ರಾಜೇಂದ್ರ ಗೌತಮ್ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಹಿರಿಯ ಪತ್ರಕರ್ತ ಹೇಮಂತ್ ತಿವಾರಿ ವಿರುದ್ಧ ಜಾತಿ ನಿಂದನೆಯ ಪ್ರಕರಣ ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 44 ವರ್ಷದ ಗೌತಮ್ ದಲಿತರಾಗಿದ್ದು, 56 ವರ್ಷದ ತಿವಾರಿ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ.
ಆಗಸ್ಟ್ 3 ರಂದು ಎಫ್‌ಐಆರ್ ದಾಖಲಾಗಿದೆ. “ತಿವಾರಿಯವರು ನನ್ನ ಪತ್ನಿ ಮತ್ತು ಮಗನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ” ಎಂದು ಗೌತಮ್ ಆರೋಪಿಸಿದ್ದಾರೆ. ಈ ಆರೋಪವನ್ನು ತಿವಾರಿ ನಿರಾಕರಿಸಿದ್ದಾರೆ.
“ನಾನು 2019ರಿಂದಲೂ ತಿವಾರಿ ಅವರನ್ನು ಸಹಿಸಿಕೊಳ್ಳುತ್ತಿದ್ದೇನೆ. ಅವರು ನನ್ನ ಹೆಂಡತಿ ಮತ್ತು ಮಗನ ವಿರುದ್ಧ ಟೀಕೆಗಳನ್ನು ಮಾಡಲು ಆರಂಭಿಸಿದ ಬಳಿಕ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಪೊಲೀಸರಿಗೆ ಹೋಗಿ ದೂರು ನೀಡಿತ್ತು. ಇದು ಕಷ್ಟಕಷ್ಟವಾದರೂ ಅನಿವಾರ್ಯವಾಗಿತ್ತು” ಎಂದಿದ್ದಾರೆ ಗೌತಮ್.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಲಕ್ನೋದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿಯೇ ಕಚೇರಿಯನ್ನು ಮಾಡಿಕೊಂಡಿರುವ ಗೌತಮ್ ಅವರು, ‘ತಿಜರತ್’ ಮತ್ತು ‘ನಿಷ್ಪಾಕ್ಷ್ ದಿವ್ಯ ಸಂದೇಶ್’ ಎಂಬ ಎರಡು ಪತ್ರಿಕೆಗಳನ್ನು ನಡೆಸುತ್ತಿದ್ದಾರೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೂ ದೂರು ನೀಡುವಂತೆ ಸಹೋದ್ಯೋಗಿಗಳು ಸೂಚಿಸಿದ್ದಾರೆ. ಈ ಕ್ರಮ ಜರುಗಿಸಲೂ ಮುಂದಾಗಿದ್ದೇನೆ ಎಂದು ಗೌತಮ್ ತಿಳಿಸಿರುವುದಾಗಿ ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.
ಉತ್ತರ ಪ್ರದೇಶ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ‘ವರದಿಗಾರರ ಸಮಿತಿ’ಯ ಚುನಾವಣೆಯಲ್ಲಿ ತಿವಾರಿ ಅವರನ್ನು ಬೆಂಬಲಿಸಲು ನಿರಾಕರಿಸಿದೆ. ಆನಂತರದಲ್ಲಿ ತಿವಾರಿ ತನ್ನ ಮೇಲೆ ಜಾತಿವಾದಿ ನಿಂದನೆಗಳನ್ನು ಮಾಡಲಾರಂಭಿಸಿದರು ಎನ್ನುತ್ತಾರೆ ಗೌತಮ್.
ಚುನಾವಣೆಯು ಮಾರ್ಚ್ 2021ರಲ್ಲಿ ನಡೆಯಿತು. ಈ ಹಿಂದೆ ದೈನಿಕ್ ಜಾಗರಣ್ ಸೇರಿದಂತೆ ಇತರ ಪತ್ರಿಕೆಗಳಲ್ಲಿ ಕೆಲಸ ಮಾಡಿದ ತಿವಾರಿ ಅವರು ಅಧ್ಯಕ್ಷರಾಗಿಯೂ ಆಯ್ಕೆಯಾದರು.
“ಮಾಧ್ಯಮದಲ್ಲಿಯೂ ಚಾಮ್ಮರರು ನಮ್ಮನ್ನು ಸೋಲಿಸುತ್ತಾರೆಯೇ?” ಎಂದು ಜಾತಿ ಸೂಚಕ ನಿಂದನೆಗಳನ್ನು ಮಾಡಿದ್ದಾರೆಂಬ ಆರೋಪ ತಿವಾರಿ ಮೇಲೆ ಬಂದಿದೆ.
“ದಲಿತನಾಗಿ ಹುಟ್ಟಿದ್ದು ನನ್ನ ತಪ್ಪಲ್ಲ. ನಾನು ನನ್ನ ಪತ್ರಿಕೋದ್ಯಮವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಅದಕ್ಕಾಗಿಯೇ ಹೇಮಂತ್ ತಿವಾರಿಯಂತಹ ಪತ್ರಕರ್ತರಿಗೆ ಸಮಸ್ಯೆಯಾಗಿ ಕಾಣುತ್ತೇನೆ. ನಾನು ಹಿಂದುಳಿದ ಹಿನ್ನೆಲೆಯಿಂದ ಬಂದು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ತಿವಾರಿ ಬಗ್ಗೆ ಗೌರವವಿತ್ತು. ಆದರೆ ಆತ ನನ್ನ ಹೆಂಡತಿ ಮತ್ತು ಮಗನನ್ನು ಎಳೆದುತಂದು ಗಡಿ ದಾಟಿದ್ದಾನೆ” ಎನ್ನುತ್ತಾರೆ ಗೌತಮ್.
ಕೆಲವು ವಾರಗಳ ಹಿಂದೆ, ತಿವಾರಿ ಅವರು ಗೌತಮ್ ಅವರ ಪತ್ನಿ ರೇಖಾ ಗೌತಮ್ ಮತ್ತು ಮಗ ನಿರ್ಭಯ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪುಸ್ತಕ, ಪತ್ರಿಕಾ ಮತ್ತು ನೋಂದಣಿ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಎಫ್‌ಐಆರ್ ದಾಖಲಿಸಿದ್ದರು. ಆಧಾರ ರಹಿತ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ, ಅಂತರ್ಜಾಲದಲ್ಲಿ ಹರಿಬಿಟ್ಟು ಕಿರುಕುಳ ನೀಡಿದ್ದಾರೆ. ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ರೇಖಾ ಅವರು ನಿಷ್ಪಾಕ್ಷ್ ದಿವ್ಯ ಸಂದೇಶ ಮತ್ತು ತಿಜರತ್‌ನ ಸಂಪಾದಕರಾಗಿದ್ದಾರೆ. ನಿರ್ಭಯ್ ರಾಜ್ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
“ರಾಜೇಂದ್ರ ಗೌತಮ್ ನನ್ನನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಅವರ ಮೇಲೆ ಯಾವತ್ತೂ ಜಾತಿ ನಿಂದನೆ ಮಾಡಿಲ್ಲ. ನಾನು 34 ವರ್ಷಗಳಿಂದ ಈ ವೃತ್ತಿಯಲ್ಲಿದ್ದೇನೆ. ನನ್ನ ವಿರುದ್ಧ ಇಂತಹ ಆರೋಪ ಬಂದಿರುವುದು ಇದೇ ಮೊದಲು” ಎಂದಿದ್ದಾರೆ ತಿವಾರಿ.
ಇದನ್ನೂ ಓದಿರಿ: ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಗಂಡನ ಕಿರುಕುಳ; ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ಆತ್ಮಹತ್ಯೆ
“ಗೌತಮ್ ಅವರು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಯಾವಾಗ ನಿಂದನೆ ಮಾಡಿದೆ, ಎಲ್ಲಿ ಮಾಡಿದೆ ಎಂಬ ವಿವರಗಳು ದೂರಿನಲ್ಲಿ ಉಲ್ಲೇಖವಾಗಿಲ್ಲ” ಎಂದು ತಿವಾರಿ ಪ್ರತಿಕ್ರಿಯೆ ನೀಡಿದ್ದಾರೆ.
“ಬ್ಲ್ಯಾಕ್ ಮೇಲ್ ಮಾಡುವ ವ್ಯಕ್ತಿ ನನ್ನ ವಿರುದ್ಧ ಸೇಡಿನ ಕ್ರಮ ಜರುಗಿಸಿದ್ದಾರೆ” ಅವರು ಆರೋಪಿಸಿದ್ದಾರೆ.
ಈ ಪ್ರಕರಣವು ಲಕ್ನೋ ಪತ್ರಕರ್ತರ ನಡುವಿನ ಭ್ರಾತೃತ್ವಕ್ಕೆ ಪೆಟ್ಟು ನೀಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. “ಪತ್ರಕರ್ತರು ಸಮಾಜದ ಪರಿವರ್ತನೆಗಾಗಿ ಕೆಲಸ ಮಾಡಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಬದ್ಧರಾಗಿರಬೇಕು. ಸ್ವತಃ ತಾವೇ ಸುದ್ದಿಯಾಗಬಾರದು” ಎಂದು ದೈನಿಕ್ ಭಾಸ್ಕರ್ ಮಾಜಿ ಸಂಪಾದಕ ರತನ್ ಮಣಿ ಲಾಲ್ ಹೇಳಿದ್ದಾರೆ. ಈ ಸಂಘರ್ಷವನ್ನು “ದುರದೃಷ್ಟಕರ” ಎಂದಿರುವ ಅವರು ಜಾತಿ ನಿಂದನೆಯನ್ನು ಸಮರ್ಥಿಸಲಾಗದು ಎಂದು ತಿಳಿಸಿದ್ದಾರೆ.


