ದಲಿತ ಬಾಲಕಿಯರಿಬ್ಬರು ಶಾಲೆಯ ಮಧ್ಯಾಹ್ನದ ಬಿಸಿಯೂಟವನ್ನು ಇತರ ವಿದ್ಯಾರ್ಥಿಗಳಿಗೆ ಬಡಿಸಿದ್ದಕ್ಕಾಗಿ ಸವರ್ಣೀಯ ಸಮುದಾಯಕ್ಕೆ ಸೇರಿರುವ ಅಡುಗೆ ಮಾಡುವ ವ್ಯಕ್ತಿ ಅದನ್ನು ಎಸೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಬಾಲಕಿಯರೊಂದಿಗೆ ತಾರತಮ್ಯ ತೋರಿದ ಆರೋಪದ ಮೇಲೆ ದುಷ್ಕರ್ಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ದಲಿತ ಬಾಲಕಿಯರು ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲಾ ರಾಮ್ ಗುರ್ಜರ್ ಎಂಬ ಸವರ್ಣೀಯ ಸಮುದಾಯಕ್ಕೆ ಸೇರಿರುವ ವ್ಯಕ್ತಿ ತಯಾರಿಸಿರುವ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳಿಗೆ ಬಡಿಸಿದ್ದರು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದಲಿತ ಬಾಲಕಿಯರು ಊಟ ಬಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತರು ಬಡಿಸಿದ ಕಾರಣಕ್ಕೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ಅದನ್ನು ಎಸೆಯುವಂತೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಸೂಚನೆಯಂತೆ ವಿದ್ಯಾರ್ಥಿಯಗಳು ಊಟವನ್ನು ಎಸೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಂತ್ರಸ್ತ ಬಾಲಕಿಯರು ಈ ಘಟನೆಯ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದಾಗ ಪ್ರಕರಣವು ಬೆಳಕಿಗೆ ಬಂದಿತ್ತು. ಇದರ ನಂತರ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ ಅಡುಗೆ ಮಾಡುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು
“ಅಡುಗೆ ಮಾಡುವ ವ್ಯಕ್ತಿಯ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಗೋಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಹುಡುಗಿಯರು ಬಡಿಸಿದ ಕಾರಣಕ್ಕೆ ವಿದ್ಯಾರ್ಥಿಗಳು ಆಹಾರ ಎಸೆದಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಅಡುಗೆಯವನು ತಾನು ಆಯ್ಕೆ ಮಾಡಿದ ಸವರ್ಣೀಯ ವಿದ್ಯಾರ್ಥಿಗಳಿಂದ ಊಟವನ್ನು ಬಡಿಸುತ್ತಿದ್ದನು. ಆದರೆ ಅವರು ಸರಿಯಾಗಿ ಬಡಿಸುತ್ತಿಲ್ಲ ಎಂದು ಹೇಳಿ ಶುಕ್ರವಾರ ಶಿಕ್ಷಕರೊಬ್ಬರು ದಲಿತ ಹುಡುಗಿಯರನ್ನು ಊಟವನ್ನು ಬಡಿಸಲು ಹೇಳಿದ್ದರು” ಎಂದು ಪೊಲೀಸರು ಹೇಳಿದ್ದಾರೆ.


