ಪೋಕ್ಸೋ ಹಾಗೂ ಎಸ್‌ಸಿ ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ನೈಜ ವರದಿಯನ್ನು ತಕ್ಷಣವೇ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಸೂಚಿಸಿದೆ.
“ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ವರದಿಯನ್ನು ತಕ್ಷಣವೇ ಸಲ್ಲಿಸಬೇಕು ಎಂದು ಆಯೋಗವು ನಿರ್ದೇಶನ ನೀಡಿದೆ” ಎಂದು ‘ದಿ ಫೈಲ್’ ಜಾಲತಾಣ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ಪ್ರಕರಣದಲ್ಲಿ ಮಠದ ಸ್ವಾಮೀಜಿ ಮತ್ತು ಇತರರ ವಿರುದ್ಧ ದೂರು ದಾಖಳಾಗಿರುವ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಈ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗಿರುವ ಬಗ್ಗೆ ಕೈಗೊಂಡಿರುವ ನೈಜ ವರದಿಯನ್ನುಕೂಡಲೇ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನಸೂಚಿತ ಬುಡಕಟ್ಟುಗಳ ಆಯೋಗಕ್ಕೆ ತುರ್ತಾಗಿ ಸಲ್ಲಿಸಬೇಕು” ಎಂದು ಚಿತ್ರದುರ್ಗದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸೆಪ್ಟೆಂಬರ್ 1ರಂದು ಆಯೋಗ ಸೂಚಿಸಿದೆ.
ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ನೋಟೀಸ್ ನೀಡಿತ್ತು. ನಂತರದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಕ್ರಮ ಜರುಗಿಸಲು ಮುಂದಾಗಿದೆ.
ವಿಚಾರಣಾಧೀನ ಕೈದಿ ನಂ. 2261
ಪೋಕ್ಸೋ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿಯವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 2261 ನೀಡಲಾಗಿದೆ. ಸೆಪ್ಟೆಂಬರ್ 1ರ ರಾತ್ರಿ 10.30ರ ಸುಮಾರಿಗೆ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು.
ಕಣ್ಣೀರಿಟ್ಟ ಆರೋಪಿ ಸ್ವಾಮೀಜಿ
ಮೂರು ದಿನಗಳ ಕಾಲ ಪೊಲೀಸ್ ವಶಕ್ಕೊಳಗಾದ ಮುರುಘಾ ಸ್ವಾಮೀಜಿ ಕೋರ್ಟ್ ವಿಚಾರಣೆಯ ವೇಳೆ ಕೋರ್ಟ್ ಅಂಗಳದಲ್ಲಿ ಕಣ್ಣಿರು ಹಾಕಿದರೆಂದು ವರದಿಯಾಗಿದೆ.
ಚಿತ್ರದುರ್ಗ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಯನ್ನು ಶುಕ್ರವಾರ ಬೆಳಗ್ಗೆ 11ಕ್ಕೆ ಹಾಜರು ಪಡಿಸಲು ಸೂಚಿಸಿತ್ತು. ಆದರೆ, ಗುರುವಾರ ರಾತ್ರಿ ಸ್ವಾಮೀಜಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಪ್ರಕರಣದ ವಿಚಾರಣೆಯನ್ನು ಚಿತ್ರದುರ್ಗದ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ ಕೆ ಕೋಮಲ ನಡೆಸಿದರು. ಪೊಲೀಸರ ಅರ್ಜಿ ಪರಿಶೀಲನೆ ವೇಳೆ ಅಪರಾಧಿ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದರು. ಈ ವೇಳೆ ಸ್ವಾಮೀಜಿ ಆರೋಗ್ಯ ಸಮಸ್ಯೆ ವಿಚಾರ ಮುಂದಿಡಲಾಗಿತ್ತು. ಈ ವೇಳೆ ಸಿಡಿಮಿಡಿಗೊಂಡ ನ್ಯಾಯಾಧೀಶರು, ಕೋರ್ಟ್ ಗಮನಕ್ಕೆ ತರದೆ ಹೇಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರನ್ನು ಪ್ರಶ್ನಿಸಿದರು.
ಇದನ್ನೂ ಓದಿರಿ: ಮನುಷ್ಯರಾದವರು ಈ ಕೆಲಸ ಮಾಡುವುದಿಲ್ಲ: ಬೆಂಗಳೂರಿನಲ್ಲಿ ಮುರುಘಾ ಶರಣರ ವಿರುದ್ಧ ಆಕ್ರೋಶ
ಇದಕ್ಕೆ ಉತ್ತರಿಸಿದ ಜೈಲು ಅಧೀಕ್ಷಕರ ಮಾತಿನಿಂದ ಸಂತೃಪ್ತಿಗೊಳ್ಳದ ನ್ಯಾಯಾಧೀಶರು ಅದರ ಸಲುವಾಗಿನ ಅಗತ್ಯ ದಾಖಲೆ, ವೈದ್ಯರ ವರದಿ ಸಲ್ಲಿಸುವಂತೆ ತಿಳಿಸಿದರು. ಆದರೆ ಸಕಾಲಕ್ಕೆ ಅದನ್ನು ಜೈಲು ಸಿಬ್ಬಂದಿಗಳು ಒದಗಿಸದಿದ್ದಾಗ, ದಾಖಲೆ ಕೊರತೆಯಿರುವ ಕಾರಣಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ಆದೇಶಿಸಿದರು.
ಕೂಡಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿಯನ್ನು ಕೋರ್ಟ್‌ಗೆ ಕರೆತರಲಾಯಿತು. ಕೋರ್ಟ್‌ಗೆ ಬಂದ ಅವರನ್ನು ಕಟಕಟೆಯಲ್ಲಿ ನಿಲ್ಲುವಂತೆ ನ್ಯಾಯಾಧೀಶರು ಸೂಚಿಸಿದರು. ಮೊದಲು ಇದಕ್ಕೆ ಹಿಂದೇಟು ಹಾಕಿದ ಸ್ವಾಮೀಜಿ ಬಳಿಕ ಒಲ್ಲದ ಮನಸ್ಸಿನಿಂದಲೇ ಕಟಕಟೆ ಏರಿದರು. ಈ ವೇಳೆ ಮುರುಘಾ ಶರಣರು ಕಣ್ಣೀರು ಹಾಕಿ ತಲೆತಗ್ಗಿಸಿ ನಿಂತರು ಎಂದು ವರದಿಯಾಗಿದೆ.


