ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಎದೆ ನೋವು ಕಾರಣದಿಂದ ಬೆಂಗಳೂರಿಗೆ ಶಿಫ್ಟ್ ಮಾಡುವುದಕ್ಕೆ ಚಿತ್ರದುರ್ಗದ ನ್ಯಾಯಾಲಯ ಕಿಡಿಕಾರಿದೆ.
ತಮ್ಮ ಅನುಮತಿಯಿಲ್ಲದೆ ಅವರನ್ನು ಜಿಲ್ಲಾಸ್ಪತ್ರೆಗೆ ಹೇಗೆ ದಾಖಲು ಮಾಡಲಾಯಿತು ಎಂಬುದಕ್ಕೆ ವಿವರಣೆ ನೀಡಬೇಕೆಂದು ಜೈಲು ಅಧಿಕಾರಿಗಳಿಗೆ ಚಿತ್ರದುರ್ಗದ 2ನೇ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ ಕೋಮಲಾರವರು ತಾಕೀತು ಮಾಡಿದ್ದಾರೆ. ಅಲ್ಲದೇ ಮುರುಘಾ ಶರಣರನ್ನು ಯಾವ ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಆರೋಪಿಯನ್ನು ಖುದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಿದ್ದಾರೆ.
ಕೋರ್ಟ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆಯಲ್ಲಿ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆ ನಂತರ ಆರೋಪಿಯನ್ನು ಮೂರು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಅತ್ತ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲು ನ್ಯಾಯಾಲಯ ಒಪ್ಪದಿದ್ದಾಗ ಮುರುಘಾ ಶರಣರನ್ನು ಚಿತ್ರದುರ್ಗದ ಆಸ್ಪತ್ರೆಯಲ್ಲಿ ಐಸಿಯು ಘಟಕಕ್ಕೆ ದಾಖಲಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಪೋಕ್ಸೊ ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು ಬಂಧಿಸಲಾಗಿತ್ತು. ಎಲ್ಲಾ ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಅದರಂತೆ ಬೆಳಗ್ಗಿನ ಜಾವ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಬಂಧೀಖಾನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಪದೇ ಪದೇ ಎದೆ ನೋವು ಎಂದು ಹೇಳಿದ್ದರು. ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿಸಲಾಗಿತ್ತು. ಆನಂತರ ಇಸಿಜಿ ಮಾಡಿಸಲಾಗಿತ್ತು ಎಂದು ವರದಿಯಾಗಿದೆ.
ಮೌನಮುರಿದ ಸಿದ್ದರಾಮಯ್ಯ
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಾದರೂ ಪ್ರತಿಪಕ್ಷಗಳು ಹಾಗೂ ಅವುಗಳ ನಾಯಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಆರೋಪಗಳು ಬಂದಿದ್ದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನು ಮೊದಲು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಪ್ರಕರಣವನ್ನು ಖಂಡಿಸಿದ್ದರು.
“ಮುರುಘಾ ಮಠದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ನನ್ನಲ್ಲಿ ಏಕ ಕಾಲಕ್ಕೆ ನೋವು ಮತ್ತು ದಿಗ್ಭ್ರಮೆಯನ್ನು ಉಂಟು ಮಾಡಿದೆ. ಈ ಪ್ರಕರಣದಲ್ಲಿ ಮಠದ ಶ್ರೀಗಳು ತಮ್ಮ ಮೇಲಿನ ಪಿತೂರಿಯ ಬಗ್ಗೆ ಪ್ರಸ್ತಾಪಿಸಿದ್ದು ಈ ನೆಲದ ಕಾನೂನನ್ನು ಗೌರವಿಸುತ್ತೇನೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದಲ್ಲಿ ಹೆಚ್ಚಿನ ಗೌರವ ಹೊಂದಿರುವ ಮಠ ಮಾನ್ಯಗಳ ಮೇಲಿನ ನಂಬಿಕೆ ಮತ್ತು ಅವುಗಳ ಮೇಲಿನ ಜನರ ವಿಶ್ವಾಸದ ಉಳಿವು ಹಾಗೂ ಆ ಹೆಣ್ಣು ಮಕ್ಕಳ ದೌರ್ಜನ್ಯದ ವಿಷಯದಲ್ಲಿ ಕಾನೂನು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಪ್ರಜ್ಞೆಯನ್ನು ಎತ್ತಿ ಹಿಡಿಯಲಿ ಎಂದು ಈ ವೇಳೆ ಮನದುಂಬಿ ವಿನಂತಿಸುತ್ತೇನೆ” ಎಂದು ಮಹದೇವಪ್ಪ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ: ಮೌನಮುರಿದ ಸಿದ್ದರಾಮಯ್ಯ


