ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ 9 ವರ್ಷದ ದಲಿತ ಬಾಲಕನನ್ನು ಶಿಕ್ಷಕನೊಬ್ಬ ಥಳಿಸಿ ಕೊಂದಿರುವ ಘಟನೆಯ ಹೊಣೆಹೊತ್ತು ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದಾಗ ಶಾಸಕ ಸ್ಥಾನದಲ್ಲಿ ಮುಂದುವರೆಯುವ ಹಕ್ಕಿಲ್ಲ ಎಂದು ಅವರು ಸಿಎಂ ಅಶೋಕ್ ಗೆಹ್ಲೋಟ್‌ಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಉಲ್ಲೆಖಿಸಿದ್ದಾರೆ.
ಜುಲೈ 20 ರಂದು ಸವರ್ಣಿಯರಿಗೆ ಮೀಸಲಿರಿಸಿದ್ದ ಪಾತ್ರೆಯಲ್ಲಿದ್ದ ನೀರನ್ನು ಕುಡಿದ ಕಾರಣ ಇಂದ್ರ ಕುಮಾರ್ ಎಂಬ ದಲಿತ ಮಗುವಿಗೆ ಭೀಕರವಾಗಿ ಶಿಕ್ಷಕ ಥಳಿಸಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಮಗು ಅಹಮದಾಬಾದ್ ಆಸ್ಪತ್ರೆಯಲ್ಲಿ ಸಾವನಪ್ಪಿದ ಎರಡು ದಿನದ ನಂತರ ಬರನ್-ಅತ್ರು ಕ್ಷೇತ್ರದ ಶಾಸಕ ರಾಜೀನಾಮೆ ನೀಡಿದ್ದಾರೆ.
“ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲರಾದಾಗ… ಹುದ್ದೆಯಲ್ಲಿ ಉಳಿಯಲು ನಮಗೆ ಯಾವುದೇ ಹಕ್ಕಿಲ್ಲ. ನನ್ನ ಮನದಾಳದ ಮಾತನ್ನು ಆಲಿಸಿದ ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಇದರಿಂದ ನಾನು ಯಾವುದೇ ಸ್ಥಾನವಿಲ್ಲದೆ ಸಮುದಾಯಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ, ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಈ ದೌರ್ಜನ್ಯವನ್ನು ನೋಡಿ ನನಗೆ ನೋವಾಗಿದೆ, ನನ್ನ ಸಮುದಾಯವನ್ನು ಹಿಂಸಿಸುತ್ತಿರುವ ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಶಾಸಕ ಪನಾ ಚಂದ್ ಮೇಘವಾಲ್ ನೋವು ತೋಡಿಕೊಂಡಿದ್ದಾರೆ.
ದಲಿತರು ಕೊಡ ಮುಟ್ಟಿದರೆ ಕೊಲ್ಲುತ್ತಾರೆ. ದಲಿತರು ಮದುವೆಯಲ್ಲಿ ಕುದುರೆ ಸವಾರಿ ನಡೆಸಿದರೆ, ಮೀಸೆ ಬಿಟ್ಟರೆ ಕೊಲ್ಲುತ್ತಾರೆ. ಪ್ರಕರಣ ದಾಖಲಿಸಿದರೂ ಪೊಲೀಸರು ಬಿ ರಿಪೋರ್ಟ್ ಹಾಕಿ ಕೇಸು ಮುಚ್ಚಿ ಹಾಕುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ವಿಳಂಬ ನೀತಿ ಅನುಸರಿಸುತ್ತಿದೆ. ಕೆಲವು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಂವಿಧಾನದತ್ತವಾಗಿರುವ ಹಕ್ಕುಗಳನ್ನು ರಕ್ಷಿಸಲು ಯಾರೂ ಮುಂದೆ ಬರುತ್ತಿಲ್ಲ. ಈ ಕುರಿತು ಅಸೆಂಬ್ಲಿಯಲ್ಲಿ ನಾನು ಹಲವಾರು ದನಿ ಎತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿ ಚೈಲ್ ಸಿಂಗ್ ಎಂಬ ಶಿಕ್ಷಕನನ್ನು ಬಂಧಿಸಿ ಕೊಲೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗ್ರಾಮಕ್ಕೆ ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಸರ್ಕಾರ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದೆ.
“ನಾವು ಕೊಲೆ (ಐಪಿಸಿ) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಬಾಲಕನ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಪೊಲೀಸ್ ತಂಡವನ್ನು ಅಹಮದಾಬಾದ್‌ಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಜಾಲೋರ್ ಎಸ್ಪಿ ಹರ್ಷವರ್ಧನ್ ಅಗರವಾಲಾ ತಿಳಿಸಿದ್ದಾರೆ.
“ಜಲೋರ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ ನನ್ನ ಮಗ ಇಂದ್ರ ಕುಮಾರ್, ಸಿಂಗ್‌ಗಳಿಗೆ ಮೀಸಲಾಗಿದ್ದ ಮಣ್ಣಿನ ಪಾತ್ರೆಯಲ್ಲಿದ್ದ ನೀರು ಕುಡಿದ ಕಾರಣ ಶಿಕ್ಷಕ ಚೈಲ್ ಸಿಂಗ್ ಥಳಿಸಿದನು. ಈ ಮಡಿಕೆ ಸವರ್ಣೀಯ ಸಿಂಗ್‌ಗಳಿಗೆ ಮೀಸಲಾಗಿದೆ ಎಂದು ನನ್ನ ಮಗನಿಗೆ ತಿಳಿದಿರಲಿಲ್ಲ” ಎಂದು ಮಗುವಿನ ತಂದೆ ಮತ್ತು ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ನಿವಾಸಿ ದೇವರಾಮ್ ಮೇಘವಾಲ್ ಸಂಕಟ ವ್ಯಕ್ತಪಡಿಸಿದ್ದಾರೆ.
ಮೇಲ್ಜಾತಿ ಜನರಿಗೆ ಮೀಸಲಾದ ಮಣ್ಣಿನ ಪಾತ್ರೆಯಲ್ಲಿದ್ದ ನೀರು ಕುಡಿದ ಕಾರಣ ಜಾತಿ ನಿಂದನೆ ಮಾಡಿ ಮಗುವನ್ನು ಶಿಕ್ಷಕ ಥಳಿಸಿದ್ದಾನೆ ಎಂದು ಕುಟುಂಬ ಸದಸ್ಯರು ಶನಿವಾರ ಸೈಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಂಗ್ ಹೊಡೆದಿದ್ದರಿಂದ ಮಗುವಿನ ಬಲ ಕಿವಿ ಮತ್ತು ಕಣ್ಣಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
“ಮಗನ ಸ್ಥಿತಿ ಹದಗೆಟ್ಟಿತು. ಆಸ್ಪತ್ರೆಗೆ ಸೇರಿಸಲಾಯಿತು. ಆತನ ಕಿವಿಯಿಂದ ರಕ್ತಸ್ರಾವವಾಗಿತ್ತು. ದೇಹವನ್ನು ಮತ್ತೊಂದು ಮಗ್ಗಲಿಗೆ ಬದಲಿಸಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಅವನ ಕಣ್ಣು ನೋಯುತ್ತಿತ್ತು. ಅಹಮದಾಬಾದ್‌ಗೆ ಕರೆತರುವ ಮೊದಲು ನಾವು ಆತನನ್ನು ಜಲೋರ್, ಭಿನ್ಮಾಲ್, ಉದಯಪುರದ ಆಸ್ಪತ್ರೆಗಳಿಗೆ ದಾಖಲಿಸಿದ್ದೆವು. ನನ್ನ ಮಗ ಇಂದು [ಶನಿವಾರ] ಮಧ್ಯಾಹ್ನ ಕೊನೆಯುಸಿರೆಳೆದನು. ಅವನ ಸಾವಿಗೆ ಜಾತಿ ತಾರತಮ್ಯವೇ ಕಾರಣ” ಎಂದು ಮೇಘವಾಲ್ ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಕುರಿತು ಟ್ವೀಟ್ ಮಾಡಿದ್ದು, “ಜಲೋರ್‌ನ ಸೈಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ಮಗುವನ್ನು ಥಳಿಸಿದ ಕಾರಣ ಸಾವು ಸಂಭವಿಸಿದೆ. ಘಟನೆಯು ನೋವು ತಂದಿದೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು. ಮಗುವಿನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹ 5 ಲಕ್ಷ ಪರಿಹಾರ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ
ಇದಕ್ಕೂ ಮೊದಲು, ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಮಗುವಿನ ಸಾವಿನ ವಿಚಾರವಾಗಿ ಗೆಹ್ಲೋಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “ಮುಖ್ಯಮಂತ್ರಿಗಳೇ, ಇದಕ್ಕೆ ಯಾರು ಹೊಣೆ? ನಿಮ್ಮ ಆಡಳಿತದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸುರಕ್ಷಿತವಾಗಿಲ್ಲ. ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕು. ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಶನಿವಾರ ಟ್ವೀಟ್ ಮಾಡಿದ್ದಾರೆ.



ನಿಮ್ಮ ಪತ್ರಿಕಾ ಕಾರ್ಯ ವೈಖರಿಗೆ ನಮ್ಮ ದೊಡ್ಡ ಪ್ರಣಾಮಗಳು… 🙏🏻
ಈ ಕಾಂಗ್ರೆಸ್ ಶಾಸಕ ಈಗಾಗಲೇ ಬಿಜೆಪಿ ಸೇರಲು ಎಲ್ಲಾ ವ್ಯವಸ್ಥೆ ಮಾಡಿ ಆಗಿದೆ ಪಾಪ 😢😢😢. ಬಿ ಜೆ ಪಿ ಸೇರಲು ಅವನಿಗೆ ಒಂದು ಪಿಳ್ಳೆ ನೆವ ಬೇಕಿತ್ತು ಅಷ್ಟೆ!!☺️☺️
Ulta chor kothwal ko daraye red