ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಲು ಪ್ರಮುಖ ಪಾತ್ರವಹಿಸಿದ ಒಡನಾಡಿ ಸಂಸ್ಥೆ ಹಾಗೂ ಅದರ ಮುಖ್ಯಸ್ಥರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ಮೈಸೂರಿನಲ್ಲಿ ದೂರು ದಾಖಲಾಗಿದೆ.
“ನಮಗೆ ಮತ್ತು ಒಡನಾಡಿ ಸಂಸ್ಥೆಗೆ ಪೊಲೀಸ್ ರಕ್ಷಣೆ ನೀಡಬೇಕು” ಎಂದು ಕೋರಿ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿಯವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
“ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಘಾ ಸ್ವಾಮೀಜಿಯ ಅನುಯಾಯಿಗಳು ಮತ್ತು ಮಠದ ಪರವಾಗಿರುವ ಕೆಲವು ಹಿತಾಸಕ್ತಿಗಳು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಹಾಗೂ ಹಾಗೂ ಪರಶು ಅವರಿಗೆ ಜೀವ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ಹಲವಾರು ಕರೆಗಳ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಹಾಗಾಗಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಹಾಗೂ ಪರುಶರಾಮ್ ರವರಿಗೆ ಗನ್ ಮ್ಯಾನ್ ಹಾಗೂ ನಮ್ಮ ಕುಟುಂಬಗಳಿಗೂ ರಕ್ಷಣೆಯನ್ನು ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ. ಅಲ್ಲದೇ ಒಡನಾಡಿಯ ಮಡಿಲು ಸಂಸ್ಥೆಯು ಹೆಣ್ಣು ಮಕ್ಕಳ ಪುನರ್ ವಸತಿ ಕೇಂದ್ರವಾಗಿದ್ದು, ಹೆಣ್ಣು ಮಕ್ಕಳೇ ಇರುವ ಸಂಸ್ಥೆಯಾದ್ದರಿಂದ ಸಂಸ್ಥೆಯ ಎಲ್ಲಾ ಮಕ್ಕಳಿಗೂ ಸಿಬ್ಬಂದಿಗೂ ರಕ್ಷಣೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ಪೊಲೀಸ್ ರಕ್ಷಣೆಯ ವ್ಯವಸ್ಥೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು” ಎಂದು ಅವರು ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ್ದ ಸ್ಟ್ಯಾನ್ಲಿ, “ಈ ಪ್ರತಿಭಟನೆಯಲ್ಲಿ ನಾವು ಮಾಡಿದ್ದಾದರೂ ತಪ್ಪೇನಿದೆ? ಸ್ಥಳೀಯವಾಗಿ ನ್ಯಾಯ ಸಿಗದ ಕಾರಣ ನಮ್ಮ ಸಂಸ್ಥೆಯನ್ನು ಹುಡುಕಿಕೊಂಡು ಅನೇಕ ಸಂತ್ರಸ್ತರು ಬರುತ್ತಾರೆ. ಅಧಿಕಾರದ ಬಲದಿಂದ, ಧರ್ಮದ ಬಲದಿಂದ ಪ್ರಕರಣವನ್ನು ಮುಚ್ಚಿಹಾಕುತ್ತಾರೆ. ಈ ರೀತಿಯ ಹೇಸಿಗೆ ಕೆಲಸವನ್ನು ಒಡನಾಡಿ ಎಂದಿಗೂ ಮಾಡಿಲ್ಲ, ಮಾಡುವುದಿಲ್ಲ” ಎಂದಿದ್ದರು.
“ಎದೆಯಲ್ಲಿ ಕಿಚ್ಚು ಇಟ್ಟುಕೊಂಡು ಈ ಸಂಸ್ಥೆಯನ್ನು ಕಟ್ಟಿದ್ದೇವೆ. ನಾನಾಗಲೀ ಪರಶುವಾಗಲೀ ಮಕ್ಕಳಿಗೆ ಮಾನವೀಯ ಧರ್ಮವನ್ನು ಕಲಿಸುತ್ತಿದ್ದೇವೆ. ಮಕ್ಕಳ ಘನತೆಯ ಜೀವನವನ್ನು ಎತ್ತಿಹಿಡಿಯುತ್ತಿದ್ದೇವೆ. ಇದು ಇಂದು ನಿನ್ನೆಯ ಕೆಲಸವಲ್ಲ. ಒಡನಾಡಿಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವವರಿಗೆ ಇದು ತಿಳಿಯಲಿ” ಎಂದು ಹೇಳಿದ್ದರು.
ಇದನ್ನೂ ಓದಿರಿ: ಮುರುಘಾ ಶರಣರ ಪ್ರಕರಣ: ನೈಜ ವರದಿ ಸಲ್ಲಿಸಲು ಎಸ್‌ಸಿ, ಎಸ್‌ಟಿ ಆಯೋಗ ಸೂಚನೆ
“ಸಂಸ್ಥೆಯನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ? ನಿಮ್ಮ ಉದ್ದೇಶವೇನು? ನಮ್ಮ ಬಳಿ ಬಂದು ಮಕ್ಕಳು ನೋವು ಹೇಳಿಕೊಂಡಿದ್ದು ತಪ್ಪಾ? ಅವರ ಸಮಸ್ಯೆಗೆ ನಾವು ಕಿವಿಕೊಟ್ಟಿದ್ದು ತಪ್ಪಾ? ಅವರ ಸಮಸ್ಯೆಗಳನ್ನು ಗ್ರಹಿಸಿದ್ದು ತಪ್ಪಾ? ಅವರ ಸಮಲೋಚನೆ ಮಾಡಿ ಸ್ಥಿತಿಯನ್ನು ತಿಳಿದುಕೊಂಡಿದ್ದು ತಪ್ಪಾ? ಬಳಿಕ ಕಾನೂನು ಬದ್ಧವಾಗಿ ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾಯಿಸಿದ್ದು ತಪ್ಪಾ?” ಎಂದು ಪ್ರಶ್ನಿಸಿದ್ದಾರೆ.
“ಆ ನಂತರದಲ್ಲಿ ಎಲ್ಲರೂ ಅವರವರ ಕೆಲಸವನ್ನು ಸರಿಯಾಗಿ ಮಾಡಿದ್ದರೆ ನಾವು ಹೆಚ್ಚು ಮುಂದೆ ಬರಬೇಕಾದ ಅವಶ್ಯಕತೆ ಇರಲಿಲ್ಲ. ಏನಪ್ಪಾ ಮಾಡೋಣ ಅಂತ ಪೊಲೀಸರು ಕೂಡ ಹುಬ್ಬೇರಿಸುತ್ತಾ ಕೂತಿದ್ದಾರೆ. ಏನಪ್ಪ ಮಾಡೋಣ ಅಂದರೆ ಹೇಗೆ? ಎಲ್ಲರ ವಿಚಾರದಲ್ಲಿ ಏನನ್ನು ಮಾಡಿದ್ದೀರೋ ಅದನ್ನೇ ಈ ಪ್ರಕರಣದಲ್ಲಿಯೂ ಮಾಡಿರಿ. ಇಲ್ಲಿ ಒಬ್ಬರಿಗೊಂದು ಕಾನೂನು, ಇನ್ನೊಬ್ಬರಿಗೊಂದು ಕಾನೂನು ಇಲ್ಲ” ಎಂದು ತಿಳಿಸಿದ್ದಾರೆ.


