ಅಪ್ರಾಪ್ತ ಬಾಲಕಿಯರಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಇಂದು (ಗುರುವಾರ) ಸಂಜೆಯಿಂದಲೇ ಮಠದಲ್ಲಿ ಸ್ವಾಮೀಜಿಯ ವಿಚಾರಣೆಗಳನ್ನು ನಡೆಸಿದ್ದ ಚಿತ್ರದುರ್ಗ ಗ್ರಾಮೀಣ ಠಾಣೆಯ ಪೊಲೀಸರು, ರಾತ್ರಿ 10ರ ಸುಮಾರಿಗೆ ಮಠದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
‘ಮುರುಘಾ ಶರಣರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದೇವೆ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
ಫೋಕ್ಸೋ ಪ್ರಕರಣ ದಾಖಲಾಗಿ ಆರು ದಿನಗಳ ಬಳಿಕ ಪೊಲೀಸರು ಮುರುಘಾ ಶರಣರನ್ನು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಬೆಳವಣಿಗೆಯ ಮಧ್ಯೆ ಚಿತ್ರದುರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈಸೂರು ‘ಒಡನಾಡಿ’ ಸಂಸ್ಥೆ ಪ್ರಕರಣವನ್ನು ಹೊರಗೆಳೆದ ಮೇಲೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಆಗಸ್ಟ್ 26ರಂದು ನಗರದ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣವು ಚಿತ್ರದುರ್ಗ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಂಧನದ ಭೀತಿಯಲ್ಲಿದ್ದ ಮುರುಘಾ ಶರಣರು, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಶುಕ್ರವಾರಕ್ಕೆ ಮುಂದೂಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಸಂಜೆ ವೇಳೆಗೆ ಎಲ್ಲ ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿತ್ತು. ಸ್ವಾಮೀಜಿ ವಿರುದ್ಧ ಪೋಕ್ಸೋ ಜೊತೆಗೆ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯೂ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಮುರುಘಾ ಶರಣರ ಸಲುವಾಗಿಯೇ ಕಳೆದ ಮೂರು ದಿನಗಳಿಂದ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಅದೇ ವಾರ್ಡ್‌ನಲ್ಲಿ ಶರಣರನ್ನು ದಾಖಲಿಸಲಾಗುತ್ತದೆ ಎಂದು ತಿಳಿದುಬಂದಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.
ಆರೋಪಿಯನ್ನು ಬಂಧಿಸುವಲ್ಲಿ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ‘ಸ್ವಾಮೀಜಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯವೇ?’ ಎಂಬ ಪ್ರಶ್ನೆಯನ್ನು ಜನರು ಕೇಳಲಾರಂಭಿಸಿದ್ದರು. “ತನಿಖೆ ನಡೆಯುತ್ತಿದೆ. ಸೂಕ್ತ ಸಾಕ್ಷಿಗಳು ಸಿಕ್ಕ ತಕ್ಷಣ ಮುರುಘಾ ಶರಣರನ್ನು ಬಂಧಿಸುತ್ತೇವೆ” ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು.
ಬಿಲ್ಕಿಸ್ ಬಾನು ಅವರನ್ನು ಅತ್ಯಾಚಾರ ಮಾಡಿದ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಹಾಗೂ ಮುರುಘಾ ಶರಣರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಾಳೆ (ಶುಕ್ರವಾರ) ರಾಜ್ಯಾದ್ಯಂತ ಪ್ರತಿಭಟನೆಗಳನ್ನೂ ಹಲವು ಸಂಘಟನೆಗಳು ಕೈಗೊಂಡಿದ್ದವು.



ಈತನ ಬಂಧನ ಆಗದೆ ಹೋಗಿದ್ರೆ ಆ ಪೊಲೀಸ್ನವರ ಇನ್ಸ್ಪೆಕ್ಟರ್ ,ಡಿ ಎಸ್ ಪಿ, ಎಸ್ ಪಿ, ಅವರ ಗುತ್ತಿಗೆಗೆ ಬರ್ತದಲ್ಲ ಅದಕ್ಕೆ ಬಂಧಿಸಿದ್ದಾರೆ