Homeಕರ್ನಾಟಕಎಸ್.ಆರ್‌.ಹಿರೇಮಠ ಸಂದರ್ಶನ| ಎಸಿಬಿ ರದ್ದಾಗಿದ್ದು ಐತಿಹಾಸಿಕ ಗೆಲುವು, ಆದರೆ...,

ಎಸ್.ಆರ್‌.ಹಿರೇಮಠ ಸಂದರ್ಶನ| ಎಸಿಬಿ ರದ್ದಾಗಿದ್ದು ಐತಿಹಾಸಿಕ ಗೆಲುವು, ಆದರೆ…,

- Advertisement -
- Advertisement -

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸ್ಥಾಪಿಸಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿ ಲೋಕಾಯುಕ್ತಕ್ಕೆ ಮರುಜೀವ ನೀಡಿದೆ.

ಎಸಿಬಿ ರದ್ದು ಮಾಡುವಂತೆ ಹೋರಾಟಗಾರರು ಕೋರ್ಟ್ ಮೆಟ್ಟಿಲೇರಿದ್ದರು. ವಕೀಲ ಚಿದಾನಂದ ಅರಸ್ ಮತ್ತು ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಅವರ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಸ್ಟೀಸ್‌ ಬಿ ವೀರಪ್ಪ ಹಾಗೂ ಜಸ್ಟೀಸ್‌‌ ಕೆ.ಎಸ್. ಹೇಮಲೇಖ ಅವರಿದ್ದ ಪೀಠ ನೀಡಿರುವ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್‌.ಹಿರೇಮಠ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದಾರೆ.

  • ಎಸಿಬಿ ರದ್ದುಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ನಿಮ್ಮ ಪ್ರತಿಕ್ರಿಯೆ?

ಎಸ್‌.ಆರ್‌.ಹಿರೇಮಠ: ಮಹತ್ವಪೂರ್ಣವಾದ ಒಂದು ಸಾರ್ವಜನಿಕ ವಿಷಯದ ಕುರಿತು ಐತಿಹಾಸಿಕವಾದ ತೀರ್ಪನ್ನು ಹೈಕೋರ್ಟ್ ನೀಡಿದೆ. ಕರ್ನಾಟಕದಲ್ಲಿ ಇಂದು ತೀವ್ರತರವಾದ ಭ್ರಷ್ಟಾಚಾರ ಬೆಳೆಯುತ್ತಿದೆ. ಎಲ್ಲಿ ನೋಡಿದರೂ ಶೇ. 40 ಕಮಿಷನ್‌ ಮಾತುಗಳು ಬರುತ್ತಿವೆ. ಈ ಸಮಯದಲ್ಲಿ ಭ್ರಷ್ಟಾಚಾರವನ್ನು ತಡೆಯುವುದಕ್ಕೆ ಲೋಕಾಯುಕ್ತವನ್ನು ಬಲಪಡಿಸುವುದು ಬಹಳ ಮುಖ್ಯ.

ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಭ್ರಷ್ಟಾಚಾರಗಳನ್ನು ಹೊರಗೆಳೆದ ಲೋಕಾಯುಕ್ತವನ್ನು ಹೊಗಳುತ್ತಿದ್ದ ಸಿದ್ದರಾಮಯ್ಯನವರು, ತಾವೇ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತವನ್ನೇ ದುರ್ಬಲ ಮಾಡಿಬಿಟ್ಟರು. ಇದರ ಕುರಿತು ಕೂಡಲೇ ನಾವು ಧ್ವನಿ ಎತ್ತಿದರೂ ನ್ಯಾಯ ತುರ್ತಾಗಿ ಸಿಗಲಿಲ್ಲ. ಕೊನೆಯದಾಗಿ ತೀರ್ಪು ಹೊರಬಿದ್ದಿದೆ. ಇದು ನಿಜಕ್ಕೂ ಒಳ್ಳೆಯ ಗೆಲುವು.

  • ಕೋರ್ಟ್ ತೀರ್ಪನ್ನೇನೋ ನೀಡಿದೆ. ಲೋಕಾಯುಕ್ತ ಮತ್ತೆ ತನ್ನ ಗತ ವೈಭವವನ್ನು ಮರುಸ್ಥಾಪಿಸಿಕೊಳ್ಳುತ್ತದೆ ಎಂಬ ಭರವಸೆ ನಿಮಗಿದೆಯೇ? 

ಎಸ್‌.ಆರ್‌.ಹಿರೇಮಠ: ನಾವು ಪರಿಸ್ಥಿತಿಯನ್ನು ವಾಸ್ತವ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ. ಒಂದು ತೀರ್ಪು ಬಂದ ತಕ್ಷಣ ಏನೋ ಸಾಧನೆ ಮಾಡಿದ ಭ್ರಮೆಗೆ ಒಳಗಾಗಬಾರದು. ಯಾಕೆಂದರೆ ಜಸ್ಟೀಸ್‌ ಸಂತೋಷ್‌ ಹೆಗ್ಡೆಯವರು ಹೇಳಿದಂತೆ ಯಾವುದೇ ಪಕ್ಷ, ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಲೋಕಾಯುಕ್ತವನ್ನು ಸಶಕ್ತೀಕರಣ ಮಾಡಬೇಕೆಂಬ ನಿಜವಾದ ಕಾಳಜಿ ಇಲ್ಲವಾಗಿದೆ.

ಸಂತೋಷ್‌ ಹೆಗ್ಡೆಯವರು ಲೋಕಾಯುಕ್ತದಲ್ಲಿದ್ದಾಗ ಕಟ್ಟಾ ಸುಬ್ರಮಣ್ಯನಾಯ್ಡು, ಬಿ.ಎಸ್‌.ಯಡಿಯೂರಪ್ಪ ಮೊದಲಾದವರ ಮೇಲೆ ಸ್ವಯಂ ಪ್ರೇರಿತವಾಗಿ ಕ್ರಮ ಜರುಗಿಸಿದರು. ಅಕ್ರಮ ಗಣಿಗಾರಿಕೆಯನ್ನು ಬಯಲಿಗೆಳೆದರು. ಅಂತಹ ಲೋಕಾಯುಕ್ತ ಮತ್ತೆ ಮರುಕಳಿಸಬೇಕಾದರೆ ನಾವು ತುಂಬಾ ದೂರ ಕ್ರಮಿಸಬೇಕಿದೆ. ಮುಂದಿನ ಪೀಳಿಗೆ ಈ ಕುರಿತು ಯೋಚಿಸಬೇಕಿದೆ. ಕೋರ್ಟ್‌ನ ತೀರ್ಪನ್ನು ಜಾರಿ ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಅದರಲ್ಲಿ ಯಾವುದೇ ರಾಜೀ ಆಗಲು ಸಾಧ್ಯವಿಲ್ಲ. ಇಲ್ಲವಾದರೆ ಜೈಲಿಗೆ ಹೋಗಬೇಕಷ್ಟೇ.

ಇದೇ ಯಡಿಯೂರಪ್ಪನವರು, ‘ನಾವು ಮತ್ತೆ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಲೋಕಾಯುಕ್ತವನ್ನು ಮರುಸ್ಥಾಪಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಆದರೆ ಕಾಲ ಉರುಳಿತ್ತಷ್ಟೇ. ಜನರು ಅದನ್ನೆಲ್ಲ ನೆನಪು ಮಾಡಿಕೊಳ್ಳುವುದಿಲ್ಲ. ನನಗನಿಸಿದ ಮಟ್ಟಿಗೆ ಕೋರ್ಟ್ ಆದೇಶ ಜಾರಿಯಾಗುತ್ತದೆ. ಆದರೆ ಹಿಂದಿನ ಲೋಕಾಯುಕ್ತದ ಕಾರ್ಯಕ್ಷಮತೆ, ಪರಿಣಾಮಕಾರತ್ವ ಕಾಣಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ.

ಇದನ್ನೂ ಓದಿರಿ: ಎಸಿಬಿ ರದ್ದು ಮಾಡಿದ ಹೈಕೋರ್ಟ್: ಏನಂತಾರೆ ರಾಜಕಾರಣಿಗಳು?

ಹಲವು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿಯವರನ್ನು ಲೋಕಾಯುಕ್ತಕ್ಕೆ ಸಿದ್ದರಾಮಯ್ಯನವರ ಸರ್ಕಾರ ನೇಮಿಸಿತು. ಇವರ ಐದು ವರ್ಷಗಳ ಅಧಿಕಾರವಧಿಯಲ್ಲಿ ಏನೆಲ್ಲ ಕೆಲಸಗಳಾಗಿವೆ ಎಂಬ ಅವಲೋಕನ ಮಾಡುವ ಅಗತ್ಯವಿದೆ. ಯಾರ್‍ಯಾರಿಗೆ ಬಿ ರಿಪೋರ್ಟ್ ನೀಡಲಾಗಿದೆ, ಏನೆಲ್ಲ ಕ್ರಮ ಜರುಗಿಸಲಾಗಿದೆ ಎಂಬುದನ್ನು ಗಂಭೀರವಾಗಿ ನೋಡಬೇಕಾಗಿದೆ.

ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಲೋಕಾಯುಕ್ತಕ್ಕೆ ಬಿ.ಎಸ್.ಪಾಟೀಲ್ ಅವರನ್ನು ನೇಮಿಸಲಾಯಿತು. ಇವರ ಮೇಲೆಯೂ ಹಲವು ಆರೋಪಗಳು ಇವೆ. ಇಂಥವರೆಲ್ಲ ಲೋಕಾಯುಕ್ತದಲ್ಲಿ ಇರುವಾಗ ಯಾವ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯ? ಆದರೆ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಇದನ್ನು ಬಳಸಿಕೊಂಡು ಲೋಕಾಯುಕ್ತವನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನವನ್ನು ನಡೆಸಬೇಕಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಕಾಯ್ದೆಯಲ್ಲಿ ತಂದಿರುವ ತಿದ್ದುಪಡಿಯನ್ನು ಬದಲಿಸಲು ಒತ್ತಾಯ ತರಬೇಕು.

  • ಎಸಿಬಿ ತನ್ನ ಕಿರು ಅವಧಿಯಲ್ಲಿ ಯಾವುದೇ ಕೆಲಸ ಮಾಡಲಿಲ್ಲ ಎನ್ನುತ್ತೀರಾ?

ಎಸ್‌.ಆರ್‌.ಹಿರೇಮಠ: ಎಸಿಬಿ ಕೆಲಸ ಮಾಡಿದೆಯೋ ಇಲ್ಲವೋ, ಎಸಿಬಿ ಮುಖ್ಯಸ್ಥರು ಕ್ರಿಯಾಶೀಲವಾಗಿದ್ದಾರೋ ಇಲ್ಲವೋ ಎಂಬುದು ಕೋರ್ಟ್‌ ಮುಂದೆ ಪ್ರಸ್ತುತವಾಗುವುದಿಲ್ಲ. ಭ್ರಷ್ಟಾಚಾರ ವಿರುದ್ಧದ ಹೋರಾಟದ ಉತ್ಕೃಷ್ಟ ಇತಿಹಾಸವಿರುವ ಲೋಕಾಯುಕ್ತವನ್ನು ಉಳಿಸುವುದು ನಮ್ಮ ಕರ್ತವ್ಯವಾಗಿತ್ತು. ಉದ್ಧಟತನದಿಂದ ಮಾಡಿದ ಬದಲಾವಣೆಯನ್ನು ತಡೆಯುವುದು ನಮ್ಮ ಗುರಿಯಾಗಿತ್ತು. ತಾಳ್ಮೆಯಿಂದ ಹೋರಾಟ ನಡೆಸಿದೆವು. ಗೆಲುವು ದೊರೆತಿದೆ.

  • ರಾಜ್ಯದಲ್ಲಿ 40% ಕಮಿಷನ್‌ ಸರ್ಕಾರವಿದೆ ಎಂಬ ಆರೋಪಗಳಿವೆ. ಹೀಗಿರುವಾಗ ಲೋಕಾಯುಕ್ತವನ್ನು ಬಲಪಡಿಸುವುದಾದರೂ ಹೇಗೆ?

ಎಸ್‌.ಆರ್‌.ಹಿರೇಮಠ: ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ಅಂತಿಮ. ವ್ಯವಸ್ಥೆಯನ್ನು ಸರಿಪಡಿಸಲು ಕೋರ್ಟ್‌ನ ಆದೇಶಗಳು ಸಹಕಾರಿಯಾಗಿವೆ. ಇಷ್ಟಾಗಿಯೂ ಜನಾಂದೋಲವೇ ಬಹುದೊಡ್ಡ ಪರ್ಯಾಯ. ‘ನಾ ಖಾವೂಂಗ ನಾ ಖಾನೇ ದೂಂಗ’ ಎಂದ ನರೇಂದ್ರ ಮೋದಿ ಬಳ್ಳಾರಿಗೆ ಬಂದು, ಬಹುದೊಡ್ಡ ಭ್ರಷ್ಟ ಸೋಮಶೇಖರ ರೆಡ್ಡಿ ಪರ ಪ್ರಚಾರ ಮಾಡಿದರು. ಹಿಂದೆಂದಿಗಿಂತೂ ಭ್ರಷ್ಟಾಚಾರ ಈಗ ಮಿತಿ ಮೀರಿದೆ. ಜನಾಂದೋಲನದ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ.

  • ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಡುತ್ತಿದ್ದೀರಿ. ಈ ಪಯಣದಲ್ಲಿ ನಿಮಗೆ ಜೀವ ಬೆದರಿಕೆಗಳು ಬಂದಿಲ್ಲವೇ?

ಎಸ್‌.ಆರ್‌.ಹಿರೇಮಠ: ನಾವು ಹೋರಾಟಕ್ಕೆ ಇಳಿದಾಗ ಮುಂದಿನ ಪರಿಣಾಮಗಳನ್ನು ಅವಲೋಕನ ಮಾಡಿರಬೇಕು. ಎಲ್ಲ ಸಾಧ್ಯತೆಗಳನ್ನು ಯೋಚಿಸಬೇಕು. ಬಳ್ಳಾರಿ ಅಕ್ರಮ ಗಣಿ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ನಿಂತಿದ್ದರಿಂದ ಯಾವುದೇ ಕಳ್ಳರು ನಮಗೆ ಫೋನ್ ಮಾಡುವ ಧೈರ್ಯ ಮಾಡಲಿಲ್ಲ. ಬಿ.ಎಸ್‌.ಯಡಿಯೂರಪ್ಪನವರು ಮಾತ್ರ ಕರೆ ಮಾಡುವ ಪ್ರಯತ್ನ ಮಾಡಿದ್ದರು. ಅದು ಕೂಡ ಆತ್ಮೀಯ ಪತ್ರಕರ್ತರೊಬ್ಬರಿಗೆ ತಿಳಿಸಿ, ಭೇಟಿಯಾಗಲು ಸಮಯ ಕೋರಿದ್ದರು. ನಮ್ಮ ಆತ್ಮೀಯರು ಯಡಿಯೂರಪ್ಪನವರಿಗೆ ಪ್ರತಿಕ್ರಿಯೆ ನೀಡಿ, “ಹಿರೇಮಠರು ನಿಮ್ಮನ್ನು ಒಂದೇ ಒಂದು ಜಾಗದಲ್ಲಿ ಮಾತ್ರ ಭೇಟಿಯಾಗಲು ಬಯಸುತ್ತಾರೆ. ಸುಪ್ರೀಂ ಕೋರ್ಟ್‌ನ ರೂಮ್‌ ನಂಬರ್‌ 1ರಲ್ಲಿ ಅವರು ಸಿಗಲಿದ್ದಾರೆ” ಎಂದಿದ್ದರು. “ಪರಿಸ್ಥಿತಿ ಗಂಭೀರವಾಗುತ್ತದೆ” ಎಂದು ಯಡಿಯೂರಪ್ಪನವರು ಹೇಳಿದಾಗ, “ಹಿರೇಮಠರು ಎಲ್ಲದ್ದಕ್ಕೂ ಸಿದ್ಧವಾಗಿದ್ದಾರೆ” ಎಂದು ಉತ್ತರಿಸಿದ್ದರು. ಇದು ಹಿರೇಮಠರೊಬ್ಬರ ಹೋರಾಟವಲ್ಲ. ನಮ್ಮ ನಿಮ್ಮೆಲ್ಲರ ಹೋರಾಟ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್‌- ಹೀಗೆ ಹಲವಾರು ಜನರು ಈ ಹೋರಾಟದ ಭಾಗವಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹಿರೆಮಠರು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಬ್ರಷ್ಟಾಚಾರದ ವಿರುದ್ಧ ವೀರಾವೇಶದಿಂದ ರಾಜ್ಯ ಹೈ ಕೋರ್ಟ್ ಮತ್ತು ಇತರೆ ಮಾದ್ಯಮದ ಮೂಲಕ ದೊಡ್ಡ ಹೋರಾಟ ಮಾಡಿದರು ಬಹಳ ಸಂತೋಷದ ವಿಷಯವೇ.
    ಆದರೆ ಈಗಿನ ಬಿಜೆಪಿ ಸರ್ಕಾರದಲ್ಲಿ ಮಿತಿಮೀರಿದ ಬ್ರಷ್ಟಾಚಾರ ಗಮನಿಸುತ್ತಾ ಅವರು ಮೂಕ ವಿಸ್ಮಿತರಾಗಿ ಅಥ ವಾ ಈಗಿನ ಸರ್ಕಾರದ ಮುಖ್ಯ ಮಂತ್ರಿ ಸ್ವಜಾತಿಯವರೆ ಆಗಿರುವುದರಿಂದ ಅವರ ವಿರುದ್ಧ ದ್ವನಿ ಎತ್ತುತ್ತಿಲ್ಲ .
    ಹಿಂದೆ 2013-14 ರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ , ಇದೆ ತರಹ ಒಬ್ಬ ಮಹಾನ್ ಗಾಂಧಿವಾದಿ ಎಂದು ಪೋಸು ಕೊಡುತ್ತಾ ಅಣ್ಣಾ ಹಜಾರೆ ಎಂಬ ವ್ಯಕ್ತಿ ಇನ್ನಿಲ್ಲದ ಹೋರಾಟ ಮಾಡಿದ ,ಅವನ ಅದೃಷ್ಟವೋ ಅಥವಾ ಕಾಂಗ್ರೆಸ್ ಸರ್ಕಾರದ ದುರಾಡಳತದ ಕಾರಣವೋ ಅಲ್ಲಿನ ಸರ್ಕಾರ ಹೋಗಿ ಈಗಿನ ಮಹಾನ್ ದೇಶ ಭಕ್ತರ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿದು 8ವರ್ಷದ ಅವಧಿಯಲ್ಲಿ ದೇಶದ ಪರಿಸ್ಥಿತಿ ದುರ್ಗತಿಗೆ ಬಂದು ಕೋಮುವಾದ ಪ್ರತಿಪಾದಿಸಿ ವಿವಿಧ ಸಮುದಾಯಗಳ ಸಂಘರ್ಷಕ್ಕೆ ಕಾರಣವಾಗಿದ್ದರೂ ಅಣ್ಣಾ ಹಜಾರೆಗೆ ಜಾಣ ಕುರುಡುತನ ಮತ್ತು ಕಿವುಡುತನ ದಿಂದ ಅವರು ಸಹ ದ್ವನಿ ಎತ್ತದೆ ಮೂಕರಾಗಿದ್ದಾರೆ.
    ಈಗ ಈ ಇಬ್ಬರ ಬಗ್ಗೆ ಹೇಳುವುದೇನೆಂದರೆ ಇವರ ಅಶಯವಾದ ಬ್ರಷ್ಟಾಚಾರದ ಹೋರಾಟದಲ್ಲಿ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಬ್ರಷ್ಟಾಚಾರ ಆರೋಪಿತ ಸರ್ಕಾರಗಳು ತೊಲಗಿ ಕೇಂದ್ರ ಮತ್ತು ರಾಜ್ಯದಲ್ಲಿರುವ ಕೋಮುವಾದಿ ಮತ್ತು ಜಾತಿವಾದಿ ಸರ್ಕಾರ ಗಳು ಬಂದಿರುವುದು ಇವರ ಸಮರ್ಥನೆಯೂ? ಯಾಕೆ ಈ ಇಬ್ಬಂದಿತನ ಖಾವಂದ ಮಹಾಶಯರೇ ಇದಕ್ಕೆ ಉತ್ತರ ನೀಡಲಿ.

  2. This is real fact anna hazare is not taking any thing why means he is also RSS man there fore RSS is ruling in India all are pro BJP petrol gas other iteam rates are high nobody open mouths this is for india

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...