ಕೊಲೆ ಭೀತಿಯ ಬಳಿಕ ದಶಕಗಳ ಕಾಲ ತಲೆ ಮರೆಸಿಕೊಂಡಿದ್ದು, ಬಳಿಕ ಸಾರ್ವಜನಿಕ ಜೀವನಕ್ಕೆ ಮರಳಿದ್ದ ಭಾರತೀಯ ಮೂಲದ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ಚಾಕುವಿನಿಂದ ಇರಿಯಲಾಗಿದೆ.
ಶುಕ್ರವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದ ವೇಳೆ ಯುವಕನೊಬ್ಬ ವೇದಿಕೆಗೆ ನುಗ್ಗಿ ಚಾಕುವಿನಿಂದ ಹತ್ತರಿಂದ ಹದಿನೈದು ಬಾರಿ ಇರಿದಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಶ್ದಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಪ್ರಪಂಚದಾದ್ಯಂತದ ಬರಹಗಾರರು ಮತ್ತು ರಾಜಕಾರಣಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಇದೆಂದು ಖಂಡನೆ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ಕಲಾತ್ಮಕ ಸ್ವಾತಂತ್ರ್ಯದ ಕುರಿತು ಭಾಷಣ ಮಾಡಲು 75 ವರ್ಷ ವಯಸ್ಸಿನ ರಶ್ದಿ ಅವರನ್ನು ಆಹ್ವಾನಿಸಲಾಗಿತ್ತು. ಆ ವೇಳೆ ಯುವಕನೊಬ್ಬ ವೇದಿಕೆಗೆ ನುಗ್ಗಿದ್ದಾನೆ. ನ್ಯೂಯಾರ್ಕ್ ಸ್ಟೇಟ್ ಪೊಲೀಸ್ ಪಡೆ ದಾಳಿಕೋರನನ್ನು ಬಂಧಿಸಿದೆ.
“ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ; ಅವರ ತೋಳಿನ ನರಗಳು ಕತ್ತರಿಸಲ್ಪಟ್ಟಿವೆ. ಅವರ ಲಿವರ್‌ಗೆ ಹಾನಿಯಾಗಿದೆ” ಎಂದು ರಶ್ದಿಯವರ ಪುಸ್ತಕ ಏಜೆಂಟ್ ಆಂಡ್ರ್ಯೂ ವೈಲಿ ಹೇಳಿದ್ದಾರೆ.
ಬಾಂಬೆಯಲ್ಲಿ ಮುಸ್ಲಿಂ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದ ರಶ್ದಿ, ತಮ್ಮ ನಾಲ್ಕನೇ ಕಾದಂಬರಿ “ದಿ ಸೈಟಾನಿಕ್ ವರ್ಸಸ್”ನಿಂದಾಗಿ ಜೀವ ಬೆದರಿಕೆಗಳನ್ನು ಎದುರಿಸಿದರು. ಕೆಲವು ಮುಸ್ಲಿಮರು ಪುಸ್ತಕದಲ್ಲಿ ಧರ್ಮನಿಂದೆಯ ಭಾಗಗಳಿವೆ ಎಂದು ದೂರಿದರು. ಮುಸ್ಲಿಂ ಹೆಚ್ಚಿರುವ ಅನೇಕ ದೇಶಗಳಲ್ಲಿ ಈ ಕೃತಿಯನ್ನು ನಿಷೇಧಿಸಲಾಯಿತು. ನಿಷೇಧಿಸಲಾಯಿತು.
1981ರಲ್ಲಿ ರಶ್ದಿ ಅವರು ಬರೆದ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಜನಮನ್ನಣೆ ಪಡೆಯಿತು. ಸ್ವಾತಂತ್ರ್ಯಾ ನಂತರದ ಭಾರತದ ಚಿತ್ರಣವನ್ನು ಕಟ್ಟಿಕೊಟ್ಟಿದ್ದ ಕೃತಿಯು, ಬ್ರಿಟನ್‌ನ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೂ ಭಾಜನವಾಗಿತ್ತು. ಆದರೆ 1988ರಲ್ಲಿ ಬಿಡುಗಡೆಯಾದ ‘ದಿ ಸಟಾನಿಕ್ ವರ್ಸಸ್’ ವಿವಾದಕ್ಕೆ ಈಡಾಯಿತು.
ಇರಾನ್ ಕ್ರಾಂತಿಕಾರಿ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ಸಲ್ಮಾನ್ ರಶ್ದಿ ಅವರ ಹತ್ಯೆಗೆ ಕರೆ ನೀಡಿದ್ದರು. ಈ ಕೃತಿಯಲ್ಲಿ ಪ್ರವಾದಿ ಮಹಮ್ಮದ್‌ಗೆ ಅಗೌರವ ತೋರಲಾಗಿದೆ ಎಂದು ಹಲವು ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸಿದರು.
ಧರ್ಮ ಆಚರಣೆ ಮಾಡದ ಭಾರತದ ಮುಸ್ಲಿಂ ದಂಪತಿಯ ಪುತ್ರನಾಗಿದ್ದ ರಶ್ದಿ, ನಾಸ್ತಿಕನಾಗಿದ್ದರು. ರಶ್ದಿಯವರನ್ನು ಕೊಂದವರಿಗೆ ಬಹುಮಾನ ನೀಡುವುದಾಗಿ ಫತ್ವಾ ಹೊರಡಿಸಿದ್ದರಿಂದ ಅವರು ತಲೆಮರೆಸಿಕೊಂಡು ಬದುಕಬೇಕಾಯಿತು.
ಇದನ್ನೂ ಓದಿರಿ: ಕೊನೆಗೂ ರಾಷ್ಟ್ರಧ್ವಜದ ಚಿತ್ರವನ್ನು ಪ್ರೊಫೈಲ್‌ಗೆ ಹಾಕಿಕೊಂಡ ಆರ್‌ಎಸ್‌ಎಸ್
ರಶ್ದಿಯವರು ತಮ್ಮ ಕಾದಂಬರಿಯನ್ನು ‘ಸುಂದರ ಸೌಮ್ಯ’ ಎಂದು ಕರೆದಿದ್ದರು. ಕಾದಂಬರಿಯ ಜಪಾನೀ ಭಾಷಾಂತರಕಾರ ಹಿತೋಷಿ ಇಗರಾಶಿ 1991 ರಲ್ಲಿ ಕೊಲ್ಲಲ್ಪಟ್ಟಿದ್ದರು.
ಅವರ ಭಾಷಾಂತರಕಾರರು ಮತ್ತು ಪ್ರಕಾಶಕರ ಮೇಲೆ ಹತ್ಯೆಯ ಪ್ರಯತ್ನದ ನಂತರ ಅವರಿಗೆ ಬ್ರಿಟನ್ ಸರ್ಕಾರದಿಂದ ಪೊಲೀಸ್ ರಕ್ಷಣೆಯನ್ನು ನೀಡಲಾಗಿತ್ತು. ರಶ್ದಿ ಅವರು ಸುಮಾರು ಒಂದು ದಶಕ ಕಾಲ ತಲೆಮರೆಸಿಕೊಂಡೇ ಬದುಕಿದರು. ಪದೇ ಪದೇ ಮನೆಗಳನ್ನು ಬದಲಿಸುವುದು ಅನಿವಾರ್ಯವಾಗಿತ್ತು.
1998ರಲ್ಲಿ ಇರಾನ್ ಸರ್ಕಾರವು ರಶ್ದಿ ಹತ್ಯೆ ಆದೇಶವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ನಂತರ ಸಾರ್ವಜನಿಕ ಜೀವನಕ್ಕೆ ಅವರು ಮರಳಿದ್ದರು. ‘ಬ್ರಿಡ್ಜೆಟ್ ಜೋನ್ಸ್ ಡೈರಿ’ಸಿನಿಮಾ ಮತ್ತು ಅಮೆರಿಕದ ದೂರದರ್ಶನ ಕಾರ್ಯಕ್ರಮ ‘ಸೈನ್ಫೆಲ್ಡ್’ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ವಲಯದಲ್ಲಿ ಅವರು ಗುರುತಿಸಿಕೊಂಡಿದ್ದರು. ನಾಲ್ಕು ಬಾರಿ ಮದುವೆಯಾಗಿರುವ ಅವರಿಗೆ ಇಬ್ಬರು ಮಕ್ಕಳಿದ್ದಾರೆ.


