Homeಮುಖಪುಟತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

- Advertisement -
- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ ನೀಡಿರುವ ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸಲಿದೆ ಮತ್ತು ಅದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ರಕ್ಷಿಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಮೊದಲು ಹೇಳಿದ್ದರು. ಅವಿಭಜಿತ ರಾಜ್ಯದಲ್ಲಿ ಅಂದಿನ ಕಾಂಗ್ರೆಸ್ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಪ್ರಾರಂಭಿಸಿದ 4% ಮುಸ್ಲಿಂ ಕೋಟಾವನ್ನು ಷಾ ಅಥವಾ ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಲು ಸಾಧ್ಯವಿಲ್ಲ. ಬಿಜೆಪಿಯ ಟೀಕೆಗಳ ನಡುವೆ ರಾಜ್ಯದ ಹಿಂದಿನ ಬಿಆರ್‌ಎಸ್ ಸರ್ಕಾರವೂ ಮೀಸಲಾತಿಯನ್ನು ತೆಗೆದುಹಾಕಲು ನಿರಾಕರಿಸಿತ್ತು. 4% ಮುಸ್ಲಿಂ ಮೀಸಲಾತಿ ಧರ್ಮದ ಆಧಾರದ ಮೇಲೆ ಅಲ್ಲ. ಅದು ಸಾಮಾಜಿಕ-ಆರ್ಥಿಕ ಸ್ಥಾನಮಾನದ ಆಧಾರದ ಮೇಲೆ ಎಂದು ನವೆಂಬರ್‌ನಲ್ಲಿ ಅಂದಿನ ರಾಜ್ಯ ಸಚಿವ ಕೆ.ಟಿ.ರಾಮರಾವ್ ಹೇಳಿದ್ದರು.

ಮೇದಕ್ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಕಾಂಗ್ರೆಸ್ ಮತ್ತು ಬಿಆರ್‌ಎಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ತೆಲಂಗಾಣ ಮತ್ತು ದೆಹಲಿಯನ್ನು ಎಟಿಎಂ ಮಾಡಿದೆ. ಕಾಳೇಶ್ವರಂ ಹಗರಣವಾಗಲಿ, ಭೂ ಹಗರಣವಾಗಲಿ ಕಾಂಗ್ರೆಸ್ ಪಕ್ಷವು ಬಿಆರ್‌ಎಸ್ ಆಡಳಿತದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿಲ್ಲ. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ಕೈಜೋಡಿಸಿವೆ. ಮೋದಿ ಜಿ ಅವರನ್ನು ಮೂರನೇ ಅವಧಿಗೆ ಆಯ್ಕೆ ಮಾಡಿ ಮೋದಿ ಜಿ ತೆಲಂಗಾಣವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತಾರೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್‌ ಶಾ, ಕಾಂಗ್ರೆಸ್ ಮತ್ತು ಬಿಆರ್‌ಎಸ್ ಮಜ್ಲಿಸ್‌ಗೆ ಹೆದರಿ ತೆಲಂಗಾಣ ವಿಮೋಚನಾ ದಿನವನ್ನು ಎಂದಿಗೂ ಆಚರಿಸುವುದಿಲ್ಲ. ನಾವು ಮಜ್ಲಿಸ್‌ಗೆ ಹೆದರುವುದಿಲ್ಲ, ತೆಲಂಗಾಣ ವಿಮೋಚನಾ ದಿನವನ್ನು ಆಚರಿಸಲು ಬಿಜೆಪಿ ನಿರ್ಧರಿಸಿದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ವಿಸ್ತರಿಸಿದ ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಆರ್‌ಎಸ್‌ ಎಂದಿಗೂ ರಾಮಮಂದಿರ ನಿರ್ಮಾಣವನ್ನು ಬಯಸಲಿಲ್ಲ. ನರೇಂದ್ರ ಮೋದಿ  ಅವರು 370ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ ಮತ್ತು ಕಾಶ್ಮೀರವನ್ನು ಶಾಶ್ವತವಾಗಿ ಭಾರತದೊಂದಿಗೆ ಸಂಯೋಜಿಸಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು 10 ವರ್ಷಗಳಲ್ಲಿ ದೇಶವನ್ನು ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಲ್ಲಿ ಮೇ 13ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂ.4ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಇದನ್ನು ಓದಿ: ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು ಮತದಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...