ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಐದನೇ ವರ್ಷದ ಸ್ಮರಣೆಯ ಭಾಗವಾಗಿ, ಗೌರಿಯವರ ಸಮಾಧಿಗೆ ಹೋರಾಟಗಾರರು, ಗೌರಿಯ ಒಡನಾಡಿಗಳು ಹಾಗೂ ಜನಪರ ಆಶಯಗಳಿಗಾಗಿ ದುಡಿಯುತ್ತಿರುವವರು ನಮನ ಸಲ್ಲಿಸಿದರು.
ಗೌರಿ ನಡೆದ ಹಾದಿಯಲ್ಲಿ ನಾವು ಕ್ರಮಿಸಬೇಕಾದ ಅನಿವಾರ್ಯತೆ ಹಾಗೂ ಕಾಲದ ತಲ್ಲಣಗಳಿಗೆ ಗೌರಿ ಸ್ಪಂದಿಸುತ್ತಿದ್ದ ರೀತಿಯನ್ನು ಸ್ಮರಿಸಿ ಭಾವುಕರಾದರು.
ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಗೌರಿಯವರ ಒಡನಾಡಿ ನೂರ್ ಶ್ರೀಧರ್ ಮಾತನಾಡಿ, “ಇಂದು ಗೌರಿ ಇದ್ದಿದ್ದರೆ ಕರ್ನಾಟಕದ ಪರಿಸ್ಥಿತಿ ನೋಡಿ ವಿಲವಿಲ ಒದ್ದಾಡುತ್ತಿದ್ದರು. ರಾಜ್ಯಾದ್ಯಂತ ಓಡಾಡುತ್ತಿದ್ದರು. ಈ ದುರಿತ ಕಾಲದಲ್ಲಿ ಏನು ಮಾಡಬೇಕೆಂದು ಚಿಂತಿಸುತ್ತಿದ್ದರು. ಒಂದು ಕ್ಷಣ ಸಮಾಧಾನದಿಂದ ಇರುತ್ತಿದ್ದ ಜೀವವಾಗಿರಲಿಲ್ಲ ಗೌರಿ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಗೌರಿಯ ಆಶಯಗಳನ್ನು ಮುಂದುವರಿಸುತ್ತಲೇ ಇದ್ದೇವೆ. ಗೌರಿಯ ದನಿಯನ್ನು, ಅವರ ಪತ್ರಿಕೆಯನ್ನು ಅಡಗಿಸಬೇಕು ಎಂದು ಹತ್ಯೆ ಮಾಡಿದರು. ಆದರೆ ಎಲ್ಲ ಸವಾಲುಗಳ ನಡುವೆಯೇ ಗೌರಿಯ ಪತ್ರಿಕೆಯನ್ನು ಮುಂದುವರಿಸಿದ್ದೇವೆ. ಟಾಬ್ಲ್ಯಾಡ್ ಕಾಲ ಮುಗಿಯಿತು, ವಾರಪತ್ರಿಕೆಗಳನ್ನು ಇನ್ನು ಮುಂದೆ ತರಲು ಸಾಧ್ಯವಿಲ್ಲ ಅದೆಲ್ಲಾ ಅಭಿಪ್ರಾಯಗಳು ಬಂದವು. ಗೌರಿಯ ದನಿಯನ್ನು ನಿಲ್ಲಿಸಬಾರದೆಂದು ಪತ್ರಿಕೆಯನ್ನು ಹೊರತರುತ್ತಿದ್ದೇವೆ” ಎಂದು ತಿಳಿಸಿದರು.
“ಪತ್ರಿಕೆಯ ಹಿಂದಿನ ನೋವೇನು ಎಂಬುದು ಅನೇಕರಿಗೆ ಗೊತ್ತಿಲ್ಲ. ಗೌರಿಯ ಜೊತೆ ಕೆಲಸ ಮಾಡಿದ ತಂಡ ಚದುರಿಹೋಗಲಿಲ್ಲ. ಗೌರಿಯ ಆಶಯಗಳ ಜೊತೆ ನಿಂತು, ಅರ್ಧ ಸಂಬಳದಲ್ಲಿ ಕೆಲಸ ಮಾಡಿತು. ಕೆಲವು ಸಲ ಸಂಬಳವೇ ಇರಲಿಲ್ಲ. ಆದರೂ ಲಕ್ಷಾಂತರ ರೂಪಾಯಿ ಸಾಲವನ್ನು ತಲೆಯ ಮೇಲೆ ಹಾಕಿಕೊಂಡು ಪತ್ರಿಕೆಯನ್ನು ಮುಂದುವರಿಸಿದ್ದಾರೆ” ಎಂದು ಹೇಳಿದರು.
ಪತ್ರಿಕೆಯಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ಹೊಂದಿಕೊಳ್ಳಬೇಕೆಂದು ಗೌರಿ ಬಯಸುತ್ತಿದ್ದರು. ಅದರ ಭಾಗವಾಗಿ ‘ನಾನುಗೌರಿ.ಕಾಂ’, ‘ಗೌರಿಲಂಕೇಶ್.ಕಾಂ’ (ಇಂಗ್ಲಿಷ್) ವೆಬ್‌ಸೈಟ್‌ಗಳು ಕೆಲಸ ಮಾಡುತ್ತಿವೆ. ಗೌರಿಯ ಹೆಸರಲ್ಲಿ ಪತ್ರಿಕೆಯನ್ನು ಮುಂದುವರಿಸಲು ಸರ್ಕಾರ ಅವಕಾಶ ಕೊಡಲಿಲ್ಲ. ಸ್ನೇಹಿತರು ತರುತ್ತಿದ್ದ ‘ನ್ಯಾಯಪಥ’ವನ್ನೇ ಗೌರಿಪತ್ರಿಕೆಯಾಗಿ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ವಿವರಿಸಿದರು.
ಮೊದಲೆಲ್ಲ ಪೀತ ಪತ್ರಿಕೋದ್ಯಮವಿತ್ತು. ಈಗ ಪ್ರೇತ ಪತ್ರಿಕೋದ್ಯಮ ಬಂದಿದೆ. ಇದರ ನಡುವೆ ಚಳವಳಿಗೆ ಬೆನ್ನೆಲುಬಾಗಿರುವ ಮಾಧ್ಯಮಗಳಿವೆ. ಪ್ರೇತ ಪತ್ರಿಕೋದ್ಯಮ ವಿರುದ್ಧ ‘ಪ್ರೀತಿ’ ಪತ್ರಿಕೋದ್ಯಮ ಬೆಳೆಯುತ್ತಿದೆ. ‘ವಾರ್ತಾಭಾರತಿ’, ‘ಈದಿನ.ಕಾಂ’, ‘ಪೀಪಲ್.ಕಾಂ’, ‘ಕನ್ನಡಒನ್.ಕಾಂ’, ‘ಪ್ರಜಾವಾಣಿ’, ‘ಹಿಂದೂ’ ಮೊದಲಾದ ಮಾಧ್ಯಮಗಳು ಚಳವಳಿಯನ್ನು ಮುಂದುವರಿಸಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಸಬೀಹ ಭೂಮಿಗೌಡ ಮಾತನಾಡಿ, “ಗೌರಿಯನ್ನು ಕೊಂದ ಶಕ್ತಿಗಳು ಮತ್ತಷ್ಟು ಬೆಳೆಯುತ್ತಿವೆ. ಕ್ರೌರ್ಯವನ್ನು ಮತ್ತಷ್ಟು ಹರಡುತ್ತಿವೆ. ಆದರೆ ಗೌರಿ ನಮ್ಮನ್ನು ಎಚ್ಚರಿಸುತ್ತಿದ್ದಾಳೆ. ನಾವು ಮಾಡುತ್ತಿರುತವ ಕೆಲಸ ಸಾಲುತ್ತಿಲ್ಲ ಎನ್ನುತ್ತಿಲ್ಲ” ಎಂದು ಎಚ್ಚರಿಸಿದರು.
ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಗೌರಿ ಇಂಗ್ಲಿಷ್ ಪತ್ರಿಕೋದ್ಯಮದಿಂದ ಕನ್ನಡಕ್ಕೆ ಬಂದವರು. ಕನ್ನಡ ಭಾಷೆ ಮೇಲೆ ಸಾಹಿತ್ಯಾತ್ಮಕ ಪ್ರಭುತ್ವ ಸಾಧಿಸಲಿಲ್ಲ. ಅವರ ಬರಹದಲ್ಲಿ ಸಾಹಿತ್ಯಿಕ ಶಬ್ದಗಳಿರಲಿಲ್ಲ. ಆದರೂ ಏಕೆ ಗೌರಿಯವರ ಬರಹ ಅವರನ್ನು ಚುಚ್ಚಿತು? ಕೇವಲ ಹತ್ತು ವರ್ಷಗಳಲ್ಲಿ ಅವರನ್ನು ಕೊಲ್ಲುವಂತೆ ಪ್ರೇರೇಪಿಸಿತು? ಏಕೆಂದರೆ ಅವರ ಬರಹದಲ್ಲಿ ನೈಜತೆ ಇತ್ತು. ಜನರ ಬಗ್ಗೆ ನಿಜವಾದ ಕಾಳಜಿ ಇತ್ತು” ಎಂದು ಹೇಳಿದರು.
ಇದನ್ನೂ ಓದಿರಿ: ಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ
ಮನುಸ್ಮೃತಿ ಹಾಗೂ ಒಡೆದು ಆಳುವ ಮನಸ್ಥಿತಿಗಳಿಗೆ ಗೌರಿಯ ಕಾಳಜಿಗಳು ಆತಂಕ ತಂದಿದ್ದವು. ಗೌರಿಯನ್ನು ಕೊಂದರೆ ಮೇಲುಗೈ ಸಾಧಿಸಬಹುದು ಎಂದು ಭಾವಿಸಿದರು. ಆದರೆ ಗೌರಿ ಹತ್ಯೆಯ ಬಳಿಕ ಜನರು ಒಂದಾಗಿ ನಿಂತರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಸೃಷ್ಟಿಯಾಯಿತು. ಆ ನಂತರದಲ್ಲಿ ಈ ಕೊಲೆಗಡುಕರು ಹತ್ಯೆಗೆ ಕೈ ಹಾಕಿಲ್ಲ. ಆದರೆ ಬೇರೆ ಆಯಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಸತ್ಯಕ್ಕೆ ಕನ್ನಡಿ ಹಿಡಿದವರನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ತೀಸ್ತಾ ಸೆಟಲ್ವಾಡ್ ಹಾಗೂ ಮೊಹಮ್ಮದ್ ಜುಬೇರ್ ಪ್ರಕರಣ ಇತ್ತೀಚಿನ ಉದಾಹರಣೆಗಳಾಗಿವೆ. ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದನ್ನು ನೋಡಿದ್ದೇವೆ. ಈ ಬೆಳವಣಿಗೆಗಳ ಹಿಂದಿನ ಮನಸ್ಥಿತಿಗಳನ್ನು ಒಡೆದು ಓಡಿಸಬೇಕಾಗಿದೆ ಎಂದು ಆಶಿಸಿದರು.
ಮಾಜಿ ಐಎಎಸ್ ಅಧಿಕಾರಿಯಾದ ಸಸಿಕಾಂತ್ ಸೆಂಥಿಲ್ ಮಾತನಾಡಿ, “ಗೌರಿಯ ಕೆಲಸವನ್ನು ಮುಂದುವರಿಸಲು ನಾವೆಲ್ಲ ಜೊತೆಗಿರುತ್ತೇವೆ. ಇದು ವ್ಯಕ್ತಿಗಳ ಜೊತೆಗಿನ ಸಮಸ್ಯೆಯಲ್ಲ, ಮನಸ್ಥಿತಿಗಳ ಜೊತೆಗಿನ ಹೋರಾಟ” ಎಂದರು.
ಗೌರಿಯವರ ತಾಯಿ ಇಂದಿರಾ ಲಂಕೇಶ್, ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್, ಗೌರಿ ಸ್ಮಾರಕ ಟ್ರಸ್ಟ್ ಸದಸ್ಯರಾದ ಪ್ರೊ.ವಿ.ಎಸ್ ಶ್ರೀಧರ್, ದೀಪು, ಕೆ.ಎಲ್ ಅಶೋಕ್, ಬಹುಭಾಷ ನಟ ಪ್ರಕಾಶ್ ರಾಜ್, ಸಾಮಾಜಿಕ ಹೋರಾಟಗಾರ್ತಿಯರಾದ ಅಕ್ಕೈ ಪದ್ಮಶಾಲಿ, ದು.ಸರಸ್ವತಿ, ಚಿಂತಕ ಶಿವಸುಂದರ್, ಸಿನಿಮಾ ನಿರ್ದೇಶಕ ಸಂಜಯ್ ಕಾಕ್, ಪ್ರೊ.ನಗರಿ ಬಾಬಯ್ಯ, ಇರ್ಷಾದ್ ಅಹಮದ್ ದೇಶಾಯಿ, ಕಲೀಂಉಲ್ಲಾ, ಮಲ್ಲಿಗೆ ಸಿರಿಮನೆ, ಡಿ.ಎನ್.ಗುರುಪ್ರಸಾದ್ ಸೇರಿದಂತೆ ಇತರರು ನಮನ ಸಲ್ಲಿಸಿದರು.


