ಬಿಹಾರದಲ್ಲಿ ಆಡಳಿತರೂಢ ಜೆಡಿಯು ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ನಡುವೆ ಕಾಣಿಸಿಕೊಂಡ ಬಿರುಕು ದೊಡ್ಡದಾಗತೊಡಗಿದೆ. ಜೆಡಿಯು ಶಾಸಕರ ಸಭೆ ಕರೆದಿರುವ ಸಿಎಂ ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಜೆಡಿಯು ಪಕ್ಷವನ್ನು ಇಬ್ಭಾಗ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಜೆಡಿಯು ರಾಷ್ಟ್ರಿಯ ಅಧ್ಯಕ್ಷ ರಾಜೀವ್ ರಂಜನ್ ಸೂಕ್ತ ಸಮಯದಲ್ಲಿ ಈ ಪಿತೂರಿಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಜೆಡಿಯು ಸದಸ್ಯರು ಮಧ್ಯಂತರ ಚುನಾವಣೆ ಎದುರಿಸಲು ಸಿದ್ದರಿಲ್ಲದ ಕಾರಣ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಬಿಹಾರ ಅಸೆಂಬ್ಲಿಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು ಸದ್ಯ ಎನ್‌ಡಿಎ ಮೈತ್ರಿ 127 ಸ್ಥಾನ ಹೊಂದುವ ಮೂಲಕ ಸರ್ಕಾರ ರಚಿಸಿದೆ. ಅದರಲ್ಲಿ ಬಿಜೆಪಿ 77, ಜೆಡಿಯು 45, ಹಿಂದೂಸ್ತಾನ್ ಅವಾಜ್ ಮೋರ್ಚಾ 04 ಮತ್ತು ಒಬ್ಬರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ವಿರೋಧ ಪಕ್ಷಗಳ ಪಾಳಯದಲ್ಲಿ ಮಹಾಘಟಬಂಧನ್ ಮೈತ್ರಿಯಲ್ಲಿ ಆರ್‌ಜೆಡಿ 80, ಸಿಪಿಐ-ಎಂಎಲ್ 12, ಸಿಪಿಐ(ಎಂ)-02, ಸಿಪಿಐ 02 ಸ್ಥಾನದೊಂದಿಗೆ ಒಟ್ಟು 96 ಸ್ಥಾನ ಹೊಂದಿವೆ. ಅಲ್ಲದೆ ಕಾಂಗ್ರೆಸ್ 19 ಮತ್ತು ಎಐಎಂಐಎಂ ಪಕ್ಷವು 01 ಸ್ಥಾನ ಹೊಂದಿದೆ.
ಒಂದು ವೇಳೆ ಜೆಡಿಯು ಎನ್‌ಡಿಎ ಮೈತ್ರಿಯಿಂದ ಹೊರಬಂದಲ್ಲಿ ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸಬಹುದಾಗಿದೆ.
ಜೆಡಿಯು ಮುನಿಸಿಗೆ ಕಾರಣವೇನು?
ಜೆಡಿಯುವಿನಿಂದ ರಾಜ್ಯಸಭಾ ಸದಸ್ಯನಾಗಿದ್ದ ಆರ್‌ಪಿ ಸಿಂಗ್‌ಗೆ ಬಿಜೆಪಿಯು ಜೆಡಿಯು ಪಕ್ಷದ ವಿರೋಧದ ನಡುವೆಯು ಕೇಂದ್ರ ಸಚಿವ ಸ್ಥಾನ ನೀಡಿತ್ತು. ಇದು ಜೆಡಿಯುಗೆ ಇರಿಸು ಮುರಿಸು ತಂದಿತ್ತು. ಹಾಗಾಗಿಯೇ ಅವರಿಗೆ ಮತ್ತೊಂದು ಅವಧಿಗೆ ರಾಜ್ಯಸಭಾ ಸ್ಥಾನವನ್ನು ನೀಡದಿರಲು ಜೆಡಿಯು ನಿರ್ಧಿರಿಸಿತ್ತು. ಇದರಿಂದ ಕೆರಳಿದ ಆರ್‌ಪಿ ಸಿಂಗ್ ಜೆಡಿಯು ತೊರೆದರಲ್ಲದೆ ಸಿಎಂ ನಿತೀಶ್ ಕುಮಾರ್ ವಿರುದ್ಧ ಬಹಿರಂಗವಾಗಿ ಟೀಕೆ ನಡೆಸಿದ್ದರು. ನಿತೀಶ್ ಕುಮಾರ್ ಕುಟುಂಬದ ವ್ಯಕ್ತಿಗಳ ವಿರುದ್ಧ ದಾಳಿ ನಡೆಸಿದ್ದರು.
ಬಿಹಾರ ಅಸೆಂಬ್ಲಿ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಕೂಡ ನಿತೀಶ್ ಕುಮಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅವರನ್ನು ಸ್ಪೀಕರ್ ಸ್ಥಾನದಿಂದ ತೆಗೆಯುವಂತೆ ಜೆಡಿಯು ಆಗ್ರಹಿಸಿತ್ತು. ಆದರೆ ಬಿಜೆಪಿ ಅವರನ್ನೇ ಮುಂದುವರೆಸಿತ್ತು.
ಕೇಂದ್ರ ಸಚಿವ ಸ್ಥಾನಗಳನ್ನು ನೀಡುವಾಗ ಜೆಡಿಯು ಪಕ್ಷವನ್ನು ಕಡೆಗಣಿಸಲಾಗುತ್ತಿದೆ ಎಂಬುದು ಜೆಡಿಯು ಆರೋಪವಾಗಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ನಿತೀಶ್ ಕುಮಾರ್ ಎನ್‌ಡಿಎ ವತಿಯಿಂದ ನಡೆದ ಹಲವು ಸಭೆಗಳಿಗೆ ಗೈರು ಹಾಜರಾಗಿದ್ದಾರೆ.
ಬಿಜೆಪಿ ವಿರುದ್ಧ ಟೀಕೆ ಮಾಡುವುದಕ್ಕೆ ಬದಲಾಗಿ ಜೆಡಿಯು ಮುಖಂಡರು ಸರ್ಕಾರದಿಂದ ಹೊರನಡೆಯುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದು ಇನ್ನ ಎರಡು ಮೂರು ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ; ಮಿತ್ರಪಕ್ಷ ಬಿಜೆಪಿ ಜೊತೆ ನಿತೀಶ್ ಮುನಿಸು: ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು


