Homeಮುಖಪುಟಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿಯ ಬಗ್ಗೆ..

ಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿಯ ಬಗ್ಗೆ..

- Advertisement -
- Advertisement -

ರಾಜ್ಯ ಬಿಜೆಪಿ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ತಯ್ಯಾರಿ ನಡೆಸಿದೆ. ಕೊರೊನಾ, ವಾರ್ಡ್ ವಿಂಗಡನೆ ಮತ್ತು ಮೀಸಲಾತಿ ಪಟ್ಟಿಯ ನೆಪ ಹೇಳಿಕೊಂಡು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಿಳಂಬಗೊಂಡಿದ್ದ ಬಿಬಿಎಂಪಿ ಚುನಾವಣಾ ಪ್ರಕ್ರಿಯೆಗೆ ಇನ್ನು ಕೆಲವೇ ಹಂತಗಳು ಬಾಕಿಯಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆರೆಸ್ಸೆಸ್ ಕಚೇರಿಯಲ್ಲಿ ಕೂತು ವಾರ್ಡ್ ವಿಂಗಡನೆ ಮತ್ತು ಮೀಸಲಾತಿ ಪಟ್ಟಿ ಪ್ರಕಟ ಮಾಡಿದೆ ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಅಪಸ್ವರ ಎತ್ತಿವೆ.

ಆಗಸ್ಟ್ 3ರ ಬುಧವಾರ ರಾತ್ರಿ ಮುಂಬರುವ ಬಿಬಿಎಂಪಿ ಚುನಾವಣೆಗೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲು ನಿರ್ದೇಶಿಸಿ ಒಂದು ವಾರದ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು.

ಕರಡು ಅಧಿಸೂಚನೆಯ ಪ್ರಕಾರ, ಒಟ್ಟು 243 ಸೀಟುಗಳಲ್ಲಿ ಅರ್ಧದಷ್ಟು ಸೀಟುಗಳನ್ನು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಿಡಲಾಗಿದೆ. 2011ರ ಜನಗಣತಿಯಂತೆ ಹಾಗೂ ಸುಪ್ರೀಂ ಕೋರ್ಟ್ ಸೂಚನೆಯಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗಾಗಲೆ ಎಲ್ಲಾ ಪಕ್ಷಗಳು ತಮ್ಮ ತೀವ್ರ ಆಕ್ಷೇಪಗಳನ್ನು ಸಲ್ಲಿಸಿವೆ. ಕಾಂಗ್ರೆಸ್ ತಮ್ಮ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ವಿಕಾಸಸೌಧದ ನಗರಾಭಿವೃದ್ಧಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಜೆಡಿಎಸ್, ಎಎಪಿ ಸೇರಿದಂತೆ ಇನ್ನಿತರ ಪಕ್ಷಗಳು ಕೂಡಾ ಮೀಸಲಾತಿ ಪಟ್ಟಿಗೆ ವಿರೋಧ ವ್ಯಕ್ತಪಡಿಸಿವೆ.

ಎಚ್‌ಎನ್ ನಾಗಮೋಹನ್ ದಾಸ್

243 ವಾರ್ಡ್‌ಗಳಲ್ಲಿ 81 ಸ್ಥಾನಗಳನ್ನು ಒಬಿಸಿಗೆ ಮೀಸಲಿಡಲಾಗಿದ್ದು, 28 ಸ್ಥಾನಗಳನ್ನು ಎಸ್‌ಸಿಗಳಿಗೆ ಮತ್ತು 4 ಸ್ಥಾನಗಳನ್ನು ಎಸ್‌ಟಿಗಳಿಗೆ ಮೀಸಲಿಡಲಾಗಿದೆ. ಉಳಿದ 130 ಸೀಟುಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಬಿಡಲಾಗಿದೆ. ಒಟ್ಟು ಸೀಟುಗಳಲ್ಲಿ ಅರ್ಧದಷ್ಟು ಸೀಟುಗಳನ್ನು ಮಹಿಳೆಯರು ಪಡೆದುಕೊಳ್ಳಲಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ

ಭಾರತ ಸಂವಿಧಾನ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನಕ್ಕೆ 1972-73ರಲ್ಲಿ ತಿದ್ದುಪಡಿ ಮಾಡಿ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಬೇಕು ಎಂಬ ಪಂಚಾಯತ್ ರಾಜ್ ಕಾನೂನನ್ನು ತರಲಾಯಿತು. ಅಧಿಕಾರಸ್ಥರ ನಾಮನಿರ್ದೇಶನದ ಮೂಲಕ ನೇಮಕವಾಗುತ್ತಿದ್ದ ಗ್ರಾಮ ಪಂಚಾಯತ್‌ನ ಮುಖಂಡರನ್ನು ಅಲ್ಲಿಂದೀಚೆಗೆ ಜನರೇ ಚುನಾವಣೆಯ ಮೂಲಕ ಆಯ್ಕೆ ಮಾಡಲು ಪ್ರಾರಂಭಿಸಿದರು. ಅದರೊಂದಿಗೆ ಪಟ್ಟಣ ಪಂಚಾಯತ್ ಮತ್ತು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಪ್ರಾರಂಭವಾಯಿತು.

ರಾಜಕೀಯ ಮೀಸಲಾತಿ ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿಯಲ್ಲಿರುವ ಒಂದು ವ್ಯವಸ್ಥೆ. ಬ್ರಿಟಿಷರು ಕಾಲದಿಂದಲೂ ಭಾರತದ ತುಳಿತಕ್ಕೊಳಗಾದ ಸಮುದಾಯಗಳಿಗೆ-ದಲಿತರಿಗೆ ಮೀಸಲು ಕ್ಷೇತ್ರಗಳು ಇದ್ದವು. ಸ್ವಾತಂತ್ರ್ಯಾನಂತರವೂ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಎಸ್‌ಸಿ-ಎಸ್‌ಟಿ
ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಲಾಯಿತು. ಅದರಂತೆ ಕರ್ನಾಟಕದಲ್ಲಿ
ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಕ್ರಮವಾಗಿ 15% ಮತ್ತು 3% ಮೀಸಲಾತಿ ನಿಗದಿಪಡಿಸಲಾಯಿತು.

ಒಬಿಸಿಗಳಿಗೆ ರಾಜಕೀಯ ಮೀಸಲಾತಿ

ಆಂಧ್ರ ಪ್ರದೇಶದಲ್ಲಿ ಎಂಭತ್ತರ ದಶಕದಲ್ಲಿ ಎನ್‌ಟಿಆರ್ ಆಡಳಿತದ ಕಾಲದಲ್ಲಿ ಒಬಿಸಿಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿಯನ್ನು ಪ್ರಾರಂಭಿಸಲಾಯಿತು. ಅದೇ ಸಮಯ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕೂಡ ಇದಕ್ಕೆ ಚಾಲನೆ ನೀಡಿದರು. ಗುಜರಾತ್, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲೂ ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಪರಿಚಯಿಸಲಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರು ಕರ್ನಾಟಕದಲ್ಲಿ ಒಬಿಸಿ ಕೆಟಗರಿಯಲ್ಲಿ ಸೇರುತ್ತಾರೆ.

ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾತ್ರ ಒಬಿಸಿಗಳಿಗೆ ರಾಜಕೀಯ ಮೀಸಲಾತಿಯಿದೆ. ವಿಧಾನಸಭೆ, ಲೋಕಸಭೆಯಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲಾಗಿದೆ.

“ಒಬಿಸಿಗಳಿಗೆ ಮೀಸಲಾತಿ ನೀಡಬೇಕಾದರೆ ಒಂದು ಆಯೋಗವನ್ನು ರಚಿಸಿ ಮಾಹಿತಿಯನ್ನು ಸಂಗ್ರಹ ಮಾಡಿ, ಅವರಿಗೆ ಪ್ರಾತಿನಿಧ್ಯ ಅವಶ್ಯಕತೆ ಇದೆಯೆ ಎಂದು ಕಂಡುಹಿಡಿಯಬೇಕು. ಅದರ ಆಧಾರದಲ್ಲಿ ಅವರಿಗೆ ಎಷ್ಟು ಮೀಸಲಾತಿ ನೀಡಬಹುದು ಎಂದು ತೀರ್ಮಾನ ಮಾಡಬೇಕು. ಈ ರೀತಿ ಮೀಸಲಾತಿ ನೀಡಬೇಕಾದರೆ ಒಟ್ಟು ಮೀಸಲಾತಿ 50%ಕ್ಕಿಂತ ಜಾಸ್ತಿ ಇರಬಾರದು ಎಂದು 2010ರಲ್ಲಿ ಕೃಷ್ಣಮೂರ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು” ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ಅವರು ಹೇಳುತ್ತಾರೆ.

ಆದರೆ ಯಾವ ರಾಜ್ಯ ಸರ್ಕಾರಗಳೂ ಇದನ್ನು ಪಾಲಿಸಿರಲಿಲ್ಲ. ಸುಪ್ರೀಂಕೋರ್ಟ್ ಕೂಡಾ ಇದನ್ನು ಇಷ್ಟೆ ಸಮಯದಲ್ಲಿ ಅನುಷ್ಠಾನಗೊಳಿಸಬೇಕೆಂದು ಹೇಳಿರಲಿಲ್ಲ. ಹತ್ತು ವರ್ಷಗಳ ನಂತರ ನಗರ ಸಂಸ್ಥೆಗಳಿಗೆ ಚುನಾವಣೆ ನಡೆಸುವಾಗ ಅದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಯಿತು. “ಈ ವೇಳೆಯಲ್ಲಿ ಸುಪ್ರೀಂಕೋರ್ಟ್, ಹೀಗೆ ಮಾಡಲು ಸಾಧ್ಯವಿಲ್ಲ; ಕೃಷ್ಣಮೂರ್ತಿ ಪ್ರಕರಣದ ತೀರ್ಪನ್ನು ಪಾಲಿಸಬೇಕು ಎಂದು ಹೇಳಿತ್ತು. 2021ರಲ್ಲಿ ಕೃಷ್ಣಮೂರ್ತಿ ಪ್ರಕರಣ ತೀರ್ಪು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತು. ಆಗ ರಾಜ್ಯದಲ್ಲೂ ಸಮಸ್ಯೆ ಪ್ರಾರಂಭವಾಯಿತು” ಎಂದು ನಾಗಮೋಹನ್ ದಾಸ್ ಹೇಳುತ್ತಾರೆ.

“ಬಿಜೆಪಿಯವರು ನಾವು ಒಬಿಸಿಗಳಿಗೆ ಮೀಸಲಾತಿ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಶುದ್ಧ ಸುಳ್ಳು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಇತ್ತು ಮತ್ತು ಮುಂದುವರೆದಿತ್ತು. ಆದರೆ ಈಗ ಕೇಳುತ್ತಿರುವುದು ಒಬಿಸಿಗಳಿಗೆ ಇರುವ 27% ಮೀಸಲಾತಿಯನ್ನು 33% ಮಾಡಿ ಎಂಬುದಾಗಿದೆ. ಅದನ್ನು ಮಾಡಿದ್ದಾರೆ ಅಷ್ಟೆ” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಪಥಕ್ಕೆ ಹೇಳಿದರು.

“ಮೀಸಲಾತಿ 50% ಇರಬೇಕು ಆದರೆ ಒಬಿಸಿಗಳಿಗೆ ಮೀಸಲಾತಿ ಜಾಸ್ತಿ ಮಾಡಿ ಎಂದು ಕೇಳುತ್ತಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ 2019ರಲ್ಲಿ ಮೋದಿ ಸರ್ಕಾರ ಆರ್ಥಿಕವಾಗಿ ಬಡವರಾಗಿರುವ ಮೇಲ್ಜಾತಿಗಳಿಗೆ 10% ಮೀಸಲಾತಿ ನೀಡಿ (ಶಿಕ್ಷಣ ಮತ್ತು ಉದ್ಯೋಗ) ಒಟ್ಟು ಮೀಸಲಾತಿಯನ್ನು 50%ಕ್ಕಿಂತ ಹೆಚ್ಚಿಸಿದ್ದಾರೆ. ಹಾಗಾದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ 50% ಮೀರಿ ಒಬಿಸಿಗಳಿಗೆ ರಾಜಕೀಯ ಮೀಸಲಾತಿ ಯಾಕೆ ಹೆಚ್ಚಿಸಬಾರದು?” ಎಂದು ಪ್ರಶ್ನಿಸುವ ಅವರು, ಸಂವಿಧಾನವನ್ನು ತಿದ್ದುಪಡಿ ಮಾಡಿ, ಜನಸಂಖ್ಯೆ ಎಷ್ಟಿದೆಯೊ ಅದಕ್ಕನುಗುಣವಾಗಿ ಮೀಸಲಾತಿಯನ್ನು ಕೊಡಿ ಎಂದು ನಾವು ಕೇಳಬೇಕಾಗಿದೆ ಎಂದರು.

ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ

2020ರಲ್ಲಿ ಬಿಬಿಎಂಪಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಬೇಕಾಗಿತ್ತು. ಆದರೆ ಕೊರೊನಾ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಕಾರಣದಿಂದ ಚುನಾವಣೆ ನಡೆಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ನೀಡಿರುವ ಮೀಸಲಾತಿಯನ್ನು ಖಾತರಿಪಡಿಸಲು ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗವು ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚು ಮಾಡಿ ಎಂದು ಹೇಳಿದ್ದು ಒಬಿಸಿಗಳಿಗೆ 27% ಬದಲಾಗಿ 33% ಕೊಡಿ ಎಂದು ವರದಿ ನೀಡಿದೆ. ಅದರಂತೆ ಬಿಬಿಎಂಪಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಕೆ. ಭಕ್ತವತ್ಸಲ

“ನಾಗಮೋಹನ್ ದಾಸ್ ಆಯೋಗ ಎಸ್‌ಸಿ ಸಮುದಾಯಕ್ಕೆ 1% ಮತ್ತು ಎಸ್‌ಟಿಗೆ 3% ಮೀಸಲಾತಿ ಹೆಚ್ಚು ನೀಡಬೇಕು ಎಂದು ಹೇಳಿತ್ತು. ಅದಕ್ಕಿಂತ ಮುಂಚೆ ಒಂದು ಆಯೋಗ ಎಸ್‌ಟಿಗೆ ಮೀಸಲಾತಿ ಜಾಸ್ತಿ ಮಾಡಬೇಕು ಎಂದು ಹೇಳಿತ್ತು. ಈ ಆಧಾರದ ಮೇಲೆ ಒಬಿಸಿಗಳೂ ನಮಗೂ ಮೀಸಲಾತಿ ಜಾಸ್ತಿ ಮಾಡಿ ಎಂದು ಬೇಡಿಕೆ ಇಟ್ಟವು” ಎಂದು ಸಾಮಾಜಿಕ ಕಾರ್ಯಕರ್ತರು ಪತ್ರಿಪಾದಿಸುತ್ತಾರೆ.

“ಆದರೆ ಸಮಸ್ಯೆ ಏನೆಂದರೆ ಭಕ್ತವತ್ಸಲ ಆಯೋಗ ಕೂಡಾ ಒಟ್ಟು ಮೀಸಲಾತಿ 50% ಮೀರಬಾರದು ಎಂದು ಹೇಳಿದೆ. 70% ಇರುವ ಒಬಿಸಿಗಳಿಗೆ ಅಷ್ಟೆ ಪ್ರಮಾಣದ ಮೀಸಲಾತಿ ನೀಡಬೇಕಲ್ಲವೆ?” ಎಂದು ಅವರು ಪ್ರಶ್ನಿಸುತ್ತಾರೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು “50% ಮೀಸಲಾತಿ ಎಂಬುವುದನ್ನು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಅಥವಾ ಯಾವ ಕಾನೂನಿನಲ್ಲೂ ಹೇಳಿಲ್ಲ. 1992ರ ಇಂದ್ರಾಸಹಾನಿ ಪ್ರಕರಣದ ತೀರ್ಪಿನಲ್ಲಿ ಇದನ್ನು ಮೊದಲನೇ ಬಾರಿಗೆ ಸುಪ್ರೀಂಕೋರ್ಟ್ ಹೇಳಿತ್ತು. ಇದರಲ್ಲಿ ಮಂಡಲ್ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಒಬಿಸಿಗಳಿಗೆ ಅಖಿಲ ಭಾರತ ಶೈಕ್ಷಣಿಕ ಮೀಸಲಾತಿಯಲ್ಲಿ 27% ನೀಡಿತು. ಅದನ್ನು ಪ್ರಶ್ನಿಸಿ ಇಂದ್ರಸಹಾನಿ ಪ್ರಕರಣ ದಾಖಲಾಯಿತು. ಈ ವೇಳೆ ಮೊದಲ ಬಾರಿಗೆ ಸುಪ್ರೀಂಕೋರ್ಟ್ 50% ಮೀಸಲಾತಿ ಕುರಿತು ಹೇಳಿತ್ತು” ಎಂದು ಹೇಳುತ್ತಾರೆ.

“ಅದೇ ತೀರ್ಪಿನ ಪ್ಯಾರ 810ರಲ್ಲಿ, ’50% ಮೀಸಲಾತಿ ನೀಡಬೇಕೆನ್ನುವುದು ಒಂದು ನಿಯಮ. ಆದರೆ ಇದಕ್ಕೊಂದು ವಿನಾಯಿತಿಯಿದ್ದು, ಅದರಂತೆ ಕೆಲವೊಂದು ಸಮುದಾಯಗಳಿಗೆ ಅನುಕೂಲ ಕಲ್ಪಿಸಲು 50% ಮೀರಿ ಮೀಸಲಾತಿ ನೀಡಬಹುದು. ಆ ರೀತಿ ನೀಡಬೇಕಾದರೆ, ಕೆಲವೊಂದು ಮಾನದಂಡಗಳನ್ನು ರಚಿಸಿ, ಮಾಹಿತಿಯನ್ನು ಸಂಗ್ರಹ ಮಾಡಬೇಕು. ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಬೇಕು’ ಎಂದು ಹೇಳುತ್ತದೆ. ಹಾಗಾಗಿ ಇಂದ್ರ ಸಹಾನಿ ಪ್ರಕರಣದ ತೀರ್ಪಿನಲ್ಲೇ ಇದಕ್ಕೊಂದು ಅವಕಾಶ ಇದೆ. ನನ್ನ ಅಭಿಪ್ರಾಯ ಏನೆಂದರೆ ವಿನಾಯಿತಿಯನ್ನೆ ಬಳಸಿ ಅವಶ್ಯಕತೆ ಬಿದ್ದರೆ 50% ಕ್ಕಿಂತ ಹೆಚ್ಚು ಮೀಸಲಾತಿಯನ್ನು ದಾಟಬಹುದಾಗಿದೆ” ಎಂದು ಅಭಿಪ್ರಾಯ ಪಡುತ್ತಾರೆ.

ಬಿಬಿಎಂಪಿ ಮೀಸಲಾತಿ ಪಟ್ಟಿ ಬಗ್ಗೆ ತಕರಾರು

ಸಾಮಾನ್ಯವಾಗಿ ಕಾಲಕಾಲಕ್ಕೆ ಕ್ಷೇತ್ರಗಳನ್ನು ಮರುವಿಂಗಡನೆ ಮಾಡಲಾಗುತ್ತದೆ. ಸರ್ಕಾರವು ಒಬಿಸಿಗಳ ಜನಸಂಖ್ಯೆಗೆ ಆಧಾರವಾಗಿ ಅವರಿಗೆ ಪ್ರಾತಿನಿಧ್ಯ ಸಿಗುವಂತೆ ಸಾಮಾಜಿಕ ನ್ಯಾಯವನ್ನು ಅನುಸರಿಸಿ ವಾರ್ಡ್‌ಗಳ ವಿಂಗಡನೆ ಮಾಡಬೇಕಿತ್ತು. ಆದರೆ ಬಿಜೆಪಿ ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದೆ ಎಂದು ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

“ಈ ಮಾದರಿಯ ರಾಜಕೀಯವನ್ನು ಎಲ್ಲಾ ಕಾಲದಲ್ಲಿ ಮಾಡಲಾಗುತ್ತದೆ. ಆದರೆ ಈ ರೀತಿಯಾಗಿ ಬಹಿರಂಗವಾಗಿ ಮತ್ತು ನೇರಾನೇರವಾಗಿ ಎಲ್ಲವೂ ತಮಗೆ ಬೇಕು ಎಂದು ಮಾಡಿರುವುದು ಇದುವೇ ಮೊದಲ ಬಾರಿಯಾಗಿದೆ. ಆ ಕಾರಣಕ್ಕಾಗಿಯೆ ಹಲವಾರು ಜನರು ಇದನ್ನು ವಿರೋಧಿಸುತ್ತಿದ್ದಾರೆ” ಎಂದು ಬೆಂಗಳೂರಿನ ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜಿಪಿ ಮತ್ತು ಆರೆಸ್ಸೆಸ್ ನಾಯಕರು ಹೇಳಿ ಮಾಡಿಸಿದ ಅಧಿಸೂಚನೆ: ಕಾಂಗ್ರೆಸ್

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, “ಮೀಸಲಾತಿ ಪ್ರಕಟ ಮಾಡಲು ಒಂದು ಮಾರ್ಗಸೂಚಿ ಇರುತ್ತದೆ. ಈ ಮಾರ್ಗಸೂಚಿ ಕಾನೂನು ಚೌಕಟ್ಟಿನಲ್ಲಿದ್ದು, ಅದು ಗೆಜೆಟ್ ಆಗಬೇಕಾಗಿದೆ. ಆದರೆ ಇದು ಯಾವುದೂ ಆಗದೆ ಮೀಸಲಾತಿ ಪ್ರಕಟ ಮಾಡಲಾಗಿದೆ. ವಾರ್ಡ್ ವಿಂಗಡನೆಯನ್ನು ಕಂದಾಯ ಕಚೇರಿಯಲ್ಲಿ ಮಾಡಬೇಕಿತ್ತು. ಅಲ್ಲಿಂದ ಅದು ಹಂತಹಂತವಾಗಿ ಮುಂದಕ್ಕೆ ಬಂದು ಜಿಲ್ಲಾಧಿಕಾರಿಗಳಿಗೆ ಬರಬೇಕಿತ್ತು. ಆದರೆ ಈ ಯಾವುದನ್ನೂ ಅನುಸರಿಸದೆ, ಬಿಜಿಪಿ ಮತ್ತು ಆರೆಸ್ಸೆಸ್ ನಾಯಕರು ಹೇಳಿದ ಹಾಗೆ ಸಿದ್ಧಪಡಿಸಿ ಅಧಿಸೂಚನೆ ಹೊರಡಿಸಿದ್ದರು. ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನೂ ಸರ್ಕಾರ ವಿಲೇವಾರಿ ಮಾಡಿಲ್ಲ. ಮೀಸಲಾತಿ ಪ್ರಕಟ ಮಾಡಿರುವುದು ಕೂಡಾ ಹಾಗೆಯೆ ಆಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾಮಲಿಂಗಾರೆಡ್ಡಿ

“ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಒಟ್ಟು 87 ಬಿಬಿಎಂಪಿ ವಾರ್ಡ್‌ಗಳು ಬರುತ್ತದೆ. ಇವುಗಳಲ್ಲಿ 66 ಮಹಿಳಾ ಮೀಸಲಾತಿ ನೀಡಿದ್ದಾರೆ. ಐವತ್ತು ಶೇಕಡ ಮಹಿಳಾ ಮೀಸಲಾತಿ ನಮ್ಮ ಕ್ಷೇತ್ರಗಳಿಗೆ ನೀಡಲಿ. ನಾವೇನೂ ಬೇಡ ಎನ್ನಲ್ಲ. ಆದರೆ, ಬಿಬಿಎಂಪಿಯ ವ್ಯಾಪ್ತಿಯಲ್ಲಿ ಈಗಾಗಲೇ ನಮ್ಮ ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವವರು ಯಾರೂ ಕೂಡಾ ಚುನಾವಣೆಗೆ ಸ್ಪರ್ಧಿಸದಂತೆ ಈ ಮೀಸಲಾತಿ ಪ್ರಕಟ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಒಂದು ವಾರ ಸಮಯ ಕೊಟ್ಟಿದ್ದಾರೆ. ಈಗಾಗಲೇ ವಾರ್ಡ್ ವಿಂಗಡನೆ ವಿರುದ್ಧ ಕಾಂಗ್ರೆಸ್ ಕೋರ್ಟ್‌ಗೆ ಹೋಗಿದೆ, ಮೀಸಲಾತಿಯಲ್ಲೂ ಅದೇ ತಪ್ಪು ಮುಂದುವರೆದಿರುವುದರಿಂದ ಮತ್ತೆ ನ್ಯಾಯಾಲಯದ ಕದ ತಟ್ಟಲಿದ್ದೇವೆ” ಎಂದು ತಿಳಿಸಿದರು.

ಎಲ್ಲಾ ಭ್ರಷ್ಟ ಪಕ್ಷಗಳೂ ಒಂದೇ; ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ: ಕೆಆರ್‌ಎಸ್ ಪಕ್ಷ

ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ ಅವರು ಮಾತನಾಡಿ, “ಸಮಾಜದ ಹಿತವನ್ನು ಗಮನಿಸದೆ ಕೇವಲ ತಮ್ಮ ಸ್ವಾರ್ಥವನ್ನು ಮಾತ್ರ ತಮ್ಮ ಗಮನದಲ್ಲಿ ಇಟ್ಟುಕೊಂಡಿರುವ ಭ್ರಷ್ಟ ಪಕ್ಷಗಳು ಯಾವಾಗಲೂ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತದೆ. ಅದು ಕ್ಷೇತ್ರವಾರು ವಿಂಗಡನೆಯಾಗಲಿ, ಮೀಸಲಾತಿಯಾಗಲಿ ತಮಗೆ ಅನುಕೂಲವಾಗುವ ಹಾಗೆಯೆ ಮಾಡಿಕೊಳ್ಳುತ್ತಾರೆಯೆ ಹೊರತು, ಯಾವುದೆ ರೀತಿಯ ವೈಜ್ಞಾನಿಕವಾದ ಸೂತ್ರವನ್ನು ಅಳವಡಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಆಡಳಿತಾರೂಢ ಪಕ್ಷದ ಶಾಸಕರಿಗೆ ಅನುಕೂಲವಾಗುವ ರೀತಿಯಲ್ಲೇ ಕ್ಷೇತ್ರವಾರು ವಿಂಗಡನೆ ಮತ್ತು ಮೀಸಲಾತಿ ಪಟ್ಟಿಯನ್ನು ಪ್ರಕಟಿಸುತ್ತವೆ” ಎಂದು ತಿಳಿಸಿದರು.

ರವಿಕೃಷ್ಣ ರೆಡ್ಡಿ

“ಇಂದು ಬಿಜೆಪಿಯ ಇಂತಹ ನೀತಿಬಾಹಿರ ಮತ್ತು ಅಕ್ರಮಗಳಿಂದ ಕೂಡಿರುವ ಮೀಸಲಾತಿ ಪಟ್ಟಿಯ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷ ಕೂಡಾ 2015ರಲ್ಲಿ ಹೀಗೆಯೆ ಮಾಡಿತ್ತು. ಈ ಭ್ರಷ್ಟ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಒಬ್ಬರೊಬ್ಬರ ಮೇಲೆ ಕೈತೋರಿಸುವ ಯಾವ ನೈತಿಕತೆಯೂ ಇಲ್ಲ. ಎಲ್ಲರೂ ತಮ್ಮ ಆಡಳಿತದ ಸಂದರ್ಭದಲ್ಲಿ ಇಂತಹ ಕಾನೂನುಬಾಹಿರ ಕೆಲಸಗಳನ್ನೇ ಮಾಡಿದ್ದಾರೆ. ಮೀಸಲಾತಿ ಕ್ಷೇತ್ರವಾರು ವಿಂಗಡನೆ ಮತ್ತು ಮೀಸಲಾತಿ ಪಟ್ಟಿ ಹೇಗೆ ಇರಲಿ ಕೆಆರ್‌ಎಸ್ ಪಕ್ಷ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ಸಿದ್ದತೆ ನಡೆಸಿಕೊಂಡಿದೆ” ಎಂದು ಹೇಳಿದರು.

ಬಿಜೆಪಿಗೆ ಚುನಾವಣೆ ಎದುರಿಸುವ ಧೈರ್ಯ ಇಲ್ಲ: ಜೆಡಿಎಸ್

ಜೆಡಿಎಸ್ ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷ ಪ್ರಕಾಶ್ ಅವರು ಮಾತನಾಡಿ, “ಚುನಾವಣೆ ಮುಂದೂಡಬೇಕೆಂದೆ ರಾಜಕೀಯ ಪ್ರೇರಿತವಾಗಿ ಈ ಮೀಸಲಾತಿ ಪಟ್ಟಿ ಪ್ರಕಟ ಮಾಡಿದ್ದಾರೆ. ಮೀಸಲಾತಿಯ ಉದ್ದೇಶ ಎಲ್ಲಾ ಸಮುದಾಯಗಳಿಗೂ ಚುನಾವಣೆಯಲ್ಲಿ ಸರಿಯಾದ ಪ್ರಾತಿನಿಧ್ಯ ಸಿಗೆಬೇಕೆಂಬುದಾಗಿದೆ. ಆದರೆ ಬಿಜೆಪಿ ಸರ್ಕಾರ ಯಾವ ವಾರ್ಡ್‌ನಲ್ಲಿ ಯಾವ ಸಮುದಾಯ ಹೆಚ್ಚಿದ್ದಾರೆ ಎಂಬುವುದನ್ನು ಗಮನಿಸದೆ ಸಮುದಾಯಗಳನ್ನು ಅವಕಾಶವಂಚಿತರನ್ನಾಗಿ ಮಾಡಲು ಮುಂದಾಗಿದ್ದಾರೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಾತ್ರ ನೀಡಿದ್ದರೆ, ಕೆಲವು ಕ್ಷೇತ್ರಗಳಲ್ಲಿ ಒಬಿಸಿಗಳಿಗೆ ಅವಕಾಶವನ್ನೇ ಕೊಟ್ಟಿಲ್ಲ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಎಸ್‌ಸಿಎಸ್‌ಟಿ ಮತ್ತು ತುಳಿತಕ್ಕೊಳಗಾದ ಸಮಾಜಕ್ಕೆ ಮೀಸಲು ವಾರ್ಡ್‌ಗಳಿಲ್ಲ. ಒಂದು ವೇಳೆ ಇದರ ವಿರುದ್ಧ ಕೋರ್ಟ್‌ಗೆ ಹೋದರೆ ಅಲ್ಲಿ ಚುನಾವಣೆಗೆ ತಡೆಯಾಗಿ ಚುನಾವಣೆಯನ್ನೇ ಮಾಡಬಾರದು ಎಂಬ ಹುನ್ನಾರ ಬಿಜೆಪಿಯದ್ದು” ಎಂದು ಆರೋಪಿಸುತ್ತಾರೆ.

ಸಾಮಾಜಿಕ ನ್ಯಾಯ ನಿರಾಕರಣೆ ಮಾಡಿ ಅಧಿಕಾರ ವಂಚನೆ ಮಾಡುವ ಕೆಲಸ: ಎಎಪಿ

ಎಎಪಿ ಪಕ್ಷದ ರಾಜ್ಯದ ಜಂಟಿ ಕಾರ್ಯದರ್ಶಿಯಾಗಿರುವ ದರ್ಶನ್ ಜೈನ್ ಅವರು ಮಾತನಾಡಿ “ಕೊರೊನಾ ಸಮಯದಲ್ಲಿ ನಾವು ನಿರಂತರ ಕೆಲಸ ಮಾಡಿದ್ದೇವೆ. ಬಿಬಿಎಂಪಿಯ ಎಲ್ಲಾ ವಾರ್ಡ್‌ನಲ್ಲೂ ನಮ್ಮ ಅಭ್ಯರ್ಥಿಗಳು ತಯಾರಾಗಿದ್ದರು. ಅಸಮರ್ಪಕ ಮೀಸಲಾತಿ ಪಟ್ಟಿ ಪ್ರಕಟ ಮಾಡಿ, ಮೊದಲನೆಯದಾಗಿ ವಾರ್ಡ್‌ಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ನಾಯಕರು ಸ್ಪರ್ಧಿಸದಂತೆ ಮಾಡಿದ್ದಾರೆ. ಎರಡನೆಯದಾಗಿ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ” ಎಂದು ತಿಳಿಸಿದರು.

ದರ್ಶನ್ ಜೈನ್

“ಎಸ್‌ಟಿ ಸಮುದಾಯ ಜಾಸ್ತಿ ಇರುವ ವಾರ್ಡ್‌ನಲ್ಲಿ ಅವರಿಗೆ ಮೀಸಲಾತಿ ನೀಡದೆ, ಎಸ್‌ಟಿ ಸಮುದಾಯ ಇಲ್ಲದ ವಾರ್ಡ್‌ಗಳಲ್ಲಿ ಎಸ್‌ಟಿ ಮೀಸಲಾತಿ ನೀಡಿದ್ಧಾರೆ. ಮುಸ್ಲಿಂ ಸಮುದಾಯ ಜಾಸ್ತಿ ಇರುವ ಕಡೆಗಳಲ್ಲಿ ಒಕ್ಕಲಿಗರಿಗೆ ಮೀಸಲಾತಿ ನೀಡಿದ್ದಾರೆ. ಹತ್ತಕ್ಕಿಂಲೂ ಹೆಚ್ಚು ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಜಯಗಳಿಸುತ್ತಿದ್ದ ವಾರ್ಡ್‌ಗಳಲ್ಲಿ ಈ ಬಾರಿ ಅವಕಾಶವೇ ನೀಡಿಲ್ಲ. ಈ ಮೀಸಲಾತಿ ಪಟ್ಟಿಯ ಮೂಲಕ 27-28% ಇರುವ ಸಮುದಾಯದಕ್ಕೆ ಸಾಮಾಜಿಕ ನ್ಯಾಯವನ್ನು ನಿರಾಕರಿಸಿ, ಅವರಿಗೆ ಅಧಿಕಾರ ವಂಚನೆ ಮಾಡುವ ಕೆಲಸ ಮಾಡಿದ್ದಾರೆ” ಎಂದು ಅವರು ಆರೋಪಿಸುತ್ತಾರೆ.

ಮೀಸಲಾತಿ ಪಟ್ಟಿ ಪ್ರಕಟನೆ ಸಮಸ್ಯೆಗೆ ಪರಿಹಾರವೇನು?

ಈ ಎಲ್ಲಾ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬಹುದು ಎಂದು ಜಸ್ಟಿಸ್ ನಾಗಮೋಹನ ದಾಸ್ ಅವರು ಅಭಿಪ್ರಾಯಪಡುತ್ತಾರೆ. “ಮೀಸಲಾತಿ ಹಂಚಿಕೆಗೆ ಬಿಬಿಎಂಪಿ ಅವರು ಸರಿಯಾದ ಮಾನದಂಡವನ್ನು ರಚಿಸಿಕೊಳ್ಳಬೇಕು. ನಾವು ಅನೇಕ ಸಲ ವಿಫಲವಾಗುವುದು ಯಾವುದೇ ಮಾನದಂಡಗಳನ್ನು ಇಟ್ಟುಕೊಳ್ಳದ ಕಾರಣದಿಂದಾಗಿಯೇ. ಯಾವ ಪ್ರದೇಶಗಳಲ್ಲಿ ಹೆಚ್ಚು ಒಬಿಸಿಗಳಿದ್ದಾರೆ ಅಲ್ಲಿ ಮೀಸಲಾತಿ ನೀಡಬೇಕು. ಅದು ಇವತ್ತಿನ ಅವಶ್ಯಕತೆ. ಮುಂದಿನ ಚುನಾವಣೆಗೆ ಅದನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಲಿ” ಎಂದು ಅವರು ಹೇಳುತ್ತಾರೆ.

ಒಬಿಸಿ-ಮಹಿಳಾ ಮೀಸಲಾತಿ ಶಾಸನಸಭೆಗಳಿಗೂ ಬರಲಿ

ಮೀಸಲಾತಿ ಎಂಬುವುದು ಬಡತನ ನಿವಾರಣಾ ಕಾರ್ಯಕ್ರಮ ಅಲ್ಲ. ಅವಕಾಶ ವಂಚಿತರಿಗೆ ಅವಕಾಶ ಕೊಡತಕ್ಕಂತಹ ಕಾರ್ಯಕ್ರಮವಾಗಿದೆ. ಯಾರಿಗೆ ಶತಮಾನಗಳ ಕಾಲ ಹಕ್ಕು ಮತ್ತು ಅವಕಾಶ ನಿರಾಕರಣೆ ಮಾಡಲಾಗಿತ್ತೊ ಅವರಿಗೆ ಅವುಗಳನ್ನು ನೀಡುವಂತಹ ತತ್ವವಾಗಿದೆ ಮೀಸಲಾತಿ. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮತ್ತು ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿದಂತೆ ಶಾಸನ ರಚಿಸುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೂ ಒಬಿಸಿ ಮೀಸಲಾತಿ ಬರಲಿ ಎನ್ನುತ್ತಾರೆ ಜಸ್ಟಿಸ್ ನಾಗಮೋಹನ್ ದಾಸ್.

“ಮಹಿಳಾ ಮೀಸಲಾತಿಯನ್ನು ನಾವು ಸ್ಥಳೀಯ ಸಂಸ್ಥೆಗಳಲ್ಲಿ ನೀಡಿದ್ದೇವೆ. ಆದರೆ ಶಾಸನಗಳನ್ನು ರಚನೆ ಮಾಡುವಂತಹ ಸ್ಥಾನಗಳನ್ನು ಕೊಟ್ಟಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಸದನದ ಹೊರಗೆ ಬಂದು ನಾವು ಚುನಾವಣೆ ಗೆದ್ದರೆ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸದನ ಒಳಗಡೆ ಯಾವುದೋ ಒಂದು ನೆಪ ಹೇಳಿ ಅದನ್ನು ತಪ್ಪಿಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

“ಅಷ್ಟೆ ಅಲ್ಲದೆ, ಈಗಾಗಲೇ ದೇಶದಾದ್ಯಂತ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕಡಿಮೆ ಆಗುತ್ತಿದೆ. ಈ ರೀತಿಯಾಗಿ ಹೋದರೆ ಅವರಿಗೆ ಪ್ರಾತಿನಿಧ್ಯವೇ ಇಲ್ಲದಂತಾಗುತ್ತದೆ. ಭಾರತದಲ್ಲಿ 14% ಅಲ್ಪಸಂಖ್ಯಾತರಿದ್ದಾರೆ, ಅವರಿಗೆ 4% ಕೂಡ ಪ್ರಾತಿನಿಧ್ಯ ಇಲ್ಲದೆ ಇದ್ದರೆ ಹೇಗೆ? ನನ್ನ ಅಭಿಪ್ರಾಯ ಶಾಸನಸಭೆಗಳ ಚುನಾವಣೆಗೆ ಮೊದಲಿಗೆ ಮಹಿಳಾ ಮೀಸಲಾತಿ ಜಾರಿಗೆ ಬರಬೇಕು. ಎರಡನೆಯದಾಗಿ ಅಲ್ಪಸಂಖ್ಯಾತರಿಗೂ ಮೀಸಲಾತಿ ಇರಬೇಕು. ಇದರ ನಂತರ ಒಬಿಸಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಇದನ್ನು ನಾವು ರಾಜ್ಯದಿಂದ ರಾಜ್ಯಕ್ಕೆ ಮಾಡುತ್ತಾ ಹೋಗಬೇಕಾಗಿದೆ” ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟ: ಹಿಂದುಳಿದ ವರ್ಗಗಳಿಗೆ 81, ಎಸ್‌ಸಿ/ಎಸ್‌ಟಿಗೆ 32 ಸ್ಥಾನಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...