Homeಮುಖಪುಟಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಗಂಡನ ಕಿರುಕುಳ; ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ಆತ್ಮಹತ್ಯೆ

ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಗಂಡನ ಕಿರುಕುಳ; ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ಆತ್ಮಹತ್ಯೆ

ಸಾವಿಗೂ ಮುನ್ನ ವಿಡಿಯೊ ಮಾಡಿರುವ ಸಂತ್ರಸ್ತ ಮಹಿಳೆ, ತಾನು ಅನುಭವಿಸಿರುವ ಕಿರುಕುಳವನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ. “ಗಂಡನ ಕಿರುಕುಳವೇ ಕಾರಣ” ಎಂದು ತಿಳಿಸಿ ಸಾವಿಗೆ ಶರಣಾಗಿದ್ದಾರೆ.

“ಹೆಣ್ಣು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿದ್ದೀಯ” ಎಂದು ಗಂಡ ವರ್ಷಗಳ ಕಾಲ ಕಿರುಕುಳ ನೀಡಿರುವುದನ್ನು ಮಹಿಳೆ ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

30 ವರ್ಷ ವಯಸ್ಸಿನ ಮಂದೀಪ್ ಕೌರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, “ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ, ಆತ ಒಂದು ದಿನ ತನ್ನ ದಾರಿಯನ್ನು ಸರಿ ಮಾಡಿಕೊಳ್ಳಬಹುದು ಎಂದು ಭಾವಿಸುತ್ತೇನೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಎಂಟು ವರ್ಷವಾಯಿತು. ನಾನು ಈಗ ದಿನವೂ ಹಲ್ಲೆಗೊಳಗಾಗುತ್ತಿದ್ದೇನೆ” ಎಂದು ಪದೇ ಪದೇ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. 4 ಮತ್ತು 2 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ತಾಯಿ ಇವರಾಗಿದ್ದಾರೆ.

ಪಂಜಾಬಿ ಭಾಷೆಯಲ್ಲಿ ಮಾತನಾಡಿರುವ ಕೌರ್‌, ‘ನನ್ನ ಪತಿ ಮತ್ತು ಅತ್ತೆ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಅಪ್ಪಾ, ನಾನು ಸಾಯುತ್ತೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದಿದ್ದಾರೆ.

ಯುಪಿಯ ಬಿಜ್ನೋರ್‌ನವರಾದ ಕೌರ್, 2015ರಲ್ಲಿ ರಂಜೋಧ್‌ಬೀರ್ ಸಿಂಗ್ ಸಂಧು ಅವರನ್ನು ಮದುವೆಯಾಗಿ ಅಮೆರಿಕಕ್ಕೆ ತೆರಳಿದ್ದರು. ಬಿಜ್ನೋರ್‌ನಲ್ಲಿರುವ ಕೌರ್‌‌ ಕುಟುಂಬವು, “ಈ ಶೋಷಣೆಯು ಒಂದು ದಿನ ಕೊನೆಗೊಳ್ಳುತ್ತದೆ ಎಂದು ಭಾವಿಸಿದ್ದೆವು” ಎಂದಿದೆ. ಇದೀಗ ಕೌರ್‌ ಅವರ ಮೃತದೇಹವನ್ನು ಭಾರತಕ್ಕೆ ತರಲು ಸರ್ಕಾರದ ನೆರವನ್ನು ಕುಟುಂಬ ಕೋರಿದೆ.

ಗಂಡ ನಿಂದಿಸುತ್ತಿರುವ ಹಲವಾರು ವೀಡಿಯೊಗಳು ವೈರಲ್ ಆಗಿದ್ದು, ಅದರಲ್ಲಿ ಹೆಣ್ಣುಮಕ್ಕಳು ಕಿರುಚುವುದು ಮತ್ತು ಅಳುವುದು ಕೇಳುತ್ತದೆ. ಮತ್ತೊಂದು ವಿಡಿಯೊ ಮನೆಯೊಳಗಿನ ಕ್ಯಾಮೆರಾದಲ್ಲಿ ದಾಖಲಾಗಿದೆ. ಕ್ಷಮೆ ಕೇಳುವವರೆಗೂ ಕೌರ್‌ಗೆ ಗಂಡ ಹೊಡೆಯುತ್ತಾರೆ.

ಈ ವಿಡಿಯೊಗಳನ್ನು ಉಲ್ಲೇಖಿಸಿರುವ ಎನ್‌ಡಿಟಿವಿ, “ಇವುಗಳ ಅಧಿಕೃತತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಈ ವಿಡಿಯೊಗಳನ್ನು ಮಹಿಳೆ ತನ್ನ ಸ್ನೇಹಿತರಿಗೆ ಕಳುಹಿಸಿರಬಹುದು ಎಂದು ಊಹಿಸಲಾಗಿದೆ” ಎಂದು ವರದಿ ಮಾಡಿದೆ.

“ನನ್ನನ್ನು ಐದು ದಿನಗಳ ಕಾಲ ಟ್ರಕ್‌ನಲ್ಲಿ ಬಂಧಿಯಾಗಿಟ್ಟ. ನನ್ನ ತಂದೆ ಪೊಲೀಸ್ ಕೇಸ್ ದಾಖಲಿಸಿದ್ದಾರೆ. ಕೇಸ್‌ ವಾಪಸ್ ಪಡೆಯುವಂತೆ ಆತ ನನ್ನಲ್ಲಿ ಬೇಡಿಕೊಂಡ. ನಾನು ಆತನ ಮನವಿಯನ್ನು ಒಪ್ಪಿದೆ” ಎಂದಿರುವ ಕೌರ್‌‌, ತಾನು ಅನುಭವಿಸಿರುವ ಚಿತ್ರಹಿಂಸೆಯನ್ನು ವಿವರಿಸಿದ್ದಾರೆ.

ಯುಎಸ್‌ನಲ್ಲಿರುವ ಪತಿ ಅಥವಾ ಭಾರತದಲ್ಲಿರುವ ಆತನ ಕುಟುಂಬದ ವಿರುದ್ಧ ಯಾವುದೇ ಕಾನೂನು ಜಾರಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ.

ಸಿಖ್ ಸಮುದಾಯದೊಳಗೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಿಗಾಗಿ ಕೆಲಸ ಮಾಡುತ್ತಿರುವ ದಿ ಕೌರ್ ಮೂವ್‌ಮೆಂಟ್ ಸಂಸ್ಥೆಯು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿರಿ: ರಾಜಸ್ಥಾನ: ಬಿಜೆಪಿ ಶಾಸಕನ ಕಿರುಕುಳಕ್ಕೆ ಬೇಸತ್ತು ಸಂತ ಆತ್ಮಹತ್ಯೆ- ಆರೋಪ

ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್‌ನಲ್ಲಿರುವ ಸಂತ್ರಸ್ತೆಯ ಮನೆಯ ಹೊರಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಪಂಜಾಬ್‌ನ ಕೆಲವು ಕಾರ್ಯಕರ್ತರು ಕೌರ್‌ ಕುಟುಂಬವನ್ನು ಬಿಜ್ನೋರ್‌ನಲ್ಲಿ ಭೇಟಿಯಾಗಿದ್ದಾರೆ.

ಹಲವು ದೇಶಗಳಲ್ಲಿನ ಜನರು (ಮುಖ್ಯವಾಗಿ ಪಂಜಾಬಿ ಹಾಗೂ ಸಿಖ್‌ಗಳು) ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ‌ವ್ಯಕ್ತಪಡಿಸಿದ್ದು, #JusticeForMandeep ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

ಸಿಖ್ ಮತ್ತು ಪಂಜಾಬಿ ಸಮುದಾಯಗಳಲ್ಲಿನ ದೌರ್ಜನ್ಯಗಳ ವಿರುದ್ಧ ಕಾರ್ಯನಿರ್ವಹಿಸುವ ಯುಕೆ ಮೂಲದ ಎನ್‌ಜಿಒ ಸಿಖ್ ವುಮೆನ್ಸ್ ಏಡ್ ಹೇಳಿಕೆಯನ್ನು ನೀಡಿದ್ದು, “ಆಕೆ ಜೀವನದಲ್ಲಿ ಅನುಭವಿಸಿದ ಹಿಂಸೆಯನ್ನು ಹೇಳಿಕೊಂಡಿದ್ದಾಳೆ” ಎಂದು ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...