Homeಮುಖಪುಟಹಿಂದೂತ್ವದ ವ್ಯಾಖ್ಯಾನ ನೀಡಲು ಸೋತಿದ್ದೇಕೆ?: ವಿ.ಡಿ ಸಾವರ್ಕರ್ ಕುರಿತು ಹೊಸ ಪುಸ್ತಕದ ಬಗ್ಗೆ ಯೋಗೇಂದ್ರ ಯಾದವ್...

ಹಿಂದೂತ್ವದ ವ್ಯಾಖ್ಯಾನ ನೀಡಲು ಸೋತಿದ್ದೇಕೆ?: ವಿ.ಡಿ ಸಾವರ್ಕರ್ ಕುರಿತು ಹೊಸ ಪುಸ್ತಕದ ಬಗ್ಗೆ ಯೋಗೇಂದ್ರ ಯಾದವ್ ಟಿಪ್ಪಣಿ

ಸಾವರ್ಕರ್ "ವೀರನೆ?", "ಮಾಫಿ ವೀರನೆ?"; ನಕಲಿ ಹೆಸರಲ್ಲಿ ತನ್ನದೇ ಜೀವನಚರಿತ್ರೆ ಬರೆದು ನಿರ್ಲಜ್ಜೆಯಿಂದ ತನ್ನನ್ನು ತಾನೇ ಹೊಗಳಿಗೊಂಡರೆ?; ಮಹಾತ್ಮಾ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಅವರು ನೇರವಾಗಿ ಶಾಮೀಲಾಗಿದ್ದರೆ? ಇತ್ಯಾದಿ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಸಿಗುವುದಿಲ್ಲ

- Advertisement -
- Advertisement -

ಸಾವರ್ಕರ್ ಯಾವತ್ತೂ ಹಿಂದೂತ್ವ ಯೋಜನೆಯ ಸ್ಪಷ್ಟ ವ್ಯಾಖ್ಯಾನ ನೀಡಿರಲಿಲ್ಲ. ಹೊಸ ಪುಸ್ತಕವೊಂದು ಅದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ವಿನಾಯಕ ದಾಮೋದರ ಸಾವರ್ಕರ್ ಕುರಿತ ಮೊದಲ ಪಕ್ಷಪಾತವಿಲ್ಲದ ಜೀವನ ಚರಿತ್ರೆಯೊಂದು- ಹಿಂದೂತ್ವವು ನಾವು ಎಲ್ಲಾ ಗಂಭೀರತೆಯೊಂದಿಗೆ ಪರಿಶೀಲಿಸಲು ಕಲಿಯಬೇಕಾದ ಸಿದ್ಧಾಂತ ಎಂದು ನಮಗೆ ಮನವರಿಕೆ ಮಾಡಲು ಬಯಸುತ್ತದೆ.

***

ಹಿಂದೂತ್ವ ಎಂದು ಕರೆಯಲಾಗುವ ರಾಜಕೀಯ ಯೋಜನೆಯು ಯಾವತ್ತೂ ಒಂದು ಮೂಲಭೂತ ವೈರುಧ್ಯವನ್ನು ಹೊಂದಿದೆ: ಆದೆಂದರೆ, ಒಳಗೊಳ್ಳುವಿಕೆಯನ್ನು ಬೋಧಿಸುತ್ತಲೇ ಹೊರಗಿಡುವಿಕೆಯನ್ನು ಪಾಲಿಸುವುದು. ಅದರ ನೈತಿಕ ಮತ್ತು ಸಾಂಸ್ಕೃತಿಕ ನ್ಯಾಯಸಮ್ಮತತೆಗೆ- ಅದೊಂದು ವಿಶಾಲ ತಳಹದಿ ಹೊಂದಿರುವ ಅಗತ್ಯವಿದೆ. ಆ ಮೂಲಕ ಅದು ಭಾರತದ ಇಡೀ ನಾಗರಿಕತೆಯ ಪರಂಪರೆಯ ಮೇಲೆ ಹಕ್ಕು ಸ್ಥಾಪಿಸಬಹುದು. ಹೀಗಿದ್ದರೂ, ರಾಜಕೀಯ ಅನಿವಾರ್ಯತೆಗಳು ಅದನ್ನು ಹಿಂದೂಗಳೆಂಬ ಧಾರ್ಮಿಕ ಹೆಸರಿನಲ್ಲಿ ಬಹುಸಂಖ್ಯಾತರನ್ನು ಹೊರಗಿಟ್ಟು, ಒಂದೇ ಗುಂಪಿನ ಒಂದು ರಾಜಕೀಯ ಸಮುದಾಯವನ್ನು ಕಟ್ಟುವ ಸಂಕುಚಿತತೆಗೆ ನೂಕಬಹುದು.

ಈ ಕಷ್ಟದಿಂದ ಹೊರಬರಲು ಈ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ರಾಜಕಾರಣದ ಗುಣವೇ ಆಗಿರುವ ಆಷಾಢಭೂತಿತನ ಮತ್ತು ನೈತಿಕ ದುಷ್ಟತೆಯ ಹೊರತು ಬೇರೆ ದಾರಿ ಇದೆಯೆ? ಕಳೆದ ತಿಂಗಳು ಹೊರಬಂದಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಮೊದಲ ಪೂರ್ಣ ಪ್ರಮಾಣದ, ನಿಖರವಾದ ಮತ್ತು ತಾರತಮ್ಯವಿಲ್ಲದ ಬೌದ್ಧಿಕ ಜೀವನ ಚರಿತ್ರೆಯು- ಹಿಂದೂತ್ವವು ನಾವು ಎಲ್ಲಾ ಗಂಭೀರತೆಯೊಂದಿಗೆ ಪರಿಗಣಿಸಿ ಪರಿಶೀಲಿಸಬೇಕಾದ ಕಲಿಯಬೇಕಾದ ಸಿದ್ಧಾಂತ ಎಂದು ನಮಗೆ ಮನವರಿಕೆ ಮಾಡಲು ಬಯಸುತ್ತದೆ. ಹಾಗೆ ಮಾಡುವುದರ ಮೂಲಕ ಅದು, ಈ ಸಿದ್ಧಾಂತದಲ್ಲೇ ಅಡಕವಾದ ಸೈದ್ಧಾಂತಿಕ ಗೊಂದಲ, ಐತಿಹಾಸಿಕ ಆಸ್ಪಷ್ಟತೆ, ರಾಜಕೀಯ ಚಂಚಲತೆ ಮತ್ತು ಹಿಂಸಾಚಾರಕ್ಕೆ ನೈತಿಕ ಅನುಮತಿಯನ್ನು ಬಯಲುಗೊಳಿಸುತ್ತದೆ.

ಕೇಂದ್ರದಲ್ಲೇ ವೈರುಧ್ಯ…

ಮೊದಲಿಗೆ ನಾವು ಇಲ್ಲಿರುವ ಮೂಲಭೂತ ವೈರುಧ್ಯವನ್ನು ಅರ್ಥ ಮಾಡಿಕೊಳ್ಳೋಣ. ಎಲ್ಲಾ ರಾಷ್ಟ್ರವಾದಗಳಂತೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘವು (ಮತ್ತು ಹಿಂದಿನ ಹಿಂದೂ ಮಹಾಸಭಾ) ಕೂಡಾ ಭಾರತದ ರಾಷ್ಟ್ರೀಯ ಅಸ್ತಿತ್ವವನ್ನು ಪ್ರಾಚೀನ ಕಾಲಕ್ಕೆ ಕೊಂಡೊಯ್ಯುವುದರ ಮೂಲಕ ವಸಾಹತು ಪೂರ್ವ ನಾಗರಿಕತೆಯ ಭವ್ಯತೆಯನ್ನು ಹೇಳಿಕೊಳ್ಳಬೇಕಾಗುತ್ತದೆ. ಈ ಬೌದ್ಧಿಕ ಯೋಚನೆಯು ಎರಡು ಸ್ಪಷ್ಟವಾದ ಸಮಸ್ಯೆಗಳನ್ನು ಎದುರಿಸುತ್ತದೆ. ಈಸ್ಟ್ ಇಂಡಿಯಾ ಕಂಪನಿಯು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಮೊದಲು ಭಾರತೀಯ ರಾಷ್ಟ್ರವು ಎಲ್ಲಾ ಸಂಸ್ಕೃತಿಗಳನ್ನು ಮತ್ತು ಸಮುದಾಯಗಳನ್ನು ಒಳಗೊಂಡಿತ್ತು ಎಂದು ವ್ಯಾಖ್ಯಾನಿಸಿದರೆ, ಭಾರತ ರಾಷ್ಟ್ರವು ನಂತರವೂ ಬಹಳಷ್ಟು ವೈವಿಧ್ಯದ, ಬಹುಸಂಖ್ಯೆಯ ಸಂಸ್ಕೃತಿಗಳು, ಸಮುದಾಯಗಳು ಮತ್ತು ಧರ್ಮಗಳನ್ನು ಒಳಗೊಳ್ಳಬೇಕಾಗುತ್ತದೆ. ಹಿಂದೂಗಳ ಜೊತೆಗೆ ಸಿಕ್ಖರು, ಜೈನರು ಮತ್ತು ಬೌದ್ಧರು ಮಾತ್ರವಲ್ಲದೆ, ವಸಾಹತುಶಾಹಿ ಬರುವುದಕ್ಕಿಂತಲೂ ಶತಮಾನಗಳಷ್ಟು ಹಿಂದಿನಿಂದಲೂ ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಮತ್ತು ಕ್ರೈಸ್ತರನ್ನೂ ಒಳಗೊಳ್ಳಬೇಕಾಗುತ್ತದೆ. ಎರಡನೇ ಸಮಸ್ಯೆಯು, ಇಂದು ನಾವು ಹಿಂದೂ ಎಂದು ಕರೆಯುವ ಧರ್ಮವು ಉನ್ನತಿಗೆ ಬರುವುದಕ್ಕಿಂತ ಮೊದಲೇ ಇದ್ದ ಮೂಲನಿವಾಸಿ ಸಮುದಾಯಗಳದ್ದು. ಪ್ರಾಥಮಿಕ ಹಕ್ಕು ಅವರದ್ದೇ ಆಗಿರಬೇಕಲ್ಲವೆ?

ಆದುದರಿಂದ ಸಮಸ್ಯೆಯು ರಾಚುವಂತಿದೆ: ಮೂಲರೂಪದ, ಅಂದರೆ ಹಿಂದಿನ (ಸ್ವಾತಂತ್ರ್ಯ ಪೂರ್ವದ) ರಾಷ್ಟ್ರೀಯತೆಯ ಗೆರೆಗಳನ್ನು ಎಳೆದರೆ, ಅದು ಮುಸ್ಲಿಮರು ಮತ್ತು ಕ್ರೈಸ್ತರನ್ನು ಒಳಗೊಳ್ಳಬೇಕಾಗುತ್ತದೆ. ಅದಕ್ಕಿಂತಲೂ ಹಿಂದೆ ಈ ಗೆರೆಯನ್ನು ಎಳೆದರೆ ಅದು ಹಿಂದೂಗಳನ್ನೂ ಹೊರಗಿಡಬೇಕಾಗುತ್ತದೆ. (ಆ ರಾಷ್ಟ್ರೀಯತೆಯಲ್ಲಿ ಮೂಲನಿವಾಸಿಗಳಷ್ಟೇ ಇರುತ್ತಾರೆ). ಇವೆರಡೂ ಅವರ ಹಿಂದೂತ್ವದ ರಾಜಕೀಯ ಯೋಜನೆಯನ್ನು ವಿಫಲಗೊಳಿಸುತ್ತವೆ. ಈ ಎರಡೂ ಬೋನುಗಳಿಗೆ ಬೀಳದೆ ಭಾರತದ ರಾಷ್ಟ್ರೀಯತೆಯನ್ನು ಪ್ರತಿಪಾದಿಸಲು ಹೇಗೆ ಸಾಧ್ಯ? ಸಾವರ್ಕರರ ಹಿಂದೂತ್ವದ ಪರಿಕಲ್ಪನೆಯು ಈ ಸವಾಲಿಗೆ ಹೊಸರೀತಿಯ ಪ್ರತಿಕ್ರಿಯೆಯಾಗಿದೆ. ಅವರ ಕೃತಿಗಳ ಸಂಪೂರ್ಣ ಭಂಡಾರವು- ಅವುಗಳ ಪ್ರಕಾರಗಳು (ಕವನ, ನಾಟಕ, ಇತಿಹಾಸ, ವಿವಾದ), ಭಾಷೆ (ಮರಾಠಿ, ಇಂಗ್ಲಿಷ್), ಸ್ಥಳ (ಲಂಡನ್, ಅಂಡಮಾನ್, ಮಹಾರಾಷ್ಟ್ರ), ರಾಜಕೀಯ ಹಂತಗಳು (ಗಾಂಧಿಗೆ ಮೊದಲು, ಗಾಂಧಿ ಕಾಲ, ಗಾಂಧಿ ನಂತರ)- ಭಾರತ ರಾಷ್ಟ, ಮರಾಠರು ಮತ್ತು ತನ್ನ ಬಗ್ಗೆ ಇತಿಹಾಸದ ಸರಣಿಯೊಂದನ್ನು ಬರೆಯುವ ಪ್ರಯತ್ನವಾಗಿದೆ. ಇವೆಲ್ಲವುಗಳಲ್ಲಿ ಅವರ ಒಂದಂಶದ ಕಾರ್ಯಕ್ರಮವೆಂದರೆ, ಹಿಂದೂತ್ವದ ಹಕ್ಕನ್ನು ಸಮರ್ಥಿಸುವುದು. ಇದುವೇ ವಿನಾಯಕ ಚತುರ್ವೇದಿಯವರ “ಹಿಂದೂತ್ವ ಎಂಡ್ ವಯಲೆನ್ಸ್: ವಿ.ಡಿ. ಸಾವರ್ಕರ್ ಎಂಡ್ ದ ಪಾಲಿಟಿಕ್ಸ್ ಆಫ್ ಹಿಸ್ಟರಿ” (ಹಿಂದೂತ್ವ ಮತ್ತು ಹಿಂಸಾಚಾರ: ವಿ.ಡಿ. ಸಾವರ್ಕರ್ ಮತ್ತು ಇತಿಹಾಸದ ರಾಜಕೀಯ) ಎಂಬ ಪುಸ್ತಕದ ಉದ್ದಕ್ಕೂ ಹರಿಯುವ ಎಳೆ. ಈ ಲೇಖಕ ಮತ್ತವರ ಕಥಾನಾಯಕನ ಮೊದಲ ಹೆಸರು ಒಂದೇ ಆಗಿರುವುದನ್ನು ಗಮನಿಸಿದಿರಾ?  ಹೌದು, ಅವರ ವೈದ್ಯರಾಗಿದ್ದ ಮತ್ತು ಮಹಾತ್ಮಾ ಗಾಂಧಿಯವರ ಹತ್ಯೆಗಾಗಿ ವಿಚಾರಣೆಗೆ ಒಳಗಾದ ಒಂಭತ್ತು ಆರೋಪಿಗಳಲ್ಲಿ  ಒಬ್ಬರಾದ ಮತ್ತು ಮಾಫಿಸಾಕ್ಷಿಯಾಗಿ ಶಿಕ್ಷೆ ತಪ್ಪಿಸಿಕೊಂಡ ಡಾ. ದತ್ತಾತ್ರೇಯ ಸದಾಶಿವ ಪಚೂರೆಯೇ ಅವರಿಗೆ ಸಾವರ್ಕರ್‌ರ ವಿನಾಯಕ ಎಂಬ ಹೆಸರಿಟ್ಟ ವ್ಯಕ್ತಿ. (ಲೇಖಕರು ಆರೆಸ್ಸೆಸ್ ಕುಟುಂಬದವರಾಗಿರಲಿಲ್ಲ‌.) ಡಾ. ಪಚೂರೆ ಸತ್ತ ನಂತರ, ತಾನು ವಯಸ್ಕನಾದ ಮೇಲೆ ಈ ಸಂಬಂಧವನ್ನು ಕಂಡುಕೊಂಡ ರೋಚಕ ಕತೆಯನ್ನು ಲೇಖಕರು ವಿವರಿಸುತ್ತಾರೆ. ಈ ಅಹಿತಕರ ಸಂಬಂಧವೇ ಈ ಪುಸ್ತಕದ ಧ್ವನಿಯನ್ನು ವಿವರಿಸುತ್ತದೆ. ಕೃತಿಚೌರ್ಯದ ಆರೋಪದಿಂದ ಸುದ್ದಿಯಲ್ಲಿದ್ದ, ಯಾವುದೇ ವಿದ್ವತ್ತು ಇಲ್ಲದ ವಿಕ್ರಮ್ ಸಂಪತ್ ಅವರ ಎರಡು ಸಂಪುಟಗಳ ಪುಸ್ತಕಕ್ಕೆ ತೀರಾ ವ್ಯತಿರಿಕ್ತವಾಗಿ- ಈ ಪುಸ್ತಕವು ಖಂಡಿತವಾಗಿಯೂ  ಹೊಗಳುವ ಸಂತಚರಿತೆಯಲ್ಲ. ಅದೇ ಹೊತ್ತಿಗೆ ವಿನಾಯಕ ಚತುರ್ವೇದಿಯವರು ಹೆಚ್ಚಿನ ಜಾತ್ಯತೀತ ಇತಿಹಾಸಕಾರರು ಮತ್ತು ವ್ಯಾಖ್ಯಾನಕಾರರು ಅನುಸರಿಸುವ ತಳ್ಳಿಹಾಕುವ, ಖಂಡನಾತ್ಮಕ ದಾರಿಯನ್ನೂ ಅನುಸರಿಸುವುದಿಲ್ಲ. ಸಾವರ್ಕರ್ ಅವರ ಕುರಿತು ತೀರ್ಮಾನ ನೀಡುವಲ್ಲಿ ಅವರಿಗೆ ಎಚ್ಚರವಿದ್ದು, ಸ್ವಲ್ಪ ಹೆಚ್ಚೇ ಆತಂಕವಿದೆ. ಅವರು ತಮ್ಮ ಬರವಣಿಗೆಯ ವಸ್ತುವನ್ನು, ಅಂದರೆ ಸಾವರ್ಕರರನ್ನು ಸಾಕಷ್ಟು ಕಠಿಣವಾಗಿ ಪರೀಕ್ಷಿಸುವುದಿಲ್ಲ. ಸಾವರ್ಕರ್ ಚಿಂತನೆಯಲ್ಲಿರುವ ಸ್ಪಷ್ಟವಾದ ವಿರೋಧಾಭಾಸಗಳನ್ನು ಬಗೆದು ತೆರೆದಿಡುವಲ್ಲಿ ಅವರು ಹೆಚ್ಚೇ ಜಾಗರೂಕರಾಗಿದ್ದಾರೆ. ಹೀಗಿದ್ದರೂ, ಅವರ ಪರಿಶುದ್ಧವಾದ ಪಾಂಡಿತ್ಯ ಮತ್ತು ಸಾವರ್ಕರ್ ಬರವಣಿಗೆಯ ಆಳವಾದ ಪರಿಶೀಲನೆಯು ಹಲವು ಎಳೆಗಳನ್ನು ಒದಗಿಸಿ ಅವು ಒಂದು ವಾದವಾಗಿ ನೇಯ್ಗೆಯಾಗುತ್ತವೆ.

ವಿಚಾರಗಳ ಮೇಲೆಯೇ ಗಮನವನ್ನು ಕೇಂದ್ರೀಕರಿಸಿರುವ ಅವರು, ಸಾವರ್ಕರ್ ಸುತ್ತಲೂ ಹಬ್ಬಿರುವ, ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ- “ವೀರನೆ?”, “ಮಾಫಿ ವೀರನೆ?”; ನಕಲಿ ಹೆಸರಲ್ಲಿ ತನ್ನದೇ ಜೀವನಚರಿತ್ರೆ ಬರೆದು ನಿರ್ಲಜ್ಜೆಯಿಂದ ತನ್ನನ್ನು ತಾನೇ ಹೊಗಳಿಗೊಂಡರೆ?; ಮಹಾತ್ಮಾ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಅವರು ನೇರವಾಗಿ ಶಾಮೀಲಾಗಿದ್ದರೆ?- ಈ ಮುಂತಾದ ವಿವಾದಗಳ ಸೆಳೆತಕ್ಕೆ ಒಳಗಾಗದೇ ಇರುವುದನ್ನು ಅರ್ಥ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಇದಕ್ಕೆ ಸಮತೋಲನವಾಗಿ ಸಾವರ್ಕರ್ ಅವರ ಪರಿಸ್ದಿತಿಯ ಕುರಿತು ಅನುಕಂಪದ ದೃಷ್ಟಿ ತಳೆಯುವ ಚತುರ್ವೇದಿ, ಈಗಿನ ಕಾಲದ ರಾಜಕಾರಣದ ಕನ್ನಡಕದಲ್ಲಿ ಅವರನ್ನು ನೋಡಬಾರದೆಂದು ವಾದಿಸುತ್ತಾರೆ. 480 ಪುಟಗಳ ಈ ಪುಸ್ತಕದ ಉದ್ದಕ್ಕೂ ಅವರು ಸಾವರ್ಕರರ ರಾಜಕೀಯ ಕ್ರಿಯೆಗಳಿಗಿಂತ ಹೆಚ್ಚಾಗಿ ರಾಜಕೀಯ ಚಿಂತನೆಗಳ ಮೇಲೆಯೇ ಅಚಲವಾದ ಗಮನ ಇಡುವುದರಲ್ಲಿ ಸಫಲರಾಗಿದ್ದಾರೆ.

ಸಾವರ್ಕರ್ ಕಂಡುಕೊಂಡ ಪರಿಹಾರ…

ಆದುದರಿಂದ, ಈ ಸೈದ್ಧಾಂತಿಕ ವಿರೋಧಾಭಾಸವನ್ನು ಸಾವರ್ಕರ್ ಹೇಗೆ ಬಗೆಹರಿಸುತ್ತಾರೆ? ಅವರ ಜೀವನದ ಮೊದಲ ಹಂತದಲ್ಲಿ ಅವರು ಅದನ್ನು ಬಗೆಹರಿಸಬೇಕಾಗಿರಲಿಲ್ಲ. ಸಾವರ್ಕರರ ಮೊದಲ ಪ್ರಮುಖ ಪುಸ್ತಕವಾದ, ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕತೆಯನ್ನು ಮತ್ತೆ ಹೇಳುವ “ಮ್ಯೂಟಿನಿ ಆಫ್ 1857” (1857ರ ದಂಗೆ) ಬಹುತೇಕ ಒಳಗೊಳ್ಳುವಿಕೆಯ ರಾಷ್ಟ್ರೀಯವಾದಿ ಚೌಕಟ್ಟಿನ ಒಳಗೆಯೇ ಇತ್ತು. ವಾಸ್ತವದಲ್ಲಿ ಅವರು ಏನು ಹೇಳುತ್ತಾರೆ ಎಂದರೆ : “ಆದುದರಿಂದ, ಈಗ ಹಿಂದೂಗಳು ಮತ್ತು ಮಹಮ್ಮದೀಯರ ನಡುವಿನ ಮೂಲ ವೈರವನ್ನು ಮರೆತು ಬಿಡಬಹುದು. ಅವರ ಪ್ರಸ್ತುತ ಸಂಬಂಧವು ಆಳುವವರು ಮತ್ತು ಆಳಿಸಿಕೊಳ್ಳುವವರು, ವಿದೇಶೀಯರು ಮತ್ತು ದೇಶೀಯರದ್ದಾಗಿರಲಿಲ್ಲ; ಬದಲಾಗಿ ಕೇವಲ ಧರ್ಮದ ಒಂದು ವ್ಯತ್ಯಾಸ ಮಾತ್ರವೇ ಇರುವ ಸಹೋದರರ ಸಂಬಂಧವಾಗಿತ್ತು. ಅವರ ಹೆಸರುಗಳು ಬೇರೆಬೇರೆಯಾಗಿದ್ದವು; ಆದರೆ, ಅವರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದರು. ಭಾರತವು ಇವರಿಬ್ಬರ ಸಮಾನ ತಾಯಿಯಾಗಿದ್ದುದರಿಂದ ರಕ್ತಸಂಬಂಧದಿಂದ ಸಹೋದರರಾಗಿದ್ದರು.” ಸಾವರ್ಕರ್ ಮುಂದುವರಿದು ಏನು ಹೇಳುತ್ತಾರೆ ಎಂದರೆ: ಹಿಂದೂಗಳು ಮುಸ್ಲಿಮರ ವಿರುದ್ಧ ದ್ವೇಷವನ್ನು ಮುಂದುವರಿಸುವುದು ಈಗ “ಅನ್ಯಾಯ ಮತ್ತು ಮೂರ್ಖತನ”ವಾಗಿತ್ತು. ಆದರೆ, ಅಂಡಮಾನ್ ಜೈಲುವಾಸದ ಬಳಿಕ ಸಾವರ್ಕರ್ ಬದಲಾದ ಮನುಷ್ಯನಾಗಿದ್ದರು. “ಎಸೆನ್ಷಿಯಲ್ಸ್ ಆಫ್ ಹಿಂದೂತ್ವ” (ಹಿಂದೂತ್ವದ ಅಗತ್ಯಗಳು) ಎಂಬ 1923ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಪುಸ್ತಕವು ಒಂದು ಹೊರಗಿರಿಸುವಿಕೆಯ ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತದ ಅಡಿಗಲ್ಲು ಹಾಕಿತು ಮತ್ತು ಅವರು ಕೊನೆಯ ತನಕ ಅದರೊಂದಿಗೆಯೇ ಬದುಕಿದರು.

ಹಿಂದೂಗಳನ್ನು ವ್ಯಾಖ್ಯಾನಿಸುವ ಸಮಸ್ಯೆಗೆ ಅವರ ಪರಿಹಾರವು-  ಜಾಗರೂಕತೆಯಿಂದ ರೂಪಿಸಿದ ಒಂದು ನವೀನ ರಾಜಕೀಯ ಯೋಜನೆಯಾಗಿತ್ತು. ಹಿಂದೂಗಳನ್ನು ಹಿಂದೂ ಧರ್ಮ ಅನುಸರಿಸುವವರಿಗೆ ಮಾತ್ರ ಸೀಮಿತಗೊಳಿಸುವಂತಿರಲಿಲ್ಲ- ಇದರಿಂದ ಹಿಂದೂ ಧರ್ಮವು- ಧರ್ಮದ ಪಾಶ್ಚಾತ್ಯ ವ್ಯಾಖ್ಯಾನವನ್ನು ವಿಧೇಯವಾಗಿ ಒಪ್ಪಿಕೊಂಡಂತಾಗುತ್ತಿತ್ತು ಮತ್ತು ಹಿಂದೂತ್ವದ ವ್ಯಾಪ್ತಿಯಿಂದ ಸಿಕ್ಖ್, ಜೈನ ಮತ್ತು ಬೌದ್ಧ ಧರ್ಮಗಳನ್ನು ಹೊರಗಿಡಬೇಕಾಗುತ್ತಿತ್ತು. ಸಾವರ್ಕರರ ಪ್ರಕಾರ ನಿಮ್ಮ ಮಾತೃಭೂಮಿ, ಪಿತೃಭೂಮಿ ಮತ್ತು ಕರ್ಮಭೂಮಿ (ಪವಿತ್ರಭೂಮಿ) “ಹಿಂದೂಸ್ತಾನ”ವಾಗಿದ್ದರೆ ನೀವು ಹಿಂದೂ. ಮಾತೃಭೂಮಿ ಎಂಬುದು ಭೌಗೋಳಿಕವಾಗಿ ಭಾರತದ ಭೂಪ್ರದೇಶದಲ್ಲಿ ವಾಸಿಸುವ ಎಲ್ಲರನ್ನೂ ಆವರಿಸುತ್ತದೆ. ಅಂದರೆ ಆದು ಎಲ್ಲಾ ಜನಾಂಗಗಳು, ಧರ್ಮಗಳು ಮತ್ತು ಸಮುದಾಯಗಳನ್ನು ಆವರಿಸುತ್ತದೆ. ಪಿತೃಭೂಮಿ ಎಂಬುದು ಇದನ್ನು ಇನ್ನಷ್ಟು ಕಡಿತಗೊಳಿಸಿ ಪರಸ್ಪರ ರಕ್ತಸಂಬಂಧವನ್ನು ಹೊಂದಿರುವ ಸಮುದಾಯಗಳಿಗೆ ಸೀಮಿತಗೊಳಿಸುತ್ತದೆ. ಆದರೆ, ಇದೂ ಕೂಡಾ ಹಿರಿಯರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಜನರನ್ನು ಹೊರಗಿಡುವುದಿಲ್ಲ. ಆದುದರಿಂದಲೇ ಸಾವರ್ಕರರ ಕೊನೆಯ ಶರತ್ತು: ಈ ನೆಲವನ್ನು ತಮ್ಮ ಪವಿತ್ರ ಭೂಮಿ (ಮಕ್ಕಾ ಅಲ್ಲ, ಜೆರುಸಲೇಮ್ ಅಲ್ಲ) ಎಂದು ನಂಬುವವರು ಮಾತ್ರ.

“ಹಿಂದೂಗಳು” ಇಲ್ಲಿಗೆ ಬರುವ ಮೊದಲೇ ಈ ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿದ್ದವರ ಕತೆ ಏನು? ಇದು ಸಾವರ್ಕರ್ ಅವರಿಗೆ ಗಂಭೀರ ವಿಷಯವಾಗಿತ್ತು. ಯಾಕೆಂದರೆ, ಅವರು ಆರ್ಯನರೇ ಭಾರತಕ್ಕೆ ವೈದಿಕ ಸಂಸ್ಕೃತಿ ಮತ್ತು ನಾಗರಿಕತೆಯನ್ನು ತಂದರೆಂಬ ಕಲ್ಪನೆಯನ್ನು ಒಪ್ಪಿಕೊಂಡಿದ್ದರು ಮತ್ತು ಹಿಂದೂಗಳು ಕಪ್ಪು ಚರ್ಮದವರಲ್ಲ ಎಂಬುದನ್ನು ಸಾಬೀತುಪಡಿಸಲು ಶತಾಯಗತಾಯ ಕಾತರರಾಗಿದ್ದರು. ಅವರು ಈ ವಿಷಯದಲ್ಲಿ ನೇರವಾಗಿದ್ದರು: ಹೌದು, ಹಿಂದೂಗಳು ಹಿಂಸಾತ್ಮಕವಾಗಿ ಮೂಲನಿವಾಸಿಗಳನ್ನು ಆಕ್ರಮಿಸಿ ದಮನಿಸಿದರು, ಆದರೆ, ಅವರು ಹಿಂದೂ ಸಂಸ್ಕೃತಿಯೊಂದಿಗೆ ಒಂದಾದರು. ಯಾವ ಬಂಡಾಯವೂ ಇರಲಿಲ್ಲ, ಯಾವ ಅಸಮಾಧಾನವೂ ಇರಲಿಲ್ಲ. ಅವರೆಲ್ಲರೂ ಈಗ ಹಿಂದೂಗಳು. ಹಾಗೆಯೇ ಭಾರತದ ಹೊರಗೆ ಹಿಂದೂ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾದವರು ಕೂಡಾ ಹಿಂದೂಗಳು. ಸಾವರ್ಕರ್ ಬ್ರಿಟಿಶ್ ವಸಾಹತುಶಾಹಿಗೆ ವಿರುದ್ಧವಾಗಿದ್ದರು- ಆದು ವಸಾಹತುಶಾಹಿ ಎಂಬ ಕಾರಣಕ್ಕಾಗಿ ಅಲ್ಲ; ಅದು ಐರೋಪ್ಯ ಎಂಬ ಕಾರಣಕ್ಕಾಗಿ. ಅವರು ಹಿಂದೂ ಸಾಮ್ರಾಜ್ಯವಾದದ ಕುರಿತು ಸಾಕಷ್ಟು ಉತ್ಸಾಹಿಯೂ ಆಗಿದ್ದರು.

ಅದೊಂದು ಸುಸಂಬದ್ಧ ಸಿದ್ಧಾಂತವಾಗುವುದೇ? ಖಂಡಿತಾ ಇಲ್ಲ. ಸಾವರ್ಕರ್ ಯಾವತ್ತೂ ಹಿಂದುತ್ವಕ್ಕೆ ಒಂದು ಸ್ಪಷ್ಟವಾದ ವ್ಯಾಖ್ಯಾನ ಒದಗಿಸಲು ಶಕ್ತರಾಗಲಿಲ್ಲ ಎಂದು ಈ ಪುಸ್ತಕವು ತೋರಿಸಿಕೊಡುತ್ತದೆ. ಬದಲಾಗಿ ಅವರು- ಹಿಂದೂತ್ವ ಏನೆಂದು ತೋರಿಸಲು- ತಾನು “ಪೂರ್ಣ ಇತಿಹಾಸ” ಎಂದು ಕರೆದ ಇತಿಹಾಸದ ಮೊರೆಹೋದರು. ಅವರ ಇತಿಹಾಸದ ರಮ್ಯ ಮರುಕಥನ ವಾಸ್ತವಿಕವಾಗಿ ನಿಖರವಾದದ್ದೆ? ಯಾವುದೇ ಗಂಭೀರ ಇತಿಹಾಸಕಾರರಿಗೂ ಸಾವರ್ಕರರ ಸಡಿಲವಾದ, ಅಭಿಪ್ರಾಯ-ತೀರ್ಮಾನಗಳಿಂದ ತುಂಬಿದ- ಹಿಂದೂ ಇತಿಹಾಸದ ಕಲಸುಮೇಲೋಗರವನ್ನು ಒಪ್ಪಲು ಸಾಧ್ಯವಾಗಿಲ್ಲ. ಖಂಡಿತವಾಗಿಯೂ ದ್ರಾವಿಡ ಮತ್ತು ಆದಿವಾಸಿ ಇತಿಹಾಸವನ್ನು ಗಂಭೀರವಾಗಿ ಪರಿಗಣಿಸುವ ಇತಿಹಾಸಕಾರರಂತೂ ಒಪ್ಪುವುದೇ ಇಲ್ಲ. ಅದೂ, ಅವರ ಈ “ಇತಿಹಾಸ”ವು- ಹಿಂದೂಗಳು ಇಲ್ಲಿ ಮೊದಲೇ ಇದ್ದ ಮೂಲನಿವಾಸಿಗಳ ಮೇಲೆ ಮಾಡಿದ ಹಿಂಸಾಚಾರಗಳ ಕುರಿತು ಸಾವರ್ಕರ್ ತೋರಿಸುವ ಔದಾರ್ಯವನ್ನು ನಂತರದ ಮುಸ್ಲಿಂ ಆಕ್ರಮಣಕಾರರು ಮತ್ತು ಬ್ರಿಟಿಶ್ ವಸಾಹತುಶಾಹಿ ಶಕ್ತಿಗಳ ಕುರಿತು ಯಾಕೆ ತೋರಿಸಬಾರದು ಎಂದು ವಿವರಿಸುವ ತನಕ. ಆದರೆ, ಹಿಂದೂತ್ವದ ಕಚ್ಚಾ ಭಾವನಾತ್ಮಕ ಮೋಹವು ಇಂತಾ ಸೂಕ್ಷ್ಮತೆಗಳನ್ನು ಯಾವತ್ತೂ ಅವಲಂಬಿಸಿರಲಿಲ್ಲ. ಹಿಂದೂತ್ವದ ರಾಜಕಾರಣಕ್ಕೆ ನಾವು ಎಸೆಯುವ ಮೂಲಭೂತ ಸವಾಲುಗಳನ್ನು ಎದುರಿಸಿ ಮುಂದುವರಿಯಲು ಅದಕ್ಕೆ ಬೌದ್ಧಿಕವಾಗಿ ಪ್ರಾಮಾಣಿಕವಾದ ಯಾವುದೇ ದಾರಿಯಿಲ್ಲ. ನೀವು ಮೂಲಭೂತವಾದ ವಿರೋಧಭಾಸಗಳಿಗೆ ತಿಪ್ಪೆಸಾರಿಸಬಹುದು ಆದರೆ, ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಭಾರತದ ಶ್ರೀಮಂತ ನಾಗರಿಕತೆಯ ಪರಂಪರೆಯನ್ನು ಅದರ ಒಂದು ಜನವರ್ಗಕ್ಕೆ ಬೇಕಾಗಿ ಮಾತ್ರವೇ ಹಿಡಿದಿಡುವುದು ಕುತಂತ್ರ ಅಥವಾ ಮೋಸದ ಹೊರತು ನಿಮಗೆ ಸಾಧ್ಯವೇ ಇಲ್ಲ.

ಹಾಗಾದರೆ, ಸಾವರ್ಕರರ ವಿವರವಾದ ಕಟ್ಟುಕತೆಗಳು ಮತ್ತು ಸಿದ್ಧಾಂತಗಳು- ಹೊರಗಿಡುವಿಕೆ, ಅಸಮಾಧಾನ, ದ್ವೇಷ, ಧರ್ಮಾಂಧತೆ ಮತ್ತು ಹಿಂಸಾಚಾರದ ರಾಜಕೀಯ ಯೋಜನೆಗೆ ಸೈದ್ಧಾಂತಿಕವಾದ ಹೊರಹೊದಿಕೆ ಮಾತ್ರವೆ ಆಗಿದ್ದವೆ? ವಿನಾಯಕ ಚತುರ್ವೇದಿ ಈ ನಿಟ್ಟಿನಲ್ಲಿ ಇಂತಾ ಯಾವುದೇ ನೇರ ವಾದವನ್ನು ಮಂಡಿಸುವುದಿಲ್ಲ. ಆದರೆ, ಈ ಓದಲೇಬೇಕಾದ ಬೌದ್ಧಿಕ ಜೀವನ ಚರಿತ್ರೆಯಲ್ಲಿ ಅವರು ಒದಗಿಸಿರುವ ವಸ್ತುವು ಮೇಲೆ ಹೇಳಿರುವುದಕ್ಕಿಂತ ಬೇರೆಯಾದ ಯಾವುದೇ ಉತ್ತರವನ್ನು ನಮಗೆ ಒದಗಿಸುವುದಿಲ್ಲ.

  • ಯೋಗೇಂದ್ರ ಯಾದವ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೇಗೆ ನೇಮಕ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...