ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚಿಸಿ ಎರಡು ವಾರಗಳ ನಂತರ ಇಂದು ಸಿಎಂ ನಿತೀಶ್ ಕುಮಾರ್‌ರವರು ಬಹುಮತ ಸಾಬೀತುಪಡಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರದ ಭಾಗವಾಗಿರುವ ಆರ್‌ಜೆಡಿಯ ಹಿರಿಯ ಮುಖಂಡರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ ಆರ್‌ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಮತ್ತು ಬಿಹಾರದ ವಿಧಾನ ಪರಿಷತ್ ಸದಸ್ಯ ಸುನೀಲ್ ಸಿಂಗ್ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯುಪಿಎ-1 ರ ಕಾಲದಲ್ಲಿ ಲಾಲೂ ಪ್ರಸಾದ್ ಯಾದವ್‌ರವರು ರೈಲ್ವೆ ಸಚಿವರಾಗಿದ್ದಾಗ ಉದ್ಯೋಗ ನೀಡುವುದಕ್ಕಾಗಿ ಭೂಮಿ ಲಂಚ ಪಡೆದ ಹಗರಣದ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಅಧಿಕಾರ ಕೈತಪ್ಪಿದ್ದರಿಂದ ಬಿಜೆಪಿ ತೀವ್ರ ಹತಾಶೆಗೊಂಡಿರುವ ಕಾರಣ ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‌ಜೆಡಿ ಪಕ್ಷವು ನಿನ್ನೆ ರಾತ್ರಿ ಟ್ವೀಟ್ ಮಾಡಿತ್ತು. “ಬಿಹಾರದಲ್ಲಿ ಉಗ್ರ ಬಿಜೆಪಿ ಮಿತ್ರಪಕ್ಷಗಳಾದ ಸಿಬಿಐ, ಇಡಿ, ಐಟಿ ಶೀಘ್ರದಲ್ಲೇ ದಾಳಿಗೆ ತಯಾರಿ ನಡೆಸುತ್ತಿವೆ. ಪಾಟ್ನಾದಲ್ಲಿ ಸಭೆ ಆರಂಭವಾಗಿದೆ. ನಾಳೆ ಮಹತ್ವದ ದಿನ” ಎಂದು ಆರ್‌ಜೆಡಿ ಹೇಳಿತ್ತು.
बौखलाई हुई भाजपा के सहयोगी CBI, ED, IT बिहार में अतिशीघ्र ही रेड की तैयारी कर रहे है।
पटना में जमावड़ा शुरू हो चुका है। कल का दिन महत्वपूर्ण है। #बिहार
— Shakti Singh Yadav (@sshaktisinghydv) August 23, 2022
ದಾಳಿ ನಂತರ ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಆರ್‌ಜೆಡಿ ಪಕ್ಷವು “ಸೋಕಾಲ್ಡ್ ರೈಲ್ವೇ ಉದ್ಯೋಗದ ಕುರಿತು ಹಲವಾರು ಕಡೆ ಸಿಬಿಐ ದಾಳಿ ನಡೆಸಿದೆ. ಆದರೆ ಅವರಿಗೆ ಏನು ಸಿಕ್ಕಿಲ್ಲ” ಎಂದು ಹೇಳಿದೆ.
“ಲಾಲು ಪ್ರಸಾದ್ ಯಾದವ್‌ರವರು 2004 ರಿಂದ 2009 ರವರೆಗೆ ರೈಲ್ವೆ ಸಚಿವರಾಗಿದ್ದರು. ಆದರೆ ಅವರ ಅಧಿಕಾರಾವಧಿ ಮುಗಿದ 13 ವರ್ಷಗಳ ನಂತರ ಸಿಬಿಐ ದಾಳಿ ನಡೆಸುತ್ತಿದೆ ಎಂದರೆ ಅದು ಎಂತಹ ಅಸಹ್ಯ ಸಂಸ್ಥೆ ಎಂದು ನಿಮಗೆ ಅರ್ಥವಾಗುತ್ತದೆ. ಇದಕ್ಕೆಲ್ಲ ಲಾಲೂ ಕುಟುಂಬವು ತಲೆಬಾಗುವುದಿಲ್ಲ ಮತ್ತು ಹೆದರುವುದಿಲ್ಲ” ಎಂದು ಆರ್‌ಜೆಡಿ ಹೇಳಿಕೊಂಡಿದೆ.
2004 ಮತ್ತು 2009 ರ ನಡುವೆ ರೈಲ್ವೆ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೇ ಉದ್ಯೋಗಗಳನ್ನು ನೀಡಲು ಲಂಚವಾಗಿ ಭೂಮಿ ಮತ್ತು ಆಸ್ತಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಈ ವರ್ಷದ ಮೇ ತಿಂಗಳಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಜೂನ್ ತಿಂಗಳಿನಲ್ಲಿ ಲಾಲೂರವರ ಸಹಚರ ಭೋಲಾ ಯಾದವ್‌ರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆಯ ನಂತರ ಇಂದು ದಾಳಿ ನಡೆಸಿದ್ದೇವೆ ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ: ಸರ್ಕಾರಿ ಏಜೆಂಟ್ ನೇಮಿಸಿಕೊಳ್ಳಲು ಟ್ವಿಟರ್ ಮೇಲೆ ಭಾರತ ಸರ್ಕಾರ ಒತ್ತಡ; ಟ್ವಿಟ್ಟರ್ ಮಾಜಿ ಭದ್ರತಾ ಮುಖ್ಯಸ್ಥ ಆರೋಪ


