Homeಕರ್ನಾಟಕಮನುಷ್ಯರಾದವರು ಈ ಕೆಲಸ ಮಾಡುವುದಿಲ್ಲ: ಬೆಂಗಳೂರಿನಲ್ಲಿ ಮುರುಘಾ ಶರಣರ ವಿರುದ್ಧ ಆಕ್ರೋಶ

ಮನುಷ್ಯರಾದವರು ಈ ಕೆಲಸ ಮಾಡುವುದಿಲ್ಲ: ಬೆಂಗಳೂರಿನಲ್ಲಿ ಮುರುಘಾ ಶರಣರ ವಿರುದ್ಧ ಆಕ್ರೋಶ

- Advertisement -
- Advertisement -

“ವಿದ್ಯಾಭ್ಯಾಸಕ್ಕಾಗಿ ತಬ್ಬಲಿ ಹಾಗೂ ಅನಾಥಮಕ್ಕಳು ಮಠಕ್ಕೆ ಸೇರಿದ್ದರು. ಮಕ್ಕಳನ್ನು ಲೈಂಗಿಕ ತೃಷೆಗಾಗಿ ಬಳಸಿರುವುದು ಅತ್ಯಂತ ಹೇಯಕೃತ್ಯ. ಈ ಕೆಲಸವನ್ನು ಮನುಷ್ಯರಾದವರು ಮಾಡುವುದಿಲ್ಲ” ಎಂದು ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್‌ ಹೇಳಿದರು.

ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರನ್ನು ಜೈಲಿಗೆ ಕಳುಹಿಸುವಂತೆ ಆಗ್ರಹಿಸಿ, ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಯ ವೇಳೆ ಅವರು ಮಾತನಾಡಿದರು.

ಮಠಾಧೀಶರ ನೈತಿಕತೆ ಬಹಳ ಹೀನಾಯ ಸ್ಥಿತಿಗೆ ತಲುಪಿದೆ. ಮಠಗಳು ಎಂದರೆ ಜಾತೀವಾದಿ ರಾಜಕೀಯ ಕೇಂದ್ರಗಳಾಗಿವೆ. ಒಳ್ಳೆಯ ಸ್ವಾಮೀಜಿಗಳಿರಬಹುದು. ಆದರೆ ಬಹುತೇಕ ಮಠಗಳು ರಾಜಕೀಯದ ಆಡಂಬೊಲ ಆಗಿವೆ. ತಳ ಸಮುದಾಯಗಳನ್ನು ತುಳಿಯುವ ಕೆಲಸಕ್ಕೆ ಈ ಮಠಗಳನ್ನು ಬಳಸುತ್ತಿದ್ದಾರೆ ಎಂದು ವಿಷಾದಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದುರಂತವೇನೆಂದರೆ ಇಡೀ ಬಿಜೆಪಿಯ ರಾಜಕೀಯ ಧುರೀಣರು, ಸರ್ಕಾರ, ಪೊಲೀಸರು ನಡೆಸಿಕೊಂಡಿರುವ ರೀತಿ ಸಂವಿಧಾನವನ್ನು ಅಪಮಾನ ಮಾಡುವಂತಿದೆ. ಕಾನೂನು ಎಲ್ಲರಿಗೂ ಒಂದೇ ಎನ್ನುತ್ತಾರೆ. ಆದರೆ ಒಬ್ಬ ಮಠಾಧೀಶನನ್ನು ಬಂಧಿಸಲು ಇಷ್ಟು ದಿನ ಕಾಯಬೇಕಾಯಿತು. ಸಾಮಾನ್ಯ ಜನರಾಗಿದ್ದಾರೆ ಒದ್ದು ಒಳಗಡೆ ಹಾಕುತ್ತಾರೆ. ಆದರೆ ಒಬ್ಬ ಹೈ ಪ್ರೊಫೈಲ್‌  ಸ್ವಾಮೀಜಿಯನ್ನು ಬಂಧಿಸಬೇಕು ಅಂದರೆ ದಿನಗಟ್ಟಲೆ ತೆಗೆದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾವಳ್ಳಿ ಶಂಕರ್‌

ಬಡವರನ್ನು ನೋಡಿದರೆ ಕಾನೂನು ಹೂಂಕರಿಸುತ್ತದೆ. ಶ್ರೀಮಂತರನ್ನು ನೋಡಿದರೆ ಮಂಡಿಯೂರುತ್ತೆ. ಇದಾಗಬಾರದು. ಈಗ ಸ್ವಾಮೀಜಿಯ ಬಂಧನವಾಗಿದೆ. ಕಾನೂನಿನ ಪ್ರಕ್ರಿಯೆ ನಡೆಯಲಿ. ಅದರಿಂದ ಎಸ್‌.ಐ.ಟಿ. ರಚನೆಯಾಗಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ತನಿಖೆ ಹೊರರಾಜ್ಯದಲ್ಲಿ ನಡೆಯಬೇಕು. ತಮಿಳುನಾಡು ಅಥವಾ ಕೇರಳಕ್ಕೆ ವರ್ಗಾವಣೆ ಆಗಬೇಕು. ರಾಜ್ಯದಲ್ಲಿ ತನಿಖೆಯಾದರೆ ಅದರ ಮೇಲೆ ಪ್ರಭಾವ ಬೀರುವ ಎಲ್ಲ ಹುನ್ನಾರಗಳನ್ನು ಇವರು ಮಾಡುತ್ತಾರೆ. ಆದ್ದರಿಂದ ಇಡೀ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಬಿಲ್ಕಿಸ್ ಬಾನೋ ಪ್ರಕರಣದ ತನಿಖೆ ಹೊರರಾಜ್ಯದಲ್ಲಿ ಆದ ಕಾರಣ ಅಪರಾಧಿಗಳಿಗೆ ಶಿಕ್ಷೆಯಾಯಿತು. ಒಂದು ವೇಳೆ ಗುಜರಾತ್‌ನಲ್ಲಿಯೇ ಪ್ರಕರಣ ತನಿಖೆಯಾಗಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಮುರುಘಾ ಮಠದ ಬಾಲಕಿಯರ ಅತ್ಯಾಚಾರ ಪ್ರಕರಣ: 2ನೇ ಆರೋಪಿ ವಾರ್ಡನ್‌ ರಶ್ಮಿ ಬಂಧನ

ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಹೊರಗೆ ಬಿಡಲಾಗಿದೆ. ನ್ಯಾಯಾಂಗವೂ ಇದಕ್ಕೆ ಇಂಬು ಕೊಡುತ್ತಿದೆ ಅನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ ಭಾಷಣ ಮಾಡಿದ ದಿನವೇ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಯಿತು ಎಂದರು.

ಕೃತಿಯಲ್ಲಿ ಹೆಸರು ತೆಗೆದುಹಾಕಿ: ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, “ಪಶ್ಚಾತ್ತಾಪದಲ್ಲಿ ನರಳುವಂತಹ ಸ್ಥಿತಿ ನನಗೆ ಬಂದಿದೆ. ಆ ಮಠ ಹೊರತಂದ ‘ವಚನ ಮಾರ್ಗ’ ಎಂಬ ಪುಸ್ತಕಕ್ಕೆ ನಾನು ಸಂಪಾದಕನಾಗಿದ್ದೆ. ಇದಕ್ಕೆ ನನಗೆ ಸಂಕೋಚ ಹಾಗೂ ಪಶ್ಚಾತ್ತಾಪವಾಗುತ್ತಿದೆ” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿದರು.

“ಈ ಕೃತಿಯ ಸಂಪಾದಕರಾಗಿದ್ದವರು ನಮ್ಮೆಲ್ಲರ ಪೂಜ್ಯರಾಗಿದ್ದ ಎಂ.ಎಂ.ಕಲ್ಬುರ್ಗಿಯವರು. ಅಂತಹ ಪೂಜ್ಯರು ನಿರ್ವಹಿಸುತ್ತಿದ್ದ ಕಾರ್ಯ ನಿಂತುಹೋಗಿತ್ತು. ಆ ಜಾಗಕ್ಕೆ ಬರಬೇಕೆಂದು ಮರುಘಾ ಶರಣರು ನನ್ನನ್ನು ಕರೆದರು. ಕಲ್ಬುರ್ಗಿಯವರ ಮೇಲಿನ ಗೌರವದ ಕಾರಣಕ್ಕೆ ನಾನು ಕೆಲಸ ಮಾಡಿದೆ. ತುಂಬಾ ಸೊಗಸಾಗಿ ಕೃತಿ ಬಂದಿದ್ದರ ಬಗ್ಗೆ ಗೌರವವಿದೆ. ಆದರೆ ಇಂತಹ ಒಬ್ಬ ವ್ಯಕ್ತಿಯ ಆಶ್ರಯದಲ್ಲಿ ಕೃತಿ ಬರಬೇಕಾಯಿತಲ್ಲ ಎಂಬ ಪಶ್ಚಾತ್ತಾಪ ನನ್ನನ್ನು ಇವತ್ತು ಕಾಡುತ್ತಿದೆ. ಇನ್ನು ಮುಂದೆ ಆ ಪುಸ್ತಕವನ್ನು ಮರಳಿ ಪ್ರಕಟಿಸುವಾಗ ನನ್ನ ಹೆಸರನ್ನು ತೆಗೆದುಹಾಕಿ ಎಂದು ಮಠಕ್ಕೆ ಹೇಳುತ್ತಿದ್ದೇನೆ” ಎಂದರು.

ಇಂದು ನಡೆಯುತ್ತಿರುವ ಅನಿಷ್ಠವನ್ನು ನೋಡುತ್ತಾ ಅನೇಕರು ಮನೆಯಲ್ಲಿ ಕೂತಿದ್ದಾರೆ. ಪಾಪಕೃತ್ಯವನ್ನು ನೋಡಿ ಸುಮ್ಮನಿದ್ದರೆ ಅದರಲ್ಲಿ ನಾವು ಕೂಡ ಭಾಗಿಯಾದಂತೆ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನಾವು ಧ್ವನಿ ಎತ್ತಬೇಕಿದೆ. ಬಿಲ್ಕಿಸ್ ಬಾನೋ ಪ್ರಕರಣದಿಂದ ಹಿಡಿದು, ಚಿತ್ರದುರ್ಗದ ಪ್ರಕರಣದವರೆಗೆ ನೋಡಿದರೆ ದೇಶ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...