Homeನ್ಯಾಯ ಪಥಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

- Advertisement -
- Advertisement -

ದೇಶವೊಂದಕ್ಕೆ 75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮ ಸಾಮಾನ್ಯ ಸಂಗತಿಯೇನಲ್ಲ. ಈ 75 ವರ್ಷಗಳ ಸ್ವಾತಂತ್ರ್ಯಕ್ಕೆ ಕಾರಣವಾದ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಂಡು, ನಡೆದುಬಂದ ಹಾದಿಯನ್ನು ವಿಮರ್ಶಿಸಿಕೊಂಡು ಮತ್ತಷ್ಟು ಪ್ರಗತಿಯತ್ತ, ಮಾನವೀಯತೆಯತ್ತ ಹೆಜ್ಜೆ ಹಾಕುವ ಯೋಜನೆಗಳನ್ನು ರೂಪಿಸಿಕೊಳ್ಳುವ ಸಂದರ್ಭವದು. ಈ 75 ವರ್ಷಗಳಲ್ಲಿ ಈ ದೇಶದ ಎಲ್ಲ ನಾಗರಿಕರ ಬದುಕು ಹಸನುಗೊಳ್ಳಲು ಸಾಧ್ಯವಾಗುವಂತೆ ಹಲವು ಸಂಸ್ಥೆಗಳನ್ನು ಕಟ್ಟಿಕೊಂಡು, ಹಲವು ಸುಧಾರಣೆಗಳನ್ನು ತಂದುಕೊಂಡು, ಹಲವು ಕಾನೂನು ಕಟ್ಟಲೆಗಳನ್ನು ರಚಿಸಿಕೊಂಡು ಇವೆಲ್ಲಕ್ಕೂ ಬೆನ್ನೆಲುಬಾಗಿ ನಿಲ್ಲುವಂತೆ ಸಂವಿಧಾನವನ್ನು ರಚಿಸಿಕೊಂಡು ಸ್ವಲ್ಪಸ್ವಲ್ಪವೇ ಪ್ರಗತಿಯತ್ತ ನಡೆಯುತ್ತಿದ್ದಾಗ, ಆ ಪ್ರಗತಿಯ ರಥವನ್ನು ಕ್ರೌರ್ಯ ಮತ್ತು ಶೋಷಣೆಯ ವ್ಯವಸ್ಥೆಯೆಡೆಗೆ ಹಿಂದಿರುಗಿಸಲು ಶ್ರಮಿಸುತ್ತಿರುವ ಶಕ್ತಿಗಳು ರಣಕೇಕೆ ಹಾಕಿದ ಘಟನೆಗೆ 76ನೇ ಸ್ವಾತಂತ್ರ್ಯ ದಿನ ಸಾಕ್ಷಿಯಾಯಿತು. 2002ರಲ್ಲಿ ಬಿಲ್ಕಿಸ್ ಬಾನೋರನ್ನು ಅತ್ಯಾಚಾರ ಮಾಡಿ, ಮೂರು ವರ್ಷದ ಕೂಸನ್ನು ನೆಲಕ್ಕೆ ಜಜ್ಜಿ, ಆ ಕಂದನ್ನೂ ಸೇರಿದಂತೆ ಏಳು ಜನರನ್ನು ಕೊಲೆಗೈದು ಜೈಲುಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ವಿಕೃತರನ್ನು ಸ್ವಾತಂತ್ರ್ಯೋತ್ಸವದ ದಿನವೇ ಬಿಡುಗಡೆ ಮಾಡಿ ಅವರಿಗೆ ಸಿಹಿ ತಿನ್ನಿಸಿ ಗೌರವಿಸಿದ ಘಟನೆ, ಭಾರತವೆಂಬ ದೇಶ ಸಾಕಾರಗೊಂಡು ಈ ಸ್ಥಿತಿಗೆ ಬರಲು ನಡೆಸಿದ ನೂರಾರು ವರ್ಷಗಳ ಹೋರಾಟವನ್ನು ಮಣ್ಣುಪಾಲಾಗಿಸುವ ವಿದ್ಯಮಾನಕ್ಕೆ ಸಾಕ್ಷಿಯಾಗಿತ್ತು!

ಇಂದು ಎಷ್ಟೋ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಸುಳ್ಳು ಆರೋಪಗಳಿಗೆ ಬಲಿಯಾಗಿ ಸರಿಯಾದ ಸಮಯಕ್ಕೆ ವಿಚಾರಣೆ ನಡೆಯದೆ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಜೀವಸವೆಸುತ್ತಿದ್ದಾರೆ. ಇನ್ನು ಸ್ಟ್ಯಾನ್ ಸ್ವಾಮಿಯವರಂತೂ ಜೈಲಿನಲ್ಲಿಯೇ ಅಸುನೀಗಿದರು. ವರವರರಾವ್‌ರಂತಹ ವಿಚಾರವಾದಿಗಳು ಅನಾರೋಗ್ಯದ ನಡುವೆಯೂ ಜಾಮೀನು ಪಡೆಯಲು ದೀರ್ಘ ಹೋರಾಟವನ್ನೇ ನಡೆಸಬೇಕಾಯಿತು. ಸಿನಿಮೀಯ ಮಾದರಿಯಲ್ಲಿ ಪ್ರಭುತ್ವದಿಂದ ಆರೋಪ ಹೊರಿಸಿಕೊಂಡ ರಾಜಕೀಯ ಕೈದಿಗಳು, ಪ್ರತಿ ಬಾರಿ ಜಾಮೀನಿಗಾಗಿ ನ್ಯಾಯಾಲಯಕ್ಕೆ ಹೋದಾಗ, ಅವರಿಗೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಇದೇ ಸರ್ಕಾರಗಳು ನ್ಯಾಯಾಲಯಕ್ಕೆ ಹೇಳಿರುವ ಅಸಂಖ್ಯಾತ ಉದಾಹರಣೆಗಳಿವೆ. ತಾನು ಮಾಡಿರದ ಅಪರಾಧಕ್ಕೆ ಸುಳ್ಳುಸುಳ್ಳೇ ಆರೋಪ ಹೊರಿಸಿಕೊಂಡು 14 ವರ್ಷಗಳ ಕಾಲ ಸೆರೆಮನೆಯಲ್ಲಿದ್ದು ನಂತರ ಎಲ್ಲಾ 19 ಪ್ರಕರಣಗಳಲ್ಲಿ ಆರೋಪಮುಕ್ತರಾದವರು ಮೊಹಮದ್ ಅಮೀರ್ ಖಾನ್ ಅವರು. ಅವರು ಸೆರೆಮನೆಯಲ್ಲಿ ತಮಗೆ ನೀಡಲಾದ ಚಿತ್ರಹಿಂಸೆಯನ್ನು ’ಫ್ರೇಮ್ಡ್ ಆಸ್ ಎ ಟೆರರಿಸ್ಟ್’ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ದೇಶವೇ ತಲೆತಗ್ಗಿಸಬೇಕಿರುವ ಇಂತಹ ಅಸಂಖ್ಯಾತ ಪ್ರಕರಣಗಳಲ್ಲಿ ಇದು ಒಂದು ಉದಾಹರಣೆಯಷ್ಟೇ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಫಿಲ್ಮ್ಸಿ ಎನ್ನುವ ರೀತಿಯಲ್ಲಿ ಕರಾಳ ಕಾಯ್ದೆಗಳಡಿ ಆರೋಪಗಳನ್ನು ಎದುರಿಸುತ್ತಿರುವ ಚಿಂತಕರು ಜಾಮೀನು ಕೂಡ ಪಡೆಯಲಾಗದೆ ಹಿಂಸೆ ಅನುಭವಿಸುತ್ತಿರುವುದು ಇನ್ನೂ ಹಸಿಹಸಿಯಾಗಿಯೇ ಇದೆ.

ಹಾಗಾದರೆ, ಭೀಕರ ಅತ್ಯಾಚಾರ, ಮೂರು ವರ್ಷದ ಕಂದನನ್ನೂ ಸೇರಿದಂತೆ ಏಳು ಜನರನ್ನು ಹತ್ಯೆ ಮಾಡಿ ತಪ್ಪಿತಸ್ಥರೆಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 11 ಜನರು 14 ವರ್ಷದ ಸೆರೆಮನೆವಾಸದ ನಂತರ ಗುಜರಾತ್‌ನ ಬಿಜೆಪಿ ಸರ್ಕಾರದ ಕೃಪಾಕಟಾಕ್ಷದಿಂದ ಅಷ್ಟು ಸುಲಭವಾಗಿ ಬಿಡುಗಡೆಯಾಗುವುದು ಹೇಗೆ? ರೇಪ್ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಿ ಎಂದು ಬೊಬ್ಬಿಡುವ ಒಂದು ವರ್ಗ ಈ ಆರೋಪಿಗಳ ಬಿಡುಗಡೆಯನ್ನು ಸಣ್ಣಮಟ್ಟದಲ್ಲಿಯೂ ಪ್ರಶ್ನಿಸದೆ ಮೌನಕ್ಕೆ ಶರಣಾಗಿರುವುದೇಕೆ? ದೇಶದ ನಾಗರಿಕರ ಸಾಮೂಹಿಕ ಪ್ರಜ್ಞೆ ಈ ವಿಷಯದಲ್ಲಿ ಎಚ್ಚೆತ್ತುಕೊಂಡು ದೊಡ್ಡಮಟ್ಟದ ಪ್ರತಿರೋಧ ದಾಖಲಿಸಲು ಸೋತಿತೇಕೆ?

ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟವಲ್ಲದಿದ್ದರೂ, ಪರಿಹಾರ ಇಂದಿಗೆ ದುಸ್ತರವಾಗಿ ಕಾಣುತ್ತಿದೆ. ಈ ದೇಶವನ್ನು ಶತಮಾನಗಳಿಂದ ಹಾಳುಗೆಡವಿ ಶಿಥಿಲಗೊಳಿಸಿದ್ದ ಮನುಧರ್ಮಶಾಸ್ತ್ರದ ಅಪಾಯವನ್ನು ಮನಗಾಣಿಸಿ ಸಂವಿಧಾನವೇ ಈ ದೇಶ ಕಾಯುವ ಗ್ರಂಥವಾಗಬೇಕು ಎಂದು ಬಾಬಾಸಾಹೇಬರ ನೇತೃತ್ವದ ಸಂವಿಧಾನ ರಚನಾ ಸಮಿತಿ ಏನು ಆಶಿಸಿತ್ತೋ, ಆ ಆಶಯವನ್ನೇ ಬುಡಮೇಲು ಮಾಡುವ ಶಕ್ತಿಗಳು ಇಂದು ಅಧಿಕಾರದಲ್ಲಿ ರಾರಾಜಿಸುತ್ತಿವೆ. ಒಂದು ಕಾಲದಲ್ಲಿ ಗುಟ್ಟಾಗಿ ಅನುಷ್ಠಾನಗೊಳಿಸುತ್ತಿದ್ದ ತಮ್ಮ ಅಜೆಂಡಾವನ್ನು ಇಂದು ರಾಜಾರೋಷವಾಗಿಯೇ ಮಾಡಲು ಹೊರಟಿವೆ. ಇದನ್ನು ಪ್ರಶ್ನಿಸಬೇಕಿದ್ದ ಮುಖ್ಯವಾಹಿನಿ ಮಾಧ್ಯಮಗಳು ಮಾರಿಕೊಂಡು ಸಂವಿಧಾನಬಾಹಿರ ಶಕ್ತಿಗಳ ಕೈಗೊಂಬೆಗಳಾಗಿ ಹೋಗಿವೆ. ಇವಕ್ಕೆಲ್ಲಾ ಅಂತಿಮವಾಗಿ ತಡೆಹಾಕಬಹುದಿದ್ದ ನ್ಯಾಯಾಲಯಗಳು ಕೂಡ ಇಂದು ನಿರೀಕ್ಷಿತ ಮಟ್ಟದಲ್ಲಿ ಸಾಂವಿಧಾನಿಕ ನ್ಯಾಯದಾನವನ್ನು ಮಾಡಲು ವಿಫಲರಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ 11 ಜನ ಅತ್ಯಾಚಾರಿ ಮತ್ತು ಕೊಲೆಗಡುಕರನ್ನು ಬಿಡುಗಡೆ ಮಾಡಿದ ಸಮಿತಿಯಲ್ಲಿದ್ದುದು ಬಿಜೆಪಿಯ ಶಾಸಕರು, ಮುಖಂಡರು ಮತ್ತು ಅವರ ಮಾತು ಕೇಳುವ ಕೆಲವು ಅಧಿಕಾರಿಗಳು. ಬಿಡುಗಡೆಯ ನಂತರ ಗುಜರಾತಿನ ಗೋಧ್ರಾದ ಬಿಜೆಪಿ ಶಾಸಕ ರಾವೊಲ್ ಜಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆ ಇನ್ನೂ ಆಘಾತಕಾರಿಯಾದದ್ದು. ’ಬಿಡುಗಡೆಯಾದ ಆ ತಪ್ಪಿತಸ್ಥರಲ್ಲಿ ಕೆಲವರು ಬ್ರಾಹ್ಮಣರು ಮತ್ತು ಅವರು ಉತ್ತಮ ಸಂಸ್ಕಾರವಂತರು; ಅವರು ಜೈಲಿನಲ್ಲಿ ಉತ್ತಮ ನಡವಳಿಕೆ ಹೊಂದಿದ್ದರು’ ಎಂದು ಹೇಳಿ ಅವರ ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದರು. ಸಂವಿಧಾನದ ಬದಲಿಗೆ ಮನುಧರ್ಮಶಾಸ್ತ್ರವನ್ನು ಈ ದೇಶದಲ್ಲಿ ಹೇರಲು ಬಯಸುವ ಸಂಘಪರಿವಾರದ ಹುನ್ನಾರದಲ್ಲಿ ಈ ಕ್ರಮವೂ ಒಂದು ಅಡಿಗಲ್ಲಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಮನುಧರ್ಮಶಾಸ್ತ್ರ ಎಂಬ ಜೀವವಿರೋಧಿ ಹಿಂದೂ ಧರ್ಮಶಾಸ್ತ್ರದಲ್ಲಿ ಮಹಿಳೆಯರು ಮತ್ತು ಹಿಂದೂ ಶ್ರೇಣೀಕೃತ ಸಮಾಜದ ಕಟ್ಟಕಡೆಯಲ್ಲಿರುವವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲು ರಾಜನಿಗೆ ಬೋಧಿಸುವ ಹೇರಳ ಅಂಶಗಳಿವೆ. ಅಧ್ಯಾಯ 8, ಶ್ಲೋಕ 379 ಮತ್ತು 380 ಹೀಗೆ ಹೇಳುತ್ತವೆ: “ಬ್ರಾಹ್ಮಣನನ್ನು ತಲೆ ಬೋಳಿಸಿ ಬಿಡುವುದು ಲಜ್ಜಾಕರವಾಗಿ ಮರಣದಂಡನೆಗೆ ಸಮಾನವು. ಇತರರಿಗೆ ಮರಣದಂಡನೆಯು”, “ಯಾವ ತಪ್ಪಿಗೂ ಬ್ರಾಹ್ಮಣನಿಗೆ ಮರಣದಂಡನೆಯಿಲ್ಲ. ಅವನನ್ನು ಧನಸಹಿತವಾಗಿ, ದೇಹವನ್ನು ಪೀಡಿಸದೆ ಓಡಿಸಿಬಿಡುವುದು ಪರಮಾವಧಿ ದಂಡವು”. ಹೀಗೆ ಬ್ರಾಹ್ಮಣರ ಯಾವ ಅಪರಾಧವನ್ನೂ ಮನ್ನಿಸಿಬಿಡುವ ತಾರತಮ್ಯದ ತಳಹದಿಯ ಮನುಧರ್ಮಶಾಸ್ತ್ರದ ಅನುಷ್ಠಾನಕ್ಕಾಗಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳಲ್ಲಿ 11 ಜನ ಅತ್ಯಾಚಾರಿ ಮತ್ತು ಕೊಲೆಗಡುಕರ ಬಿಡುಗಡೆ ನಾಂದಿಯೆಂಬಂತೆ ಕಂಡು ಭೀತಿ ಹುಟ್ಟಿಸುವಂತಿದೆ.

ಇತ್ತೀಚೆಗಷ್ಟೆ ದೆಹಲಿ ಹೈಕೋರ್ಟ್ ಜಡ್ಜ್ ಪ್ರತಿಭಾ ಎಂ ಸಿಂಗ್ ಅವರು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮನುಸ್ಮೃತಿ ಭಾರತೀಯ ಮಹಿಳೆಯರಿಗೆ ಗೌರವಯುತ ಸ್ಥಾನವನ್ನು ನೀಡುತ್ತದೆಂದು ಹೇಳಿದ್ದು ಈ ದೇಶದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿತ್ತು. ಮನುಸ್ಮೃತಿಯ ಐದನೇ ಅಧ್ಯಾಯದ 147, 148ನೇ ಶ್ಲೋಕಗಳನ್ನು ನೋಡಿ: “ಹುಡುಗಿ, ಯುವತಿ, ಮುದುಕಿ ಅಥವಾ ಹೆಂಗಸು ಮನೆಯಲ್ಲಿ ತನ್ನ ಯಜಮಾನನನ್ನು ಕೇಳದೆ, ಸ್ವತಂತ್ರವಾಗಿ ಯಾವ ಕೆಲಸವನ್ನೂ ಮಾಡಕೂಡದು”, “ಹೆಂಗಸು ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಅವನಿಲ್ಲದಿದ್ದರೆ ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಬಾಳಬಹುದು. ಸ್ವತಂತ್ರಳಾಗುವ ಅವಶ್ಯವಿಲ್ಲ ಎನ್ನುತ್ತದೆ. ಹೀಗೆ ಮಹಿಳೆಯರನ್ನು ಅತಿ ತುಚ್ಛವಾಗಿ ಕಂಡಿರುವ ಮನುಸ್ಮೃತಿಯ ಬಗ್ಗೆ ಆರಾಧನಾಭಾವ ಹೊಂದಿರುವ ಮಹಿಳಾ ನ್ಯಾಯಾಧೀಶರ ಹೇಳಿಕೆ ನಮ್ಮ ನ್ಯಾಯವ್ಯವಸ್ಥೆಯ ಒಂದು ವರ್ಗವನ್ನಾದರೂ ಪ್ರತಿನಿಧಿಸುವುದನ್ನು ಸೂಚಿಸುತ್ತದ್ದಲ್ಲವೇ?

ಮತ್ತೊಂದು ಸಂವಿಧಾನಬಾಹಿರ ಅಘಾತಕಾರಿ ವಿದ್ಯಮಾನದಲ್ಲಿ ಕೆಲವು ಸ್ವಾಮೀಜಿಗಳ ಹೆಸರಿನ ಕೋಮುಕ್ರಿಮಿಗಳು ಸೇರಿಕೊಂಡು ಹಿಂದೂ ರಾಷ್ಟ್ರಕ್ಕಾಗಿ ಹೊಸ ಸಂವಿಧಾನವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅದರಲ್ಲಿ ಹಿಂದೂಗಳಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ ಎಂದು ಕೂಡ ಸಾರಿದ್ದಾರೆ. ಬೇರೆ ಯಾವ ಸಮಯವಾಗಿದ್ದರೂ, ಈಗ ಪ್ರಚಲಿತದಲ್ಲಿರುವ ಸಂವಿಧಾನಕ್ಕೆ ಸೆಡ್ಡು ಹೊಡೆದಿರುವ ಈ ಗುಂಪನ್ನು ಬಂಧಿಸಿ ಅವರ ಮೇಲೆ ಕ್ರಮ ಜರುಗಿಸಬೇಕಿತ್ತು. ಇದು ಭಾರತದ ಸಾರ್ವಭೌಮತ್ವಕ್ಕೆ ಒಡ್ಡಿದ ಆತಂಕ ಎಂದೇ ಪರಿಗಣಿತವಾಗಬೇಕಿತ್ತು. ಆದರೆ ಇಂದಿನ ಪ್ರಭುತ್ವ ಇದಕ್ಕೆ ಮುಖ ತಿರುಗಿಸಿ ಕೂತಿದೆ. ಒಳಗೊಳಗೆ ಸಂತಸವನ್ನೂ ಅನುಭವಿಸುತ್ತಿರಲಿಕ್ಕೆ ಸಾಕು! ಇನ್ನು ಈ ಹಿಂದೂ ರಾಷ್ಟ್ರದ ಸಂವಿಧಾನವನ್ನು ರಚಿಸಿಕೊಂಡಿರುವವರನ್ನು ಸಂತರು ಹಿಂದೂ ಪಂಡಿತರು ಎಂದೆಲ್ಲಾ ಮಾಧ್ಯಮಗಳು ಕೋಟ್ ಮಾಡುತ್ತಿವೆ. ಅಸಲಿಯಲ್ಲಿ ಜೀವವಿರೋಧಿ ಕೋಮು ಕ್ರಿಮಿ ಕ್ರಿಮಿನಲ್‌ಗಳಾದ ಈ ಮನುಷ್ಯರನ್ನು ಮುಜುಗರಕ್ಕೀಡುಮಾಡುವಂತೆ ಪ್ರಶ್ನಿಸಬೇಕಾದ ಕೆಲಸವನ್ನು ಮಾಧ್ಯಮಗಳು ಮಾಡಬೇಕಿತ್ತು!

ಹೀಗೆ ದೇಶದೆಲ್ಲೆಡೆ ಪ್ರಗತಿ ರಥವನ್ನು ಮನುಧರ್ಮಶಾಸ್ತ್ರದ ಹೀನಕಾಲಕ್ಕೆ ಕೊಂಡೊಯ್ಯಲು ಬ್ರಾಹ್ಮಣ್ಯ ಶಕ್ತಿಗಳು ಹವಣಿಸುತ್ತಿವೆ. ಶೂದ್ರ, ಹಿಂದುಳಿದ ಹಾಗು ದಲಿತ ಸಮುದಾಯಗಳ ನಂಬಿಕೆ ಮತ್ತು ಆಚರಣೆಗಳನ್ನು ಅಪರಾಧೀಕರಣಗೊಳಿಸುವ ಪ್ರಕ್ರಿಯೆಗಳು ಕೂಡ ಹಲವೆಡೆ ಜಾರಿಯಲ್ಲಿವೆ. ಇನ್ನು ಅಲ್ಪಸಂಖ್ಯಾತ ಮತಧರ್ಮಗಳ ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಫ್ಯಾಸಿಸ್ಟ್ ಆಡಳಿತ ಶ್ರಮಿಸುತ್ತಿದೆ. ಅತ್ಯಾಚಾರಿ ಮತ್ತು ಕೊಲೆಗಡುಕರ ಬಿಡುಗಡೆ ಇದನ್ನೆಲ್ಲಾ ಇನ್ನಷ್ಟು ದೊಡ್ಡದು ಮಾಡುವ ಸೂಚನೆಯನ್ನು ನಾಗರಿಕರಿಗೆ ನೀಡಿದೆ!

* ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...