Homeಮುಖಪುಟಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಮೊದಲಾರ್ಧ ಮನುಷ್ಯನ ಕ್ರಿಯೆಯಾದರೆ, ದ್ವಿತೀಯಾರ್ಧ ಪ್ರಕೃತಿಯ ಪ್ರತಿಕ್ರಿಯೆ ಎನ್ನಬಹುದೇನೋ.

- Advertisement -
- Advertisement -

ತಮಿಳು ಸಿನಿಮಾಗಳಂತೆ ಮಲಯಾಳಂ ಸಿನಿಮಾಗಳು ಜಾತಿ ವ್ಯವಸ್ಥೆಯ ವಾಸ್ತವಗಳ ಕುರಿತು ಗಂಭೀರವಾಗಿ ಚರ್ಚಿಸಿಲ್ಲ ಎಂಬುದು ಮಲಯಾಳಂ ಚಲನಚಿತ್ರಗಳ ಮೇಲಿನ ಸಾಮಾನ್ಯ ಆರೋಪ. ಧರ್ಮಾಧಾರಿತ ರಾಜಕಾರಣದ ಕುರಿತು ಇಲ್ಲಿ ಸಾಕಷ್ಟು ಕಥೆಗಳು ಮೂಡಿಬರುತ್ತಿದ್ದರೂ ಜಾತಿ ವ್ಯವಸ್ಥೆಯ ಕುರಿತು ಗಂಭೀರ ಪ್ರಯೋಗಗಳಾಗಿಲ್ಲ; ಜಾತಿ ಕೇಂದ್ರಿತ ಆಲೋಚನೆಗಳಿಂದ ಮಲಯಾಳಿಗರು ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪಗಳನ್ನು ಅನೇಕರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ರಾಷ್ಟ್ರಮಟ್ಟದ ಚರ್ಚೆಯಲ್ಲಿ ಮಲಯಾಳಂ ಸಿನಿಮಾಗಳು ಗಮನ ಸೆಳೆಯುತ್ತಿದ್ದರೂ ಈ ಅಪವಾದವನ್ನು ತಳ್ಳಿ ಹಾಕುವಂತಿಲ್ಲ.

ಜಾತಿ ಕೇಂದ್ರಿತ ಸಿನಿಮಾಗಳು ಮಲಯಾಳಂನಲ್ಲಿ ಬಂದೇ ಇಲ್ಲವೆಂದಲ್ಲ. ದಲಿತರು ಭೂಮಿಯನ್ನು ಕಳೆದುಕೊಳ್ಳುವ ಕಥೆಯನ್ನು ತೆರೆಗೆ ತಂದ ‘ಕಮ್ಮಟಿಪಾಡಂ’ ಸಿನಿಮಾ ಈ ನೆಲೆಯಲ್ಲಿ ಗಂಭೀರ ಚಿಂತನೆಗೆ ಅವಕಾಶ ನೀಡಿತ್ತು. ಕೆಲವು ತಿಂಗಳ ಹಿಂದೆ ಬಂದ ‘ಪಡ’- ಆದಿವಾಸಿಗಳ ನೈಜ ಹೋರಾಟದ ಕುರಿತು ಮೂಡಿಬಂದಿತ್ತು. ತಮಿಳು ಚಿತ್ರರಂಗದಲ್ಲಿ ಜಾತಿ ಕೇಂದ್ರಿತವಾಗಿ ಆಗುತ್ತಿರುವ ಪ್ರಯೋಗಗಳಂತೆಯೇ ಮಲಯಾಳಂ ಚಿತ್ರರಂಗ ಕೂಡ ಹೆಜ್ಜೆ ಇಡುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟರು. ಈ ಚರ್ಚೆಯ ಮುಂದುವರಿದ ಭಾಗವಾಗಿ ಫಹಾದ್ ಫಾಸಿಲ್ ನಟನೆಯ ‘ಮಲಯನ್‌ಕುಂಜು’ ನೋಡಬೇಕಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹೇಶ್‌ ನಾರಾಯಣನ್‌ ಕತೆ, ಚಿತ್ರಕಥೆ ಬರೆದು, ಅದ್ಭುತವಾಗಿ ಛಾಯಾಗ್ರಹಣ ಮಾಡಿರುವ, ಸಾಜಿಮನ್ ಪ್ರಭಾಕರ್ ನಿರ್ದೇಶಿಸುವ ‘ಮಲಯನ್‌ಕುಂಜು’ ಸಿನಿಮಾದಲ್ಲಿ ಜಾತಿ ಮನಸ್ಥಿತಿಯನ್ನು ತೋರಿಸಿರುವ ರೀತಿಯ ಕುರಿತು ಭಿನ್ನ ಅಭಿಪ್ರಾಯಗಳು ಮೂಡಿಬರುತ್ತಿವೆ. ಇಲ್ಲಿ ಕಥಾನಾಯಕ ಅನಿಕುಟ್ಟನ್‌ (ಫಾಸಿಲ್‌) ಮೇಲೆ ಅನುಕಂಪ ಸೃಷ್ಟಿಸಿ, ಆತನೊಳಗಿನ ಜಾತಿ ಮನಸ್ಥಿತಿಯನ್ನು ಮರೆಮಾಚಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ಶೋಷಿತ ಸಮುದಾಯದ ಬಗ್ಗೆ ಅಸಹನೆಯನ್ನು ಹೊಂದಿರುವ, ದಲಿತರು ಮುಟ್ಟಿದ ಪಾತ್ರೆಯಲ್ಲಿನ ಆಹಾರವನ್ನೂ ತಿನ್ನಲೂ ಬಯಸದ, ಶೋಷಿತ ಸಮುದಾಯದ ಮಗು ಅಳುವ ಸದ್ದು ಕೇಳಿದೊಡನೆ ಕೆರಳುವ ಅನಿಕುಟ್ಟನ್‌ ಮಹಾ ಮಡಿವಂತ. ಮುಂಜಾನೆಯೇ ಎದ್ದು ತಣ್ಣೀರು ಸ್ನಾನ ಮಾಡಿ, ತಾವು ಮಾಡುತ್ತಿರುವ ಎಲೆಕ್ಟ್ರಾನಿಕ್‌ ರೆಪೇರಿ ಕೆಲಸದಲ್ಲಿ ಕಳೆದು ಹೋಗುವ ಆತ ಮಹಾ ಜಾತಿವಾದಿ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆತನ ತಂಗಿಯು ಮದುವೆ ಮನೆಯಿಂದ ಓಡಿ ಹೋಗಿ ತಾನು ಪ್ರೀತಿಸಿದ ದಲಿತ ಸಮುದಾಯದ ಹುಡುಗನೊಬ್ಬನ ಜೊತೆ ಮದುವೆಯಾದ ಬಳಿಕ ಆತ ಜಾತಿ ವಿಚಾರದಲ್ಲಿ ಮತ್ತಷ್ಟು ಕುಬ್ಜನಾಗುತ್ತಾನೆ. ಆದರೆ ಆತನ ಜಾತಿ ಮನಸ್ಥಿತಿ ಗಟ್ಟಿಯಾಗಲು, ತಂಗಿಯ ನಿರ್ಧಾರವೇ ಪ್ರಮುಖವೆಂದು ತೋರಿಸಿದಂತೆ ಭಾಸವಾಗುತ್ತದೆ. ಇದು ಅಪಾಯಕಾರಿ ಸಂಗತಿ. ಅನಿಕುಟ್ಟನ್ ಹಾಗೂ ಆತನ ತಂದೆ ಮೋಸ ಹೋದರು ಎಂಬಂತೆ ಚಿತ್ರಿಸಿ, ಅವಮಾನ ಸಹಿಸಲಾಗದೆ ಅನಿಕುಟ್ಟನ್‌ ತಂದೆ ಆತ್ಮಹತ್ಯೆಗೆ ಶರಣಾದರು ಎಂಬಂತೆ ಚಿತ್ರಿಸಲಾಗಿದೆ.

ಪ್ರಸನ್ನವಾಗಿದ್ದ ಅನಿಕುಟ್ಟನ್ ಮುಖ ಆ ನಂತರದಲ್ಲಿ ಸಿಡುಕುತನವನ್ನು ತುಂಬಿಕೊಳ್ಳುತ್ತದೆ. ತಂಗಿಯ ಮುಖವನ್ನೂ ನೋಡಲು ಇಚ್ಛಿಸದ, ಆಕೆಯ ಗಂಡ ಮೀಸಲಾತಿ ಅಡಿಯಲ್ಲಿ ಕೆಲಸ ಗಿಟ್ಟಿಸಿದ್ದಾನೆಂದು ಲಘುವಾಗಿ ಮಾತನಾಡುವ ಅನಿಕುಟ್ಟನ್ ಪಾತ್ರವನ್ನು ವೈಭವೀಕರಿಸಲಾಗಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಮೊದಲಾರ್ಧವನ್ನಷ್ಟೇ ಗಂಭೀರವಾಗಿ ಪರಿಗಣಿಸಿದರೆ ಈ ಪ್ರಶ್ನೆ ದೀರ್ಘ ಚರ್ಚೆಗೆ ಒಳಪಡುವುದು ಖಚಿತ. ಆದರೆ ‘ಮಲಯನ್‌ಕುಂಜು’ ಸಿನಿಮಾವನ್ನು ಎರಡು ಭಾಗಗಳಾಗಿ ನೋಡುವ ಅಗತ್ಯವಿದೆ. ಮೊದಲಾರ್ಧ ಮನುಷ್ಯನ ಕ್ರಿಯೆಯಾದರೆ, ದ್ವಿತೀಯಾರ್ಧ ಪ್ರಕೃತಿಯ ಪ್ರತಿಕ್ರಿಯೆ ಎನ್ನಬಹುದೇನೋ. ಕಥಾನಾಯಕನ ಸಂಕುಚಿತತೆ, ಮಡಿವಂತಿಕೆ, ದಲಿತರ ಬಗೆಗಿನ ಅಸಹನೆ ಎಲ್ಲವೂ ಪ್ರಕೃತಿಯ ವಿರಾಟ್ ರೂಪದ ಮುಂದೆ ಕ್ಷುಲ್ಲಕ ಎಂಬ ಸಂದೇಶವನ್ನು ದ್ವಿತೀಯಾರ್ಧದಲ್ಲಿ ನಿರೂಪಿಸಲಾಗಿದೆ.

ಮೊದಲಾರ್ಧದಲ್ಲೂ ಅನಿಕುಟ್ಟನ್‌ನ ಜಾತೀಯತೆಯನ್ನು ಅತಿರೇಕವೆಂಬಂತೆಯೇ ಚಿತ್ರಿಸಿರುವ ದೃಶ್ಯಗಳನ್ನೂ ಅಲ್ಲಗಳೆಯಲಾಗದು. ನೆರೆಮನೆಯಲ್ಲಿರುವ ಹೊಲೆಯ ಜಾತಿಯ ಹಾಲ್ಗೂಸು (ಹುಟ್ಟಿ ಒಂದು ತಿಂಗಳು ಕೂಡ ಆಗಿಲ್ಲ) ಅಳುವ ಸದ್ದು ಕೇಳಿದರೆ ಕುದಿದು ಹೋಗುವ ಅನಿಕುಟ್ಟನ್‌ ನಿಜಕ್ಕೂ ಮನುಷ್ಯನೆ? ಮಗುವಿನ ಮೇಲೆ ಸಿಡಿದು ಬೀಳುವುದಕ್ಕೆ ತಂಗಿಯ ಘಟನೆ ಕಾರಣವೆಂದು ಭಾವಿಸುವುದು ಸರಿಯೇ? ಎಂಬ ಪ್ರಶ್ನೆಯನ್ನು ನೋಡುಗರ ಮುಂದೆ ಇಡಲಾಗಿದೆ. ಅನಿಕುಟ್ಟನ್‌ನ ಅತಿರೇಕವನ್ನು, “ನಮ್ಮ ಸುತ್ತ ಯಾರಿದ್ದಾರೆಂದು ಆ ಮಗುವಿಗೇನು ಗೊತ್ತು?” ಎಂಬ ಸಂಭಾಷಣೆಯ ಮೂಲಕ ಅಣಕಿಸಲಾಗಿದೆ. ಅನಿಕಟ್ಟನ್‌ ತೋರುವ ಸಣ್ಣತನಗಳನ್ನು ಆತನ ಸುತ್ತಲಿನ ಪಾತ್ರಗಳು ವ್ಯಂಗ್ಯದ ದಾಟಿಯಲ್ಲೋ, ಅತಿರೇಕವಾಯಿತೆಂಬ ನೋಟದಲ್ಲೋ ವ್ಯಕ್ತಪಡಿಸುವುದನ್ನು ಗಮನಿಸಬಹುದು. ಇಷ್ಟಾಗಿಯೂ ಅನಿಕುಟ್ಟನ್‌ ಮನೋಭಾವಕ್ಕೆ ಒಪ್ಪಿತ ಮುದ್ರೆಯೊತ್ತುವ ಸನ್ನಿವೇಶಗಳು ಬರುವ ಹೊತ್ತಿಗೆ ಪ್ರಕೃತಿಯ ವಿರಾಟ್ ದರ್ಶನವಾಗುತ್ತದೆ. ಅಲ್ಲಿಂದೀಚೆಗೆ ಕಟ್ಟಿಕೊಡಲಾಗಿರುವ ಜಿಜ್ಞಾಸೆಯೇ ಇಡೀ ಸಿನಿಮಾದ ಒಟ್ಟು ತಾತ್ವಿಕತೆ ಎನ್ನಬಹುದು.

ಭೀಕರ ಮಳೆಗಾಲ. ಗುಡ್ಡ ಕುಸಿಯುತ್ತದೆ. ಮಡಿವಂತಿಕೆಯ ಅನಿಕುಟ್ಟನ್‌ ಕೆಸರು, ನೀರು, ಬೇರು, ಮಣ್ಣಿನ ಅಡಿಯಲ್ಲಿ ಬಿದ್ದು ಸಾವಿನ ದವಡೆಯಲ್ಲಿ ಸಿಲುಕಿರುವಾಗ ಕಟ್ಟಿಕೊಡಲಾಗಿರುವ ಸನ್ನಿವೇಶಗಳು ಆತನ ಆತ್ಮಾವಲೋಕನಕ್ಕೂ, ಸಾವಿನ ಮುಂದೆ ಮನುಷ್ಯನ ಎಲ್ಲ ಅಹಂಕಾರವು ನಿಶ್ವರವೆಂಬ ವಿನಯದ ಅನ್ವೇಷಣೆಗೂ ಅವಕಾಶ ಮಾಡಿಕೊಡುತ್ತವೆ. ಮಣ್ಣು ಮತ್ತು ನೀರಿನಾಳದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಅನಿಕುಟ್ಟನ್‌ಗೆ, ಆತ್ಮಹತ್ಯೆ ಮಾಡಿಕೊಂಡ ಆತನ ತಂದೆ ಬಂದು ಬುದ್ಧಿ ಹೇಳುವಂತೆ ಒಂದು ದೃಶ್ಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಮಗಳ ಘಟನೆಯಿಂದ ಅವಮಾನಿತವಾಗಿ ಆತ್ಮಹತ್ಯೆ ಮಾಡಿಕೊಂಡ ತಂದೆಯ ಪಾತ್ರವು ಅಮೂರ್ತವಾಗಿ ಬಂದು ಬುದ್ಧಿಹೇಳುವಂತೆ ಚಿತ್ರಿಸಲಾಗಿರುವ ಈ ದೃಶ್ಯವೇ ದ್ವಿತೀಯಾರ್ಧದ ಜೀವಾಳ ಎನ್ನಬಹುದೇನೋ.

ಆ ದೃಶ್ಯ ಹೀಗಿದೆ:

ನೀರಿನಾಳದಲ್ಲಿ ಬಿದ್ದಿರುವ ಮಗನನ್ನು ತಂದೆ ಮೇಲಕ್ಕೆತ್ತಿ ತರುತ್ತಾನೆ.

ತಂದೆ: ಮಗನೇ, ಎದ್ದೇಳು ಮಗನೇ.

ಅನಿಕುಟ್ಟ: ಏನಾಯ್ತಪ್ಪ, ಎಲ್ಲಿದ್ದೀವಿ ನಾವು?

ತಂದೆ: ನೀರು ಬೇಕಾ ಮಗನೇ (ಅಲ್ಲೇ ನೀರು ಸೋಸಿ ಕುಡಿಸುತ್ತಾನೆ.) ಮಣ್ಣಿನ ಕೊಳೆತ ವಾಸನೆ ಗೊತ್ತಾಗುತ್ತಿಲ್ಲವೇ ಮಗನೆ? ಗುಡ್ಡ ಕುಸಿದಿದೆ. ನಮ್ಮ ಮನೆ ಈಗ ಮಣ್ಣಿನಾಳದಲ್ಲಿದೆ. 

ಅನಿಕುಟ್ಟ: ಅಮ್ಮ ಎಲ್ಲಿದ್ದಾರೆ ಅಪ್ಪ?

ತಂದೆ: ಶಾಂತಾಳ ಯಾವುದೇ ಸದ್ದು ನನಗೆ ಕೇಳಿಸುತ್ತಿಲ್ಲ. ಇದೆಲ್ಲದರ ಬಗ್ಗೆ ಆಕೆ ಎಚ್ಚರಿಕೆಯಿಂದ ಇರುತ್ತಾಳೆ. ನಾವಿಬ್ಬರೂ ಬಹಳ ಕಾಲದ ಹಿಂದೆ ಇಲ್ಲಿಗೆ ಬಂದವರಲ್ಲವೇ? ಬಹುಶಃ ಅವಳು ಅಲ್ಲಿದ್ದಾಳೆ. ಆಕೆ ತುಂಬಾ ಸೂಕ್ಷ್ಮಳು. ಈ ರೀತಿಯ ಘಟನೆಗಳನ್ನು ಊಹಿಸಬಲ್ಲಳು. (ಮಗುವಿನ ಅಳು ಕೇಳಿಸುತ್ತದೆ). ಯಾರ ಮಗುವಿನ ಅಳು ಅದು? 

(ತಂದೆಯ ತೊಡೆಯ ಮೇಲೆ ಮಲಗಿರುವ ಅನಿಕುಟ್ಟ ಮಾತನಾಡುತ್ತಾನೆ)

ಅನಿಕುಟ್ಟ: ಅದು ಸುನಿಯ ಮಗು. (ನೆರೆಮನೆಯ ಹೊಲೆಯ ಜಾತಿಯವನು)

ತಂದೆ: ಸುನಿ ಮದುವೆಯಾದನಾ? ತುಂಬಾ ಸಂತೋಷ. ಮಗುವಿಗೆ ಎಷ್ಟು ವಯಸ್ಸು?

ಅನಿಕುಟ್ಟ: ಆ ಮಗುವಿಗೆ ಇವತ್ತಿಗೆ 28 ದಿನ. 

ತಂದೆ: ಓ ಬಡಪಾಯಿ ಮಗು. ಉಸಿರಾಡಲೂ ಕಷ್ಟಪಡುತ್ತಿದೆ ಅನಿಸುತ್ತಿದೆ. ಎದ್ದೇಳು ಬೇಗ. ಆ ಮಗು ಎಲ್ಲೋ ಇದ್ದಿರುವಂತಿದೆ. ಯಾರೂ ಕಾಪಾಡುವವರು ಇಲ್ಲ ಅನಿಸುತ್ತಿದೆ. ಆ ಮಗುವನ್ನು ಕಾಪಾಡಿ, ಕುಟುಂಬಕ್ಕೆ ಹಸ್ತಾಂತರಿಸು. ನಿಜಕ್ಕೂ ಅವರು ಆತಂಕಿತರಾಗಿರುತ್ತಾರೆ. ಮಗನೇ, ಎದ್ದೇಳು. ಅನಿಕುಟ್ಟ ಎದ್ದೇಳು. ಮಗುವನ್ನು ಕಾಪಾಡು. ಅನಿಕುಟ್ಟ, ಜನರು ಜಾತಿಗಳಿಂದಾಗಿ ಒಡೆದುಹೋಗಿದ್ದಾರೆ. ಆದರೆ ಇದೆಲ್ಲ ಸಾಯುವತನಕವಷ್ಟೇ. ಸತ್ತು ಹೋದ ಮೇಲೆ ಎಲ್ಲರೂ ಸಮಾನರು ಮಗನೇ.

ಹೀಗೆ ಅಮೂರ್ತವಾಗಿ ಬರುವ ದೃಶ್ಯವು ಅನಿಕುಟ್ಟನ ಆತ್ಮಾವಲೋಕನವೂ ಹೌದು. ಆ ನಂತರದಲ್ಲಿ ಅನಿಕುಟ್ಟ ಸಾವನ್ನು ಜಯಿಸಲು ಹೊರಡುವ ದಿಕ್ಕೂ ಕೂಡ ‘ಮಲಯನ್‌ಕುಂಜು’ ಕಥೆಯ ತಾತ್ವಿಕತೆಯ ಶೋಧವೂ ಆಗಿದೆ. ಯಾವ ಮಗುವಿನ ದನಿಯನ್ನು ಕೇಳಿ ಕೆರಳುತ್ತಿದ್ದನೋ ಅದೇ ಮಗುವಿನ ದನಿ ಈತನನ್ನು ಬದುಕುಳಿಸುವ ದಿಕ್ಸೂಚಿಯಾಗುತ್ತದೆ. ಈ ಮಲೆಯ ಕುಡಿಯ ದನಿಯನ್ನು ಆಲಿಸುತ್ತಾ ಹೊರಟ ಅನಿಕುಟ್ಟನ ಮುಂದೆ ಶವಗಳು ತೇಲಿಬರುತ್ತವೆ. ಆತನ ಎಲ್ಲ ಅಹಂಕಾರ, ಜಾತಿ ವ್ಯಸನವನ್ನು ಆ ಮಲಯ ಕುಡಿ/ಹೊಲೆಯ ಕುಡಿ (ಪೊನ್ನಿ) ಛಿದ್ರ ಮಾಡುತ್ತದೆ. ಪ್ರಕೃತಿ ಕಲಿಸುವ ಸಮಾನತೆಯ ಪಾಠದ ಎದುರು ಆತನೂ ಒಂದು ಮಗುವಷ್ಟೇ. ದುರಂತಗಳಿಗೆ ಎದುರಾದವನು ಮಗುವಾಗುವ ಪರಿ ಇದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾವ ಮಗುವಿನ ಕೈಯಲ್ಲಿ ತನ್ನ ತಾಯಿ ಹಾಕಿದ ಚಿನ್ನದ ಆಭರಣವನ್ನು ನೋಡಿ ಕುದಿದು ಹೋಗಿರುತ್ತಾನೋ ಅದೇ ಅನಿಕುಟ್ಟನಿಗೆ ಈ ಮಗುವೇ ಚಿನ್ನವಾಗಿ ಕೈ ಸೇರುತ್ತದೆ. ಹೀಗೆ ಜಾತಿ ವ್ಯವಸ್ಥೆಯನ್ನು ವಿಶಿಷ್ಟವಾಗಿ, ಆತ್ಮಾವಲೋಕನದ ಮಾದರಿಯಲ್ಲಿ ತರ್ಕಕ್ಕೆ ಒಳಪಡಿಸಿರುವುದು ‘ಮಲಯನ್‌ಕುಂಜು’ ಸಿನಿಮಾದ ಹೆಚ್ಚುಗಾರಿಕೆ.

ಎ.ಆರ್‌.ರೆಹಮಾನ್‌ ಅವರ ಮ್ಯೂಸಿಕ್‌, ಇಂಪಾದ ಹಾಡುಗಳು, ಪ್ರಕೃತಿಯ ವಿರಾಟ್ ರೂಪಕ್ಕೆ ನೀಡಲಾಗಿರುವ ಹಿನ್ನೆಲೆ ಸಂಗೀತ- ಎಲ್ಲವೂ ಕಥೆಯ ತೀವ್ರತೆಯನ್ನು ಹೆಚ್ಚಿಸಿವೆ. ಮಲಯಾಳಂ ಸಿನಿಮಾಗಳು ಜಾತಿ ಕೇಂದ್ರಿತ ಜಿಜ್ಞಾಸೆಗಳತ್ತ ಗಂಭೀರತೆಯನ್ನು ಪಡೆಯುತ್ತಿರುವ ಸೂಚನೆಯಾಗಿಯೂ ಈ ಸಿನಿಮಾವನ್ನು ಪರಿಗಣಿಸಬಹುದು. (ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ‘ಮಲಯನ್‌ಕುಂಜು’ ಲಭ್ಯವಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮಸ್ಕಾರ.
    ಈ ಸಿನಿಮಾ ವಿಮರ್ಶೆ ಬರೆದ ಯತಿರಾಜರು ಮಲಯಾಳಂ ಸಿನಿಮಾಗಳಲ್ಲಿ ಜಾತಿ ಕುರಿತು ಗಂಭೀರ ಚರ್ಚೆ ಇಲ್ಲ ಎಂದು ಬೀಸು ಹೇಳಿಕೆ ಕೊಡುವ ಮೊದಲು ದಯವಿಟ್ಟು ಜಯನ್ ಕೆ ಚೆರಿಯನ್ ನಿರ್ದೇಶಿಸಿದ ಪ್ಯಾಪಿಲಿಯೋ ಬುದ್ಧ ಸಿನಿಮಾ ನೋಡಲಿ. ಹಾಗೆಯೇ ವಿನೋದ್ ನಾರಾಯಣ್ ಈ ಸಿನಿಮಾದ ಕುರಿತು ಬರೆದ ಲೇಖನವನ್ನೂ ಓದಲಿಎಂದು ಪ್ರೀತಿಯಿಂದಲೇ ಕೇಳಿಕೊಳ್ಳುವೆ.
    ಲೇಖನ. ಗೂಗಲ್ ಮಾಡಿದರೆ ಸಿಗುತ್ತದೆ.

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...