Homeಅಂಕಣಗಳು2015ರ ಸಮಯಕ್ಕೆ ಆತ್ಮೀಯರಾಗಿದ್ದವರ ದನಿ ಬದಲಾಗಿದ್ದನ್ನು ಗಮನಿಸಿದೆ; ಮೊಹಮ್ಮದ್ ಝುಬೇರ್ ಸಂದರ್ಶನ ಭಾಗ-1

2015ರ ಸಮಯಕ್ಕೆ ಆತ್ಮೀಯರಾಗಿದ್ದವರ ದನಿ ಬದಲಾಗಿದ್ದನ್ನು ಗಮನಿಸಿದೆ; ಮೊಹಮ್ಮದ್ ಝುಬೇರ್ ಸಂದರ್ಶನ ಭಾಗ-1

- Advertisement -
- Advertisement -

ಇಂದು ಆಲ್ಟ್‌ನ್ಯೂಸ್ ಇಂಗ್ಲಿಷ್ ಮಾಧ್ಯಮಲೋಕದಲ್ಲಿ ನಕಲಿ ಸುದ್ದಿಗಳನ್ನು ಬಯಲಿಗೆಳೆಯುವುದಕ್ಕೆ ಅನ್ವರ್ಥನಾಮವಾಗಿ ಬದಲಾಗಿದೆ ಎಂದರೆ ಉತ್ಪ್ರೇಕ್ಷೆಯಾಗದು. ಈ ದೇಶದಲ್ಲಿ ಫೇಕ್ ನ್ಯೂಸ್ ಎಕೋಸಿಸ್ಟಮ್ ಬೃಹತ್ತಾಗಿ ಬೆಳೆದು ಪ್ರಜಾಪ್ರಭುತ್ವದ ಬುನಾದಿಯನ್ನೇ ಬುಡಸಮೇತ ಕೀಳಲು ಮುನ್ನುಗ್ಗುತ್ತಿದ್ದ ಕಾಲದಲ್ಲಿ ಅದರ ನಾಗಾಲೋಟವನ್ನು ಒಂದು ಮಟ್ಟಕ್ಕೆ ಕುಂಠಿತಗೊಳಿಸಿದ ಶ್ರೇಯಸ್ಸು ಆಲ್ಟ್‌ನ್ಯೂಸ್ ಸುದ್ದಿತಾಣಕ್ಕೆ ಸಲ್ಲಬೇಕು. ಇದನ್ನು ಸ್ಥಾಪಿಸಿದವರು ಗುಜರಾತಿನ ಪ್ರತೀಕ್ ಸಿನ್ಹಾ ಮತ್ತು ಕರ್ನಾಟಕದ ಮೊಹಮ್ಮದ್ ಝುಬೇರ್. ಇಂದು ಆಲ್ಟ್‌ನ್ಯೂಸ್ ಫೇಕ್ ಸುದ್ದಿಗಳನ್ನು ಪತ್ತೆ ಹಚ್ಚಿ ಸತ್ಯದರ್ಶನ ಮಾಡಿಸುವುದು ಎಷ್ಟೋ ಬೇರೆಬೇರೆ ಭಾಷೆಗಳ ಸುದ್ದಿತಾಣಗಳಿಗೆ ಮಾದರಿಯಾಗಿದೆ. ಲೀಲಾಜಾಲವಾಗಿ ನಕಲಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ಅಥವಾ ಬಿತ್ತರಿಸುತ್ತಿದ್ದ ಮುಖ್ಯವಾಹಿನಿ ಮಾಧ್ಯಮಗಳು ಸ್ವಲ್ಪವಾದರೂ ಅಳುಕುವಂತೆ ಮಾಡಲು ಆಲ್ಟ್‌ನ್ಯೂಸ್‌ಗೆ ಸಾಧ್ಯವಾಗಿದೆ.

ತಮ್ಮ ರಾಜಕೀಯಕ್ಕಾಗಿ ಫೇಕ್ ನ್ಯೂಸ್ ಬೆಳೆಯಲು ಗೊಬ್ಬರ ಮತ್ತು ನೀರೆರೆದ ಸಂಘ ಪರಿವಾರ ಮತ್ತು ಅದರ ಬೆಂಬಲಿತ ಬಿಜೆಪಿ ಪಕ್ಷ ಆಲ್ಟ್‌ನ್ಯೂಸ್ ಮತ್ತು ಅದರ ಸಂಸ್ಥಾಪಕರನ್ನು ಹಲವು ಬಾರಿ ಗುರಿಯಾಗಿಸಿ ದಾಳಿ ಮಾಡುತ್ತಿದ್ದುದು ಸಾಮಾನ್ಯ ಸಂಗತಿಯಾಗಿಹೋಗಿತ್ತು. ಈ ದಾಳಿಗಳ ನಡುವೆಯೂ ಎದೆಗುಂದದೆ ಸುಳ್ಳುಕೋರರಿಗೆ ಸಿಂಹಸ್ವಪ್ನವಾಗಿದ್ದ ಝುಬೇರ್ ಮೇಲೆ ಸಿನಿಮೀಯ ಶೈಲಿಯಲ್ಲಿ ಆರೋಪ ಹೊರಿಸಲಾಯ್ತು. ಹಿಂದಿ ಸಿನಿಮಾವೊಂದರ ದೃಶ್ಯವನ್ನು ಹಂಚಿಕೊಂಡಿದ್ದನ್ನು ತಿರುಚಿ ಸುಳ್ಳು ನರೆಟಿವ್ ಕಟ್ಟಿ ಆರೋಪ ಹೊರಿಸಲಾಯ್ತು. ಪ್ರಕರಣ ಬಿದ್ದುಹೋಗುವ ಹಂತದಲ್ಲಿ ಮತ್ತೆ ಕೆದಕಲಾಗಿ ಅರೆಸ್ಟ್ ಕೂಡ ಆಯಿತು. ಕಾರಣ, ಬಿಜೆಪಿಯ ವಕ್ತಾರೆ-ಫ್ರಿಂಜ್ ಎಲಿಮೆಂಟ್ ಒಬ್ಬರ ದ್ವೇಷ ಭಾಷಣವನ್ನು ಝುಬೇರ್ ಅವರು ಆಂಪ್ಲಿಫೈ ಮಾಡಿದ್ದು! ಉತ್ತರ ಪ್ರದೇಶದಲ್ಲಿ ಹಲವು ಪ್ರಕರಣಗಳು ದಾಖಲಾದವು! ಈಗ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಮೇಲೆ ಬೆಂಗಳೂರಿಗೆ ಹಿಂದಿರುಗಿರುವ ಝುಬೇರ್ ಅದೇ ಹುರುಪಿನಲ್ಲಿ ತಮ್ಮ ಕಾಯಕಕ್ಕೆ ಹಿಂದಿರುಗಿದ್ದಾರೆ.

ಫೇಕ್ ಸುದ್ದಿಗಳನ್ನು ಪತ್ತೆಹಚ್ಚಿ ಬಯಲಿಗೆಳೆಯುವ ಬ್ಯುಸಿ ಸಮಯದ ನಡುವೆ ಈ ಸಂದರ್ಶನಕ್ಕೆ ಒಪ್ಪಿಕೊಂಡ ಝುಬೇರ್ ಉಲ್ಲಸಿತರಾಗಿ ನ್ಯಾಯಪಥ ಪತ್ರಿಕೆಯೊಂದಿಗೆ ಹಲವು ಸಂಗತಿಗಳನ್ನು ವಿವರವಾಗಿ ಹಂಚಿಕೊಂಡರು. ಸತ್ಯದ ದಾರಿಯಲ್ಲಿ ನಡೆಯುತ್ತಿರುವ ಪತ್ರಕರ್ತರೊಬ್ಬರ ಜೊತೆಗಿನ ಮಾತುಕತೆಯ ಭಾಗವನ್ನು ಗೌರಿ ನಮ್ಮಿಂದ ದೂರವಾದ ಐದು ವರ್ಷಗಳ ನಂತರ ಮೂಡುತ್ತಿರುವ ಈ ಸಂಚಿಕೆಯಲ್ಲಿ ಪ್ರಕಟಿಸುತ್ತಿದ್ದೇವೆ. ಗೌರಿಯವರ ಪತ್ರಿಕೋದ್ಯಮದ ದಿಟ್ಟತನವನ್ನು ಮೈಗೂಡಿಸಿಕೊಳ್ಳಲು ಯುವ ಜರ್ನಲಿಸ್ಟ್‌ಗಳಿಗೆ ಈ ಸಂದರ್ಶನವೂ ಸಹಾಯ ಮಾಡೀತೆಂದು..

ಪ್ರಶ್ನೆ: ನಿಮ್ಮ ಮೇಲೆ ಮಾಡಿದ ಸಿನಿಮೀಯ ಆರೋಪಗಳಿಗೆ ಬಂಧನಗೊಳ್ಳಬೇಕಾಯಿತು. ಈಗ ಜಾಮೀನು ಸಿಕ್ಕಿ ಒಂದು ತಿಂಗಳ ಮೇಲಾಗಿದೆ. ಹಿಂದಿರುಗಿ ನೋಡಿದಾಗ ಏನನ್ನಿಸುತ್ತಿದೆ?

ಉತ್ತರ: ಬಿಡುಗಡೆಯ ನಂತರ ಒಂದೆರಡು ದಿನ ಬಹಳ ಕೆಲಸ ಇತ್ತು. 23 ದಿನಗಳ ಕಾಲ ಜೈಲಿನಲ್ಲಿದ್ದಾಗ ಏನು ನಡೀತಾ ಇದೆ ಅಂತ ಗೊತ್ತಾಗ್ತ ಇರಲಿಲ್ಲ. ಅಂದರೆ, ನನ್ನ ವಿರುದ್ಧ ಕಟ್ಟಿದ್ದ ಪ್ರಪೋಗಾಂಡವಾಗಲೀ, ನನಗೆ ಸಿಕ್ಕಿದ ಬೆಂಬಲವಾಗಲೀ ಇವ್ಯಾವುವು ಗೊತ್ತಾಗಿರಲಿಲ್ಲ. ಈ ಬಗ್ಗೆ ಬಂದ ಬರಹಗಳು, ಬೆಂಬಲದ ಟ್ವೀಟ್‌ಗಳನ್ನು ಹುಡುಕಿ ಓದಲು 10-15 ದಿನ ಹಿಡಿಯಿತು. ನಾನು ಮೊದಲಿಗೆ ಹೊರಗೆ ಬಂದಾಗ ನೀಡಿದ ಸಂದರ್ಶನಗಳಲ್ಲಿ ಪೊಲೀಸರು ನನ್ನ ಜೊತೆಗೆ ಹೇಗೆ ಒಳ್ಳೆಯ ರೀತಿಯಲ್ಲಿ ವರ್ತಿಸಿದರು ಎಂಬುದರ ಬಗ್ಗೆ ಹೆಚ್ಚು ಮಾತಾಡಿದೆ. ಆದರೆ ನನ್ನ ವಿರುದ್ಧ ನಡೆದಿರುವ ಪ್ರಪೋಗಾಂಡಾವನ್ನು ಗಮನಿಸಿದ ಮೇಲೆ ಬೇರೆಯದೇ ಅರ್ಥ ಹೊಳೆಯಿತು. ಅವರು ನನ್ನ ಜೊತೆಗೆ ಚೆನ್ನಾಗಿಯೇ ವರ್ತಿಸಿದ್ದರೂ, ವ್ಯಾನ್ ಇಂದ ಹೊರಗೆ ಕರೆದುಕೊಳ್ಳುವ ದೃಶ್ಯಗಳನ್ನು ನೋಡಿದ ಮೇಲೆ, ನನ್ನ ಬಗ್ಗೆ ಕಟ್ಟಿರುವ ನರೆಟಿವ್‌ಗಳನ್ನು ನೋಡಿದ ಮೇಲೆ- ಉದಾಹರಣೆಗೆ, ನೀವೀಗ ಸೆಲೆಬ್ರಿಟಿ ಆಗಿದ್ದೀರಿ, ನಿಮ್ಮ ಜೊತೆಗೆ ಒಂದು ಫೋಟೋ ಬೇಕು, ಈಕಡೆ ತಿರುಗಿ ಎಂದು ಪೊಲೀಸರು ಫೋಟೋ ತೆಗೆದುಕೊಳ್ಳುತ್ತಿದ್ದರು- ಅದನ್ನು ನಾನು ನಿಜವೆಂದು ನಂಬಿದ್ದೆ ಆದರೆ ಬಿಡುಗಡೆಯಾಗಿ ಬಂದು ನೋಡಿದ ಮೇಲೆ, ಸರ್ಕಾರಕ್ಕೆ ಹತ್ತಿರವಾಗಿದ್ದ ಓಪಿಇಂಡಿಯಾ ಸುದ್ದಿ ವೆಬ್‌ಸೈಟ್‌ಗಳ ಜೊತೆಗೆ ಆ ಫೋಟೋಗಳನ್ನು ಹಂಚಿಕೊಂಡಿರುವುದು ಗೊತ್ತಾಯಿತು. ಅಲ್ಲಿ ನಡೆದಿರುವುದು ಸ್ವಲ್ಪಸ್ವಲ್ಪ ಅರ್ಥವಾಗುತ್ತಾ ಬಂತು. ಆ 23 ದಿನಗಳಲ್ಲಿ ಓಪಿಇಂಡಿಯಾ ನನ್ನ ವಿರುದ್ಧ ಸುಮಾರು 100 ಬರಹಗಳನ್ನು ಬರೆದಿದೆ. ಪೊಲೀಸರು ನನ್ನ ಜೊತೆಗೆ ಹೇಗೆ ಆಟವಾಡಿದ್ದಾರೆ ಎಂದು ಅರ್ಥವಾಯ್ತು. ಈ ಫೋಟೋಗಳನ್ನು ಎಲ್ಲಾ ಮಾಧ್ಯಮಗಳಿಗೂ ಬಿಡುಗಡೆ ಮಾಡದೆ ಕೆಲವರಿಗಷ್ಟೇ ನೀಡಿದ್ದರು. ನನಗೆ ಪೊಲೀಸರು ಹಿಂಸೆ ನೀಡಿಲ್ಲದಿದ್ದರೂ, ನಾನೊಬ್ಬ ಕ್ರಿಮಿನಲ್ ಎಂಬಂತೆ ಮುಖಗವಸು ಹಾಕಿದ್ದು- ಫೋಟೋಗಳನ್ನು ಕೆಲವೇ ಮಾಧ್ಯಮ ಸಂಸ್ಥೆಗಳಿಗೆ ನೀಡಿದ್ದು- ಇಂತಹ ಸಂಗತಿಗಳಿಂದ ನನ್ನನ್ನು ಹೇಗೆ ಬಿಂಬಿಸಿದರು ಎಂಬುದು ಗೊತ್ತಾಯಿತು.

ಸಿದ್ದಿಕ್ ಕಪ್ಪನ್

ಈಗಲೂ ಟ್ವಿಟ್ಟರ್‌ನಲ್ಲಿ ಪೊಲೀಸರನ್ನು ಟ್ಯಾಗ್ ಮಾಡಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳುವ ಟ್ವೀಟ್‌ಗಳು ಹೆಚ್ಚಾಗಿವೆ. ಸ್ವಲ್ಪ ಹಿನ್ನೆಲೆ ಹೇಳುವುದಾದರೆ 2020ರಲ್ಲಿ ನನ್ನ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ವಿರುದ್ಧ ನನಗೆ ಮಧ್ಯಂತರ ರಕ್ಷಣೆ ಸಿಕ್ಕಿತ್ತು. ಪೊಲೀಸರ ವರದಿಯಲ್ಲೂ ಕ್ಲೀನ್ ಚಿಟ್ ಸಿಕ್ಕಿತ್ತು. ಆದರೆ, ಇತ್ತೀಚೆಗೆ ಇದರ ಬಗ್ಗೆ ವಿಚಾರಣೆ ನಡೆಸಲು ದೆಹಲಿಗೆ ಬರುವಂತೆ ಕರೆದರು. ನನ್ನ ಟ್ವೀಟ್ ಬಳಸಿದ್ದಕ್ಕೆ ಇನ್ನಿಬ್ಬರನ್ನು ಕೂಡ ಆರೋಪಿಗಳನ್ನಾಗಿಸಲಾಗಿತ್ತು. ಅವರು ದೆಹಲಿಗೆ ಬರುತ್ತಿದ್ದಾರೆ ಎಂಬ ನೆಪ ಹೇಳಿ ನನಗೂ ಬರುವಂತೆ ಹೇಳಿದರು. ಇದು ಟ್ರಿಕ್ ಅನ್ನುವುದು ಗೊತ್ತಿದ್ದರೂ, ತನಿಖೆಗೆ ಸಹಕರಿಸಲು ದೆಹಲಿಗೆ ಹೋದೆ. ಅಲ್ಲಿಗೆ ತಲುಪಿದ ನಂತರವೇ ತಿಳಿದದ್ದು ನನ್ನನ್ನು ಬಂಧಿಸಲು ಕರೆದಿದ್ದೆಂದು. ನನ್ನ ವಿರುದ್ಧದ ಎಫ್‌ಐಆರ್ ಹೇಗಿತ್ತೆಂದರೆ ತನಿಖೆಗೆ ಸಹಕರಿಸದಿದ್ದರೆ ಮಾತ್ರ ಬಂಧಿಸಬಹುದಿತ್ತು. ನಾನು ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೂ, ’ನೀವು ತನಿಖೆಗೆ ಸಹಕರಿಸುತ್ತಿಲ್ಲ’ವೆಂದು ಹೇಳಿ ಬಂಧಿಸಿದರು. ಇದಕ್ಕೆ ಅವರಾಗಲೇ ಮನಸ್ಸು ಮಾಡಿದ್ದರು. ನಂತರ ಉತ್ತರಪ್ರದೇಶದಲ್ಲಿ ವಿಚ್‌ಹಂಟ್ ಶುರುವಾಯಿತು. ಆರೋಪಿಸಲಾಗಿದ್ದ ಟ್ವೀಟ್ ಸಿನಿಮಾವೊಂದರ ದೃಶ್ಯ ಎಂದು ತಿಳಿದೇ ಇದೆ. ಮತ್ತದು ಸರ್ಕಾರದ ವಿರುದ್ಧದ ಟೀಕೆಯಾಗಿತ್ತು. ಯಾವುದೇ ಧರ್ಮದ ವಿರುದ್ಧವಾಗಿರಲಿಲ್ಲ. ಆದರೆ ನನ್ನ ವಿರುದ್ಧ ಹೊಸ ನರೆಟಿವ್ ಕಟ್ಟಿ ನನ್ನನ್ನು ಸಿಕ್ಕಿಸಲು ಪ್ರಯತ್ನಿಸಿದರು. ನಾನು ಅಧಿಕಾರಿಗಳನ್ನು, ಕೆಲವು ರಾಜಕಾರಣಿಗಳನ್ನು ಟ್ಯಾಗ್ ಮಾಡಿ ಅವರ ಕೆಲಸಗಳನ್ನು ಪ್ರಶ್ನೆ ಮಾಡುತ್ತಿದ್ದೆ. ಅದರಲ್ಲಿ ಶಲಭ್ ಮಣಿ ತ್ರಿಪಾಠಿ ಎಂಬ ವ್ಯಕ್ತಿಯೂ ಇದ್ದರು. ಈಗ ಅವರು ಶಾಸಕರಾಗಿದ್ದಾರೆ. ಮೊದಲಿಗೆ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಲಹೆಗಾರ. ಅವರು ನನ್ನನ್ನು ನಿರಂತರವಾಗಿ ಟ್ಯಾಗ್ ಮಾಡಿ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಹೇಳಿ ಬೆದರಿಕೆ ಹಾಕುತ್ತಲೇ ಇದ್ದರು. ಇದು ಸಾಮಾನ್ಯರ ಟ್ರೋಲ್ ಆಗಿರಲಿಲ್ಲ. ನನ್ನ ವಿರುದ್ಧ 2021ರಿಂದಲೂ ನಿರಂತರವಾಗಿ ಟಾರ್ಗೆಟ್ ಮಾಡಿದ್ದರು. ಇಂತಹ ಬೆದರಿಕೆಗಳ ನಡುವೆ ಬದುಕುತ್ತಿದ್ದ ನನಗೆ ನನ್ನನ್ನು ಬಂಧಿಸಬಹುದೆಂಬ ಅನುಮಾನವಿದ್ದರೂ, ನಮ್ಮ ವಕೀಲರ ಸಲಹೆ ಮೇರೆಗೆ ತನಿಖೆಗೆ ಸಹಕರಿಸಲು ತೆರಳಿದ್ದೆ. ಆದರೆ ಇದೆಲ್ಲಾ ನಡೆದುಹೋಯಿತು. ಬಿಡುಗಡೆಯಾದಾಗಲಿಂದಲೂ ನಡೆದಿರುವ ಈ ಘಟನೆಗಳ ಬಗ್ಗೆ ಸಾಕಷ್ಟು ಯೋಚಿಸಿ, ಕೊಂಡಿಗಳನ್ನು ಬೆಸೆಯುತ್ತಿದ್ದೇನೆ.

ಪ್ರ: ಇಷ್ಟೆಲ್ಲಾ ಕಿರುಕುಳದ ನಡುವೆಯೂ ನೀವು ಸ್ವಲ್ಪ ಲಕ್ಕಿ ಎಂದೆನಿಸ್ತಾ ಇದ್ಯಾ? ಏಕೆಂದರೆ ಅದೇ ಯುಪಿಯಲ್ಲಿ ಅರೆಸ್ಟ್ ಆದ ಕೇರಳದ ಸಿದ್ದಿಕ್ ಕಪ್ಪನ್ ಅವರನ್ನು ಇನ್ನೂ ಜೈಲಿನಲ್ಲಿಯೇ ಕೊಳೆಯುವಂತೆ ಮಾಡಲಾಗಿದೆ.. ಇನ್ನೂ ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ಹೋರಾಟಗಾರರು ಕೂಡ..

ಉತ್ತರ: ಸ್ವಲ್ಪ ಅಲ್ಲ.. ಸಿಕ್ಕಾಪಟ್ಟೆ ಲಕ್ಕಿ.. ಉಮರ ಖಾಲಿದ್ ಆಗಲಿ, ಸಿದ್ದಿಕ್ ಕಪ್ಪನ್ ಆಗಲೀ, ಸುಧಾ ಭಾರದ್ವಾಜ್ ಹೀಗೇ ಎಷ್ಟೊಂದು ಜನಕ್ಕೆ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಸಿದ್ದಿಕ್ ಕಪ್ಪನ್ ಹಾತ್ರಸ್ ವರದಿ ಮಾಡುವ ಮೊದಲೇ ಅವರನ್ನು ಬಂಧಿಸಲಾಯಿತು. ಯುಎಪಿಎ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಹುಷಃ ನಾನು ಬಹಳ ಬಹಳ ಅದೃಷ್ಟವಂತ ಅಂತಲೇ ನಂಬಿದ್ದೇನೆ. ನನ್ನ ವಿರುದ್ಧ ತನಿಖೆ ಮಾಡಲು ಎಸ್‌ಐಟಿ ರಚಿಸಿದ ಮೇಲಂತೂ ಸುಳ್ಳುಸುಳ್ಳಾಗಿ ಯುಎಪಿಎ ಪ್ರಕರಣ ದಾಖಲಿಸಿಕೊಳ್ಳುತ್ತಾರೆ ಅಂತಲೇ ಭಾವಿಸಿದ್ದೆ. ಆದರೆ ಅದೃಷ್ಟವಷಾತ್ ನನ್ನ ವಕೀಲರು ಹೋರಾಡಿದ ರೀತಿಗೂ ಮತ್ತು ಸುಪ್ರೀಂ ಕೋರ್ಟ್ ಸ್ಪಂದಿಸಿದ ರೀತಿಗೂ, ನನ್ನ ವಿರುದ್ಧ ಯುಎಪಿಎ ದಾಖಲಿಸಲು ಸಾಧ್ಯವಾಗಲಿಲ್ಲ.

ನಾನೂ ಇನ್ನೊಂದು ರೀತಿಯಲ್ಲಿ ಅದೃಷ್ಟವಂತ ಏಕೆಂದರೆ, ನಾನು ಜೈಲಿನಲ್ಲಿ ಕಳೆದ 23 ದಿನಗಳೂ ಜನ ನನ್ನ ಬೆಂಬಲಕ್ಕೆ ನಿಂತು ಲೇಖನಗಳನ್ನು ಬರೆದರು, ಟ್ವೀಟ್‌ಗಳನ್ನು ಮಾಡಿದರು. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಒಂದೆರಡು ದಿನ ಪ್ರತಿಭಟನೆಗಳಾಗಿ ಕಡಿಮೆಯಾಗುತ್ತವೆ. ನನ್ನ ವಿಷಯದಲ್ಲಿ ಅದು ನಿರಂತರವಾಗಿತ್ತು. ನಾನು ಜೈಲಿನಲ್ಲಿ ಇದ್ದಾಗ ಪ್ರತಿ ದಿನ ದಿನಪತ್ರಿಕೆ ಓದುತ್ತಿದ್ದೆ. ದಿನಾಲು ಮುಖಪುಟ ಅಥವಾ ಎರಡನೇ ಪುಟದಲ್ಲಿ ನನ್ನ ಬಗೆಗಿನ ಸುದ್ದಿ ಇರುತ್ತಿತ್ತು. ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಇದು ಸಾಧ್ಯವಾಯಿತು. ಈ ರೀತಿಯಲ್ಲಿ ನಾನು ಅದೃಷ್ಟವಂತನೇ. ಬೇರೆ ಸಾಮಾಜಿಕ ಕಾರ್ಯಕರ್ತರು ಇನ್ನೂ ಜೈಲಿನಲ್ಲಿ ಇರುವುದು ತೀವ್ರ ದುಃಖದ ಸಂಗತಿ.

ಪ್ರ: ಇವನ್ನೆಲ್ಲಾ ಮಾತನಾಡಬೇಕಾದರೆ ದ್ವೇಷ ಎಷ್ಟು ದೊಡ್ಡಮಟ್ಟಕ್ಕೆ ಬೆಳೆದಿದೆ ಎಂದೆನಿಸುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಬಾಲ್ಯ ಮತ್ತು ನೀವು ಶಿಕ್ಷಣ ಪಡೆದ ಸಮಯ ಹೇಗಿತ್ತು? ಇಂದಿನ ಸಮಯಕ್ಕಿಂತ ಭಿನ್ನವಾಗಿತ್ತೇ? ಅಥವಾ ಇಂದು ಸೃಷ್ಟಿಯಾಗಿರುವ ವಾತಾವರಣದ ಬೀಜಗಳು ಅಂದಿಗೇ ಕಾಣಿಸುತ್ತಿದ್ದವೇ?

: ನಾನು ಹುಟ್ಟಿದ್ದು ಇಲ್ಲೇ ಬೆಂಗಳೂರಿನಲ್ಲಿ. ನಮ್ಮ ತಂದೆ ತಮಿಳುನಾಡಿನ ಹೊಸೂರಿನಿಂದ ಮೂವತ್ತು ಕಿ.ಮೀ ದೂರದಲ್ಲಿರುವ ಥಲ್ಲಿ ಗ್ರಾಮದವರು. ನನ್ನ ತಾಯಿ ಬೆಂಗಳೂರಿನ ಆರ್‌ಟಿ ನಗರದವರು. ನಾನು ನನ್ನ ಬಾಲ್ಯ ಮತ್ತು ಬಾಲ್ಯದ ಶಿಕ್ಷಣವನ್ನು ಥಲ್ಲಿಯಲ್ಲೇ ಕಳೆದವನು. ನನ್ನ ತಾತ ಆ ಊರಿನ ಬಹುಷಃ ಮುಖ್ಯಸ್ಥರಾಗಿದ್ದರು ಮತ್ತು ಸಾಹೇಬ್ರು ಎಂದು ಅವರನ್ನು ಕರೆಯುತ್ತಿದ್ದರು ಎಂಬ ಅಸ್ಪಷ್ಟ ನೆನಪಿದೆ. ಅಂದಿಗೆ ಹಿಂದೂ ಅಥವಾ ಮುಸ್ಲಿಂ ಭಿನ್ನತೆ ನನಗೆ ಗೊತ್ತಾಗಿತ್ತು ಅಂತ ಅನ್ನಿಸುತ್ತಲೇ ಇಲ್ಲ. ಒಂದು ಒಳ್ಳೆಯ ರೀತಿಯಲ್ಲಿ ಮಿಳಿತ ಇದ್ದದ್ದು ಚೆನ್ನಾಗಿ ನೆನಪಿದೆ. ನನ್ನನ್ನು ನೋಡಿಕೊಳ್ಳಲು ಬರುತ್ತಿದ್ದವರು ಹಿಂದೂ. ಅವರ ಜೊತೆಗೆ ನಾನು ಸಾಕಷ್ಟು ಕಾಲ ಕಳೆದಿದ್ದೇನೆ.

ನಮ್ಮ ಹಳ್ಳಿಯಿಂದ ಮೂವತ್ತು ಕಿ.ಮೀ ದೂರದಲ್ಲಿನ ಶಾಲೆಗೆ ಹೋಗಿ ಬರುತ್ತಿದ್ದೆ. ನಂತರ ಬೆಂಗಳೂರಿಗೆ ಬಂದಾಗ ಸೇರಿದ ಶಾಲೆಯಲ್ಲಾಗಲೀ ಅಥವಾ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುವಾಗಲಾಗಲೀ ನನಗೆ ಆ ಅನ್ಯತೆಯ ಭಾವ ಬಂದಿದ್ದಿಲ್ಲ. ನಿಮಗೆ ಗೊತ್ತಿರಬಹುದು, ಎಂಜಿನಿಯರಿಂಗ್ ಸಮಯದಲ್ಲಿ ಒಂದು ಕ್ಲಾಸಿನಲ್ಲಿ ಒಬ್ಬನೋ ಅಥವಾ ಇಬ್ಬರೋ ಮುಸ್ಲಿಂ ವಿದ್ಯಾರ್ಥಿಗಳಿರುತ್ತಿದ್ದರು.

ಇನ್ನು ಬಾಲ್ಯಕ್ಕೆ ಬಂದರೆ ನಾನು ಹೊಸೂರಿನ ಸೆವೆಂತ್ ಡೇ ಅಡ್ವೆಂಟಿಸ್ಟ್ ಸ್ಕೂಲಿನಲ್ಲಿ ಓದಿದ್ದು. ಆಗಲೇ ಹೇಳಿದಂತೆ ಶಾಲೆಗೆ ಹೋಗಲು ಮೂವತ್ತು ಕಿಲೋ ಮೀಟರ್ ಹಿಂದಿರುಗಲು ಮೂವತ್ತು ಕಿಮೀ ಪ್ರಯಾಣಿಸುತ್ತಿದ್ದೆ. ಬಹುಷಃ ಇದೇ ಕಾರಣಕ್ಕೆ ನಮ್ಮ ತಾಯಿ ಹೊಸೂರು ಅಥವಾ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಲು ನಮ್ಮ ತಂದೆಯವರಿಗೆ ಸದಾ ಹೇಳ್ತಾ ಇರುತ್ತಿದ್ದರು. ತಾಯಿಗೆ ಬೆಂಗಳೂರು ಹೆಚ್ಚು ಬಳಕೆಯಲ್ಲಿತ್ತು. ಅದೇ ಕಾರಣಕ್ಕೆ ಇಲ್ಲಿಗೇ ಶಿಫ್ಟ್ ಆದೆವು. ಇಲ್ಲಿ ಕೂಡ ಸ್ಪೆನ್ಸರ್ ರಸ್ತೆಯ ಸೆವೆಂತ್ ಡೇ ಅಡ್ವೆಂಟಿಸ್ಟ್ ಸ್ಕೂಲಿಗೆ ಸೇರಿಕೊಂಡೆ. ಶಿಕ್ಷಣದಲ್ಲಿ ಸದಾ ಹಿಂದೆ ಬೀಳುತ್ತಿದ್ದೆ. ಆದರೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೇ ನಿನ್ನ ವಿದ್ಯೆಯ ಕಾರಣಕ್ಕಾಗೆಂದು ನಮ್ಮ ತಂದೆ ಬೆದರಿಕೆ ಹಾಕಿದ ಕಾರಣಕ್ಕೆ ಹೇಗೋ ಕಷ್ಟಬಿದ್ದು ಹತ್ತನೇ ತರಗತಿಯಲ್ಲಿ ಒಳ್ಳೆ ಅಂಕ ಗಳಿಸಲು ಸಾಧ್ಯವಾಯಿತು. ಮೊದಲ ಬಾರಿಗೆ ನನ್ನ ಜೀವನದಲ್ಲಿ ಫರ್ಸ್ಟ್ ಕ್ಲಾಸ್‌ನಲ್ಲಿ ಪಾಸು ಮಾಡಿದೆ. ಗಣಿತದಲ್ಲಿ 70 ತೆಗೆದದ್ದು ನೂರಕ್ಕಿಂತ ಹೆಚ್ಚು ತೆಗೆದ ಭಾವ. ಅಲ್ ಅಮೀನ್ ಕಾಲೇಜಿನಲ್ಲಿ ಓದಿ ಉತ್ತಮ ಅಂಕಗಳಿಸಿ ಇಂಜಿನಿಯರಿಂಗ್ ಸೇರಿದೆ.

ಎಂಎಸ್‌ಆರ್‌ಐಟಿಯಲ್ಲಿ ಆಗಲೇ ಹೇಳಿದಂತೆ ಕೆಲವೇ ಕೆಲವು ಮುಸ್ಲಿಮರಿರುತ್ತಿದ್ದರು. ಆದರೆ, ಅಲ್ಲಿಯೂ ನನಗೆ ಒಳ್ಳೆಯ ಗೆಳೆಯರಿದ್ದರು. ಅಲ್ಲೂ ಕೂಡ ನನ್ನನ್ನು ಪ್ರತ್ಯೇಕಗೊಳಿಸುತ್ತಿದ್ದಾರೆ ಎಂದು ಅನ್ನಿಸಲಿಲ್ಲ. ಸಹಪಾಠಿಗಳಾಗಿರಲಿ, ಉಪನ್ಯಾಸಕರಾಗಲೀ ನಾನು ಯಾರಿಂದಲೂ ಅನ್ಯನಾಗುವ ಭಾವವನ್ನು ಅನುಭವಿಸಿಲ್ಲ.

2005ರಲ್ಲಿ ಎಂಜಿನಿಯರಿಂಗ್ ಮುಗಿಸಿ ನಾನು ಕೆಲಸಕ್ಕೆ ಸೇರಿದ ಮೇಲೆಯೂ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಮಾಧ್ಯಮದ ಒಬ್ಬ ಗೆಳೆಯರಿಗೆ ಸಂದರ್ಶನದಲ್ಲಿ ಮೊದಲೇ ಹೇಳಿದಂತೆ, ನೋಕಿಯಾದಲ್ಲಿ ಕೆಲಸ ಮಾಡುವಾಗ ನನ್ನ ಮ್ಯಾನೇಜರ್ ಒಳ್ಳೆಯ ಗೆಳೆಯರಾಗಿದ್ದರು. ಸಾಮಾನ್ಯವಾಗಿ ಶುಕ್ರವಾರಗಳಂದು ಕುರ್ತಾ ಹಾಕಿಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಅಂದು ಒಂದು ಶುಕ್ರವಾರ ಕುರ್ತಾ ಧರಿಸದೆ ಹೋಗಿದ್ದಾಗ, ಆ ಮ್ಯಾನೇಜರ್ ನನ್ನ ಬಳಿಬಂದು ರೇಗಾಡಿದರು. ಕುರ್ತಾದಲ್ಲಿ ಎಷ್ಟು ಚೆನ್ನಾಗಿ ಕಾಣಿಸ್ತೀರಿ, ಯಾಕೆ ಇವತ್ತು ಧರಿಸಿಲ್ಲ ಅಂದರು. ಶುಕ್ರವಾರಗಳಂದು ಪ್ರಾರ್ಥನೆಗೆ ಹೋಗುವ ಅಭ್ಯಾಸವಿತ್ತು. ಎಷ್ಟೋ ದಿನ ಅವರೇ ಅದನ್ನು ನನಗೆ ನೆನಪಿಸಿದ್ದಿದೆ. ಆ ಸಮಯದಲ್ಲಿ ನನಗೆ ಯಾವುದೇ ಕೆಲಸವನ್ನು ಅಸೈನ್ ಮಾಡದ ಸಮಯಗಳನ್ನೂ ನೋಡಿದ್ದೇನೆ.

ಸುಧಾ ಭಾರದ್ವಾಜ್

ಅದೇ ಮ್ಯಾನೇಜರ್ ಒಂದು ಘಟ್ಟದ ನಂತರ ಬದಲಾಗಿದ್ದನ್ನು ನೋಡಿದೆ. 2015ರ ಸಮಯಕ್ಕೆ ಅವರ ದನಿ ಬದಲಾಗಿದ್ದನ್ನು ಗಮನಿಸಿದೆ. ಆ ಸಮಯಕ್ಕೂ ಮುಂಚೆ ವಾಟ್ಸ್‌ಆಪ್ ಗುಂಪುಗಳಲ್ಲಿ ಹಲವು ರಾಜಕೀಯವಲ್ಲದ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೆವು. ಆನಂತರ ಅಂದಿನ ಪ್ರಧಾನಿಗಳನ್ನು ಹೊಗಳುವ ಮತ್ತಿತರ ರಾಜಕೀಯ ಸಂಗತಿಗಳು ಪ್ರಾರಂಭವಾದವು. ಆಮೇಲೆ ಹಿಂದೂ-ಮುಸ್ಲಿಂ ಘರ್ಷಣೆಗೆ ಎಡೆಮಾಡಿಕೊಡುವ ಸಂಗತಿಗಳಿಗೆ ವೇದಿಕೆಯಾಗತೊಡಗಿತು. ಅಲ್ಲಿದ್ದ ಕೆಲವೇ ಕೆಲವು ಮುಸ್ಲಿಮರನ್ನು ನೇರವಾಗಿ ಅಟ್ಯಾಕ್ ಮಾಡುತ್ತಿದ್ದರು ಅಂತಲ್ಲ. ಈ ತರ ವರದಿಗಳು ಬರುತ್ತಿವೆ ಎನ್ನುವ ರೀತಿಯಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದರು.

ಆ ಸಮಯದಲ್ಲಿ ಕೆಲವು ಮುಸ್ಲಿಂ ಗೆಳೆಯರು ಮತ್ತೆ ಕೆಲವು ಹಿಂದೂ ಗೆಳೆಯರು ಕೂಡ ಗ್ರೂಪ್‌ನಿಂದ ಹೊರಬಂದರು. ನಾನು ಅಷ್ಟೇನೂ ಅಲ್ಲಿ ರಿಯಾಕ್ಟ್ ಮಾಡ್ತಾ ಇರಲಿಲ್ಲ. ಆದರೆ ಆ ಸಮಯದಲ್ಲಿ ಅನ್‌ಅಫಿಷಿಯಲ್ ಸುಸುಸ್ವಾಮಿ ಎಂಬ ಫೇಸ್ಬುಕ್ ಪೇಜ್ ಒಂದನ್ನು ನಡೆಸುತ್ತಿದ್ದೆ.

ಗೌರಿ ಲಂಕೇಶ್ ಅವರು ಕೂಡ ಆ ಪೇಜ್‌ನಿಂದ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ತಾ ಇದ್ದದ್ದನ್ನು ಆಮೇಲೆ ಗಮನಿಸಿದೆ. ಆ ಸಮಯದಲ್ಲಿ ಅವರು ನನಗೆ ವೈಯಕ್ತಿಕವಾಗಿ ಪರಿಚಯವಿರಲಿಲ್ಲ. ಅವರ ಸಾವಿನ ನಂತರ ಅವರ ಪ್ರೊಫೈಲ್‌ಗೆ ಹೋಗಿ ನೋಡಿದಾಗ ನನ್ನ ಪೇಜಿನ ಎಷ್ಟೊಂದು ಕಂಟೆಂಟ್ ಶೇರ್ ಮಾಡಿರುವುದು ತಿಳಿಯಿತು. ಅವರು ತೀರಿಕೊಂಡ ಮೇಲೆ ಇದನ್ನೆಲ್ಲಾ ತಿಳಿದದ್ದು ಒಂದು ರೀತಿಯ ಖಾಲಿ ಭಾವನೆಗೆ ದೂಡಿತು.

ನನ್ನ ಕಚೇರಿಯಲ್ಲಿ ಸಹೋದ್ಯೋಗಿಗಳ ಜತೆಗೆ ರಾಜಕೀಯದ ಬಗ್ಗೆ ಹೆಚ್ಚು ಮಾತಾಡುತ್ತಿರಲಿಲ್ಲ. ಅದರಿಂದ ಗೆಳೆಯರನ್ನು ಕಳೆದುಕೊಳ್ಳಬೇಕಾಗಬಹುದು ಎಂದು ನನಗೆ ತಿಳಿದಿತ್ತು. ಆದರೆ ಏನು ನಡೀತಾ ಇದೆ ಅಂತ ತಿಳಿತಿತ್ತು. ಬಹುಷಃ ಅಲ್ಲಿ ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗದ್ದನ್ನ ಅನ್‌ಅಫಿಷಿಯಲ್ ಸುಸುಸ್ವಾಮಿ ಫೇಸ್ಬುಕ್ ಪುಟದ ಮೂಲಕ ವ್ಯಂಗ್ಯದ ಧಾಟಿಯಲ್ಲಿ ಹೇಳಿಕೊಳ್ಳುತ್ತಿದ್ದೆ..

(ಮುಂದಿನ ಭಾಗದಲ್ಲಿ ಅನ್‌ಅಫಿಷಿಯಲ್ ಸುಸುಸ್ವಾಮಿ, ಆಲ್ಟ್ ನ್ಯೂಸ್ ಪ್ರಾರಂಭವಾದದ್ದು, ಫೇಕ್ ನ್ಯೂಸ್-ಫೇಕ್ ನರೆಟಿವ್‌ಗಳ ಸಮಸ್ಯೆ, ತಂತ್ರಜ್ಞಾನ ಮತ್ತು ಫೇಕ್ ನ್ಯೂಸ್‌ಗಳ ಸಂಬಂಧ, ಆಕ್ಟಿವಿಸ್ಟ್‌ಗಳ ನೆಟ್‌ವರ್ಕ್‌ನ ಅಗತ್ಯ, ಹಲವು ರಾಜ್ಯಗಳ ಭಾಷೆಗಳಲ್ಲಿ ನಕಲಿ ಸುದ್ದಿಗಳನ್ನು ತಡೆಗಟ್ಟುವ ಬಗ್ಗೆ ಝುಬೇರ್ ಜೊತೆಗಿನ ಚರ್ಚೆ ಪ್ರಕಟವಾಗಲಿದೆ)

ಸಂದರ್ಶನ: ಗುರುಪ್ರಸಾದ್ ಡಿ ಎನ್
ನೆರವು: ಶಶಾಂಕ್ ಎಸ್ ಆರ್ 


ಇದನ್ನೂ ಓದಿ: ಎಸ್.ಆರ್‌.ಹಿರೇಮಠ ಸಂದರ್ಶನ| ಎಸಿಬಿ ರದ್ದಾಗಿದ್ದು ಐತಿಹಾಸಿಕ ಗೆಲುವು, ಆದರೆ…,

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...