್ಟ ರೋಗ ಬಂತು ಅಂತಿಟ್ಕೊ, ನಿಧಾನವಾಗಿ ಚೂರುಚೂರೇ ಸಾಯ್ತೀಯ. ಒಂದು ಸಾರಿ ಒಂದು ಬೆರಳು ಬೀಳಬಹುದು, ಇನ್ನೊಂದು ಸಾರಿ ಹೆಬ್ಬೆರಳು, ಮಗದೊಂದು ಸಾರಿ ಕಾಲಿನ ಬೆರಳು ಹೀಗೇ. ನನ್ನ ಪರಿಚಯದವನೊಬ್ಬನು ಮೈ ಎಲ್ಲಾ ಬಿಸಿ ನೀರು ಬಿದ್ದು ಸುಟ್ಟುಕೊಂಡಿದ್ದ. ಎರಡು ದಿನ ನರಳಿ ಸತ್ತ. ಒಂದು ಕಿಲೋಮೀಟರ್ ಆಚೆಗೂ ಅವನ ನೋವಿನ ಕೂಗು ಕೇಳುತ್ತಿತ್ತು. ಆದರೆ ನೀನು? ಆಹ್! ಎಷ್ಟು ಸುಲಭ ಚಕ್ ಅಂತ. ಹಂಗೆ ಕತ್ತಿ ನಿನ್ನ ತಲೆಯನ್ನು ಕತ್ತರಿಸುತ್ತದೆ ಅಷ್ಟೇ. ಯಾರಿಗ್ಗೊತ್ತು ಆ ಕತ್ತಿ ಕಚಗುಳಿ ಇಡಲೂಬಹುದು. ಹೀಗೆ ಸತ್ತವರು ಯಾರೂ ವಾಪಾಸು ಬಂದು ಹೇಳಿದವರಿಲ್ವಲ್ಲಾ.”
ಈ ಕೊನೆಯ ವಾಕ್ಯ ದೊಡ್ಡ ತಮಾಷೆಯೆಂಬಂತೆ ಅನ್ನಿಸಿತವನಿಗೆ. ಅರ್ಧ ನಿಮಿಷದವರೆಗೆ ನರನಾಡಿಗಳೆಲ್ಲಾ ಸೆಳೆದು ಹೋಗುವಂತೆ ನಕ್ಕ. ಕ್ರುಶೋನ ಈ ಖುಷಿಯ ಒಂದು ಭಾಗ ಅವನು ಬಲವಂತದಿಂದ ಭಾವಿಸಿಕೊಂಡಿದ್ದು. ಈ ಚೆಂಗಿಯನ್ನು ಉಲ್ಲಾಸಿತನಾಗಿಡಲು. ಮತ್ತು ಅದು ತನ್ನ ಕರ್ತವ್ಯ ಅಂತ ಭಾವಿಸಿದ್ದ.
“ಆದರೆ ನಾನು ಆಹ್ ಚೋ. ನನ್ನ ತಲೆ ಉರುಳುವುದು ನನಗೆ ಬೇಕಾಗಿಲ್ಲ.” ಅವ ಒತ್ತಾಯಿಸಿದ.
ಕ್ರುಶೋಗೆ ಸಿಟ್ಟು ಕೆರಳಿತು. ಚಿಂಗಿ ಅತಿಯಾಗಿ ಆಡುತ್ತಿದ್ದಾನೆ.
“ನಾನು ಆಹ್ ಚೌ ಅಲ್ಲ” ಮತ್ತೆ ಶುರು ಮಾಡಿದ ಆಹ್ ಚೋ.
“ಆಗಲಿ” ಮಧ್ಯ ಬಾಯಿ ಹಾಕಿದ ಕ್ರುಶೋ. ಕೆನ್ನೆಗಳನ್ನು ಉಬ್ಬಿಸಿಕೊಂಡು ಕಾಠಿಣ್ಯ ಪ್ರದರ್ಶಿಸಲು ಪ್ರಯತ್ನಿಸಿದ.
“ನಾ ಹೇಳ್ತಿನಿ ನಾನಲ್ಲ..”
ಮತ್ತೆ ಶುರು ಮಾಡಿದ ಆಹ್ ಚೋ.
“ಮುಚ್ಚು ಬಾಯಿ” ಹೂಂಕರಿಸಿದ ಕ್ರುಶೋ.
ಅದಾದನಂತರ ಮೌನದಲ್ಲಿಯೇ ಪ್ರಯಾಣ ಮುಂದುವರಿಯಿತು. ಪಪೀಟೆಯಿಂದ ಆಟಿಮಾವ್ನೋ ಇಪ್ಪತ್ತು ಮೈಲು ದೂರ. ಅರ್ಧ ದಾರಿ ಹೋದ ಮೇಲೆ ಮತ್ತೆ ಮಾತಾಡಲು ಚಿಂಗಿ ಪ್ರಯತ್ನಿಸಿದ.
“ಗೌರವಾನ್ವಿತ ನ್ಯಾಯಾಧೀಶರು ನಮ್ಮ ಅಪರಾಧವನ್ನು ಸಾಬೀತುಗೊಳಿಸುವಾಗ ನಿನ್ನ ನಾನು ನ್ಯಾಯಾಲಯದಲ್ಲಿ ನೋಡಿದ್ದೆ. ಸರಿ ಮರಣದಂಡನೆಗೆ ಗುರಿಯಾದ ಆಹ್ ಚೌನ ನೆನಪಿದ್ಯಾ ನಿನಗೆ? ನೆನಪಾಯ್ತಾ ಅವನು – ಆಹ್ ಚೌ ಎತ್ತರ ಇದ್ದ ಅಲ್ವಾ? ನನ್ನ ನೋಡು” ಎನ್ನುತ್ತ ತಕ್ಷಣ ಎದ್ದು ನಿಂತ. ಕ್ರುಶೋ ನೋಡಿದ, ಹೌದು ಇವನು ಕುಳ್ಳ. ತಕ್ಷಣ ಅವನ ಮನಸ್ಸಿನ ಪರದೆಯ ಮೇಲೆ ಆಹ್ ಚೌನ ಚಿತ್ರ ಮೂಡಿ ಬಂತು. ಅವನು ಎತ್ತರ ಇದ್ದ. ಝೆಂಡಾಮ್ ಗೆ ಎಲ್ಲಾ ಚಿಂಗಿಗಳೂ ಒಂದೇ ಥರ ಕಾಣಿಸುತ್ತಾರೆ. ಎಲ್ಲರ ಮುಖಗಳು ಒಂದೇ ಥರ. ಆದರೆ ಎತ್ತರ ಮತ್ತು ಕುಳ್ಳು ನಡುವಿನ ವ್ಯತ್ಯಾಸ ಅವನಿಗೆ ಗೊತ್ತಾಗುತ್ತದೆ. ತನ್ನ ಪಕ್ಕ ಕುಳಿತಿರುವವನು ಅವನಲ್ಲ ಎಂಬುದು ಗೊತ್ತಾಯಿತು. ಅಚಾನಕ್ಕಾಗಿ ಜೀನು ಎಳೆದ ಹೊಡೆತಕ್ಕೆ ಮೂಕಿ ಹಾರಿತು.
“ನೋಡಿದ್ಯಾ? ಪ್ರಮಾದ ಆಗಿದೆ” ಎಂದ ಆಹ್ ಚೋ ಆಹ್ಲಾದಕರವಾಗಿ ಮುಗುಳ್ನಗುತ್ತಾ.
ಆದರೆ ಕ್ರುಶೋ ಯೋಚಿಸುತ್ತಿದ್ದ. ಗಾಡಿ ನಿಲ್ಲಿಸಿದ್ದಕ್ಕೆ ಈಗಾಗಲೇ ಬೇಸರಗೊಂಡಿದ್ದ. ಮುಖ್ಯ ನ್ಯಾಯಾಧೀಶ ಮಾಡಿದ ಪ್ರಮಾದ ಅವನಿಗೆ ಗೊತ್ತಿರಲಿಲ್ಲ. ಮೇಲಾಗಿ ಅದನ್ನು ಸರಿಪಡಿಸುವುದು ಅವನ ಕೈಯಲ್ಲಿ ಇಲ್ಲವೂ ಇಲ್ಲ. ಅವನಿಗೆ ತಿಳಿದಿರುವುದೇನೆಂದರೆ, ಈ ಚಿಂಗಿಯನ್ನು ಅಚಿಮಾವೋಗೆ ತಲುಪಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಲಾಗಿದೆ, ಅದನ್ನು ಪೂರೈಸುವುದು ಅವನ ಕರ್ತವ್ಯ ಅಷ್ಟೇ. ತಪ್ಪಾಗಿ ಒಬ್ಬನ ಬದಲು ಇನ್ನೊಬ್ಬನ ತಲೆ ತೆಗೆದರೆ ಏನಾಯ್ತು? ಎಷ್ಟೆಂದರೂ ಅವರೆಲ್ಲರೂ ಚಿಂಗಿನೇ. ತೃಣಮಾತ್ರರು. ಅದಲ್ಲದೆ, ಪ್ರಮಾದ ಆಗಿರದಿರಲೂಬಹುದು. ಮೇಲಧಿಕಾರಿಗಳ ತಲೆಯಲ್ಲಿ ಏನು ಓಡುತ್ತದೆ ಎಂದು ಅವನಿಗಂತೂ ಗೊತ್ತಿಲ್ಲ. ಅವರ ಕೆಲಸ ಅವರಿಗೆ ಚೆನ್ನಾಗೇ ಗೊತ್ತು. ಇವನ್ಯಾರು ಅವರ ನಿರ್ಧಾರಗಳನ್ನು ವಿಮರ್ಶೆ ಮಾಡಲು? ಬಹಳ ಹಿಂದೆ ಒಂದು ಸಾರಿ ಈ ಥರ ಪ್ರಯತ್ನ ಮಾಡಿದ್ದ ಕ್ರುಶೋ. ಆಗ ಸಾರ್ಜೆಂಟ್ ಹೇಳಿದ್ದ “ಕ್ರುಶೋ ನೀನೊಬ್ಬ ಪೆದ್ದ. ಇದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೀಯೋ ಅಷ್ಟು ಬೇಗ ಮುಂದೆ ಬರುತ್ತೀಯ ಬದುಕಿನಲ್ಲಿ. ಯೋಚಿಸುವುದು ನಿನ್ನ ಕೆಲಸವಲ್ಲ. ವಿಧೇಯನಾಗಿರು ಸಾಕು. ಯೋಚಿಸುವುದನ್ನೆಲ್ಲಾ ನಿನ್ನ ಮೇಲಧಿಕಾರಿಗಳಿಗೆ ಬಿಡು.” ಇದೆಲ್ಲಾ ನೆನಪಾಗಿ ಕ್ರುಶೋ ಗೆಲುವಾದ. ಮತ್ತು ನಾನೇನಾದರೂ ಪಪೀಟೆಗೆ ವಾಪಾಸು ಹೊರಟರೆ ಆಚಿಮಾವೋದಲ್ಲಿ ಕಾರ್ಯಗತವಾಗಬೇಕಿದ್ದ ಮರಣದಂಡನೆ ವಿಳಂಬವಾಗುವುದು ಮತ್ತು ವಾಪಾಸು ಹೋಗುವ ಅವನ ನಿರ್ಧಾರ ಏನಾದರೂ ತಪ್ಪಾಗಿದ್ದರೆ ಅಲ್ಲಿ ಖೈದಿಗಾಗಿ ಕಾದು ನಿಂತ ಸಾರ್ಜೆಂಟ್‌ನ ಹತ್ತಿರ ಬೈಸಿಕೊಳ್ಳಬೇಕು. ಅಲ್ಲದೆ ಪಪೀಚೆಯಲ್ಲೂ ಬೈಸಿಕೊಳ್ಳಬೇಕು.
ಹೇಸರಗತ್ತೆಗಳಿಗೆ ಚಾಟಿ ಬೀಸಿದ ಕ್ರುಶೋ ಕೈಗಡಿಯಾರದತ್ತ ಕಣ್ಣು ಹಾಯಿಸಿದ. ಅರ್ಧ ಗಂಟೆ ತಡವಾಗಬಹುದೆನಿಸಿತು. ಸಾರ್ಜೆಂಟನಿಗೆ ಸಿಟ್ಟು ಬಂದೇ ಬರುತ್ತದೆ. ಹೇಸರಗತ್ತೆಗಳು ವೇಗವಾಗಿ ಓಡುವಂತೆ ಮಾಡಿದ. ಆದ ಪ್ರಮಾದವನ್ನು ಕ್ರುಶೋಗೆ ಮನದಟ್ಟು ಮಾಡಿಸಲು ಆಹ್ ಚೋ ಪ್ರಯತ್ನಿಸಿದಷ್ಟೂ ಕ್ರುಶೋನ ಮನಸ್ಸು ಮೊಂಡಾಗುತ್ತಾ ಹೋಯ್ತು. ತಪ್ಪಾಗಿ ಬೇರೆಯವನನ್ನು ಕರೆದುಕೊಂಡು ಹೊರಟಿದ್ದು ಅರಿವಾದರೂ ಅವನ ಮನಃಸ್ಥಿತಿ ಬದಲಾಗಲಿಲ್ಲ. ಈ ತಪ್ಪಿನಲ್ಲಿ ತನ್ನ ಪಾಲು ಏನೂ ಇಲ್ಲ ಎಂಬ ಅರಿವು ಅವನನ್ನು ತನ್ನ ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತ್ರ ಯೋಚಿಸಲು ಪ್ರೇರೇಪಿಸುತ್ತಿತ್ತು. ತಾನು ಮಾಡಹೊರಟಿರುವುದು ಸರಿ ಎನ್ನಿಸುತ್ತಿತ್ತು. ಆ ಸಾರ್ಜೆಂಟ್‌ನ ಸಿಟ್ಟು ಎದುರಿಸುವುದಕ್ಕಿಂತ ಇಂಥಾ ಒಂದು ಡಜನ್ ಪ್ರಮಾದದಿಂದ ಬದಲಾದ ಚಿಂಗಿಗಳನ್ನು ಅವರ ಅವನತಿಯತ್ತ ಕರೆದೊಯ್ಯಲು ಸಹಾಯ ಮಾಡುವುದೇ ಮೇಲು ಅನ್ನಿಸಿತು. ಚಾಟಿ ಕೋಲಿನ ತುದಿಯಿಂದ ಝೆಂಡಾರ್ಮ್ ತಲೆ ಮೇಲೆ ಮೊಟಕಿ ಜೋರಾಗಿ ’ಬಾಯಿ ಮುಚ್ಚು’ ಎಂದು ಕೂಗಿದ ಮೇಲೆ ಸುಮ್ಮನಿರುವುದು ಬಿಟ್ಟು ಇನ್ನು ಏನೂ ಮಾಡಲು ಆಹ್ ಚೋಗೆ ಸಾಧ್ಯವಿರಲಿಲ್ಲ. ಉದ್ದದ ಪಯಣ ಮೌನವಾಗಿ ಸಾಗಿತು. ಈ ವಿದೇಶಿ ಪಿಶಾಚಿಗಳ ವಿಚಿತ್ರ ಸ್ವಭಾವದ ಅವಲೋಕನ ಮಾಡಿದ ಆಹ್ ಚೋ. ವಿವರಿಸಲು ಸಾಧ್ಯವೇ ಇಲ್ಲ. ಇವನ ವಿಷಯದಲ್ಲಿ ಅವರು ಏನು ಮಾಡುತ್ತಿದ್ದಾರೋ ಅದು ಅವರ ಎಲ್ಲಾ ವಿಚಿತ್ರ ನಡವಳಿಕೆಯ ಒಂದು ಸಣ್ಣ ಚೂರು ಮಾತ್ರ. ಮೊದಲಿಗೆ ಐದು ಅಮಾಯಕರನ್ನು ತಪ್ಪಿತಸ್ಥರೆಂದು ಆರೋಪಿಸಿದರು. ಆಮೇಲೆ ಅವರದೇ ಅವಿವೇಕದ ಅಜ್ಞಾನದ ಪ್ರಕಾರ ನಿರ್ಧರಿತವಾದ 20 ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಪಟ್ಟವನ ತಲೆ ತೆಗೆಯುತ್ತಿದ್ದಾರೆ, ಆಹ್ ಚೋ ಏನು ಮಾಡಲೂ ಸಾಧ್ಯವಿಲ್ಲ. ಸುಮ್ಮನೆ ಕುಳಿತು ಈ ಯಜಮಾನರು ನಿಶ್ಚಯಿಸಿದ ವಿಧಿಯನ್ನು ಅನುಭವಿಸುವುದೊಂದೇ ಉಳಿದಿರುವ ಮಾರ್ಗ. ಒಂದು ಸಾರಿ ದಿಗಿಲಿಗೆ ಬಿದ್ದು ಉದ್ವೇಗಕ್ಕೆ ಒಳಗಾದ. ಮೈಯೆಲ್ಲಾ ತಣ್ಣಗಾದಂತೆನಿಸಿತು. ಅದರಿಂದ ಹೊರಬರಲು ಹೋರಾಡಿದ. ಯಿನ್ ಛ್ ವೆನ್‌ದ (ಶಾಂತಿ ಮಾರ್ಗ) ಕೆಲವು ಪರಿಚ್ಛೇದಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ವಿಧಿಗೆ ಶರಣಾಗಲು ಮನಸ್ಸು ಮಾಡಿದ. ಆದರೆ ಅವನ ಕನಸಿನ ಧ್ಯಾನಮಂದಿರವೇ ಕಣ್ಣಮುಂದೆ ಬರುತ್ತಿತ್ತು. ಅವನನ್ನು ವ್ಯಾಕುಲಗೊಳಿಸುತ್ತಿತ್ತು.. ಏನೂ ಮಾಡಲರಿಯದೆ ಕನಸಿಗೇ ಶರಣಾದ. ಧ್ಯಾನಮಂದಿರದಲ್ಲಿ ಕುಳಿತು ಸುತ್ತಲಿನ ಮರಗಳಿಂದ ಬರುವ ಗಾಳಿಯ ಮರ್ಮರಕ್ಕೆ ಕಿವಿಗೊಟ್ಟು. ಓಹ್! ಏನಾಶ್ಚರ್ಯ! ಹಾಗೆ ಕನಸಿನ ಧ್ಯಾನಮಂದಿರದಲ್ಲಿ ಕುಳಿತಂತೆಯೇ ’ಶಾಂತಿ ಮಾರ್ಗ’ದ ಸಾಲುಗಳು ನೆನಪಿಗೆ ಬಂದೇಬಿಟ್ಟವು! ಅದನ್ನೇ ಪುನಃಪುನಃ ಉಚ್ಚರಿಸಿದ.
ಹೀಗೆ ಆಟಿಮಾವೋ ತಲುಪುವ ತನಕ ಸಮಯ ಸಹನೀಯವಾಗಿಯೇ ಸರಿದು ಹೋಯಿತು. ವಧೆಗಾಗಿ ನಿರ್ಮಿಸಿದ ಅಟ್ಟಣಿಗೆಯ ನೆರಳಿನಲ್ಲಿ ತಡವಾದ್ದಕ್ಕೆ ಅಸಹನೆಯಿಂದ ಕಾಯುತ್ತಿರುವ ಸಾರ್ಜೆಂಟ್ ನಿಂತಿದ್ದಾನೆ. ಲಗುಬಗೆಯಿಂದ ಆಹ್ ಚೋನನ್ನು ಅಟ್ಟಣಿಗೆಯ ಏಣಿ ಮೆಟ್ಟಿಲ ಮೇಲೆ ಹತ್ತಿಸಲಾಗುತ್ತದೆ. ಕೆಳಗೆ ಒಂದು ಬದಿಯಲ್ಲಿ ಎಲ್ಲಾ ಕೂಲಿಗಳು ನೆರೆದಿದ್ದನ್ನು ನೋಡುತ್ತಾನೆ ಆಹ್ ಚೋ. ವಧಾ ಕ್ರಿಯೆಯನ್ನು ವೀಕ್ಷಿಸಲು ಎಲ್ಲಾ ಕೂಲಿಗಳು ಬರಲೇಬೇಕೆಂದು ಸ್ಖೆಮ್ಮರನೇ ಆದೇಶ ಮಾಡಿರುತ್ತಾನೆ. ಚಿಂಗಿಗಳಿಗೆ ಇದೊಂದು ವಸ್ತುನಿಷ್ಟ ಪಾಠವಾಗಲಿ ಎಂದು ಅವನು ಬಯಸಿದ್ದ. ಆಹ್ ಚೋನನ್ನು ನೋಡಿದ್ದೇ ಕೂಲಿಗಳು ತಮ್ಮ ತಮ್ಮಲ್ಲೇ ಇಳಿದ್ವನಿಯಲ್ಲಿ ಗುಸುಗುಸು ಮಾತಾಡಿಕೊಂಡರು. ಪ್ರಮಾದದ ಅರಿವಾದವರೂ ತಮ್ಮಲ್ಲೇ ಬಚ್ಚಿಟ್ಟರು. ಅವರ್ಣನೀಯ ಬಿಳಿ ಪಿಶಾಚಿಗಳು ತಮ್ಮ ಮನಸ್ಸು ಬದಲಾಯಿಸಿದ್ದಂತೂ ಶತಸಿದ್ಧ. ಒಬ್ಬ ಅಮಾಯಕನ ಬದಲು ಇನ್ನೊಬ್ಬ ಅಮಾಯಕನ ಪ್ರಾಣ ತೆಗೆಯುತ್ತಿದ್ದಾರೆ. ಆಹ್ ಚೌ ಅಥವಾ ಆಹ್ ಚೋ. ಯಾರಾದ್ರೆ ಏನು? ಅವರಿಗೆ ಎಂದೂ ಈ ಬಿಳಿನಾಯಿಗಳು ಅರ್ಥವಾಗುವುದಿಲ್ಲ. ಅಂತೆಯೇ ಬಿಳಿನಾಯಿಗಳಿಗೂ ಚಿಂಗಿಗಳು ಅರ್ಥವಾಗುವುದಿಲ್ಲ. ಆಹ್ ಚೋ ತನ್ನ ತಲೆಯನ್ನು ಕಳೆದುಕೊಳ್ಳುವವನಿದ್ದಾನೆ. ಉಳಿದ ಕೂಲಿಗಳು ಇನ್ನುಳಿದ ಎರಡು ವರ್ಷಗಳ ಪೂರೈಸಿ ಚೀನಾಕ್ಕೆ ವಾಪಸ್ ಹೋಗುವವರಿದ್ದಾರೆ.
ಗಿಲೋಟಿನ್ ಯಂತ್ರವನ್ನು ಸ್ಖೆಮ್ಮರ್ ಸ್ವತಃ ತಾನೇ ತಯಾರು ಮಾಡಿದ್ದಾನೆ. ಅವನು ಪ್ರಯೋಗಶೀಲ. ಗಿಲೋಟಿನನ್ನು ತಾನು ಕಣ್ಣಾರೆ ನೋಡದೆ ಇದ್ದರೂ ಒಬ್ಬ ಫ್ರೆಂಚ್ ಅಧಿಕಾರಿ ವಿವರಿಸಿದ್ದನ್ನು ಕೇಳಿ ತಿಳಿದುಕೊಂಡು ಮಾಡಿದ್ದ. ಅವನ ಸಲಹೆಯ ಮೇರೆಗೆ ವಧಾ ಕಾರ್ಯವನ್ನು ಪಪೀಟೆಯ ಬದಲಾಗಿ ಆಟಿಮಾವೋದಲ್ಲಿ ನಿಯೋಜಿಸಲಾಗಿತ್ತು. ಅಪರಾಧ ನಡೆದ ಸ್ಥಳದಲ್ಲೇ ಶಿಕ್ಷೆಯೂ ನಡೆಯಬೇಕು ಎಂಬುದು ಅವನ ವಾದವಾಗಿತ್ತು. ಅದರ ಇನ್ನೊಂದು ದೊಡ್ಡ ಲಾಭವೆಂದರೆ ಶಿಕ್ಷೆಯ ದೃಶ್ಯ ಅರ್ಧ ಸಾವಿರದಷ್ಟಿರುವ ಕೂಲಿಗಳ ಮೇಲೆ ಸತ್ಪರಿಣಾಮವನ್ನು ಉಂಟುಮಾಡುತ್ತಲ್ಲಾ?! ಸ್ವಯಂಸ್ಫೂರ್ತಿಯಿಂದ ತಾನೇ ಮರಣದಂಡನೆಕಾರನಾಗಲು ಮುಂದೆ ಬಂದಿದ್ದ. ಹಾಗಾಗಿ ಅಟ್ಟಣಿಗೆಯ ಮೇಲೆ ನಿಂತು ತಾನೇ ತಯಾರು ಮಾಡಿದ ಯಂತ್ರದ ಪ್ರಯೋಗ ಮಾಡಲು ತೊಡಗಿದ್ದ. ಮನುಷ್ಯನ ಕುತ್ತಿಗೆಯನ್ನು ಅಳತೆ ಮತ್ತು ತೂಕದಲ್ಲಿ ಹೋಲುವ ಬಾಳೆ ದಿಂಡು ಗಿಲೋಟಿನ್ ಅಡಿಯಲ್ಲಿತ್ತು. ಆಹ್ ಚೋ ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದ. ಸಣ್ಣದೊಂದು ಬಾಗಿದ ನಳಿಕೆಯ ಸರಿಸಿ, ತಾನೇ ಜೋಡಿಸಿದ ಕೈಮರದ ಕೋಲಿನ ತುದಿಗೆ ಹರಿತವಾದ ಕತ್ತಿಯಷ್ಟು ಉದ್ದದ ಬ್ಲೇಡನ್ನು ಸಿಕ್ಕಿಸಿದ. ಕೈಮರದ ಬುಡದಲ್ಲೊಂದು ಎಳೆತ. ಬ್ಲೇಡ್ ಸಡಿಲಗೊಂಡು ಬಾಳೆದಿಂಡಿನ ಮೇಲೆ ಬಿದ್ದು ಸ್ವಲ್ಪವೂ ಅತ್ತಿತ್ತ ಆಗದೆ ತುಂಡಾಯ್ತು.
“ಹೇಗದು ವರ್ಕ್ ಆಗದು?” ಎನ್ನುತ್ತಾ ಸಾರ್ಜೆಂಟ್ ಮೆಟ್ಟಿಲು ಹತ್ತಿ ಬಂದ.
“ಬಹಳ ಚೆನ್ನಾಗಿ” ಎಂದ ಸ್ಖೆಮ್ಮರ್ “ತೋರಿಸುವೆ ನಿನಗೆ.”
ಮತ್ತೊಮ್ಮೆ ಪೂರ್ವಭ್ಯಾಸ ಶುರು ಆಯಿತು. ಬಾಗಿದ ನಳಿಕೆಯ ತಿರುಗಿಸಿ, ಕೈಮರಕ್ಕೆ ಕಟ್ಟಿದ ಹಗ್ಗ ಎಳೆಯಲಾಯಿತು. ಒಂದು ಜರ್ಕ್. ಬ್ಲೇಡು ಬಾಳೆ ದಿಂಡಿನ ಮೇಲೆ ಇಳಿಯಿತು. ಆದರೆ ಈ ಬಾರಿ ಮುಕ್ಕಾಲು ದಾರಿ ಕ್ರಮಿಸಿ ನಿಂತಿತು! ಸಾಜೆಂಟ್ ಕೆರಳಿಹೋದ, “ಉಪಯೋಗ ಇಲ್ಲ ಇದು” ಅಂದ.
ಸ್ಖೆಮ್ಮರನಿಗೆ ಬೆವರಿಳಿಯಿತು. “ಅದಕ್ಕೆ ಹೆಚ್ಚಿನ ಭಾರ ಬೇಕು” ಎನ್ನುತ್ತಾ ಅಟ್ಟಣಗೆಯ ತುದಿಗೆ ಬಂದು ಕಮ್ಮಾರನಿಂದ ಇಪ್ಪತ್ತೈದು ಪೌಂಡ್ ತೂಕದ ಕಬ್ಬಿಣದ ಚೂರನ್ನು ತರಲು ಆದೇಶಿಸಿದ.
ಆ ಚೂರನ್ನು ಅಗಲವಾದ ಬ್ಲೇಡಿನ ಮೇಲೆ ಇಡಲು ಅವನು ಬಗ್ಗಿರುವಾಗ ಆಹ್ ಚೋ ಸಾರ್ಜೆಂಟನೆಡೆಗೆ ನೋಡಿದ. ಅವಕಾಶವನ್ನು ಬಳಸಿಕೊಂಡು, “ಗೌರವಾನ್ವಿತ ನ್ಯಾಯಾಧೀಶರು ಆಹ್ ಚೌನ ತಲೆ ತೆಗೆಯಲು ಆದೇಶಿಸಿದ್ದು” ಎಂದು ಪ್ರಾರಂಭಿಸಿದ.
ಸಾರ್ಜೆಂಟ್ ಅಸಹನೆಯಿಂದ ತಲೆ ಆಡಿಸಿದ. ಅವನು ಆ ಮಧ್ಯಾಹ್ನ ದ್ವೀಪದಲ್ಲಿ ಹೆಚ್ಚು ಗಾಳಿಯಿರುವ ಕಡೆ ಕ್ರಮಿಸಬೇಕಾದ ಹದಿನೈದು ಮೈಲುಗಳ ಪ್ರಯಾಣದ ಬಗ್ಗೆ, ಅಲ್ಲಿ ಭೇಟಿ ಮಾಡಲಿರುವ ಬೆರಕೆ ಜಾತಿಯ ಲಫೀರೆಯ ಸುಂದರ ಮಗಳು ಬರ್ಥ್‌ಳ ಬಗ್ಗೆ ಯೋಚಿಸುತ್ತಿದ್ದ.
“ನಾನು ಆಹ್ ಚೌ ಅಲ್ಲ, ನಾನು ಆಹ್ ಚೋ, ಗೌರವಾನ್ವಿತ ನ್ಯಾಯಾಧೀಶರು ಒಂದು ತಪ್ಪು ಮಾಡಿದ್ದಾರೆ. ಆಹ್ ಚೌ ಎತ್ತರ ಇದ್ದಾನೆ. ನನ್ನ ನೋಡಿ ನಾನು ಕುಳ್ಳ.”
ಸಾರ್ಜೆಂಟ್ ಕ್ಷಣ ಅವನತ್ತ ನೋಡಿದ. ಆದ ತಪ್ಪನ್ನು ಗ್ರಹಿಸಿದ. “ಸ್ಖೆಮ್ಮರ್, ಬಾ ಇಲ್ಲಿ” ಎಂದು ಅಧಿಕಾರಯುತವಾಗಿ ಕರೆದ. ಆದರೆ ಆ ಜರ್ಮನ್ ಗೊಣಗಿದನೇ ಹೊರತು ತಾನು ಮಾಡುತ್ತಿದ್ದ ಕೆಲಸ ಬಿಟ್ಟು ತಲೆ ಎತ್ತಲಿಲ್ಲ. ಕಬ್ಬಿಣದ ಚೂರು ಬ್ಲೇಡಿನ ಮೇಲೆ ಸರಿಯಾಗಿ ಕೂತ ಮೇಲೆ ಸಂತೃಪ್ತಿಯಿಂದ ತಲೆ ಎತ್ತಿ, “ನಿನ್ನ ಚಿಂಗಿ ತಯಾರಿದ್ದಾನಾ?” ಪ್ರಶ್ನಿಸಿದ. “ಅವನೆಡೆ ನೋಡು, ಇದೇ ಚಿಂಗಿನಾ?” ಉತ್ತರಿಸಿದ ಸಾರ್ಜೆಂಟ್. ಆಶ್ಚರ್ಯಗೊಂಡ ಸ್ಖೆಮ್ಮರ್ ಕೆಲವು ಕ್ಷಣಗಳ ಕಾಲ ಅವಾಚ್ಯ ಶಬ್ದಗಳಿಂದ ಶಪಿಸಿದ. ತನ್ನ ಕೈಯಾರೆ ತಯಾರಿಸಿಟ್ಟ ಯಂತ್ರದ ಕಡೆ ನೋಡಿ ಮರುಗಿದ. ಅದು ಕೆಲಸ ಮಾಡುವುದನ್ನು ಕಾತರದಿಂದ ಎದುರು ನೋಡುತ್ತಿದ್ದ ಅವನು. ಕೊನೆಗೆ ನಿರ್ಧಾರದ ಧ್ವನಿಯಲ್ಲಿ ಹೇಳಿದ, “ನೋಡು, ಈ ಕೆಲಸವನ್ನು ಮುಂದೆ ಹಾಕುವುದು ಸಾಧ್ಯವಿಲ್ಲ. ಆ ಐನೂರು ಚಿಂಗಿಗಳ ಮೂರು ತಾಸಿನ ಕೆಲಸ ಈಗಾಗಲೇ ಖೋತಾ ಆಗಿದೆ. ನಿಜವಾದ ಅಪರಾಧಿಗಾಗಿ ಮತ್ತೆ ಅಷ್ಟು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ. ಕಾರ್ಯ ನೆರವೇರಿಸೋಣ ಅಷ್ಟೇ. ಎಷ್ಟಾದರೂ ಚಿಂಗಿನೇ ಇವನೂ.”
ಸಾರ್ಜೆಂಟ್ ದೂರದ ಪಯಣ, ಮುತ್ತಿನ ವ್ಯಾಪಾರಿಯ ಮಗಳು ಎಲ್ಲವನ್ನೂ ನೆನಪಿಸಿಕೊಂಡು. ತನ್ನಲ್ಲೇ ಮಾತಾಡಿಕೊಂಡ. “ಒಂದು ವೇಳೆ ಈ ಪ್ರಮಾದ ಪತ್ತೆ ಆದರೆ ಕ್ರುಶೋ ತಪ್ಪಿತಸ್ಥನೆನಿಸಿಕೊಳ್ಳುತ್ತಾನೆ. ಪತ್ತೆ ಆಗುವ ಸಂಭವವೇ ಇಲ್ಲ. ಯಾಕೆಂದರೆ ಆಹ್ ಚೌ ಯಾಕೆ ಬಿಟ್ಟುಕೊಡುತ್ತಾನೆ?” ಇದು ಜರ್ಮನ್ ಸ್ಖೆಮ್ಮರನ ಸಮರ್ಥನೆ.
“ಕ್ರುಶೋನನ್ನು ಗುರಿಯಾಗಿಸುವ ಸಂಭವ ಕಡಿಮೆ. ಜೈಲರನನ್ನು ತಪ್ಪಿತಸ್ಥ ಅನ್ನಬಹುದು” ಸಾರ್ಜೆಂಟ್ ಲೆಕ್ಕ ಹಾಕಿದ.
“ಹಾಗಾದರೆ ಸರಿ ಮುಂದುವರೆಸೋಣ. ನಮ್ಮನ್ನಂತೂ ದೂರುವುದಿಲ್ಲ. ಯಾರಿಗೆ ಗೊತ್ತಾಗುತ್ತದೆ ಅವನೋ ಇವನೋ ಅಂತಾ? ಎಲ್ಲರೂ ಒಂದೇ ಥರ ಇದ್ದಾರೆ. ಅವರು ಕಳಿಸಿದ ಚಿಂಗಿಯನ್ನು ಅವರದೇ ಸೂಚನೆಯಂತೆ ಅಗತ್ಯ ಕ್ರಮ ಜರುಗಿಸಿದ್ದೇವೆ ಅಷ್ಟೇ. ಜೊತೆಗೆ ಮತ್ತೆ ಈ ಐನೂರು ಕೂಲಿಗಳನ್ನು ಅವರ ಕೆಲಸ ತಪ್ಪಿಸಿ ಕರೆಸಲು ನಾನಂತೂ ತಯ್ಯಾರಿಲ್ಲ.”

ಇಬ್ಬರೂ ಫ್ರೆಂಚಲ್ಲಿ ಮಾತನಾಡುತ್ತಿದ್ದರಿಂದ ಆಹ್ ಚೋಗೆ ಹೇಗೂ ಅರ್ಥ ಆಗುತ್ತಿರಲಿಲ್ಲ. ಆದರೂ ತನ್ನ ವಿಧಿಯನ್ನು ನಿರ್ಧಾರ ಮಾಡುತ್ತಿದ್ದಾರೆಂಬುದು ಮಾತ್ರ ಗೊತ್ತಾಗುತ್ತಿತ್ತು ಅವನಿಗೆ. ಕೊನೆಯ ನಿರ್ಧಾರ ಸಾರ್ಜೆಂಟನದೇ ಎಂಬುದೂ ಅವನಿಗೆ ತಿಳಿದಿತ್ತು. ಅವನ ತುಟಿಗಳ ಚಲನೆಯನ್ನೇ ಗಮನಿಸಿದ.
“ಸರಿ. ಮುಂದುವರೆಸು. ಎಷ್ಟಾದರೂ ಚಿಂಗಿ ತಾನೆ” ಘೋಷಿಸಿದ ಸಾರ್ಜೆಂಟ್.
“ಇನ್ನೊಂದು ಬಾರಿ ಪರಿಶೀಲಿಸುತ್ತೇನೆ. ಸರಿಯಾಗಿ ಕಾರ್ಯ ನಿರ್ವಹಿಸುತ್ತಾ ಅಂತ ದೃಡಪಡಿಸಿಕೊಳ್ಳಲು ಮಾತ್ರ” ಎಂದು ಸ್ಖೆಮ್ಮರ್ ಬಾಳೆದಿಂಡನ್ನು ಮುಂದೆ ದೂಡಿ ಸರಿಯಾಗಿ ಕತ್ತಿಯ ಅಡಿಗೆ ಇರಿಸಿದ.
’ಶಾಂತಿ ಮಾರ್ಗ’ದ ಉದ್ಧರಣೆಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ ಆಹ್ ಚೋ. ’ಹೊಂದಾಣಿಕೆಯಿಂದ ಜೀವಿಸು’ ನೆನಪಿಗೆ ಬಂತು. ಆದರೆ ಇದು ಹೊಂದಿಕೆಯಾಗುವುದಿಲ್ಲ. ’ಸಾಯುವವನಿದ್ದಾನಲ್ಲ? ದುರುದ್ದೇಶವನ್ನು ಕ್ಷಮಿಸು’ – ಹ್ಞಾ, ಆದರೆ ಕ್ಷಮಿಸಲು ದುರುದ್ದೇಶವೇ ಇಲ್ಲ ಇಲ್ಲಿ. ಸ್ಖೆಮ್ಮರ್ ಮತ್ತು ಉಳಿದವರು ತಮ್ಮ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ದುರುದ್ದೇಶ ಇಲ್ಲ ಅದರಲ್ಲಿ. ಉಳಿದ ಕೆಲಸ, ಅಂದರೆ ಕಾಡನ್ನು ಸವರುವುದು, ನೀರಿಗಾಗಿ ನೆಲ ತೋಡುವುದು, ಹತ್ತಿ ಬೆಳೆ ಬೆಳೆಯುವುದು ಇಂಥವೆಲ್ಲಾ ಕೆಲಸಗಳ ಸಣ್ಣಸಣ್ಣ ಭಾಗಗಳು ಹೇಗೋ ಹಾಗೇ ತಲೆ ಕಡಿಯುವ ಕೆಲಸವೂ ಕೂಡ ಕರ್ತವ್ಯದ ಒಂದು ಭಾಗ. ಸ್ಖೆಮ್ಮರ್ ಮತ್ತೊಮ್ಮೆ ಗಿಲೋಟಿನನ ತಂತಿ ಎಳೆದ. ಕತ್ತಿ ಚಕ್ ಎಂದು ಬಿದ್ದು ಬಾಳೆ ದಿಂಡನ್ನು ಕತ್ತರಿಸಿ ತುಂಡು ಮಾಡಿತು.
’ಶಾಂತಿ ಮಾರ್ಗ’ದ ಎಳೆಗಳು ಮರೆತೇಹೋದವು ಆಹ್ ಚೋಗೆ.
“ಬ್ಯೂಟಿಫುಲ್” ಸಾರ್ಜೆಂಟ್ ಉದ್ಘಾರ ತೆಗೆದ. “ಬಹಳ ಚೆನ್ನಾಗಿದೆ ಗೆಳೆಯ” ಎಂದು ಒಂದು ಸಿಗರೇಟ್ ಹಚ್ಚಿದ.
ಹೊಗಳಿಕೆಗೆ ಸ್ಖೆಮ್ಮರ್ ಉಬ್ಬಿಹೋದ.
ತಹಿತಿಯ ಉಚ್ಛಾರದಿಂದ “ಬಾ ಆಹ್ ಚೌ” ಎಂದು ಕರೆದ.
“ಆದರೆ ನಾನು ಆಹ್ ಚೌ ಅಲ್ಲ.” ಆಹ್ ಚೋ ಶುರುವಿಟ್ಟುಕೊಂಡ.
“ಮುಚ್ಚು ಬಾಯಿ. ಇನ್ನೊಮ್ಮೆ ಬಾಯಿ ತೆಗೆದರೆ ನಿನ್ನ ತಲೆಯನ್ನು ಒಡೆದು ಹಾಕುತ್ತೇನೆ” ಅಬ್ಬರಿಸಿದ ಸ್ಖೆಮ್ಮರ್.
ಮೇಲ್ವಿಚಾರಕ ಮುಷ್ಟಿ ಬಿಗಿದು ಗುದ್ದುವಂತೆ ತೋರಿಸಿ ಹೆದರಿಸಿದ. ಆಹ್ ಚೋ ಮೌನವಾದ. ವಿದೇಶಿ ಪಿಶಾಚಿಗಳದ್ದು ಅವರದೇ ದಾರಿ. ಪ್ರತಿಭಟಿಸುವುದರಿಂದ ಏನು ಪ್ರಯೋಜನ? ಅವನ ದೇಹದ ಅಳತೆಯಷ್ಟೇ ಇದ್ದ ಉದ್ದಕ್ಕೆ ನಿಲ್ಲಿಸಿದ ಹಲಗೆಗೆ ಮೌನವಾಗೇ ದೇಹವನ್ನೊಡ್ಡಿದ. ಸ್ಖೆಮ್ಮರ್ ಪಟ್ಟಿಗಳನ್ನು ಬಿಗಿದು ಆಹ್ ಚೋನನ್ನು ಹಲಗೆಗೆ ಬಂಧಿಸಿದ. ಎಷ್ಟು ಬಿಗಿಯಾಗಿ ಕಟ್ಟಿದ ಅಂದರೆ ಆಹ್ ಚೋಗೆ ನೋವಾಗುವಷ್ಟು. ಆದರೆ ಆ ನೋವು ಹೆಚ್ಚು ಕಾಲ ಇರುವುದಿಲ್ಲವಲ್ಲಾ? ಹಲಗೆ ಗಾಳಿಯಲ್ಲಿ ತಿರುಗುತ್ತಾ ಅಡ್ಡಕ್ಕೆ, ಮಲಗುತ್ತಿರುವಂತೆ ಅನಿಸಿತು. ಕೊನೆಯದಾಗಿ ಆಹ್ ಚೋ ತನ್ನ ಧ್ಯಾನವನದ ಒಂದು ನೋಟ ಕಂಡ. ಆ ಧ್ಯಾನವನದಲ್ಲಿ ತಾನು ಕುಳಿತಂತೆ ಭಾವಿಸಿದ. ತಂಗಾಳಿ ಬೀಸುತ್ತಿತ್ತು. ಮರಗಳಿಂದ ಗಂಟೆ ನಿನಾದ ಮಧುರವಾಗಿ ಮೊಳಗುತ್ತಿತ್ತು. ಹಕ್ಕಿಗಳು ಲಾಲಿ ಹಾಡುತ್ತಿದ್ದವು.
ಗೋಡೆಯಾಚೆಯಿಂದ ಹಳ್ಳಿ ಬದುಕಿನ ಶಬ್ದ ಹತ್ತಿಕ್ಕಿದಂತೆ ಕೇಳಿಸುತ್ತಿತ್ತು.
ಹಲಗೆ ತಿರುಗುವುದು ನಿಂತಿತು. ದೇಹದ ಸ್ನಾಯುಗಳ ಬಿಗಿತದಿಂದ ಆಹ್ ಚೋಗೆ ತಾನು ಅಂಗಾತ ಮಲಗಿರುವೆನೆಂದು ಗೊತ್ತಾಯಿತು. ಕಣ್ಣು ತೆರೆದ. ಕಣ್ಣೆದುರೇ ಬಿಸಿಲಿಗೆ ಫಳಫಳ ಹೊಳೆಯುತ್ತಿರುವ ಕತ್ತಿ ಇರುವುದು ಕಾಣಿಸಿತು. ಅದರ ಮೇಲೆ ಹೆಚ್ಚುವರಿಯಾಗಿ ಇಟ್ಟ ಭಾರವನ್ನು ನೋಡಿದ, ಆ ಕಬ್ಬಿಣದ ತುಂಡನ್ನು ಬಿಗಿದ ದಾರ ಒಂದು ಕಡೆ ಬಿಚ್ಚಿ ಹೋದದ್ದು ಕಣ್ಣಿಗೆ ಬಿತ್ತು. ಸಾರ್ಜೆಂಟ್ ತನ್ನ ಕೀರಲು ಧ್ವನಿಯಲ್ಲಿ ಆದೇಶಿಸಿದ್ದನ್ನೂ ಕೇಳಿದ. ಲಗುಬಗೆಯಿಂದ ಕಣ್ಣು ಮುಚ್ಚಿದ ಆಹ್ ಚೋ. ಆ ಕತ್ತಿ ಕೆಳಗಿಳಿಸುವುದನ್ನು ನೋಡಲು ಇಚ್ಚಿಸಲಿಲ್ಲ ಅವನು. ಆದರೆ ಅದರ ಅನುಭವವಾಯಿತು ಅವನಿಗೆ. ಒಂದೇ ಕಟ್ಟ ಕಡೆಯ ಕ್ಷಣ. ಆ ಕ್ಷಣ ಕ್ರುಶೋ ಹೇಳಿದ್ದು ನೆನಪಾಯ್ತು. ಆದರೆ ಕ್ರುಶೋ ಹೇಳಿದ್ದು ತಪ್ಪು. ಕತ್ತಿ ಕಚಗುಳಿಯಿಡಲಿಲ್ಲ. ಅಷ್ಟು ಮಾತ್ರ ಗೊತ್ತಾಯಿತು ಅವನಿಗೆ, ಗೊತ್ತಾಗುವುದೇ ನಿಂತು ಹೋಗುವ ಮುಂಚೆ.
ಮೂಲ: ಜ್ಯಾಕ್ ಲಂಡನ್, ಅಮೆರಿಕ ಮೂಲದ ಬರಹಗಾರ, ಪತ್ರಕರ್ತ. ’ದ ಕಾಲ್ ಫಾರ್ ವೈಲ್ಡ್’, ’ದ ಐರನ್ ಹೀಲ್’, ’ವೈಟ್ ಫ್ಯಾಂಗ್’ ಅವರ ಜನಪ್ರಿಯ ಕಾದಂಬರಿಗಳಲ್ಲಿ ಕೆಲವು.
ಅನುವಾದ: ವೃಂದಾ ಹೆಗಡೆ, ಸಾಗರದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ



ವೃಂದಾ ಹೆಗಡೆ ಅವರೇ, ಜ್ಯಾಕ್ ಲಂಡನ್ ಕಥೆ ಕರುಳುಕತ್ತರಿಸುವಂತಿದೆ, ತಮ್ಮ ಅನುವಾದ ಸಿಕ್ಕಾಪಟ್ಟೆ ಚೆನ್ನಾಗಿದೆ.