“ಕಾನೂನು ಎಲ್ಲರಿಗೂ ಒಂದೇ. ಈ ನೆಲದ ಕಾನೂನುಗಳನ್ನು ಗೌರವಿಸುತ್ತೇವೆ. ಈ ನೆಲದ ಕಾನೂನನ್ನು ಅರ್ಥಮಾಡಿಕೊಳ್ಳಬೇಕು” ಎಂದು ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಹೇಳಿದರು.
ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶಿವಮೂರ್ತಿ ಮುರುಘಾ ಶರಣರು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆಂಬ ವದಂತಿ ಹಬ್ಬಿತ್ತು. ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ಸುದ್ದಿಬಂದಿತು. ಮಠಕ್ಕೆ ಮರಳಿದ ಸ್ವಾಮೀಜಿಯವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಮಠದಲ್ಲಿ ಜಮಾಯಿಸಿದ್ದ ಭಕ್ತರು ಮುರುಘಾ ಶರಣರ ಪರ ಘೋಷಣೆಗಳನ್ನು ಕೂಗಿದರು. ಕಾರಿನಿಂದ ಇಳಿದು ಮಠದ ಮಹಡಿಯನ್ನು ಏರಿದ ಬಳಿಕ ಮೈಕ್ ಹಿಡಿದು ಸ್ವಾಮೀಜಿ ಮಠದ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಅದನ್ನು ಗೌರವಿಸುತ್ತೇನೆ. ಪಲಾಯನವಾದ ಮಾಡುವುದಿಲ್ಲ. ಎಲ್ಲ ತನಿಖೆಗೂ ಸಹಕಾರ ಕೊಡುತ್ತೇವೆ. ಕಾನೂನಿಗೆ ಗೌರವ ಕೊಡುತ್ತೇವೆ. ಊಹಾಪೋಹಗಳಿಗೆ ಅವಕಾಶ ಇಲ್ಲ” ಎಂದು ತಿಳಿಸಿದರು.
#murugamutt swamiji addressing his supporters at his ashram in #Chitradurga. Says- he is law abiding citizen and will co-operate with the agencies. pic.twitter.com/PngDvN57lF
— Imran Khan (@KeypadGuerilla) August 29, 2022
“ಶ್ರೀ ಮಠದ ಅಸಂಖ್ಯಾತ ಭಕ್ತರು, ಅಭಿಮಾನಿಗಳು ಊಹಾಪೋಹಗಳನ್ನು, ಗಾಳಿ ಸುದ್ದಿಗಳನ್ನು ನಂಬಬಾರದು. ಈ ನೆಲದ ಕಾನೂನಿಗೆ ಬೆಲೆ ಕೊಡಬೇಕು. ಒಂದು ಕಾಲದಲ್ಲಿ ಮುರುಘಾ ಮಠ ಚಲಿಸುವ ನ್ಯಾಯಾಲಯವಾಗಿತ್ತು” ಎಂದರು.
“ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲ ಜನಾಂಗದವರನ್ನು, ಎಲ್ಲಾ ವರ್ಗದವರನ್ನು, ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡಿದ್ದೇವೆ. ಒಂದು ಅಹಿತಕರವಾದ ಬೆಳವಣಿಗೆಯಾಗಿದೆ. ಅದರಿಂದ ಹೊರಗಡೆ ಬಂದೇ ಬರುತ್ತೇನೆ. ಎಲ್ಲರಿಗೆ ಶುಭವಾಗಲಿ” ಎಂದು ಆಶಿಸಿದರು.
“ಪ್ರವಾಹೋಪಾದಿಯಲ್ಲಿ ಜನರು ಮಠಕ್ಕೆ ಬರುತ್ತಾರೆ. ಮೊನ್ನೆಯಿಂದಲೂ ಲಕ್ಷೋಪಲಕ್ಷ ಜನರು ಮಠಕ್ಕೆ ಬರುತ್ತಿರುವುದು ಅತೀವ ಧೈರ್ಯವನ್ನು ಉಂಟು ಮಾಡಿದೆ. ಕಾನೂನುನನ್ನು ಗೌರವಿಸೋಣ. ಇಂತಹದೊಂದು ಅಭಿಮಾನದ ಚಿಲುಮೆ ಚುಮ್ಮಲು ಕಾರಣವಾದವರಿಗೂ ಧನ್ಯವಾದಗಳನ್ನು ಹೇಳುತ್ತೇವೆ. ಅಭಿಮಾನವನ್ನು ಜಾಗೃತಿಗೊಳಿಸಿದ್ದೇವೆ” ಎಂದು ಅಭಿಪ್ರಾಯಪಟ್ಟರು.
ಸ್ವಾಮೀಜಿಯವರನ್ನು ಪೊಲೀಸರು ಬಂಧಿಸಿಲ್ಲ: ಸ್ಪಷ್ಟನೆ
ಪೋಕ್ಸೋ ಪ್ರಕರಣದ ಅಡಿಯಲ್ಲಿ ಮುರುಘ ಶರಣರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಪೊಲೀಸರು ಬಂಧಿಸಿಲ್ಲ, ಆದರೆ ವಶಕ್ಕೆ ಪಡೆದು ಮಠಕ್ಕೆ ವಾಪಸ್ ಕರೆತಂದಿದ್ದಾರೆಂದು ವರದಿಯಾಗಿದೆ.
ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಮಠಕ್ಕೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೂ ಯಾಕಿನ್ನೂ ಸ್ವಾಮೀಜಿಯ ಬಂಧನವಾಗಿಲ್ಲ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಅವರನ್ನು ಭಾನುವಾರ ಪ್ರಶ್ನಿಸಿದಾಗ, ‘ತನಿಖೆಯಾಗುತ್ತಿದೆ. ಕ್ರಮ ಜರುಗಿಸುತ್ತೇವೆ’ ಎಂದಿದ್ದರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಯಾವಾಗ ಬಂಧಿಸುತ್ತೀರಿ? ಪೋಕ್ಸೋ ಪ್ರಕರಣದಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕಲ್ಲ, ಬೇರೆಯವರಾಗಿದ್ದರೆ ಹೀಗೆಯೇ ವಿಳಂಬವಾಗುತ್ತಿತ್ತೇ ಎಂದು ಕೇಳಿದರೆ, “ಆರೋಪಗಳನ್ನು ಪರಿಶೀಲನೆ ಮಾಡಬೇಕು. ಏಕಾಏಕಿ ಬಂಧಿಸಲು ಆಗುವುದಿಲ್ಲ. ತನಿಖೆ ನಡೆಸುತ್ತಿದ್ದೇವೆ. ಮೈಸೂರಿನಿಂದ ನಿನ್ನೆಯಷ್ಟೇ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ” ಎಂದು ತಿಳಿಸಿದ್ದರು.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಚಿಂತಕ ಸಿ.ಕೆ.ಮಹೇಶ್, “ಪೋಕ್ಸೋ ಪ್ರಕರಣ ದಾಖಲಾಗಿದೆ. ಸ್ವಾಮೀಜಿಯಾಗಲೀ, ಮತ್ತೆ ಯಾವನೇ ಆಗಿರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇದು ಮಠಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಮನುಷ್ಯನಿಗೆ ಅನ್ವಯವಾಗುವ ಕಾನೂನು ಈ ದೇಶದ ಪ್ರಭಾವಿಗೂ ಅನ್ವಯವಾಗುತ್ತದೆ” ಎಂದಿದ್ದಾರೆ.
“ಬುದ್ಧನ ಮೇಲೆ ಬ್ರಾಹ್ಮಣರು ಆರೋಪಗಳನ್ನು ಮಾಡಿದಾಗ ಸ್ವಯಃ ಬುದ್ಧ ಗುರುವೇ ತನಿಖೆಗೆ ಒಳಗಾಗುತ್ತಾರೆ. ತನಿಖೆಯಾದ ಬಳಿಕ ಹೊರಗೆ ಬರುತ್ತಾರೆ. ಬುದ್ಧನ ಬಗ್ಗೆ ಮಾತನಾಡುವ ಮುರುಘಾ ಶರಣರು, ತನಿಖೆಗೆ ಒಳಗಾಗಬೇಕು. ನೀವು ಎಷ್ಟೇ ಶುದ್ಧರಾಗಿರಿ, ಪ್ರಾಮಾಣಿಕರಾಗಿರಿ, ಆ ಸರ್ಟಿಫಿಕೇಟ್‌ಗಳನ್ನು ನೀವಾಗಿಯೇ ತೆಗೆದುಕೊಳ್ಳಬಾರದು. ನಿಮ್ಮ ಕ್ರಿಯೆಗಳನ್ನು ಗುರುತಿಸಿದ ಬಳಿಕ ಜನರು ಆ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಬೇಕು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಗತಿಪರ ಚಿಂತಕ ಶಿವಣ್ಣ, “ಅಂಬೇಡ್ಕರ್ ಕೊಟ್ಟ ಸಂವಿಧಾನ ಉಳಿಯಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸ್ವಾಮೀಜಿ ಬಂಧನಕ್ಕೆ ಒಳಗಾಗಬೇಕು. ಇದಕ್ಕಾಗಿ ದಲಿತ ಶೋಷಿತರ ಬಳಗದಿಂದ ಹೋರಾಟ ರೂಪಿಸುತ್ತಿದ್ದೇವೆ” ಎಂದು ಸೂಚನೆ ನೀಡಿದ್ದಾರೆ.
ಅಟ್ರಾಸಿಟಿ ಪ್ರಕರಣ ದಾಖಲಿಸಲು ಆಗ್ರಹ
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ಕೇವಲ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ ಇವರ ವಿರುದ್ಧ ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿರಿ: ಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ
ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಪೋಕ್ಸೋ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವಾಮೀಜಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಲಿ ಎಂದು ಚಿತ್ರದುರ್ಗದಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.
ಭಾನುವಾರ ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಚಳ್ಳಕೆರೆಯ ಮಾಜಿ ಪುರಸಭಾ ಸದಸ್ಯ ಶಿವಮೂರ್ತಿ ಮಾತನಾಡಿ, “ಈ ಪ್ರಕರಣದಲ್ಲಿ ಸ್ವಾಮೀಜಿಯ ವಿರುದ್ಧ ಪರಿಶಿಷ್ಟ ಜಾತಿಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಸದರಿ ಪ್ರಕರಣದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು ಸಂತ್ರಸ್ತೆಯಾಗಿದ್ದಾರೆ. ಈ ಪೊಲೀಸರಿಂದ, ಜಿಲ್ಲಾಧಿಕಾರಿಗಳಿಂದ ಏನೂ ಆಗುವುದಿಲ್ಲ. ಲಿಂಗಾಯತರ ಸರ್ಕಾರ ರಾಜ್ಯದಲ್ಲಿದೆ. ನ್ಯಾಯಾಂಗ ತನಿಖೆಯಾಗಬೇಕು” ಎಂದಿದ್ದಾರೆ.


