ಜೀವನ ಕಲೆಗಳು ಅಂಕಣ: 9
ಸೃಜನಾತ್ಮಕ ಚಿಂತನೆ ಎಂದರೆ ಸಮಸ್ಯೆಯನ್ನು ಹೊಸ ದೃಷ್ಟಿಕೋನದಿಂದ ವೀಕ್ಷಿಸಿ, ಪಾರಂಪರಿಕವಲ್ಲದ ಪರಿಹಾರ ಸೂಚಿಸುವ ಪ್ರಯತ್ನ. ಇದು ಪ್ರಾರಂಭದಲ್ಲಿ ವಿಚಲಿತಗೊಳಿಸಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮುಕ್ತ ಆಲೋಚನೆ (ಓಪನ್ ಮೈಂಡ್). ಸೃಜನಾತ್ಮಕ ಚಿಂತನೆಯನ್ನು ವ್ಯವಸ್ಥಿತ ಅಥವಾ ಅವ್ಯಸ್ಥಿತ ಪ್ರಕ್ರಿಯೆಯಿಂದ ಚಾಲನೆಗೆ ತರಬಹುದು. ಚಿಂತನೆ ಸಹಜವಾಗಿ ಬಂದಿರಬಹುದು ಅಥವಾ ಅಕಸ್ಮಿಕವೂ ಆಗಿರಬಹುದು. ಯಾವುದೇ ಪ್ರಯತ್ನವಿಲ್ಲದೆ ಸೃಜನಾತ್ಮಕ ಚಿಂತನೆ ತಾನಾಗಿಯೇ ನಡೆಯುತ್ತದೆ ಆದರೆ ಆಕಸ್ಮಿಕವಾಗಿ. ಪ್ರಯತ್ನಪೂರ್ವಕ ಸೃಜನಾತ್ಮಕ ಚಿಂತನೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದರೆ ಇದ್ದಕ್ಕಿದಂತೆ ಹೊಳೆದ ಉಪಾಯ ಕೂಡಲೇ ಮಹತ್ತರ ಬದಲಾವಣೆ ತರಬಲ್ಲದು. ಇದನ್ನು ಚೌಕಟ್ಟಿನ ಹೊರಗಿನ ಚಿಂತನೆ (ಥಿಂಕಿಂಗ್ ಔಟ್ ಆಫ್ ದಿ ಬಾಕ್ಸ್) ಎನ್ನುತ್ತಾರೆ.
ಕೆಲವು ವಿಶೇಷ ಉಪಾಯಗಳಿಂದ ಈ ಸೃಜನಾತ್ಮಕ ಚಿಂತನೆ ಬೇಗಲೇ ಆಗುವಂತೆ ಮಾಡಬಹುದು. ಇದರಿಂದ ಹೊಸ ರೀತಿಯ ಯೋಚನೆಗಳು ಏಕ ಕಾಲಕ್ಕೆ ಬಂದು ಅಥವಾ ಒಂದರಿಂದ ಒಂದು ಹುಟ್ಟಿಕೊಂಡು ಅಥವಾ ಒಂದಕ್ಕೊಂದು ಸೇರಿ, ಹೊಸ ರೀತಿಯ ಉಪಾಯ ಅಥವಾ ಪ್ರಕ್ರಿಯೆಗೆ ದಾರಿ ಮಾಡಿಕೊಡಬಹುದು. ಇದನ್ನು ಬ್ರೇನ್ ಸ್ಟಾರ್ಮಿಂಗ್ ಎನ್ನುತ್ತಾರೆ. ಒಂದಕ್ಕಿಂತ ಹೆಚ್ಚು ತಲೆಗಳು ಒಟ್ಟಿಗೆ ಕೆಲಸ ಮಾಡಿದಾಗ ಪರಿಣಾಮ ಇನ್ನೂ ಹೆಚ್ಚುತ್ತದೆ.
ನಮ್ಮ ಎಡ ಬದಿಯ ಮೆದುಳು ವ್ಯವಸ್ಥಿತ ಸಾಧಾರಣ ಯೋಚನೆಗಳಿಗೂ (ತರ್ಕ, ಗಣಿತ, ಯಾಂತ್ರಿಕ ಕೆಲಸ) ಮತ್ತು ಬಲಬದಿಯ ಮೆದುಳು ಸೃಜನಾತ್ಮಕ ಚಿಂತನೆಗೂ ಬಳಕೆಯಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇತ್ತೀಚಿನ ವೈದ್ಯಕೀಯ ಪರಿಶೋಧನೆಯ ವರದಿ ಪ್ರಕಾರ ಎರಡೂ ಬದಿಯ ಮೆದುಳು ಏಕ ಕಾಲಕ್ಕೆ, ಒಂದೇ ಸಂಕೀರ್ಣ ವಿಚಾರದ ಬಗ್ಗೆ ಕೆಲಸ ಮಾಡುತ್ತವೆ ಎಂಬುದು ಸಿದ್ಧವಾಗಿದೆ. ಆದ್ದರಿಂದ ಎಡ-ಬಲ ಮೆದುಳಿನ ಪ್ರವೃತ್ತಿ ಎನ್ನುವುದು ತಪ್ಪು ಪರಿಕಲ್ಪನೆ. ಯಾವುದೋ ಒಂದು ಯೋಚನೆಯ ಮೇಲೆ ತೀರಾ ಮಗ್ನರಾಗಿ ಏನೂ ತೋಚದೇ ಇದ್ದಾಗ, ಮೆದುಳಿನ ಮೇಲಿನ ಒತ್ತಡವನ್ನು ತಗ್ಗಿಸಿ, ಮನಸ್ಸನ್ನು ಬೇರೆಡೆಗೆ ಹೊರಳಿಸಿದಾಗ, ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಥಟ್ಟನೇ ಹೊಳೆಯುವ ಸಾಧ್ಯತೆ ಹೆಚ್ಚು. ಇದನ್ನು ಕೆಲವೊಮ್ಮೆ ಬಲ ಬದಿಯ ಮೆದುಳನ್ನು ಬಳಸುವುದು ಎಂದು ಕರೆಯುವ ವಾಡಿಕೆಯುಂಟು.
ಕೆಲವು ಮೆದುಳಿನ ಆಟಗಳು ಮತ್ತು ವ್ಯಾಯಾಮದಿಂದ, ತ್ರಿ-ಪರಿಮಾಣದಲ್ಲಿ (3-ಡೈಮೆನ್ಷನಲ್) ಚಿಂತನೆ ಮಾಡುವುದರ ಮೂಲಕ, ಚಿತ್ರ/ಮಾದರಿಗಳನ್ನು ರಚಿಸುವುದರ ಮೂಲಕ ಹೆಚ್ಚಿನ ಸೃಜನಾತ್ಮಕ ಯೋಚನೆಗಳು ತಲೆಯಲ್ಲಿ ಹುಟ್ಟುತ್ತವೆ ಎಂಬುದು ನಿಜ. ಇಂತಹ ವ್ಯಾಯಾಮವನ್ನು ಏಕಾಂಗಿಯಾಗಿ ಅಥವಾ ಗುಂಪುಗೂಡಿಯೂ ಮಾಡಬಹುದು. ಒಬ್ಬರ ಯೋಚನೆಗೆ ಇನ್ನೊಬ್ಬರು ಮೌಲ್ಯ ಸೇರಿಸಬಹುದು. ಬ್ರೇನ್ ಸ್ಟಾರ್ಮಿಂಗಿನ ಮುಖ್ಯ ನಿಯಮವೆಂದರೆ ಎಲ್ಲರಿಗೂ ಹೇಳುವ ಹಕ್ಕಿದೆ, ಎಲ್ಲರ ಯೋಚನೆಗಳಿಗೂ ಅದರದರ ಮೌಲ್ಯವಿದೆ ಮತ್ತು ಒಬ್ಬರ ಚಿಂತನೆಯ ಬಗ್ಗೆ ಯಾರೂ ಟೀಕೆ/ಟಿಪ್ಪಣಿ ಮಾಡುವಂತಿಲ್ಲ. ಹೀಗಿದ್ದಾಗ ಗುಂಪಿನಲ್ಲಿ ಹೊಸ-ಹೊಸ ಸೃಜನಾತ್ಮಕ ಯೋಚನೆಗಳಿಗೆ ಕೊರತೆ ಇರುವುದಿಲ್ಲ. ಆದರೂ ಕೆಲವರು ಮಿಕ್ಕವರಿಗಿಂತ ಹೆಚ್ಚಿನ ಯೋಚನೆಗಳನ್ನು ಮೇಜಿಗೆ ತರುತ್ತಾರೆ. ಅದು ಅವರ ಸ್ವಾಭಾವಿಕ ಶಕ್ತಿ.

“ಮೈಂಡ್ ಮ್ಯಾಪಿಂಗ್” ಎನ್ನುವ ಕಲೆ/ಆಟ/ವ್ಯಾಯಾಮ ಉಪಯೋಗಿಸಿ ಒಂದು ದೊಡ್ಡ ಹಾಳೆಯ ಮೇಲೆ ನಮ್ಮ ಮುಖ್ಯ ಯೋಚನೆ ಅಥವಾ ಗುರಿಯನ್ನು ಕೇಂದ್ರ ಬಿಂದುವನ್ನಾಗಿ ರಚಿಸಿಕೊಂಡು ಅದರಿಂದ ಹೊರಟ ಯೋಚನೆಗಳನ್ನು ರೇಖೆಗಳ ಸಹಾಯದಿಂದ ಕೇಂದ್ರಬಿಂದುವಿಗೆ ಸೇರಿಸುತ್ತಾ ಹೋಗುವುದು. ಕೆಲವು ಯೋಚನೆಗಳು ಕ್ಷಣಿಕ/ಕ್ಷುಲ್ಲಕವಾಗಿದ್ದು ಅವನ್ನು ಹೆಚ್ಚು ವಿಕಸಿತಗೊಳಿಸಲು ಬರದಿರಬಹುದು ಆದರೆ ಕೆಲವು ಯೋಚನೆಗಳಲ್ಲಿ ತುಂಬಾ ಸಾಧ್ಯತೆಗಳಿರುತ್ತವೆ. ಹೀಗೆ ಒಂದಕ್ಕೊಂದು ಕೊಂಡಿ ಬೆಳೆಯುತ್ತಾ ಹೋಗಿ ನಮಗೆ ಬೇಕಿದ್ದ ಪರಿಹಾರ ಸ್ಪಷ್ಟವಾಗುತ್ತಾ ಹೋಗಬಹುದು.
“ಮೈಂಡ್ ಮ್ಯಾಪಿಂಗ್” ಎನ್ನುವ ಕಲೆಯನ್ನು ಟೋನಿ ಬುಜಾನ್ ಎಂಬವರು ಮೂಲವಾಗಿ ಕಂಡು ಹಿಡಿದಿದ್ದು, ಅದನ್ನು ಅನೇಕರು ಮೌಲ್ಯವೃದ್ಧಿಗೊಳಿಸಿರುತ್ತಾರೆ. ಅದೇ ತರಹ “ರಿಚ್ ಪಿಕ್ಚರ್ಸ್” ಮತ್ತು ’ಎನ್ವಿಸೇಜಿಂಗ್ ದಿ ಫ್ಯೂಚರ್” ಎಂಬ ಕಸರತ್ತುಗಳೂ ಸಹ ಸೃಜನಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತವೆ.
ಸೃಜನಾತ್ಮಕ ಚಿಂತನೆಗೆ ಕೆಲವು ಸರಳ ಉದಾಹರಣೆಗಳು:
ಯೋಚಿಸಿ, ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹಾಗೆಯೇ ಎಂಟರ ಅರ್ಧ ಮೂರು ಆಗಲು ಸಾಧ್ಯವೇ? ಹದಿಮೂರರ ಆರ್ಧ ಆರೂವರೆ ಮತ್ತು ಎಂಟರ ಅರ್ಧ ನಾಲ್ಕು ಇದೇ ನಿಮ್ಮ ಕಡೆಯ ಉತ್ತರವೇ? (ಉತ್ತರ ಲೇಖನದ ಕೊನೆಯಲ್ಲಿದೆ).
ಸರಕಾರೇತರ ಸ್ವಯಂಸೇವಿ ಸಂಸ್ಥೆಯೊಂದರ ಸಹಯೋಗದೊಂದಿಗೆ ಒಮ್ಮೆ ಕೊಳಗೇರಿ ಯುವ ಮಕ್ಕಳಿಗೆ ಪಾಠ ಮಾಡುತ್ತಿರುವಾಗ, ನಾನೊಂದು ವಿಚಿತ್ರವಾದ ಪ್ರಶ್ನೆ ಕೇಳಿದೆ: ಒಂದು ಅಂಡರ್ ಬ್ರಿಡ್ಜಿನಲ್ಲಿ ಹೋಗುತ್ತಿದ್ದ ಸರಕು ವಾಹನವೊಂದು, ಎತ್ತರದ ಎಡವಟ್ಟಿನಿಂದಾಗಿ, ಬ್ರಿಡ್ಜಿನ ಕೆಳಗೆ ಸಿಕ್ಕಿಕೊಂಡಿದೆ. ಹಿಂದಕ್ಕೂ ಮುಂದಕ್ಕೂ ಹೋಗಲಾದದೆ, ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಜನ ಕಿರುಚಾಡುತ್ತಿದ್ದಾರೆ. ಅಲ್ಲಿಗೆ ಬಂದ ಅಭಿಯಂತರುಗಳು, ಪರಿಸ್ಥಿತಿಯನ್ನು ನಿರೀಕ್ಷಿಸಿ, “ಕೇವಲ ಒಂದು ಅಂಗುಲ (ಇಂಚು) ಎತ್ತರದ ಎಡವಟ್ಟಿನಿಂದಾಗಿ ಈ ವಾಹನ ಸಿಲುಕಿಕೊಂಡಿದೆ. ವಾಹನದ ಒಂದು ಅಂಗುಲ ಮೇಲ್ಭಾಗವನ್ನು ಕತ್ತರಿಸಿ ತೆಗೆಯಬೇಕು ಅಥವಾ ಸೇತುವೆಯ ಕೆಳ ಭಾಗದ ಒಂದು ಅಂಗುಲ ಕತ್ತರಿಸಬೇಕು. ಹೋಗಿ ಕತ್ತರಿಸುವ ಸಲಕರಣೆ ತನ್ನಿ” ಎಂದು ಆದೇಶ ನೀಡಿದರು. “ಮಕ್ಕಳೇ, ನಿಮಗೆ ಇಲ್ಲಿ ಯಾವುದು ಸರಿಯಾದ ಕ್ರಮ ಎಂದು ಅನಿಸುತ್ತದೆ” ಎಂದು ಕೇಳಿದೆ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು. ಅಷ್ಟೇನು ಜಾಣನಂತೆ ಕಾಣುತ್ತಿಲ್ಲದ ಓರ್ವಹುಡುಗನನ್ನು ನಾನೇ ಬಲವಂತದಿಂದ ಉತ್ತರಿಸಲು ಹೇಳಿದೆ. ಆತ “ವಾಹನದ ನಾಲ್ಕೂ ಚಕ್ರಗಳಿಂದ ಗಾಳಿ ತೆಗೆದಲ್ಲಿ ವಾಹನ ತಾನಾಗಿಯೇ ಒಂದು ಅಂಗುಲ ಕೆಳಗೆ ಬರುವುದಿಲ್ಲವೇ?” ಎಂದು ಹೇಳಿದ. ಆ ಹುಡುಗ ರಸ್ತೆ ಬದಿಯಲ್ಲಿಯ ದ್ವಿಚಕ್ರ ವಾಹನ ದುರಸ್ತಿ/ಪಂಚರ್ ಶಾಪಿನಲ್ಲಿ ಕೆಲಸ ಮಾಡುವ ಹದಿನಾರು ವರ್ಷದ ಹುಡುಗ. ಹಾಗಾಗಿ ಸೃಜನಾತ್ಮಕ ಚಿಂತನೆ ಯಾರೊಬ್ಬರ ಖಾಸಗಿ ಆಸ್ತಿ ಅಲ್ಲ. ಎಲ್ಲರೂ ಎಲ್ಲಾ ಕಾಲದಲ್ಲೂ ಪಡೆಯಬಹುದಾದ ಕಲೆ.

ಸೃಜನಾತ್ಮಕ ಚಿಂತನೆಗೆ ಯಾವುದೇ ಇತಿ-ಮಿತಿ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ಯು.ಪಿ.ಎಸ್.ಸಿ., ಮುಂತಾದ) ಇಂತಹ ಉತ್ತರಕ್ಕೆ ಹೆಚ್ಚಿನ ಅಂಕಗಳು ದೊರೆಯುತ್ತವೆ. ನೀವೂ ಸೃಜನಾತ್ಮಕರಾಗಿ. ಮಕ್ಕಳಿಗೂ ಕಲಿಸಿ.


