ಭಾರತೀಯ ಕ್ರಿಕೆಟ್ ತಂಡದ ಬೌಲರ್ ಅರ್ಷದೀಪ್ ಸಿಂಗ್ ಅವರ ಕುರಿತು ಅವಹೇಳನಕಾರಿಯಾಗಿ ವಿಕಿಪೀಡಿಯಾದಲ್ಲಿ ಮಾಹಿತಿ ನೀಡಲಾಗಿರುವ ಕುರಿತು ಸರ್ಕಾರ ಎಚ್ಚೆತ್ತುಕೊಂಡಿದೆ.
ಅರ್ಷದೀಪ್ ಸಿಂಗ್ ಖಾಲಿಸ್ತಾನ್ ಹೋರಾಟವನ್ನು ಬೆಂಬಲಿಸಿದ್ದಾರೆಂದು ಸುಳ್ಳು ಹಬ್ಬಿಸಲಾಗಿದ್ದು ಭಾರತದಲ್ಲಿನ ವಿಕಿಪೀಡಿಯಾ ಕಾರ್ಯನಿರ್ವಾಹಕರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಮನ್ಸ್ ಜಾರಿ ಮಾಡಿದೆ.
ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ, ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಶ್‌ದೀಪ್ ನಿರ್ಣಾಯಕ ಕ್ಯಾಚ್ ಅನ್ನು ಕೈಬಿಟ್ಟರು. ಭಾರತ ತಂಡವು ತನ್ನ ಸಂಪ್ರದಾಯಿಕ ಎದುರಾಳಿ ವಿರುದ್ಧ ಸೋತಿದ್ದರಿಂದ ಟ್ರೋಲ್‌ಗೆ ಗುರಿಯಾದರು.
ಇದರ ಬೆನ್ನಲ್ಲೇ ಅರ್ಹದೀಪ್ ಅವರನ್ನು ‘ಖಾಲಿಸ್ತಾನಿ’ ಎಂದು ಜರಿಯುವ ಪ್ರಯತ್ನ ಮಾಡಲಾಯಿತು. ವಿಕಿಪೀಡಿಯಾದಲ್ಲಿ ತಪ್ಪು ಮಾಹಿತಿ ಸೇರಿಸಿ, ಅರ್ಷದೀಪ್ ಅವರ ಚಾರಿತ್ರ್ಯ ವಧೆ ಮಾಡಲು ಯತ್ನಿಸಲಾಯಿತು. ಆನಂತರದಲ್ಲಿ ಈ ಮಾಹಿತಿಯನ್ನು ಪೇಜ್‌ನಿಂದ ತೆಗೆದುಹಾಕಲಾಗಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಅರ್ಷದೀಪ್ ಅವರನ್ನು ‘ಖಾಲಿಸ್ತಾನಿ’ ಎಂದು ನಿಂದಿಸಿವೆ.
ಎಲೆಕ್ಟ್ರಾನಿಕ್ಸ್ ಸಚಿವಾಲಯ ಮತ್ತು ಐಟಿ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ನೇತೃತ್ವದ ಅಧಿಕಾರಿಗಳ ತಂಡವು ವಿಕಿಪೀಡಿಯ ಕಾರ್ಯನಿರ್ವಾಹಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಮಾರ್ಪಾಡು ಮಾಡಲು ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿಕಿಪೀಡಿಯಾಕ್ಕೆ ನೋಟಿಸ್ ಕಳುಹಿಸುವಾಗ, “ಇದು ಅರ್ಷದೀಪ್ ಸಿಂಗ್ ಅವರ ಕುಟುಂಬಕ್ಕೆ ನೀಡಿದ ಬೆದರಿಕೆಯಾಗಬಹುದು. ಇದರಿಂದ ದೇಶದ ವಾತಾವರಣವೂ ಹಾಳಾಗಬಹುದು. ಐಪಿ ವಿಳಾಸವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರೊಬ್ಬರು ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ” ಎಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿ, “ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಇಂತಹ ತಪ್ಪು ಮಾಹಿತಿ ಮತ್ತು ಉದ್ದೇಶಪೂರ್ವಕ ಪ್ರಯತ್ನಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವೇದಿಕೆಯಲ್ಲಿ ಅನುಮತಿಸಲಾಗುವುದಿಲ್ಲ. ಇದು ಸುರಕ್ಷತೆ ಮತ್ತು ಇಂಟರ್‌ನೆಟ್‌ನ ವಿಶ್ವಾಸಾರ್ಹತೆಯ ಮೇಲೆ ಸರ್ಕಾರ ಇಟ್ಟಿರುವ ನಿರೀಕ್ಷೆಗಳನ್ನು ಉಲ್ಲಂಘಿಸುತ್ತದೆ” ಎಂದಿದ್ದಾರೆ.
No intermerdiary operatng in India can permit this type of misinformation n deliberate efforts to incitement n #userharm – violates our govts expectation of Safe & Trusted Internet #wikipedia @GoI_MeitY #SafeTrustedInternet pic.twitter.com/Qm6HdppM1k
— Rajeev Chandrasekhar 🇮🇳 (@Rajeev_GoI) September 5, 2022
ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಟ್ವೀಟ್ ಮಾಡುವ ಮೂಲಕ ಅರ್ಷದೀಪ್ ಸಿಂಗ್ ಅವರನ್ನು ಬೆಂಬಲಿಸಿದ್ದಾರೆ. “ಅರ್ಷದೀಪ್ ಅವರನ್ನು ಟೀಕಿಸುವುದನ್ನು ನಿಲ್ಲಿಸಬೇಕು. ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್ ಬಿಡುವುದಿಲ್ಲ. ಭಾರತೀಯ ಆಟಗಾರರ ಬಗ್ಗೆ ಹೆಮ್ಮೆ ಇದೆ. ಪಾಕಿಸ್ತಾನ ಉತ್ತಮವಾಗಿ ಆಡಿದೆ. ನಮ್ಮ ತಂಡ ಮತ್ತು ಅರ್ಶ್‌ದೀಪ್ ಬಗ್ಗೆ ನಡೆಯುತ್ತಿರುವ ಕೆಟ್ಟ ಸಂಗತಿಗಳು ನಾಚಿಕೆಗೇಡಿನದ್ದಾಗಿವೆ” ಎಂದಿದ್ದಾರೆ.
Stop criticising young @arshdeepsinghh No one drop the catch purposely..we are proud of our 🇮🇳 boys .. Pakistan played better.. shame on such people who r putting our own guys down by saying cheap things on this platform bout arsh and team.. Arsh is GOLD🇮🇳
— Harbhajan Turbanator (@harbhajan_singh) September 4, 2022


